ಮಧ್ಯಾಹ್ನ ಊಟ ಮಾಡಿ, ಚಿಲ್ಲರೆ ಕೆಲಸಗಳನ್ನು ಮುಗಿಸಿ ಹೊರಬಂದು ಪೇಪರ್ ಹರಡಿಕೊಂಡು ಒಂದಾದ್ರು ಒಳ್ಳೆ ಸುದ್ದಿ ಇದೆಯಾ ಅಂತ ಹುಡುಕುತ್ತಾ ಕುಳಿತಿದ್ದೆ. ತೋಟದ ಕಡೆಂದ 'ಕಿರ್ರೀಮ್..' ಎಂಬ ಶಬ್ಧ ಕೇಳಿಸತೊಡಗಿತು. ಯಾವುದೋ ಹಕ್ಕಿ ಇರಬಹುದೆಂದು ಸುಮ್ಮನಾದರೆ, ಆ ಸ್ವರ ದೀರ್ಘವಾಗಿ ಆರ್ತನಾದದಂತೆ ಜೋರಾಗತೊಡಗಿತು. ಹಗಲು ಹೊತ್ತಾದ ಕಾರಣ ಭೂತ ಚೇಷ್ಟೆ ಇರಲಾರದು ಎಂದು ಧೈರ್ಯ ಮಾಡಿಕೊಂಡು, ಧ್ವನಿ ಮೂಲ ಹುಡುಕುತ್ತಾ ಇಣುಕಿದರೆ ಗಾಳಿಗೆ ತಲೆ ತುಂಡಾಗಿ ನೆಟ್ಟಗೆ ನಿಂತಿದ್ದ ಅಡಿಕೆ ಮರವೊಂದು ಮನೆಯ ಕಡೆ ವಾಲುತ್ತಿತ್ತು. ಇದೊಳ್ಳೆ ಗ್ರಹಚಾರ ಬಂತಲ್ಲಪ್ಪಾ ಎಂದುಕೊಂಡು ಎಲ್ಲರನ್ನೂ ಕರೆದು ತೋರಿಸಿದೆ. ನಮ್ಮನ್ನೆಲ್ಲಾ ನೋಡಿ ನಾಚಿಕೆಯಾತೇನೋ .. ಮರ ಇನ್ನೊಂದಿಷ್ಟು ಬಾಗಿ, ಇವತ್ತಿಗೆ ಇಷ್ಟು ಸಾಕು ಎಂಬಂತೆ ತಟಸ್ಥವಾಯಿತು.
ಈಗ ಪೀಸಾದ ವಾಲುಗೋಪುರದಂತೆ ನಿಂತಿದ್ದ ಮರ ಮನೆಯ ಮಾಡಿನ ಮೇಲೇನಾದರು ಬಿದ್ದರೆ ಹಂಚುಗಳು ಪೀಸು ಪೀಸಾಗುವದರಲ್ಲಿ ಸಂಶಯವೇ ಇರಲಿಲ್ಲ. ಮನೆಯ ಒಳಗೆ ನಿಶ್ಚಿಂತರಾಗಿ ಕುಳಿತುಕೊಳ್ಳಲೂ ಭಯವಾಗಿ ಇನ್ನೇನು ಮಾಡುವುದಪ್ಪಾ ಎಂದು ಎಲ್ಲರೂ ತಲೆಕೆಡಿಸಿಕೊಳ್ಳತೊಡಗಿದೆವು. ಅದನ್ನು ಕಡಿಸಿಬಿಡುವುದು ಬಿಟ್ಟರೆ ಬೇರೆ ಪರಿಹಾರ ಯಾರಿಗೂ ಹೊಳೆಯಲಿಲ್ಲ. ಹಾಗಾಗಿ ಮರ ಕಡಿಯುವುದರಲ್ಲಿ ನಿಸ್ಸೀಮನಾಗಿದ್ದ ನಮ್ಮೂರಿನ ಗೋವಿಂದನ ನಾಮ ಸ್ಮರಣೆ ಮಾಡದೆ ವಿಧಿರಲಿಲ್ಲ. ಹೇಗೋ ಅವನ ಮೊಬೈಲ್ ನಂಬರನ್ನು ಪತ್ತೆ ಮಾಡಿ ಫೋನಾಯಿಸಿದೆವು.
