Pages

Total Visitors

Sunday, September 11, 2011

ದಿಲ್ ಕಿ ಆವಾಜ್


..

ದಿಲ್ ಕಿ ಆವಾಜ್ ಸುನೋ .. ಎಂಬ ಮೊಬೈಲ್ ಸ್ವರ ಕೇಳುತ್ತಿದ್ದಂತೆ ಹತ್ತಿರವೇ ಇದ್ದ ಇಯರ್ ಫೋನ್ ಕಿವಿಗೆ ಸಿಕ್ಕಿಸಿಕೊಂಡು ,ಮೊಬೈಲ್ ಜೇಬಿಗಿಳಿಬಿಟ್ಟು  ಹಲೋ ಎಂದೆ. ಆ ಕಡೆಯಿಂದ ಅದೇ ಪರಿಚಿತ ಆಪ್ತ ಸ್ವರ. ಹಾಯ್ ಎಂದು ಉಲಿಯುವುದು ಕೇಳಿಸಿತು.  ..ನಾನು ಮಾತು ಶುರು ಮಾಡಬೇಕೆಂದು ಕೊಳ್ಳುವಾಗಲೇ ಅವರು ಬೇರೆ ಯಾರೊಂದಿಗೋ ಮಾತನಾಡುವುದು ಕೇಳಿಸಿತು. ಮತ್ತೊಮ್ಮೆ ಅವರ ಹಲೋ ಎಂಬ ಸ್ವರ ಕೇಳಿಸಲಿ ಎಂದು ನಾನು ನನ್ನ ಕೆಲಸದಲ್ಲಿ ಮಗ್ನಳಾದೆ.
ಮೂರು ನಾಲ್ಕು ನಿಮಿಷ ಕಳೆದಿರಬಹುದು. ಹಾಯ್ ಪುಟ್ಟೂ ಲೈನ್ ನಲ್ಲಿ ಇದ್ದೆಯಾ ಎಂಬ ವಾಣಿ ಮೊಳಗಿತು.ಹುಂ ಎಂದೆ. ಸರಿ ಎಂದು ಇನ್ನೇನು ಮಾತು ಪ್ರಾರಂಭವಾಗುತ್ತದೆ ಎನ್ನುವಾಗ ಅವರ ಇನ್ನೊಂದು ಮೊಬೈಲ್ ಹೊಡೆದು ಕೊಳ್ಳಲು ಶುರು ಆಯಿತು. ಒಂದು ನಿಮಿಷ ಎನ್ನುವ ಬೇಡಿಕೆ ಬಂತು. ಹುಂ ಎಂದೆ. ಯಾರಿಗೋ ಫೋನ್ ಮೂಲಕ ಸಲಹೆ ಸೂಚನೆಗಳನ್ನು ನಿಧಾನವಾಗಿ ಕೊಡುತ್ತಾ ಹೋದರು. ನಾನು ಸುಮ್ಮನೆ ಕೇಳಿಸಿಕೊಳ್ಳುತ್ತಲೇ ಇದ್ದೆ. ಹತ್ತು ನಿಮಿಷ ಕಳೆದಿರಬೇಕು. ನನ್ನ ಕೈ ಆಗಲೇ ಯಾಂತ್ರಿಕವಾಗಿ ಸಾಂಬಾರಿಗೆ ಒಗ್ಗರಣೆ ಹಾಕಿ, ಒಲೆಯ ಮೇಲೆ ಪಲ್ಯ ಬೇಯಲಿಟ್ಟಿತ್ತು. ಸಿಕ್ಕಿಸಿ ಕೊಂಡ ಇಯರ್ ಫೋನ್ ನಿಂದಾಗಿ ಕೈಗಳು ಬಿಡುವಾಗಿಯೇ ಇದ್ದವು.
ಅಷ್ಟರಲ್ಲಿ ಅತ್ತೇ ಬಂದವರು ಸಾರಿಗೆ ಕೊತ್ತಂಬರಿ ಸೊಪ್ಪು ತುಂಡು ಮಾಡಿ ಫ್ರಿಡ್ಜ್ ನೊಳಗೆ ಇಟ್ಟಿದ್ದೇನೆ , ಹೇಳಲು ಮರೆತಿತ್ತು.ಸಿಕ್ಕಿತಾ ಎಂದರು. ನಾನು ಹುಂ ಎನ್ನುವಂತೆ ಕೇವಲ ತಲೆಯಲುಗಿಸಿದೆ. ಅದೇನೂ ಅಂತ ಇಡೀ ದಿನ ಹಾಡು ಕೇಳ್ತೀಯೋ ಎಂದು ಗೊಣಗುತ್ತಾ ಹೊರ ನಡೆದರು.
