Pages

Total Visitors

Sunday, September 14, 2014

ನವ್ವಾಲೆ ಬಂತಪ್ಪ ನವ್ವಾಲೆ..
ತೋಟದ ಕೆಲಸಕ್ಕೆಂದು ಗದಗದ ಕಡೆಯಿಂದ ನಾಲ್ಕು ಜನ ಗಟ್ಟಿಮುಟ್ಟಾದ ಯುವಕರು  ಬಂದಿದ್ದರು. ಎಲ್ಲಾ ಸಾಧಾರಣ ಇಪ್ಪತ್ತರ ಹರೆಯದವರು. ಮುನ್ನಾದಿನ ಸಂಜೆ ಬಂದು ತೋಟದ ಮನೆಯಲ್ಲಿ ಉಳಿದುಕೊಂಡಿದ್ದರು. ದ ಕ ಜಿಲ್ಲೆಗೆ ಹೀಗೆ ಹೊರಗಿನಿಂದ ಕೆಲಸದವರು ಬರುವುದು ಮಾಮೂಲಿಯಾದರೂ  ಅವರ ಕೆಲಸ ಹೇಗಿರಬಹುದೋ, ಸರಿಯಾಗಿ ಕತ್ತಿ ಗುದ್ದಲಿಯಾದ್ರೂ ಹಿಡಿಯಲಿಕ್ಕೆ ಬರುತ್ತದೋ, ಅಡಿಕೆ ತೋಟದ ಕೆಲಸಗಳಿಗೆ ಒಗ್ಗುತ್ತಾರೋ  ಇಲ್ಲವೋ ಅಂತನ್ನುವ ಚಿಂತೆ ನಮ್ಮನ್ನು ಕಾಡುತ್ತಿತ್ತು. ಬೆಳಗ್ಗೆ ಎಂಟು ಗಂಟೆಗೆಲ್ಲಾ ಮನೆಯಂಗಳದಲ್ಲಿ ಇರಲೇಬೇಕು ಎನ್ನುವ ಟೈಮ್ ಟೇಬಲ್ ಕೊಟ್ಟಾಗಿತ್ತು. 
 ಇನ್ನೂ ಬೆಳಕು ಮೂಡಿತ್ತಷ್ಟೇ.. ಬೆಳಗ್ಗಿನ ತಿಂಡಿಯ ಸಿದ್ಧತೆಗೆ ಅಡುಗೆ ಮನೆಯಲ್ಲಿದ್ದೆ. ಅಷ್ಟರಲ್ಲಿ ಹೊರಗಿನ ಅಂಗಳದಲ್ಲಿ ಬಡ ಬಡನೆ ಯಾರೋ ಓಡಿ ಬಂದು  ನಿಂತ ಸದ್ದಾಯಿತು. ಹೋಗಿ ನೋಡಿದರೆ ನಾಲ್ಕೂ ಯುವಕರು ಮುಖದಲ್ಲಿ ಆತಂಕ ಹೊತ್ತು ಬಂದು ನಿಂತಿದ್ದಾರೆ. ರಾತ್ರಿ ಉಳಿದುಕೊಂಡಿದ್ದ ಕೋಣೆಯಲ್ಲಿ ಹಾವೇನಾದರೂ ಕಂಡು ಹೆದರಿದರೇನೋ ಎಂದುಕೊಂಡು ಇವರನ್ನು ಹೊರಗೆ ಕರೆದೆ ಹುಡುಗರ ವಿಚಾರಣೆಗಾಗಿ.
ಏನಾಯ್ತು ಅನ್ನುವ ಇವರ ಪ್ರಶ್ನೆಗೆ ಅವರೊಳಗೆ ಮುಖ ಮುಖ ನೋಡಿಕೊಂಡು ನೀನು ಹೇಳು ನೀನು ಹೇಳು ಅಂತ ಕಿತ್ತಾಡಲು ತೊಡಗಿದರು.
ಮತ್ತೊಮ್ಮೆ ಕೇಳಿದಾಗ "ಅಲ್ಲಿ ತೋಟ್ದಾಗೆ ದೆವ್ವ ಇದೆ ಧನಿ.. ನಾವು ಇರಾಂಗಿಲ್ಲ ಅಲ್ಲಿ" ಅಂದರು. 
ನಮ್ಮಿಬ್ಬರಿಗೂ ಇದು ಹೊಸ ವಿಷಯ. ಇಷ್ಟು ದಿನ ನಮ್ಮ ಕಣ್ಣಿಗೆ ಬೀಳದೆ ಕದ್ದು ಕುಳಿತಿದ್ದ ದೆವ್ವ ಇವರ ಕಣ್ಣಿಗೆ ಬಿದ್ದದ್ದಾದರೂ ಹೇಗಪ್ಪ ಎಂದು ಕುತೂಹಲಕ್ಕೊಳಗಾಗಿ "ಹೇಗಿತ್ತು ದೆವ್ವ" ಎಂದು ಎಂದು ಕೇಳಿದೆವು.
