ಮೊನಾಲಿಸಾಳ ಚಿತ್ರಪಟವನ್ನು ನೋಡ್ತಾ ಇದ್ದೆ. ನಿಗೂಢ ನಗುವಿದೆಯಂತೆ ಅವಳ ತುಟಿಗಳಲ್ಲಿ. ಆದ್ರೆ ಅದನ್ನ ತಿರುಗಾ ಮುರುಗಾ ಮಾಡಿ ನೋಡಿದರೂ ನಂಗೆ ಯಾವ ನಗುವೂ ಕಾಣಿಸಲಿಲ್ಲ. ಅರೆ ಇದೆಂತಾ ಹೇಳಿಕೆ! ಕಲೆಗೆ ಅಪಚಾರವಾಯಿತು ಅಂತ ಕೊಂಕೆತ್ತಬೇಡಿ. ನಾನು ನಗುವನ್ನು ಗುರುತಿಸುವುದು ಹೇಗಪ್ಪಾ ಅಂದ್ರೆ, ಬಾಯಲ್ಲಿರೊ ಅಷ್ಟೂ ಹಲ್ಲುಗಳು ಹೊರಗಿಣುಕಿ ತಮ್ಮ ಅಂಕು ಡೊಂಕುಗಳನ್ನು ಪ್ರದರ್ಶಿಸುತ್ತಿರಬೇಕು. ಸರಿಯಾಗಿ ಹೇಳ್ಬೇಕು ಅಂದ್ರೆ ನಮ್ಮ ಸದಾನಂದ ಗೌಡರ ಹಾಗೆ. ಮುಖ್ಯ ಮಂತ್ರಿ ಪಟ್ಟವನ್ನು ಕಳೆದುಕೊಂಡಾಗಲೂ ಸಹ ಅವರು ತಮ್ಮ ಸಾವಿರ ವ್ಯಾಟಿನ ನಗೆಯನ್ನು ಕಳೆದುಕೊಳ್ಳಲಿಲ್ಲ. ಅದೇನು ವಿನೋದವೋ ವಿಷಾದವೋ ಒಂದೂ ತಿಳಿಯೋಲ್ಲ.ಅವರ ನಗು ಒಂತರಾ ಗುಂಡೂರಾಯರ ಕೂಲಿಂಗ್ ಗ್ಲಾಸ್ ಇದ್ದ ಹಾಗೆ. ಅದರ ಹಿಂದಿನ ಭಾವನೆಗಳನ್ನು ಓದುವುದೇ ಕಷ್ಟ.ಅದೇನೇ ಇರಲಿ. ಇವರಂತೂ 'ನಗು ನಗುತಾ ನಲೀ ನಲೀ..ಏನೇ ಆಗಲೀ' ಎಂಬ ಸೂತ್ರವನ್ನು ಕಟ್ಟು ನಿಟ್ಟಾಗಿ ಅನುಸರಿಸುವವರು ಅನ್ನುವುದಂತೂ ಸತ್ಯ.
ಈ ನಗೆಯೇ ಹಾಗೆ. ಒಬ್ಬೊಬ್ಬರಲ್ಲಿ ಒಂದೊಂದು ರೀತಿಯಾಗಿ ಪ್ರಕಟಗೊಳ್ಳುತ್ತದೆ. ಇದಕ್ಕೆ ಹಲವು ರೂಪ ಹಲವು ಬಗೆ. ನೋಡುವ ನೋಟಗಳಲ್ಲಿ ಅಥವಾ ಕೇಳುವ ನುಡಿಗಳಲ್ಲಿ ಇರುವ ನಗೆ ಕೊಂಡಿಗಳನ್ನು ನಮ್ಮ ಮೆದುಳು ಗ್ರಹಿಸಿ, ಸ್ನಾಯುಗಳನ್ನು ಸಡಿಲಿಸಿ ತುಟಿ ಬಿರಿಯುವಂತೆ ಮಾಡುತ್ತದೆ. ವಿಮರ್ಶಕರು ಇದನ್ನು ಸುಲಭವಾಗಿ ನಾಲ್ಕು ರೂಪದಲ್ಲಿ ನೋಡುತ್ತಾರೆ. ಮೃದು ಹಾಸ, ಮಂದಹಾಸ, ಅಟ್ಟಹಾಸ, ವಿಕಟ.. ಅವರ ಈ ಸುಲಭ ರೂಪ ನಮಗೆ ಅರ್ಥವಾಗುವಂತಹ ಭಾಷೆಯಲ್ಲಿಲ್ಲ ಅನ್ಸುತ್ತೆ ಅಲ್ವಾ..
