ಲೇಖಕಿ : ಅನಿತಾ ನರೇಶ್ ಮಂಚಿ .
. ಈಗೆಲ್ಲ ಮಕ್ಕಳಿಗೆ ರಜಾ ಕಾಲ ಎಂದೇ ಇಲ್ಲ. ಯಾವಾಗ ನೋಡಲಿ ಆ ಕ್ಲಾಸು, ಈ ಕ್ಲಾಸು ,ಎಂದೂ ಸದಾ ಬೆನ್ನಿನ ಮೇಲೆ ಚೀಲವನ್ನು ಹೊಲಿದೆ ಇಟ್ಟು ಕೊಂಡಿರುತ್ತಾರೆ. ನಾನು ಹೇಳುತ್ತಿರುವುದು ಕೆಲವು ವರ್ಷಗಳ ಹಿಂದಿನ ಮಾತು
ಎಪ್ರಿಲ್ ರಜಾ ಎಂದರೆ ನಮ್ಮ ಸ್ವಾತಂತ್ರ್ಯದ ಪರ್ವ ಕಾಲ. ರಜೆ ಬಂದ ಕೂಡಲೇ ಅಜ್ಜನ ಮನೆಗೆ ಹೋಗುವುದು ನಮ್ಮ ಪ್ರಮುಖ ಕಾರ್ಯಕ್ರಮ. ಈ ಸಲ ದೊಡ್ಡಮ್ಮನ ಒತ್ತಾಯದ ಮೇರೆಗೆ ಅಲ್ಲಿಗೆ ಹೋಗಿತ್ತು ನನ್ನ ಸವಾರಿ.ಅಲ್ಲಿಗೆ ಹೋದ ಒಂದೆರಡು ದಿನಗಳಲ್ಲಿ ಮನೆಯಿಂದ ಎರಡು ಕಿ ಮೀ ದೂರದಲ್ಲಿರುವ ಯುವಕ ಯುವತಿಯರ ಸಂಘದ ವಾರ್ಷಿಕೋತ್ಸವದ ಸಡಗರ. ಅಜ್ಜನ ಮನೆಯ ಸಕಲ ಸರ್ವಾಧಿಕಾರವನ್ನೂ ಬಿಟ್ಟು ದೊಡ್ಡಮ್ಮನ ಮನೆ ಸೇರಲು ಇದುವೇ ಮೂಲ ಕಾರಣ. ಅಂತಹ ಕಾರ್ಯಕ್ರಮಗಳನ್ನು ನೋಡುವುದೆಂದರೆ ನನಗೆ ಅತಿ ಉತ್ಸಾಹ. ಅದನ್ನೇ ಅಸ್ತ್ರವಾಗಿ ಬಳಸಿ ದೊಡ್ಡಮ್ಮ ನನ್ನನ್ನು ಕರೆದು ಕೊಂಡು ಬಂದಿದ್ದರೂ, ಆ ದಿನ , ನಿದ್ರೆಯ ವಿಷಯದಲ್ಲಿ ಕುಂಭಕರ್ಣನಿಗಿಂತಲೂ ಒಂದು ಕೈ ಮಿಗಿಲಾದ ದೊಡ್ಡಮ್ಮನ ಮಗ ಅಂದರೆ ನನ್ನ ಅಣ್ಣ ಮತ್ತು ಕಾಲುನೋವಿನಿಂದ ಹೆಚ್ಚು ಹೊತ್ತು ಕುಳಿತು ಕೊಳ್ಳಲಾಗದ ನನ್ನ ದೊಡ್ಡಮ್ಮ ಇವರಿಬ್ಬರನ್ನು ಹೊರಡಿಸುವಲ್ಲಿ ನನ್ನ ಕಲಿತ ಬುದ್ಧಿಯೆಲ್ಲವೂ ಖರ್ಚಾಯಿತು. ಜೊತೆಗೆ ಅಣ್ಣನಿಗೆ ನಿದ್ದೆ ಬಂದರೆ ಅಥವಾ ದೊಡ್ಡಮ್ಮನಿಗೆ ಕಾಲು ನೋವು ಜೋರಾದರೆ ಹಿಂದಿರುಗಿ ಬರಬೇಕೆನ್ನುವ ಷರತ್ತು. ಒಮ್ಮೆ ಮನೆಯಿಂದ ಹೊರಟರೆ ಸಾಕು ಎಂದು ಎಲ್ಲದಕ್ಕೂ ತಲೆ ಆಡಿಸಿದೆ. ರಾತ್ರಿಯ ಊಟವನ್ನು ಬೇಗ ಮಾಡಿ ಹೊರಟೆವು.
