ಗಾಳಿಯಲ್ಲಿ ತೇಲಿ ಬಂದ ಹೂವ ಕಂಪಿಗೆ ಮಾರು ಹೋದ ದ್ರೌಪತಿ ಭೀಮಸೇನನನ್ನು ಕಾಡಿಸಿ ಪೀಡಿಸಿ ಸೌಗಂಧಿಕಾ ಪುಷ್ಪವನ್ನು ತರಿಸಿದ್ದು .. , ಯುದ್ಧದಲ್ಲಿ ಸಹಾಯಕ್ಕಾಗಿ ಕೃಷ್ಣನೊಡನೆ ಹೋದ ಸತಿ ಸತ್ಯಭಾಮೆ ದೇವೇಂದ್ರನ ಉದ್ಯಾನವನದಿಂದ ಪಾರಿಜಾತವನ್ನು ಭೂಮಿಗೆ ತಂದದ್ದು ಇದೆಲ್ಲ ಸ್ತ್ರೀಯರ ಪ್ರಕೃತಿ ಪ್ರೇಮದ , ಗಿಡಗಳ ಬಗೆಗಿನ ಪ್ರೀತಿಯ ಪರಾಕಾಷ್ಟತೆಯನ್ನು ಸೂಚಿಸುತ್ತದೆ ಎಂದರೆ ಹೆಣ್ಣು ಮಕ್ಕಳ ಗಂಡಂದಿರಾರು ಒಪ್ಪಿ ತಲೆಯಾಡಿಸುವುದಿಲ್ಲ ಎಂದು ನನಗೆ ತಿಳಿದಿದೆ ಬಿಡಿ. ಯಾಕೆಂದರೆ ನಾನೂ ಈ ಸಮಸ್ಯೆಯನ್ನು ಅನುಭವಿಸಿದವಳೇ ಇದ್ದೇನೆ.
ಪಕ್ಕದ ಮನೆಯ ಕಾಂಪೋಂಡ್ ದಾಟಿ ಬರುವ ಅದಾವುದೋ ಹೂವ ಪರಿಮಳ , ಅವರ ಗೇಟಿನ ಬದಿಯಿಂದಲೇ ಕಾಣ ಬರುವ ಅದರ ಪಾರ್ಶ್ವನೋಟ ನನ್ನನ್ನು ಎಷ್ಟರ ಮಟ್ಟಿಗೆ ಸೆಳೆಯುತ್ತದೆ ಎಂದರೆ ಅವರೆಂದೋ ತೋರಿಕೆಗಾಗಿ ಕೇಳಿ ಮರೆತ ಪುಸ್ತಕವನ್ನೋ , ಮ್ಯಾಗಜಿನ್ನನ್ನೋ ಕೂಡಲೇ ಕೈಯಲ್ಲಿ ಹಿಡಿದು ಅವರ ಮನೆಯ ಗೇಟನ್ನು ಕಿರ್ ಗುಟ್ಟಿಸುತ್ತೇನೆ. ಕಣ್ತುಂಬ ಅದರ ಅಂದವನ್ನು ತುಂಬಿಕೊಂಡರಷ್ಟೇ ಸಾಕೇ.. ಗಿಡದ ಬುಡದಲ್ಲಿ ನನಗೆ ನೆಡಲಾಗುವಷ್ಟು ದೊಡ್ದ ಗೆಲ್ಲುಗಳು ಕವಲೊಡೆದಿವೆಯೇ, ಒಣಗಿದ ಬೀಜಗಳಿವೆಯೇ, ಹೀಗೆ ಎಲ್ಲವನ್ನೂ ಕೂಲಂಕುಶವಾಗಿ ಕಣ್ಣುಗಳು ಕ್ಷಣಾರ್ಧದಲ್ಲಿ ಅಳೆದು ಬಿಡುತ್ತವೆ. ನಿಧಾನಕ್ಕೆ ಅವರ ಮೂಡ್ ಹೇಗಿದೆ ಎನ್ನುವುದನ್ನು ನೋಡಿಕೊಂಡು ಗಿಡ ಕೇಳುವ ಹುನ್ನಾರವೂ ತಲೆಯೊಳಗೆ ತಿರುಗಾಡುತ್ತಿರುತ್ತದೆ. ನನ್ನವರ ಅದೃಷ್ಟ ನೆಟ್ಟಗಿದ್ದರೆ ಗಿಡದ ಯಾವುದೋ ಒಂದು ನೆಡುವಂತಹ ಭಾಗ ನನ್ನ ಕೈಯಲ್ಲಿರುತ್ತದೆ. ಇಲ್ಲದಿದ್ದರೆ ಕೂಡಲೆ ಪತಿ ಪರಾಯಣೆಯಾದ ನಾನು ಅವರನ್ನು ಸ್ತುತಿಸಲು ತೊಡಗುತ್ತೇನೆ. ಮೊದಲಿನ ಕಾಲದಲ್ಲಿ ಋಷಿ ಮುನಿಗಳು ಒಂಟಿ ಕಾಲಿನಲ್ಲಿ ನಿಂತು ತಪ್ಪಸ್ಸನ್ನಾಚರಿಸುತ್ತಿದ್ದರು ಎಂದು ಕೇಳಿದ್ದೋ, ಓದಿದ್ದೋ ನೆನಪಿದ್ದರೆ ಒಮ್ಮೆ ಅದನ್ನು ಕಣ್ಣೆದುರು ತಂದುಕೊಳ್ಳಿ. ಅದಕ್ಕಿಂತಲೂ ಕಠಿಣ ತಪಸ್ಸು ನನ್ನದು . ಗಿಡ ನನ್ನ ಕೈಗೆ ಬರುವವರೆಗೆ ಊಟ, ಉಪಚಾರಗಳ ಗೊಡವೆಗೇ ಹೋಗುವುದಿಲ್ಲ. ಪತಿದೇವರಾದರೂ ಎಷ್ಟೆಂದು ನನ್ನ ತಪಸ್ಸನ್ನು ಪರೀಕ್ಷಿಸಲೆತ್ನಿಸಿ ಹೋಟೇಲುಗಳಿಗೆ ಎಡತಾಕಿಯಾರು ನೀವೆ ಹೇಳಿ..? ಕೂಡಲೆ ಒಲಿದು ತಥಾಸ್ತು ಎಂದು ನರ್ಸರಿಯಿಂದ ಕೊಂಡ ಗಿಡವೊಂದನ್ನು ನನ್ನ ಕೈಯಲ್ಲಿಟ್ಟು, ನಾನು ಅದರ ಅಂದ ಚಂದಗಳನ್ನು ಹೊಗಳಲು ಸುರು ಮಾಡುವ ಮೊದಲೇ ಮಾಯವಾಗಿ ಬಿಡುತ್ತಾರೆ!
ಇಂತಿಪ್ಪ ಕಾಲದಲ್ಲೊಮ್ಮೆ ನನ್ನ ತವರೂರಿನಲ್ಲಿ ಊರಿಗೆ ಊರೇ ಸಂಭ್ರಮಿಸುವ ಜಾತ್ರೆ ಸಮೀಪಿಸಿತು. ಮಗಳಿಲ್ಲದ ಜಾತ್ರೆ ತೌರಿನವರಿಗೆ ಹೇಗೆ ರುಚಿಸೀತು ಎಂಬ ಸತ್ಯವನ್ನರಿತು ನಾನು ಒಂದೆರಡು ದಿನ ಮುಂಚಿತವಾಗಿಯೇ ತಲುಪಿದ್ದೆ. ನನ್ನ ಓರಗೆಯ ಗೆಳತಿಯರನೇಕರು ಇದನ್ನೇ ಅನುಸರಿಸುತ್ತಿದ್ದ ಕಾರಣ ನಮ್ಮ ಮಾತು ಗೌಜು ಗದ್ದಲಗಳಲ್ಲಿ ಜಾತ್ರೆ ಯಾವಾಗ ಕಳೆತೆಂದೇ ತಿಳಿಯುತ್ತಿರಲಿಲ್ಲ.
