ರೇಣು ಮನೆಗೆ ಬಂದವಳೇ ಶಾಲೆಯ ಚೀಲವನ್ನು ಪಕ್ಕಕ್ಕೆಸೆದು ಮನೆಯ ಹಿಂಬದಿಗೆ ಅಮ್ಮನನ್ನು ಹುಡುಕುತ್ತಾ ಹೊರಟಳು. ಯಾವತ್ತೂ ಅವಳು ಮನೆಗೆ ಬರುವಾಗ ಅಮ್ಮ ಅಯ್ನೋರ ಮನೆಯ ಕೊಟ್ಟಿಗೆಯಲ್ಲಿ ಸಗಣಿ ರಾಶಿ ಮಾಡುತ್ತಾ ಕುಳಿತಿರುತ್ತಾಳೆ.
'ಅಮ್ಮಾ' ಎಂದು ಹಿಂದಿನಿಂದ ಅವಳ ಕೊರಳನ್ನು ಬಳಸಿ ಹಿಡಿದಳು. ಇಡೀ ದಿನ ಕೆಲಸ ಮಾಡಿ ಬಳಲಿದ್ದರೂ ತನ್ನನ್ನು ಕಾಣುವಾಗ ಅವಳ ಮುಖ ಅರಳುವುದು ತಿಳಿದಿದೆ ರೇಣುವಿಗೆ..
" ಹೋಗು ಬೇಗ .. ಕೈಕಾಲು ತೊಳೆದು ಶಾಲೆ ಕೆಲ್ಸ ಮಾಡು. ಕತ್ತಲಾದರೆ ದೀಪ ಉರಿಸಲು ಸೀಮೆ ಎಣ್ಣೆ ಇಲ್ಲ.. ಹೇ.. ನಿಲ್ಲು" ಎಂದು ಸಗಣಿ ಮೆತ್ತಿದ ಕೈಗಳನ್ನು ಹತ್ತಿರದಲ್ಲಿದ್ದ ನೀರಿನ ಪಾತ್ರೆಗೆ ಅದ್ದಿ ತೊಳೆದು ಸೆರಗಿನ ತುದಿಯಲ್ಲಿ ಒರೆಸಿಕೊಂಡು, ಕೊಟ್ಟಿಗೆಯ ಗೋಡೆ ಸಂದಿನಲ್ಲಿ ಇಟ್ಟಿದ್ದ ಬಾಳೆ ಎಲೆ ಕಟ್ಟನ್ನು ಮಗಳ ಕೈಲಿರಿಸಿದಳು.
ಅವಸರದಿಂದ ಅದನ್ನು ಬಿಚ್ಚಿದ ರೇಣು ಕಣ್ಣರಳಿಸಿ ಅದರಲ್ಲಿದ್ದ ಹೋಳಿಗೆಯನ್ನು ಮುರಿದು ಬಾಯ ಹತ್ತಿರ ತಂದರೆ ಅದರಲ್ಲೂ ಸಗಣಿಯ ವಾಸನೆ ಸುಳಿಯುತ್ತಿತ್ತು. "ಥೂ ನಂಗ್ ಬೇಡ.. ಇದು ಸಗಣಿ ವಾಸ್ನೆ" ಎಂದಳು.
ಸುಮ್ನೇ ತಿನ್ನು .. ಅವತಾರ ಮಾಡ್ಬೇಡ, ಸಿಹಿ ಇದೆ ಅದು, ಬೆಳಿಗ್ಗೆ ಅಮ್ಮಾವ್ರು ಕೊಟ್ಟಿದ್ದು.. ನಿಂಗೆ ಇಷ್ಟ ಅಂತ ಎತ್ತಿಟ್ಟಿದ್ದೆ. ಎಂದಳು ಅಮ್ಮ.
ಪಾಪ ಅಮ್ಮ ತಿನ್ನದೇ ನಂಗೆ ಅಂತಲೇ ತೆಗೆದಿಟ್ಟಿದ್ದನ್ನು ನೋಡಿ "ಹೂಂ .. ಹೂಂ .. ಚೆನ್ನಾಗಿದೆ.. ನೀನೂ ತಿನ್ನು" ಅಂತ ಅಮ್ಮನ ಬಾಯಿಗೂ ತುರುಕಿದಳು.
