Pages

Total Visitors

Friday, February 21, 2014

ಕಲೆಯ ಬಲೆ



ಎಲ್ಲರೂ ಕಲೆಯ ಬಗ್ಗೆ ಮಾತನಾಡುತ್ತಾ ಕುಳಿತಿದ್ದರೆ ಏನನ್ನೂ ಅರಿಯದ ನಾನು ಪೆಚ್ಚು ಮುಖ ಹಾಕಿಕೊಂಡೇ ಕೇಳಿಸಿಕೊಳ್ಳುತ್ತಿದ್ದೆ. ಹಿರಿಯರೊಬ್ಬರು ' ಅಲ್ಲಮ್ಮಾ ಮನೆಯೊಳಗೇ ಕುಳಿತರೆ ಕಲೆಯ ಬಗ್ಗೆ ಏನು ತಿಳಿಯುತ್ತೆ ನಿಂಗೆ? ಸ್ವಲ್ಪ ಹೊರಗಿನ ಲೋಕ ನೋಡು..ಅದಕ್ಕೇನೂ ಹೆಚ್ಚು ದೂರ ಹೋಗಬೇಕಿಲ್ಲ. ನಮ್ಮೂರಿನ ದೇವಸ್ಥಾನಗಳೇ ಸಾಕು ಮೊದಲ  ಪರಿಚಯಕ್ಕೆ' ಎಂದರು. ಹಿರಿಯರ ಮಾತಿಗೆ ಎದುರಾಡುವುದುಂಟೇ ಎಂದು ಇವರೆದುರು ಒದರಾಡಿ ಒಂದು ದಿನ ಪುರುಸೊತ್ತು  ಮಾಡಿಕೊಂಡೆ. ಹೊರಟಿತು ನನ್ನ ಸವಾರಿ ಊರ ಹೊರಗಿನ ದೇವಸ್ಥಾನ ನೋಡಲು 

ಹಳೆಯ ಕಾಲದ ಪುಟ್ಟ ದೇಗುಲ 'ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೇ, ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು' ಎಂದು ಹಾಕಿದ್ದ ಫಲಕ ಕಣ್ಮನ ಸೆಳೆತು. ಒಳಗೆ ಕಾಲಿಟ್ಟಂತೆ ಕಂಡ ಲೋಕವೋ ವರ್ಣನಾತೀತ. ಆದರೂ ನೀವಿಲ್ಲಿ ಕೇಳಲು ಕಾತರರಾಗಿರುವುದರಿಂದ ನನಗೆ ತಿಳಿದ ಮಟ್ಟಿಗೆ ವರ್ಣಿಸುವುದು ಅನಿವಾರ್ಯ. ಎತ್ತ ನೋಡಿದರತ್ತ ಕಲೆಯೋ ಕಲೆ. ಮೊದಲು ಕಣ್ಣಿಗೆ ಬಿದ್ದಿದ್ದು ಗುಡಿಯಿಂದ ಹೊರಗಿದ್ದ ಮಂಡಿಯೂರಿ ಮಲಗಿದ್ದ ನಂದಿ.ನಂದಿಯ ಹೊಟ್ಟೆ ಬೆನ್ನು ಎಲ್ಲಾ ಕಡೆ ಭಕ್ತರು ಹಣೆಗೆ ಹಚ್ಚಿದ ನಂತರ ಕೈಯಲ್ಲುಳಿದ ಕುಂಕುಮ , ಗಂಧಗಳ ಕಲೆ. ಸ್ವಲ್ಪ ಮುಂದೆ ಹಚ್ಚಿಟ್ಟ ದೀಪದ ಎಣ್ಣೆ ನೆಲದಲ್ಲೆಲ್ಲಾ ಹರಡಿ ಆದ ಕಪ್ಪಗಿನ ಕಲೆ. ಅತ್ತಿತ್ತ ಇರುವ ಗೋಡೆಗಳ ಮೇಲೆಲ್ಲ ಭಕ್ತಿ ಹೆಚ್ಚಾದ ಜನರ ಉಗುರಿನಿಂದರಳಿದ ಗೋಡೆ ಕಲೆ. ಹಳೆಯ ಕಾಲದ ಕಲ್ಲಿನ ಕುಸುರಿಗಳ ಸಂದು ಗೊಂದುಗಳಲ್ಲೆಲ್ಲಾ ಜೇಡನ ಬಲೆ.. ಆಹಾ ಧನ್ಯಳಾದೆ ಎಂದುಕೊಂಡು ಈ ಅಚ್ಚರಿಯನ್ನು ಅಡಗಿಸಿಕೊಳ್ಳುತ್ತಾ ಇನ್ನೊಂದು ಬಾಗಿಲಿನಿಂದ ಹೊರಗೆ ಬಂದರೆ ಹಾದಿಯ ಎರಡೂ ಬದಿಗಳಲ್ಲಿ ತಾಂಬೂಲದ ಪಿಚಕಾರಿ ಕಲೆ. ಲಂಡನ್ನಿನ ಮಾಡರ್ನ್ ಆರ್ಟ್ ಗ್ಯಾಲರಿಗೂ ಸಡ್ಡು ಹೊಡೆಯುವಂತಿದ್ದ ಇದನ್ನೆಲ್ಲಾ ಕಣ್ಣುಗಳಲ್ಲಿ ತುಂಬಿಕೊಂಡೆ. ಧ್ಯಾನಸ್ಥ ಮನಸ್ಸಿನಿಂದ ಹೊರಬಂದೆ.