ಈಗ ಒಂದು ಹೊಸ ಸಮಸ್ಯೆ ಎದುರಾಯಿತು. ಇರುವ ಒಂದೇ ಟಾರ್ಚನ್ನು ಯಾರು ಹಿಡಿದುಕೊಳ್ಳುವುದು ಎಂದು. ಕತ್ತಲೆಯೆಂದರೆ ಅತೀವ ಭಯ ನನಗೆ. ಎಷ್ಟು ಭಯ ಎಂದರೆ ಪಕ್ಕದ ಕೋಣೆಯಲ್ಲಿ ಬೆಳಕಿಲ್ಲದಿದ್ದರೆ ಯಾರಾದರೊಬ್ಬರು ಜೊತೆಗೆ ಬರಬೇಕಿತ್ತು. ಈಗ ಅಣ್ಣ ಟಾರ್ಚ್ ಹಿಡಿದುಕೊಂಡರೆ ನನಗೆ ನಡೆಯಲು ಬೆಳಕು ಸಾಕಾಗುವುದಿಲ್ಲ ಎಂದು ಹಠ ಮಾಡಿ ನಾನೇ ಅದನ್ನು ಹಿಡಿದುಕೊಂಡೆ. ಜೊತೆಗೆ ಅದೊಂದು ಹೆಮ್ಮೆಯ ವಿಷಯ ಎನ್ನುವುದು ನನ್ನ ನಂಬಿಕೆಯಾಗಿತ್ತು. ಕೈಯಲ್ಲಿ ಟಾರ್ಚ್ ಹಿಡಿದು ಬೆಳಕನ್ನು ಎಲ್ಲಾ ಕಡೆಗೆ ಹಾಯಿಸುತ್ತಾ ಹೋಗುವ ಅವಕಾಶ ಸಿಗಲು ಇನ್ನೆಷ್ಟು ಕಾಲ ಬೇಕೇನೋ..? ಚಿಕ್ಕ ಮಕ್ಕಳು ಹಾಳು ಮಾಡುತ್ತಾರೆಂದು ಟಾರ್ಚು ಎಂಬ ಮಾಯಾದೀವಿಗೆಯನ್ನು ಯಾರಿಗೂ ಸಿಗದಂತೆ ಅತಿ ಜಾಗರೂಕತೆಯಿಂದ ಪ್ರತಿಸಲವೂ ಬೇರೆ ಬೇರೆ ಕಡೆ ಅಡಗಿಸಿಡುತ್ತಿದ್ದರು. ಕೆಲವೊಮ್ಮೆ ಅವರಿಗೆ ಇಟ್ಟಿದ್ದೆಲ್ಲಿ ಎಂದು ಮರೆತು ನಮ್ಮನ್ನೇ ನೀವೇ ಎಲ್ಲೋ ಹಾಕಿದ್ದೀರೆಂದು ಬಯ್ಯುವುದು ಇತ್ತು.ಅವರಿಂದ ಮೊದಲೇ ಅವರ ಎಲ್ಲಾ ತಾಣಗಳ ಪರಿಚಯವಿದ್ದ ನಾವುಗಳೇ ಅವರು ಅಡಗಿಸಿ ಇಟ್ಟ ಜಾಗವನ್ನು ಹೇಳಿ ಕೃತಾರ್ಥ ರಾಗುತ್ತಿದ್ದೆವು. ಅಂತೂ ಇಂತೂ ನನ್ನ ಕೈಗೆ ಬಂದಿದ್ದ ಟಾರ್ಚು ಎಂಬ ಅಮೂಲ್ಯ ವಸ್ತುವನ್ನು ಜಾಗ್ರತೆಯಾಗಿ ಹಿಡಿದಿದ್ದೆ.ಅದರ ಬೆಳಕು ಪಕ್ಕದಲ್ಲಿದ್ದ ಮರದ ಕಾಂಡಗಳ ಮೇಲೆ ಹಾದು ಹೋದಾಗ ಹೆದರಿಯಾಗುತಿತ್ತು. ಕತೆಗಳಲ್ಲಿನ ಭೂತ ಪ್ರೇತಗಳೆಲ್ಲ ಅಲ್ಲೇ ಅಡಗಿರುವಂತೆ ಕಾಣಿಸುತ್ತಿತ್ತು. ಕತೆಗಳು ಎಂದರೆ ಸಾಧಾರಣವಲ್ಲ. ಎಲ್ಲಾ ಕತೆಗಳಲ್ಲೂ ರಾಜಕುಮಾರರಿದ್ದಂತೆ ಒಂದು ಭೂತವೋ, ರಾಕ್ಷಸನೋ ಇರಲೇಬೇಕಿತ್ತು. ಅದಿಲ್ಲದ ಕತೆಗಳು ರುಚಿಸುತ್ತಲೇ ಇರಲಿಲ್ಲ. ಆದರೆ ರಾತ್ರಿಯಾದಂತೆ ಅದರ ರಾಜಕುಮಾರರೆಲ್ಲ ಮಾಯವಾಗಿ ಕೇವಲ ಭೂತ ಪ್ರೇತಗಳೇ ಉಳಿದು ಘೋರ ರೂಪಿಗಳಾಗಿ ನನ್ನನ್ನು ಹೆದರಿಸುತ್ತಿದ್ದವು. ಮೆತ್ತಗೆ ಅಣ್ಣನ ಕೈ ಹಿಡಿದು ಕೊಳ್ಳಲು ಹೊರಟರೆ ಟಾರ್ಚ್ ಸಿಗದ ಸಿಟ್ಟಿನಲ್ಲಿದ್ದ ಅವನು ಕೈ ಕೊಡವಿದ. ದೊಡ್ಡಮ್ಮನ ಸೀರೆಯ ಸೆರಗನ್ನೇ ಕೈಗೆ ಸುತ್ತಿಕೊಂಡೆ.ಅಂತೂ ಇಂತೂ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತಲುಪಿದೆವು.
ಪುಟ್ಟ ಊರು, ಪ್ರತಿ ಮನೆಯಿಂದಲೂ ಹಸು ಕರು, ಬೆಕ್ಕುಗಳನ್ನು ಬಿಟ್ಟು ಮತ್ತೆಲ್ಲರೂ ಬಂದಿದ್ದರು. ಕೆಲವು ಮನೆಯವರೊಂದಿಗೆ ಬಂದ ನಾಯಿಗಳು ಹೊರಗೆ ಕಿತ್ತಾಡುತ್ತಿದ್ದವು. ಪುಂಡ ಹುಡುಗರು ಅವುಗಳಿಗೆ ಕಲ್ಲು ಹೊಡೆದು ಗದ್ದಲವೆಬ್ಬಿಸುತ್ತಿದ್ದರು. ದೊಡ್ಡಮ್ಮನ ಪರಿಚಯ ಇರುವ ಅಲ್ಲಿಯವರು ಎಲ್ಲಿಂದಲೋ ಒಂದು ಕುರ್ಚಿ ತಂದು ಹಾಕಿ, ಅವರನ್ನು ಕುಳ್ಳಿರಿಸಿದರು. ನಾನು ಮತ್ತು ಅಣ್ಣ ಅಲ್ಲೇ ಪಕ್ಕದಲ್ಲಿ ನೆಲದ ಮೇಲೆ ತಂದಿದ್ದ ಕಂಬಳಿ ಹಾಸಿ ಕುಳಿತುಕೊಂಡೆವು. ಅಕ್ಕ ಪಕ್ಕದಲ್ಲಿ ನೋಡಿದರೆ ಕೆಲವರು ಹಾಸಿಗೆ ತಲೆದಿಂಬನ್ನು ತಂದು ಹಾಕಿಕೊಂಡು ಅದನ್ನೇ ಬೆಡ್ ರೂಂ ಮಾಡಿಕೊಂಡಿದ್ದರು. ಕೆಲವು ಪುಟ್ಟ ಮಕ್ಕಳು ಆಗಲೇ ನಿದ್ದೆ ಮಾಡಿ ಆಗಿತ್ತು. ಅವರ ಅಮ್ಮಂದಿರು ಕಾಲು ಚಾಚಿ ನಿರಾಳವಾಗಿ ಕುಳಿತಿದ್ದರು. ಅಷ್ಟರಲ್ಲಿ ಮೈಕಾಸುರನ ಹಲೋ ಹಲೋ ಎಂಬ ಧ್ವನಿ ಕೇಳಿ ನಾನು ಸ್ಟೇಜಿನ ಕಡೆಗೆ ಕಣ್ಣು ನೆಟ್ಟೆ.ಏನೋ ಒಂದು ಅದ್ಭುತ ಇನ್ನು ಸ್ವಲ್ಪವೇ ಕಾಲದಲ್ಲಿ ನನ್ನ ಕಣ್ಣೆದುರು ನಡೆಯಲಿದೆ ಎಂಬಂತೆ. ಸಭಾ ಕಾರ್ಯಕ್ರಮ ಪ್ರಾರ್ಥನೆ, ಭಾಷಣ ಎಂದೆಲ್ಲ ಶುರು ಆಯಿತು. ಭಾಷಣಕ್ಕೆನಿಂತವರು ಈ ದಿನ ಮುಗಿದ ಮೇಲೆ ಮಾತುಗಳೇ ಆಡೊಲ್ಲವೇನೋ ಎಂಬಂತೆ ಎಲ್ಲವನ್ನು ಈಗಲೇ ಹೇಳುವ ತುರಾತುರಿಯಲ್ಲಿದ್ದರು. ಅದನ್ನು ಕೇಳಿ ಕೇಳಿ ಆಕಳಿಕೆ ಬರತೊಡಗಿತು. ಅಣ್ಣ ಕುಳಿತಲ್ಲೇ ತೂಕಡಿಸುತ್ತಿದ್ದ. ಕೊನೆಗೂ ಎಲ್ಲಾ ಕಷ್ಟಗಳಿಗೂ ಕೊನೆಯಿರುವುದು ನಿಜ ಎಂಬಂತೆ ಈಗ ಸಾಂಸ್ಕೃತಿಕ ಕಾರ್ಯಕ್ರಮಗಳು