ಅಮ್ಮನ ಮುಖ ಅರಳಿದ್ದನ್ನು ಗಮನಿಸಿ ಮತ್ತೆ ಸಣ್ಣ ಸ್ವರದಲ್ಲಿ " ಅಮ್ಮಾ ಮತ್ತೇ.. ಮತ್ತೇ..ನಂಗೇನೋ ಬೇಕು.. ನಾ ಹೇಳಿದ್ದು ತೆಕ್ಕೊಡ್ತೀಯಾ.." ಎಂದು ರೇಣು ಮೆಲ್ಲನೆ ತನ್ನ ಬೇಡಿಕೆ ಇಟ್ಟಳು.
"ಏನೇ ಅದು.. ಇಲ್ಲಿ ನಾಳೆಯ ಗಂಜಿಗೆ ಕಾಸಿಲ್ಲ ಅಂತ ನಾನು ಒದ್ದಾಡ್ತಿದ್ದೀನಿ ಇವ್ಳದ್ದು ನೋಡಿದ್ರೆ ಬೇರೆಯೇ ರಾಗ.." ಎಂದಳು ಅಮ್ಮ. ಕೂಡಲೇ ಮಗಳ ಮುಖ ಬಾಡಿದ್ದನ್ನು ಗಮನಿಸಿ " ಇರ್ಲಿ ಬಿಡು.. ಹೇಳು ಏನದು" ಎಂದಳು.
"ನಂಗೆ ಒಂದು ಕರ್ಚಿಪ್ ಬೇಕು. ಶಾಲೆಯಲ್ಲಿ ಎಲ್ಲಾ ಮಕ್ಕಳೂ ತರ್ತಾರೆ. ಎಷ್ಟೆಷ್ಟು ಚಂದ ಇರುತ್ತೆ ಗೊತ್ತಾ.. ನಂಗೂ ಒಂದು ಬಣ್ಣ ಬಣ್ಣದ್ದು ಬೇಕಮ್ಮಾ ತೆಕ್ಕೊಡು.." ಎಂದು ರಾಗ ಎಳೆದಳು ರೇಣು.
ಮಗಳ ಬೇಡಿಕೆ ತೀರಿಸಲಾರದ್ದೇನೂ ಅಲ್ಲ ಎಂದುಕೊಂಡ ಅಮ್ಮ " ಹೂಂ .. ಸರಿ .. ದುಡ್ಡು ಬಂದಾಗ ತೆಕ್ಕೊಡ್ತೀನಿ. ಅಲ್ಲಿವರೆಗೆ ಹಠ ಮಾಡ್ಬಾರ್ದು" ಎಂದಳು.
ರೇಣು ದಿನಾ ಶಾಲೆಯಿಂದ ಬಂದ ಕೂಡಲೇ 'ಇವತ್ತು ತಂದಿದ್ದೀಯಾ' ಎಂದು ಕೇಳುವುದು,ಅಮ್ಮ ಅದಕ್ಕುತ್ತರವಾಗಿ 'ಇಲ್ಲಾ .. ನಾಳೆ' ಎಂದು ಸಮಾಧಾನಿಸುವುದು ನಡೆದೇ ಇತ್ತು.
ಆ ದಿನ ರೇಣು ಶಾಲೆ ಬಿಟ್ಟು ಮನೆಗೆ ಬಂದಾಗ ಅವಳಿಗೆ ಅಚ್ಚರಿ ಕಾದಿತ್ತು. ಮನೆಯಲ್ಲೇ ಅವಳಿಗಾಗಿ ಕಾದಿದ್ದ ಅಮ್ಮ, ಮತ್ತು ಅವಳ ಕೈಯಲ್ಲಿ ಸುಂದರ ಕರ್ಚೀಪು. ಬೇರೆ ಬೇರೆ ಬಣ್ಣದ ಬಟ್ಟೆಯ ತುಣುಕನ್ನು ಸೇರಿಸಿ ಹೊಲಿದು, ಬದಿಗೆ ಜರಿಯ ಬಾರ್ಡರ್ ಹೊತ್ತ ರಂಗು ರಂಗಿನ ಕರ್ಚೀಪು ಅದು. ರೇಣುವಿನ ಆನಂದಕ್ಕೆ ಎಲ್ಲೆಯೇ ಇರಲಿಲ್ಲ.
"ಎಲ್ಲಿಂದ ತಂದೆ ಇದನ್ನಾ" ಎಂದಳು. "ಟೈಲರ್ ಅಂಗಡಿಯಿಂದ ಬಟ್ಟೆ ತಂದು ನಾನೇ ಹೊಲಿದೆ" ಎಂದಳು ಅಮ್ಮ. ಅಮ್ಮನ ಕೊರಳಪ್ಪಿ ಮುದ್ದಿಟ್ಟಳು ರೇಣು.
