Pages

Total Visitors

Saturday, November 24, 2012

ನಮ್ಮೂರ ಬಯಲಾಟ


ಯಕ್ಷಗಾನದ ಚೆಂಡೆ ಮೈಲು ದೂರದಲ್ಲಿ ಕೇಳಿದರೂ ಕಿವಿ  ನೆಟ್ಟಗಾಗಿಸಿ ಅತ್ತ ಕಡೆಗೆ ಕಾಲು ಹಾಕುತ್ತಿದ್ದವರು ನನ್ನಪ್ಪ.  ಕೊಡಗಿಗೆ ಬಂದ ಮೇಲೆ ಅಪ್ಪನ ಯಕ್ಷಗಾನದ ಆಸಕ್ತಿಯ ಬಳ್ಳಿಗೆ ನೀರು ಸಿಕ್ಕುತ್ತಿದ್ದುದು ಅಷ್ಟರಲ್ಲೇ ಇತ್ತು. ಈ 'ಮಳೆ'ನಾಡಿಗೆ ಯಾವ ಮೇಳಗಳೂ ಬಂದು ಟೆಂಟ್ ಹಾಕಿ ಆಟ ಆಡಿ ದುಡ್ಡು ಮಾಡುವುದು ಸಾಧ್ಯವೂ ಇರುತ್ತಿರಲಿಲ್ಲ ಎಂದ ಮೇಲೆ ಘಟ್ಟ ಹತ್ತಿ ಬರುವ ತೊಂದರೆಯನ್ನು ಅವರೂ ತೆಗೆದುಕೊಳ್ಳುತ್ತಿರಲಿಲ್ಲ. ಅಪ್ಪ ಆಗೊಮ್ಮೆ ಈಗೊಮ್ಮೆ ದಕ್ಷಿಣ ಕನ್ನಡದ ಕಡೆ ಹೋದರೆ ರಾತ್ರಿಡೀ ನಿದ್ದೆಗೆಟ್ಟು ಆಟ ನೋಡಿ ಕೆಂಗಣ್ಣಿಗನಾಗಿ ಬರುತ್ತಿದ್ದರು. 

ಹೀಗೆ ಅಪರೂಪಕ್ಕೊಮ್ಮೆ ಆಟ ನೋಡಿ ಬರುತ್ತಿದ್ದ ಅಪ್ಪ ಬಹು ದಿನಗಳವರೆಗೆ ಅದರ ಗುಣಗಾನದಲ್ಲಿ ತೊಡಗಿರುತ್ತಿದ್ದರು. ಭಾಗವತರ ಕಂಠಸಿರಿ, ಹಿಮ್ಮೇಳದವರ ನೈಪುಣ್ಯತೆ, ಅರ್ಥದಾರಿಗಳ ಪಾಂಡಿತ್ಯ ಇತ್ಯಾದಿಗಳನ್ನು ಹೊಗಳಿ ವೈಭವೀಕರಿಸುವುದೆಂದರೆ ಅವರಿಗೆ ಎಲ್ಲಿಲ್ಲದ ಆಸಕ್ತಿ. ಔಷಧಕ್ಕಾಗಿ ಬಂದ ಪೇಷಂಟುಗಳಿಗೂ ಈ ಹೊಗಳಿಕೆಯ ಗುಟುಕನ್ನು ಕುಡಿಸುತ್ತಿದ್ದರು. ಅವರಿಗೂ ಇದನ್ನು ಸ್ವೀಕರಿಸುವುದು ಅನಿವಾರ್ಯವಾಗಿತ್ತು.  
ಹೀಗೆ ಮೇಲಿಂದ ಮೇಲೆ ಅಪ್ಪನ ದೆಸೆಯಿಂದ   ಯಕ್ಷಗಾನವನ್ನು ಗುಟುಕಾಯಿಸಿದ ಪರಿಣಾಮವೋ ಏನೋ, ನಮ್ಮೂರ ಜನರಿಗೂ ಉತ್ಸಾಹ ಉಕ್ಕಿ ಬಂತು. ಮೊದ ಮೊದಲು ಅಪ್ಪನ ಯಕ್ಷಗಾನದ ಹರಟೆಗೆ ಸುಮ್ಮಗೆ ಹೂಗುಟ್ಟುತ್ತಿದ್ದವರು ಕ್ರಮೇಣ, ಗಂಡು ಕಲೆಯೆನಿಸಿಕೊಂಡ  ಯಕ್ಷಗಾನ ನಮಗೇನು ದೂರದ್ದೇ ಸ್ವಾಮೀ ? ನಮ್ಮ ಪಕ್ಕದ ಊರು ಕರಾವಳಿಯದ್ದಲ್ಲವೇ.. ನಾವೂ ಒಂದು ಆಟ ಆಡೇ ಬಿಡೋಣ ಅನ್ನತೊಡಗಿದರು. 

