Pages

Total Visitors

Saturday, September 12, 2015

ಆಯುಧ..
ಶೂರ ಲಂಕಾಧೀಶ್ವರನ  ತಂಗಿ ನಾನು.  ಒಬ್ಬನಲ್ಲ ಇಬ್ಬರಲ್ಲ ಮೂರು ಜನ ಬಲಾಡ್ಯ ಸಹೋದರರೊಡನೆ ಬೆಳೆದ ಮನೆ ಮಗಳು.. ಹೇಗಿರಬೇಕಿತ್ತು ನನ್ನ ಬದುಕು.. ಹೇಗಾಗಿ ಹೋಯಿತು..ಹರೆಯ ನನ್ನೊಳಗೂ ನುಗ್ಗಿತು. ನೂರಾರು ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿತು. ಗಂಡಿನ ಬಲವಾದ ತೋಳೊಳಗೆ ಕರಗಬೇಕೆಂಬಾಸೆ ಹೆಣ್ಣಾದ ನನಗೆ ಸಹಜ ತಾನೇ.. ಆದರೆ  ಬೆಳೆದು ನಿಂತ ನನಗೆ ಸರಿಯಾದ ಗಂಡನನ್ನೇನು ಹುಡುಕಲಿಲ್ಲ ನನ್ನಣ್ಣ .. ಲೋಕದ ಕಣ್ಣಿಗೆ ಮಣ್ಣೆರಚಲು ಒಂದು ಮದುವೆ ಮಾಡಿದ.  ತಂಗಿಗೆ ಮದುವೆ  ಮಾಡದೇ ಅಣ್ಣ ತನ್ನ ಅಂತಃಪುರದ ಸ್ತ್ರೀಯರೊಂದಿಗೆ ಚಕ್ಕಂದ ಆಡುತ್ತಾನೆ ಎಂದು ಆಡಿಕೊಳ್ಳದಿರಲಿ ಎಂದಷ್ಟೇ.. 

ವಿದ್ಯುಜ್ಜಿಹ್ವ ನನ್ನ ಗಂಡನೆಂದೆನಿಸಿಕೊಂಡ. ಬಂದ ಬಾಳನ್ನು ಬಂದಂತೆ ಸಂತಸದಿಂದಲೇ ಸ್ವೀಕರಿಸಿದ್ದೆ. ಹೇಡಿ, ಯಾಕೂ ಬೇಡದವ ಎನಿಸಿಕೊಂಡಿದ್ದ ಗಂಡ ನನ್ನ ಸಹವಾಸದಿಂದೇನೋ ಪರಾಕ್ರಮಶಾಲಿಯಾಗುತ್ತಾ ಬೆಳೆದ.. ಅದು ಎಷ್ಟೆತ್ತರಕ್ಕೆ ಎಂದರೆ ರಾವಣನಿಗೆ ಸರಿಸಮನಾಗಿ .. ಕಣ್ಣು ಕುಕ್ಕದಿದ್ದೀತೇ ಅವನಿಗೆ.. ದಿಗ್ವಿಜಯ ಯಾತ್ರೆಯಲ್ಲಿ ಶತ್ರುಗಳೊಡನೆ ಸೇರಿದ ಎಂಬುದೊಂದು ನೆವ..ಹಾಗೊಂದು ವೇಳೆ ಶತ್ರುಗಳೊಡನೆ ಸೇರಿದನೇ ಎಂದುಕೊಂಡರೂ  ತಂಗಿಯ ಗಂಡನೆಂದಾದ ಮೇಲೆ ಕರೆದು ಬುದ್ಧಿ ಹೇಳಬಾರದಿತ್ತೇ..? ಹಾಗೆ ಮಾಡಲಿಲ್ಲ ಅವನು..  ಎಲ್ಲಿಯಾದರೂ ತಂಗಿಯ ಗಂಡ ತನ್ನಿಂದ ಬಲಶಾಲಿಯೂ, ಜನಾನುರಾಗಿಯೂ ಆಗಿ ಬೆಳೆದರೆ ತಾನು ಕುಳಿತ ಸಿಂಹಾಸನ ಕದಲಿ ಬೀಳುವ ಚಿಂತೆ.. ಶತ್ರುವನ್ನು ಸದೆ ಬಡಿದಂತೆ ನನ್ನವನನ್ನು ಕೊಂದು ಬಿಟ್ಟ.. 
