Pages

Total Visitors

Monday, April 15, 2013

ಕಥೆ ಮತ್ತು ನೈಜತೆ


ಒಂದಾನೊಂದು ಕಾಲದಲ್ಲಿ ಒಬ್ಬ ಬೇಡನಿದ್ದ. ದಿನವೆಲ್ಲಾ ಕಾಡಿನಲ್ಲಿ  ಬಲೆ ಬೀಸಿ ಸಣ್ಣ ಪುಟ್ಟ ಪ್ರಾಣಿ ಪಕ್ಷಿಗಳನ್ನು ಹಿಡಿದು ಮಾರಿ ಅವನು ಜೀವಿಸುತ್ತಿದ್ದ. ಅಂದ್ಯಾಕೋ ಅವನ ಕೈಯ್ಯಲ್ಲಿ ಚಿಕ್ಕಾಸೂ ಇರಲಿಲ್ಲ. ಅವನ ಹೆಂಡತಿ ಮಕ್ಕಳು ಹಸಿದು ಕಂಗಾಲಾಗಿದ್ದರು. ಅವರ ಬವಣೆಯನ್ನು ನೋಡಲಾರದೇ ಬೇಡ  ಬಲೆಯನ್ನು ಹಿಡಿದು ಮಿಕವನ್ನರಸುತ್ತಾ ಕಾಡಿಗೆ ನಡೆದ. 

ನಡೆದು ನಡೆದು ಕಾಡಿನೊಳಗೆ ಬಹುದೂರ ಸಾಗಿದ. ಸಂಜೆಯಾಗುತ್ತಾ ಬಂತು. ಅವನ ಬಲೆಯಿನ್ನೂ ಬರಿದಾಗಿಯೇ ಇತ್ತು. ನಿರಾಸೆಯಿಂದ  ಇನ್ನೇನು ಮರಳಬೇಕು ಅಂದುಕೊಳ್ಳುವಾಗ  ಒಂದು ಕಡೆ ತುಂಬಾ ಹಕ್ಕಿಗಳು ಅವನ ಕಣ್ಣಿಗೆ ಬಿದ್ದವು. ಸಂತೋಷದಿಂದ  ಬಲೆ ಬೀಸಿ ಅವುಗಳನ್ನು ಹಿಡಿದು ಬಲೆಯಲ್ಲೇ ಮುದುರಿ ಗಂಟು ಕಟ್ಟಿ ಮನೆಯ ಕಡೆ ನಡೆಯುತ್ತಾ ಹೊರಟ. ಅಷ್ಟರಲ್ಲಿ ಕಾಡಿನ ತುಂಬಾ ದಟ್ಟ ಕತ್ತಲಾವರಿಸಿತು. ಕತ್ತಲಲ್ಲಿ ಮುಂದೆ ಹೆಜ್ಜೆಯಿಡಲು ಸಾಧ್ಯವಾಗದೇ ಬಲೆಯ ಗಂಟನ್ನು ಮೆಲ್ಲನೆ ಕೆಳಗಿರಿಸಿ ಒಂದು ವಿಶಾಲವಾದ  ಮರದ ಕೆಳಗೆ ಮಲಗಿದ.ಆದರೆ ವಿಪರೀತ ಚಳಿಯಿಂದಾಗಿ  ಅವನು ತೋಳುಗಳ ನಡುವೆ ಮುಖ ಹುದುಗಿಸಿಕೊಂಡು ಮೊಣಕಾಲು ಗಲ್ಲಕ್ಕೆ ತಾಗುವಂತೆ ಮುದುಡಿ ಮಲಗಿದ್ದರೂ   ಗಡಗಡನೆ ನಡುಗುತ್ತಿದ್ದ. 

