Pages

Total Visitors

Monday, February 18, 2013

ಪಾರ್ಕ್ ..



ಬೇಗ ಬಾ ಬಸ್ಸು ಮಿಸ್ಸಾಗುತ್ತೆ ಎಂದು ಹೈ ಪಿಚ್ ನಲ್ಲಿ ಕಿರುಚುತ್ತಾ ಹೊರಡಲನುವಾಗಿದ್ದ ಬಸ್ಸಿನ ಮೆಟ್ಟಲೇರಿದೆ. ನನ್ನ ಹಿಂದೆಯೇ ಸೆಕೆಂಡಿನ ಅಂತರದಲ್ಲಿ ಅವಳೂ ಬಸ್ಸಿನೊಳಗೆ ತೂರಿಕೊಂಡಳು. ಓಲಂಪಿಕ್ಸ್ ನಲ್ಲಿ ಪದಕ ಪಡೆದವರ ಮುಖದ ಹೊಳಪು ನಮ್ಮಲ್ಲಿ. ಅದಕ್ಕೆ ಕಾರಣವೂ ಇತ್ತು. ಬರೀ ನಾವಿಬ್ಬರೇ ಆಗಿದ್ದರೆ ಚಲಿಸುತ್ತಿರುವ ಬಸ್ಸನ್ನು ಓಡುತ್ತಲೇ ಏರುತ್ತಿದ್ದೆವೋ ಏನೋ.. ಆದರೆ ನನ್ನ ಕೈಯಲ್ಲಿ ಈಗಿನ್ನೂ ನಡೆಯುವುದಕ್ಕೆ ಕಲಿಯುತ್ತಿರುವ ಮಗ, ಅವಳ ಕೈಯಲ್ಲಿ 'ಈ ಬಸ್ಸು ಬೇಡ' ಎಂದು ಕಿರುಚುತ್ತಿರುವ ಮೂರು ವರ್ಷದ ಮಗಳು. ಅವರಿಬ್ಬರ ಬೇಕು ಬೇಡಗಳನ್ನು ಪೂರೈಸಲು ಹಿಡಿದುಕೊಂಡ ದೊಡ್ಡ ಬ್ಯಾಗು. ಇವಿಷ್ಟರಲ್ಲಿ ಯಾವುದನ್ನೂ ಕೆಳಗೆ ಉರುಳಿಸದೇ ಬಸ್ಸನ್ನೇರಿದ ನಮಗೆ ಸಂತಸವಾಗದೇ ಇದ್ದೀತೇ..?

ಆತ್ಮೀಯ ಗೆಳತಿ ನೈನಾ ಕೊಡಗಿನ ಪುಟ್ಟ ಹಳ್ಳಿಯೊಂದರಿಂದ  ನನ್ನನ್ನು ನೋಡಲು ಪೇಟೆಗೆ ಬಂದಿದ್ದಳು.

ನನಗೆ ನಮ್ಮೂರ ಪಾರ್ಕನ್ನು ಅವಳಿಗೆ ತೋರಿಸುವ ಉತ್ಸಾಹ. "ನಾನು ಕೊಡಗಿನಲ್ಲಿ ಕಾಣದ ಅದ್ಯಾವ ಸೀಮೆ ಹೂವಿದೆಯೇ ಇಲ್ಲಿ..? ನಿನ್ನೆ ಬೀಚಲ್ಲಿ ನಡೆದೂ ನಡೆದೂ ಸುಸ್ತಾಗಿದೆ. ಇವತ್ತು ಹಾಯಾಗಿ ಕಾಲು ಚಾಚಿ ಹಳೇ ಸುದ್ದಿಗಳನ್ನು ನೆನಪಿಸಿಕೊಳ್ಳೋಣ" ಎಂದು ಗೋಗರೆಯುತ್ತಿದ್ದ ಅವಳನ್ನು ಎಬ್ಬಿಸಿ ಹೊರಡಿಸಿ ಬಸ್ಸು ಏರಿಸುವಲ್ಲಿ ಸಫಲಳಾಗಿದ್ದೆ. 

ಬಸ್ಸೊಳಗೆ ಖಾಲಿ ಸೀಟಿಗಾಗಿ ಕಣ್ಣಾಡಿಸಿದೆವು. ಮಕ್ಕಳನ್ನು ಕಟ್ಟಿಕೊಂಡು ಬಂದರೆ ಆಗುವ ಒಂದೇ ಒಂದು ಉಪಕಾರ ಎಂದರೆ ಬಸ್ಸಿನೊಳಗೆ ಯಾರಾದರು ಪ್ಯಣ್ಯಾತ್ಮರು ಕರೆದು ಸೀಟ್ ಕೊಡುವುದು. ಒಳಗೊಳಗೇ ಅವರು ಬಯ್ದುಕೊಳ್ಳುವುದು ನಮಗೆ ಕೇಳುವುದಿಲ್ಲ ಬಿಡಿ. ಅವಸರದಲ್ಲಿ ಹಿಂದಿನ ಬಾಗಿಲಿನಲ್ಲಿ ಹತ್ತಿದ್ದ ಕಾರಣ ಹಿಂದಿನ ಸೀಟಿನ ಎರಡು ಜನ ಮೇಲೆದ್ದು ನಮ್ಮನ್ನಲ್ಲಿ ಕೂರಲು ಹೇಳಿ ತಮ್ಮ ಬೆನ್ನು ನೆಟ್ಟಗೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾ ನಿಂತುಕೊಂಡರು. 

ನಾವು ಸೀಟು ಸಿಕ್ಕಿದ ಖುಷಿಯಲ್ಲಿ ಇದ್ದೆಲ್ಲಾ ಹಲ್ಲುಗಳನ್ನು ಬಿಟ್ಟು ಅವರಿಗೊಂದು  'ಥ್ಯಾಂಕ್ಯೂ' ಹೇಳಿ ಮಕ್ಕಳನ್ನು ತೊಡೆಯ ಮೇಲೇರಿಸಿಕೊಂಡು ಆಸೀನರಾದೆವು. ಆಗಲೇ ತಿಳಿದಿದ್ದು ಸತ್ಯ ಸಂಗತಿ. ಸೀಟಿನ ಸ್ಪಂಜು ಎಂಬ ವಸ್ತು ಒಂದು ಕಾಲದಲ್ಲಿ ಅಲ್ಲಿತ್ತುಎಂದು ಪ್ರಮಾಣ ಮಾಡಿ ಹೇಳಿದರೂ ನಂಬದಂತಿತ್ತು. ಒಂದೊಂದು ಜಂಪ್ ಗಳಲ್ಲಿ ಎತ್ತಿ ಎತ್ತಿ ಹಾಕಿದಾಗ ನಾವು ಮಕ್ಕಳು ಸಮೇತ ಮೇಲಕ್ಕೇರಿ ಪುನಃ ಕಬ್ಬಿಣ ಕಾಣುತ್ತಿರುವ ಸೀಟಿನ ಅಸ್ಥಿಪಂಜರದ ಮೇಲೆ  ಬೀಳುತ್ತಿದ್ದೆವು. 

ಅಷ್ಟರಲ್ಲಿ ಕಂಡೆಕ್ಟರ್ 'ಯಾರಲ್ಲಿ ರಾಮಕಾಂತಿ' ಅಂದ. ನಮ್ಮ ಎದುರು ಕುಳಿತಿದ್ದವಳು ರಭಸದಿಂದ ಎದ್ದು ಕೆಳಗಿಳಿದಳು. ಇನ್ನೂ ಸ್ವಲ್ಪ ಮುಂದೆ ಹೋದಂತೆ 'ಯಾರ್ರೀ ಜ್ಯೋತಿ' ಎಂಬ ಕಂಡಕ್ಟರಿನ ಉದ್ಗಾರ ಕೇಳಿಸಿತು. ನಮ್ಮ ಪಕ್ಕದಲ್ಲಿ ಕುಳಿತಿದ್ದವಳು ತನ್ನ ಸಮಾನು ಸರಂಜಾಮಿನೊಂದಿಗೆ ನಮ್ಮ ಕಾಲುಗಳನ್ನು ಜ್ಯಾಮ್ ಮಾಡುತ್ತಾ ಇಳಿದಳು. 