ಈ ಸಲ ನನ್ನಿಂದ ಒಂದು ದಿನ ಮುಂಚಿತವಾಗಿಯೇ ಬಂದು ಅಪ್ಪನ ಮನೆಯ ಸೇವೆಯನ್ನು ಸ್ವೀಕರಿಸುತ್ತಿದ್ದ ಗೆಳತಿ, ನನ್ನ ಮುಖ ಕಂಡೊಡನೇ ಅವಸರದಿಂದ 'ಹೇ ಈ ಸಲ ಜಾತ್ರೆಗೆ ಹೂವಿನ ಬೀಜಗಳ ಅಂಗಡಿ ಬಂದಿದೆ ಕಣೇ.. ನಾನಂತೂ ನಿನ್ನೆಯೇ ಕೆಲವು ಜಾತಿಯ ಬೀಜಗಳನ್ನು ತೆಗೆದಿಟ್ಟುಕೊಂಡೂ ಆಯ್ತು ಎಂದು ನನ್ನ ಹೊಟ್ಟೆ ಉರಿಸಿದಳು. ಹತ್ತಿರವೇ ಇದ್ದ ಅವಳ ಮನೆಗೆ ನನ್ನನ್ನೆಳೆದೊಯ್ದು ಬಣ್ಣ ಬಣ್ಣದ ಹೂವಿನ ಚಿತ್ರಗಳುಳ್ಳ ಕಾಗದದ ಪುಟ್ಟ ಲಕೋಟೆಗಳನ್ನು ತೋರಿಸಿದಳು. ಒಳಗೇನಿದೆ ಎಂದು ನೋಡುವಂತಿರಲಿಲ್ಲ. ನನ್ನ ಕಣ್ಣಲ್ಲಿ ಹೊಳೆದ ಆಸೆಯನ್ನು ಅರ್ಥೈಸಿಕೊಂಡು, 'ನಾಳೆಯೂ ಇರುತ್ತೆ, ನಾನೇ ಕರ್ಕೊಂಡು ಹೋಗ್ತೀನಿ' ಎಂದು ಬೇಗನೇ ಅವುಗಳನ್ನು ಎತ್ತಿ ಒಳಗಿಟ್ಟಳು.
ರಾತ್ರಿಯಿಡೀ ಕನಸಿನಲ್ಲೆಲ್ಲ ನಾನು ಕಾಗದದ ಲಕೋಟೆಯ ಮೇಲೆ ಕಂಡ ಹೂವುಗಳ ಉದ್ಯಾನವನದಲ್ಲಿ ವಿಹರಿಸಿದ್ದೇ ವಿಹರಿಸಿದ್ದು. ಬೆಳಗಾಗುತ್ತಿದ್ದಂತೆ ಸೂರ್ಯ ಎಲ್ಲರಿಗಿಂತ ಮೊದಲು ನನ್ನನ್ನೇ ಏಳಿಸಿದ್ದ. ಅಮ್ಮ ಇನ್ನೂ ತಿಂಡಿಯ ತಯಾರಿಯಲ್ಲಿರುವಾಗಲೇ ಪಕ್ಕದ ಮನೆಯಲ್ಲಿದ್ದ ಗೆಳತಿಯನ್ನು ಕರೆದುಕೊಂಡು ಹೂವಿನ ಬೀಜದ ಅಂಗಡಿಗೆ ನಡೆದು ಕಣ್ಣಿಗೆ ಅಂದವೆಂದು ಕಂಡ ಎಲ್ಲಾ ಹೂಗಳ ಬೀಜಗಳನ್ನು ಖರೀದಿಸಿದೆ.
ಬಣ್ಣ ಬಣ್ಣದ ಹೂವಿನ ಚಿತ್ರಗಳು. ನೋಡಿದರೆ ಕಣ್ಣು ತಂಪೆನಿಸುತ್ತಿತ್ತು. ಸಾಮಾನ್ಯವಾಗಿ ಜಾತ್ರೆಯ ನಂತರವೂ ನನ್ನ ತೌರಿನ ವಾಸ್ತವ್ಯವನ್ನು ಒಂದೆರಡು ದಿನಕ್ಕೆ ವಿಸ್ತರಿಸುತ್ತಿದ್ದ ನಾನು, ಮೇಲಿಂದ ಮೇಲೆ ಬರ ತೊಡಗುವ ಇವರ ಫೋನ್ ಕರೆಗಳ ಕರಕರೆ ಸುರುವಾವಾದ ನಂತರವೇ ಹೊರಡುತ್ತಿದ್ದೆ. ಆದರೆ ನಾನು ಈ ಸಲ ಜಾತ್ರೆ ಮುಗಿಯುತ್ತಿದ್ದಂತೇ, ಗಂಟು ಮೂಟೆ ಕಟ್ಟಿ ಹೊರಟೇ ಬಿಟ್ಟಿದ್ದೆ. ಇವರ ಅಚ್ಚರಿಯ ನೋಟಕ್ಕೆ ಉತ್ತರಿಸುವ ಗೋಜಿಗೆ ಹೋಗದೇ, ತಂದ ಲಗೇಜನ್ನು ಬಿಚ್ಚುವ ಮುಂಚೆಯೇ ಚಟ್ಟಿಗಳಿಗೆ ಮಣ್ಣು ತುಂಬುವ ಕಾರ್ಯದಲ್ಲಿ ನಿರತಳಾದೆ.
