Pages

Total Visitors

Tuesday, April 26, 2016

ಸತ್ತವರನ್ನು ಬದುಕಿಸುವ ಹಕ್ಕಿ


ಶಾಲೆ ಬಿಟ್ಟು ಮನೆಗೆ ಬಂದ ಕೂಡಲೇ ಅವಸರ ಅವಸರವಾಗಿ ತಿಂಡಿ ತಿಂದು ಮನೆಯ ಹೊರಗೆ ಕಾದಿರುತ್ತಿದ್ದ ಗೆಳತಿ ನೈನಾಳ ಜೊತೆ  ಗದ್ದೆ ಬಯಲಿಗೆ ಆಟವಾಡಲು ಹೋಗುತ್ತಿದ್ದೆ. ವಠಾರದ ಹುಡುಗರ ಗುಂಪು ಅಲ್ಲಿ ಚಿಣ್ಣಿ ಕೋಲು ಆಡುತ್ತಿತ್ತು. ಹಾಗಂತ ನಾನು ಮತ್ತು ನೈನಾ ಅದರ ವೀಕ್ಷಕರಾಗಿ ಹೋಗುತ್ತಿದ್ದುದೇನಲ್ಲ. ಅಲ್ಲಿ ತಲುಪುವವರೆಗೆ ಗೆಳತಿಯರಾಗಿ ಕೈ ಹಿಡಿದು ನಡೆಯುತ್ತಿದ್ದ ನಾವು ಅಲ್ಲಿಗೆ ತಲುಪಿದ ಕೂಡಲೆ ವಿರುದ್ಧ ಬಣಗಳ ಆಟಗಾರರಾಗುತ್ತಿದ್ದೆವು.
ಆಟ ಬಹಳ ಬಿರುಸಿನಿಂದ ಸಾಗಿತ್ತು. ನಾನು ಹಾರಿಸಿ ಹೊಡೆದ ಕೋಲು ಗದ್ದೆಯ ಬದಿಯ ಬೇಲಿಯ ಸಾಲಿಗೆ ಬಿತ್ತು. ಕೂಡಲೇ ಪರ ಪರ ಸದ್ದಿನೊಂದಿಗೆ ಹೊರ ಬಂದ ಹಕ್ಕಿಯೊಂದು ರೆಕ್ಕೆಗಳನ್ನು ಬಡಿಯುತ್ತಾ ಹೊರ ಹಾರಿತು.  ನೋಡೇ  ಹಕ್ಕಿ ಎಂದು ಗೆಳತಿಯನ್ನು ಕರೆದು ಅದು ಹಾರಿದ ಕಡೆಗೆ ಕೈ ತೋರಿದೆ. ಯಾಕೋ ಮಾತಿಲ್ಲದೆ ಮೌನವಾದಳು.
ಆಟ ಎಷ್ಟೇ ರಸವತ್ತಾಗಿರಲಿ ಸಂಜೆ ಆರು ಗಂಟೆಯೊಳಗೆ ಮನೆ ಸೇರದಿದ್ದರೆ ಕೈಯಲ್ಲಿ ಬೆತ್ತ ಝಳಪಿಸುತ್ತಾ ಬರುವ ಅಮ್ಮ ಕಾಣಿಸಿಕೊಳ್ಳುವ ಭಯವಿದ್ದ ಕಾರಣ ಆಟ ನಿಲ್ಲಿಸಿ ಮನೆಯ ಕಡೆ ಹೊರಟೆ.  ಅಲ್ವೇ.. ಆಗ ಹಕ್ಕಿ ತೋರಿಸಿದರೆ ಮಾತೇ ಆಡ್ಲಿಲ್ವಲ್ಲೇ ಯಾಕೇ? ಎಂದೆ.
 ನಿಂಗಷ್ಟು ಬುದ್ಧಿ ಬೇಡ್ವೇನೇ.. ಅದು ಅದೃಷ್ಟದ ಹಕ್ಕಿ. ಅದನ್ನು ನೋಡಿದವರಿಗೆ ಅದೃಷ್ಟ ಬರುತ್ತೆ. ಆದ್ರೆ ಅವರು ಹಕ್ಕಿ ನೋಡಿದ್ದನ್ನು ಯಾರಿಗೂ ಹೇಳಬಾರದು. ನೀನು ನೋಡಿಯೂ ಪ್ರಯೋಜನ ಇಲ್ಲದೇ ಹೋಯ್ತು, ನೀನು ಹೇಳದೇ ಇದ್ದಿದ್ದರೆ ಇವತ್ತು ನಿಮ್ಮ ಟೀಮ್ ಗೆಲ್ತಿತ್ತು ಗೊತ್ತಾ  ಎಂದಳು.
