Pages

Total Visitors

Wednesday, November 7, 2012

ಪಾಚು ಮತ್ತು ಕಂಪ್ಯೂಟರ್

"ಅಕ್ಕೆರೇ.. ಅಕ್ಕೇರೇ .." ಹೊರಗಿನಿಂದ 'ಪಾಚು' ಜೋರಾಗಿ ಕರೆಯುವುದು ಕೇಳಿಸಿತು.

ಮದ್ಯಾಹ್ನ ಊಟ ಮುಗಿಸಿ ಕೈಯಲ್ಲಿ ನೆಪ ಮಾತ್ರಕ್ಕೆ  ಒಂದು ಪುಸ್ತಕ ಹಿಡಿದು, ಅತ್ತ ನಿದ್ರಾಲೋಕವೂ ಅಲ್ಲದ ಇತ್ತ ಎಚ್ಚರವೂ ಅಲ್ಲದ ತ್ರಿಶಂಕು ಸ್ವರ್ಗದಲ್ಲಿ ತೇಲಾಡುತ್ತಿರುವಾಗ ಇವಳ ಸ್ವರ ನನ್ನನ್ನು ತಟ್ಟನೆ ಭೂಮಿಗೆ  ಎಳೆದು ತಂದು  ಬಿಸುಡಿತು.

ಇನ್ನು ನಾಲ್ಕು ಗಂಟೆಯವರೆಗೆ ಒಳ್ಳೇ ಟೈಮ್ ಪಾಸ್ ಎಂದು ಎದ್ದು ಹೊರಬಂದೆ. 

ಅವಳು ಹೀಗೆ ಅಪುರೂಪಕ್ಕೊಮ್ಮೆ ಸುಳಿವೇನೂ ಕೊಡದೆ ತಟ್ಟನೆ ಪ್ರತ್ಯಕ್ಷವಾಗಿ ಊರಿನಲ್ಲಿರುವವರ ಸುಖ ದು:ಖಗಳನ್ನೆಲ್ಲಾ ಹಂಚಿಕೊಳ್ಳುತ್ತಿದ್ದಳು..!!

ಯಾವುದನ್ನೂ ಬೇಡುವ ಬಾಯಲ್ಲ ಅವಳದ್ದು. ತಾನಾಗೇ ನಮ್ಮೆದುರಿನಲ್ಲಿಯೇ ಅಂಗಳದಲ್ಲಿ ಹರಗಿದ್ದ ರಾಶಿಯಿಂದ  ನಾಲ್ಕು ಅಡಿಕೆ ತೆಗೆದು ಸಿಪ್ಪೆ ಸುಲಿದು ತುಂಡು ಮಾಡಿ ತನ್ನ ಎಲೆ ಅಡಿಕೆಯ ಸಂಚಿಗೆ ಸೇರಿಸಿಕೊಳ್ಳುತ್ತಿದ್ದಳು. ಕತ್ತಿ ಹಿಡಿದು ತೋಟಕ್ಕೆ ನಡೆದು ತೆಂಗಿನ ಮಡಲು ತುಂಡು ಮಾಡಿ ಹೊರೆ ಕಟ್ಟಿಕೊಂಡು ಅದರ ಮೇಲೆರಡು ತೆಂಗಿನಕಾಯನ್ನು ನಮಗೆ ಕಾಣುವಂತೆ ಕಟ್ಟಿ ಇಡುತ್ತಿದ್ದಳು. ಎಲ್ಲಾ ಖುಲ್ಲಂ ಖುಲ್ಲಾ.. !!  

ಅಷ್ಟು ಮಾಡಿ ಉಸ್ಸಪ್ಪ ಎಂದು ಹೇಳುತ್ತಾ 'ಚಾಯ' ಕೊಡಿ ಎಂದು ಜಗಲಿಯಲ್ಲಿ ಕುಳಿತು ಮಾತು ಸುರು ಮಾಡುತ್ತಿದ್ದಳು. 

