Pages

Total Visitors

Tuesday, August 20, 2013

ಹಸಿರ ಹನಿಗಳು..

ಬಸ್ಸು ನನ್ನ ಬದಿಯಲ್ಲಿ ಬ್ರೇಕ್ ಹಾಕಿದರೂ ಹತ್ತಡಿ ದೂರದಲ್ಲಿ ನಿಂತಿತು. ಜೋರಾಗಿ ಸುರಿಯುತ್ತಿರುವ ಮಳೆ ಬಸ್ಸಿನ ಮೆಟ್ಟಲೇರುವವರೆಗೂ ಕೊಡೆ ಮಡಿಚಲು ಅವಕಾಶ ನೀಡಲಿಲ್ಲ. ಹೇಗೋ ಒಂದು ಕೈಯಲ್ಲಿ ಹಿಡಿದ ಕೊಡೆಯನ್ನು ಮಡುಚಿ ಬಸ್ಸಿನೊಳಗೆ ತೂರಿಕೊಂಡೆ. ನನ್ನ ಇನ್ನೊಂದು ಕೈಯಲ್ಲಿ ಬಗೆ ಬಗೆಯ ಹೂಗಿಡಗಳ ಗೆಲ್ಲಿನ ತುಂಡುಗಳ ದೊಡ್ಡ ಕಟ್ಟಿತ್ತು.ಅದು ಯಾರ ಕಣ್ಣು ಕೈಕಾಲುಗಳಿಗೆ ತಾಗದಂತೆ ಜಾಗ್ರತೆ ವಹಿಸುತ್ತಾ ಸೀಟಿಲ್ಲದ ಕಾರಣ ನಿಂತೇ ಇದೆ.ಕೆಲವರ ಕಾಲ ಬುಡದಲ್ಲಿ ಮತ್ತೆ ಕೆಲವರ ಕೊಡೆಯ ಒಳಗೆ, ಇನ್ನು ಕೆಲವರ ಮಡಿಲ ಮೇಲೆ ನನ್ನ ಕೈಯಲ್ಲಿದ್ದಂತೇ ಗಿಡಗಳ ಗೆಲ್ಲುಗಳು ರಾರಾಜಿಸುತ್ತಿದ್ದವು. ನನ್ನ ಕುತೂಹಲದ ಕಣ್ಣುಗಳು ಅವುಗಳ ಮೇಲೆ ಹರಿದಾಡಿದರೆ, ಅಲ್ಲೇ  ಪಕ್ಕದ ಸೀಟಿನಲ್ಲಿ ಕೂತ ಹೆಂಗಸೊಬ್ಬಳು ನನ್ನ ಕೈಯಲ್ಲಿದ್ದ ಗಿಡಗಳ ಕಟ್ಟನ್ನು ಎಳೆದು ತಿರುವಿ  ಮುರುವಿ  ನೋಡಿದಳು. 
'ಗುಲಾಬಿ ಯಾವ ಬಣ್ಣದ್ದು' ಅವಳ ಪ್ರಶ್ನೆ.
 "ಇದಾ.. ಇದು ಹಳದಿ, ಮತ್ತೊಂದು ಕೇಸರಿ.." 
"ಓಹ್.. ಹೌದಾ.. ಒಂದೊಂದೇ ಗೆಲ್ಲು ಇರೋದಾ?" ಅವಳ ಆಸೆಕಂಗಳ ಪ್ರಶ್ನೆ ಮರುಕಳಿಸಿತು. 
"ಕೆಲವು ಗಿಡಗಳು ಎರಡಿವೆ. ನೋಡಿ ಕೊಡ್ಬೇಕಷ್ಟೆ..ಆದ್ರೆ ಈಗ ಬಸ್ಸು ಹೋಗ್ತಾ ಇರುವಾಗ ತೆಗೀಯೋದು ಕಷ್ಟ" ಎಂದೆ ನಾನು. 
"ಅಯ್ಯೋ.. ಬನ್ನಿ ಬನ್ನಿ ನೀವಿಲ್ಲಿ ಕುಳಿತುಕೊಳ್ಳಿ.. ನಂಗೇನು.. ಸ್ವಲ್ಪ ದೂರದಲ್ಲಿ ಇಳಿಯೋದೇ.. ಅದ್ರ ಮೊದ್ಲು ಹುಡ್ಕಿ ಕೊಡಿ" ಎಂದು ಅವಳು ಕುಳಿತಲ್ಲಿಂದ ಎದ್ದು ನನಗೆ ಸೀಟ್ ಬಿಟ್ಟುಕೊಟ್ಟು ನನ್ನ ಕೈಯಿಂದ  ಬರುವ ಗಿಡದ ಗೆಲ್ಲಿಗಾಗಿ ಕಾಯುತ್ತಾ ನಿಂತಳು. ಅವಳ ಕೈಗೆ ನಾನಿತ್ತ ಗೆಲ್ಲನ್ನು ಅಮೂಲ್ಯ ನಿಧಿಯೇನೋ ಎಂಬಂತೆ ಹಿಡಿದುಕೊಂಡಳು. ಇಳಿಯುವಾಗ ನನ್ನೆಡೆಗೆ ತಿರುಗಿದ ಅವಳ ಮೊಗದಲ್ಲಿ ಏನನ್ನೋ ಗೆದ್ದಂತಹ ಸಂಭ್ರಮವಿತ್ತು.  