"ನೋಡ್ಲಿಲ್ಲಾರಿ" ಎಂದ ಬಸವ.
"ಅಯ್ಯೋ ನೋಡದೆ ದೆವ್ವ ಇದೆ ಅನ್ನೋದು ಗೊತ್ತಾಗಿದ್ದು ಹೇಗೆ" ಅಂದೆ.
"ಕಿರ್ಚೋದು ಕೇಳಿಸ್ತೂರೀ ಅವ್ವಾರೇ" ಅಂದ. 
ತಕ್ಷಣ ಮತ್ತೊಮ್ಮೆ ಎಲ್ಲರೂ ಸ್ತಬ್ದರಾಗಿ ನಿಂತು "ಕೇಳ್ರೀ.. ಕೇಳ್ರೀ.. ಈವಾಗ್ಲೂ ಕೇಳಿಸ್ತದೆ" ಅಂದ ಒಬ್ಬ. 
ಹೌದು ಆಗ ನಮಗೂ ಕೇಳಿಸಿತ್ತು.. ದೆವ್ವದ ಸದ್ದಲ್ಲ ..
 ನವಿಲು ಕೂಗುವ ಶಬ್ಧ. 
ನವಿಲಿನ ಬಗ್ಗೆ ಏನೂ ಗೊತ್ತಿಲ್ಲದಿರುವವರಿಗೆ ಆ  ಕರ್ಕಶ ಸದ್ದು ಅವರೊಳಗಿನ ಹೆದರಿಕೆ ಎಂಬ ದೆವ್ವದ ಕಾಟವನ್ನು ಹೊರಗೆಳೆದಿತ್ತಷ್ಟೇ..
'ಅದು  ನವಿಲು .. ದೊಡ್ಡ ಹಕ್ಕಿ  ಗೊತ್ತಲ್ಲಾ.. ನಮ್ಮ ರಾಷ್ಟ್ರ ಪಕ್ಷಿ' ಎಂದೆಲ್ಲಾ ವಿವರಣೆ ನೀಡಿದರೂ ಪೂರ್ತಿಯಾಗಿ ನಂಬದೆ ಅರೆ ಬರೆ ಹೆದರಿಕೆಯಲ್ಲೇ ತಮ್ಮ ಕೋಣೆಗೆ ತೆರಳಿದ್ದರಾಗ ಅವರು.
ಸುತ್ತು ಮುತ್ತೆಲ್ಲಾ ಕಾಡನ್ನು ಹೊಂದಿದ್ದ ನಮ್ಮ ಮನೆ ಇರುವ ಪರಿಸರದಲ್ಲಿ ಬೇರೆ ಬೇರೆ ತರದ ಹಕ್ಕಿಗಳು ಇದ್ದವು. ಕೇಳುವ ಮನಸ್ಸಿದ್ದರೆ ಇಡೀ ದಿನ ಅವುಗಳ ಸಂಗೀತ ಕಚೇರಿಯನ್ನು ಆಲಿಸಬಹುದಿತ್ತು. ಇಂಪಾಗಿ ಹಾಡುವ ಕೋಗಿಲೆಂದ ಹಿಡಿದು ಹೀಗೆ ಕರ್ಕಶ ಸ್ವರ ಹೊರಡಿಸಿ ಬೆಚ್ಚಿ ಬೀಳಿಸುವ ನವಿಲಿನವರೆಗೆ ..
ನಿಜ ಹೇಳಬೇಕೆಂದರೆ ಹಕ್ಕಿ ಸಾಮ್ರಾಜ್ಯವೇ ಒಂದು ಬೆಡಗು. ಅವುಗಳ ಬಿಂಕ ಬಿಗುಮಾನ, ಒನಪು ವಯ್ಯಾರ, ಬಣ್ಣಗಳ ಮೇಳ  ಬೇರೆ ಯಾವ ವರ್ಗದಲ್ಲೂ ಕಾಣ ಸಿಗದು. ಅವುಗಳಿಗೆಲ್ಲಾ ಮುಕುಟ ಇಟ್ಟಂತೆ ತಲೆಯ ಮೇಲೆ ಸುಂದರ ಕಿರೀಟ ಹೊತ್ತ ಹಕ್ಕಿ ನವಿಲು. ಪಾಸಿನಿಡೆ ಕುಟುಂಬಕ್ಕೆ ಸೇರಿದ್ದಿದು. 
ಜಗತ್ತಿನ ಸೌಂದರ್ಯವನ್ನೆಲ್ಲ ಎರಕ ಹೊಯ್ದು ತಿದ್ದಿ ತೀಡಿ, ರಂಗು ಕೊಟ್ಟು, ಒಂದೆಡೆ ನಿಲ್ಲಿಸಿದರೆ ಅದು ನವಿಲಲ್ಲದೆ ಬೇರೇನೂ ಆಗಿರಲು ಸಾಧ್ಯವಿಲ್ಲ. ಅಂತಹ  ಅದ್ಭುತ ಸೊಬಗು ಅದರದ್ದು. 