ಬೇಡ ಯಾವ ಮರದ ಕೆಳಗೆ ಮಲಗಿದ್ದನೋ ಅದೇ ಮರದ ಮೇಲೊಂದು ಹಕ್ಕಿಗಳ   ಗೂಡಿತ್ತು. ಆ ಗೂಡಿನಲ್ಲಿ ಪುಟ್ಟ ಮರಿಗಳೊಂದಿಗೆ ಗಂಡು ಹಕ್ಕಿಯೊಂದು ಆತಂಕದಿಂದ ತನ್ನ ಸಂಗಾತಿಗಾಗಿ ಕಾಯುತ್ತಾ ಕೂತಿತ್ತು.  ಇದ್ದಕ್ಕಿದ್ದಂತೇ ಅದಕ್ಕೆ ಅದಕ್ಕೆ ಅದರ ಸಂಗಾತಿಯಾದ ಹೆಣ್ಣು ಹಕ್ಕಿ ದುಃಖದಿಂದ ಅಳುವ ಸದ್ದು  ಕೇಳಿಸಿತು. ಸ್ವರ ಬಂದೆಡೆಗೆ ಇಣುಕಿ ನೋಡಿದರೆ ಹೆಣ್ಣು ಹಕ್ಕಿ ಬೇಡನ ಬಲೆಯೊಳಗೆ ಸಿಲುಕಿ ಕೂಗುತ್ತಿತ್ತು. ಗಂಡು ಹಕ್ಕಿಗೀಗ ಅತೀವ ಸಂಕಟವಾಯಿತು. ಬಲೆಯಲ್ಲಿ ಸಿಲುಕಿ ನರಳುತ್ತಿರುವ ತನ್ನ ಮನದನ್ನೆ ಹಾಗೂ ಸೆರೆ ಸಿಕ್ಕ  ಇತರ ಹಕ್ಕಿಗಳನ್ನು ಹೇಗೆ ರಕ್ಷಿಸುವುದು ಎಂದು ಯೋಚಿಸ ತೊಡಗಿತು. 

ಆದರೆ ಅಷ್ಟರಲ್ಲಿ  ಹೆಣ್ಣು ಹಕ್ಕಿ ಗಂಡನ್ನು ಕುರಿತು, 'ನೀನೇನು ಮಾಡುತ್ತಿದ್ದೀಯಾ.. ನಿನ್ನ ವೈಯುಕ್ತಿಕ ನೋವನ್ನೇ ಹೆಚ್ಚೆಂದು ತಿಳಿದು ಕರ್ತವ್ಯ ಲೋಪದ ಅಪರಾಧ ಎಸಗುತ್ತಿದ್ದೀಯ !! ಇವನ ಬಲೆಗೆ ಸಿಲುಕಿದ್ದು ನಮ್ಮ ದೌರ್ಭಾಗ್ಯ. ಆದರೆ ಅವನೀಗ ನಮ್ಮ  ಮನೆಗೆ ಬಂದ ಕಾರಣ ನಮ್ಮ ಅತಿಥಿಯಾಗಿದ್ದಾನೆ.  ಅವನನ್ನು ಉಪಚರಿಸದೇ ಚಳಿಯಿಂದ  ನಡುಗುವಂತೆ ಮಾಡುತ್ತಿದ್ದೀಯಲ್ಲ. ಮೊದಲು ಅವನ ಚಳಿಯನ್ನು ಹೋಗಲಾಡಿಸು" ಎಂದಿತು. ಗಂಡು ಹಕ್ಕಿ ಕತ್ತಲಲ್ಲಿ ಹಾರಿ ಹೋಗಿ ಒಣಗಿದ ಮರದ ಕಡ್ದಿಗಳನ್ನು ಆರಿಸಿ ತಂದು ರಾಶಿ ಹಾಕಿತು.  ಎಲ್ಲಿಂದಲೋ ಬೆಂಕಿಯನ್ನು ತಂದು ಪುರುಳೆಗಳನ್ನು ಉರಿಯುವಂತೆ ಮಾಡಿತು.  ಮಲಗಿದ್ದ ಬೇಡ ಅಚ್ಚರಿಯಿಂದ  ಎದ್ದು, ತನ್ನೆದುರು ಉರಿಯುತ್ತಿರುವ ಬೆಂಕಿಯಿಂದಾಗಿ   ತನ್ನ ಚಳಿ ದೂರವಾಗುತ್ತಿರುವುದನ್ನು ಕಂಡು  ದೇವರನ್ನು ನೆನೆದು ವಂದಿಸಿದ. ಅವನಿಗೀಗ ಚಳಿ ಮಾಯವಾಗುತ್ತಿದ್ದಂತೆಯೇ ಆ ಜಾಗದಲ್ಲಿ ಹಸಿವು ಬುಗಿಲೆದ್ದು ಕಾಡತೊಡಗಿತು. 