ಅಚ್ಚರಿಯಿಂದ ಅವಳು ಹೇಳುವುದನ್ನು ಕೇಳಿಸಿಕೊಂಡ ನಾನು ಆ ದಿನ ಕಳೆದುಕೊಂಡ ನನ್ನ ಅದೃಷ್ಟಕ್ಕಾಗಿ ಮರುಗಿದೆ.
ಮರುದಿನ ಶಾಲೆಗೆ ನೈನಾಳ ಜೊತೆಗೆ ಹೊರಟರೂ ನನ್ನ ಕಣ್ಣು ಹಾದಿ ಬದಿಯ ಬೇಲಿ, ಮರ ಗಿಡ, ಪೊದರುಗಳ ನಡುವೆ ನುಸುಳಿ ನುಸುಳಿ ಮರಳುತ್ತಿತ್ತು. ಎಲ್ಲಿಯಾದರೂ ಅದೃಷ್ಟದ ಹಕ್ಕಿ ಮತ್ತೊಮ್ಮೆ ಕಂಡರೆ, ಇವತ್ತು ಶಾಲೆಯಲ್ಲಿ ಹೋಮ್ವರ್ಕ್ ಮಾಡದಿದ್ದರೂ, ಸರಿಯುತ್ತರ ಹೇಳದಿದ್ದರೂ ಟೀಚರುಗಳು ಬಯ್ಯದಂತೆ ನನ್ನ ಅದೃಷ್ಟ ಕೆಲಸ ಮಾಡೀತೇನೋ ಎಂಬ ದೂರದ ಆಸೆ. ಸ್ವಲ್ಪ ದೂರ ನಡೆಯುತ್ತಲೇ ನೈನಾ  ನೋಡೇ ನೀನು ನನ್ನ ಬೆಸ್ಟ್ ಫ್ರೆಂಡ್ ಅಂತ ನಿಂಗೊಂದು ಗುಟ್ಟಿನ ಸುದ್ದಿ ಹೇಳ್ತೀನಿ, ಆದ್ರೆ ಅದನ್ನು ನೀನ್ಯಾರಿಗೂ ಹೇಳಬಾರದು ಎಂದು ಪ್ರಾಮಿಸ್ ಮಾಡಿಸಿಕೊಂಡಳು.
ಅವಳು ಮಾತು ಶುರು ಮಾಡುವುದನ್ನೇ ಕಾದೆ.
ನೋಡೇ, ಯಾರಾದ್ರೂ ಸತ್ರೆ ಏನ್ಮಾಡ್ತಾರೆ ಹೇಳು ಅಂದಳು.
ಆವತ್ತು ಹಿಂದಿನ ಮನೆಯ ತಾತ ಸತ್ತಿದ್ದಾಗ  ದೂರದಲ್ಲೆಲ್ಲೋ ಕೊಂಡೊಯ್ದು  ಸುಟ್ಟು ಹಾಕಿದ ಸುದ್ದಿಯನ್ನು ಕೇಳಿಸಿಕೊಂಡಿದ್ದೆ. ನನಗೇನೋ ಅವರೇನು ಮಾಡ್ತಾರೆ ಅಂತ ನೋಡುವ ಕುತೂಹಲ ಇದ್ದರೂ ಅಮ್ಮ ಹೋಗಲು ಬಿಟ್ಟಿರಲಿಲ್ಲ. ಮಕ್ಕಳೆಲ್ಲಾ ಅಲ್ಲಿಗೆ ಹೋಗಬಾರದು ಎಂದು ತಡೆದಿದ್ದಳು.
ಹಾಗಾಗಿ ನಾನು ಕೇಳಿ ತಿಳಿದಿದ್ದ ಸುದ್ದಿಯನ್ನೇ ಅವಳಿಗೆ ಹೇಳಿದೆ.
ಹೂಂ ಎಂದು ಒಪ್ಪಿದಂತೆ ತಲೆದೂಗಿಸಿ ಮಾತು ಮುಂದುವರಿಸಿದಳು.  ಆದ್ರೆ ಅವರನ್ನು ಮತ್ತೆ ಬದುಕಿಸಬಹುದು ಅಂತ ನಿಂಗೆ ಗೊತ್ತಾ ಎಂದಳು.