ಶುರು ಎಂದು ಹೇಳುವುದು ಕೇಳಿಸಿತು. ಕೂಡಲೇ ಅಣ್ಣನನ್ನು ತಟ್ಟಿ ಎಬ್ಬಿಸಿದೆ. ಅವನು ನಾಟಕ ಶುರು ಆಗುವಾಗ ಹೇಳು ಎಂದು ಸರಿಯಾಗಿ ಕಾಲು ಚಾಚಿ ಮಲಗಿದ. ನಾನು ಕುತ್ತಿಗೆ ಉದ್ದ ಮಾಡಿ ಸರಿಯಾಗಿ ಕುಳಿತು ಕೊಂಡೆ. ಕೆಲವು ನೃತ್ಯ ಸಂಗೀತ ಗಳೆಲ್ಲ ಮುಗಿದು ನಾಟಕ ಶುರು ಆಗುವ ಹಂತ ತಲುಪಿತು. ಅಷ್ಟರಲ್ಲಿ ದೊಡ್ಡಮ್ಮ ಕಾಲು ನೋಯುತ್ತಿದೆ. ಇನ್ನು ಕುಳಿತು ಕೊಳ್ಳಲು ಸಾಧ್ಯವೇ ಇಲ್ಲ ಎಂದು ಅಣ್ಣನನ್ನು ಎಬ್ಬಿಸಿದರು. ಅರ್ಧ ನಿದ್ದೆಯಲ್ಲಿದ್ದ ಅಣ್ಣನಿಗೂ ನಾಟಕ ನೋಡುವುದರಿಂದ ಮನೆಗೆ ಹೋಗಿ ಕಾಲು ಚಾಚಿ ಮಲಗುವುದೇ ಸುಖವೆಂದು ತೋರಿರಬೇಕು. ಅವನು ಎದ್ದು ನಿಂತ. ಆದರೆ ನಾನು ಮಾತ್ರ ಸುತಾರಾಂ ಏಳಲು ಒಪ್ಪಲಿಲ್ಲ. ನಾಟಕ ನೋಡಲು ಅಂತ ಕರೆದು ಕೊಂಡು ಬಂದು ಅದು ಶುರು ಆಗುವ ಮೊದಲೇ ಹೊರಟರೆ ಹೇಗೆ, ನಾನು ಬರಲ್ಲ ಅಂತ ಖ್ಯಾತೆ ತೆಗೆದೆ. ದೊಡ್ಡಮ್ಮ ಮನೆಯಿಂದ ಹೊರಡುವ ಮೊದಲೇ ಆದ ಷರತ್ತಿನ ಬಗ್ಗೆ ನೆನಪಿಸಿದರು. ಆದರೆ ನನ್ನನ್ನು ಅದ್ಯಾವುದು ಕೂತಲ್ಲಿಂದ ಏಳಿಸಲು ವಿಫಲವಾಯಿತು. ನನ್ನನ್ನು ಎಲ್ಲರ ಎದುರು ಹೆಚ್ಚು ಬಯ್ಯುವುದು,ಒತ್ತಾಯ ಮಾಡುವುದು ಸಾಧ್ಯವಾಗದೆ, ಅಲ್ಲೇ ಇದ್ದ ಪರಿಚಯದವರಲ್ಲಿ ನಾಟಕ ಮುಗಿಯುವಾಗ ಎಷ್ಟು ಹೊತ್ತಾದೀತೆಂದು ವಿಚಾರಿಸಿದರು. ಹೆಚ್ಚು ಕಡಿಮೆ ಬೆಳಗ್ಗಿನ ಜಾವ ೫ ಘಂಟೆಗೆ ಮುಗಿಯಬಹುದು ಎಂಬ ಅವರ ಮಾತನ್ನು ಕೇಳಿ ದೊಡ್ಡಮ್ಮ ಅಷ್ಟು ಹೊತ್ತು ಕುಳಿತಿರುವುದು ಅಸಾಧ್ಯ ಎಂದು ನನ್ನನ್ನು 'ಹೋಗುವ ಏಳು' ಎಂದರು.ಆಗ ನನ್ನ ಕಣ್ಣಲ್ಲಿ ನನ್ನ ಪ್ರಮುಖ ಅಸ್ತ್ರ ಗಳಾದ ಗಂಗೆ ಯಮುನೆಯರು ಪ್ರತ್ಯಕ್ಷರಾಗಿ ಬೇಡಿದ್ದನ್ನು ಕೊಡುವೆವು ಎಂದು ದುಮ್ಮಿಕ್ಕಿದರು. ಎಲ್ಲರ ಅತಿ ಪ್ರೀತಿಯ ಒಬ್ಬಳೇ ಮಗಳಾದ ನಾನು ಅಳುವುದನ್ನು ಯಾರು ಸಹಿಸುವುದಿಲ್ಲ ಎನ್ನುವುದು ನನ್ನರಿವಿಗೆ ಮೊದಲೇ ತಿಳಿದ ವಿಷಯ. ಅಣ್ಣ ಬೇಸರದಲ್ಲಿ ನೀನು ಅಳಬೇಡ ನಾಟಕ ನೋಡು ನಾನು ಬೆಳಗ್ಗೆ ಅದು ಮುಗಿಯುವ ಹೊತ್ತಿಗೆ ನಿನ್ನನ್ನು ಕರೆದು ಕೊಂಡು ಹೋಗುತ್ತೇನೆ. ಎಂದ. ದೊಡ್ಡಮ್ಮನೂ ಅದಕ್ಕೆ ಗೊಣಗಿಕೊಂಡೆ ಒಪ್ಪಿಗೆ ನೀಡಿದರು. ನನ್ನ ಕೈಯಲ್ಲಿದ್ದ ಟಾರ್ಚನ್ನು ಅಣ್ಣನ ಕೈಗೆ ನೀಡಿದೆ. ಪುನಃ ಎರಡೆರಡು ಸಲ ಬೇಗ ಬಾ ಎಂದು ಹೇಳಿದೆ. ಸರಿ ಎಂದು ತಲೆ ಆಡಿಸಿದ. ದೊಡ್ಡಮ್ಮ ತಾನು ಕುಳಿತಿದ್ದ ಕುರ್ಚಿಯ ಮೇಲೆ ನನ್ನನ್ನು ಕುಳಿತುಕೊಳ್ಳಲು ಹೇಳಿ, ಮತ್ತೆ ನೂರು ಸಲ 'ಜಾಗ್ರತೆ, ಜಾಗ ಬಿಟ್ಟು ಹೋಗಬೇಡ. ಇಲ್ಲೆ ಇರು'. ಎಂದರು ಅದಕ್ಕೆ ಒಪ್ಪಿಕೊಂಡು ನಾನು ಕುರ್ಚಿ ಎಂಬ ಸಿಂಹಾಸನಾದೀಶಳಾದೆ.ನನ್ನೆಡೆಗೆ ನೋಡಿದ ಕೆಲವರ ನೋಟದಲ್ಲಿ ಅಸೂಯೆಯಿರುವಂತೆ ಅನ್ನಿಸಿತು. ನಾಟಕ ಶುರು ಆದುದರಿಂದ ಅವರಿವರ ಭಾವನೆಗಳನ್ನು ಅಳೆಯುವ ಕೆಲಸ ಬಿಟ್ಟು ಜಂಭದಿಂದಲೇ ನಾಟಕ ನೋಡಲು ಪ್ರಾರಂಭಿಸಿದೆ.
ಅರ್ಜುನನಿಗೆ ಬಾಣ ಬಿಡುವಾಗ ಮರದ ಮೇಲಿದ್ದ ಹಕ್ಕಿಯ ಕಣ್ಣು ಮಾತ್ರ ಕಂಡಂತೆ, ನನಗೆ ಸ್ಟೇಜಿನ ಮೇಲೆ ಆಗುತ್ತಿದ್ದ ನಾಟಕ ಬಿಟ್ಟು ಬಾಹ್ಯ ಲೋಕದ ಕಡೆಗೆ ಗಮನವೇ ಇರಲಿಲ್ಲ. ನಾಟಕ ಮುಗಿಯಿತು. ಅದು ಮುಗಿದ ನಂತರವೂ ಎರಡು ನೃತ್ಯ ಕಾರ್ಯಕ್ರಮ ಇದೆ ಎಂದು ಮೊದಲೇ ಹೇಳಿದ್ದರು. ಹಾಗಾಗಿ ನಾನು ಕುಳಿತೆ ಇದ್ದೆ. ಕಾರ್ಯಕ್ರಮ ನೋಡಲು ಬಂದಿದ್ದ ಮುಕ್ಕಾಲು ಪಾಲು ಜನ ಹೋಗಿದ್ದರು. ಉಳಿದವರಲ್ಲಿ ಹೆಚ್ಚಿನವರು ನಿದ್ರಾಲೋಕದಲ್ಲಿದ್ದರು. ಸುಮಾರು ಕಾಲು ಘಂಟೆ ಕಾಲ ಇಳಿ ಬಿದ್ದ ಸ್ಕ್ರೀನನ್ನೇ ವೀಕ್ಷಿಸುತ್ತಾ ಕುಳಿತಿದ್ದೆ. ಆಗ ಅದರ ಹಿಂದಿನಿಂದಲೇ ಮುಂದಿನ ನಡೆಯಬೇಕಿದ್ದ ನೃತ್ಯ ಅನಿವಾರ್ಯ ಕಾರಣಗಳಿಂದ ರದ್ದಾಗಿದೆ. ಎಂಬ ಅಶರೀರ ವಾಣಿ ಕೇಳಿಸಿತು. ಇದು ನನ್ನನ್ನು ಬೆಚ್ಚಿ ಬೀಳಿಸಿತು. ಅಲ್ಲಿವರೆಗೂ ಅಕ್ಕ ಪಕ್ಕದವರ ಕಡೆಗೆ ನೋಡದ ನಾನು ಈಗ ಅತ್ತಿತ್ತ ಕಣ್ಣು ಹಾಯಿಸಿದೆ. ನೋಡುವುದೇನು... ಯಾರೂ ಇಲ್ಲ.. ಅದ್ಯಾವ ಮಾಯದಲ್ಲಿ ಎಲ್ಲರೂ ಹೋಗಿದ್ದರೋ ನನಗೆ ತಿಳಿಯಲೇ ಇಲ್ಲ. ಕೆಲವು ಅಲ್ಲಿನ ಸಂಘಟಕರು ಮಾತ್ರ ಅತ್ತಿತ್ತ ಸುಳಿದಾಡುತ್ತಿದ್ದರು, ಇನ್ನೂ ಕುಳಿತೆ ಇದ್ದ ನನ್ನ ಕಡೆಗೊಮ್ಮೆ ಕುತೂಹಲದ ಕಣ್ಣು ಹಾಯಿಸಿ. ಹತ್ತಿರದಲ್ಲೇ ಸಾಗುತ್ತಿದ್ದ ಒಬ್ಬರ ಬಳಿ ಘಂಟೆ ಎಷ್ಟಾಯಿತು ಎಂದರೆ ಮೂರೂವರೆ ಎಂದರು.ಅಣ್ಣ ಬರಲು ಇನ್ನು ಒಂದೂವರೆ ಘಂಟೆ ಇದೆ. ಇಲ್ಲಿ ನೋಡಿದರೆ ಒಬ್ಬರ ಸುಳಿವಿಲ್ಲ . ಅಷ್ಟು ಹೊತ್ತು ಕುಳಿತಿರುವುದು ಹೇಗೆಂಬ ಚಿಂತೆ ಕಾಡತೊಡಗಿತು. ಒಮ್ಮೆ ಎದ್ದು ನಮ್ಮ ಮನೆ ಕಡೆ ಹೋಗುವ ದಾರಿಯ ಕಡೆಗೆ ನೋಡಿದೆ. ಯಾರಾದರು ಆ ಕಡೆಗೆ ಹೋಗುವವರಿದ್ದಾರೆನೋ ನೋಡಿ ಬಿಡೋಣ ಎಂದು. ಆದರೆ ಯಾರೂ ಕಣ್ಣಿಗೆ ಬೀಳಲಿಲ್ಲ. ಪುನಃ ಮೊದಲಿನ ಜಾಗದಲ್ಲೇ ಕುಳಿತಿರೋಣ ಎಂದು ಒಳಗೆ ಬಂದರೆ ನಾನು ಕುಳಿತಿದ್ದ ಕುರ್ಚಿಯನ್ನು ಆಗಲೇ ಮಡಿಚಿ ಎತ್ತಲೋ ಒಯ್ದಿದ್ದರು. ನೆಲದಲ್ಲಿ ಒಬ್ಬಳೇ ಕುಳಿತು ಕೊಳ್ಳಲು ನಾಚಿಕೆ ಎನಿಸಿತು. ಯಾರೋ ಒಬ್ಬರು ನನ್ನ ಕಡೆ ನೋಡಿದವರು, ನನ್ನ ಚಡಪಡಿಕೆಯನ್ನು ಗಮನಿಸಿ, ಯಾವ ಮನೆಯವರು ಎಂದು ವಿಚಾರಿಸಿದರು. ದೊಡ್ಡಪ್ಪನ ಹೆಸರು ಹೇಳಿದೆ. ಕೂಡಲೇ ಅವರು ' ನೋಡು ಈಗ ನಿಮ್ಮ ಮನೆ ಕಡೆಯಿಂದಲೇ ಹೋಗುವ ಕೆಲವು ಜನರು ಹೋದರು. ಸ್ವಲ್ಪ ಬೇಗ ಹೋದರೆ ಸಿಗುತ್ತಾರೆ ಎಂದರು. ಇಲ್ಲೆ ಕುಳಿತು ಎಲ್ಲರ ಪ್ರಶ್ನೆಗಳಿಗೆ ಆಹಾರವಾಗುವ ಬದಲು ಹೋಗುವುದೇ ಉತ್ತಮ ಎಂದು ತೋರಿತು.