ಹಾಗೆಂದು ನನಗೆ ಕಲೆಯ ಬಗ್ಗೆ ಏನೂ ತಿಳಿದಿಲ್ಲ ಎಂದು ನೀವಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ ಎಂದು ಹೇಳಬಯಸುತ್ತೇನೆ. ಏಕೆಂದರೆ ನಾನು ಹುಟ್ಟು ಕಲಾವಿದೆ ಎಂದು ಬಹು ಜನರಿಗೆ ತಿಳಿದಿಲ್ಲ. ಚಿಕ್ಕವಳಿರುವಾಗ ಅಲ್ಲಿಲ್ಲಿ ಬಿದ್ದೆದ್ದು ಹಾಕಿಕೊಂಡ ಅಂಗಿಗೆ ಕಲೆ ಮಾಡಿಕೊಳ್ಳುತ್ತಿದ್ದೆ. ಸ್ವಲ್ಪ ದೊಡ್ಡವಳಾದ ಮೇಲೆ ನನ್ನ ಕಾರ್ಯಕ್ಷೇತ್ರ ಮನೆಯ ಹೊರಗೆಯೂ ಹಬ್ಬಿ ತೋಟದೊಳಗೆಲ್ಲಾ ಸುತ್ತಿ ಸುಳಿದು ತೊಳೆದರೂ ಹೋಗದ ಬಾಳೆಕಾ
ಯಿಯ ಕಲೆ ಗೇರುಹಣ್ಣಿನ ಕಲೆಗಳನ್ನು ಅಂಗಿಗಳಿಗೆ ಚಿತ್ತಾರವಾಗಿಸುತ್ತಿದ್ದೆ. ಒಮ್ಮೆಯಂತೂ ಗೇರುಬೀಜ ತಿನ್ನುವ ಆಸೆಗೆ ಬಿದ್ದು ಹಸಿ ಬೀಜವನ್ನು ಹಾಗೇ ಬಾಗೆ ಹಾಕಿ ಜಗಿದಿದ್ದೆ. ಅದರ 'ಸೊನೆ' ಬಾಯಿಯ ಸುತ್ತೆಲ್ಲಾ ಹುಣ್ಣುಗಳನ್ನುಂಟು ಮಾಡಿ ಕೆಲ ಕಾಲ ಮುಖದಲ್ಲೂ ನನ್ನ ಕಲಾ ರಸಿಕತೆಯನ್ನು ಪ್ರದರ್ಶಿಸುತ್ತಿತ್ತು. 
ಕೆಲವೊಮ್ಮೆ ನನ್ನಿಂದಲ್ಲದೇ ಪರರೂ ನನ್ನನ್ನು ಕಲಾಮಾಧ್ಯಮವಾಗಿ ಬಳಸಿಕೊಂಡು ಕಾಫಿಯೋ ಚಹಾವೋ ತುಂಬಿದ ಕಪ್ಪನ್ನು ನಾನು ಗಟ್ಟಿಯಾಗಿ  ಹಿಡಿದುಕೊಳ್ಳುವ ಮುನ್ನವೇ ಅವರು ಕೈ ಬಿಟ್ಟು ನನ್ನ ಬಟ್ಟೆಯ ಮೇಲೆ ಭೂಪಟಗಳಂತಿರುವ ಶಾಶ್ವತ ರಚನೆಗಳು ಮೂಡುತ್ತಿದ್ದವು. ಹಾಕಿದ ಹೊಸ ಬಟ್ಟೆಯ ಗತಿ ಹೀಗಾದ ದಿನ ಅಮ್ಮನ ಕೈಯ ಬೆರಳುಗಳು ಬೆನ್ನಿನಲ್ಲಿ ಮೂಡಿ ಅಲ್ಲೊಂದು ಹೊಸ ಕಲಾಪ್ರಕಾರವನ್ನು ತೋರ್ಪಡಿಸುತ್ತಿತ್ತು.  ಈ ಹಳೆಯ ಕಥೆಗಳೆಲ್ಲಾ ನಾನು ಕಲೆಯ ಬಗ್ಗೆ ಅಜ್ಞಾನಿಯೇನಲ್ಲ ಎಂದುದನ್ನು ಹೇಳಲಷ್ಟೇ ತಿಳಿಸಿದ್ದು. 

