ಅಂತರರಾಜ್ಯ ಪೊಲಿಸರಿಗೂ ಬೇಕಾದ ವಾಹನ ಕಳ್ಳ ಅವನು. ಅವನಿಗಾಗಿ ಎಲ್ಲ ಕಡೆಯಿಂದಲೂ ಬಲೆ ಬೀಸುತ್ತಿದ್ದರು. ಅವನನ್ನು ಹಿಡಿದರೆ ಪ್ರಮೋಷನ್ ಮೇಲೆ ಪ್ರಮೋಷನ್ ಆಗುವಂತಹ ಚ್ಯಾನ್ಸ್ ಪೊಲಿಸರದ್ದು. ಸಧ್ಯಕ್ಕೆ ಆತ ಇಲ್ಲಿಗೆ ಬಂದಿರುವ ಸುಳಿವು ದೊರೆತು ಅವನ ಹಿಂದೆ ಬಿದ್ದಿದ್ದರು.
ಪೊಲಿಸರಿಗೆ ಚಳ್ಳೆಹಣ್ಣು ತಿನ್ನಿಸಿ ಮಾಯವಾಗುವುದರಲ್ಲಿ ನಿಸ್ಸೀಮನಾದ ಆತನನ್ನು ಹುಡುಕುವ ಈ ಕೆಲಸಕ್ಕೆ 'ಆಪರೇಷನ್ ಮಾಯಗಾರ' ಅಂತಲೇ ನಾಮಕರಣ ಮಾಡಿದ್ದರು. ಯಾರಿಗೂ ಸುಳಿವು ಸಿಗದಂತೆ ನುಣುಚಿಕೊಂಡು ಹೋಗುವುದರಲ್ಲಿ ಪರಿಣತನಾದ ಆತ ಇಂದು ಖಂಡಿತ ಸಿಕ್ಕಿ ಬೀಳುವವನಿದ್ದ. ಎರಡು ಮೂರು ಮಾರ್ಗದಿಂದ ಪೊಲಿಸ್ ವಾಹನಗಳು ಅವನನ್ನು ಸುತ್ತುವರಿದು ಹುಡುಕುತ್ತಿದ್ದವು. ಯಾವ ದಾರಿಯಲ್ಲಿ ಹೋದರೂ ತೊಂದರೆ ತಪ್ಪುವಂತಿರಲಿಲ್ಲ.ಒಂದು ಪೊಲಿಸ್ ವ್ಯಾನ್ ಅಂತೂ ಹಿಂಬಾಲಿಸಿಕೊಂಡೇ ಬರುತ್ತಿತ್ತು. ಅವನಿಗೆ ಹೆಚ್ಚು ಯೋಚಿಸಲು ಸಮಯವಿರಲಿಲ್ಲ.ಸಿಕ್ಕಿ ಬಿದ್ದರಂತೂ ವರ್ಷಾನುಗಟ್ಟಲೆ ಜೈಲಿನಲ್ಲೇ ಕೊಳೆಯಬೇಕಾಗುತ್ತದೆ ಎಂಬ ಸತ್ಯ ಅವನಿಗೆ ತಿಳಿಯದ್ದುದೇನಲ್ಲ.
ಹಾಗೆಂದು ಅಷ್ಟು ಸುಲಭದಲ್ಲಿ ಅವರ ಕೈಗೆಟುಕಲು ತಾನೇನು ಮಿಠಾಯಿ ಚಪ್ಪರಿಸುವ ಹುಡುಗನೇ.. ಅವನು ಮೀಸೆಯಡಿಯಲ್ಲೇ ನಕ್ಕ. ಎಷ್ಟು ಬಾರಿ ಹೀಗಾಗಿದೆಯೇನೋ..!! ಆಗೆಲ್ಲ ಅದೃಷ್ಟ ಅವನನ್ನು ಕೈ ಬಿಟ್ಟಿರಲಿಲ್ಲ. ಇಂದೂ ಅವನಿಗೆ ಅದೇ ಧೈರ್ಯ.