ಇವರು ನನ್ನನ್ನು ಇಂತಹ ಹೊತ್ತಿನಲ್ಲಿ ಮಾತಾಡಿಸುವ ಅಪಾಯಕ್ಕೆ ಕೈ ಹಾಕದೇ ನನ್ನಮ್ಮ ಕಟ್ಟಿಕೊಟ್ಟಿದ್ದ ಕೋಡುಬಳೆ, ರವೆಉಂಡೆಗಳು ಹೇಗಾಗಿದೆ ಎಂದು ನೋಡಲು ತಟ್ಟೆಗೆ ಹಾಕಿಕೊಂಡು ಆರಾಮವಾಗಿ ಸೋಫಾರೂಢರಾದರು.
ನಾನು ಒಂದೊಂದೇ ಲಕೋಟೆಗಳನ್ನು ಜಾಗ್ರತೆಯಿಂದ ಹರಿದು ,ಒಳಗಿನ ಬೀಜಗಳನ್ನು ನೋಡತೊಡಗಿದೆ. ಅಚ್ಚರಿಯೆಂಬಂತೆ ಎಲ್ಲಾ ಲಕೋಟೆಗಳಲ್ಲೂ ಬೀಜಗಳು ಕಪ್ಪಾಗಿದ್ದು ಒಂದೇ ರೀತಿಯ ಆಕಾರ ಗಾತ್ರಗಳನ್ನು ಹೊಂದಿದ್ದವು. ಒಂದೇ ತರದ ಬೀಜಗಳಿಂದ ಇಷ್ಟೊಂದು ಬಗೆಯ ಹೂವುಗಳೇ ! ಎಂದು ಉದ್ಗರಿಸುತ್ತಾ ಇವರೆಡೆಗೆ ತಿರುಗಿ , " ನೋಡ್ತಾ ಇರಿ ಇನ್ನು ಕೆಲವೇ ದಿನಗಳಲ್ಲಿ ನಮ್ಮನೆಗೆ ಸುಂದರ ಹೂದೋಟ ಹೊಂದಿದ ಮನೆ ಅಂತ ಅವಾರ್ಡ್ ಬರುತ್ತೆ. ಮೊನ್ನೆ ಆ ಪಕ್ಕದ ಮನೆ ಯಶೋದಮ್ಮ ಅಂತೂ ಒಂದು ಪುಟ್ಟ ಗಿಡ ಕೊಡೋಕ್ಕೂ ಹೇಗಾಡ್ಬಿಟ್ರು ಅಂತೀರಿ! ಇನ್ನು ನನ್ನ ಗಾರ್ಡನ್ ನೋಡಿ ತಾವೇ ಬರ್ತಾರೆ ನನ್ಹತ್ರ ಗಿಡ ಕೇಳ್ಕೊಂಡು" ಎಂದು ಹೆಮ್ಮೆಯಿಂದ ನುಡಿದು ಕನಸಿನ ಲೋಕಕ್ಕೂ ಹೋಗಿ ಬಂದೆ. ಇವರೋ ಬಾಯೊಳಗೆ ತುಂಬಿಕೊಂಡ ರವೆ ಉಂಡೆಯಿಂದಾಗಿ ಹುಂ.. ಉಹುಂ.. ಮ್ ಮ್.. ಎಂದೇನೋ ಸ್ವರ ಹೊರಡಿಸಿದರು.