ಮೂರ್ನಾಲ್ಕು ಬಾರಿ ಪೂರ್ತಿ ಹೊಡೆದುಕೊಂಡ ಬಳಿಕ ಫೋನ್ ಎತ್ತಿದ ಗೋವಿಂದ , 'ನಾನೀಗ ಒಂದು ಮರದ ತುದಿಯಲ್ಲಿದ್ದೇನೆ, ನಾಳೆ ಬೆಳಿಗ್ಗೆ ನಿಮ್ಮ ಅಂಗಳದಲ್ಲಿ ಪ್ರತ್ಯಕ್ಷನಾಗುತ್ತೇನೆ' ಎಂದು ಅಭಯ ಪ್ರದಾನ ಮಾಡಿದ. ಆದರೆ ರಾತ್ರಿಯೊಂದು ಕಳೆಯಬೇಕಿತ್ತಲ್ಲ. ಅದು ಹೇಗೆ ಎಂಬುದೇ ನಮ್ಮ ಚಿಂತೆ. ಅದನ್ನು ಅವನಿಗೇ ಅರುಹಿದಾಗ, ಮರದ ಬಾಗುವಿಕೆಯ ತೀವ್ರತೆ,ಅದರ ಉದ್ದ, ಅಗಲ ಎಲ್ಲವನ್ನೂ ವಿಚಾರಿಸಿ, ನಾಳೆಯವರೆಗೆ ಏನೂ ತೊಂದರೆಯಾಗದು, ಭಯ ಬೇಡ ಎಂದು ದೂರದಿಂದಲೇ ಭವಿಷ್ಯ ನುಡಿದ.
ಸರಿ.. 'ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿ' ಎಂದು ಎಲ್ಲಾ ಭಾರವನ್ನು ಅವನ ಮೇಲೆ ಹಾಕಿ ರಾತ್ರಿಯನ್ನು ಅರೆ ನಿದ್ರೆ, ಅರೆ ಜಾಗೃತಾವಸ್ಥೆಯಲ್ಲಿ ಕಳೆದೆವು. ನಾವು ನಿದ್ದೆ ಮಾಡದಿದ್ದರೇನಂತೆ.. ಬೆಳಗಾಗುವುದು ನಿಲ್ಲುತ್ತದೆಯೇ..?
ಗಂಟೆ ಒಂಬತ್ತಾದರೂ ಬೇಗ ಬರುತ್ತೇನೆಂದು ವಚನವಿತ್ತಿದ್ದ ಗೋವಿಂದ ನಾಪತ್ತೆ. ಒಮ್ಮೆ ವಾಲಿದ ಮರದ ಕಡೆಗೆ, ಇನ್ನೊಮ್ಮೆ ಅಂಗಳದ ಕಡೆಗೆ ನೋಡುತ್ತಾ ಅತ್ತಿಂದಿತ್ತ ಸುಳಿದಾಡತೊಡಗಿದೆವು. ಆಗೀಗ ಹೊರಗಿನವರೆಗೆ ಕೇಳಿಸದಂತೆ ತಗ್ಗಿದ ಧ್ವನಿಯಲ್ಲಿ ಅವನನ್ನು ಬಯ್ದುಕೊಂಡೆವು. ಗಡಿಯಾರದ ಮುಳ್ಳು ಹತ್ತನ್ನು ಸಮೀಪಿಸುತ್ತಿದ್ದಂತೆ ಸೈಕಲ್ ಬೆಲ್ ಕೇಳಿಸುವುದಕ್ಕೂ ಮತ್ತು ನನ್ನ ಅಣ್ಣನ ಮಗಳು 'ಮರ ಕಡಿಯುವವರು ಬಂದ್ರೂ' ಅಂತ ಕಿರುಚಿಕೊಂಡು ಒಳ ಬರುವುದಕ್ಕೂ ಸರಿ ಹೋಯಿತು. ಅರೆ ನಂಬಿಕೆಯಲ್ಲಿ ಹೊರಗಿಣುಕಿದರೆ, ಒಂದು ಕೈಯ್ಯಲ್ಲಿ ಸೈಕಲ್ಲನ್ನು ಸಂಭಾಳಿಸಿಕೊಂಡು, ಇನ್ನೊಂದು ಕೈಯ್ಯಲ್ಲಿ ಕೊಡಲಿಯನ್ನು ಹೆಗಲಿಗೇರಿಸಿ ಆಧುನಿಕ ಪರಶುರಾಮನಂತೆ ನಿಂತಿದ್ದ ಗೋವಿಂದ ಕಾಣಿಸಿದ.