ಬಂಧನದಲ್ಲಿದ್ದ ಹೆಣ್ಣು ಹಕ್ಕಿ ಈಗ ಮತ್ತೆ ಬಾಯ್ದೆರೆದು ಗಂಡು ಹಕ್ಕಿಯನ್ನು ಅವನ ಹಸಿವನ್ನು ಇಂಗಿಸುವ ಉಪಾಯವನ್ನು ಹುಡುಕು ಎಂದಿತು. ಗಂಡು ಹಕ್ಕಿ ಆ ಕತ್ತಲಿನಲ್ಲಿ ಆಹಾರವನ್ನು ಹುಡುಕುವ ಪರಿ ತಿಳಿಯದೇ ತಾನೇ ಆ ಬೆಂಕಿಗೆ ಬಿದ್ದು ಬೇಡನ ಆಹಾರವಾಗುತ್ತೇನೆ ಎಂದು ಉರಿಯುವ ಬೆಂಕಿಗೆ ಬಿದ್ದುಬಿಟ್ಟಿತು. 

ತನಗಾಗಿ ಪ್ರಾಣತ್ಯಾಗ ಮಾಡಿದ ಹಕ್ಕಿಯನ್ನು ಕಂಡು ಬೇಡ ಜೀವನದ ಮೇಲೆ ವೈರಾಗ್ಯ ತಳೆದು ತಾನು ಹಿಡಿದಿದ್ದ ಹಕ್ಕಿಗಳನ್ನೆಲ್ಲ ಬಂಧಮುಕ್ತಗೊಳಿಸಿ ಅಲ್ಲಿಂದ ಎದ್ದು ಹೋದ.  ಬಲೆಯಿಂದ  ಹೊರ ಬಂದ ಹೆಣ್ಣು ಹಕ್ಕಿ ತನ್ನ ಸಂಗಾತಿ ಅಗಲಿದ ದುಃಖವನ್ನು ಸಹಿಸಲಾರದೇ ಅದೇ ಬೆಂಕಿಯಲ್ಲಿ ತಾನೂ ಬಿದ್ದು ಸತ್ತುಹೋಯಿತು. 