 ಈಗ ಪುನಾ ಮೊಬೈಲ್ ನಿಂದ ಸ್ಸಾರಿ ಮರಿ ಎಂಬ ನಿನಾಧ ಕೇಳಿ ಬಂತು. ಈಗ ಕಿವಿಗಳನ್ನು ಸೂಕ್ಷ್ಮ ವಾಗಿಸಿ ಮುಂದೇನು ಹೇಳುತ್ತಾರೆ ಎಂದು ಕೇಳಲು ಉತ್ಸುಕಳಾದೆ. ಅಷ್ಟರಲ್ಲಿ ಅವರ ಆಫೀಸ್ ನ ಯಾರಿಗೋ ಯಾವ ಯಾವ ಸಾಮಾನು ಒಟ್ಟಿಗೆ ಒಯ್ಯಬೇಕು ಎಂದು ಪಟ್ಟಿ ಮಾಡಿ ಹೇಳುವುದು, ಜೊತೆಗೆ ಇಷ್ಟು ವರ್ಷಗಳಿಂದ ಕೆಲಸ ಮಾಡ್ತೀರಿ ಸ್ವಲ್ಪ ಸ್ವಂತ ತಲೆ ಖರ್ಚು ಮಾಡಿ ಎಂದು ಎಂದು ಗದರಿಸುವುದು ಕೇಳಿಸಿತು. ಜೊತೆಗೆ ಅವರ ಪಕ್ಕದಲ್ಲಿರುವವರು ಏನೋ ಹೇಳುವುದು ಕೇಳಲು ತೊಡಗಿತು.
ನಾನು ಪಲ್ಯ ಇಳಿಸಿ, ತೆಂಗಿನ ತುರಿ ಬೆರೆಸಿ, ಬೇರೇ ಪಾತ್ರೆಗೆ ವರ್ಗಾಯಿಸಿ, ಅಡುಗೆ ಮನೆ ಸ್ವಚ್ಛ ಗೊಳಿಸಲು ಪ್ರಾರಂಭಿಸಿದೆ. ಪುನಃ ಪುಟ್ಟೂ ಇದ್ದೆಯಾ ಮಗಾ ಎಂಬ ಮಾತು ಕೇಳಿಸಿತು. ಹುಂ ಎಂದು ಸಣ್ಣ ಸ್ವರದಲ್ಲಿ ನುಡಿದೆ.ಹ್ಹ ಹ್ಹ ಎಂಬ ನಗು ಕೇಳಿಸಿತು ಆ ಕಡೆಯಿಂದ. ಜೊತೆಗೆ ಯಾವುದೋ ಪುಟ್ಟ ಮಗುವನ್ನು ಪ್ರೀತಿಯಿಂದ ಮಾತನಾಡಿಸುವುದು ಕೂಡಾ.. ದೂರ ಹೊರಟಿರಿ .. ಈ ರಾಜ ಕುಮಾರಿಯನ್ನು ಎತ್ಕೊಂಡು.. ಬಿಸಿಲು ಎಷ್ಟಿದೆ ನೋಡಿ .. ಛತ್ರಿ ನಾದ್ರೂ ತರಬಾರದಿತ್ತೆ..ಎಂದು ಕಾಳಜಿ ವಹಿಸುವುದು ಕೇಳಿಸಿತು. ಅದಕ್ಕೆ ಪಕ್ಕದವರೇನು ಉತ್ತರ ನೀಡಿದರೋ ತಿಳಿಯಲಿಲ್ಲ.. ನನ್ನದಷ್ಟರಲ್ಲಿ ಅಡುಗೆ ಮನೆ  ಸ್ವಚ್ಛ ಗೊಳಿಸಿ ಆಗಿತ್ತು. ಮೆತ್ತಗೆ ಹೊರ ಹೋಗಿ ದಿನ ಪತ್ರಿಕೆ ಕೈಯಲ್ಲಿ ಹಿಡಿದು ಕುಳಿತೆ.