ಇಂದೇಕೋ ಬಂದವಳೇ ಜಗಲಿಯ ಮೂಲೆ ಸೇರಿ ಕಾಲು ಚಾಚಿ, ಬಾಯಿಗೆರಡು ಅಡಿಕೆ ಹೋಳು ದೂರದಿಂದಲೇ ಎಸೆದು, ವೀಳ್ಯದೆಲೆಯ ತುದಿ ಮುರಿದು ತನ್ನ ಸೀರೆಯಲ್ಲಿ ಅದನ್ನು ಚೆನ್ನಾಗಿ ಉಜ್ಜಿ ಅದರ ಎರಡೂ ಕಡೆಗೆ ಸುಣ್ಣ ಲೇಪಿಸಿದಳು. ಮತ್ತೊಂದು ಕಪ್ಪಾದ ಡಬ್ಬದ ಮುಚ್ಚಳ ತೆಗೆದು ಹೊಗೆಸೊಪ್ಪನ್ನು ಚಿವುಟಿ ತೆಗೆದು , ಎಲ್ಲವನ್ನೂ ಬಾಯಿಗೆ ತುರುಕಿ ಜಗಿಯತೊಡಗಿದಳು. ಆ ಬ್ರಹ್ಮಾನಂದದ ಕ್ಷಣಗಳಲ್ಲಿಯೂ ಎದುರು ಕುಳಿತ ನನ್ನನ್ನು ಮರೆಯದೇ " ಅಕ್ಕೆರೇ.. ನಿಮಗೆ ಗೊತ್ತುಂಟೋ.." ಎಂದಳು. 

ಇದು ಮಾತು ಸುರು ಆಗುವ ಲಕ್ಷಣ .. ನಾನು ಕಿವಿ  ತೆರೆದಿಟ್ಟೆ.

" ನಮ್ಮ ಶಂಕರಣ್ಣೇರ ಮಗ ಶೇಖರಣ್ಣನಿಗೆ ಮದ್ವೆ ಆಗಿ ಎಷ್ಟು ವರ್ಷ ಆಯ್ತು ಹೇಳಿ ನೋಡುವಾ"ಎಂದು ಸವಾಲೆಸೆದಳು. 

ನಾನು ಯೋಚಿಸುತ್ತಾ "ಒಂದಾರು ವರ್ಷ ಆಗಿರಬಹುದು .. ಯಾಕೇ..?" ಅಂದೆ

 "ಅಲ್ಲಾ ಅಕ್ಕೇರೇ ಅವರಿಂದ ಮತ್ತೆ ಮದುವೆಯಾದ ನನ್ನ ಮೊಮ್ಮಗಳು ಎರಡು ಹಡೆದು ಈಗ ಮೂರನೆಯದನ್ನು ಹೊಟ್ಟೆಯಲ್ಲಿ ಹೊತ್ತುಕೊಂಡಿದ್ದಾಳೆ. ಶೇಖರಣ್ಣನ ಹೆಂಡತಿ ಈಗ ಬಸುರಿ ಅಂತೆ" ಎಂದಳು ಸ್ವರ ತಗ್ಗಿಸಿ.. 

"ಹೌದಾ. ಹಾಗಿದ್ರೆ ನಿಂಗೆ ಬಾಣಂತನ ಮಾಡುವ ಕೆಲಸ ಉಂಟಲ್ಲ .. ಇನ್ನು ನಾಲ್ಕು ತಿಂಗಳು ನಿನ್ನನ್ನು ಕಾಣುವಂತಿಲ್ಲ.." ಎಂದು ಕೆಣಕಿದೆ.

ಬದಿಯಲ್ಲಿಟ್ಟ ಮರದ ಕೋಲನ್ನು ತೋರಿಸಿ.. "ಈ ದಂಟೆ ಕೈಯಲ್ಲಿ ಹಿಡ್ಕೊಂಡು ಸರ್ತ ನಡೆಯುವುದೇ ದೊಡ್ಡದು ಈಗ.. ಇನ್ನು ಬಾಣಂತನ ನನ್ನದೇ ಮಾಡ್ಬೇಕು .. ನಿಮ್ಮದೊಂದು ತಮಾಷೆ" ಎಂದು ಎದ್ದು ಹೊರಗೆ ಹೋಗಿ ತೋಟದ ಕಡೆಗೆ ಬಗ್ಗಿ ಕೈ ಬೆರಳನ್ನು ಬಾಗಿಟ್ಟು ಪಿಚಕ್ಕೆಂದು ಉಗುಳಿ ಸೆರಗಿನಲ್ಲಿ ಬಾಯೊರೆಸಿಕೊಳ್ಳುತ್ತಾ ಬಂದು ಕುಳಿತಳು. 

"ಅಲ್ಲಾ ನಿಮಗೆ ಗೊತ್ತುಂಟೋ.. ಅವರಿಗೆ ಯಾಕೆ ಇಷ್ಟು ಸಮಯ ಮಕ್ಕಳಾಗಲಿಲ್ಲ ಅಂತ.. ?"

"ಯಾಕೇ..?" ಅಂದೆ ಕುತೂಹಲದ ದ್ವನಿಯಲ್ಲಿ..

