Pages

Total Visitors

Saturday, October 16, 2010

Asthamaana.. A Poem by Mr.Ram Naresh Manchi

 

Asthamaana.


ಆ.......ಸಂಜೆ
ಹೋಗಿದ್ದೆ ವಿಹಾರಕ್ಕೆಂದು
ಕಡಲ ತೀರಕ್ಕೆ ....
ಭೋರ್ಗರೆವ ಭವ್ಯ ಕಡಲು
ಮುಸ್ಸಂಜೆಯ ಹೊಂಗಿರಣ
ಮರಳ ರಾಶಿಯಂತೂ
ಚಿನ್ನದಂತೆ ಅರಶಿನ ......!!!

ಸದ್ದು ಗದ್ದಲವಲ್ಲವದು
ಮುದ್ದು ಮಕ್ಕಳ ಆಟ,ಕಿರುಚಾಟ
ಇತ್ತಿಂದತ್ತ ,ಅತ್ತಿಂದಿತ್ತ
ಸುತ್ತಿ ಸುಳಿವ, ಮನಸೆಳೆವ
ಬಣ್ಣ ಬಣ್ಣದ ಹಕ್ಕಿಗಳು ...!!!

ಹಕ್ಕಿಯೊಂದೆನ್ನ ಕಂಡು
ಕಿರುನಗೆಯ ಸೂಸಲು
ಒಹ್, ನನಗಿನ್ನೇನು ....
ಸ್ವರ್ಗಕ್ಕೆ ಒಂದೇ ಗೇಣು ....!!!

ಆ ಕಿರುನಗು
ನನಗಲ್ಲ.......
ಹಿಂದುಗಡೆ ಇದ್ದ
ಆ....... ಅವನಿಗೆ
ಎಂದು ತಿಳಿದಾಗ
ಮುಸ್ಸಂಜೆ ಕಳೆದು ಕತ್ತಲಾಯಿತು ....!!!

Sunday, October 10, 2010

ಪಾರ್ಕಿನೊಳಗೊಂದು ಕಲ್ಲು ಬೆಂಚು ! A poem by Mrs.Anitha Naresh Manchi


ಪಾರ್ಕಿನೊಳಗೊಂದು ಕಲ್ಲು ಬೆಂಚು !
by Mrs.Anitha Naresh Manchi.
ನಾ ಒಂಟಿಯೇನಲ್ಲ .....
ನೆನಪುಗಳಿಲ್ಲಿ ಜೊತೆಯಾಗಿ ಗರಿಬಿಚ್ಚಿದೆ..
ಇಲ್ಲೇ.... ನಲ್ಲ ನಲ್ಲೆಯರು ಒಂದಾಗಿ
ಬೆರಳುಗಳ ಹೆಣೆದು ಕಣ್ಣೊಳಗೆ ಕಣ್ಣಿಟ್ಟು
ನಸು ನಾಚಿದ್ದು.....
ಪುಟ್ಟ ಕಂದ ಮೊದಲ ಹೆಜ್ಜೆಯಿಟ್ಟು
ನಲಿದಾಗ ಕಿಲಿ ಕಿಲಿ ಗೆಜ್ಜೆಯ ಸದ್ದು ನಕ್ಕಿದ್ದು....
ವೃದ್ಧ ಜೀವಗಳು ಆಸರೆಗಾಗಿ
ನನ್ನನರಸಿದ್ದು.....
ಒಬ್ಬಂಟಿ ತಾಯಿ ನನ್ನನಪ್ಪಿ ಬಿಕ್ಕಿದ್ದು...
ಹೀಗೆ ಎಷ್ಟೋ ಕತೆಗಳಿಲ್ಲಿಯೇ ಹುಟ್ಟಿದ್ದು...
ಇನ್ನೆಷ್ಟೋ ಹೆಸರಿಲ್ಲದೆ ಮಾಯವಾಗಿದ್ದು....

Rangavalli-A poem by Mrs.Anitha Naresh Manchi

ರಂಗವಲ್ಲಿ

ಗುಡಿಸಿ ಸಾರಿಸಿದ ಅಂಗಳದಿ
ಮೆಲ್ಲನಿಟ್ಟಲು ಚುಕ್ಕಿ
ನಕ್ಷತ್ರದಂತೆ ಹೊಳೆಯಿತದು
ಕಣ್ಣಲ್ಲಿ ಪಳಪಳಿಸಿ
ಯಾರನ್ನೋ ಧೇನಿಸಿದಂತೆ .....
ಉಹುಂ ..ಇಲ್ಲಲ್ಲ..ಇಲ್ಲಿ ..
ಎಂದು ಮನದಲ್ಲೇ ಕೂಡಿ ಕಳೆದು
ಇತ್ತಳು ಒಂದೊಂದು ಚುಕ್ಕಿಗೂ
ಸಮಾನ ಅಂತರ ....
ಸುಮ್ಮನೆ ನಿಂತೊಮ್ಮೆ ನೋಡಿ
ಹಿಮಧಾರೆಯ ಸುರಿಸಿದಳು
ಕಡಿದು ಬಿದ್ದ ಸಂಬಂಧಗಳ
ಮತ್ತೊಮ್ಮೆ ಜೋಡಿಸಿದಂತೆ......
ಮೂಡಿದ ಸುಂದರ ಚಿತ್ತಾರವ ನೋಡಿ
ಮೆತ್ತಗೆ ತನ್ನ ಹೊಟ್ಟೆ ಸವರಿ
ನಸುನಕ್ಕು ತಿರುಗಿದಳು
ಅದ ತುಳಿವ ಪುಟ್ಟ ಬಂಗಾರದ
ಪಾದಗಳು ಕಂಡಂತಾಗಿ
ಒಳ ಸರಿದಳವಳು ಒಂದು ಕನಸಿನಂತೆ......