ಹಾಗಂತ ಹೀಗೆ ಗಿಡ ಹೊತ್ತುಕೊಂಡು ಹೋಗುವವರಲ್ಲೆಲ್ಲಾ ಸುಂದರ ಹೂತೋಟ ಇರುತ್ತದೆ ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ಯಾಕೆ ಅಂತೀರಾ? ನಮ್ಮಲ್ಲಿಗೆ ನನ್ನ ದೂರದ ಅತ್ತೆಯೊಬ್ಬರು ಆಗೀಗ ಭೇಟಿ ನೀಡುತ್ತಾರೆ. ಅದೂ ಮಳೆಗಾಲದಲ್ಲಂತೂ ಬಂದೇ ಬರುತ್ತಾರೆ.ಗೇಟು ಸರಿಸುವಾಗಲೇ ಕೈಯಲ್ಲಿ ಗಿಡ ಕತ್ತರಿಸುವ ಹರಿತ ಕತ್ತರಿಯನ್ನು ಝಳಪಿಸುತ್ತಲೇ ಬಿಜಯಂಗೈಯುತ್ತಾರೆ. ಬಂದವರು ಮನೆಯ ಒಳಗೂ ಬಾರದೇ ನೇರವಾಗಿ ಹೂತೋಟಕ್ಕೆ ದಾಳಿ ಇಡುತ್ತಾರೆ. ತಮಗೆ ಬೇಕೆನಿಸಿದ್ದನ್ನೆಲ್ಲಾ ಇದೊಂದು ಗೆಲ್ಲು ತೆಗೊಳ್ತೇನೆ, ಅದ್ರದ್ದೊಂದು ಪಿಳ್ಳೆ ಬೇಕಿತ್ತು ಎಂದು ತುಂಬಿಕೊಳ್ಳುತ್ತಾರೆ. "ಇದು ಕಳ್ದ ಸರ್ತಿಯೂ ಕೊಟ್ಟಿದ್ದೆ ಅಲ್ವಾ.. ಅದೇನಾಯ್ತು" ಎಂದರೆ, "ಅದಾ.. ಅದು ಬದುಕ್ಲಿಲ್ಲ ಮಾರಾಯ್ತಿ . ದೊಡ್ಡ ಚಟ್ಟಿಯಲ್ಲಿ ಭರ್ತಿ ಗೊಬ್ಬರ ಹಾಕಿ ನೆಟ್ಟಿದ್ದೆ ಯಾರದೋ ಕಣ್ಣು ಮುಟ್ಟಿತೋ ಏನೋ .. ಸತ್ತೇಹೋಯ್ತು ನೋಡು. ನಂಗೆ ಬೇಸರವಾಗಿ ಮೂರು ದಿನ ಅನ್ನ ಸೇರ್ಲಿಲ್ಲ. ಆ ಚಟ್ಟಿಯಲ್ಲಿ ಬೇರೇನೂ ಗಿಡ ನೆಡ್ಲೇ ಇಲ್ಲ. ಹಾಗೇ ಇಟ್ಟಿದ್ದೀನಿ. ಇದನ್ನು ತೆಗೊಂಡು ಹೋದ ಕೂಡ್ಲೇ ಮೊದಲು ಅದರಲ್ಲಿ ನೆಟ್ಟಾಗಿಯೇ ನನ್ನ ಸೀರೆ ಬದಲಾಸುವುದು ನೋಡು" ಅಂತ ಬೀಷ್ಮ ಪ್ರತಿಜ್ಞೆ ಮಾಡುತ್ತಿದ್ದರು. ನಿಜವಾದ ಸಂಗತಿ ಏನೆಂದರೆ ಮನೆಗೆ ಹೋದ ಕೂಡಲೇ ಸಾಧಾರಣ ಧನಕ್ಕೆ ಹಾಕುವ ಹುಲ್ಲಿನ ಕಟ್ಟದಷ್ಟು ದೊಡ್ಡ ಇರುವ, ಸರಿಯಾಗಿ ನೆಡಲು ಕಡಿಮೆ ಎಂದರೂ ಅರ್ಧ ಎಕರೆ ಜಾಗ ಬೇಡುವ ಈ ಗಿಡಗಳ ಕಟ್ಟನ್ನು ತಮ್ಮ ಮನೆಯ ಟೆರೇಸಿನ ಮೆಟ್ಟಲುಗಳ ಹಿಂದೆ ಇಟ್ಟು ಬಿಡುತ್ತಿದ್ದರು. ಅದು ಮಳೆ ಬಂದರೆ ಕೊಳೆದೋ ಬಿಸಿಲು ಬಂದರೆ ಒಣಗಿಯೋ ಕಡ್ಡಿಯಂತಾಗಿ ಬಿಸಾಡಲು ಯೋಗ್ಯವಾಗುತ್ತಿದ್ದವು. ಹೂವಿನ ಚಟ್ಟಿಯನ್ನೇರುವ ಭಾಗ್ಯ ಬರುತ್ತಲೇ ಇರಲಿಲ್ಲ. ಹಾಗಾಗಿ ಇವರ ಮನೆಯ ಹೂಕುಂಡಗಳು ಸರಕಾರೀ ವನಮಹೋತ್ಸವದಲ್ಲಿ ಗಿಡ ನೆಟ್ಟ ಹೊಂಡಗಳಂತೆ ಸದಾ ಖಾಲಿಯಾಗಿ ನಳನಳಿಸುತ್ತಿದ್ದವು.