ಇತ್ತೀಚೆಗೊಮ್ಮೆ ನನ್ನ ಕಲಾ ಮನಸ್ಸನ್ನು ಅರಿತ ಸಹೃದಯರೊಬ್ಬರು ' ಕಲೆಯ ಬಗ್ಗೆ' ನಮ್ಮ ಯುವ ಮಂಡಲದಲ್ಲಿ ಕಾರ್ಯಕ್ರಮವಿದೆ. ಬರಲೇಬೇಕು.. ನೀವು ಮಾತ್ರವಲ್ಲ ನಿಮ್ಮ ಬಂಧು ಮಿತ್ರರನ್ನೂ ಕರೆತರಬೇಕು ಎಂದು ಒತ್ತಾಯಿಸಿದ್ದರು. ಮೊದಲೊಮ್ಮೆ ಟಿ ವಿ ಯಲ್ಲಿ ಯಾವ ಕಲೆಗಳನ್ನು ತೆಗೆಯಲು ಯಾವ ವಸ್ತುಗಳನ್ನು ಬಳಸಬೇಕೆಂದು ವಿವರಿಸುವ ಕಾರ್ಯಕ್ರಮವೊಂದು ಬಂದಿತ್ತು. ಆದರೆ ಆ ಹೊತ್ತಿಗೆ ಸರಿಯಾಗಿ ವಿದ್ಯುತ್ ಪೂರೈಕೆ ನಿಂತು ಹೋಗಿ ' ..... ತಿಳಿಸಿಕೊಟ್ಟ ಇವರಿಗೆ ವಂದನೆಗಳು' ಎನ್ನುವಾಗ ವಿದ್ಯುತ್ ಪೂರೈಕೆ ಮರಳಿತ್ತು. ಈ ಸಲ ಭಾಷಣವಾದ್ದರಿಂದ ಅವರು ಹೇಳುವಾಗ ಬರೆದುಕೊಂಡರಾಯಿತು ಎಂದು ನನ್ನ ಗೆಳತಿಯರ ಒಡಗೂಡಿ ಕೈಯಲ್ಲಿ ಪೆನ್ ಪೇಪರು ಹಿಡಿದು ಹೊರಟಿದ್ದೆ.
ಅವರು ಮಾತು ಪ್ರಾರಂಭಿಸುತ್ತಾ ' ಕಲೆ ಅಂದರೆ ಇರದಿರುವುದನ್ನು ಕಾಣುವುದು' ಎಂದರು. ಅಲ್ಲಾ ಸ್ವಾಮೀ ಇರದಿರುವುದನ್ನೇ ಕಲೆ ಎಂದರೆ ಇರುವುದನ್ನು ಏನೆನ್ನಬೇಕು ಎಂಬುದೆ ನನಗೂ ನನ್ನ ಜೊತೆಗಾತಿಯರಿಗೂ ಅರಿವಾಗಲಿಲ್ಲ. ಇರಲಿ ಕಲೆಯನ್ನು ಹೋಗಲಾಡಿಸುವ ಬಗ್ಗೆ ಮುಂದೆ ಹೇಳಬಹುದೆಂದು ಕಿವಿ ಕಣ್ಣು ಬಾ ತೆರೆದು ಕುಳಿತೆವು. ನಮ್ಮ ಆಸಕ್ತಿ ನೋಡಿ ಅವರಿಗೂ ಸಂತಸವಾಯ್ತು. ಇನ್ನಷ್ಟು ಉತ್ಸಾಹದಿಂದ ಇರದಿರುವುದರ ಊಹೆ ಹೇಗೆ ಕಲೆಯಾಗುತ್ತದೆ ಎಂಬುದನ್ನು ವಿವರಿಸತೊಡಗಿದರು. ಕಣ್ಣೆದುರು ಕಾಣುವ ನಮ್ಮ ಕಲೆಯೂ , ಕಣ್ಣಿಗೆ ಕಾಣದ ಇವರ ಕಲೆಯೂ ಬೇರೆ ಬೇರೆ ಎಂದು ನನ್ನರಿವಿಗೆ ಬಂದಾಗ ಭಾಷಣ ಮುಗಿದು ಊಟದ ಹೊತ್ತಾಗಿತ್ತು. ಔತಣದಲ್ಲಿ ಪಾಲ್ಗೊಂಡು ಸೀರೆಗೆ ಅಂಟಿದ ಸಾರಿನ ಅರಿಶಿನದ ಬಣ್ಣವನ್ನು ತೆಗೆಯುವುದು ಹೇಗೆಂದು ಚಿಂತಾಕ್ರಾಂತಳಾಗಿ ಮನೆಗೆ ಮರಳಿದೆ. 