ಆದರೆ ಕವಿಗಳು ನಗೆಯ ಬಗೆಗೆ ಬರೆದು ಹಾಡಿ ಹೊಗಳಿದಷ್ಟು ಬೇರೆ ಯಾರೂ ಅದರ ಬಳಕೆ ಮಾಡಿಕೊಂಡಿಲ್ಲ. 'ಮುನಿಸು ತರವೇ ಮುಗುದೇ. ಹಿತವಾಗಿ ನಗಲೂ ಬಾರದೇ' ಎಂದು ಅವರು ಗೋಗರೆದಾಗ ಯಾವ ಹುಡುಗಿಯಾದರೂ ಸಿಟ್ಟನ್ನು ದೂರ ಅಟ್ಟಿ ನಗೆ ಮುಗುಳು ಅರಳಿಸುತ್ತಾಳೆ. ಕವಿ ಕಾಳಿದಾಸ ಹೆಣ್ಣಿನ ನಗೆಯನ್ನು ಹೇಗೆ ವರ್ಣಿಸುತ್ತಾನೆ ನೋಡಿ.
'ಮಾಣಿಕ್ಯದ ಮೇಲೊಂದು ಮಲ್ಲಿಗೆ,ಹವಳದ ಮೇಲೊಂದು ಮುತ್ತು
ಅವಳ ಬೆಳ್ನಗೆ ಚೆಂದುಟಿಯ ಮೇಲೆ ಚಂದಾಗಿತ್ತು'.
ಹೀಗೆ ಹೊಗಳಿಸಿಕೊಂಡಾಕೆ ನಗದೆ ಸುಮ್ಮನಿರಲು ಸಾಧ್ಯವೇ?
ಇನ್ನು ಜನಪದರಂತೂ,
'ಮಕ್ಕಳಾಟವು ಚೆಂದ ಮತ್ತೆ ಯೌವನ ಚೆಂದ
ಮುಪ್ಪಿನಲಿ ಚೆಂದ ನರೆಗಡ್ಡ ಜಗದೊಳಗೆ
ಎತ್ತಾ ನೋಡಿದರೂ ನಗು ಚೆಂದ'
ಎಂದು ನಗೆಯನ್ನು ಎಲ್ಲರ ಮೊಗದಲ್ಲೂ ಕಾಣಬಯಸುತ್ತಾರೆ.
ಹಾಗಂತ ಯಾವಾಗೆಂದರೆ ಆಗ, ಎಲ್ಲೆಂದರಲ್ಲಿ ನಗಲು ಸಾಧ್ಯವೇ? ಇಲ್ಲ ತಾನೇ.. ನಮ್ಮ ಪುರಾಣವನ್ನೇ ತೆಗೆದುಕೊಳ್ಳಿ. ಅಂದು ಮಯ ನಿರ್ಮಿಸಿದ ಸುಂದರ ಅರಮನೆಯೊಳಗೆ ಬಾಗಿಲು ಎಂದು ತಿಳಿದು ಗೋಡೆಗೆ ತಲೆ ಕುಟ್ಟಿಸಿಕೊಂಡು, ಗೋಡೆ ಎಂದು ತಿಳಿದಲ್ಲಿ ಖಾಲೀ ಜಾಗ ಕಂಡು, ನೀರಿಲ್ಲದಲ್ಲಿ ಭ್ರಮಿಸಿ ಉಟ್ಟ ಬಟ್ಟೆಯನ್ನೆತ್ತಿ ನಡೆದ ಕೌರವನನ್ನು ಕಂಡು ' ಇಷ್ಟೂ ತಿಳಿಯದೇನು ನಿಮಗೆ ಬಾವಾ' ಎಂದು ಗೊಳ್ಳನೆ ನಕ್ಕ ದ್ರೌಪತಿಯ ನಗು ಮಹಾಭಾರತ ಯುದ್ಧವನ್ನೇ ನಡೆಸಿಬಿಟ್ಟಿತು. ಆದರೆ ಕೌರವರು ವಿನಾಶವನ್ನೇ ಬಯಸಿದವರಾಗಿದ್ದರು. ಅವರ ಅವನತಿ ಸುಮ್ಮನೇ ಹೆಣ್ಣಿನ ಸುಂದರ ನಗೆಯ ಮೇಲೆ ಹೊರಿಸಿದ ಮಿಥ್ಯಾರೋಪ ಅಂತ ಅನ್ನಿಸುತ್ತೆ ಅಲ್ವಾ..
