Pages

Total Visitors

Wednesday, May 22, 2013

ಅರಿವಿನ ಮಿತಿ

"ಅಮ್ಮಾ.. ಅಮ್ಮಾ.. ಇವತ್ತೇನಾಯ್ತು ಗೊತ್ತಾ..?? ಓಡುತ್ತಾ ಮನೆಯೊಳಗೆ ಬಂದ ಪುಟ್ಟಿ ಏದುಸಿರು ಬಿಡುತ್ತಾ ಹೇಳಿದಳು. 

"ಏನಾಯ್ತೇ  ಪುಟ್ಟಿ .." ಅಮ್ಮ ಶಬ್ಧ ಮಾಡುತ್ತಾ ತಿರುಗುತ್ತಿದ್ದ ಮಿಕ್ಸಿಯನ್ನು ನಿಲ್ಲಿಸಿದಳು. ಟಿ ವಿ  ನೋಡುತ್ತಿದ್ದ ಅಪ್ಪ ವಾಲ್ಯೂಮ್ ಕಡಿಮೆ ಮಾಡಿದ. ಜೋರಾಗಿ ಮಂತ್ರ ಹೇಳುತ್ತಾ ಪೂಜೆ ಮಾಡುತ್ತಿದ್ದ ಅಜ್ಜ ಮನಸ್ಸಿನಲ್ಲೇ ಹೇಳತೊಡಗಿದ. ಅಡಿಕೆ ಹೋಳುಗಳನ್ನು ಗುದ್ದುತ್ತಿದ್ದ ಅಜ್ಜಿ ಕಲ್ಲನ್ನು ಸದ್ದಾಗದಂತೆ ಎತ್ತಿ ಕೈಯಲ್ಲಿ ಹಾಗೇ ಹಿಡಿದುಕೊಂಡಳು.ಪಕ್ಕದ ಮನೆಯ ಹೆಂಗಸಿನ ಕಿವಿಗಳು ಗೋಡೆಗೆ ಅಂಟಿಕೊಂಡವು.  

"ಅದೇನು ಗೊತ್ತಾ.. ನಾನು ಬರುವಾಗ..  ನೋಡು ..  ಓ ಅಲ್ಲಿ .. ಸರೀ  ನೋಡು..   ಕಾಣುತ್ತದಲ್ಲಾ.. ಹುಂ.. ಅಲ್ಲಿ  ಒಂದು ಚೆಂದದ ಹಕ್ಕಿ ಕೂತಿತ್ತು. ದೊಡ್ಡ ಕೊಕ್ಕು, ಹೊಳೆಯುವ ಬಣ್ಣ, ಆಹಾ.. ಅದರ ಕಣ್ಣು ಕೂಡಾ ಚಂದ ಇತ್ತು.. ನಾನು ಸದ್ದು ಮಾಡದೇ  ಹತ್ತಿರ ಬಂದರೂ ನನ್ನನ್ನು ಅದು ಹೇಗೋ ನೋಡಿ 'ಕಾವ್ ಕಾವ್' ಎಂದು ಹಾರಿಯೇ ಹೋಯಿತು.. ಛೇ.. ಅಲ್ಲೇ ಇದ್ದಿದ್ದರೆ ನಿಮಗೆಲ್ಲಾ ನೋಡಬಹುದಿತ್ತು.." ಅವಳ ಕಣ್ಣುಗಳು ಅದ್ಭುತವೊಂದನ್ನು ತುಂಬಿಕೊಂಡಂತೆ ಮಿಂಚುತ್ತಿತ್ತು. ಪ್ರಕೃತಿಯ ಯಾವೊದೋ ಒಂದು ರಹಸ್ಯ ತನ್ನೆದುರು ಅನಾವರಣಗೊಂಡಂತೆ ಕನವರಿಸುತ್ತಿದ್ದಳು. 

ಅಮ್ಮ ಮಿಕ್ಸಿ ಸ್ವಿಚ್ ಆನ್ ಮಾಡಿದಳು. ಟಿ ವಿ ಯ ವಾಲ್ಯೂಮ್ ಮೊದಲಿನಂತೆ ಏರಿತು. ಅಜ್ಜನ ಮಂತ್ರ ಜೋರಾಗಿ ಕೇಳಲಾರಂಭಿಸಿತು. ಅಜ್ಜಿ  ಅಡಿಕೆ ಗುದ್ದತೊಡಗಿದಳು.ಪಕ್ಕದ ಮನೆಯ ಹೆಂಗಸು ಮನದೊಳಗೆ 'ತಥ್.. ಕಾಗೆ ಅದು' ಎಂದು ಗೊಣಗಿಕೊಂಡಳು. 