ನನ್ನರಿವಿಗೆ ಸುಲಭಕ್ಕೆ ನಿಲುಕದ ಈ ಕಲೆಯ ಬಗ್ಗೆ ಹಲವರು ಲೀಲಾಜಾಲವಾಗಿ ವಿವರಿಸುತ್ತಾರೆ. ಒಬ್ಬರು ಮಾತನಾಡುವುದು ಒಂದು ಕಲೆ ಎಂದರೆ, ಇನ್ನೊಬ್ಬರು ಚಿತ್ರ, ಸಂಗೀತ ಇವುಗಳು ಕಲೆ ಎನ್ನುತ್ತಾರೆ. ಇದೆಲ್ಲ ಹುಟ್ಟಿನಿಂದಲೇ ಬರುವ ಪ್ರತಿಭೆಗಳಾದರೂ ಕೆಲವನ್ನು ಕಷ್ಟಪಟ್ಟು ಕಲಿಯಲೂ ಬಹುದೇನೋ. ಆದರೆ ಇನ್ನು ಕೆಲವರು ದಿನ ನಿತ್ಯದ ನಮ್ಮ ನಡೆ ನಡವಳಿಕೆಗಳನ್ನು ಕೆಲಸ ಮಾಡುವ ವಿಧಾನವನ್ನು ಕಲೆಯೆಂದು ಬಣ್ಣಿಸುವುದುಂಟು. ' ನನ್ನಜ್ಜ  ವೀಳ್ಯ ಹಾಕಲು ಸುಣ್ಣ ತೀಡುವುದಿದೆಯಲ್ಲ ಅದೂ ಒಂದು ಕಲೆ ಎಂದು ಅಜ್ಜನ ಪುಳ್ಳಿ ಹೇಳಿದರೆ, ನನ್ನಮ್ಮ ತರಕಾರಿ ಕತ್ತರಿಸುವುದು ಒಂದು ಕಲೆ ಎಂದು ಅಮ್ಮನ ಮಗಳು ನುಡಿಯುತ್ತಾಳೆ. ಅಷ್ಟೇಕೆ ದಿನ ನಿತ್ಯ ಮೂರು ಹೊತ್ತು ಹೊಟ್ಟೆಗೆ ಆಹಾರ ಸೇವಿಸುತ್ತೇವಲ್ಲ ಆ ಸೇವನಾ ಕ್ರಮವೂ ಒಂದು ಕಲೆಯಂತೆ. ಹಾಗಿದ್ದ ಮೇಲೆ ಬಡಿಸುವುದು ಕೂಡಾ ಕಲಾ ಪ್ರಕಾರದೊಳಗೆ ಬಾರದಿದ್ದೀತೇ?
 