ಇನ್ನು ಕೆಲವರಿಗೆ ಮಳೆಗಾಲ ಬಂತೆಂದರೆ ತಮ್ಮ ಹೂದೋಟವನ್ನು ಗಿಡ ಬೇಡುವವರಿಂದ ಕಾಪಾಡುವ ಚಿಂತೆ. ಒಳ್ಳೆಯ ಜಾತಿಯ ಕಸಿ ಕಟ್ಟಿದ ಗಿಡಗಳನ್ನೆಲ್ಲಾ ಸಾವಿರಾರು ರೂಪಾಯಿ  ದುಡ್ಡು ನರ್ಸರಿಗೆ ಕೊಟ್ಟು ತಂದಿರುತ್ತಾರೆ. ಅದರ ಗೆಲ್ಲನ್ನು ಪಕ್ಕದವರು ಬಿಟ್ಟಿಯಾಗಿಯೇ ಗಿಡ ಮಾಡಿಕೊಳ್ಳುತ್ತಾರೆ ಎಂದು  ಹೊಟ್ಟೆ ನೋವು.  ಹಾಗೆಂದು ಎಲ್ಲರೂ ಹೀಗಿರುವುದಿಲ್ಲ ಬಿಡಿ. 

ನನ್ನ ಪರಿಚಯದವರೊಬ್ಬರಿಗೆ ತಮ್ಮ ಮನೆಯ ಎಲ್ಲಾ ಗಿಡಗಳನ್ನು ಇನ್ನೊಬ್ಬರಿಗೆ ಹಂಚುವುದೆಂದರೆ ಬಾರೀ ಸಂತಸ. ಒಮ್ಮೆ ಅವರಲ್ಲಿ ಅತೀ ಅಪುರೂಪದ ಬಣ್ಣದ ದಾಸವಾಳದ ಗಿಡವಿತ್ತು. ನನ್ನ ಕಣ್ಣುಗಳು ಅವುಗಳ ಮೇಲೇ ಇದ್ದುದನ್ನು ಕಂಡು ಸರಕ್ಕನೆ ಕತ್ತಿಂದ ಅದರ ಗೆಲ್ಲನ್ನೊಂದು ತುಂಡು ಮಾಡಿ ನನ್ನ ಕೈಯಲ್ಲಿಟ್ಟರು. "ಅಯ್ಯೋ.. ಯಾಕೆ ತುಂಡು ಮಾಡಿದಿರಿ? ಇದು ಕಸಿ ಗಿಡ ಅಲ್ವಾ ಗೆಲ್ಲು ಬದುಕುತ್ತಾ" ಅಂದೆ. "ಅರ್ರೇ.. ನೆಟ್ಟು ನೋಡು ಬದುಕುತ್ತಾ ಅಂತ. ಬದುಕದಿದ್ದರೆ ಸಾಯುತ್ತದೆ ಅಷ್ಟೇ. ತಲೆ ಬಿಸಿ ಮಾಡ್ಬೇಡ ಸತ್ರೆ ಅದಕ್ಕೆ ಬೊಜ್ಜ ತಿಥಿ ಎಲ್ಲಾ ಮಾಡುವ ಖರ್ಚೇನು ಇಲ್ಲ" ಅಂತ ತುಂಟ ನಗೆ ನಕ್ಕರು. "ಅಲ್ಲಾ ಹೀಗೆ ನೀವು ದುಡ್ಡು ಕೊಟ್ಟು ತಂದ ಗಿಡವನ್ನು ಎಲ್ಲರಿಗೂ ಕೊಡ್ತೀರಲ್ವಾ.. ನಿಮಗೇನು ಲಾಭ" ಅಂದೆ. 