ನನ್ನ ಗೆಳತಿ ನನ್ನ ಪಕ್ಕೆಗೆ ತಿವಿದು " ಟಿಕೆಟ್ ತೆಗೊಳ್ಳುವಾಗ ಕಂಡೆಕ್ಟರ್ ಗೆ ನನ್ನ ಹೆಸರು ಹೇಳ್ಬೇಡ" ಅಂದಳು.
"ನಿನ್ನ ಹೆಸರಾ ... ಯಾಕೇ ..  ನೀನೇನು ಪ್ರೈಮ್ ಮಿನಿಸ್ಟರಾ ಹೆಸರು ಹೇಳಿದ ಕೂಡಲೇ ಗೊತ್ತಾಗಲು" ಅಂದೆ. 

"ಅಲ್ಲಾ ಕಣೇ ಈಗ ರಾಮಕಾಂತಿ , ಜ್ಯೋತಿ ಅಂತೆಲ್ಲ ಅವರ ಹೆಸರು ಕರೆದಾಗ ಅವ್ರು ಇಳ್ದಿದ್ದಲ್ವಾ.." ಅಂದಳು.

" ಅಯ್ಯೋ ಎಷ್ಟು ಸಲ ನಮ್ಮೂರಿಗೆ ಬಂದಿದ್ದೀಯ.. ಅಷ್ಟೂ ಗೊತ್ತಾಗ್ಲಿಲ್ಲ್ವಾ... ಅದೆಲ್ಲ ನಮ್ಮೂರ ಚಿತ್ರಮಂದಿರಗಳ ಹೆಸರುಗಳು ಕಣೇ" ಎಂದು ಜಂಭದಿಂದ ನುಡಿದು, "ಸ್ವಲ್ಪ ಪೇಟೆ ಕಡೆ ಹೆಸರುಗಳು, ಬಸ್ ರೂಟ್ ಗಳು ಗೊತ್ತಿರ್ಬೇಕು ಕಣೆ .. ಇಲ್ದಿದ್ರೆ ಕಷ್ಟ" ಎಂದು ಅವಳ ಹೆಡ್ಡುತನಕ್ಕೆ ಮರುಕ ಸೂಚಿಸಿದೆ. 

ವೇಗವಾಗಿ ಸಾಗುತ್ತಿದ್ದ ಬಸ್ ಕಂಡಕ್ಟರನ ವಿಷಲ್ ಸದ್ದಿಗೆ ಗಡಕ್ಕನೆ ಬ್ರೇಕ್ ಹಾಕಿದಾಗ ನನ್ನ ಮಾತಿಗೂ ಬ್ರೇಕ್ ಬಿತ್ತು. ಹಾಗೇ ಮೇಲೆಗರಿ ಟಾಪಿಗೆ ತಲೆ ಹೆಟ್ಟಿಸಿಕೊಂಡು ಮತ್ತೆ ಸೀಟಿಗೆ ಮರಳುವಾಗ ಕೈಲ್ಲಿದ್ದ ಬ್ಯಾಗ್ ಮುಂದಿನ ಸೀಟಿನಲ್ಲಿ ಕುಳಿತಿದ್ದವಳ ತಲೆಯ ಮೇಲಿತ್ತು. ಮೆಲ್ಲನೆ 'ಸ್ಸಾರೀ' ಅನ್ನುತ್ತಾ ಬ್ಯಾಗನ್ನು ಜಾಗ್ರತೆಯಾಗಿ ಕೆಳಗೆ ತೆಗೆದಿರಿಸಿ ಸುಧಾರಿಸಿಕೊಂಡೆ. ಶಾಲೆಯಲ್ಲಿ ಮೊದಲು ಶಿಕ್ಷಕರು ಕೊಡುತ್ತಿದ್ದ 'ಪರಂಗಿ ಮಣೆ' ಎಂಬ ಶಿಕ್ಷೆಯನ್ನು ಮತ್ತೊಮ್ಮೆ ಅನುಭವಿಸುತ್ತಾ ನಮ್ಮ ಕಾಲಿನ ಬಲದಲ್ಲೇ ಕುಳಿತು ಪ್ರಯಾಣಾನಂದವನ್ನು ಅನುಭವಿಸುತ್ತಿದ್ದೆವು.  ನಾನು ಹೊರಗೆ ಕಣ್ಣು ಹಾಯಿಸಿ "ನಾವಿಳಿಯುವ ಜಾಗ ಬಂತು ಏಳೇ" ಎಂದೆ.  'ಬೇಗ ..ಬೇಗ' ಎಂದೊರಲುತ್ತಿದ್ದ ಕಂಡಕ್ಟರಿನ ಮಾತಿಗೆ ಒಂದಿಷ್ಟೂ ಬೆಲೆ ಕೊಡದೆ, ಬೀಳುತ್ತಿರುವ ಮಕ್ಕಳು, ಬ್ಯಾಗುಗಳನ್ನು ಸಂಭಾಳಿಸಿಕೊಂಡು ನಿಧಾನಕ್ಕೆ ಲ್ಯಾಂಡ್ ಆದೆವು.  