ಶ್ರೀ ಕೃಷ್ಣನ ಮೋಹಕ ನಗೆಗೆ ಮಾರು ಹೋಗಿ ದುಂಬಿಗಳು ಅವನ ಮುಖಾರವಿಂದ ದವನ್ನು ಅರಳಿ ನಿಂತ ಸುಮವೆಂದು ತಿಳಿದು ಸುತ್ತ ಮುತ್ತ ಸುಳಿದಾಡುತ್ತಿದ್ದವಂತೆ. ಹರಿ ಕಥೆಯೊಂದರಲ್ಲಿ ಇದನ್ನು ಕೇಳಿದ ನನ್ನ ಪತಿರಾಯರು 'ಅವನ ನಗೆಗಿಂತ ನನ್ನ ನಗೆಯೇ ಪವರ್ ಫುಲ್ .. ನಾನು ಅವತ್ತು ಜೋರಾಗಿ ನಕ್ಕಾಗ ಇಡೀ ಹೆಜ್ಜೇನಿನ ಗೂಡೇ ನನ್ನ ಹಿಂದೆ ಬಂದಿತ್ತು. ಅದರಿಂದ ತಪ್ಪಿಸಿಕೊಳ್ಳಲು ಮನೆಯೊಳಗೆ ನುಗ್ಗಿದರೂ ಆಗ್ಲಿಲ್ಲ. ಬೇಡಪ್ಪಾ ಈ ನಗೆಯ ಸಹವಾಸ ಎಂದು ಹೆಜ್ಜೇನಿನಿಂದ ಕುಟುಕಿಸಿಕೊಂಡದ್ದನ್ನು ನೆನೆಸಿಕೊಂಡು ಇನ್ನಷ್ಟು ಮುಖ ಊದಿಸಿ ಕುಳಿತುಕೊಂಡರು.
ನಾವೂ ಅಷ್ಟೇ ಈ ಪುರಾಣ ಕಾಲದವರ ನಗೆಯ ಬಗೆಯನ್ನು ಬಿಟ್ಟು ವರ್ತಮಾನಕ್ಕೆ ಬರೋಣ. ಈಗೆಲ್ಲಿದೆ ನಗಕ್ಕೆ ಟೈಮು ಅಂತ ಮೂಗು ಮುರೀತಿದ್ದೀರಾ.. ಅದೂ ಹೌದು .. ಒಬ್ಬರ ಮುಖ ಇನ್ನೊಬ್ಬರಿಗೆ ನೋಡಲು ಟೈಮ್ ಇದ್ರೆ ತಾನೇ ನಗೋದು?!.. ಕಷ್ಟ ಪಟ್ಟು ನಕ್ಕರೂ, ಇವರು ನಗ್ದೇ ಇದ್ರೇ ಚೆನ್ನಾಗಿತ್ತು ಅನ್ನಿಸುವಂತಿರುತ್ತದೆ. ಕೆಲವರಂತೂ ನಗ ಬಾರದ್ದಕ್ಕೆಲ್ಲಾ ನಕ್ಕು ಇರಿಸು ಮುರಿಸು ಉಂಟು ಮಾಡುತ್ತಾರೆ. ಇನ್ನು ಕೆಲವು ಬಾರಿ ಸೌಜನ್ಯಕ್ಕೆಂದು ನಕ್ಕು ಟೀಕೆಗೆ ಈಡಾಗುವ ಸಂದರ್ಭಗಳೂ ಇವೆ. ಬಸ್ ನಲ್ಲಿ ಟಿಕೆಟ್ ಕೊಳ್ಳುವಾಗ 'ಚಿಲ್ರೆ ಕೇಳಿದ್ರೆ ನಗ್ತೀರಲ್ರೀ' ಎಂದು ಒರಟಾಗಿ ನುಡಿಯುವ ಕಂಡಕ್ಟರಿನ ತಲೆಯ ಮೇಲೆ ಒಂದೇಟು ಹಾಕ್ಬೇಕು ಅಂತ ನಿಮಗೂ ಅನ್ನಿಸಿರಬಹುದು.