ನನ್ನೊಳಗಿನ ಕಣ್ಣೀರು ಇಂಗಿ ಹೋಗುವಷ್ಟು ಶೋಕಿಸಿದೆ..  ಯಾರು ನನ್ನವರು ಎಂದುಕೊಂಡಿದ್ದೆನೋ ಅವರಿಂದಲೇ ಸೋತಿದ್ದೆ. ಬದುಕಿಗಿಂತ ಸಾವೇ ಪ್ರಿಯವೆನಿಸಿತು. ಆದರೆ ಸಾವನ್ನು ನಾನೇ ಬೇಡುವುದೇ..  ಇಲ್ಲ..ಇಲ್ಲ.. ನನ್ನ ಬದುಕನ್ನು ಹಾಳು ಮಾಡಿದವನ ದೇಹ ನೆಲದಲ್ಲಿ ಚಡಪಡಿಸಿ ನರಳುವುದನ್ನು ನಾನು ಕಾಣಬೇಕು.. ನನ್ನವನ ರಕ್ತ ಹರಿಸಿದ ಅವನ ಕೈಗಳು ತುಂಡು ತುಂಡಾಗಿ ನೆಲದ ಮೇಲೆ ಬೀಳಬೇಕು.. ಹಾಂ.. ಆಗ ಶಾಂತಿ ಸಿಕ್ಕೀತು ನನಗೆ.. ಎಲ್ಲ ಕಳೆದುಕೊಂಡಿದ್ದೇನೆ ಈಗ ಈ ದ್ವೇಷದ ನೂಲೇಣಿಯೊಂದನ್ನು ಬಿಟ್ಟು.. ಇದರಿಂದಲೇ ಮೇಲೇರಬೇಕು..ಹೊರಗಿನ ಕಣ್ಣಿಗೆ ಅವನು ನನ್ನಣ್ಣ.. ಅವನಿಗೆ ಹತ್ತಿರವಾದಷ್ಟೂ ಹೊಂಚು ಹಾಕಿ ಇರಿಯುವುದು ಸುಲಭವಾದೀತೇನೋ..  ಮತ್ತೆ ತವರಿಗೆ ಮರಳಿದ್ದೆ. 

ಆಹಾ.. ಈ ರಾವಣನಾದರೂ ಎಷ್ಟೊಂದು ಚತುರ.. ಗೋಳಿಡುತ್ತಾ ಆರ್ತಳಾಗಿ ಬಂದ ನನ್ನ ಮೇಲೆ ಕನಿಕರ ತೋರಿದಂತೆ ಮಾಡಿ ದೂರದ ದಂಡಕಾರಣ್ಯದಲ್ಲಿ ರಕ್ಕಸ ಸೇನೆಯೊಂದಿಗೆ ನನ್ನನ್ನು ನೆಲೆಗೊಳಿಸಿದ. ತಂಗಿ ಕ್ರೂರ ಮೃಗಗಳ ದಾಳಿಗೋ, ಋ ಮುನಿಗಳ ಶಾಪದ ತಾಪಕ್ಕೋ ಸಿಲುಕಿ ಹಾಳಾಗಿ ಹೋಗಲಿ ಎಂಬ ಹಂಚಿಕೆ ಅವನದ್ದು.. ಇಲ್ಲದಿದ್ದರೆ ಸುವರ್ಣಮಯ ಲಂಕೆಯಲ್ಲಿ ಒಂದು ಅರಮನೆ ಕಟ್ಟಿ ನನ್ನನ್ಯಾಕೆ ಇರಗೊಡಬಾರದಿತ್ತು. ನನ್ನ ಮೇಲೆ ಜನ ಕನಿಕರ ತೋರುವುದು ಅವನಿಗೆ ಬೇಕಿರಲಿಲ್ಲ. ನನ್ನನ್ನು ಇಲ್ಲಿಯವರು ಮರೆಯುವಂತೆ ಮಾಡುವುದೇ ಅವನ ತಂತ್ರ. ನಾನು ಅವನ ವಿರುದ್ಧ ಎದ್ದು ನಿಲ್ಲದಂತೆ ನಯವಾದ ಮಾತಿನಲ್ಲಿ ನನ್ನನ್ನು ದೂರ ತಳ್ಳಿದ. 