ನಮ್ಮನ್ನಿಳಿಸಿ ಮುಂದೆ ಸಾಗಿದ ಬಸ್ ಸೃಷ್ಟಿಸಿದ  ಹೊಗೆಯ ಮೋಡ ಕರಗಿ ಪರಿಸರ ಸ್ಪಷ್ಟವಾದ ನಂತರ ನನಗೆ ನಾವಿಳಿಯಬೇಕಾದ ಸ್ಟಾಪಿಗಿಂತ ಒಂದು ಸ್ಟಾಪ್ ಮೊದಲೇ ಇಳಿದು ಬಿಟ್ಟಿದ್ದೇವೆಂದು ಜ್ಞಾನೋದಯವಾಯಿತು. ನಾಲ್ಕು ಮಾರ್ಗಗಳು ಕೂಡುವ ಜಾಗದಲ್ಲಿ ಇಳಿದು ಯಾವ ಕಡೆ ಹೋಗಬೇಕೆಂದು ಕಣ್ ಕಣ್ ಬಿಡುತ್ತಿರುವ ನನ್ನನ್ನು ಸಂಶಯದಿಂದ ನೋಡಿದ ಗೆಳತಿ " ನಿಂಗೂ ದಾರಿ ಗೊತ್ತಿಲ್ವೇನೇ..ಬೇಕಿದ್ರೆ ಯಾರನ್ನಾದರೂ ಕೇಳೋಣ " ಎಂದು ಸಲಹೆ ನೀಡಿದಳು.

ಅವಳೆದುರು ಆಗಷ್ಟೇ ರೂಟ್ ಗಳ ಬಗ್ಗೆ ಭಾಷಣ ಮಾಡಿ ಈಗ ದಾರಿ ಗೊತ್ತಿಲ್ಲ ಎಂದರೆ ಹೇಗೆ..? "ಇಲ್ಲ ಕಣೇ ಮಕ್ಕಳಿಗೆ ಏನಾದ್ರು ತಿನ್ನೋಕೆ ಹಿಡ್ಕೊಂಡು ಹೋಗೋಣ ಅಂತ ಇಲ್ಲೇ ಇಳಿದೆ. ಪಾರ್ಕ್ ಹತ್ರ ಸರಿಯಾಗಿ ಏನೂ ಸಿಗಲ್ಲ. ಅಲ್ಲೆಲ್ಲಾ ಹಾಳು ಮೂಳು ಡೇಟ್ ಬಾರ್ ಆಗಿದ್ದು ಮಾರ್ತಾರೆ" ಎಂದು ನನ್ನ ಅಗಾಧ ಜ್ಞಾನ ಪ್ರದರ್ಶಿಸಿದೆ. ಹತ್ತಿರದಲ್ಲಿದ್ದ ಅಂಗಡಿಗೆ ನುಗ್ಗಿ ಚಾಕ್ಲೆಟ್ ಬಿಸ್ಕೆಟ್‌ಗಳನ್ನು ಮೊದಲೇ ತುಂಬಿದ್ದ ಚೀಲಕ್ಕೆ ಒತ್ತಿ  ತುರುಕಿದೆ. 