 ಪುನಃ ಹಾಯ್ ಎಂಬ ಮಾತು ಕಿವಿ ತಟ್ಟಿತು. ಹುಂ ... ಹೇಳಿ ಎಂದೆ. ಅದೆನಾಯ್ತೂಂದ್ರೆ.. ಅಲ್ಲ ಎಷ್ಟು ಸಾರಿ ಹೇಳ್ಬೇಕು ನಿಂಗೆ... ಕಸ ಕ್ಲೀನಾಗಿ ಹೊಡೀಬೇಕೂಂತ..ಅದ್ಕೆ ಅಂತ ತಿಂಗಳು ತಿಂಗಳು ದುಡ್ಡು ಸುರೀತೀನಿ  ...ಆದ್ರೆ ನೀನು ಮಾಡೋ ಕೆಲಸ ನೋಡಿದ್ರೆ..   ನಾನು ಆಫಿಸ್ ನಲ್ಲಿ ಇರಲ್ಲ ಅಂತ ಗುಡಿಸಿದ ಶಾಸ್ತ್ರ  ಮಾಡಿ ಹೋಗಿ ಬಿಡ್ತೀಯ ಅಲ್ವಾ.. ನನ್ನ ಟೇಬಲ್ ಮೇಲೆ ಎಷ್ಟು ದೂಳು ಕೂತಿದೆ ಅಂತ ಹೋಗಿ ನೋಡು... ನೀನು ಮಾಡೋ ಕೆಲಸದ ಚಂದ ನಿಂಗೆ ತಿಳಿಯುತ್ತೆ.. ಇದೇ ಕೊನೆ....  ಇನ್ನೊಂದು ಬಾರಿ ಹೀಗೆ ಆದರೆ ನಾನು ತಿಂಗಳ ದುಡ್ಡು ಎಣಿಸಲ್ಲ.. ಅಷ್ಟೆ ಅಂತ ಸಿಟ್ಟಿನಲ್ಲಿ ಬಯ್ಯುವುದು ಕೇಳಿತು..

 ನಾನು ಪೇಪರ್ ನ ಹೆಡ್ ಲೈನ್ಸ್ ಓದಿ ಅಂಕಣಗಳತ್ತ ನೋಟ ಬೀರಿದೆ. ಅಷ್ಟರಲ್ಲಿ .. ಹ್ಹೆ.. ಪುಟ್ಟೂ ಸ್ಸಾರೀ ಮರಿ ... ಅರ್ಜೆಂಟಾಗಿ ಹೊರಗೆ ಹೋಗ್ಬೇಕು.. ನಿಂಜೊತೆ ಮಾತಾಡಿದ್ದು ಖುಷಿ ಆಯ್ತು.. ಟೇಕ್ ಕೇರ್ .. ಬೈ.. ಎಂಬ ಶಬ್ದ ದೊಂದಿಗೆ ಕಾರಿನ ಬಾಗಿಲು ಮುಚ್ಚಿ ಕೊಂಡ ಶಬ್ದವೂ ಸೇರಿ ಸಂಪರ್ಕ ಕಡಿಯಿತು. ನಾನು ಕಿವಿಯಿಂದ ಇಯರ್ ಫೋನ್ ತೆಗೆದಿರಿಸಿ ಪತ್ರಿಕೆ ಓದುವುದನ್ನು ಮುಂದುವರಿಸಿದೆ.. 
-- 

7 comments:

 1. ಹೇಗೆ ಪ್ರತಿಕ್ರಿಯೆಸಬೇಕೋ ಗೊತ್ತಾಗುತ್ತಿಲ್ಲ ಮೇಡಂ.