ಗಂಡು ನವಿಲುಗಳು ತಮ್ಮ ಸೌಂದರ್ಯಕ್ಕೆ ಹೆಸರಾದರೆ ಇದರ ಮುಂದೆ  ಹೆಣ್ಣು ನವಿಲು ಅಷ್ಟೇನೂ ಆಕರ್ಷಣೀಯ ಎನಿಸುವುದಿಲ್ಲ. ಆದರೂ ತಲೆಯ ಮೇಲೆ ಹೊತ್ತ ಜುಟ್ಟನ್ನು ಕುಲುಕಿಸುತ್ತಾ ಗಂಭೀರ ನಡಿಗೆಯಲ್ಲಿ ಅವುಗಳೆಲ್ಲಾ ಅಂಗಳಕ್ಕೆ ಇಳಿದಾಗ ನಮ್ಮ ನಾ ಬೊಗಳುವುದನ್ನು ಕೂಡಾ ಮರೆತು ಅವುಗಳ ಕಡೆಗೆ ಅಚ್ಚರಿಯ ನೋಟ ಬೀರುತ್ತಾ ಕುಳಿತುಕೊಳ್ಳುವುದು  ನಮ್ಮಲ್ಲಿನ ಸಾಮಾನ್ಯ ನೋಟ.
ತನ್ನ  ಜೊತೆಗಾತಿಯನ್ನು ಆಕರ್ಷಿಸಲು  ಕುಣಿಯುವ ಗಂಡು ನವಿಲನ್ನೊಮ್ಮೆ ನೋಡಬೇಕು. ಕಣ್ಣುಗಳು ಪಾವನಗೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಅದೊಂದು ಅದ್ಭುತವಾದ ನೃತ್ಯ ವೈಭವ. ಹೊತ್ತು ನಡೆಯಲೇ ಭಾರವೆನಿಸುವ ತನ್ನ ಗರಿಗಳನ್ನು ನಿಧಾನಕ್ಕೆ ಅರಳಿಸುತ್ತದೆ.  ಕಾಲುಗಳನ್ನು ಎತ್ತಿ ಎತ್ತಿ ಇಡುತ್ತಾ ಪೂರ್ಣ ಪ್ರಮಾಣದಲ್ಲಿ ಗರಿಗಳನ್ನು ಬಿಡಿಸಿ ಸುತ್ತುತ್ತದೆ.  ಉರುಟುರುಟಾಗಿ ಸುಳಿದು ಕುಣಿಯುತ್ತದೆ.  ಈ ಮೋಹಕ ದೃಶ್ಯದ ವರ್ಣನೆಯನ್ನು ಪದಗಳಲ್ಲಿ ಬಂಧಿಸಿಡಲು ಸಾಧ್ಯವೇ ಇಲ್ಲ. ಅಪುರೂಪವಾದ ಈ ಸೊಬಗನ್ನು  ಅದೃಷ್ಟ ಇದ್ದವರು ನೋಡಿಯೇ  ಸವಿಯಬೇಕಷ್ಟೇ..
ಹಾಗೆಂದು ಇವುಗಳು ಗದ್ದೆಗಿಳಿದರೆ ಮುದ್ದು ಮಾಡುತ್ತಾ ಯಾರೂ ಇವುಗಳನ್ನು ನೋಡಿಕೊಂಡು ಕೂರುವುದಿಲ್ಲ. ದೊಣ್ಣೆ ಕೈಯಲ್ಲಿ ಹಿಡಿದು ಹ್ಹಾ ಹ್ಹೋ.. ಹೋಗು.. ಅಂತ ಬೊಬ್ಬೆ ಹಾಕಿ ಓಡಿಸುತ್ತಾರೆ. ಯಾಕೆಂದರೆ ಇವುಗಳ ಉಪಟಳ ಇವುಗಳಿಂದಾಗುವ ಬೆಳೆ ಹಾನಿ ಸಾಮಾನ್ಯದ್ದಲ್ಲ. 
 ನಮ್ಮ ಹಳೇ ತಲೆಯ ಕೆಲಸದವನ ಪ್ರಕಾರ ಇವುಗಳನ್ನು ಕೊಂದರೆ ಕೇಸ್ ಆಗುತ್ತದೆ ಎಂಬ ಭಯದ ಜೊತೆಗೆ ಇವುಗಳ ಮಾಂಸ ಭಕ್ಷಣೆಗೆ ಅಡ್ಡಿ ಮಾಡುವ  ಇನ್ನೊಂದು ವಿಚಾರವೂ ಜೊತೆಗಿದೆ. ನವಿಲುಗಳ  ಅತ್ಯಂತ ಪ್ರೀತಿಯ ಆಹಾರ ಹಾವು. ಇಡೀ ಇಡೀ ಹಾವುಗಳನ್ನು ಗುಳುಂ ಮಾಡುವ ಇವುಗಳ ಹೊಟ್ಟೆಯಲ್ಲಿ ಕೆಲವೊಮ್ಮೆ ಇಡಿಯಾದ ಹಾವುಗಳು ಹಾಗೆ ಹಾಗೆಯೇ ಸಿಗುತ್ತವಂತೆ. ಹಾಗಾಗಿ ಇವುಗಳನ್ನು ತಿನ್ನುವುದಕ್ಕೆ ಹಿಂದೇಟು ಹಾಕುತ್ತಾರೆ. ಹಾಗಾದ ಕಾರಣ ನವಿಲಿನ ಸಂತತಿ ಉಳಿದುಕೊಂಡಿದೆ. 