ಹಳ್ಳಿಯ ಕಾರ್ಯಕ್ರಮಗಳಲ್ಲಿ ಬಾಳೆಲೆಯ ಮೇಲೆ ಊಟ ಸರ್ವೇಸಾಮಾನ್ಯ.ಬಾಳೆ ಎಲೆಯ ಮೇಲೆ ತುಂಬಾ ಜಾಗವಿದೆ ಎಂದು ಹೇಗೆಂದರೆ ಹಾಗೇ ಎಲ್ಲೆಂದರೆ ಅಲ್ಲಿ ಬಡಿಸಿ ಹೋಗುವುದು ಸಾಧ್ಯವಿಲ್ಲ. ಉಪ್ಪು ಉಪ್ಪಿನಕಾಯಿಗಳು ಎಲೆಯ ತುದಿಯನ್ನು ಅಲಂಕರಿಸಿದರೆ ಅದರಿಂದೀಚೆಗೆ ಎಲೆಯ ಎದುರು ಬದಿಯಲ್ಲಿ  ಚಟ್ನಿ ಪಲ್ಯ ಗೊಜ್ಜು ಕೋಸಂಬರಿಗಳು ಬೀಳಬೇಕು. ಎಲೆಯ ಇನ್ನೊಂದು ಕೆಳಗಿನ ಮೂಲೆಯಲ್ಲಿ ಪಾಯಸವೇ ಇರಬೇಕು. ಅವೆಲ್ಲದರ ನಡುವೆ ಅನ್ನ ಅಧ್ಯಕ್ಷ ಪದವಿ ಪಡೆದು ನಡುವಿನಲ್ಲಿ ಕುಳಿತಿರುತ್ತದೆ. ನಂತರ ಸಾಲಾಗಿ ಸಾರು ಸಾಂಬಾರು ಪಳಧ್ಯಗಳ ಮೆರವಣಿಗೆ ನಡು ನಡುವೆ ಹೋಳಿಗೆ ತುಪ್ಪ ಕಾಹಾಲುಗಳ ನೈವೇಧ್ಯದ ಜೊತೆ ಜೊತೆಗೆ ಸಾಗಬೇಕು. ಕೊನೆಯಲ್ಲಿ ಮಜ್ಜಿಗೆ ಬಂದರೆ ಊಟ ಮುಗಿದೇಳುವ ಹೊತ್ತು.  ಹೀಗೆ ಕ್ರಮದಿಂದ ಬಡಿಸುವುದರ ಅರಿವಿಲ್ಲದವರಿಗೆ ಬಡಿಸುವುದು ಎಂದರೆ ಮೈ ನಡುಕ ಬರುವುದು ಸುಳ್ಳಲ್ಲ. 
 