ಅಂದ ಹಾಗೆ ನಗು ಅನ್ನೊದು ಸಹಜವಾಗಿ ಬಂದ್ರೇನೆ ಚೆನ್ನ. ಕೆಲವರಂತೂ ನಿಮಗೊಂದು ಜೋಕ್ ಹೇಳ್ತೀನಿ ಅಂತ ತಲೆ ತಿನ್ತಾ ಇರ್ತಾರೆ. ಕೇಳಿದವರಿಗೆ ಮೊದಲಿಗೆ ನಗಬೇಕಿತ್ತೋ ಅಲ್ಲ ಕೊನೆಗೆ ನಗ ಬೇಕಿತ್ತೋ ಅನ್ನೋ ಗೊಂದಲ ಹುಟ್ಟಿಸುವಂತಿರುತ್ತೆ. ಅಲ್ಲ ಇಷ್ಟೊಳ್ಳೆ ಜೋಕ್ ಹೇಳಿದ್ರೂ ನಗಲೇ ಇಲ್ಲ ಅಂತ ಮುನಿಸಿಕೊಂಡು ಬಿಡ್ತಾರೆ. ಅಂತೋರಿಗೆ ನೀವು ಎಲ್ಲಿ ನಗಬೇಕು ಅಂತ ಮೊದಲೆ ಹೇಳಿ ಬಿಡಪ್ಪಾ ನಕ್ ಬಿಡ್ತೀನಿ ಅನ್ಬೇಕಷ್ಟೆಯೋ ಏನೋ..!!
ಇನ್ನು ಕೆಲವೊಮ್ಮೆ ತುಂಬಾ ಬೇಸರದಲ್ಲಿರೋ ಗೆಳೆಯರನ್ನು ಕೋಡಂಗಿಯಂತೆ ನಟಿಸಿ ನಗಿಸಲು ಪ್ರಯತ್ನಿಸಿ ವಿಫಲರಾದಾಗ, ' ಏನಯ್ಯಾ ನಗೋದಿಕ್ಕೂ ನಿಂಗೆ ದುಡ್ಡು ಕೊಡ್ಬೇಕಾ' ಅಂತ ರೇಗುತ್ತೇವೆ. ಅಂತಾದ್ರಲ್ಲಿ ಈಗ ನಾವೇ ದುಡ್ಡು ಕೊಟ್ಟು ನಗ್ತಿದ್ದೀವಿ ಅಂದ್ರೆ ಎಂತಾ ಕಾಲ ಬಂದೋಯ್ತು ನೋಡಿ!! ಕ್ಷಮಿಸಿ, ನಾನು ಹೇಳುತ್ತಿರುವುದು ನಮ್ಮ ನಗೆ ನಾಟಕಗಳಿಗೋ, ಚಲನಚಿತ್ರಗಳಿಗೋ ದುಡ್ಡು ಕೊಟ್ಟು ಟಿಕೆಟ್ ತೆಗೊಂಡು ಎಲ್ಲಿ ನಗ್ಬೇಕು ಅಂತ ಅರ್ಥ ಆಗದೆ ಅತ್ತುಬಿಡುವಂತಾಗುವುದರ ಬಗ್ಗೆ ಅಲ್ಲ.