"ಲಾಭ ನಷ್ಟ ಎಲ್ಲಾ ವ್ಯವಹಾರಗಳಲ್ಲಿರೋದು. ಗಿಡಗಳಿಗೆ ಕೇವಲ ಮಣ್ಣಿನ, ನೀರಿನ ನಂಟು. ಆದ್ರೂ ನಂಗೆ ಲಾಭ ಅಂತು ಇದ್ದೇ ಇದೆ. ನನ್ನ ಮನೆಯಲ್ಲಿ ಆ ಗಿಡ ಅಳಿದರೆ ನಾನು ಗಿಡ ಕೊಟ್ಟಿರುವ ಯಾರದ್ದಾದ್ರು ಮನೆಯಲ್ಲಿ ಇದ್ದೇ ಇರುತ್ತೆ. ಹೋಗಿ ಕೇಳಿದ್ರಾಯ್ತು. ಹತ್ತಿರದಲ್ಲೇ ಸಿಗುತ್ತದೆ.ಮತ್ತೆ ನಂಗೆ ಬೇಕು ಅನ್ನಿಸುವ ಯಾವ ಗಿಡ ಕೇಳಿದ್ರು  ಇಲ್ಲಾ ಅನ್ನುವ ಜನರೇ ಇಲ್ಲ. ನೆರೆ ಹೊರೆಯೊಡನೆ ನಮ್ಮ ಸಂಬಂಧಗಳು ಗಿಡಗಳ ನೆಪದಲ್ಲಿಹತ್ತಿರವಾಗುತ್ತವೆ. ಬೇಕು ಎನ್ನಿಸಿದಾಗ ಸಹಾಯದ ಕೈಗಳು ತಾನಾಗಿಯೇ ಚಾಚುತ್ತವೆ..ನಾನು ಗಿಡಗಳಿಗೆ ಕೊಟ್ಟ ಹಣಕ್ಕಿಂತ ಈ ಸಾಮರಸ್ಯದ ಮೌಲ್ಯ ಹೆಚ್ಚು ಅಂತ ಅನ್ನಿಸಲ್ವಾ ನಿಂಗೆ.." ಅಂದರು. ಅವರ ಮಾತಿಗೆ ನಾನು ತಲೆದೂಗಲೇ ಬೇಕಾಯ್ತು.

ಯಾರು ಏನೇ ಹೇಳಲಿ, ಏನೇ ಅಭಿಪ್ರಾಯ ವ್ಯಕ್ತಪಡಿಸಲಿ, ಮಳೆಗಾಲವಂತು ನಾನು ಯಾರ ಮನೆಗೆ ಹೋದರೂ ಒಂದೆರಡಾದರು ಗಿಡಗಳಿಲ್ಲದೇ ಖಾಲಿ ಕೈಯಲ್ಲಿ ಬಂದದ್ದೇ ಇಲ್ಲ.ಅಲ್ಲಿಲ್ಲಿಂದ ತಂದು ನೆಟ್ಟ ಗಿಡಗಳು ಚಿಗುರಿ ಹೂವೋ ಕಾಯೋ ಬಿಟ್ಟಾಗ ಮತ್ತೊಮ್ಮೆ ಗಿಡಗಳನ್ನು ಕೊಟ್ಟ ಮನೆಯವರ ನೆನಪೂ ಹಸಿರಾಗುತ್ತದೆ. ಗಿಡ ಗೆಳೆತನದ ಬೇರುಗಳೂ ಗಟ್ಟಿಯಾಗಿ ಹರಡಿ ಭದ್ರವಾಗುತ್ತವೆ. ಸುಲಭದಲ್ಲಿ ಮಧುರ ಬಾಂಧವ್ಯದ ಸೇತುವೆ ನಿರ್ಮಿಸುವ ಈ ಗಿಡಗಳ ಬಗೆಗೆ ನಂಗಂತೂ ತುಂಬಾ ಪ್ರೀತಿ..ನಿಮ್ಗೂ ಹಾಗೇ ಅನ್ನಿಸಿದ್ರೆ ಹೇಳಿ.. ನಿಮ್ಮನೆಗೆ ಯಾವಾಗ ಬರ್ಲಿ ಗಿಡ ಕೇಳ್ಳಿಕ್ಕೆ.. ??