ಕಾಲ ನನಗೂ ಬಂದೀತು.. ಇಲ್ಲೇ ಇದ್ದರೂ ರಾವಣನನ್ನು ಎದುರಿಸುವ, ಅವನನ್ನು ಕೆಡಹುವ ಜನರನ್ನು ಹುಡುಕುವುದು ನನಗೂ ಕಷ್ಟ.. ಅವನೆದುರು ನಿಲ್ಲುವ ಒಬ್ಬ ರಕ್ಕಸ ಹುಳುವೂ ನನ್ನ ಕಣ್ಣಿಗೆ ಇಲ್ಲಿಯವರೆಗೆ ಬಿದ್ದಿರಲಿಲ್ಲ. ಅಲ್ಲಾದರೆ ಯಾರಾದರೂ ಸಿಕ್ಕಾರು ಎಂಬ ದೂರದ ಆಸೆ ನನಗೆ.. ಹದಿನಾಲ್ಕು ಸಾವಿರ ರಕ್ಕಸ ಸೇನೆಯೊಡನೆ ನಾನು ಕಾನನ ಸೇರಿದೆ. ಈಗ ಒಬ್ಬಳೇ.. ಆಟ ಊಟ ಬೇಟ.. ಎಲ್ಲವೂ ನನಗೆ ಬೇಕಾದಂತೆ.. ಯಾಕೆ ಗಂಡಿಗೊಂದು ಹೆಣ್ಣಿಗೊಂದು ಎರಡು ನ್ಯಾಯ.. ಕಂಡ ಕಂಡ ಹೆಣ್ಣನ್ನೆಲ್ಲಾ ಎಳೆದು ತಂದು  ತಮ್ಮರಮನೆ ತುಂಬಿಸಿಕೊಳ್ಳುತ್ತಾ ಅವರು ಸುಖ ಸಂತೋಷದಲ್ಲಿ ಮೆರೆಯುವಾಗ ನಾನು ನನ್ನ ಮಡಿದ ಪತಿಗಾಗಿ ಎಷ್ಟೆಂದು ಅಳಲಿ.. ನನ್ನ ಮನಸ್ಸಾಗಲೀ ದೇಹವಾಗಲೀ ಯಾರ ಅಧೀನದ್ದು ಅಲ್ಲ. ನನ್ನದೇ ಅದು.. ನನಗೆ ಬೇಕಾದಂತೆ ಬದುಕಬಾರದೇಕೆ..ಸರಿಯಾದ ಜೊತೆಗಾಗಿ ಕಾನನವಿಡೀ ಸುತ್ತುತ್ತಿದ್ದೆ.ಈ ಅಲೆದಾಟಕ್ಕೆ ಇನ್ನೊಂದು ಕಾರಣವೂ ಇತ್ತು. ಇಲ್ಲಿ ಘೋರ ತಪ್ಪಸ್ಸನ್ನಾಚರಿಸುವ ಋ ಮುನಿಗಳು ಅನೇಕ. ಯಾರಾದರು ನನಗಿಂತ ಬಲಾಡ್ಯರಿದ್ದರೆ ಅವರನ್ನು ಕೆಣಕಿ ದ್ವೇಷ ಕಟ್ಟಿಕೊಂಡು ರಾವಣನಿಗೆ ಎದುರಾಗಿಸುವುದು ನನ್ನಾಸೆ. ಉಹೂಂ.. ಅವರೆಲ್ಲರ ಶಕ್ತಿಯೂ ನನ್ನನ್ನು ನೋಡಿದೊಡನೆ ಉಡುಗಿ ಹೋಗುತ್ತಿತ್ತು.ಹಾಗಾಗಿ  ಅವರಿಂದೇನು ಪ್ರಯೋಜನವಾಗುವಂತಿರಲಿಲ್ಲ.  