ಈ ಕಥೆಯನ್ನು   ನನ್ನ ಪುಟ್ಟ ಗೆಳತಿಗೆ ಹೇಳಿ ನಿಲ್ಲಿಸಿದೆ. ಆಕೆ ನೀರು ತುಂಬಿದ ಕಣ್ಣನ್ನು ಒರಸಿಕೊಳ್ಳುವ ಪ್ರಯತ್ನ ಮಾಡದೇ "ಹಾಗಿದ್ರೆ ಮರದ ಮೇಲಿದ್ದ ಮರಿಗಳಿಗೆ ಫುಡ್ ಯಾರು ಕೊಡ್ತಾರೆ. ಅವ್ರ ಅಪ್ಪ ಅಮ್ಮ ಇಬ್ರೂ ಸತ್ತು ಹೋದ್ರಲ್ವಾ.." ಎಂದಳು. ಛೇ.. ಹೌದಲ್ವಾ.. ಆ ಮರಿಗಳು ಮತ್ತೆ ಆಹಾರವಿಲ್ಲದೆ ಚಡಪಡಿಸಿ ಸತ್ತಿರಬಹುದು. ತಾಯಿ  ಹಕ್ಕಿಗೆ ತನ್ನ ಮಕ್ಕಳನ್ನು ಉಪವಾಸ ಸಾಯುವಂತೆ ಬಿಟ್ಟು ಬೆಂಕಿಗೆ ಹಾರಿ ತನ್ನ ಗಂಡನೊಡನೆ ಹೋಗುವುದೇ ಧರ್ಮವಾಗಿತ್ತೇ..? ಆ ಕತ್ತಲಲ್ಲೇ ಒಣಗಿದ ಕಸ ಕಡ್ಡಿಗಳಿಗಾಗಿ  ಅಲೆದು ಬೆಂಕಿ ಮಾಡಿದ ಗಂಡು ಹಕ್ಕಿ ಅದರ ಬದಲು  ಹೆಣ್ಣು ಹಕ್ಕಿಯ ಬಿಡುಗಡೆಯ ಬಗ್ಗೆ ಯೋಚಿಸಬಾರದಿತ್ತೇ..ತನ್ನ ಸಂಗಾತಿಯೊಂದಿಗೆ ಸಮಾನ ಕಷ್ಟದಲ್ಲಿ ಸಿಲುಕಿದ್ದ ಇತರ ಹಕ್ಕಿಗಳ ರಕ್ಷಣೆ ಅದರ ಧರ್ಮವಾಗಿರಲಿಲ್ಲವೇ.. ಹೀಗೆ ನೂರಾರು   ಪ್ರಶ್ನೆಗಳು ಮನದಲ್ಲಿ ಕಾಡತೊಡಗಿದವು. ಇಲ್ಲ ಪುಟ್ಟಿ.. ಆಗೇನಾಯ್ತು ಗೊತ್ತಾ.. ಇದನ್ನೆಲ್ಲಾ ನೋಡುತ್ತಿದ್ದ ದೇವರು ಬೆಂಕಿಯಲ್ಲಿ ಬಿದ್ದಿದ ಹಕ್ಕಿಗಳಿಗೆ ಜೀವ ಕೊಟ್ಟ. ಅವು ಪುನಃ ತಮ್ಮ ಮರಿಗಳ ಹತ್ತಿರ  ಹೋದವು ಅಂತ ಸುಳ್ಳು ಸುಳ್ಳು ಕಥೆ ಪೋಣಿಸಿ  ಸಮಾಧಾನ ಮಾಡಿದೆ. 

ಈ ಕಥೆಯ ತಿರುಳು ಏನೇ ಇರಲಿ, ಆದರೆ ವಾಸ್ತವ ಹೀಗಿರುವುದಿಲ್ಲ. ಅಪಾಯ ಬಂದಾಗ ಆತ್ಮರಕ್ಷಣೆಗಾಗಿ ಹೋರಾಡುವ ಛಲ ಎಲ್ಲ ಪ್ರಾಣಿ ಪಕ್ಷಿಗಳಲ್ಲಿ ಸಹಜವಾಗಿ ಬೇರೂರಿರುತ್ತದೆ. ಪ್ರಮಾಣ ಬೇಕೇ ನಿಮಗೆ.. ಹಾಗಿದ್ರೆ ಇನ್ನೊಂದು ಕಥೆ ಕೇಳಿ.. ಅಯ್ಯೋ ಕಥೆ ಅಂದೆನಾ.. ಅಲ್ಲಲ್ಲ  .. ಇದು ನೈಜ ಘಟನೆ. 

ಮೊನ್ನೆ ತೋಟದ ದಾರಿಯಲ್ಲಿ  ಏನನ್ನೋ ಯೋಚಿಸುತ್ತಾ ನಡೆಯುತ್ತಿದ್ದೆ. ಆಕಾಶ ಶುಭ್ರವಾಗಿತ್ತು. ಗಾಳಿಯಲ್ಲಿ ಸಂಪಿಗೆ ಹೂವಿನ ಪರಿಮಳ ತೇಲಿ ಬರುತ್ತಿತ್ತು. ಹಕ್ಕಿಗಳ ಕಲರವ , ಹುಲ್ಲಿನ ಮೇಲೆ ಹಾರುವ ಕೀಟಗಳ ಕಿಚಿಕಿಚಿ, ಹೂಗಳ ಮಕರಂದ ಹೀರುವ ದುಂಭಿಗಳ ಝೇಂಕಾರ ಇವುಗಳೆಲ್ಲಾ ಕಿವಿ  ತುಂಬುತ್ತಿದ್ದವು.  ಇದ್ದಕ್ಕಿದ್ದಂತೇ ಬೇರೆಯೇ ರೀತಿಯಲ್ಲಿ ಕೂಗುವ ಹಕ್ಕಿಗಳ ಕೂಗು ಕಿವಿಗೆ ಬಿತ್ತು. ಅದು ಮಾಮೂಲಿನ ಕೂಗಲ್ಲ. ಏನೋ ಅಪಾಯದ ಆಕ್ರಂದನದಂತೇ ಕೇಳಿಸಿತು. ನನ್ನ ಕಣ್ಣುಗಳು ಅವುಗಳ ಸ್ವರದ ಮೂಲ ಹುಡುಕ ಹೊರಟವು. 