6 comments:

 1. ನಮ್ಮ ಹಳ್ಳಿಯ ಮನೆಗೆ ಬಂದವರಿಗೆ ಗೆಲ್ಲು ಯಾಕೆ ಕೊಂಡು ಹೋಗುತ್ತೀರಿ?
  ನಿಮಗೆ ಒಳ್ಳೆಯ ಒಂದು ಗಿಡವನ್ನೇ ಮಾಡಿಕೊಡುತ್ತೇನೆ! - ಅಂತ ಪೂಸಿ ಹೊಡೆದು ಕಳುಹಿಸುತ್ತಿದ್ದೆ..
  ನಾನು ಗಿಡ ಮಾಡಿದೆ! ಅವರು ಕೊಂಡು ಹೋದರು! - ಎಲ್ಲಾ ಕನಸಿನಲ್ಲೇ!
  ಪಟ್ಟಣ ಸೇರಿದ ಮೇಲೆ ಆ ರಗಳೆಯೇ ಇಲ್ಲ.
  ಈ ಉಪಾಯ ಹೆಚ್ಚಾಗಿ ಫಲಪ್ರದ ಆಗುತ್ತದೆ.
  ಇಂತೀ
  ಪೆಜತ್ತಾಯ ಮಾಮ

  ReplyDelete
 2. Hi Ani,
  ಮತ್ತೊಮ್ಮೆ ಇಷ್ಟವಾಯ್ತು ನಿಮ್ಮ ಲೇಖನ.....
  ಗಿಡವೊ೦ದು ಗಿಡ ಮಾತ್ರವಲ್ಲ....
  ಸಸಿಯೊ೦ದು ಸಸಿ ಮಾತ್ರವಲ್ಲ....
  ಹಸಿರಿಗೆ ಎಷ್ಟತ್ತಿರ ಇದ್ದೀರಿ! ಹಸಿರೊಡನೆ ನಿಮ್ಮ ಬಾ೦ಧವ್ಯ ಹೀಗೇ ಇರಲಿ....
  by the way, ಈ ಲೇಖನದ ಶೀರ್ಷಿಕೆ "ನಾನ ನನ್ನ ಹಸಿರು" ಅ೦ತಿರಬೇಕಿತ್ತ....!:) :) :)

  ReplyDelete
 3. ನಿಮ್ಮ ಹಸಿರು ಪ್ರೇಮಕ್ಕೆ ನಾವು ಸೋತೆವು... ಸದಾ ಹೀಗೆ ಇರಲಿ ನಿಮ್ಮ ಹಸಿರ ಮನ

  ReplyDelete
 4. ಚಂದ ಬರೆದಿದ್ದೀರಿ.. ನಮ್ಮನೆಗೆ ಬಂದರೆ ಒಂದೆರಡು ಗಿಡ ಕೊಡಬಲ್ಲೆ, ಪಾಟಿನಲ್ಲಿ ಬೆಳೆಸಿದ್ದು.. :) :)

  ReplyDelete
 5. ನಮ್ಮಮ್ಮನ, ಅಜ್ಜಿಯ ಹೂತೋಟದ ನೆನಪಾಯ್ತು :-)

  ReplyDelete
 6. ನಿಮ್ಮ ಲೇಖನದ ಜೊತೆಗಿನ ಭಾವಚಿತ್ರಗಳು ನಿಮ್ಮ ಲೇಖನ ಹೂವಿನಂತೆ ಸುಂದರ ಕಾಣಲು ಸಹಾಯವಾಗಿವೆ. ಹಸಿರಿನ ಬಗ್ಗೆ ಹೂ ಗಿಡಗಳ ಬಗ್ಗೆ ಬರೆದ ನಿಮ್ಮ ಲೇಖನ ಚೆನ್ನಾಗಿದೆ.
  ನನ್ನ ಬ್ಲಾಗಿಗೂ ಭೇಟಿ ಕೊಡಿ.

  ReplyDelete