Pages

Total Visitors

Tuesday, January 3, 2012

ಅನುಬಂಧ ..





ಕ್ಲಾಸ್ ತಲುಪಲು ಇನ್ನೊಂದಿಷ್ಟು ದೂರ ಇರುವಾಗಲೇ ಅಲ್ಲಿ ಗುಂಪು ಕಟ್ಟಿ ಮಾತನಾಡುತ್ತಿದ್ದ ಗೆಳತಿಯರ ಸ್ವರದೊಂದಿಗೆ ನನ್ನದನ್ನೂ ಸೇರಿಸಿದೆ. 
ಒಮ್ಮೆ  ಕತ್ತೆತ್ತಿ ನನ್ನ ಗ್ರೂಪಿನವರೆಲ್ಲ ಇರುವುದನ್ನು ಧೃಡಪಡಿಸಿಕೊಂಡು 'ಹೇ ಗೊತ್ತಾ ವಿಷ್ಯ..' ಅಂದೆ. 
ಏನೇ ಅದು.. ಪ್ರಪಂಚದ ಯಾವುದೋ ರಹಸ್ಯವೊಂದು ಅನಾವರಣಗೊಳ್ಳುವ ಕ್ಷಣಗಣನೆಯಿದ್ದಿತು ಅವರ ಕುತೂಹಲಭರಿತ ನೋಟದಲ್ಲಿ.. 
ಇನ್ನೊಮ್ಮೆ ಗಂಟಲು ಸರಿ ಪಡಿಸಿಕೊಂಡು 'ನಮ್ಮ ಕಾಲೇಜಿನ ಬ್ಯೂಟಿಕ್ವೀನ್, ನಮ್ಮ ತರಗತಿಯ ನಿರ್ಮಲಾಗೆ ಮದ್ವೆಯಂತೆ' ಎಂದೆ.
ಅರೆ .. ಹೌದಾ.. ಯಾವಾಗ, ಎಲ್ಲಿ.. ಯಾರೇ ಹುಡ್ಗ ಅಂತೆಲ್ಲ ಪ್ರಶ್ನೆಯ ಮಳೆ ನನ್ನ ತಲೆಯ ಮೇಲೆ ಸುರಿಯತೊಡಗಿತು.
'ಅದೆಲ್ಲ ನಂಗೂ ಗೊತ್ತಿಲ್ಲ.. ಮದ್ವೆ ಅಂತ ಮಾತ್ರ ಗೊತ್ತಿರೋದು..' 
 ಮೊದಲು ಮಾತಾಡುತ್ತಿದ್ದ ಸುದ್ಧಿ ಗಳಿಗೆಲ್ಲ ಫುಲ್ ಸ್ಟಾಪ್ ಜಡಿದು, ಯಾರಾಗಿರಬಹುದು ಹುಡುಗ ಎನ್ನುವ ಬಗ್ಗೆ ತಲೆ ಕೆಡಿಸಿಕೊಳ್ಳಲುತೊಡಗಿದರು. 
'ಆ ಬೈಕ್ ನಲ್ಲಿ ಯಾವಾಗ್ಲೂ ಕಾಲೇಜ್ಗೆ  ಸುತ್ತು ಹೊಡೀತಾ ಇರ್ತಾನಲ್ವಾ ಹೀರೋ ತರ  ಅವನೇ ಇರ್ಬೇಕು..' ಎಂದಿತು ಒಂದು ಸ್ವರ.
'ಥೂ.. ಅವ್ನಲ್ಲ ಕಣೆ.. ಅವನಿಗೆ ಬೈಕ್ ಗೆ ಪೆಟ್ರೋಲ್ ಹಾಕ್ಬೇಕಾದ್ರೂ ಅವ್ನಪ್ಪನತ್ರ ಹಲ್ ಗಿಂಜಬೇಕು..ಅವ್ನನ್ನ ಇವ್ಳು ಈ ಜನ್ಮದಲ್ಲಿ ಮದ್ವೆ ಆಗಲ್ಲ ಬಿಡು..' 
'ಹೇ.. ನಮ್ಮ ಶುಕಮುನಿ ಲೆಕ್ಚರ್ ಅಲ್ಲ ತಾನೆ..' ಇನ್ನೊಬ್ಬಳ ಚಿಂತೆ.
'ಪಾಠ ಮಾಡುವಾಗ ಬೋರ್ಡ್, ತಪ್ಪಿದ್ರೆ ನೆಲ.. ಇವೆರಡನ್ನು ಬಿಟ್ಟರೆ ಬೇರೆಲ್ಲೂ ನೋಡದ ಅವರಂತೂ ಅಲ್ಲವೇ ಅಲ್ಲ..' ತಳ್ಳಿ ಹಾಕಿತೊಂದು ಗಡಸು ಕಂಠ.
' ಬಿಡು ನಂಗೆ ಗೊತ್ತಾಯ್ತು.. ಆವತ್ತು ಅವ್ಳ ಬರ್ಥ್ ಡೇಗೆ ನಮ್ಮನ್ನೆಲ್ಲಾ ಹೋಟೆಲ್ ಗೆ ಕರ್ಕೊಂಡು ಹೋಗಿ ಟ್ರೀಟ್ ಕೊಡ್ಸಿದ್ಲಲ್ಲಾ.. ಆ ದಿನ ಹೋಟೆಲ್ನವನು ಅವ್ಳತ್ರ ದುಡ್ಡೇ ತೆಗೊಂಡಿಲ್ಲ.ಅವ್ನೇ ಆಗಿರ್ಬೋದು ಕಣೇ.. ಅಂತ ತಿಂಡಿಪೋತಿಯೊಬ್ಬಳು ನೆನಪಿಸಿದಳು. 