ಪೇಟೆಯಲ್ಲಿದ್ದ ನಮ್ಮ ಚಿಕ್ಕಪ್ಪನಿಗೆ ತಾನು ಒಂದಾನೊಂದು ಕಾಲದಲ್ಲಿ ಉದ್ದುದ್ದದ ಊಟದ ಸಾಲುಗಳಿಗೆ ಬಡಿಸಿ ಕ್ಷಣಾರ್ಧದಲ್ಲಿ ಊಟ ಮುಗಿಸಿ ಏಳುವಂತೆ ಮಾಡುತ್ತಿದ್ದ ಗತಕಾಲದ ವೈಭವವನ್ನು ಆಗಾಗ ನಮ್ಮ ಮುಂದಿಡುತ್ತಾ ನಾವೆಲ್ಲ ಇನ್ನೂ ಅವರ ಮಟ್ಟಕ್ಕೇರಿಲ್ಲ ಎಂದು ನೆನಪಿಸುವುದು ಬಲು ಇಷ್ಟದ ಕೆಲಸ. ಆದರೆ ನಾವಂತೂ ಅವರು ಒಂದು ಸಮಾರಂಭದಲ್ಲೂ ಬಡಿಸಿದ್ದನ್ನು ನೋಡಿದವರಾಗಿರಲಿಲ್ಲ. ಊಟದ ಹೊತ್ತಾದ ಕೂಡಲೇ ಎಲೆ "ಡಿದು ಮೊದಲನೇ ಪಂಕ್ತಿಗೆ ಊಟ ಮುಗಿಸಿ ಏಳುತ್ತಿದ್ದರು. 
ಆದರೆ ಮನೆಯಲ್ಲೇ ನಡೆಯುವ ಸಮಾರಂಭಗಳಿದ್ದಾಗ ಕೆಲವೊಮ್ಮೆ ಗ್ರಹಗತಿಗಳು ಕೆಟ್ಟದಾಗುವುದೂ ಉಂಟು.  ಮೊದಲನೇ ಪಂಕ್ತಿಗೆ ಊಟ ಮುಗಿಸಿ ಎದ್ದಿದ್ದ ಚಿಕ್ಕಪ್ಪ ಎರಡನೇ ಪಂಕ್ತಿಗೆ ಊಟಕ್ಕೆ ಕುಳಿತ ನಮ್ಮನ್ನು ಕಡೆಗಣ್ಣ ನೋಟದಿಂದ ನೋಡುತ್ತಾ ದೂರದಲ್ಲಿ ನಿಂತಿದ್ದರು. ನಮ್ಮ ಕಪಿ ಸೈನ್ಯಕ್ಕೆ ಅವರನ್ನು ಗೋಳುಗುಟ್ಟಿಸುವುದೆಂದರೆ ಇಷ್ಟ. ನಮಗೆ ಬಡಿಸಿ ಎಂದು ನಾವು ಕೇಳಿದ "ನಯದ ಮಾತುಗಳಿಗೆ ಸೊಪ್ಪು ಹಾಕದ ಅವರನ್ನು ಮಣಿಸಲು 'ನಮಗೆ ಚಿಕ್ಕಪ್ಪ ಬಡಿಸಿದರೇ ಊಟ ಮಾಡುವುದು ಇಲ್ಲದಿದ್ದರೆ ಸಾಮೂಹಿಕವಾಗಿ ಊಟಕ್ಕೆ ಬಹಿಷ್ಕಾರ ಹಾಕುತ್ತೇವೆ' ಎಂದು ಗದ್ದಲ ಎಬ್ಬಿಸಿದೆವು.ಊಟಕ್ಕೆ ಮೊದಲೇ ನಾಲ್ಕು ಹೋಳಿಗೆ , ಅತ್ತಿತ್ತ ನಡೆಯುವಾಗಲೆಲ್ಲಾ ವಡೆ ಕಜ್ಜಾಯಗಳನ್ನು ಬಾಯಾಡಿಸುತ್ತಲೇ ಇದ್ದ ನಮಗೆ ಹಸಿವಾಗಿದ್ದುದು ಅಷ್ಟರಲ್ಲೇ ಇತ್ತು. ಆದರೆ ನಮ್ಮ ಈ ರೌಧ್ರ ಬೇಡಿಕೆಗೆ ಮಣಿದ ಚಿಕ್ಕಪ್ಪ ಬೇರೆ ದಾರಿಯಿಲ್ಲದೇ ಬಡಿಸಲು ಬಂದರು. ಅತ್ತಿತ್ತ ನೋಡಿ ಬಡಿಸಲು ಸುಲಭವೂ ಹಗುರವೂ ಆಗಿದ್ದ ಬಾಣಲೆಯಲ್ಲಿ ಇಟ್ಟಿದ್ದ ಹಪ್ಪಳವನ್ನೆತ್ತಿಕೊಂಡು