ಇಂದು ಅವನು ಕದ್ದ ಕಾರೇನು ಚಿಲ್ಲರೆಯದಲ್ಲ. ಯಾರ ಕೈಗೆ ಧಾಟಿಸಿದರೂ ಹತ್ತು ಲಕ್ಷಕ್ಕೆ ಮೋಸವಿರಲಿಲ್ಲ. ಈ ವಿಷಯ ನೆನಪಾದೊಡನೆ ಇನ್ನಷ್ಟು ಜಾಗೃತನಾದ. ಎಕ್ಸಲರೇಟರ್ ಮೇಲೆ ಇಟ್ಟ ಕಾಲು ತೆಗೆಯದೇ ವೇಗವಾಗಿ ಚಲಾಸುತ್ತಿದ್ದ. ಅವನ ಕಣ್ಣು ಕೂಡಾ ಅಷ್ಟೇ ವೇಗವಾಗಿ ಸುತ್ತಲಿನ ಪರಿಸರವನ್ನು ಅವಲೋಕಿಸುತ್ತಿತ್ತು. ಇದ್ದಕ್ಕಿದ್ದಂತೆ ಎಡಗಡೆ ಕಲ್ಲಿನ ಕಾಂಪೌಂಡ್ ಒಳಗಿಂದ ಧೂಳಿನ ಮೋಡವನ್ನೆಬ್ಬಿಸಿಕೊಂಡು ಹಳೇ ಟ್ರಕ್ ಒಂದು ಅಡ್ಡಡ್ಡಲಾಗಿ ಧುತ್ತೆಂದು ರಸ್ತೆಗಿಳಿತು. ಕಣ್ಣೆವೆ ಇಕ್ಕುವುದರೊಳಗೆ ಆಗಿ ಹೋಗಬಹುದಾಗಿದ್ದ ಅಪಘಾತವನ್ನು ಚಾಣಾಕ್ಷತನದಿಂದ ತಪ್ಪಿಸಿ ಟ್ರಕ್ ಬಂದ ದಿಕ್ಕಿನೆಡೆಗೆ ಕಣ್ಣು ಹೊರಳಿಸಿ ನೋಡಿದ.
ಕಬ್ಬಿಣದ ಗೇಟ್ ನಿಧಾನಕ್ಕೆ ಮುಚ್ಚುತ್ತಾ ಇತ್ತು. ತಕ್ಷಣ ಕಾರನ್ನು ತೊಂಬತ್ತು ಡಿಗ್ರಿಯಲ್ಲಿ ತಿರುಗಿಸಿ ಆ ಗೇಟಿನೊಳಗೆ ನುಗ್ಗಿಸಿದ. ಆಟೋಮ್ಯಾಟಿಕ್ ಗೇಟ್ ಅದು. ಕಾರು ಒಳ ಬಂದ ನೂಲೆಳೆಯಷ್ಟರಲ್ಲಿ ಗೇಟ್ ಮುಚ್ಚಿಕೊಂಡು ತನ್ನಿಂದ ತಾನೇ ಲಾಕ್ ಆಗಿತ್ತು. ತನ್ನ ಸಂತಸವನ್ನು ಕಾರಿನ ಸ್ಟೇರಿಂಗಿನ ಮೇಲೆ ಗುದ್ದಿ ಆಚರಿಸಿದ. ಅದೊಂದು ಕಮಟು ಹೊಗೆಯಿಂದಾವರಿಸಿದ್ದ ಯಾವುದೋ ಕಾರ್ಖಾನೆ.ಆದರೆ ಇದು ಕೂಡಾ ಸುರಕ್ಷಿತ ಸ್ಥಳವೇನು ಅಲ್ಲ ಎಂದು ಅವನಿಗೆ ಗೊತ್ತಿತ್ತು. ತಾತ್ಕಾಲಿಕವಾಗಿ ಸ್ವಲ್ಪ ಹೊತ್ತು ಇದರೊಳಗೇ ಉಳಿಯಬೇಕಾದ್ದರಿಂದ ಪಕ್ಕನೆ ಕಾಣದಂತಿರುವ ಅಡಗು ತಾಣಕ್ಕಾಗಿ ಅತ್ತಿತ್ತ ಕಣ್ಣು ಹಾಯಿಸಿದ.