ಮರುದಿನದಿಂದಲೇ ದಿನಕ್ಕೆ ನಾಲ್ಕು ಸಲ ಚಟ್ಟಿಯ ಕಡೆಗೆ ಇಣುಕುತ್ತಾ ,ಜಾತಕ ಪಕ್ಷಿಯಂತೆ ಬೀಜಗಳು ಮೊಳಕೆಯೊಡೆಯುವ ಸುಮುಹೂರ್ತವನ್ನು ಕಾಯುತ್ತಾ ಕುಳಿತೆ. ಎಸೆಯದೆ ಉಳಿಸಿಕೊಂಡಿದ್ದ ಬಣ್ಣದ ಹೂವಿನ ಲಕೋಟೆಗಳನ್ನು ಅಡುಗೆ ಮನೆಯ ಕಟ್ಟೆಯಲ್ಲೆ ಇಟ್ಟುಕೊಂಡು ಅಗಾಗ ನೋಡಿ ಆನಂದಿಸುತ್ತಿದ್ದೆ. ತಾಳುವಿಕೆಗಿಂತ ತಪವು ಇಲ್ಲ ಅಂತ ದಾಸರು ಸುಮ್ಮನೇ ಹೇಳಿಲ್ಲ ನೋಡೀ.. ಒಂದು ಶುಭ ಮುಂಜಾನೆ ಎಲ್ಲಾ ಮಣ್ಣಿನ ಚಟ್ಟಿಗಳಲ್ಲೂ ಪುಟ್ಟ ಪುಟ್ಟ ಹಸಿರೆಲೆಗಳ ಗಿಡಗಳು ತಲೆದೋರಿದ್ದವು! ದಿನೇ ದಿನೇ ಗಿಡಗಳು ದೊಡ್ದದಾಗುತ್ತಿದ್ದಂತೆ ಮತ್ತೊಮ್ಮೆ ಆಶ್ಚರ್ಯ ಪಡುವ ಸರದಿ ನನ್ನದಾಯಿತು. ಅದ್ಯಾಕೋ ಎಲ್ಲಾ ಗಿಡಗಳ ಎಲೆಗಳೂ ಒಂದೆ ರೀತಿಯದಾಗಿದ್ದವು.ಗಿಡಗಳೆಲ್ಲ ಮೂರ್ನಾಲ್ಕು ಇಂಚುಗಳಷ್ಟು ಬೆಳೆಯುವ ಮೊದಲೇ ಎಲೆಯ ಬುಡದಿಂದ ಬತ್ತದ ಉಮಿಯಂತೆ ತೋರುವ ಪಾಚಿ ಬಣ್ಣದ ಮೊಗ್ಗುಗಳು ಮೂಡಿದವು. ಅಷ್ಟರಲ್ಲೇ ಯಶೋದಮ್ಮ ನಮ್ಮ ಮನೆಗೆ ಬಂದಿದ್ದವರು ನನ್ನ ಚಟ್ಟಿಗಳ ಕಡೆಗೆ ತಿರುಗಿ ನೋಡಿ 'ಅದ್ಯಾಕೆ ಕಾಡು ಹರಿವೆ ಗಿಡ ಇಷ್ಟೊಂದು ಚಟ್ಟಿ ಗಳಲ್ಲಿ ಬೆಳೀತಿದ್ದೆಯಾ..?? ಪಲ್ಯ ಮಾಡೋಕು ಕಹಿ ಆಗುತ್ತೆ ಅದು' ಅಂದುಬಿಡಬೇಕೇ .. ಬಣ್ಣ ಬಣ್ಣದ ಹೂಗಳ ನನ್ನ ಕನಸೆಲ್ಲ ಕಪ್ಪು ಬಿಳುಪಾಗಿ ನನ್ನನ್ನು ಅಣಕಿಸಿ ಮಾಯವಾದವು.
ಇವರು ನನ್ನನ್ನು ಮತ್ತು ನನ್ನ ಉದ್ಯಾನವನದ ಅಂದ ಕಂಡು ನಗುತ್ತಿದ್ದರೆ , ನಾನು ಛಲ ಬಿಡದೆ ಬಣ್ಣದ ಲಕೋಟೆಗಳ ಮೇಲೆ ಸರಬರಾಜುದಾರರ ವಿಳಾಸವೇನಾದರೂ ಇದೆಯೋ ಎಂದು ಹುಡುಕುತ್ತಿದ್ದೆ.ಕೋಲು ಕೊಟ್ಟು ಹೊಡೆಸಿಕೊಳ್ಳಲು ಅವರೇನು ನಿನ್ನಂತ ಅತಿ ಬುದ್ಧಿವಂತರೇ ..ಎಂದು ನನ್ನ ವೇದನೆಯ ಅಗ್ನಿಗೆ ಇವರು ಇನ್ನೊಂದಿಷ್ಟು ತುಪ್ಪ ಸುರಿದರು .ಕೋಪ ಬಂದರೂ ಮಾತನಾಡದೆ ಲಕೋಟೆ ಗಳನ್ನೆಲ್ಲ ಬಚ್ಚಲ ಒಲೆಗೆ ಎಸೆದೆ .
ಈಗ ಯಥಾ ಪ್ರಕಾರ ನನ್ನ ಮೊದಲಿನ ಹವ್ಯಾಸದಂತೆ ಅವರಿವರ ಮನೆಯ ಕಾಂಪೋಂಡಿನ ಕಡೆಗೆ ಕಣ್ಣು ಹಾಯಿಸುವುದನ್ನು ಪ್ರಾರಂಭಿಸಿದ್ದೇನೆ.