ಬಂದರು. ಬಡಿಸುತ್ತಾ ನಮ್ಮ ಸಾಲಿನ ತುದಿಯವರೆಗೆ ತಲುಪಿದಾಗ ಅವರ ಮೊಗದಲ್ಲಿ ನಾನೂ ಬಡಿಸಿದೆ ಎಂಬ ಹೆಮ್ಮೆಯ ನಗುವಿತ್ತು. ಬಾಣಲೆಯನ್ನು ಪಕ್ಕಕ್ಕಿಟ್ಟವರೇ  ಮೀಸೆಯ ಮೇಲೆ ಕೈಯಾಡಿಸಿ ತಿರುವಿದರು. ಬಾಣಲೆಯ ಅಂಚಿನಲ್ಲಿದ್ದ ಮಸಿ ಮುಖಕ್ಕೆ ಮೆತ್ತಿಕೊಂಡಿತು. ನಾವು ನಗುವ ಅವಕಾಶವನ್ನು ಬಿಡಲುಂಟೇ? ನಮ್ಮ ಹಾಸ್ಯಕ್ಕೆ ಇನ್ನಷ್ಟು ತಬ್ಬಿಬ್ಬಾದ ಅವರು ಉಟ್ಟಿದ್ದ ಶುಭ್ರ ಬಿಳಿಯ ವೇಸ್ಟಿಯಲ್ಲಿ  ಮುಖ ಒರೆಸಿಕೊಂಡರು. ಅದಕ್ಕಷ್ಟು ಮಸಿ ಅಂಟಿತು. ಆಹಾ ..  ಆಗ ತಿಳಿಯಿತು ನೋಡಿ ನನಗೆ ಬಡಿಸುವ ಕಲೆಯ ಬಗ್ಗೆ. 
ಪ್ರಪಂಚದಲ್ಲಿ ಸಾವಿರ ಸಾವಿರ  ಕಲೆಗಳಿರಬಹುದು ಬಿಡಿ. ಆದರೆ ನನಗೆ ತಿಳಿದ ಕಲೆಗಳು ಕೇವಲ ಎರಡೇ ಎರಡು. ಒಂದು ತೊಳೆದರೆ ಹೋಗುವಂತಹುದು ಮತ್ತಿನ್ನೊಂದು ತೊಳೆಯುವುದು ಬಿಡಿ ಹರಿದರೂ ಹೋಗದಂತದ್ದು. ನನ್ನ ಈ ಅಸಾಮಾನ್ಯ ಕಲಾಮಯ ತಲೆಯೊಳಗೆ ಇನ್ನಷ್ಟು ಕಲೆಗಳ ವಿವರಗಳನ್ನಿಳಿಸಿ ಗೋಜಲಾಗಿಸುವುದು ನನಗಿಷ್ಟವಿಲ್ಲದ ಕಾರಣ  ಕಲೆಯ ಬಗ್ಗೆ ಕೊರೆಯುವುದನ್ನು ಬಿಟ್ಟು ಕೈಗೆ ಅಂಟಿದ ಶಾಯಿಯ ಕಲೆಯನ್ನು ತೊಳೆದುಕೊಳ್ಳುವತ್ತ ಗಮನ ಹರಿಸುತ್ತೇನೆ. 

( ಮಾರ್ಚ್ 2014 ರ ಉತ್ಥಾನ ಮಾಸಪತ್ರಿಕೆಯಲ್ಲಿ  ಪ್ರಕಟಿತ ) 

4 comments:

  1. 64 ಕಲೆಗಳು ಕಲಿಯಬೇಕಂತೆ ಬದುಕಿನಲ್ಲಿ.
    ನಿಮ್ಮ ಬರವಣಿಗೆಯ ಕಲೆ ನಮಗೂ ಅಚ್ಚು ಮೆಚ್ಚೇ.

    ReplyDelete
  2. kalegala baleyalli nageya hole harisidderi. chandada baravinige.

    ReplyDelete
  3. ಚೆನ್ನಾಗಿದೆ ಕಲೆ ವರ್ಣನೆ ...... ನಿಮ್ಮ ಲಘು ಹಾಸ್ಯದ ಶೈಲಿ .... ಇಷ್ಟವಾಯಿತು

    ReplyDelete