  ನಿಮ್ಮ ಲೇಖನ ಓದಿ ಸಖತ್ ಪಾಪ ಪ್ರಜ್ಞೆ ಕಾಡುತ್ತಿದೆ. ನಾನು ರಜೆಗಳಲ್ಲಿ ಇಡೀ ದಿನ ಮನೆಯಲ್ಲಿದ್ದರೂ ನನ್ನವಳೊಡನೆ ಮಾತಾಡುವುದು ಕಮ್ಮಿ ಕಂಪ್ಯೂಟರ್ ಮುಂದೆ, ಸಿಗರೇಟ್ ಸುಡುತ್ತಲೋ, ಮೊಬೈಲ್ ಮಾತನಾಡುತ್ತಲೋ, ಮಲಗಿಯೇ ಕಳೆದು ಬಿಡುತ್ತೇನೆ. ಕೆಲಸದಲ್ಲಿ ಇದ್ದಾಗ ಮುಗಿದೇ ಹೋಯಿತು "ರಾತ್ರಿ ಚಪಾತಿಗೆ ಸೊಪ್ಪಿನ ಪಲ್ಯ" ಅಂತ ಹೇಳಿ ಕಟ್ ಮಾಡುತ್ತೇನೆ.

  ನಾನು ಮಾಡುತ್ತಿರುವ ತಪ್ಪು ಅವಳನ್ನು ಎಷ್ಟು ನೋಯಿಸುತ್ತಿರ ಬೇಡ? ಇನ್ನು ಮೇಲೆ ಹೀಗೆ ಮಾಡುವುದಿಲ್ಲ.

  ತಪ್ಪು ತಿದ್ದಿದ್ದಕ್ಕೆ ಧನ್ಯವಾದಗಳು.

  ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
  www.badari-poems.blogspot.com
  www.badari-notes.blogspot.com
  www.badaripoems.wordpress.com

  Face book Profile : Badarinath Palavalli

  ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.

  ReplyDelete
 2. ಏನಿದ್ದರೂ ಒಬ್ಬರಿಗೊಬ್ಬರು ಅವರವರ ಅಭಿರುಚಿಯನ್ನು ಪ್ರೋತ್ಸಾಹಿಸುವ ಮತ್ತು ತಪ್ಪುಗಳನ್ನು ವಿಮರ್ಶಿಸಿ ಕೊಟ್ಟು- ತೆಗೆದುಕೊಳ್ಳುವ ನಿಯಮವಿರಬೇಕು. ಅದು ನಡೆಯುತ್ತದೆ.ಇಲ್ಲದಿದ್ದರೆ ಗಂಡ ಬಾರಿನಲ್ಲಿದ್ದರೆ , ಹೆಂಡತಿ ಲೇಡಿಸ್ ಕ್ಲಬ್ ನಲ್ಲಿರುತ್ತಾಳೆ.
  ನನ್ನದು ಇಷ್ಟೇ ಮಾತು ಹೆಮ್ಮನಸ್ಸಿನ ಮಾತು ವಿಶಾಲಾವಾದುದು,ಅಷ್ಟೇ ಸೂಕ್ಷ್ಮವಾದುದು. ಗಂಡಸ್ಸಿನ ಮಾತು ಸ್ವಲ್ಪ ಗಡುಸಾದುದು. ಇವೆರಡು ಪ್ರಕ್ರುತ್ತಿ ದತ್ತವಾದುದು.ಕೆಲವೊಮ್ಮೆ ಇವೆರೆಡು ಮನಸ್ಥಿತಿಗಳು ಅದಲು- ಬದಲು ಆಗುವುದುಂಟು.ಹೆಮ್ಮನಸ್ಸಿನಂತೆ ಗಂಡು,ಗಂಡಿನಂತೆ ಹೆಣ್ಣು. ಅದು ಹೊಂದಾಣಿಕೆಯಲ್ಲಿ ಒಂದಾಗುವಂತಹದ್ದು . ಯಾವಾಗ " ಅಹಂ" ನುಸುಳುತ್ತೋ ಅಲ್ಲಿ ಹಾಲಿಗೆ ಹುಳಿ ಹಿಂಡುವ ಕಾರ್ಯ ನಡೆಯುತ್ತಲೇ ಇರುತ್ತವೆ.ನೀವು ನೇರವಾಗಿ ಅದನ್ನು ವ್ಯಕ್ತ ಪಡಿಸಿದ್ದೀರಿ. ತುಂಬಾ ಸಂತೋಷ.--

  ReplyDelete
 3. think positive .. :) ಬಿಡುವಿಲ್ಲದಾಗಲೂ ಮತ್ತೊಮ್ಮೆ ಸ್ವರ ಕೇಳೋಣ, ಒಂದಿಷ್ಟು ಹಂಚಿಕೊಳ್ಳೋಣ ಅಂತ ಅನ್ನಿಸುವ ಮನಸ್ಥಿತಿ ಇದೆಯಲ್ಲ .. ಅದು ಕೂಡ ಬೆಟ್ಟದಷ್ಟು ಪ್ರೀತಿಯನ್ನೇ ವ್ಯಕ್ತ ಪಡಿಸುವ ಇನ್ನೊಂದು ವಿಧಾನ .. ಬಹುಷಃ ಹೃದಯದ ಧ್ವನಿ ಎಂದರೆ ಅದೇ ಇರಬಹುದು.. ವ್ಯಾವಹಾರಿಕವಾಗಿ ಬೇರೆ ಬೇರೆ ಕೆಲಸಗಳಲ್ಲಿ ಮುಳುಗಿದ್ದರೂ, ಒಳಗಿನ ತುಡಿತ ಸಂಗಾತಿಯ ಸನಿಹವನ್ನೇ ಬೇಡುತ್ತದೆ.

  ರವಿ ಸರ್ ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು.

  ಪಳವಲ್ಲಿಯವರೇ ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ. ನೋಡ್ತಾ ಇರ್ತೇನೆ ..
  --

  ReplyDelete
 4. ಅನಿತಾ ಮೇಡಂ. ಮೋಡ ಕವಿದ ವಾತಾವರಣವಿದೆ. ಗುಡುಗು- ಮಿಂಚು-ಮಳೆ ಸರ್ವೇ ಸಾಧಾರಣಾ. ಹಾಗಂತ ಅದಕ್ಕಾಗಿಯೇ ಮಳೆ ಬಂದು ತಿಳಿಯಾಗುತ್ತಿದೆ. ಅದೇ ರೀತಿ ನಮ್ಮ ಮನಸ್ಸು... ಪ್ರಕೃತ್ತಿಯಂತೆ. ಯಾರೂ ಅದನ್ನು ತಡೆಯಲು ಸಾಧ್ಯವಿಲ್ಲ. ನೀವು ಎಷ್ಟನ್ನು ತುಂಬಿಸುತ್ತೀರೋ ಅಷ್ಟನ್ನೂ ಹೊರ ತೆಗೆಯಲೇ ಬೇಕು. ಅದು ಪ್ರಕೃತ್ತಿ ನಿಯಮ.