ಅಲ್ಲೇ ಹತ್ತಿರದಲ್ಲಿದ್ದ ಜಮ್ಮುನೇರಳೆ ಮರದಿಂದ ಈ ಕೂಗು ಕೇಳಿ ಬರುತ್ತಿತ್ತು. ಆ ಮರಕ್ಕೆ ತಾಕಿದಂತೆ ಒಂದು ಸತ್ತು ಹೋದ ಅಡಿಕೆ ಮರವೂ ಇತ್ತು. ಆ ಅಡಿಕೆ ಮರದ ತುಂಬೆಲ್ಲಾ ಸಣ್ಣ ದೊಡ್ಡ ಉರುಟುರುಟಿನ ತೂತುಗಳು. ನನ್ನ ದೃಷ್ಟಿಯನ್ನು  ಇನ್ನಷ್ಟು ಸೂಕ್ಷ್ಮವಾಗಿಸಿದೆ. ಮರಕ್ಕೆ ಸುತ್ತು ಹೊಡೆಯುತ್ತಾ ಎರಡು ಹಕ್ಕಿಗಳು ಅತ್ತಿತ್ತಾ ಹಾರುತ್ತಾ ಇದ್ದವು. ಹೆಚ್ಚೇನು ಗಾಳಿ ಬೀಸದಿದ್ದರೂ ಜಂಬುನೇರಳೆ  ಮರದ ಒಂದು ಕೊಂಬೆಯ ಎಲೆಗಳು ವಿಚಿತ್ರ ಕಂಪನದಿಂದ ಅದುರುತ್ತಿದ್ದವು. ಅದನ್ನು ಸರಿಯಾಗಿ ಗಮನಿಸಿದಾಗ ನನ್ನ ಗುಂಡಿಗೆ ಭಯದಿಂದ ವೇಗವಾಗಿ ಹೊಡೆದುಕೊಳ್ಳತೊಡಗಿತು. 

ಸುಮಾರು ಆರೇಳು ಅಡಿ ಉದ್ದದ ಕೇರೆ ಹಾವೊಂದು ಮರದ ಮೇಲೆ ಯಾವುದೋ ಗಮ್ಯವನ್ನರಸಿ ಸರ ಸರನೇ ಹೋಗುತ್ತಿದ್ದೆ. ಅದರ ಆ ಅವಸರವೇ ಹಕ್ಕಿಗಳ ಈ ಕೂಗಿಗೆ ಕಾರಣ. ಪಾಪ ಪುಟ್ಟ ಹಕ್ಕಿಗಳು.. ಮರದ ಮೇಲೆ ಅವರ ಗೂಡಿತ್ತೋ ಏನೋ.. ಗೂಡಲ್ಲಿ ಹಾರಲು ಬಾರದ ಮರಿಗಳು..ಮನಸ್ಸು ಭಾರವಾಯಿತು.  ಆ ಹಾವು ಅಡಿಕೆ ಮರದ ಪೊಟರೆಗಳೊಳಗೆ  ತಲೆ ತೂರಿಸಿ ಆಹಾರವನ್ನರಸುತ್ತಿತ್ತು.