ಅಸಹನೆ ತುಂಬಿ ತುಳುಕುತ್ತಿದ್ದ ನಮ್ಮ ಮುಖಗಳನ್ನು ನೋಡಿ ಹೆಚ್ಚು ಮಾತು ಬೆಳೆಸದೇ ಬಾಗಿ ನಿಂತಿದ್ದ ಮರವನ್ನೊಮ್ಮೆ ಬಗ್ಗಿ ತಲೆಯೆತ್ತಿ ನೋಡಿ 'ಹೌದಾ.. ಇದು ನಿನ್ನೆ ರಾತ್ರಿ ಬೀಳದೇ ಉಳಿದದ್ದು ನಿಮ್ಮ ಪುಣ್ಯ ಮಾರಾಯ್ರೆ.. ನೀವು ಫೋನಲ್ಲಿ ಹೇಳಿದಾಗ ಇಷ್ಟು ಬಗ್ಗಿದೆ ಅಂತ ಅಂದಾಜಿರಲಿಲ್ಲ' ಎಂದು ನಮ್ಮ ಬೆನ್ನು ಹುರಿಯಲ್ಲಿ ನಡುಕವೆಬ್ಬಿಸಿದ. 'ಆದ್ರೆ ಇನ್ನು ಬಿಡಿ, ನಾನು ಬಂದಾಯ್ತಲ್ಲ.. ಇದೇನು ಮಹಾ..ನನ್ನ ಸರ್ವೀಸಿನಲ್ಲಿ ಇದರ ಅಪ್ಪನಂತಹ ಮರಗಳನ್ನು ಕಡಿದುರುಳಿಸಿದ್ದೇನೆ' ಎಂದು ಎದೆ ತಟ್ಟಿಕೊಂಡು ನಮ್ಮ ಬಣ್ಣವಿಳಿದ ಮೋರೆಗಳನ್ನು ಕೊಂಚ ಗೆಲುವಾಗಿಸಿದ.
ಮುಂದೇನು ಎಂಬಂತೆ ನಾವು ಕಣ್ಣು ಮಿಟುಕಿಸುತ್ತಿರ ಬೇಕಾದರೆ, "ಹೌದಾ.. ಇಲ್ಲಿ ನೋಡಿ.. ಈಗಿದ್ದ ಹಾಗೆಯೇ ಕಡಿದರೆ ಮರ ಸೀದಾ ಮನೆಯ ಮೆಲೆ ಬೀಳುತ್ತದೆ. ನಿಮ್ಮಲ್ಲಿ ಬಳ್ಳಿ ಏನಾದ್ರು ಇದೆಯಾ.." ಎಂದು ನಮ್ಮಲ್ಲಿಲ್ಲದ ಹಗ್ಗಕ್ಕೆ ಅವನ ಡಿಮ್ಯಾಂಡ್..
ಅದನ್ನು ಕೇಳಿದ ನನ್ನ ಅಣ್ಣನ ನಾಲ್ಕು ವರ್ಷದ ಮಗಳು ಪುಟ್ಟಿ ಕೂಡಲೇ ಜಿಗಿಯುತ್ತಾ ಮನೆಯೊಳಗೆ ಓಡಿದಳು. ಅತ್ತೆಯವರು ಮಲ್ಲಿಗೆ ಮಾಲೆ ಕಟ್ಟಲು ಸಂಗ್ರಹಿಸಿ ಇಟ್ಟಿದ್ದ ಬಾಳೆ ನಾರುಗಳಿರುವ ಸ್ಥಳ ಅವಳಿಗೆ ಮೊದಲೇ ಗೊತ್ತಿತ್ತೋ ಏನೋ! ಓಡಿ ಬಂದು ಅದನ್ನು ಗೋವಿಂದನ ಕೈಯಲ್ಲಿಟ್ಟಳು. ಅವನು ಅದನ್ನು ನೋಡಿ, ಯಕ್ಷಗಾನದ ರಕ್ಕಸನಂತೆ ಅಲೆ ಅಲೆಯಾಗಿ ನಕ್ಕು 'ಎಂತ ಪುಟುಗೋಸಿ ಬಳ್ಳಿ ಪುಟ್ಟಮ್ಮಾ ಇದು! ಇದ್ರಲ್ಲಿ ಬೆಕ್ಕಿನ ಮರಿಯನ್ನು ಕಟ್ಲಿಕ್ಕೂ ಆಗ್ಲೀಕಿಲ್ಲ' ಅನ್ನುತ್ತಾ ಪಕ್ಕಕ್ಕೆಸೆದ. ಇವನ ನಗುವಿನ ಅಬ್ಬರಕ್ಕೆ ಮರ ಇನ್ನಷ್ಟು ವಾಲಿತೋ ಎಂದು ಅನುಮಾನದಿಂದ ನಾನೊಮ್ಮೆ ಮರದೆಡೆಗೆ ನೋಡಿದೆ.