ಹೇಳಿ ಕೇಳಿ ಟಿಪ್ಪುಸುಲ್ತಾನನ ಸೈನ್ಯವನ್ನೇ ಹಿಮ್ಮೆಟ್ಟಿಸಿದ ಖ್ಯಾತಿಯ ಪರಂಪರೆಯವರಿವರು, ಮನೆಗೊಬ್ಬ ಯೋಧನಂತೆ ಗಡಿಯಲ್ಲಿ ದೇಶ ಕಾಯುವ ಕೊಡಗಿನ ಕಲಿಗಳು. ಇವರಿಗೆ ಬಯಲಾಟದ ಯುದ್ಧಗಳು ತೀರ ಸಾಧಾರಣವಾಗಿ ಕಂಡದ್ದರಲ್ಲಿ ಆಶ್ಚರ್ಯವೇನಿದೆ? ಸ್ವಾಮಿ , ನೀವು ಹೇಳಿ ಕೊಡುವುದಾದರೆ ನಾವು ವೇಷ ಕುಟ್ಟಿ ಕುಣಿಯುವುದಕ್ಕೆ ಸೈ ಎಂದು ಪಂಥಾಹ್ವಾನವನ್ನು ನೀಡಿಯೇ ಬಿಟ್ಟರು.

ಯಕ್ಷಗಾನದ ಊರಲ್ಲಿ ಹುಟ್ಟಿ ಬೆಳೆದು ಸದಾ ಯಕ್ಷಗಾನದ ಗುಂಗಿನಲ್ಲೇ ಇರುತ್ತಿದ್ದ ಅಪ್ಪನಿಗೆ ಇದನ್ನು ಕೇಳಿ ಎಲ್ಲಿಲ್ಲದ ಉಮೇದು ಬಂದು ಬಿಟ್ಟಿತು. ಆದರೆ ಅಪ್ಪನಿಗೆ ಯಕ್ಷಗಾನ ತರಬೇತಿಗೆ ಸಂಬಂಧಿಸಿದಂತೆ ಶಾಲಾದಿನಗಳಲ್ಲಿ ಊರ ಕಲಾವಿದರೊಂದಿಗೆ ಬಣ್ಣ ಹಚ್ಚಿ ಕುಣಿದ ಅನುಭವ ಬಿಟ್ಟರೆ ಬೇರೆ ಅನುಭವ ಇರಲಿಲ್ಲ. ಆದರೆ ತಾವಾಗಿ ಬಂದು ರಣವೀಳ್ಯ ನೀಡಿದಾಗ ಸುಮ್ಮನೆ ಕೂರುವುದುಂಟೇ.. ನಾನು ಸಿದ್ದ ಎಂದು ಊರ ಜನರು ಕೊಟ್ಟ ರಣವೀಳ್ಯವನ್ನು ಕಚಕಚನೆ ಜಗಿದೇ ಬಿಟ್ಟರು.

ಕಲಿಯುವುದು ಕಲಿಸುವುದು ಎಲ್ಲ ಸರಿ.. ಆದರೆ ಆಟಕ್ಕೊಂದು ಪ್ರಸಂಗ ಬೇಡವೆ? ಇದನ್ನು ನಿರ್ಧರಿಸಲು ರಾಮ ಮಂದಿರದಲ್ಲಿ ಕಲಾಪ್ರೇಮಿಗಳ ಮೀಟಿಂಗ್ ಕರೆಯಲಾಯಿತು. ಗಧಾಯುದ್ದ, ರಾಮಾಶ್ವಮೇಧದಂತಹಾ ಪ್ರಸಂಗಗಳು ಒಂದಿಲ್ಲೊಂದು ಕಾರಣದಿಂದ ತಳ್ಳಿಹಾಕಲ್ಪಟ್ಟವು. ನಡುವೆ ಹೋಟೇಲ್ ವೆಂಕಟ ಸರಬರಾಜು ಮಾಡಿದ ಗೋಳಿಬಜೆ ಪ್ಲೇಟುಗಟ್ಟಲೆ ಖಾಲಿಯಾದವು. ಕಾಫಿಯ ಹಂಡೆ ಕ್ಷಣಾರ್ದದಲ್ಲಿ ತಳ ಕಂಡಿತು. ಅಂತೂ ಪ್ರಸಂಗ ಯಾವುದೆಂದು ನಿರ್ಧಾರವಾಗದೇ ಎರಡನೇ ಮೀಟಿಂಗಿಗೆ ದಿನ ನಿಗದಿಪಡಿಸಿ ಮೀಟಿಂಗ್ ಬರಖಾಸ್ತು ಮಾಡಲಾತು. 