ಈಗ ಹಕ್ಕಿಗಳು ಹಾರಾಡುವ ವೇಗ ಜಾಸ್ತಿಯಾಯಿತು. ಅವುಗಳ ಕೂಗೂ ಇನ್ನಷ್ಟು ಜೋರಾಯಿತು. ಪಟ ಪಟ ರೆಕ್ಕೆ ಬಡಿಯುತ್ತಾ ವೇಗವನ್ನು ರೂಢಿಸಿಕೊಂಡು  ಹಕ್ಕಿಗಳೆರಡೂ ಹಾವಿನ ಮೈಗೆ ಕೊಕ್ಕಿನಿಂದ ಕುಕ್ಕಿ ಆಕ್ರಮಣ ಮಾಡಲು ತೊಡಗಿದವು. ಮೊದ ಮೊದಲು ತನ್ನ ಮೈಯನ್ನು ಕೊಡವುತ್ತಾ ಮುಂದಕ್ಕೆ ಚಲಿಸುತ್ತಿದ್ದ ಹಾವಿಗೆ ಈಗ ತೆವಳಲೂ ಅವಕಾಶ ನೀಡದಂತೆ ಅದರ ಮುಖಕ್ಕೇ ಚೂಪಾದ ಕೊಕ್ಕಿನಿಂದ ಕುಕ್ಕತೊಡಗಿದವು. ಹಾವು ಸ್ವಲ್ಪವೇ ಸ್ವಲ್ಪ ತನ್ನ ಬಾಲದ ಭಾಗವನ್ನು ಅಡಕೆ ಮರಕ್ಕೆ ಬಿಗಿಯಾಗಿ ಸುತ್ತಿ ಹಿಡಿದುಕೊಂಡು ತಲೆಯನ್ನು ಮರದಿಂದ ದೂರ ಹೊರಳಿಸಿ ಗಾಳಿಯಲ್ಲಿ ಅತ್ತಿತ್ತ ಜೋಲಾಡಿ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಹೆಣಗಿತು. ಈಗ ಆಕ್ರಮಣದ ರೀತಿ ಬದಲಾಯಿತು.  ಒಂದು ಹಕ್ಕಿ ಅದರ ಮೈಯನ್ನು ಕುಕ್ಕಿದರೆ ಮತ್ತೊಂದು ಮುಖದ ದಾಳಿಯನ್ನು ಮುಂದುವರಿಸಿತು.ನೋವಿನಿಂದಾಗಿ  ಹಾವು ಮರದ ಮೇಲೆ ತನ್ನ ಹಿಡಿತ ಕಳೆದುಕೊಂಡು ದೊಪ್ಪನೆ ಕೆಳಗೆ ಬಿತ್ತು. ಉಸಿರು ಬಿಗಿ ಹಿಡಿದು ನಿಂತಿದ್ದ ನಾನು ಯುದ್ಧ ಮುಗಿದ ಸಂತಸದಲ್ಲಿ ನಿಟ್ಟುಸಿರು ಬಿಟ್ಟೆ.  ಆದರೆ ಹಕ್ಕಿಗಳು ಆಕಾಶದಲ್ಲಿ ಇನ್ನೂ ಮರದ ಸುತ್ತು ಸುತ್ತುವುದನ್ನು  ಮುಂದುವರಿಸಿದ್ದವು.  ಸ್ವಲ್ಪ ಹೊತ್ತು ಬಿದ್ದಲ್ಲೇ ಬಿದ್ದಿದ್ದ ಹಾವು ತೆವಳುತ್ತಾ ಅಲ್ಲಿಂದ ಸರಿದು ಮಾಯವಾಯಿತು.. 

ನಾನು ಈ ಘಟನೆಯನ್ನು ಕಥೆಯಾಗಿಸಿ ನನ್ನ ಪುಟ್ಟ ಗೆಳತಿಗೆ ಹೇಳುವ ಆತುರದಲ್ಲಿ ತೋಟದ ಕೆಲಸ ಬಿಟ್ಟು ಮನೆಗೆ ಮರಳಿದೆ. 
 