10 comments:

 1. Hey 3shtu chikka vishayavannu eshtu chanda bardiddi,,.reallygrt

  ReplyDelete
 2. Replies
  1. ಎಲ್ಲವೂ ಅಲಿಸುವ ಕಿವಿಗಳಿಗೆ ಇಷ್ಟೇನಾ ಅನ್ನಿಸುವಂತೆ ಮಾಡಿದರೂ,,, ಮಗುವಿನ ಒಳಮನಸ್ಸಿನ ಅನಾವರಣ ಹಾಗೂ ಅದರ ಗಮನಿಸುವಿಕೆಯು ಹೆಚ್ಚು ಎಂದು ತಿಳಿಸುವ ಪ್ರಯತ್ನ ಚೆನ್ನಾಗಿದೆ. ಮಕ್ಕಳ ಅರಿವಿನ ಮಿತಿಯನ್ನು ಚೆನ್ನಾಗಿ ತೆರೆದಿಟ್ಟಿದ್ದೀರಾ, ಅದು ಬರ ಬರುತ್ತಾ ಅರಿವಿನ ಮಿತಿಯು ಬೃಹದಾಕಾರವಾಗಿ, ಕೈಗೆ ಸಿಗದಷ್ಟು ಬೆಳೆಯುತ್ತಾ ಸಾಗಿರುತ್ತದೆ... ಚೆನ್ನಾಗಿದೆ.

   Delete
 3. ಒಂದು ಕ್ಷಣ ಕುತೂಹಲದ ಕಟಕಟೆಯಲ್ಲಿ ನಿಲ್ಲಿಸಿದ ಕಥನ. ನಾನೂ ಆ ಪಕ್ಕದ ಮನೆಯವಳಂತೆ ಮೈಯೆಲ್ಲಾ ಕಿವಿಯಾಗಿ ನಿಂತಿದ್ದೆ ಕೊನೆತನಕ. ಒಂದು ಘಟನೆ, ಮತ್ತು ಅದಕ್ಕೆ ದೊರೆಯುವ ಇತರ ಎಲ್ಲರ ಪ್ರತಿಕ್ರಿಯೆಗಳನ್ನು ತುಂಬಾ ಪರಿಣಾಮಕರವಾಗಿ ಕಟ್ಟಿಕೊಟ್ಟಿದ್ದೀರಿ. ಪ್ರತಿಯೊಂದನ್ನೂ 'ವಿಜುಅಲೈಜ್' ಮಾಡಿಕೊಳ್ಳುವಂತಿದೆ ಬರಹ. ಮಗುವಿಗೆ ಸಹಜವಾದ ಕುತೂಹಲ. ಕೊನೆ ತುಂಬಾ ಚೆನ್ನಾಗಿದೆ.
  ಅಂದಹಾಗೆ ಈ ಮಗು... ?!

  ReplyDelete
 4. ಮಗುವಿನ ಅಚ್ಚರಿ, ಮನೆಯ ವಾತಾವರಣದ ದೃಶ್ಯಗಳು. ಕಡೆಯಲ್ಲಿ ಬಯಲಾಗುವ ವಾಸ್ತವ. ಒಟ್ಟಾರೆ ಸಾದೃಶ್ಯ ಕಥನ.

  ReplyDelete
 5. ಅಶೋಕವರ್ಧನ ಜಿ.ಎನ್May 23, 2013 at 2:11 PM

  ನನ್ನ ತಮ್ಮ ರಜೆಯಲ್ಲಿ (ಅಮೆರಿಕಾದಿಂದ) ಬಂದಾಗ ಇಲ್ಲಿನ ಮಕ್ಕಳನ್ನು ಕಂಡು ಕನಿಕರ/ ಬೆರಗು ಪಡುವುದುಂಟು - "ಛೆ! ಅವರಿನ್ನು ಹೈಸ್ಕೂಲು, ಪೀಯೂಸಿಂತೆಲ್ಲಾ ಕಲೀಬೇಕಲ್ಲಾ!" ಲೋಕ ಶಿಕ್ಷಣದಲ್ಲಿ ಕಾಗೆ ಗುಬ್ಬಿಗಳನ್ನೂ ಕಲಿಯಲೇಬೇಕು ಎನ್ನುವುದನ್ನು ಚೆನ್ನಾಗಿ ಹೇಳಿದ್ದೀರಿ

  ReplyDelete
 6. ಮಕ್ಕಳ ಕುತೂಹಲಕ್ಕೆ ಎಣೆಯಿರುವುದಿಲ್ಲ.. ಅದನ್ನ ತಣಿಸುವ ಮನಸ್ಸು ಹಿರಿಯರಲ್ಲಿ ಇರುವುದಿಲ್ಲ. ಸುಂದರ ಕಥಾನುಭವ

  ReplyDelete
 7. ನಿಷ್ಕಲ್ಮಶ ಮನಸಿಗೆ ಕಾಗೆಯ ಕಪ್ಪೂ ಸುಂದರ ಬಣ್ಣ!
  ಕಲುಷಿತ ಗೊಂಡ ಮನಸಿಗೆ ಕಾಣೋದು ಬರೀ ಕಾಗೆ!

  ReplyDelete
 8. naavoo maguvaagi ellavanno hosadaagi tumbikolluvante nodbeku aaga baduku chenna alwa ...:) putta lekhana khushi kottitu .

  ReplyDelete