  ReplyDelete
 5. ದಿಲ್ ಕಿ ಆವಾಜ್ ಸುನೊ...ಮೇಲ್ನೋಟಕ್ಕೆ ಗಂಡ ಹೆಂಡಿರ ನಡುವಿನ ನೀರಸ ಟೆಲಿಫೊನ್ ಸಂಭಾಶಣೆಯ ನೇರ ಪ್ರಸಾರದಂತೆ ಕಂಡರೂ, ಅದರ ಹುರುಳು ಅತ್ಯಂತ ರಸಮಯವಾಗಿದೆ. ಆಳವಾಗಿ ಅವಲೋಕಿಸಿದರೆ ಇಲ್ಲಿ ತನ್ನವಳನ್ನು ಅತಿಯಾಗಿ ಪ್ರೀತಿಸುವ ಒಬ್ಬ ಗಂಡು ಹಾಗೂ ಅಷ್ಟೇ ಬಲವಾಗಿ ಅವನನ್ನು ಪ್ರೀತಿಸುವ ಒಬ್ಬ ಹೆಣ್ಣೂ ಗೋಚರಿಸುತ್ತಾರೆ. ಬಿಡುವಿಲ್ಲದ ದಿನಚರಿಯಲ್ಲೂ ಮನದನ್ನೆಯ ಸ್ವರ ಆಲಿಸಬೇಕೆಂಬ ಆತನ ಬಯಕೆ; ಪುಟ್ಟು, ಮರಿ ಎಂಬಿತ್ಯಾದಿ ಶಬ್ದ ಪ್ರಯೋಗಗಳಿಂದ ನಲ್ಲೆಯ ಮನಮುಟ್ಟುವ ತವಕ ಇವೆಲ್ಲವೂ ಅವನ ಉತ್ಕಟ ಪ್ರೇಮವನ್ನು ಸೂಚಿಸುತ್ತದೆ.
  ಅಂತೆಯೇ ಸಂಭಾಶಣೆಯ ದಿಕ್ಕು ಅವಳೆಡೆಗೆ ಇಲ್ಲದಿದ್ದರೂ, ಅವನ ಕೊರಳನ್ನಾಲಿಸುತ್ತಾ ತನ್ನ ಕಾಯಕದಲ್ಲಿ ನಿರಾಯಾಸವಾಗಿ ಮುಂದುವರೆಯುವ ನಲ್ಲೆ, ತನ್ನ ನಲ್ಲನ ಚಟುವಟಿಕೆಗಳಲ್ಲಿ ಪರೋಕ್ಷವಾಗಿ ಸಹಕರಿಸುತ್ತಿದ್ದಳೆಂಬುದಕ್ಕೆ ಅವಳು ನಡುವಿನಲ್ಲಿ ಮಾತಾಡಲು ಯತ್ನಿಸದೆ ಇದ್ದದ್ದು ಅಥವಾ ಟೆಲೆಫೋನ್ ಸಂಪರ್ಕವನ್ನು ತುಂಡಿಸದೇ ಇದ್ದದ್ದು ಸಾಕ್ಷಿಯಾಗಿ ನಿಲ್ಲುತ್ತದೆ.
  ಒಟ್ಟಿನಲ್ಲಿ ಹಲವರು ನಿಸ್ಸಾರವೆಂದು ಪರಿಗಣಿಸುವ ಬದುಕಿನ ಸಣ್ಣ ಪುಟ್ಟ ವಿಷಯಗಳನ್ನು ಕೌತುಕಮಯವಾಗಿ ಚಿತ್ರಿಸುವ ನಿನ್ನ ಸಾಮರ್ಠ್ಯಕ್ಕೆ ನಾನು ಅಭಿನಂದಿಸುತ್ತೇನೆ. :):)

  ReplyDelete
 6. nimma barahagalu nannannu innasTu oduvante prerepisuttave anitakka...:-) maatanaadade maatanaadidante antharalla aatara ide E baraha :-)nimma barahagalu nannannu innasTu oduvante prerepisuttave anitakka...:-) maatanaadade maatanaadidante antharalla aatara ide E baraha :-)

  ReplyDelete