ಸರಿಯಾದ ಸಲಕರಣೆಗಳಿಲ್ಲದೇ ಕೆಲಸ ಸಾಗುವುದು ಹೇಗೆ! ಬೇರೆ ಮಾರ್ಗವಿಲ್ಲದೇ ನನ್ನ ಮಗ ಬೈಕ್ ಸ್ಟಾರ್ಟ್ ಮಾಡಿ, ಬೇಡ ಎಂದರೂ ಕೇಳದೇ, ನಾನೂ ಬರುತ್ತೇನೆಂದು ಹಠ ಮಾಡುತ್ತಿದ್ದ ಪುಟ್ಟಿಯನ್ನೇರಿಸಿಕೊಂಡು ಹಗ್ಗ ತರಲು ಪೇಟೆಗೆ ಹೋದ. ಅವರು ಬರುವವರೆಗೆ ವಿರಾಮವೆಂಬಂತೆ ಗೋವಿಂದ ಅಲ್ಲೇ ಕಲ್ಲಿನ ಮೇಲೆ ಅಂಡೂರಿದ. ಅಲ್ಲಿಗೇ ಅವನಿಗೆ ಕಾಪಿ ತಿಂಡಿಯ ವ್ಯವಸ್ಥೆಯೂ ಆಯಿತು. ಪೇಟೆಯಿಂದ ಹಗ್ಗ ಬರುವುದರ ಒಳಗೆ ಸಾವಕಾಶವಾಗಿ ತಿಂಡಿ ತಿಂದು ಮುಗಿಸಿ, ಸೊಂಟದಿಂದ ಎಲೆ ಅಡಿಕೆ ಸಂಚಿಯನ್ನು ತೆಗೆದು ನಿರ್ವಿಕಾರ ಚಿತ್ತದಿಂದ ಒಮ್ಮೆ ಒಳಗೆ ಕಣ್ಣಾಡಿಸಿ ಮತ್ತೆ ಸೊಂಟದಲ್ಲಿಟ್ಟುಕೊಂಡ. ಅರೆ! ಎಲೆ ಅಡಿಕೆ ಬೇಡವೆ! ದೇವರ ತಲೆಯಲ್ಲಿ ಹೂವು ತಪ್ಪಿದರೂ ಇವನ ಬಾಯಲ್ಲಿ ಎಲೆ ತಪ್ಪಿದ್ದಲ್ಲ. ಇಂದೇನು ವಿಚಿತ್ರ ಅಂತ ನಾವಂದುಕೊಳ್ಳುತ್ತಿರುವಾಗ ಎದ್ದು ವಾಲಿದ ಮರದ ಕಡೆಗೆ ಕತ್ತಿ ಹಿಡಿದು ರಭಸದಿಂದ ನಡೆದೇ ಬಿಟ್ಟ.
ಪರಿಸ್ಥಿತಿಯ ಗಂಭೀರತೆ ಅವನಿಗೂ ಅರಿವಾಗಿರಬೇಕು. ಎಲೆ ಅಡಿಕೆ ತಿನ್ನುತ್ತಾ ಸಮಯ ಪೋಲು ಮಾಡಬಾರದು ಅಂತ ಅಂದು ಕೊಂಡಿರ ಬೇಕು. ಸರಿ.. ಅವನು ಮರ ಕಡಿಯುವ ಶೈಲಿಯನ್ನು ನೋಡುವ ಕುತೂಹಲದಿಂದ ನಾವೆಲ್ಲಾ ಅವನ ಬೆನ್ನಿನ ಹಿಂದೆಯೇ ನಡೆದೆವು. ಅವನು ಸಾವಕಾಶವಾಗಿ ಕೆಳಗೆ ಬಿದ್ದಿದ್ದ ಅಡಿಕೆಯೊಂದನ್ನು ಕೈಯಲ್ಲೆತ್ತಿಕೊಂಡು ಕತ್ತಿಯಲ್ಲಿ ಸಿಪ್ಪೆ ತೆಗೆದು ಸಣ್ಣ ಹೋಳುಗಳನ್ನಾಗಿ ಮಾಡಿ ಒಂದೆರಡು ಹೋಳುಗಳನ್ನು ಬಾಯಿಗೆಸೆದುಕೊಂಡು ಉಳಿದದ್ದನ್ನು ಸಂಚಿಗೆ ಸೇರಿಸಿದ. ಅದರ ಅಳತೆಗೆ ತಕ್ಕಷ್ಟು ವೀಳ್ಯದ ಎಲೆ, ಸುಣ್ಣ, ಹೊಗೆಸೊಪ್ಪುಗಳೂ ಬಾಯಿಗೆ ಸೇರಿದವು.
ಈಗ ಇವನ ಧಾವಂತದ ನಡಿಗೆಯ ಕಾರಣ ಗೊತ್ತಾಗಿ ತಲೆ ಚಚ್ಚಿಕೊಂಡೆವು.ಆದರೀಗ ಹಸಿ ಅಡಕೆಯೊಂದಿಗೆ ಹೊಗೆಸೊಪ್ಪು ಸೇರಿ ಚುರುಕು ಮುಟ್ಟಿಸಿತೋ ಏನೋ.., ತಾಂಬೂಲದ ರಸ ತುಂಬಿದ್ದ ಬಾಯನ್ನು ಸೊಟ್ಟಗೆ ಮಾಡಿಕೊಂಡು ವಿಚಿತ್ರ ಸ್ವರ ಹೊರಡಿಸುತ್ತಾ ಮರವನ್ನು ಯಾವ ಮಟ್ಟದಿಂದ ಕಡಿದರೆ ಯಾವ ಕಡೆ ಉರುಳುತ್ತದೆ ಇತ್ಯಾದಿ ವಿಷಯಗಳನ್ನು ವಿವರಿಸತೊಡಗಿದ. ಅಲ್ಲಿಂದ ಮುಂದುವರಿದ ಅವನ ಮಾತು ಕಡಿಯಲ್ಪಡುವ ಮರ ಮೊದಲು ಎಷ್ಟು ಫಸಲು ಕೊಡುತ್ತಿತ್ತು ಎಂದು ಅರಿಯುವ ದಿಕ್ಕಿನೆಡೆಗೆ ಹರಿದಿತ್ತು.