ಕಷ್ಟ ಬಂದಾಗ ಎದೆಗುಂದದೇ ಮುನ್ನುಗ್ಗಿ ಹೋರಾಡುವುದು ಮುಖ್ಯ. ಸೋಲೇ ಬಂದರೂ ಅದು ವೀರೋಚಿತವಾಗಿಯೇ ಇರುತ್ತದೆ. 

ಆದರೆ ಪ್ರಕೃತಿ ಗೆಲ್ಲುವ ಮನಸ್ಸಿದ್ದವರನ್ನೆಂದೂ ಸೋಲಿಸುವುದಿಲ್ಲ ಅಲ್ವಾ..!!  


9 comments:

 1. "ಕಷ್ಟ ಬಂದಾಗ ಎದೆಗುಂದದೇ ಮುನ್ನುಗ್ಗಿ ಹೋರಾಡುವುದು ಮುಖ್ಯ" ಎಂಬ ತಮ್ಮ ಮಾತು ನನಗೆ ತುಂಬಾ ಒಪ್ಪುತ್ತದೆ. ನನ್ನ ಸೋಲಿನ ನಿಮಿಷದಲ್ಲಿ ಇದಾನೇ ಹೇಳಿಕೊಳ್ಳುತ್ತೇನೆ. ಈ ನೀತಿಯುಕ್ತ ಕಥೆ ಮತ್ತು ತಮ್ಮ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕ ಆ ಅದ್ಭುತ ಛಾಯಾಚಿತ್ರಗಳ ಸರಣಿ ಮನಸೂರೆಗೊಂಡಿತು.

  ReplyDelete
 2. nija nimma maatu kasta bandare edurisabeku...photo's super idave..

  ReplyDelete
 3. ಅನಿತಕ್ಕ ನನಗಂತೂ ನಿಮ್ಮ ಎರಡನೇ ಕತೆಯೇ ( ನೈಜ ಘಟನೆ ) ಇಷ್ಟವಾಯ್ತು. ಎರಡನೇ ಕತೆಯಲ್ಲಿನ ಹಕ್ಕಿಗಳ ಪ್ರತಿಕ್ರಿಯೆಯಿಂದ ಕಲಿಯಬೇಕಾದದ್ದೇ ಹೆಚ್ಚು ಅಲ್ಲವೇ?

  ReplyDelete
 4. ಅನಿತಾ ಅವರೇ!
  ರಾಮ್ ನರೇಶರ ಫೋಟೋಗಳು ಅತ್ಯುತ್ತಮ.
  ತಮ್ಮ ಮೊದಲ ಕಥೆ ............ ಬರೇನೀತಿ ಕಥೆ.
  ಎರಡನೆಯದು ಜೀವನ ಛಲವನ್ನು ನಿರೂಪಿಸುವ ನೈಜ ಕಥೆ.
  ಹಾವು ಅಷ್ಟು ಎತ್ತರದಿಂದ ಬಿದ್ದ ನಂತರ ತೆವಳಿಕೊಂಡು ಹೋದುದೇ ವಿಸ್ಮಯ. ಕಾರಣ ಅದರ spine ಬಹಳ ಸೂಕ್ಷ್ಮ ಅಂತ ಕೇಳಿದ್ದೇನೆ.
  ಕೇರೆ ಹಾವು ರೈತರ ಮಿತ್ರ. ಅದಕ್ಕೂ ಬದುಕುವ ಹಕ್ಕು ಇದೆ ಅಲ್ಲವೇ?
  ಕೇರೆ ಹಾವು ಜಂಬುನೇರಳೆ ತಿಂದು ಬದುಕಲಾರದು.
  ಅದೇರೀತಿ ಆ ಪುಟ್ಟ ಹಕ್ಕಿಗಳು ಹಾವನ್ನು ತಿನ್ನಲಾರವು.
  ನಿಸರ್ಗದಲ್ಲಿ ಅವರವರ ಆಹಾರ ಅವರವರಿಗೆ.
  ಎರಡನೇ ಕಥೆ ನಿಜವಾಗಿಯೂ ಮನ ಮುಟ್ತಿತು. Thanks.
  ಸ್ವ ರಕ್ಷಣೆ ಮಾಡಿಕೊಂಡು ಜೀವಿಸುವುದೇ ನಮ್ಮ ಜೀವನ ಮಂತ್ರ ಅಲ್ಲವೇ?
  - ಪೆಜತ್ತಾಯ ಎಸ್. ಎಮ್