ಹೌದಾ.. ಎಂದು ಬಾಯ್ತೆರೆದು ನಿಂತೆ.  ಯಾರಿಗೂ ಗೊತ್ತಿಲ್ಲದಂತಹ ರಹಸ್ಯವೊಂದು ನನ್ನೆದುರು ಅನಾವರಣಗೊಳ್ಳಲಿತ್ತು.
ಹೂಂ ಕಣೇ.. ನಿಜವಾಗಿಯೂ.. ನಿನ್ನೆ ನೋಡಿದ್ದ ಅದೃಷ್ಟದ ಹಕ್ಕಿ ಗೊತ್ತಲ್ಲಾ .. ಆ ಹಕ್ಕಿಯಿಂದ ಮನುಷ್ಯರನ್ನು ಬದುಕಿಸಬಹುದು ಎಂದಳು.
ನನಗೀಗ ನನ್ನ ಗೆಳತಿ ಪ್ರಪಂಚದ ಅತ್ಯದ್ಭುತ ವ್ಯಕ್ತಿಯಂತೆ ಕಾಣಿಸತೊಡಗಿದಳು. ಮತ್ತು ಅವಳು ಹೇಳ ಹೊರಟಿರುವ ವಿಷಯದ ಗಹನತೆಯೂ ನನ್ನರಿವಿಗೆ ಬಂದು ಗಂಭೀರ ಕೇಳುಗಳಾದೆ.
ಆ ಅದೃಷ್ಟದ ಹಕ್ಕಿ ಮೊಟ್ಟೆ ಇಟ್ಟು ಮರಿ ಮಾಡಿರುವ ಸಮಯದಲ್ಲಿ .. ಅಂದ್ರೆ ಆ ಹಕ್ಕಿ ಮರಿಗಳಿನ್ನೂ  ಹಾರಲು ಕಲಿತಿರಬಾರದು. ಅಮ್ಮ ಹಕ್ಕಿ ಆಹಾರ ತರೋದಿಕ್ಕೆ ಹೊರಗೆ ಹೋಗಿ ಸಂಜೆ ಬರುತ್ತೆ. ಅದು ಬರುವ ಸ್ವಲ್ಪ ಮೊದಲಷ್ಟೇ ಗೂಡಿನ ಹತ್ತಿರ ಹೋಗಿ ಆ ಮರಿಗಳನ್ನು ಕೊಲ್ಲಬೇಕು ಎಂದಳು.
ಅಯ್ಯೋ.. ಯಾಕೇ ಆ ಹಕ್ಕಿ ಮರಿಗಳನ್ನು ಕೊಲ್ಲೋದು? ಹಾಗೇ ಆ ಮರಿಗಳು ಸತ್ರೆ ನಮಗೆ ಅದೃಷ್ಟದ ಹಕ್ಕಿ ನೋಡೋದಕ್ಕೆ ಸಿಗುತ್ಯೇನೇ ಮತ್ತೆ ಎಂದು ನನ್ನ ದೂರದೃಷ್ಟಿಯ ಬುದ್ಧಿವಂತಿಕೆಯನ್ನು ತೋರಿಸಿದೆ.  ಹೇಳೋದನ್ನು ಪೂರಾ ಕೇಳು ಎಂದು ಬಯ್ದಳು.
ಸರಿ ಎಂದು ತಲೆಯಲುಗಿಸುತ್ತಾ ಅವಳ ಮಾತುಗಳಿಗೆ ಕಿವಿಗೊಟ್ಟೆ.