'ಇಲ್ಲಾಮ್ಮ.. ನೋಡೋಕ್ಕೇನೋ ಚಿಕ್ಕವನ ತರ ಕಾಣಿಸಿದ್ರೂ, ಅವನಿಗೆ ಆಗ್ಲೇ ಮದ್ವೆ ಆಗಿ ಎರಡು ಮಕ್ಳ ಅಪ್ಪ ಆಗಿದ್ದಾನೆ..' ಅವ್ನಾಗಿರಲ್ಲ' ಇನ್ನೊಬ್ಬಳ  ಹೇಳಿಕೆ. 
ಊರಲ್ಲಿದ್ದ, ನಮಗೆ ಗೊತ್ತಿರೋ ,ವಿವಾಹಯೋಗ್ಯ ಅಂತ ನಮ್ಗನ್ನಿಸೋ ಎಲ್ರನ್ನು ಕಣ್ಣೆದುರಿಗೆ ತಂದುಕೊಂಡು ಪೆರೆಡ್ ನಡೆಸಿದರೂ ಅವಳನ್ನು ಮದುವೆಯಾಗುವ ಗಂಡು ಯಾರಿರಬಹುದೆನ್ನುವ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. 
ನಮ್ಮ ಇಷ್ಟೆಲ್ಲಾ ಚರ್ಚೆಗೆ ಕಾರಣವೂ ಇರದಿರಲಿಲ್ಲ. ಕಾಲೇಜ್ ಗೆ ಪ್ರತಿದಿನ ಹನ್ನೊಂದು ಗಂಟೆಗೆ ಹಾಜರಾಗುವ ಪೋಸ್ಟ್ ಮ್ಯಾನ್ ಅವಳ ಕೈಗೊಂದು ಪತ್ರ ನೀಡದೇ ಹೋದದ್ದನ್ನು ನಾವ್ಯಾರು ಕಂಡೇ ಇಲ್ಲ. ಆ ಪತ್ರವನ್ನು ಅವಳು ಜೋಪಾನ ಮಾಡುವ ರೀತಿ, ಮತ್ತೆ ಮತ್ತೆ ಓದಿ ಕನಸಿನ ಲೋಕದಲ್ಲಿದ್ದಂತಿರುತ್ತಿದ್ದ ಅವಳ ನಡವಳಿಕೆ ಎಲ್ಲವೂ ನಮಗೆ ಕೆಟ್ಟ ಕುತೂಹಲವನ್ನು ಉಂಟು ಮಾಡಿತ್ತು. ಪತ್ರದ ಹಿಂದಿನ  ಬದಿಯಲ್ಲಿ ದಿನಕ್ಕೊಂದು ಹೆಸರು ಬೇರೆ.. ಈ ವಿಷಯ ಅವಳ ಪಕ್ಕವೇ ಕುಳಿತುಕೊಳ್ಳುವ ನಮ್ಮ ಗುಂಪಿನ ಸದಸ್ಯೆಯ ಗಂಭೀರ ಪತ್ತೇದಾರಿ ಕೆಲಸದ ನಂತರ ದೊರಕಿದ್ದು. ಆದರೂ ಆ ಪತ್ರದ ಮೂಲವ್ಯಾವುದು ಅಂತ ನಮಗೆ ತಿಳಿದಿರಲಿಲ್ಲ. 
ಸ್ವಲ್ಪ ದೂರದಲ್ಲಿ ಪುಸ್ತಕ ಎದೆಗವುಚಿಕೊಂಡು ಅವಳು ಬರುವುದನ್ನು ಕಾಣದಿದ್ದರೆ ನಮ್ಮ ಚರ್ಚೆ ಇನ್ನೂ ಮುಂದುವರಿಯುತ್ತಿತ್ತು. 
ಬಂದವಳೇ ನಮ್ಮ ಗುಂಪಿನ ಸಮೀಪ ಬಂದು ಮುಖ ಕೆಂಪೇರಿಸಿಕೊಂಡು 'ನಂಗೆ ಈ ತಿಂಗಳು 17  ನೇ ತಾರೀಖಿಗೆ ಮದ್ವೆ' ಅಂದಳು. 
ನಾವೆಲ್ಲರೂ 'ಕಂಗ್ರಾಟ್ಸ್ ಕಣೇ' ಅಂತ ಶುಭ ಹಾರೈಸಿದೆವು. 
ನಮ್ಮ ಗುಂಪಿನಿಂದ ಒಂದು ಸ್ವರ ಮೆಲ್ಲನೆದ್ದಿತು. ' ಯಾರೇ ಗಂಡು? ಏನ್ ಮಾಡ್ಕೊಂಡಿದ್ದಾರೆ? 
ಅವಳು ಸುಂದರ ನಗೆಯರಳಿಸಿ 'ಗೊತ್ತಿದ್ರೂ ನನ್ನನ್ಯಾಕೆ ಸತಾಯಿಸ್ತೀರಾ ' ಎಂದು   ಅಮಾಯಕ ನೋಟವೆಸೆದಳು.. 