ಹಿಂದೆಂದೋ ಬಂದಿದ್ದ ನೆನಪಿನಲ್ಲಿ " ನೋಡು ಆ ಕಡೆ ನಾಲ್ಕು ಹೆಜ್ಜೆ ಹಾಕಿದ್ರೆ ಪಾರ್ಕ್ ಸಿಗುತ್ತೆ ಕಣೇ, ಆ ಬಸ್ಸಲ್ಲಿ ಬೇರೇ ಕೂತು ಕಾಲೆಲ್ಲ ಜೋಮು ಹಿಡಿದಿತ್ತು. ಈಗ ಸ್ವಲ್ಪ ನಡೆದರೆ ಸರಿ ಆಗುತ್ತೆ" ಅನ್ನುತ್ತಾ ಪಾದ ಬೆಳೆಸಿದೆ. ಬಸ್ಸಿನ ಅಲುಗಾಟಕ್ಕೆ ತೊಟ್ಟಿಲು ತೂಗಿದ ಅನುಭವವಾಗಿ ನಿದ್ದೆಯ ಜೊಂಪಿನಲ್ಲಿದ್ದ  ಅವಳ ಮಗಳನ್ನು ಎತ್ತಿ ಸೊಂಟಕ್ಕೇರಿಸಿ "ಹೂಂ" ಅನ್ನುತ್ತಾ ನನ್ನೊಡನೆ ಹೆಜ್ಜೆ ಹಾಕಿದಳು ನೈನಾ.

ನಾನು ಹೇಳಿದ ನಾಲ್ಕು ಹೆಜ್ಜೆ ನಲ್ವತ್ತಾಗಿ ನಾನ್ನೂರು ದಾಟಿದರೂ ಪಾರ್ಕ್ ಎಂಬುದು ಕಾಣದೆ ಎದುರಿಗೆ ಅತ್ತಿತ್ತ ಮರಗಳಿಲ್ಲದೇ ಬಣಗುಡುತ್ತಿದ್ದ ರಸ್ತೆ ಹೆಬ್ಬಾವಿನಂತೆ ಮಲಗಿ ಭಯವೆಬ್ಬಿಸಿತು. ಮದ್ಯಾಹ್ನ ಊಟ ಮುಗಿಸಿದ ಕೂಡಲೇ ನನ್ನ ಅವಸರಕ್ಕೆ ಹೊರಟ ಕಾರಣ ಸೂರ್ಯ ನೆತ್ತಿ ಮೇಲೆಯೇ ಕೂತಿದ್ದ. ಸೆಕೆಯ ಪೆಟ್ಟಿಗೆ ತತ್ತರಿಸಿ ಬೆವರಿನಲ್ಲಿ ತೋಯ್ದ ಮಕ್ಕಳು ರಚ್ಚೆ ಹಿಡಿಯುತ್ತಿದ್ದವು. ಕೊಡಗೆಂಬ ಚಳಿಯ ಗೂಡಿನ ಮೂಡಿ ( ಹುಡುಗಿ) ಮೂಡ್ ಆಫ್ ಮಾಡಿಕೊಂಡು ನಾನಿನ್ನು ಒಂದು ಹೆಜ್ಜೆ ಮುಂದೆ ಇಡಲ್ಲ ಅಂತ ಮೊಂಡು ಹಿಡಿದಳು. ಅನಿವಾರ್ಯವಾಗಿ ಅಲ್ಲೆ  ನಿಂತು ಬಳಿ ಬಂದ ರಿಕ್ಷಾವೊಂದಕ್ಕೆ ಕೈ ತಡೆದು ನಿಲ್ಲಿಸಿ, ಪಾರ್ಕ್ ಎಂದು ಸ್ಟೈಲಾಗಿ ಹೇಳಿ ಕೂತೆವು. ಅವನು ನಮ್ಮನ್ನು ಒಂದು ರೀತಿ ನೋಡಿ ನಾವು ನಡೆದು ಬಂದ ಹಾದಿಯಲ್ಲೇ ನಮ್ಮನ್ನು ಮತ್ತೆ ಮೆರವಣಿಗೆ ಕರೆದೊಯ್ದ. ನಾಲ್ಕು ಮಾರ್ಗಗಳು ಸೇರುವ ಸರ್ಕಲ್ ದಾಟಿ ಇನ್ನೊಂದು ರಸ್ತೆಯಲ್ಲಿ  ಸ್ವಲ್ಪವೇ ದೂರ ಸಾಗಿ ಪಾರ್ಕ್ ಎಂಬ ಬೋರ್ಡಿನೆದುರು ನಿಲ್ಲಿಸಿದ. 