ಆದರೂ ನವಿಲಿನ  ಗರಿಗಳ ಹಲವು ಕರ ಕುಶಲ ವಸ್ತುಗಳು ಮಾರುಕಟ್ಟೆಯಲ್ಲಿ ದೊರಕುತ್ತದೆ. ಇವುಗಳ ಹಿಂದೆ ನವಿಲುಗಳ ಮಾರಣ ಹೋಮದ ಕರಾಳ ಛಾಯೆದೆ. ದಯವಿಟ್ಟು ಪ್ರಾಣಿ ಪಕ್ಷಿಗಳ ಗರಿ ತುಪ್ಪಳ ಚರ್ಮ ಬಳಸಿ ತಯಾರಿಸುವ ವಸ್ತುಗಳನ್ನು ಜನ ಕೊಂಡುಕೊಳ್ಳುವುದನ್ನು ಬಿಟ್ಟರೆ ಮಾತ್ರ ಅವುಗಳು ಬದುಕಿಕೊಂಡಾವು. ಈ ದಿಕ್ಕಿನತ್ತ ಜನರೇ ಮನಸ್ಸು ಮಾಡಿ ಅಂತಹ ವಸ್ತುಗಳನ್ನು ಬಹಿಷ್ಕರಿಸಬೇಕಿದೆ. 
ಇಷ್ಟೆಲ್ಲಾ ಓದಿದ ಮೇಲೆ ನಿಮಗೆ  ಇಷ್ಟು ಚೆಂದದ ನವಿಲು ಸಾಕಿದರೇನು ಎಂಬ ಆಸೆ ಹುಟ್ಟಿದೆಯೇ.. ಆದರೆ ಇದಕ್ಕೆ ಮೊದಲು ಆಗಬೇಕಾದ ಕಾರ್ಯ ನವಿಲು ಹಿಡಿಯುವುದಲ್ಲವೇ.. ಅದಕ್ಕೊಂದು ಸುಲಭ ಉಪಾಯ ನಾನು ಹೇಳಿಕೊಡುತ್ತೇನೆ. ಇದು ನನ್ನ ಪತಿರಾಯರು ನನಗೆ ಹೇಳಿದ ಗುಟ್ಟು. ಆದರೂ ಆತ್ಮೀಯರಲ್ಲಿ ಹಂಚಿಕೊಳ್ಳಲೇ ತಾನೇ ಗುಟ್ಟುಗಳು ಇರುವುದು. 
ಮೊದಲಿಗೆ ಬಿಸಿಲು ಏರುವ ಮುನ್ನ ನವಿಲು ಇರುವ ಜಾಗಕ್ಕೆ ಹೋಗಿ ನಿಮಗ್ಯಾವ ನವಿಲನ್ನು ಹಿಡಿಯಬೇಕೆಂದಿದೆಯೋ ನೋಡಿ. ಈಗ ಅದರ ತಲೆಗೆ ಒಂದು ದಪ್ಪದ ಬೆಣ್ಣೆ ಮುದ್ದೆಯನ್ನಿಡಿ. ಬಿಸಿಲು ಏರಿದಂತೆಲ್ಲಾ ಬೆಣ್ಣೆ ಕರಗಿ ನವಿಲಿನ ಕಣ್ಣಿಗೆ ಇಳಿದು ಮಯ ಮಯವಾಗಿ ಅದಕ್ಕೆ ಏನೂ ಕಾಣದಂತಾಗುತ್ತದೆ. ಆಗ ಅದನ್ನು ಪಕ್ಕನೆ ಹಿಡಿದು ನಿಮ್ಮ ಮನೆಗೆ ತಂದು ಸಾಕಿಕೊಳ್ಳಿ. ಹೇಗಿತ್ತು ಈ ಉಪಾಯ.. 
ಕೊನೆಯ ಕಿಡಿ..
ಕಾಡಿನ ಪ್ರಾಣಿ ಪಕ್ಷಿಗಳು ಊರೊಳಗೆ ಬರಲು ಕಾರಣ ಕಾಡಿನ ನಾಶ. ಅದು ನಮ್ಮ ಗಮನದಲ್ಲಿದ್ದರೆ  ಅವೂ ಉಳಿದಾವು, ನಾವೂ ಉಳಿದೇವು.. ನೀವೇನಂತೀರಾ.. 