ಕಾರನ್ನು ಸ್ವಲ್ಪವೇ ಮೂವ್ ಮಾಡಿ ಹತ್ತಿರದಲ್ಲೇ ಇದ್ದ ಭಾರೀ ಗಾತ್ರದ ಕಭ್ಬಿಣದ ಷೆಡ್ ಒಳಗೆ ನಿಲ್ಲಿಸಿದ. ಅದರೊಳಗೆ ಒಂದು ಬದಿಯಲ್ಲಿ ಕತ್ತು ನಿಲುಕಿಸಿ ನೋಡುವಷ್ಟು ಎತ್ತರಕ್ಕೆ ಹಳೇ ಕಬ್ಬಿಣದ ಸಾಮಗ್ರಿಗಳನ್ನು ರಾಶಿ ಹಾಕಿದ್ದರು. ಷೆಡ್ಡಿನ ಮತ್ತೊಂದು ತುದಿಯಲ್ಲಿ ಏನಿತ್ತು ಎಂಬುದು ಕಾಣಿಸದಷ್ಟು ಕಪ್ಪು ಹೊಗೆ. ಭಾರೀ ಗಾತ್ರದ ಯಂತ್ರಗಳ ಸದ್ದು ಕಿವಿ ಒಡೆದು ಹೋಗುವಷ್ಟು ಜೋರಾಗಿತ್ತು. ಅಲ್ಲಿಯಂತೂ ಅವನು ಎಷ್ಟು ಜೋರಾಗಿ ಕಿರುಚಿದರೂ ಆ ಸದ್ದು ಅವನ ಕಿವಿಯನ್ನೇ ತಲುಪುವಂತಿರಲಿಲ್ಲ.
ಕಾರಿನ ಫಸ್ಟ್ ಏಡ್ ಬಾಕ್ಸ್ ಓಪನ್ ಮಾಡಿ ಕಿವಿಯೊಳಗೆ ಹತ್ತಿ ತುಂಡನ್ನು ತುರುಕಿದ.ಕೂಡಲೇ ಹೊರ ಹೋಗುವಂತಿರಲಿಲ್ಲ. ಸ್ವಲ್ಪ ಹೊತ್ತು ಸೀಟು ಅಡ್ಡ ಹಾಕಿ ರಿಲ್ಯಾಕ್ಸ್ ಮಾಡೋಣ ಎಂದು ಸೀಟಿನ ಕೆಳಗಿರುವ ಹ್ಯಾಂಡಲ್ ಎಳೆದಿದ್ದನಷ್ಟೆ. ಕಾರು ಇದ್ದಕ್ಕಿದ್ದಂತೇ ಗಾಳಿಯಲ್ಲಿ ಮೇಲಕ್ಕೆದ್ದಿತು. ಅರ್ರೇ.. ಇದೇನಾಗ್ತಿದೆ ಎಂದುಕೊಂಡು ಕಿಟಕಿಯ ಗ್ಲಾಸ್ ಜಾರಿಸಿ ಹೊರಗಿಣುಕಿದ. ಅವನ ಕಾರೀಗ ನೆಲದಿಂದ ಸುಮಾರು ಹತ್ತನ್ನೆರಡು ಅಡಿಗಳ ಎತ್ತರದಲ್ಲಿ ನೇತಾಡುತ್ತಿತ್ತು.ಗಾಬರಿಯಿಂದ ಬಾಗಿಲು ತೆಗೆದು ಹಾರೋಣ ಎಂದುಕೊಂಡು ಬಾಗಿಲು ನೂಕಿದ. ಆದರೆ ಅದೆಲ್ಲಿ ತೆರೆಯಿತು?! ಹೊರಗೆ ಬೇರೆ ಬೇರೆ ರೀತಿಯ ಕಬ್ಬಿಣದ ಸಾಮಗ್ರಿಗಳು ಅಂಟಿಕೊಂಡು ಬಾಗಿಲನ್ನು ತೆಗೆಯಲಾರದಂತೆ ಮಾಡಿಬಿಟ್ಟಿತ್ತು. ಯಾವುದೋ ಕಾಂತೀಯ ಶಕ್ತಿಯೊಂದು ಎಲ್ಲವನ್ನು ಆಕರ್ಷಿಸಿ ತನ್ನೆಡೆಗೆ ಎಳೆದುಕೊಳ್ಳುತ್ತಿತ್ತು.