ಎಲ್ಲೆಲ್ಲೋ ಏಕೆ ಅಲೆಯಲಿ.. ಇಲ್ಲವೇ ನನ್ನ ಪುತ್ರ ಶಂಭೂಕ. ಇವನು ನನ್ನಣ್ಣನಂತೆಯೇ.. ಅಲ್ಲಲ್ಲ.. ಅವನಿಗಿಂತಲೂ ಪರಾಕ್ರಮಶಾಲಿಯದ ರಕ್ಕಸನಾಗಿ ಬೆಳೆದರೆ.. ಲಂಕೆಯನ್ನು ಮುತ್ತಿ ರಾವಣನನ್ನು ಕೊಂದು ನನ್ನ ಹಠ ತೀರಿಸಿಕೊಂಡು ಮಗನನ್ನು ಅಲ್ಲಿಯ ಸುವರ್ಣ ಸಿಂಹಾಸನದ ಮೇಲೆ ಕೂರಿಸಿದರೆ.. ನಾನೇ ಅವನನ್ನು ತಪಸ್ಸಿನಲ್ಲಿ ತೊಡಗುವಂತೆ ಪ್ರೇರೇಪಿಸಿದೆ. ರಾವಣನೂ ಮೊದಲಿಗೆ ಸಾಮಾನ್ಯ ರಕ್ಕಸನೇ ಆಗಿದ್ದ.. ತಪಸ್ಸಿನಿಂದ ಪಡೆದ ವರದ ಮಹಿಮೆಗಳು ಅವನನ್ನು ಪರಾಕ್ರಮಿಯನ್ನಾಗಿಸಿತು.ಯಾರಿಗೂ ನನ್ನ ಹುನ್ನಾರ ತಿಳಿಯಬಾರದೆಂದು ರಹಸ್ಯವಾಗಿ  ಬಿದಿರಿನ ಮೆಳೆಯ ನಡುವಲ್ಲಿ ಕುಳಿತು ಸಾಧನೆ ಮಾಡುವಂತೆ ಉತ್ತೇಜಿಸಿದ್ದೆ.ಅವನು ಮರಳಿ ಬರುವ ಕ್ಷಣಕ್ಕಾಗಿ ಕಾಯುತ್ತಿದ್ದೆ.

ಆದರೆ ಆದಿನ ನಾನು ಕಂಡದ್ದೇನು.. ಯಾವ ತಾಯ ಕಣ್ಣುಗಳೂ ನೋಡಬಾರದ್ದು.. ನೋಡಲಾಗದ್ದು.. ರುಂಡ ಮುಂಡಗಳೆರಡು ಬೇರ್ಪಟ್ಟು ರಕ್ತ ಮಡುವಿನಲ್ಲಿ ಅಸು ನೀಗಿತ್ತು ನನ್ನ ಕಂದಮ್ಮ.. ಉಜ್ವಲವಾಗಿ ಉರಿಯಬೇಕಿದ್ದ ಸೊಡರೊಂದು ಆರಿ ಹೋಯಿತು.. ಹಾ.. ವಿಧಿಯೇ.. ನನ್ನಂತಹ ಹತಭಾಗ್ಯಳು ಯಾರಿದ್ದಾರೆ ಲೋಕದಲ್ಲಿ..
ಆದರೆ ನನ್ನ ಕಂದನನ್ನು ಕೊಂದವರು ಯಾರೇ ಆಗಿರಲಿ ಅದರ ಮೂಲ ಕಾರಣ  ರಾವಣ. ಅವನನ್ನು ಎದುರಿಸುವ ಸಮರ್ಥ ಇಲ್ಲೆಲ್ಲೋ ಬಂದಿರಬಹುದು.. ಇಲ್ಲಿರುವ ತಾಪಸರು ನಮ್ಮನ್ನು ಕಂಡರೆ ಹೆದರಿ ಓಡುವವರು ನನ್ನ ಧೀರ ಕಂದನನ್ನು ಮುಟ್ಟಲು ಸಾಧ್ಯವೇ ಇಲ್ಲ.. ಅವನನ್ನು ಅರಸಬೇಕು ನಾನು..ಇನ್ನೆಲ್ಲವನ್ನೂ ನಾನೇ ಮಾಡಬೇಕು.. ಸಾಧ್ಯವೇ ನನ್ನಿಂದ..?  