ನಾನೀಗ ಮುಸಿ ಮುಸಿ ನಗುತ್ತಿದ್ದ ಗೆಳತಿಯ ಮುಖದ ಕಡೆ ನೋಡುವ ಧೈರ್ಯ ಮಾಡದೇ ಸುಮ್ಮನೆ ದುಡ್ಡೆಣಿಸಿ ನೀಡಿ ಪಾರ್ಕಿನ ಪ್ರವೇಶ ದ್ವಾರದೆಡೆಗೆ ನಡೆದೆ. ಅಲ್ಲೊಂದು ಇಲ್ಲೊಂದು ಎಲೆಗಳನ್ನು ಬೋಳಿಸಿ ನಿಂತಿದ್ದ ಮೇ ಫ್ಲವರ್ ಮರ, ನಡೆವ ಕಾಲು ಹಾದಿಯಲ್ಲಿ ವಿಪುಲವಾಗಿ ಬೆಳೆದು ಹೂ ಬಿಟ್ಟಿದ್ದ ಕಾಡು ಲಂಟಾನಾ, ಪಾರ್ಥೇನಿಯಂ, 'ಕಿರ್ರೀ.. ಕಿರ್ರೀಂ ಎಂದು ತುಂಡಾಗುವಂತೆ ಸದ್ದು ಮಾಡುತ್ತಾ ಮಕ್ಕಳ ಭಾರ ಹೊರಲಾರದೇ ಹೊತ್ತು ಜೀಕುತ್ತಿರುವ ಜೋಕಾಲಿ.. ಸಿಮೆಂಟು ಕಿತ್ತು ಹೋಗಿದ್ದ ಜಾರು ಬಂಡಿ, ಅತ್ತಿತ್ತ ಹರಿದೆಸೆದ ಪೇಪರ್, ಪ್ಲಾಸ್ಟಿಕ್ ಗಳು ಗಾಳಿಗೆ ಮೇಲೆದ್ದು ಹಾರಾಡುತ್ತಿರುವ ನೋಟ, ಅಲ್ಲಿಲ್ಲಿ ಕದ್ದು ಮುಚ್ಚಿ ಪ್ರೇಮಿಸುತ್ತಿರುವ ರೋಮಿಯೋ ಜ್ಯೂಲಿಯೆಟ್ಟುಗಳು.. ಮೊದಲೇ ಬಿಸಿಲಿಗೆ ಕೆಂಪಾಗಿದ್ದ ಗೆಳತಿಯ ಮುಖ ಇದನ್ನೆಲ್ಲಾ ನೋಡಿ ಸಿಟ್ಟಿನಿಂದ ಇನ್ನಷ್ಟು ರಾಗರಂಜಿತವಾಯಿತು. 

ಅಲ್ಲೇ ಸಣ್ಣ ಹಾರೆ ಹಿಡಿದು ಮಣ್ಣು ಅಗೆಯುತ್ತಿದ್ದ ಕೆಲಸದವನನ್ನು ಕಂಡೆ. ಗೆಳತಿಯ ಕಡೆಗೆ ತಿರುಗಿ "ತುಂಬಾ ಗಿಡಗಳಿತ್ತು ಕಣೇ ಇಲ್ಲಿ.. ಬಹುಷಃ ಎಲ್ಲಾ ತೆಗೆದು ಹೊಸದಾಗಿ ಗಿಡ ನೆಡ್ತಾರೇನೋ.. ನೋಡಲ್ಲಿ ಅವ್ನು ತೋಡ್ತಿದ್ದಾನೆ. ಅದೂ ತುಂಬಾ ದೊಡ್ಡ ಗುಂಡಿ ಬೇರೆ.. ಯಾವುದಾದ್ರು ಫಾರಿನ್ ಹೂವಿನ ಮರ ಹಾಕ್ತಾರೇನೋ ಇಲ್ಲಿ" ಎಂದು ಅವಳನ್ನೆಳೆದುಕೊಂಡು ಅತ್ತ ಕಡೆಗೆ ನಡೆದೆ.

"ನಾನು ಕಳೆದ ಸಲ ಬಂದಿದ್ದಾಗ ತುಂಬಾ ಗಿಡ ಇತ್ತಿಲ್ಲಿ, ಎಲ್ಲೋಯ್ತು ಅದೆಲ್ಲ" ಅಂತ ಅಗೆಯುತ್ತಿದ್ದ ಕೆಲ್ಸದವನಲ್ಲಿ ಕೇಳಿದೆ. 

"ಅಯ್ಯೋ ಅದೆಲ್ಲ ಫವರ್ ಶೋ ಇದ್ದಾಗ ನರ್ಸರಿಯವರು ತಂದಿಡ್ತಾರೆ ಮುಗಿದ ಕೂಡ್ಲೇ ತೆಗೊಂಡೋಯ್ತಾರೆ" ಅಂದ. 