ಒಮ್ಮೆ ಯಾವುದೇ ಅಪಾಯವಿಲ್ಲದೇ ಮರ ನೆಲಕ್ಕುರುಳಿದರೆ ಸಾಕು ಎಂದು ಕಾಯುತ್ತಿದ್ದ ನಮಗೆ ಇವನ ಮಾತುಗಳಿಂದ ಪಿತ್ಥ ನೆತ್ತಿಗೇರ ತೊಡಗಿತು. 'ಬಂದ ಕೆಲಸ ಮೊದಲು ಸುರು ಮಾಡು ಮಾರಾಯ' ಅಂತ ಅವನಿಗೆ ತುಸು ಖಾರವಾಗಿ ಸೂಚಿಸಿದೆವು. ಗೋವಿಂದ ಬಾಯಲ್ಲಿದ್ದ ತಾಂಬೂಲವನ್ನು ಪಿಚಕ್ಕನೆ ಪಕ್ಕಕ್ಕುಗಿದು, 'ಕಣ್ಣು ಮುಚ್ಚಿ ಬಿಡುವುದರ ಒಳಗೆ ಕಡಿದುರುಳಿಸಿ ಬಿಡ್ತೇನೆ ನೋಡಿ' ಅನ್ನುತ್ತಾ ಬಾಗಿದ ಮರಕ್ಕೆ ಹಗ್ಗದ ಕುಣಿಕೆ ಮಾಡಿ ಕಟ್ಟಲೋಸುಗ ಅದರ ಬಳಿಯೇ ಇದ್ದ ಇನ್ನೊಂದು ಮರವನ್ನು ಸರ ಸರನೆ ಏರಿದ. ಅದರ ಗೆಲ್ಲುಗಳನ್ನಷ್ಟು ಕಡಿದ.
'ಹ್ವಾಯ್..ಇದ್ಯಾವಾಗ ಇಷ್ಟು ಬಗ್ಗಿದ್ದು ಮಾರಾಯ್ರೇ..' ಎಂದು ನಮ್ಮ ಬೆನ್ನ ಹಿಂದಿನಿಂದ ಕೇಳಿ ಬಂದ ಉದ್ಗಾರ ಪಕ್ಕದ ಮನೆಯ ಕಿಟ್ಟು ಮಾವನದ್ದೇ ಎಂದು ತಿಳಿಯಲು ನಮಗೆ ತಿರುಗಿ ನೋಡ ಬೇಕಾಗಿರಲಿಲ್ಲ. ಅವರನ್ನು ನೋಡಿದ ಗೋವಿಂದ , ಮರದ ತುದಿಯಿಂದಲೇ 'ನಮಸ್ಕಾರ ಧನೀ.. ನಾನು ಇಲ್ಲಿದ್ದೇನೆ' ಎಂದ. 'ಇಂತದ್ದಕ್ಕೆಲ್ಲಾ ನೀನೇ ಆಗ ಬೇಗಷ್ಟೆ ಗೋವಿಂದಾ.. ..ಅಲ್ಲ ನೀನು ಅಷ್ಟು ಬೇಗ ಮರ ಹತ್ತಿಯೂ ಆಯ್ತಾ ಮಾರಾಯ. ಆ ಮರ ಹತ್ತುವ ಬದಲು ಇದಾ ಈ ಕಡೆ ಇರೋ ಮರ ಹತ್ತಿದ್ರೆ ಕೆಲಸ ಸುಲಭ ಆಗ್ತಿತ್ತಲ್ವೋ ..' ಅನ್ನುತ್ತಾ ಕಿಟ್ಟು ಮಾವ ಸನ್ನಿವೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳತೊಡಗಿದರು.
ಗೋವಿಂದ ಏರಿದ ವೇಗದಲ್ಲೇ ಕೆಳಗಿಳಿದ. ತಮ್ಮ ಮಾತಿಗೆ ಬೆಲೆ ಕೊಟ್ಟು ಇಳಿದ ಅಂದುಕೊಂಡು ಕಿಟ್ಟುಮಾವ ನಮ್ಮೆಡೆಗೆ ಹೆಮ್ಮೆಯ ದೃಷ್ಟಿ ಬೀರಿದರೆ, ಗೋವಿಂದ ಭೂತ ಹಿಡಿದವರಂತೆ ಮೈ ಕೈ ಕೊಡವಿ ಕುಣಿಯತೊಡಗಿದ. ಮರ ಹತ್ತುವಾಗ ಸರಿ ಇದ್ದ.. ಈಗೇನಾಯ್ತಪ್ಪಾ ಇವನಿಗೆ ಎಂದು ನಾವು ಗಾಭರಿಯಾದೆವು. ಮರದ ತುದಿಯಲ್ಲಿ ಬೀಡು ಬಿಟ್ಟಿದ್ದ ಕೆಂಜಿರುವೆಗಳು ಅವನ ಮೇಲೆ ದಾಳಿ ಮಾಡಿದ್ದವು. ಯಾರಿದ್ದಾರೆ ಯಾರಿಲ್ಲ ಎಂಬುದನ್ನು ಲೆಕ್ಕಿಸದೇ ಬಾಗೆ ಬಂದ ಹಾಗೆ ಇರುವೆಗಳ ಸಂತತಿಯನ್ನು ವಾಚಾಮಗೋಚರವಾಗಿ ನಿಂದಿಸುತ್ತಾ ನನ್ನಡೆಗೆ ನೋಡಿ 'ಅಕ್ಕಾ ಆ ಇರುವೆ ಪೌಡರ್ ಇದ್ರೆ ಸ್ವಲ್ಪ ಕೊಡಿ.. ಬೇಗ' ಎಂದ.
ಅವನಂದದ್ದನ್ನು ಕೇಳಿದ ನನ್ನಣ್ಣನ ಮಗಳು 'ಇರುವೆನೂ ಪೌಡರ್ ಹಾಕುತ್ತಾ ಅತ್ತೇ..? ಕ್ರೀಮ್ ಕೂಡಾ ಇದ್ಯಾ? ಎಲ್ಲಿದೆ ತೋರ್ಸಿ..' ಅಂತ ನನ್ನ ಹಿಂದೆಯೇ ಬಂದಳು. ಮುಚ್ಚಳ ತೆರೆಯುವ ಮೊದಲೇ ಘಾಟು ಹೊಡೆಯುವ ಕೀಟನಾಶಕ ಪೌಡರನ್ನು ನೋಡಿ 'ಥೂ' ಎಂದು ಮುಖ ಸಿಂಡರಿಕೊಂಡಳು. ಅವಳನ್ನು ನೋಡಿ ಅನಾಯಾಸವಾಗಿ ಬಂದ ನಗುವನ್ನು ಹತ್ತಿಕ್ಕಿಕೊಳ್ಳುತ್ತಾ ಗೋವಿಂದನಿಗೆ ಪೌಡರ್ ಡಬ್ಬಿಯನ್ನು ಹಸ್ತಾಂತರಿಸಿದೆ.
ಪುನಃ ಮರದ ಮೇಲೇರಿ ಪೌಡರ್ ಕೊಡವಿ ಬೇಗನೆ ಇಳಿದು ಬಂದ. ತಾನು ಸೂಚಿಸಿದಂತೆ ಮರ ಬದಲಾಯಿಸದೇ ಇದ್ದದ್ದಕ್ಕೆ ಕೊಂಚ ನಿರಾಶರಾದ ಕಿಟ್ಟುಮಾವ, ಈ ಕಡೆ ಇರೋ ಮರಕ್ಕೂ ಸ್ವಲ್ಪ ಹಾಕು.. ಎಲ್ಲಿಯಾದ್ರು ಇದನ್ನು ಹತ್ತ ಬೇಕಾಗಿ ಬಂದರೇನು ಮಾಡುವುದು ಎಂದರು. ಇವರೇನು ಧನಿಯೋ ಅಲ್ಲ ಶನಿಯೋ ಅನ್ನುವಂತೆ ಮುಖ ಮಾಡಿಕೊಂಡು ಗೋವಿಂದ , ಕಿಟ್ಟು ಮಾವ ತೋರಿಸಿದ ಮರ ಹತ್ತಿ ಅಲ್ಲಿಯೂ ಪೌಡರ್ ಉದುರಿಸಿದ.