ಹೊರಗಿನ ರಸ್ತೆಗೆ ಇಲ್ಲಿನ ಬೆಳಕು ಬೀಳುತ್ತಿತ್ತು. ಅಲ್ಲಿವರೆಗೆ ಬೇಗನೆ ನಡೆದೆ. ಮತ್ತೆ ಮುಂದಿನ ಕತ್ತಲೆಗೆ ಕಣ್ಣು ಹೊಂದಿ ಕೊಳ್ಳಬೇಕಾದರೆ ಕೆಲ ಹೊತ್ತು ಹಿಡಿಯಿತು. ಕಂಡಷ್ಟು ದೂರಕ್ಕೆ ಕಣ್ಣು ಹಾಯಿಸಿದರೂ ಯಾರೂ ಕಾಣಲಿಲ್ಲ. ಸ್ವಲ್ಪ ದೂರ ವೇಗವಾಗಿ ಓಡಿದೆ. ಉಹುಂ ..! ಒಂದೇ ಒಂದು ಮನುಷ್ಯರ ಸುಳಿವಿರದ ನಿರ್ಜನ ರಸ್ತೆ. ನಾನೊಬ್ಬಳೆ ಅಲ್ಲಿ. ಕನಸಲ್ಲೂ ಇಂತಹ ಸನ್ನಿವೇಶ ಬಂದರೆ ಬೆಚ್ಚಿ ಬೀಳುತ್ತಿದ್ದೆ. ಆದರೆ ಇದು ನಿಜ. ಆಗೊಮ್ಮೆ ಈಗೊಮ್ಮೆ ಕಾಡಿನ ಮೌನವನ್ನು ಕಲಕುವ ಕೀಟಗಳ ಸದ್ದು. ಮೊದಲೇ ಹೆದರಿದ್ದ ನನ್ನನ್ನು ಬವಳಿ ಬೀಳುವಂತೆ ಮಾಡುತ್ತಿತ್ತು. ಮತ್ತೂ ನಾಲ್ಕು ಹೆಜ್ಜೆ ಮುಂದೆ ನಡೆದಾಗ ಒಬ್ಬಂಟಿಯಾಗೆ ಮನೆಯವರೆಗೂ ನಡೆಯ ಬೇಕೆಂಬ ಸತ್ಯ ನಿಚ್ಚಳವಾಯಿತು. ಈಗ ನನ್ನ ಮತ್ತು ನನ್ನೊಳಗೆ ಮೊದಲೇ ನೆಲೆಸಿದ್ದ ಭೂತ ಪ್ರೇತಗಳೊಳಗೆ ಯುದ್ಧ ಶುರು ಆಯಿತು. ಅದನ್ನು ಸೋಲಿಸಲು ನಾನೇ ವ್ಯೂಹ ಸಿದ್ಧ ಮಾಡಿದೆ. ನನ್ನ ಕಾಲ ಕೆಳಗಿನ ನೆಲ ಬಿಟ್ಟು ಬೇರೇನನ್ನು ನೋಡದಂತೆ ಕಣ್ಣುಗಳಿಗೆ ಆದೇಶ ನೀಡಿದೆ. ಕೆಲವೊಮ್ಮೆ ಕಣ್ಣು ಮುಚ್ಚಿ ನಡೆದದ್ದೂ ಆಯಿತು. ಹೇಗಿದ್ದರೂ ಅಗಲ ಮಾರ್ಗ ಬೀಳುವ ಚಿಂತೆ ಇರಲಿಲ್ಲ. ಈ ಭೂತ ಗಳೆಲ್ಲ ರಸ್ತೆಯ ನಡುವಿಗೆ ಬರಲಾರವು. ಬದಿಯಲ್ಲಿ ಇರುವ ಮರದಲ್ಲೋ ಗಿಡದಲ್ಲೋ ನೆಲೆಸಿರಬಹುದು ಎಂಬುದು ನನ್ನ ಸಿದ್ಧಾಂತವಾಗಿತ್ತು. ಈಗ ಮುಗಿಯದಿರುವ ಮಾರ್ಗದ ಜೊತೆಗೆ ನನ್ನೊಡನೆ ಉಳಿಯದೆ ಮನೆಗೆ ಹೋದ ನನ್ನ ದೊಡ್ಡಮ್ಮ ಮತ್ತು ಅಣ್ಣನ ಮೇಲೆ ಸಿಟ್ಟು ಏರತೊಡಗಿತು. ಮನದಲ್ಲೇ ಬಯ್ಯಲು ಪ್ರಾರಂಭಿಸಿದೆ. ಜೋರಾಗಿ ಬಯ್ದರೂ ಯಾರಿಗೂ ಕೇಳಿಸದೆಂಬ ಸತ್ಯ ಅರಿವಿಗೆ ಬಂದು ಅದನ್ನೂ ಮಾಡ ತೊಡಗಿದೆ. ನಾನು ಸತ್ತರೂ ಚಿಂತೆ ಇಲ್ಲ.ತಮ್ಮ ಸುಖವೇ ಇವರಿಗೆ ಮುಖ್ಯ ಎಂಬ ತೀರ್ಮಾನಕ್ಕೂ ಬಂದೆ.