6 comments:

 1. ಮೊದಲಿಗೆ ನೆನಪಾದದ್ದು ಅಣ್ಣಾವ್ರ 'ನನ್ನ ನೀನು ಗೆಲ್ಲಲಾರೆ' ಸಿನಿಮಾ ಗೀತೆ.
  ನವಿಲನ್ನು ಹಿಡಿಯೋ ರೀತಿಯೂ ರೋಚಕವಾಗಿದೆ ರೀ...

  ReplyDelete
 2. ಬೆಣ್ಣೆಯನ್ನು ಪಾತ್ರೆಗೆ ಹಾಕಿ ಕಾಯುತ್ತಿರುವೆ! ಸುಂದರ ಚಿತ್ರ ಬರಹ
  ಮಾಲಾ

  ReplyDelete
 3. ನೀವು ಹೇಳಿದ ಕ್ರಮದಲ್ಲೇ ನಮಗೊಂದಿಷ್ಟು ನವಿಲು ಹಿಡಿದು ಕಳಿಸ್ರೀ ಅನಿತಕ್ಕಾವ್ರೆ :)

  ReplyDelete
 4. ನಾವು ನೋಡಿ ಯೋಚಿಸುತ್ತಿರುವುದನ್ನ ನೀವು ಬರೆದು ತೋರಿಸುವ ಪರಿ..ಬಹಳ ಖುಷಿ ಕೊಡುತ್ತದೆ.

  ReplyDelete