ಬಾಗಿದ ಮರ ಎಲ್ಲಿ ಮನೆಯ ಮೇಲೆ ಬಿದ್ದು ಹಂಚುಗಳು ಪುಡಿ ಪುಡಿಯಾದೀತೋ ಎಂಬ ಭಯದಲ್ಲಿ ಗೋವಿಂದನನ್ನು ಕರೆಸಿಕೊಂಡು ಅವನ ವಾಗ್ ಪ್ರವಾಹದಲ್ಲಿ ನಾವು ಸಿಲುಕಿಕೊಂಡಾಗಿತ್ತು. ಹೇಗೋ ಮಾಡಿ ಅವನನ್ನು ಕೆಲಸಕ್ಕೆ ಹಚ್ಚಿದೆವು ಅಂದುಕೊಳ್ಳುತ್ತಿರುವಾಗ ಈ ಕಿಟ್ಟು ಮಾವ ಬಂದು ಸೇರಿಕೊಂಡು ಮಂತ್ರಕ್ಕಿಂತ ಉಗುಳೇ ಹೆಚ್ಚು ಅನ್ನುವ ವಾತಾವರಣ ನಿರ್ಮಾಣವಾಯಿತು. ಇನ್ನು ಭೋಜನ ವಿರಾಮದ ನೆಪದಲ್ಲಿ ಕೆಲಸ ವಿಳಂಬವಾಗುವ ಮುನ್ಸೂಚನೆ ಅರಿತು ನಮ್ಮ ಪತಿರಾಯರು, " ಗೋವಿಂದ.. ನಮಗೆ ಇವತ್ತು ಏಕಾದಶಿ, ಊಟಕ್ಕೆ ನೀನು ಹೋಟೆಲ್ಲಿಗೆ ಹೋಗಬೇಕಷ್ಟೆ. ನಿನಗೆ ಹಸಿವಾಗ್ತಾ ಇಲ್ವಾ..ಬೇಗ ಒಂದು ಸರ್ತಿ ಕಡಿ ಮಾರಾಯ. ತಡ ಆದ್ರೆ ನೀನು ಊಟದ ಬದಲು ಸಂಜೆಯ ತಿಂಡಿ ತಿನ್ನಬೇಕಷ್ಟೆ..' ಅಂದರು.
ಈಗ ಗೋವಿಂದ ಗಡಬಡಿಸಿ ಕೆಲಸಕ್ಕೆ ಅನುವಾದ. ಆದರೂ ಕಿಟ್ಟು ಮಾವ ತಮ್ಮ ಅನುಭವದ ಪ್ರಕಾರ ಯಾವ ಕಡೆಯಿಂದ ಮರಕ್ಕೆ ಕೊಡಲಿ ಪೆಟ್ಟು ಬಿದ್ದರೆ ಒಳ್ಳೆಯದು, ಯಾವ ಕಡೆಗೆ ಹಗ್ಗ ಜಗ್ಗಿದರೆ ಕ್ಷೇಮ ಎಂಬ ಬಗ್ಗೆ ಮಾತಾಡತೊಡಗಿದರು. ಕಿಟ್ಟು ಮಾವ ತಮ್ಮ ಬತ್ತಳಿಕೆಂದ ಬಿಡುತ್ತಿದ್ದ ಇಂತಹ ಬಾಣಗಳನ್ನು , ಗೋವಿಂದ ಸ್ವಯಂ ನಿಪುಣತೆಯಿಂದ ತಾನು ಕಡಿದುರುಳಿಸಿದ ಕಷ್ಟಾತಿಕಷ್ಟ ಮರಗಳ ಅಂಕೆ ಸಂಖ್ಯೆಗಳನ್ನು, ವಿಳಾಸ ಸಹಿತ ಒದಗಿಸುತ್ತಾ ಎದುರಿಸತೊಡಗಿದ.
ಏತನ್ಮಧ್ಯೆ ತಾನು ನಿಗದಿ ಪಡಿಸಿದ ಮರವನ್ನೇ ಏರಿ, ಕಡಿಯಬೇಕಾಗಿದ್ದ ಮರಕ್ಕೆ ಚತುರತೆಯಿಂದ ಹಗ್ಗವನ್ನೆಸೆದು ಕುಣಿಕೆ ಹಾಕಿ ಇಳಿದ. ಹಗ್ಗ ಹಿಡಿದುಕೊಳ್ಳುವವರು ಯಾವ ದಿಕ್ಕಿನಲ್ಲಿ ನಿಂತು ಜಗ್ಗ ಬೇಕು ಎಂಬುದರ ಬಗ್ಗೆ ವಿವರಿಸಿದ. ಆದ್ರೆ ಕಿಟ್ಟು ಮಾವ ಬಿಡಬೇಕಲ್ಲ! ಅದು ಸಮರ್ಪಕವಲ್ಲವೆಂದು ಅವರ ವಾದ. ನಮಗಂತೂ ಇವರ ವಾದ ವಿವಾದ ಕೇಳಿ ತಲೆ ಚಿಟ್ಟು ಹಿಡಿದು ಹೋಗಿತ್ತು. 'ಎಲ್ಲಿಯಾದ್ರೂ ಸರಿ ಒಮ್ಮೆ ಕಡಿ ಮಾರಾಯಾ' ಎಂಬ ಹುಕುಂ ನಮ್ಮ ಮಾವನವರಿಂದ ಹೊರಟಿತು.