ಅವನ ಮೈಯೆಲ್ಲ ಬೆವರಿನಿಂದ ಒದ್ದೆಯಾಯಿತು. ಎದುರಿನ ಗಾಜಿನಲ್ಲಿ ಕಾರಿನೊಂದಿಗೆ ಇನ್ನಷ್ಟು ವಸ್ತುಗಳು ಜೋತಾಡುತ್ತಾ ಇದ್ದುದು ಅರೆ ಬರೆಯಾಗಿ ಕಾಣುತ್ತಿತ್ತು. ಇದ್ದಕ್ಕಿದ್ದಂತೆ ದೊಪ್ಪನೆ ಎಲ್ಲವೂ ಕಳಚಿಕೊಂಡಂತಾಯ್ತು. ಜೊತೆಗೆ ಇವನ ಕಾರು ಕೂಡಾ ಕೆಳಗೆ ಬೀಳುತ್ತಿತ್ತು. ಕೊನೆಯದಾಗಿ ಎಲ್ಲವೂ ಕೇಸರಿ ಬಣ್ಣದಲ್ಲಿ ಕಂಡ ಹಾಗಾಯಿತು ಅಷ್ಟೆ. ಸುಡು ಬಿಸಿಯ ಅಲೆಯೊಂದು ಹಾಯ್ದು ಎಲ್ಲವೂ ಒಂದೇ ಆಗಿ ಕರಗಿ ನೀರಾಯಿತು. ಅವನೀಗ ನಿಗಿ ನಿಗಿ ಉರಿಯುವ ಕೆಂಡವಾಗಿ ಅದರಲ್ಲಿ ತೇಲುತ್ತಿದ್ದ.
ಹೊರಗೆ ಪೋಲಿಸ್ ವಾಹನ ಮುಚ್ಚಿದ ಗೇಟಿನ ಬಳಿ ನಿಧಾನಿಸಿತು. 'ಸ್ಕ್ರಾಪ್ ಮೆಲ್ಟಿಂಗ್ ಎಂಡ್ ರಿಸೈಕ್ಲಿಂಗ್ ಇಂಡಸ್ಟ್ರಿ' ಎಂಬ ಬೋರ್ಡನ್ನು ಕುಳಿತಲ್ಲಿಂದಲೇ ಇಣುಕಿ ಓದಿದ ಇನ್ ಸ್ಪೆಕ್ಟರ್ ಚಾಲಕನಿಗೆ ಮುಂದೆ ಚಲಿಸುವಂತೆ ಕೈ ಸನ್ನೆ ಮಾಡಿದ.
'ಆಪರೇಷನ್ ಮಾಯಗಾರ' ಮುಂದುವರೆದಿತ್ತು.. ಆದರೆ ಮಾಯಗಾರ ನಿಜಕ್ಕೂ ಮಾಯವಾಗಿದ್ದ.
Anitha Naresh Manchi