ಆ ಮರಿಗಳನ್ನು ಕೊಲ್ಲುವಾಗ ಸ್ವಲ್ಪ ಅಂದರೆ  ಒಂದು  ಸೂಜಿಯ ಮೊನೆಯಷ್ಟೂ ಹಕ್ಕಿ ಮರಿಗಳಿಗೆ ಗಾಯಗಳಾಗಬಾರದು ಹಾಗೆ ಕೊಲ್ಲಬೇಕು ಗೊತ್ತಾಯ್ತಾ.. ಮತ್ತೆ ನಾವಲ್ಲಿಯೇ ಅಡಗಿ ಕೂರಬೇಕು. ಅದರ ಅಮ್ಮ ಗೂಡಿಗೆ ಬಂದು ಮರಿಗಳು ಸತ್ತು ಬಿದ್ದಿದ್ದನ್ನು ನೋಡುತ್ತೆ. ಮರಿಗಳನ್ನು ಪರೀಕ್ಷಿಸಿ ಎಲ್ಲೂ ಗಾಯಗಳಿಲ್ಲ ಅಂತಾದರೆ ಗೂಡು ಬಿಟ್ಟು ವೇಗವಾಗಿ ಹಾರುತ್ತಾ ಹೋಗುತ್ತದೆ. ಅದು ಹೋಗಿ ಬರುವಾಗ ಅದರ ಕೊಕ್ಕಿನಲ್ಲಿ ಒಂದು ಮರದ ಕಡ್ಡಿ ಇರುತ್ತದೆ. ಆ ಕಡ್ಡಿಯನ್ನು ಅದು ಮರಿಗಳ ಮೂಗಿನ ಹತ್ತಿರ ಇಟ್ಟರೆ ಸಾಕು ಮರಿಗಳು ಜೀವ ಆಗಿ ಏಳುತ್ತವೆ. ಯಾಕೆಂದರೆ ಅದು ಸಂಜೀವಿನಿ ಕಡ್ಡಿ. ಅದರ ಕೆಲಸ ಮುಗಿದ ಕೂಡಲೇ ಅದು ಹೊರಗೆ ನೋಡುತ್ತದೆ. ಆಗಲೇ ಕತ್ತಲಾಗಿರುತ್ತೆ ಅಲ್ವಾ.. ಹಾಗಾಗಿ ಅದು ಆ ಕಡ್ಡಿಯನ್ನು ಗೂಡಲ್ಲೇ ಇಟ್ಟುಕೊಳ್ಳುತ್ತದೆ. ಬೆಳಗಾದ ನಂತರ ಮತ್ತೆ ಎಲ್ಲಿಂದ ತಂದಿತೋ ಅಲ್ಲಿಗೆ ತೆಗೊಂಡೋಗಿ ಇಡುತ್ತದೆ.  ನಾವು ಆ ಹಕ್ಕಿಗಳು ಮಲಗಿದ ಮೇಲೆ ಮೆಲ್ಲನೆ  ಅದರ ಗೂಡಿನಿಂದ ಆ ಕಡ್ಡಿಯನ್ನು ತರಬೇಕು.  ಆ  ಕಡ್ಡಿಯಿಂದ ಯಾವುದೇ ಸತ್ತ ಮನುಷ್ಯರನ್ನು ಬದುಕಿಸಬಹುದು ಗೊತ್ತಾ ಎಂದಳು. 
ಕಥೆ ಬಲು ಆಕರ್ಷಣೀಯವಾಗಿ ನಿಮಗೂ ಅಂತಹಾ ಹಕ್ಕಿಯನ್ನು ನೋಡುವ ಅದೃಷ್ಟ ಒಲಿದರೆ ಎಂಬಾಸೆ ಮೂಡಿರಬೇಕಲ್ಲ.   ಆದರೆ ನನಗೆ ನಿಶ್ಚಿತವಾಗಿಯೂ ಗೊತ್ತಿದೆ ನೀವು ಆ ಹಕ್ಕಿಯನ್ನು ನೋಡಿದ ಅದೃಷ್ಟವಂತರೇ ಎಂದು. ಯಾಕೆಂದರೆ ಭಾರತದ ಎಲ್ಲಾ ಕಡೆಯೂ ಸಾಮಾನ್ಯವಾಗಿ ಕಾಣುವ ಕನ್ನಡದದಲ್ಲಿ ಕೆಂಭೂತ ಎಂದೂ ಇಂಗ್ಲೀಷಿನಲ್ಲಿ greater coucal or crow pheasant ಎಂದು ಕರೆಯಲ್ಪಡುವ ನಮ್ಮ ನಿಮ್ಮ ಮನೆಯ ಸುತ್ತ ಮುತ್ತ ಕಾಣಸಿಗುವ  ಹಕ್ಕಿ ಇದು. ಸಾಧಾರಣ ಕಾಗೆಯಷ್ಟೇ ಗಾತ್ರದ ಶಕ್ತಿಶಾಲಿಯಾದ ಮಣ್ಣಿನ ಕೆಂಪು ಬಣ್ಣದ ರೆಕ್ಕೆಗಳನ್ನು