ಎಲ್ಲಾ ಮುಗಿಯಿತು ಎಂದುಕೊಂಡಿದ್ದೆ.. ಇಲ್ಲ ಮುಗಿದಂತೆ ಅನಿಸಿದ್ದು ಮಾತ್ರ.. ನನ್ನೊಳಗೆಯೂ ಆಸೆಯ ಮೊಳಕೆಗೆ ನೀರೆರೆಯುವವರು ಇಷ್ಟು ಸುಲಭವಾಗಿ ಸಿಕ್ಕಾರು ಎಂಬ ಕಲ್ಪನೆಯೇ ನನಗಿರಲಿಲ್ಲ. ಎಂತಾ ಧೀಮಂತ ನಿಲುವಿನ ಸುಂದರಾಂಗನವ. ಎಲ್ಲವನ್ನೂ ಗೆಲ್ಲಬಲ್ಲ ಆತ್ಮವಿಶ್ವಾಸ ಅವನಲ್ಲಿದ್ದಂತೆ ತೋರಿತು.   ಹಾಗೆಂದು ದೂರ ನಿಂದು ಸುಮ್ಮನೆ ನೋಡುತ್ತಿದ್ದರೆ ಸಾಕೇ..ಅವನನ್ನು ನನ್ನ ಬಲೆಗೆ ಬೀಳಿಸಬೇಕು..ಅದೂ ಯಾರಿಗೂ ಸಂಶಯ ಬಾರದ ರೀತಿಯಲ್ಲಿ.. ಲೋಕದ ಕಣ್ಣಿಗೆ ನಾನು ಕಾಮಾತುರಳಾಗಿ ಅವನ ಮೇಲೆ ಬಿದ್ದೆ ಅನ್ನಿಸಬೇಕು. ಕಡೆಗಣ್ಣ ನೋಟಕ್ಕೆ ಮರುಳಾಗಿ ನನ್ನವನಾದರೆ ಅವನನ್ನು ರಾವಣನ ವಿರುದ್ಧ ಪ್ರೇರೇಪಿಸಿ ನನ್ನ ಹಗೆ ತೀರಿಸಿಕೊಳ್ಳಬಹುದು.. ರಕ್ಕಸಿಯೆಂದು ನನಗೆದುರಾದರೆ ರಾವಣನನ್ನು ಮುಂದಿಟ್ಟು ಯುದ್ಧ ಮಾಡಬೇಕು.. ಅದೇ ಸರಿ..  
ಸ್ವಚ್ಚವಾಗಿ ಮೈಯನ್ನು ತಿಕ್ಕಿ ತೊಳೆದೆ. ಹೊಚ್ಚ ಹೊಸ ಸೀರೆಯುಟ್ಟೆ, ಎಂದೋ ಬಿಚ್ಚಿ ಎಸೆದಿದ್ದ ಆಭರಣಗಳನ್ನು ಧರಿಸಿದೆ. ಸಿಕ್ಕುಗಟ್ಟಿದ್ದ ಕೂದಲನ್ನು ನಯವಾಗಿ ಬಾಚಿ ಜಡೆ ಹೆಣೆದೆ. ಪರಿಮಳಭರಿತವಾದ ಕಾಡ ಹೂಗಳನ್ನು ಮುಡಿಯಲ್ಲಿಟ್ಟೆ.. ತಿಳಿಜಲದ ಸರೋವರದಲ್ಲಿನನ್ನ ಮೊಗವನ್ನು ನಾನೇ ನೋಡಿಕೊಂಡು ಮೋಹಪರವಶಳಾದೆ.. ಓಹ್.. ನಾನೂ ಸುಂದರಿಯೇ.. ಅವನ ಸೌಂದರ್ಯಕ್ಕೆ ಸಾಟಿಯಾಗಬಲ್ಲ ಚೆಲುವು ನನ್ನದು.  ಅವನನ್ನು ನನ್ನಡೆಗೆ ಸೆಳೆಯಬಲ್ಲೆ ಎಂಬ ಆತ್ಮವಿಶ್ವಾಸ ಜಾಗೃತವಾಯಿತು. 
ನಯವಾಗಿ ಮಾತನಾಡಿಸಿದೆ. ಮಾತುಗಳಲ್ಲಿ ಸಿಹಿ ಜೇನು ತುಂಬಿದೆ. ಅವನದರ ಸವಿಯನ್ನು ಹೀರುವ ಭೃಂಗವಾಗಲೆಂದು ಹಾರೈಸಿದೆ. ಉಹೂಂ..ಹಾಗಾಗಲಿಲ್ಲ. ನಾಡಾಡಿಯಾದ ಆತ ಬರುವಾಗಲೇ ಚೆಂದುಳ್ಳಿ ಚೆಲುವೆಯಂತವಳೊಬ್ಬಳನ್ನು ಜೊತೆಯಲ್ಲೇ ಕರೆತಂದಿದ್ದ. ಅವನರಸಿಯಂತೆ ಅವಳು.. ನಾನು ಅವನನ್ನರಸಿಯೇ ಬಂದವಳು..ಅವಳೊಡನೆ ಅವನನ್ನು ಹಂಚಿಕೊಳ್ಳಬಲ್ಲೆ ಎಂದೆ.  ಏಕಪತ್ನೀವೃತಸ್ಥನಂತೆ ಅವ... ಅವನೇ ದೂರದಲ್ಲಿದ್ದ ತನ್ನ ಸಹೋದರನೆಡೆಗೆ ಬೆರಳು ತೋರಿದ.. ಅವನೊಪ್ಪಿದರೆ.. ಎಂದೂ ಸೇರಿಸಿದ.