ಗಲ್ಲಿ ಗಲ್ಲಿಗಳಲ್ಲಿ ನಿಮ್ಮನ್ನು ಶತಾಯಃ ಗತಾಯಃ ನಗಿಸಿಯೇ ಸಿದ್ಧ ಅಂತ ತಲೆಯೆತ್ತಿಕೊಂಡಿರುವ ಲಾಫಿಂಗ್ ಕ್ಲಬ್ಬುಗಳ ಬಗ್ಗೆ. ಡಿ ವಿ ಜಿ ಯವರು 'ನಗುವು ಸಹಜದ ಧರ್ಮ' ಅಂದರೆ, ಇವರುಗಳು ಸಹಜವಾಗಿಯೇ ನಗು ಬರಬೇಕು ಅಂತೇನಿಲ್ಲ. ನೀವಾಗಿಯೇ ಬಾಯಗಲಿಸಿ ಸ್ವರ ಹೊರಡಿಸಿ ಸುಮ್ಮ ಸುಮ್ಮನೆ ನಕ್ಕರೂ ಸಾಕು.. ಇದೂ ಕೂಡಾ ಯಾಂತ್ರಿಕವಾಗಿ ಮಾಡುವ ವ್ಯಾಯಾಮದಂತೆ ಅಂತ ಹೇಳ್ತಾರೆ. ಯಾವುದೇ ಉಲ್ಲಾಸ ಉತ್ಸಾಹಗಳಿಲ್ಲದಿದ್ದರೂ ಅವರು ಹೇಳಿದ ಎಲ್ಲಾ ರೀತಿಯಲ್ಲೂ ನಕ್ಕು ತೋರಿಸಬೇಕು. ಮತ್ತೆ ಮನೆಗೆ ಮರಳುವಾಗ ಗಡಿಗೆ ಗಾತ್ರದ ಮುಖ ಹೊತ್ತರಾಯಿತು.
ಇತ್ತೀಚೆಗೆ ಎಲ್ಲೋ ಇದೇ ರೀತಿಯ ಲಾಫಿಂಗ್ ಕ್ಲಬ್ಬಿನವರು ಎಬ್ಬಿಸುವ ನಗೆ ಕೋಲಾಹಲದಿಂದಾಗಿ ನೆರೆಕರೆಯವರು ಸಿಟ್ಟುಗೊಂಡು ಪೋಲೀಸರಿಗೆ ಕರೆ ಕಳುಹಿಸಿದರಂತೆ. ವಿಷಯ ನ್ಯಾಯಾಲಯದ ಮೆಟ್ಟಲೇರಿ, ನೀವು ಹೀಗೆಲ್ಲ ನಕ್ಕು ಬೇರೆಯವರೆದುರಿಗೆ ಹಗುರಾಗಬೇಡಿ ಎಂದು ತೀರ್ಪಿತ್ತಿದೆಯಂತೆ. ಇದನ್ನು ಕೇಳಿದ ಲಾಫಿಂಗ್ ಕ್ಲಬ್ ಓನರ್ ಅಳುತ್ತಿದ್ದರೆ, ಕೇಸ್ ಗೆದ್ದವರು ಮುಸಿ ಮುಸಿ ನಗುತ್ತಿದ್ದಾರಂತೆ. ಏನ್ ಕಾಲ ಬಂತು ನೋಡಿ.. ನಗಕ್ಕೂ ಪರ್ಮಿಟ್ಟಾ..??
ಬೇರೆ ಯಾವ ಪ್ರಾಣಿವರ್ಗಕ್ಕೂ ಇರದ ಮನುಷ್ಯನಿಗೆ ಮಾತ್ರವೇ ಇರುವ ವಿಶಿಷ್ಟ ಗುಣ ಅಂದರೆ ನಗು. ಮಗು ಹುಟ್ಟಿ ಸ್ವಲ್ಪವೇ ಹೊತ್ತಿನಲ್ಲಿ ತನ್ನಷ್ಟಕ್ಕೆ ತಾನೇ ಕನಸಿನಲ್ಲೆಂಬಂತೆ ಬೊಚ್ಚು ಬಾಯಿ ಬಿಟ್ಟು ನಗುವುದನ್ನು ನೋಡಿ ಮೈ ಮರೆಯದವರಿಲ್ಲ. ತಿಂಗಳಾಗುತ್ತಿದ್ದಂತೆಯೇ ಗುರುತು ಹಿಡಿದು ನಗತೊಡಗುತ್ತದೆ.ಬೆಳೆಯುತ್ತಿದ್ದಂತೇ ಮುಗ್ದತೆಯ ಪರೆ ಕಳಚುವ ಮಗುವಿಗೆ ನಗಲೂ ಕಟ್ಟು ಪಾಡುಗಳು.