ಅವರ ಮನೆಯಲ್ಲಿ ಒಂದು ಕಂಪ್ಲೀಟರು ಅಂತ ಮಿಷನ್ ಉಂಟು. ನೋಡ್ಲಿಕ್ಕೆಲ್ಲ ನಮ್ಮ ಟಿ  ವಿ  ಯ ಹಾಗೇ.. ಅದು ಮನೆಯಲ್ಲಿದ್ರೆ ಮಕ್ಕಳಾಗೋದಿಲ್ಲ ಅಂತೆ.. ಅವ್ರು ಅಂತಲ್ಲ ಸುಮಾರು ಜನ ಇದ್ದಾರಂತೆ  ಈಗ ಹಾಗೆ.." 

"ಮತ್ತೆ ಈಗ ಹೇಗೆ ಬಸುರಿಯಾಗಿದ್ದೇ..?" ಎಂದು ಲಾ ಪಾಯಿಂಟ್   ಎಸೆದೆ. 
  
ನನ್ನ ಮುಖವನ್ನು ಅರೆ ಗಳಿಗೆ ನೋಡಿ.. 'ಅದನ್ನವರು ಮಾರಿದ್ದಾರೆ ಈಗ.. ಹಾಗಾಗಿ ಬಸುರಿ ಆದದ್ದು.."  ಎಂದಳು 

"ಓಹೋ ಹಾಗಾ.. ಯಾರು ತೆಕ್ಕೊಂಡ್ರಪ್ಪಾ ಆ ಹಳೇದನ್ನ" ಎಂದು ಮನಸ್ಸಿನಲ್ಲಿ ಅಂದುಕೊಳ್ಳುವುದನ್ನೇ ದೊಡ್ಡದಾಗಿ ಹೇಳಿಬಿಟ್ಟೆ.

"ಮತ್ಯಾರು.. ನಾನೇ.. ನನ್ನ ಪುಳ್ಳಿ ಮನೆಗೆ ಕೊಂಡೋಗಿ ಕೊಟ್ಟಿದ್ದೇನೆ. ಸಾಕು ಅವ್ಳು ಹೆತ್ತದ್ದು. ಹಳೆಯದಾದ್ರು ಪವರ್ ಇರ್ತದಂತೆ.." ಎಂದಳು ಗತ್ತಿನಲ್ಲಿ..!!   

18 comments:

 1. ನಕ್ಕೂ ನಕ್ಕೋ ಸಾಕಾಯ್ತು , ನಿಮ್ಮ ಪಾಚೂ ಬಹಳ ಲಾಜಿಕ್ ಆಗಿ ಹೇಳಿದ್ದಾಳೆ.
  ಬಹುಶಹ ಒಳ್ಳೆ ವಕೀಲರಾಗುವ ಎಲ್ಲಾ ಅರ್ಹತೆ ಇದೆ. ನನ್ನ ಓಟು ಪಾಚುಗೆ. ನಿರೂಪಣೆ ಚೆನ್ನಾಗಿದೆ.

  ReplyDelete
 2. ಅಕ್ಕ ...ತುಂಬಾ ತಮಾಷೆಯಾಗಿದೆ. ಈ ನಮ್ಮ ಊರಿನ ಮಂದಿಗೆ ಪ್ರತಿಯೊಂದಕ್ಕೂ ಕಾರಣಬೇಕು. ಸತ್ಯದ ಅರಿವಿಲ್ಲ. ನಿಮ್ಮ ನಿರೂಪಣೆ ತುಂಬಾ ಖುಷಿ ಕೊಟ್ಟಿದೆ

  ReplyDelete
 3. ಓಯ್... ನಿಮ್ಮ ಕಂಪ್ಲೀಟರು ನಮ್ಮ ಹಾಗೇ ಇದೆ ಅಕ್ಕೇರೆ... ನೀವು ಕೂತ್ಕೊಳ್ಳೋ ಚೇರು ಕೂಡ ನಮ್ಮ ಹಾಗೇ... ಅಂದಂಗೆ, ಪಾಚುಗೆ ಇನ್ನೂ ಏನೇನು ಗೊತ್ತುಂಟು ಅನ್ನೋ ಕುತೂಹಲ ನಮಗೆ...

  ReplyDelete
 4. ನಕ್ಕು ಸುಸ್ತಾಯ್ತು ...ಸಖತ್ ಇಷ್ಟ ಆಯ್ತು...ನಿಮ್ಮ ಪಾಚು ಡೈಲಾಗ್ ಸುಪರ್ ... :)

  ReplyDelete
 5. ತುಳುಮಿಶ್ರಿತ ಧಾಟಿಯ ಲಘು ಹಾಸ್ಯ ಖುಷಿ ಕೊಟ್ಟಿತು.

  ಪಾಚುವಿನ ತಿಳಿವಳಿಕೆ ಚೆನ್ನಾಗಿದೆ.