 ಹುಂ.. ಇನ್ನೂ ಒಬ್ಬನಿದ್ದಾನೆಯೇ .. ನೋಡಿಬಿಡುವ ಇವನನ್ನೊಮ್ಮೆ..  ಅರ್ರೇ.. ಇವನನ್ನು ನಾನ್ಯಾಕೆ ಮೊದಲೇ ಗಮನಿಸಲಿಲ್ಲ.. ನೋಡಿದ್ದರೆ ಅವನೆಡೆಗೇ ಹೋಗುವ ಪ್ರಮೇಯವೇ ಬರುತ್ತಿರಲಿಲ್ಲ.ಆದರೇನು ಮಾಡಲಿ..ಸಂಶಯ ಬಂತೇನೋ.. ನನ್ನನ್ನೊಪ್ಪದೆ ಸತಾಯಿಸಿ ಅಣ್ಣ ಒಪ್ಪಿದರೆ ನಿನ್ನವನಾದೇನು..ಒಪ್ಪಿದ್ದಾನೆ ಎಂದು ಪ್ರಮಾಣ ಬೇಕೆನಗೆ ಎಂದ.  ಸಿಟ್ಟು ಬಂದರೂ ತಡೆದುಕೊಂಡೆ. ತಿರುಗಿ ಬೀಳಲಿದು ಸಮಯವಾಗಿರಲಿಲ್ಲ.  ಅವನೋ ನನಗೆ ಕಾಣದಿರಲಿ ಎಂದು ನನ್ನ ಬೆನ್ನಲ್ಲೇ ಏನೋ ಬರೆದು ಕಳುಹಿದ. ಮತ್ತೆ ಮರಳಿ ಬೆನ್ನು ತೋರಿಸಿ ನಿಂತೆ.  ಅವನೇನು ಬರೆದನೋ..ಎಂದು ಕೇಳಲು ತಿರುಗಿದ್ದೆನಷ್ಟೇ..ನನ್ನ ಮೈಯನ್ನಿನ್ನೂ ಇವನು ಸೋಕಿರಲಿಲ್ಲ..  ಮಿಂಚಿನಂತೆ ಕಣ್ಣು ಕೋರೈಸಿತ್ತು.. ಮರುಕ್ಷಣದಲ್ಲಿ ನನ್ನ ಕಿವಿ ಮೂಗುಗಳು ತುಂಡಾಗಿ ನೆಲದಲ್ಲಿ ಬಿದ್ದಿತ್ತು.. 
ಬರಿದೆ ಕೆಣಕಿದ್ದಕ್ಕಷ್ಟೇ ಹೆಣ್ಣೆಂದೂ ಕನಿಕರಿಸದೆ  ರಾವಣಾಸುರನ ಶೂರ ತಂಗಿಯನ್ನೇ ಈ ಸ್ಥಿತಿಗೆ ತಂದವರು ಇನ್ನು ಇವರಿಗೆ ವಿರುದ್ಧವಾದುದನ್ನು ಮಾಡಿದರೆ ಕೊಲ್ಲದೇ ಉಳಿದಾರೆ..? ಅಂದರೆ.. ಇದರರ್ಥ ಯುದ್ಧಕ್ಕೆ ಕಹಳೆ ನಾನೇ ಊದಿದ್ದೆ ಎಂದಲ್ಲವೇ..  ಇಷ್ಟರಲ್ಲೇ ಇವರ ಶಕ್ತಿ ಸಾಮರ್ಥ್ಯಗಳ ಅಳತೆ ತಿಳಿಯುವುದು ಹೇಗೆ? ನಮ್ಮವರನ್ನೆಲ್ಲಾ ಯುದ್ಧಕ್ಕೆ ಕಳುಹಿಸಿದೆ. ಎಲ್ಲರನ್ನೂ ಹರಿತ ಬಾಣಗಳಿಂದ ಕೊಂದರು. ಅವರು ಯುದ್ಧ ಮುಗಿಯಿತು ಎಂದುಕೊಂಡರೇನೋ.. ನನಗಿದು ಪ್ರಾರಂಭವಷ್ಟೇ.. ರಾವಣನನ್ನು ಇವರದೆರು ನಿಲ್ಲಿಸಬೇಕಿನ್ನು.. ಇವರನ್ನು ಕೊಲ್ಲಲೋ...ಕೊಲ್ಲಲ್ಪಡಲೋ.. ಯಾವುದಾದರೂ ಸರಿ.. ಜಯ ನನ್ನದೇ.. 