ನನ್ನನ್ನು ಕನಿಕರದಿಂದ ನೋಡಿದ ಗೆಳತಿಯ ನೋಟವನ್ನು ನಿರ್ಲಕ್ಷಿಸಿ, " ಈಗ ಯಾವ ಗಿಡ ನೆಡೋದಿಕ್ಕೆ ಗುಂಡಿ ಮಾಡ್ತಾ ಇದ್ದೀರಾ? ಗುಂಡಿಯ ಅಳತೆ ನೋಡಿದ್ರೆ ಯಾವ್ದಾದ್ರು ಮರ ಆಗೋ ಜಾತಿಯ ಗಿಡ ನೆಡ್ತಿದ್ದಿರೇನೋ  ಅನ್ನಿಸ್ತಾ ಇದೆ" ಎಂದು ನನ್ನ ಪಾಂಡಿತ್ಯವನ್ನು ಪ್ರದರ್ಶನಕ್ಕಿರಿಸಿದೆ. 

"ಕುಡಿಯಕ್ಕೆ  ಒಂದು ಬೊಗಸೆ ನೀರಿಲ್ಲ ಇಲ್ಲಿ..ಅದನ್ನು ಮನೆಂದ್ಲೇ ಹೊತ್ಕೊಂಬರ್ಬೇಕು, ಅಂತಾದ್ರಲ್ಲಿ ಇಲ್ಲಿ ಮರ ನೆಡೋದಾ.." ಅಂದ ಬೆವರಿಳಿಸಿಕೊಂಡು

"ಮತ್ಯಾಕೆ ಇಷ್ಟೊಂದು ದೊಡ್ಡ ಗುಂಡಿ" ಅಂದೆ.

"ನನ್ ಕರ್ಮ ಏನ್ ಹೇಳ್ತೀರಾ.. ಯಾವ್ದೋ ಅಡ್ನಾಡಿ ಬೀದಿ ನಾಯಿ ಇಲ್ಲೇ ಪಾರ್ಕೊಳಗೆ ಸತ್ತಿದೆ. ಮೂರು ದಿನ ಆದ್ರೂ ಮುನಿಸಿಪಾಲಿಟಿಯವರು ಬರ್ಲಿಲ್ಲ. ಇನ್ನು ಅವ್ರು ಬರಲ್ಲ.. ಅದ್ಕೇ ನಾನೇ ಹೂತಾಕ್ತಿದ್ದೀನಿ. ಏನೋ ದಯೆ ಇಟ್ಟು ನೀವು ನನ್ನ ಕಷ್ಟ ಕೇಳಿದಿರಿ. ಒಂದೈದು ರೂಪಾಯಿ  ಕೊಟ್ರೆ ನಿಮ್ಮೆಸರು ಹೇಳಿ ಒಂದು ಚಾ ಕುಡೀತೀನಿ ತಾಯಿ.. ಎಂದು ಹಲ್ಲು ಬಿಟ್ಟ. 

ಅಷ್ಟರಲ್ಲಿ ರಾಗ ತೆಗೆಯುತ್ತಿದ್ದ ನನ್ನ ಮಗ ಮತ್ತು ಅವಳ ಮಗಳ ಗಲಾಟೆಯಿಂದ  ಬೇಸತ್ತ ಗೆಳತಿ,

ಐದು ರೂಪಾಯಿ  ಅವನಿಗಿತ್ತು ಇನ್ನೇನೋ ಕೇಳ ಹೊರಟ ನನ್ನನ್ನು  " ಸಾಕು ನಡಿಯೇ ಮನೆಗೆ.. ಇನ್ನೇನಾದ್ರೂ ಪ್ರಶ್ನೆ ಕೇಳಿದ್ರೆ ನಿನ್ನ ಅದೇ ಗುಂಡಿಲಿ ಹೂತಾಕ್ತೀನಿ. ಎಂದು ಎಕ್ಸಿಟ್ ದ್ವಾರದೆಡೆಗೆ 
ನನ್ನನ್ನು ನೂಕಿಕೊಂಡು ಹೊರಟಳು. 





('ಸಖಿ' ಯಲ್ಲಿ ಪ್ರಕಟಿತ )