  ReplyDelete
 5. i am just shared your link in blog any objection please inform me then i will remove http://vivekarama.blogspot.in/

  ReplyDelete
 6. "ಹೋರಾಡುವ...... ಈ ಬಾಳಿನಲಿ" ಎನ್ನುವ ಹಾಡಿನಂತೆ ಎರಡು ಪುಟ್ಟ ಕಥೆಗಳನ್ನು ಹೆಣೆದಿರುವ ರೀತಿ ರೀತಿ ಇಷ್ಟವಾಯಿತು. ಮೊದಲನೆಯದು ಮನುಜನಿಗೆ ನೀತಿ ಪಾಠ ಹೇಳಿಕೊಟ್ಟರೆ.. ಎರಡನೆಯದು ಛಲದ ಪಾಠ ತೋರಿಸಿಕೊಡುತ್ತೆ. ಬದುಕಲು ಛಲ ಬೇಕು.. ಅದರ ಜೊತೆ ನೀತಿಯು ಇರಬೇಕು ಎನ್ನುವ ಈ ಲಹರಿ ಇಷ್ಟವಾಯಿತು. ಬರಹದ ಶೈಲಿ ಹಾಗೂ ಚಿತ್ರಗಳು ಸೊಗಸಾಗಿವೆ.

  ReplyDelete
 7. ಲೇಖನ ಬಹಳ ಇಷ್ಟ ಆಯ್ತು ಅನಿತಕ್ಕ..

  ಲೇಖನಕ್ಕಿಂತ ಫೋಟೋಗಳು ಒಂದು ವಾಹ್ ಅನ್ನುವ ಉದ್ಘಾರವನ್ನ ಹೊರ ಹಾಕುವಂತೆ ಮಾಡದೆ ಇರದು. ನನಗೆ ಹಾವೆಂದರೆ ಭಯ.. ಈ ಫೋಟೋದಲ್ಲಿನ ಹಾವು ಕೂಡ ನನ್ನನ್ನ ಭಯ ಪಡಿಸಿದ್ದು ಸುಳ್ಳಲ್ಲ.

  ReplyDelete
 8. ಈ ಎರಡು ಕಥೆಗಳನ್ನು ಇಂದಿನ ಕರ್ನಾಟಕದ ಪರಿಸ್ಥಿತಿಗೆ ಹೋಲಿಸಿ ನೋಡಿದರೆ ಬೇರೆಯ ಅರ್ಥವೇ ಸಿಗುತ್ತದೆ. ಮೊದಲನೇ ಕಥೆ ನಮ್ಮ ವಿಶಾಲ ಮನೋಭಾವದ ಪ್ರತೀಕದಂತಿದ್ದರೆ ಎರಡನೆಯದು ಮುಂದಾಗಬಹುದಾದ ಅನಾಹುತದ ಎಚ್ಚರಿಕೆಯಂತಿದೆ.
  ಛಾಯಗ್ರಹಣ ಅದ್ಭುತ!!!

  ReplyDelete
 9. ಸಖತ್ತಾಗಿದೆ ಎರಡನೇ ಕತೆ ಅನೀತಕ್ಕ..

  ನಮ್ಮ ಜೀವನದಲ್ಲಿ ನಮಗೆ ಬೇಕಾದ್ದು ಸಿಗಲಿಲ್ಲ/ ಕಷ್ಟ ಬಂತೆಂದು ಎದೆಗುಂದಿ ಜೀವನವಿಡೀ ಕೊರಗೋ ಬದಲು ಅದನ್ನೆದುರಿಸಬೇಕೆನ್ನೋ ತತ್ವವೂ ಇಷ್ಟವಾಯಿತು :-)

  ReplyDelete