ಮೀಸೆ ಮೂಡುತ್ತಿರುವ ಹುಡುಗರಂತೂ ಹುಡುಗಿಯರ ಕಡೆಗೆ ನೋಡಿ ಸೌಹಾರ್ಧ ನಗು ನಗುವಂತಿಲ್ಲ. 'ನೋಡೇ ಅವ್ನು ನನ್ನ ನೋಡಿ ಕೋತಿ ತರ ಹಲ್ಕಿರೀತಾನೆ' ಅಂತ ಹುಡುಗಿ ಅವನನ್ನು ಏಕಾ ಏಕಿ ಅವನ ಪೂರ್ವಜರ ಕಾಲಕ್ಕೆ ಎತ್ತಂಗಡಿ ಮಾಡಿ ಬಿಡುತ್ತಾಳೆ. ಇನ್ನು ಹುಡುಗಿಯರು ನಕ್ಕರಂತೂ ಕೇಳಲೇ ಬೇಡಿ.ಮನೆಯಲ್ಲಿರುವ ಅಮ್ಮ ಅಜ್ಜಿಯಂದಿರ ಸಹಿತ ನೆರೆ ಹೊರೆಗಳೂ ಸೇರಿಕೊಂಡು ' ಅದೇನೇ ಅದು ಪಿಸಿ ಪಿಸಿ ಅಂತ ಚೆಲ್ಲು ಚೆಲ್ಲಾಗಿ ಎಲ್ರ ಜೊತೆಗೆ ನಗೋದು, ಸ್ವಲ್ಪ ಗಂಭೀರವಾಗಿರೋದನ್ನು ಕಲ್ತುಕೋ' ಎಂದು ತಲೆಯ ಮೇಲೆ ಮೊಟಕುತ್ತಾರೆ.
ಹೀಗಾಗಿಯೋ ಏನೋ ಕೆಲವರಂತೂ ನಗೆಯನ್ನು 'ಬ್ಯಾಂಕ್ ಡಿಪಾಸಿಟ್' ಎಂದೇ ತಿಳಿದಂತಿರುತ್ತಾರೆ. ಖರ್ಚು ಮಾಡಲು ಹತ್ತಾರು ಬಾರಿ ಯೋಚಿಸುತ್ತಾರೆ. ಹಾಸ್ಯಭರಿತ ಕಾರ್ಯಕ್ರಮ ನೋಡುವಾಗಲೋ, ಬರಹಗಳನ್ನು ಓದುವಾಗಲೋ ಇವರ ಮುಖ ಗಂಭೀರವಾಗಿದ್ದು ನಗುತ್ತಿರುವ ನಮ್ಮ ಬಗ್ಗೆ ನಮಗೇ ಅನುಮಾನ ಉಂಟು ಮಾಡುತ್ತದೆ.
ಇಷ್ಟೆಲ್ಲಾ ಅಡೆ ತಡೆಗಳಿದ್ದರೂ ಒಳಗೆ ಹುಟ್ಟಿದ ನಗು ಗುಪ್ತಗಾಮಿನಿಯಾಗದೇ, ತುಟಿಯ ಮೇಲೆ ಪ್ರಕಟವಾಗಿ ಎದುರಿರುವವರನ್ನೂ ತನ್ನ ಪ್ರವಾಹಕ್ಕೆಳೆದುಕೊಂಡು ಮನಸ್ಸನ್ನು ಆನಂದಸಾಗರದೆಡೆಗೆ ಪ್ರವಹಿಸುವಂತೆ ಮಾಡುತ್ತದೆ. ಈ ನಗು ಎಂಬ ಅಮೂಲ್ಯ ಸಂಪತ್ತು ಇನ್ನೊಬ್ಬರಿಗೆ ಹಂಚಿದಷ್ಟೂ ಅದರ ಭಂಡಾರದ ಗಾತ್ರ ಸ್ವಿಸ್ ಬ್ಯಾಂಕಿನಲ್ಲಿರುವ ನಮ್ಮ ರಾಜಕಾರಿಣಿಗಳ ಹಣದಂತೆ ಹೆಚ್ಚುತ್ತಲೇ ಹೋಗುತ್ತದೆ. ಹೀಗಾಗಿ ನೀವು ಚೌಕಾಸಿ ಮಾಡದೇ ನಗಬೇಕೆನಿಸಿದಾಗಲೆಲ್ಲಾ ಮನಸಾರೆ ನಕ್ಕು ಬಿಡಿ ಆಗದೇ..!!