ಅಣ್ಣನೆದುರು ಸುಮ್ಮನೆ ಕಿವಿ  ಮೂಗು ಕಳೆದುಕೊಂಡು ಅತ್ತರೆ ಅವನೇನು ತಂಗೀ ಎಂದು ಬಾಚಿ ತಬ್ಬಿ, ಕಣ್ಣೀರೊರೆಸುವುದಿಲ್ಲ.. ಅವನನ್ನು ಮೇಲೆತ್ತಿಕಟ್ಟಬೇಕಾದರೆ ಅವನೊಳಗಿರುವ ಕಾಮವೋ ಕ್ರೋಧವೋ ಬುಗಿಲೇಳುವಂತೆ ಮಾಡಬೇಕು.. ಅದು ಅರಮನೆಯ ಒಳ ಕೋಣೆಗಳಲ್ಲಿ ಕುಳಿತು ರಹಸ್ಯ ಮಾತುಗಳಲ್ಲಿ ಆಡಬೇಕಾದದ್ದಲ್ಲ.. ರಾಜ ಸಭೆ ನಡೆಯುತ್ತಿರುವಾಗ ಎಲ್ಲರೆದುರಿನಲ್ಲೇ ಆಗಬೇಕು.. ನನ್ನನ್ನು ತಣ್ಣಗಿನ ಮಾತುಗಳಿಂದ ಸಮಾಧಾನಗೊಳಿಸಿ ಮೂಲೆಗುಂಪು ಮಾಡುವ ಮೊದಲೇ ಈ  ಅವಮಾನವನ್ನು ನನ್ನೊಬ್ಬಳ ಅವಮಾನವೆಂದು ಹೇಳಿಕೊಳ್ಳಬಾರದು.. ರಕ್ಕಸ ಕುಲಕ್ಕಾದ ಅವಮಾನವೆಂದೇ ಎತ್ತಿ ಹಿಡಿಯಬೇಕು.. ಲಂಕೆಯ ಮನೆ ಮನೆಯ ಮಗುವೂ ಈ ವಿಷಯವನ್ನು ಅರಿಯಬೇಕು.. ಒಬ್ಬೊಬ್ಬ ರಕ್ಕಸನೂ ದಿನ ನಿತ್ಯ ಇದನ್ನು ರಾವಣನಿಗೆ ನೆನಪಿಸಬೇಕು.. ರಾವಣನ ಗುಣಗಳೂ ದೋಷಗಳೂ ನನಗಲ್ಲದೇ ಇನ್ಯಾರಿಗೆ ತಿಳಿದಿರಲು ಸಾಧ್ಯ.. ಚೆಂದದ ಹೆಣ್ಣುಗಳನ್ನೆಲ್ಲಾ ಹಾಸಿಗೆಗೆಳೆಯುತ್ತಿದ್ದನವ.  ಅಲ್ಲೊಬ್ಬಳಿದ್ದಳಲ್ಲಾ ಚೆಂದುಳ್ಳಿ ಹೆಣ್ಣು ..  ಅವನರಸಿಯೆಂದು ಬೀಗುತ್ತಿದ್ದವಳು.. ನನ್ನ ಈ ಸ್ಥಿತಿಯನ್ನು ನೋಡಿ ನಕ್ಕವಳು.. ಅವಳನ್ನೇ ಮುಂದೊಡ್ಡಬೇಕೀಗ.. 
ಸುರಿಯುತ್ತಿರುವ ನೆತ್ತರ ಧಾರೆಯೊಂದಿಗೇ ತುಂಬಿದ ರಾಜ ಸಭೆಗೆ ನುಗ್ಗಿದೆ. ರಾವಣ ತಡೆಯುವ ಮೊದಲೇ ಎಲ್ಲರಿಗೂ ಕೇಳುವಂತೆ ಬೊಬ್ಬಿಟ್ಟೆ.. ರಕ್ಕಸ ಕುಲದ ಮಾನ ಕಾಪಾಡುವುದೀಗ ನಿನ್ನ ಕೈಯಲ್ಲಿದೆ ಎಂದೆ.ತಪ್ಪು ನನ್ನದೇ ಇರಬಹುದೇ ಎಂಬಂತೆ ಕಣ್ಣುಗಳಿಂದ ತಿವಿದ. ನಾಡಾಡಿಯ ಪಕ್ಕದಲ್ಲಿದ್ದ ಸುಂದರ ತರುಣಿಯನ್ನು ವರ್ಣಿಸಿದೆ.  