ಈ ಸಿಟ್ಟು ನನ್ನ ಭಯವನ್ನು ಸ್ವಲ್ಪ ಹಿಮ್ಮೆಟ್ಟಿಸಿತು. ಎರಡು ಕಿ ಮೀ ನಷ್ಟು ದೂರ ಹೀಗೆಲ್ಲ ಮಾಡುತ್ತಲೇ ಸಾಗಿತು. ಇನ್ನೇನು ಮನೆ ಹತ್ತಿರ ಬರುತ್ತಿದೆ ಎನ್ನುವಾಗ ಸಂತಸದ ಜೊತೆಗೆ ದುಃಖ ವೂ ಸೇರಿ ಗಂಗಾ ಪ್ರವಾಹ ಕಣ್ಣಲ್ಲೂ ,ಮೂಗಲ್ಲೂ ಉಕ್ಕತೊಡಗಿತು. ಮನೆ ತಲುಪಿ ಬಾಗಿಲು ತಟ್ಟಿದರೆ ಬೇಗನೆ ಅದನ್ನಾದರೂ ತೆಗೆದರೋ..? ಅದೂ ಇಲ್ಲ..... ನಿಧಾನಕ್ಕೆ ಕಣ್ಣೊರೆಸಿಕೊಂಡು ಎದ್ದು ಬಂದ ದೊಡ್ಡಮ್ಮ ನನ್ನನ್ನು ನೋಡಿ ಅಚ್ಚರಿಯಿಂದ ವಿಶ್ವದ ಎಂಟನೆ ಅದ್ಭುತ ನಾನೇ ಏನೋ ಎಂಬಂತೆ ನೋಡಿ ಅಯ್ಯೋ ಒಬ್ಬಳೇ ಬಂದೆಯಾ.. ಎಂದು ಮೈ ದಡವಲು ಮುಂದೆ ಬಂದರು. ಕೂಡಲೇ ಕೋಪದಿಂದ ಅವರ ಕೈ ದೂಡಿ, ಕೈ ಕಾಲು ತೊಳೆದು ಮಲಗು ಎಂಬ ದೊಡ್ಡಮ್ಮನ ನುಡಿಯನ್ನು ತೃಣಕ್ಕಿಂತ ಕಡೆಯೆಂದು ಪರಿಗಣಿಸಿ, ಮಂಚದ ಮೇಲೆ ದೊಪ್ಪನೆ ಬಿದ್ದು ಈಗೇನು ಹೆಚ್ಚು ದುಃಖ ವಾಗದಿದ್ದರೂ, ಅವರಿಗೆ ಕೇಳುವಷ್ಟು ಜೋರಾಗಿ ಅಳ ತೊಡಗಿದೆ. ಇಲ್ಲದಿದ್ದರೆ ನನ್ನ ಸಂಕಟ ಎಲ್ಲರಿಗೂ ತಿಳಿಯುವುದಾದರೂ ಹೇಗೆ ಅಲ್ಲವೇ..? ನನ್ನ ಅಳು ನಿಲ್ಲಿಸಲು ಮನೆಯ ಎಲ್ಲಾ ಸದಸ್ಯರು ಬಂದರೂ ಜೋರಾಗುತಿತ್ತೆ ವಿನಃ ಕಡಿಮೆಯಾಗದುದನ್ನು ಕಂಡ ದೊಡ್ಡಮ್ಮ ಅವಳು ಸ್ವಲ್ಪ ಮಲಗಲಿ ಎದ್ದ ಮೇಲೆ ಸರಿಯಾಗುತ್ತಾಳೆ ಎಂದು ಎಲ್ಲರನ್ನು ಕಳುಹಿಸಿದರು. ಎಲ್ಲರೂ ಹೋದ ಮೇಲೆ ನನ್ನ ಅಳು ಸುಮ್ಮನೆ ಅತ್ತಿನ್ನು ಪ್ರಯೋಜನವಿಲ್ಲ ಎಂದು ತನ್ನಿಂದ ತಾನೆ ಕಡಿಮೆಯಾಯಿತು. ಸ್ವಲ್ಪ ಹೊತ್ತಾದ ಮೇಲೆ ನನಗೆಲ್ಲೂ ಸಿಕ್ಕದ , ನಾನು ಕತ್ತಲೆ ಎಂದರೆ ಹೆದರಿ ಸಾಯುವಂತೆ ಮಾಡುವ ಭೂತಗಳು ನನಗೆಲ್ಲೂ ಸಿಕ್ಕದ ವಿಷಯ ನೆನಪಾಯಿತು. ಒಂದೋ ಅವು ನನ್ನನ್ನು ನೋಡಿ ಹೆದರಿರಬೇಕು ಅಥವಾ ಅಪ್ಪ ಹೇಳಿದಂತೆ ಅವು ಬರಿ ನನ್ನ ಕಲ್ಪನೆಗಳೇ ಆಗಿರಬೇಕು..ಯಾವುದು ಸರಿ ಎಂಬ ಆಲೋಚನೆಯಲ್ಲಿರುವಾಗಲೇ ನಿದ್ರೆ ತಾನಾಗೆ ಬಂದು ನನ್ನ ಮಗ್ಗುಲು ಸೇರಿತು. ಅಂದಿನಿಂದ ನನ್ನ ಕತ್ತಲ ಬಗೆಗಿನ ಭಯವೆಂಬ ಭೂತ ಓಡಿ ಹೋಯಿತು.