  ಮಕ್ಕಳಿದ್ದರೆ ಮನೆತುಂಬಾ, ಕಂಪ್ಲೀಟರಿಡವ್ವ ಕೋಣೆ ತುಂಬಿ! ಅಂಥ ಬದಲಾಯಿಸಬಹುದು ನೋಡಿ! ಜನಸಂಖ್ಯಾ ನಿಯಂತ್ರಣ ಧ್ಯೇಯವಾಕ್ಯ.. ಮಂಡೆಬಿಸಿಯೇ ಇಲ್ಲ!

  ReplyDelete
 6. ಅನಿತಾ ಮೇಡಂ ಸೂಪರ್ :-)

  ReplyDelete
 7. :) ಸೊಗಸಾಗಿದೆ. ನೀವು ನವಿರು ಹಾಸ್ಯದಲ್ಲೂ ಎತ್ತಿದ ಕೈ

  ReplyDelete
 8. ಅಹಹಹ ಸೂಪರ್ ಕಣ್ರೀ...

  ReplyDelete
 9. ಸೊಗಸಾದ ಹಾಸ್ಯಭರಿತ ಲೇಖನ... ಹಳ್ಳಿಯ ಜನ ಹಾಗೆಯೇ ಅಕ್ಷರಭ್ಯಾಸದ ಅರಿವಿಲ್ಲದಿದ್ದರೂ ತನ್ನ ಸುತ್ತಮುತ್ತ ನಡೆಯುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋಗುವುದು ಸಹಜ, ಅವರಿಗೆ ಎಷ್ಟು ತಿಳಿದಿದೆಯೋ ಅಷ್ಟನ್ನು ಆತ್ಮೀಯರೆನಿಸಿಕೊಂಡವರೊಡನೆ ಹಂಚಿಕೊಳ್ಳುವುದು. ಸೂಕ್ಷ್ಮಗಳ ಅರಿವಿಲ್ಲದೆ ಎಷ್ಟೋ ವಿಚಾರಗಳನ್ನು ಹಂಚಿಕೊಂಡುಬಿಡುತ್ತಾರೆ ಅದೆ ಅವರ ಮುಗ್ಧತೆಗೆ ಹಿಡಿದ ಕನ್ನಡಿ,,, ನಾವು ಆಧುನಿಕತೆಯ ಭರದಲ್ಲಿ ಆಧುನಿಕ ಉಪಕರಣಗಳನ್ನು ಅಳವಡಿಸಿಕೊಳ್ಳಲು ಹೋಗಿ ಮನಸ್ಸಿನ, ದೇಹದ ಸೌಖ್ಯವನ್ನರಿಯದೆ, ಆಧುನಿಕತೆಯ ಸೋಗಿಗೆ ಬಲಿಯಾಗುತ್ತಿದ್ದೇವೆಯೇನೋ ಅನ್ನಿಸುತ್ತದೆ... ನಿಮ್ಮ ಲೇಖನದಲ್ಲಿ ಸೂಕ್ಷ್ಮಗಳನ್ನು ಗಮನಿಸುವಿಕೆಯು ಅತಿ ಹೆಚ್ಚು...

  ReplyDelete
 10. hahaha..... anitakka idantoo adbhutavaagide....:)

  ReplyDelete
 11. ಅದ್ಬುತ ಲೇಖನ, ವಾಖ್ಯ ಜೋಡಣೆ ತುಂಬಾ ಚನ್ನಾಗಿದೆ.

  ReplyDelete
 12. ಓದಿ ಮುಗಿಸುವಷ್ಟರಲ್ಲಿ ಐಸ್ ಕ್ರೀಂ ಚಪ್ಪರಿಸಿದ ಅನುಭವ ... ಮದ್ಯೆ ಅಲ್ಲಲ್ಲಿ ದಕ್ಷಿಣ ಕನ್ನಡ ಡ ಕನ್ನಡ ಇಣುಕಿದ್ದು ಮತ್ತಷ್ಟು ಖುಷಿ ಕೊಟ್ಟಿತು ...

  ReplyDelete
 13. ತುಂಬಾ ಚೆನ್ನಾಗಿದೆ, ನಮ್ಮೂರಲ್ಲಿ ನಮ್ಮ ಅಜ್ಜಿಯ ಗೆಳತಿ ನಾಗಿಯ ನೆನಪಾಯ್ತು... ಆದರೆ ನಾಗಿ ನಾವಾಗಿ ಏನಾದ್ರೂ ಕೊಟ್ರೆ ಮಾತ್ರ ತೊಗೊಳ್ತಾ ಇದ್ಲು

  ReplyDelete