ಶಿಲೆಯಂತೆ ಕುಳಿತಿದ್ದ ರಾವಣನಲ್ಲೀಗ ಸಂಚಲನ.. ಕೂಡಲೇ ಎದ್ದು ನಿಂದ.. 

ಮತ್ತಿನದ್ದೆಲ್ಲಾ ಬರಿದೆ ರಾಮಾಯಣ.. 

ಇಂತ ಸುಂದರ ದೃಶ್ಯವೊಂದನ್ನು ನೋಡುವಷ್ಟು ನನ್ನ ಕಣ್ಣುಗಳು ಪುಣ್ಯ ಮಾಡಿದ್ದವೆಂದು ಯಾಕೋ ನಂಬುವುದಕ್ಕೇ ಕಷ್ಟವಾಗುತ್ತಿದೆ. ಪೆಟ್ಟಿನ ಮೇಲೆ ಪೆಟ್ಟು ಬಿದ್ದು ಈ ಸಂತಸಕ್ಕೆ ತೆರೆದುಕೊಳ್ಳಲು ಯಾಕೋ ಭಯವೆನಿಸುತ್ತಿದೆ. ಆದರೂ ಸಿಕ್ಕಷ್ಟನ್ನು ಕಣ್ಣುಗಳಲ್ಲಿ ತುಂಬಿಕೊಳ್ಳುವ ಬಯಕೆ..  ಯುದ್ಧರಂಗದಲ್ಲಿ ಕಡಿದುರುಳಿದ ಬಾಹುಗಳ, ಚೆಲ್ಲಾಡಿದ ನೆತ್ತರ ನಡುವಿನಲ್ಲಿ ರಾವಣನ ದೇಹ... ಹಸಿ ರಕ್ತದ ವಾಸನೆ ರಕ್ಕಸಿಯಾದ ನನಗೆ ಪ್ರಿಯವೇ.. ಅದರಲ್ಲೂ ನನ್ನ ಬದುಕನ್ನೇ ನಾಶ ಮಾಡಿದ ರಾವಣನ ನೆತ್ತರು.. ನೋಡಿದಷ್ಟೂ ಸಾಲದೆನಿಸಿತು.. ಇದೇ ಅಲ್ಲವೇ ನಾನು ಬಯಸಿದ ಭಾಗ್ಯ.. ಹ್ಹ..ಹ್ಹಹ್ಹ॒..   ಮೆಲ್ಲಗೆ ತುಟಿಗಳಲ್ಲಿ ನುಗ್ಗಿದ  ನಗೆ ಬರು ಬರುತ್ತಾ  ಅಟ್ಟಹಾಸವಾಯಿತು.. ದುಃಖದ್ದೋ ಸುಖದ್ದೋ ತಿಳಿಯದ ಕಣ್ಣೀರ ಪರದೆ ಎಲ್ಲವನ್ನೂ ಮಬ್ಬಾಗಿಸಿತು..ಆದರೂ  ನಾನು ನಗುತ್ತಲೇ ಇದ್ದೆ.. !! 


1 comment:

  1. ಆಹಾ.. ಹೀಗೂ ಯೋಚಿಸಬಹುದಲ್ಲವೇ ರಾಮಾಯಣವನ್ನು. ಮತ್ತಿನದೆಲ್ಲ ಬರಿದೆ ರಾಮಾಯಣ ಎನ್ನುವಾಗ ಇಡೀ ರಾಮಾಯಣದಲ್ಲಿ ಅವಳಿಗೆ ಯೋಚನೆಯಿದ್ದದು ಅದರ ಕೊನೆ ಮಾತ್ರ ಎನ್ನುವ ಚಿತ್ರಣ ಕಣ್ಣಿಗೆ ಕಟ್ಟುತ್ತದೆ. ಕಥೆ ಎದೆ ತಟ್ಟಿತು. ಉತ್ತಮ ನಿರೂಪಣೆ. ಸುಂದರ ಚಿತ್ರಗಳ ಸಹಿತ. ಅಭಿನಂದನೆಗಳು.
    ಕೆ.ಎ.ಶರ್ಮ.

    ReplyDelete