ಹೊಂದಿದ ಆಕರ್ಷಕವಾದ ಕೆಂಪನೆಯ ಕಣ್ಣನ್ನು ಹೊಂದಿದ ಹಕ್ಕಿ. ಎತ್ತರೆತ್ತರದ ಮರಗಳಲ್ಲಿ ಗೂಡು ಕಟ್ಟಿ ಮೊಟ್ಟೆಗಳನ್ನಿಡುತ್ತವೆ. ಬೇರೆ ಹಕ್ಕಿಗಳ ಮೊಟ್ಟೆಗಳನ್ನು ಕದಿಯುವುದರಲ್ಲಿ ಚಾಣಾಕ್ಷ್ಯ. ಹುಳ ಹುಪ್ಪಟೆಗಳು, ಸಣ್ಣ ಸರೀಸೃಪಗಳು, ಬಸವನ ಹುಳ ಇಂತವೆಲ್ಲಾ ಇವುಗಳ ಬ್ರೇಕ್‌ಫಾಸ್ಟ್, ಡಿನ್ನರ್ ಸಪ್ಪರ್ ಗಳು.  ಬೆಳಗ್ಗಿನ ಹೊತ್ತು ಸೋಮಾರಿಗಳಂತೆ ಬಿಸಿಲಿಗೆ ಮೈಯೊಡ್ಡಿ ಕುಳಿತಿರುತ್ತವೆ. ಇನ್ನೊಂದು ಅಚ್ಚರಿಯ ವಿಷಯವೆಂದರೆ ಈ ಹಕ್ಕಿಗಳದ್ದು ಅನುರೂಪದ ದಾಂಪತ್ಯ. ಒಂದು ಹೆಣ್ಣು ಒಂದು ಗಂಡು ಹೇಗೋ ಏನೋ ಹೊಂದಿಕೊಂಡು ಎನ್ನುವ ಕವಿವಾಣಿ ಇವರಿಗೂ ಅನ್ವಯವೇ. ಜೊತೆಯಲೀ ಜೊತೆ ಜೊತೆಯಲೀ ಅಂತ ಹಾಡಿಕೊಂಡು ಒಟ್ಟಿಗೆ ಸುತ್ತುವ ಪ್ರೇಮಿಗಳೇ ಇವು. 
ಅಯ್ಯೋ ಈ ಹಕ್ಕಿ ನಮಗೂ ಗೊತ್ತು ಅಂತ ನೀವೂ ಈಗ ಸಂಜೀವಿನಿ ಕಡ್ಡಿಗಾಗಿ ಹುಡುಕಾಟಕ್ಕೆ ಹೊರಟಿರಾ.. ಸ್ವಲ್ಪ ನನ್ನ ಕಥೆಯ ಉಪಸಂಹಾರ ಕೇಳಿ ಹೋಗಿ. 
ತುಂಬಾ ಸಮಯಗಳವರೆಗೆ ಗೆಳತಿ ಹೇಳಿದ ಕಥೆಯನ್ನು  ನಂಬಿ ದಾರಿಯಲ್ಲಿ ಬಿದ್ದ ಸ್ವಲ್ಪ ಭಿನ್ನ ಎಂದು ಕಾಣಿಸಿದ ಒಣಗಿಲು  ಕಡ್ಡಿಗಳನ್ನು ಬ್ಯಾಗಿನಲ್ಲಿಟ್ಟುಕೊಂಡು ಮನೆಗೆ ಬರುತ್ತಿದ್ದೆ.  ಇದು ಸಂಜೀವಿನಿ ಕಡ್ಡಿ ಇರಬಹುದೇ ಎಂದು ತಿಳಿಯುವ ಪ್ರಯೋಗಕ್ಕಾಗಿ  ಕೆಲವು ಇರುವೆಗಳನ್ನು ಸಾಯಿಸಿ  ಅದರ ಮುಖದೆದುರು ಕಡ್ಡಿ ಹಿಡಿದು ಜೀವ ಬರುವುದೇನೋ ಎಂದು ಕಾಯುತ್ತಿದ್ದೆ. ಒಮ್ಮೆ ಸಂಜೀವಿನಿ ಕಡ್ಡಿ ಕೈಗೆ ಸಿಕ್ಕಿದರೆ ಸತ್ತವರನ್ನೆಲ್ಲಾ ಬದುಕಿಸುವ ಕನಸು ಕಾಣುತ್ತಿದ್ದೆ. ಒಮ್ಮೆ ಬ್ಯಾಗಿನಲ್ಲಿ ನನ್ನ ಪುಸ್ತಕವನ್ನು ತೆಗೆಯಲು ಕೈ ಹಾಕಿದ ಅಮ್ಮನಿಗೆ ಸಿಕ್ಕಿದ್ದು ಈ ಕಸ ಕಡ್ಡಿಗಳ ರಾಶಿ.
ಆ ದಿನ ಜೀವ ಬಂದೇ ಬಿಟ್ಟಿತು..  ನಾನು ಸಾಯಿಸಿದ ಇರುವೆಗಳಿಗಲ್ಲ.. ಅಮ್ಮನ ಕೈಯಲ್ಲಿದ್ದ ಬೆತ್ತಕ್ಕೆ..!!