ಅಷ್ಟರಲ್ಲಿ ಕಿಟ್ಟುಮಾವ ತಾವು ಹೇಳಿದ ದಿಕ್ಕಿಗೆ ಹಗ್ಗ ಹಿಡಿಯುವವರನ್ನು ನಿಲ್ಲಿಸಿಯಾಗಿತ್ತು. ಗೋವಿಂದ ಸ್ವಲ್ಪ ಕೋಪದಲ್ಲೇ ಮರದ ಮೇಲೆ ಕೊಡಲಿ ಬೀಸಿದ. ಒಂದೆರಡು ಪೆಟ್ಟು ಬಿದ್ದಿತ್ತಷ್ಟೆ. ಒಳಗಿನಿಂದ ಕುಂಬಾಗಿತ್ತೇನೋ ಮರ..ಕೊಂಚ ಆಲುಗಾಡಿದ ಮರ ತುದಿಯಲ್ಲಿ ಹಗ್ಗ ಕಟ್ಟಿದ ಜಾಗದಿಂದ ಲಟಕ್ಕನೆ ತುಂಡಾಗಿ, ಅಲ್ಲೇ ಮರ ಕಡಿಯುವ ಉಸ್ತುವಾರಿ ಹೊತ್ತಿದ್ದ ಕಿಟ್ಟುಮಾವನ ಕಡೆಗೆ ನೇರವಾಗಿ ಬೀಳಲು ಹೊರಟಿತು. ಹೆದರಿದ ಕಿಟ್ಟುಮಾವ ಅದರಿಂದ ತಪ್ಪಿಸಿಕೊಳ್ಳಲು ಪಕ್ಕಕ್ಕೆ ಹಾರಿ ಅಲ್ಲಿದ್ದ ತೆಂಗಿನ ಹೊಂಡಕ್ಕೆ ಬಿದ್ದರು. ಅಷ್ಟರಲ್ಲಿ ಉಳಿದರ್ಧ ಮರ ಕೊಡಲಿ ಪೆಟ್ಟು ಬಿದ್ದಲ್ಲಿಂದ ತುಂಡಾಗಿ ಮನೆಯ ಮಾಡಿನ ಮೂಲೆಯಲ್ಲಿದ್ದ ಕೆಲವು ಹಂಚುಗಳನ್ನು ಒರೆಸಿ ಪುಡಿ ಮಾಡಿ ನೆಲಕ್ಕೊರಗಿತು. ಈ ಶಬ್ಧಕ್ಕೆ, ತನ್ನ ನಿದ್ದೆ ಹಾಳಾದ ಬೇಸರದಲ್ಲಿ ನಮ್ಮ ನಾಯಿ 'ಟೈಗರ್' ಇಡೀ ಪ್ರಪಂಚಕ್ಕೆ ಕೇಳುವ ಹಾಗೆ ಬೊಗಳತೊಡಗಿತು.
ಇದಾಗಿ ಈಗ ಒಂದೆರಡು ದಿವಸಗಳಾಗಿದೆ. ಕಿಟ್ಟು ಮಾವನಿಗೆ ಕಾಲು ನೋವು ಸ್ವಲ್ಪ ಕಡಿಮೆ ಯಾಗಿ ಊರುಗೋಲು ಹಿಡಿದುಕೊಂಡು ನಡೆಯತೊಡಗಿದ್ದಾರೆ. ಆದರೂ ಗೋವಿಂದನ ಮೇಲಿನ ಕೋಪವಿನ್ನೂ ಆರಿಲ್ಲ. ಮನೆಗೆ ಬಂದು ಹೋಗುವವರೊಂದಿಗೆಲ್ಲಾ ಹೇಳಿಕೊಂಡು ಗೋವಿಂದನಿಗೆ ಸಹಸ್ರ ನಾಮಾರ್ಚನೆ ಮಾಡುತ್ತಿದ್ದಾರೆ. ಇತ್ತ ಗೋವಿಂದ , ಕಿಟ್ಟು ಮಾವನ ಮನಸ್ಸಿನಲ್ಲಿ ಮರ ಮಾಡಿನ ಮೇಲೆಯೇ ಬೀಳಬೇಕೆಂದಿತ್ತು, ಇದರಲ್ಲಿ ತನ್ನ ತಪ್ಪೇನೂ ಇಲ್ಲ ಎಂದು ಪ್ರಚಾರ ನಡೆಸುತ್ತಿದ್ದಾನೆ.
ನಾವು ಇವರಿಬ್ಬರ ಉಸಾಬರಿಗೆ ಹೋಗದೇ ಮನೆಯ ಮಾಡು ರಿಪೇರಿ ಮಾಡುವವನಿಗೆ ಫೋನಿನ ಮೇಲೆ ಫೋನ್ ಮಾಡಿಕೊಂಡು ಕಾಲ ಕಳೆಯುತ್ತಿದ್ದೇವೆ.