ಸಾಕೇ ಬಿನ್ನಾಣ .. ನಮಗ್ಯಾರಿಗೂ ಗೊತ್ತಿಲ್ಲ ಅಂತ ನಿಂಗೆ ಗೊತ್ತಿದೆ.. ಈಗ್ಲೂ ಇಷ್ಟ ಇಲ್ಲದಿದ್ರೆ ಹೇಳಬೇಡ ಅಂದಿತೊಂದು ಖಡಕ್ ವಾಣಿ .. 
ನೀವು ನೋಡಿದ್ದೀರಿ ಅವರನ್ನ .. ಅಂದಳು ಇನ್ನಷ್ಟು ನಾಚಿ.. 
ಹೌದೇ. ಎಂದು ನಾವುಗಳು ಮುಖ ಮುಖ ನೋಡಿಕೊಂಡೆವು..
 ಆದರೂ ಸೋತೆವು ಎನ್ನುವುದನ್ನು ಒಪ್ಪಿಕೊಳ್ಳದ ಕೋಮಲ ಕಂಠವೊಂದು  .. ನೀನೇ ಹೇಳಿ ಬಿಡು.. ಗಂಡ ಆದ ಮೇಲೆ ಹೆಸರು ಹೇಳಬಾರದು ಅಂತ ನಮ್ಮ ಅಜ್ಜಿ ಹೇಳ್ತಾ ಇದ್ರು ಅಂತ ಅಂದಿತು. 
ಅವಳು ಇನ್ನೊಂದಿಷ್ಟು  ನುಲಿಯುತ್ತಾ' ಅದೇ ಕಣ್ರೇ.. ದಿನಾ ಬರಲ್ವಾ ಲೆಟರ್ ತೆಗೊಂಡು ಪೋಸ್ಟ್ ಮ್ಯಾನ್.. ದಿನೇಶ್ ..  ಅವ್ರೇ ಮದ್ವೆ ಗಂಡು .. ಅಂದಳು.



11 comments:

  1. ಮ್ಯಾರೇಜಸ್ ಆರ್ ಮೇಡ್ ಇನ್ ಹೆವನ್ ಅನ್ನೋದು ಇದಕ್ಕೇನಾ :):)
    ತುಂಬಾ ಚೆನ್ನಗಿದೆ. ಇಷ್ಟ ಆಯ್ತು :)

    ReplyDelete
  2. ಹಃ ಹಾಹ ...ಪೋಸ್ಟ್ ಮನ್ ಮದುವೆ ಆದ್ರೆ ಒಳ್ಳೇದು ..ಸ್ಟಾಂಪ್ ಖರ್ಚು ಇಲ್ಲ.....:))))

    ReplyDelete
  3. beautiful presentation.. anda haage nandoo ide college...