ರಾತ್ರಿ ಮಲಗುವಾಗಲೂ ತನ್ನ ಪಕ್ಕದಲ್ಲೇ ಅದನ್ನಿಟ್ಟುಕೊಂಡು ಮಲಗಿ ಬೆಳಗಾಗುವುದನ್ನೇ ಕಾಯುತ್ತಿದ್ದಳು. ಬೇಗ ಶಾಲೆಗೆ ತಲುಪಿ ಗೆಳತಿಯರಿಗೆ ತೋರಿಸಿ ಅವರ ಹೊಗಳಿಕೆಗೆ ಪಾತ್ರಳಾಗುವ ಆಸೆ. ಶಾಲೆ ಹತ್ತಿರ ಬರುತ್ತಿದ್ದಂತೇ ಕುಷಿಯಿಂದ ಎದೆ ಡವ ಡವ ಎನ್ನಲು ಪ್ರಾರಂಭಿಸಿತು.
ಬ್ಯಾಗಿನಲ್ಲಿ ಏನೋ ಹುಡುಕುವವಳಂತೆ ಮಾಡಿ ಗೆಳತಿಯರ ಕುತೂಹಲ ಕೆರಳಿಸಿ ನಂತರ ನಿಧಾನಕ್ಕೆ ಕರ್ಚಿಪನ್ನು ಹೊರತೆಗೆದು ಗೆಳತಿಯರೆದುರು ಹಿಡಿದಳು.
"ಅರೇ.." ಎಂದು ಎಲ್ಲರೂ ಮುತ್ತಿಕೊಂಡರು. ಒಬ್ಬರ ಮುಖ ಒಬ್ಬರು ನೋಡಿ ಮುಸಿ ಮುಸಿ ನಕ್ಕರು.
" ಹೇ.. ಇಲ್ಲಿ ನೋಡೇ ಈ ತುಂಡು ನನ್ನ ಲಂಗದ ಬಟ್ಟೆ".
"ಹ್ಹ ಹ್ಹ ಇದು ನೋಡು ಇದು ನನ್ನಮ್ಮನ ರವಿಕೆಯ ತುಂಡು.."
"ಅದೇನು ಮಹಾ ನೋಡಿಲ್ಲಿ ಇದು ನನ್ನಣ್ಣನ ಅಂಗಿಯ ಬಟ್ಟೆ. ಬೇಕಿದ್ರೆ ಪರೀಕ್ಷೆ ಮಾಡಬಹುದು. ಇವತ್ತು ಅವನ ಹುಟ್ಟುಹಬ್ಬ. ಇದೇ ಅಂಗಿ ಹಾಕಿದ್ದಾನೆ."
ಗೆಳತಿಯರ ಕಲರವ ಮುಂದುವರಿದೇ ಇತ್ತು. ರೇಣು ಅವಳದ್ದು ಎಂದುಕೊಂಡ ಕರ್ಚಿಪಿನ ಒಂದೊಂದು ತುಂಡಿಗೂ ಅವರು ತಮ್ಮ ಹೆಸರಿನ ಮುದ್ರೆಯೊತ್ತುತ್ತಲೇ ಇದ್ದರು.
ಅರೆ ಗಳಿಗೆ ಮೌನವಾಗಿದ್ದ ರೇಣು ಕಣ್ಣರಳಿಸಿ ತನ್ನ ಕರ್ಚಿಪನ್ನು ಮರಳಿ ಕೈಯಲ್ಲಿ ಹಿಡಿದು " ಇಲ್ಲಿ ನೋಡಿ ಈ ನೂಲು ಕಾಣುತ್ತದಲ್ಲಾ.. ಬಿಳೀ ಬಣ್ಣದ್ದು.. ಇದನ್ನೆಲ್ಲಾ ಸೇರಿಸಿದ್ದು.. ಇದು ನನ್ನದು.. ನನ್ನಮ್ಮ ಹೊಲಿದಿದ್ದು.." ಎಂದು ಗತ್ತಿನಲ್ಲಿ ನುಡಿದು, ಅದನ್ನು ಅಮೂಲ್ಯ ವಸ್ತುವಿನಂತೆ ತನ್ನ ಬ್ಯಾಗಿನೊಳಗೆ ಭದ್ರಪಡಿಸಿದಳು.