    ReplyDelete
  4. ಅನೀತಕ್ಕ ಎಂದಿನಂತೆ ಕತೆಯಲ್ಲಿ ಲವಲವಿಕೆ ಇದೆ ಮತ್ತು ಕುತೂಹಲವನ್ನು ಕಾಯ್ದುಕೊಂಡು ಕತೆ ಹೆಣೆಯುವ ನಿಮ್ಮ ಜಾಣ್ಮೆಗೆ ನೀವೇ ಸಾಟಿ.. ನಾ ಕಂಡಂತೆ ನೀವೊಬ್ಬ ಒಳ್ಳೆಯ ಕತೆಗಾರ್ತಿ, ಸುಂದರವಾಗಿ ಅಷ್ಟೆ ಅಚ್ಚುಕಟ್ಟಾಗಿ ಕತೆ ನೇಯುತ್ತೀರಿ, ತುಂಬಾ ಇಷ್ಟಪಟ್ಟೆ..:))) ಹುಡುಗಿಯ ನಡುವೆ ನಡೆಯುವ ಗುಸು ಗುಸು ಗಾಸಿಪ್ ಗಳ ಬಗ್ಗೆ ತುಂಬ ರಸವಾತ್ತಾದ ವರ್ಣನೆಯಿದೆ.. ಕಡೆಯಲ್ಲಿನ ತಿರುವ ಓದುಗರನ್ನು ನಗೆಗಡಲಲ್ಲಿ ತೇಲಿಬಿಡುತ್ತದೆ.. ಪತ್ರವ್ಯವಹಾರ ನಡೆಯುವ ಯಾವುದೇ ಪ್ರೇಮಕತೆಗಳಲ್ಲಿ ಪೋಸ್ಟ್ ಮ್ಯಾನ್ ಬಗ್ಗೆ ಎಚ್ಚರವಾಗಿರಬೇಕೆಂಬ ಸಂದೇಶ ರವಾನಿಸಿದೆ..;)

    ReplyDelete
  5. ಪ್ರೀತಿಯ ಅನಿತಾ ಮೇಡಂ.,

    ಅನುಬಂಧ ಒಂದು ಉತ್ತಮ ಕಥನ.

    ಮದುವೆಗಳ ಬಗ್ಗೆ ಉತ್ತಮ ವಿಶ್ಲೇಷಣೆ ಕೊಟ್ಟಿದ್ದೀರಿ. ಎಂದಿನಂತೆ ನಿಮ್ಮ ಕಥನ ಶೈಲಿಯಲ್ಲಿ ನೀವು ಕುತೂಹಲವನ್ನು ಉಳಿಸಿಕೊಂಡು ಉತ್ತಮ ಅಂತ್ಯ ಕೊಟ್ಟಿದ್ದೀರಿ.

    ಚಿತ್ರಗಳು ಒಪ್ಪುವಂತಿವೆ.

    ನನ್ನ ಬ್ಲಾಗಿಗೀ ಸ್ವಾಗತ ನಿಮಗೆ.

    ReplyDelete
  6. ಅನಿತಾ ಮೇಡಂ...

    ಪೋಸ್ಟ್ ಮ್ಯಾನ್ ಹೆಸರು ಬಂದಾಗ ಆತನೇ ಹುಡುಗನೋ ಎಂಬ ಭಾವನೆ ಬಂದು ಹೋಯಿತು.....ನನ್ನ ಊಹೆ ನಿಜವಾದಾಗ ನಾನೇ ಕಥೆ ಬರೆದಷ್ಟು ಖುಸಿ ಆಯಿತು....ಉತ್ತಮ ನಿರೂಪಣೆ....ಧನ್ಯವಾದಗಳು.....

    ನನ್ನ ಬ್ಲಾಗ್ ಗೂ ಬನ್ನಿ......

    ReplyDelete
  7. ಬಹಳ ಚನ್ನಾಗಿದೆ ಅನಿತಕ್ಕ...ಇ೦ದಿನ ದಿನಗಳಲ್ಲಿ ಈ ರೀತಿಯ ಘಟನೆಗಳೇ ಹೆಚ್ಚು..

    ReplyDelete