ಎರಡನೇ ಮೀಟಿಂಗ್ ಕೂಡ ಇದೇ ದಾರಿ ಹಿಡಿದರೆ ಕಷ್ಟ ಎಂಬ ಮುನ್ನೆಚ್ಚರಿಕೆಯಿಂದ  ಅಪ್ಪ ' ಶ್ವೇತಕುಮಾರ ಚರಿತ್ರೆ'ಯೆಂಬ ನವರಸ ಭರಿತ ಪ್ರಸಂಗವೊಂದನ್ನು ಆರಿಸಿಕೊಂಡು ಸಭಾ ಪ್ರವೇಶ ಮಾಡಿದ್ದರು. ಮೊದಲನೇ ಮೀಟಿಂಗ್ ಬಾಬ್ತು ಇರಿಸಿದ್ದ ಕಾಫಿ ತಿಂಡಿಯ ಬಿಲ್ಲನ್ನು ಯಾವ ವೀರನೂ ಎತ್ತಿ ಹೆದೆಗೇರಿಸದೇ ಇದ್ದದ್ದರಿಂದ ಬರಿಗೈಯ್ಯಲ್ಲೇ ಬಂದಿದ್ದ ಹೊಟೆಲ್ ವೆಂಕಟ ಹೀರೋ ಪಾತ್ರ ತನಗೇ ಬೇಕೆಂದು ಪಟ್ಟು ಹಿಡಿದ. ಅವನ ಭರ್ತಿ ದೇಹ ನೋಡಿ ಅಪ್ಪ ಕಥಾ ಸಾರಾಂಶವನ್ನು ಹೇಳಿ ಈ ಕಥೆಯಲ್ಲಿ  ಹೀರೋ, ರಕ್ತ ಮಾಂಸಗಳಿಲ್ಲದ ಪ್ರೇತ ಎಂದಾಗ ಆತ ಸ್ವಲ್ಪ ನಡುಗುತ್ತಲೇ ಅದಾದ್ರೆ ನಂಗೆ ಬೇಡ ಎಂದು ದೂರ ಸರಿದ. 

ಕಲಿಸುವ ಗುರುವಾದ ಕಾರಣ ಅಪ್ಪನೇ ಪಾತ್ರಗಳನ್ನು ಒಬ್ಬೊಬ್ಬರಿಗೂ ಹಂಚಿದರು. ಮಿಲಿಟ್ರಿಯ ರಜೆಯಲ್ಲಿ ಮನೆಗೆ ಬಂದಿದ್ದ ಬೋಪಯ್ಯ ಯಮನಾದರೆ, ವೆಂಕಟ ರಕ್ಕಸನಾದ. ತನಗೆ ಒಗೆಯಲು ಕೊಡುವ ಯಾವುದಾದರು ಒಳ್ಳೆ ಸೀರೆಯನ್ನು ಆ ದಿನದ ಮಟ್ಟಿಗೆ ತಾನೇ ಹೊಂದಿಸುತ್ತೇನೆ ಎಂದು ಸಾರಿದ ಡೋಬಿ ರಾಜ ರಂಬೆಯಾದ. ಮೇಕಪ್ ಇಲ್ಲದಿದ್ದರೂ,ಯಾವತ್ತೂ ಪ್ರೇತ ಕಳೆಯಿಂದ  ನಳ ನಳಿಸುತ್ತಿರುವ ರಾಜನ ತಮ್ಮ ಲಾಲು ಪ್ರೇತವಾದ. ಶೋಕಿಲಾಲನಾಗಿದ್ದ ಟೈಲರ್ ವೀರು ಶ್ವೇತಕುಮಾರನಾದರೆ, ಕಳೆದ ವರ್ಷವಷ್ಟೇ ಹೆಂಡತಿಗೆ ಸೋಡಾ ಚೀಟಿ ಕೊಟ್ಟು ತೌರುಮನೆಗೆ ಸೇರಿಸಿದ್ದ ಕಾಳಯ್ಯ ಶ್ವೇತಕುಮಾರನ ಸಾದ್ವೀಮಣಿ ಹೆಂಡತಿಯಾದ. ಮದುವೆಗಳಿಗೆ ಮಂಟಪ ಕಟ್ಟಿ ಅಲಂಕರಿಸುವ  ಶಿವ ತನಗೆ ಸಿಕ್ಕಿದ ಪರಶಿವನ ಪಾತ್ರಕ್ಕೆ ಬದಲಾಗಿ ಉಳಿದವರಿಗೆಲ್ಲ ಬಣ್ಣದ ಕಾಗದ ಮತ್ತು ರಟ್ಟಿನಿಂದ ಕಿರೀಟ, ಬೇಗಡೆ ಕಾಗದದಿಂದ ಚಿನ್ನಾಭರಣಗಳನ್ನು ಮಾಡುವ ಕೆಲಸದ ಗುತ್ತಿಗೆಯನ್ನೂ ಹಿಡಿದ.
ಉಳಿದೆಲ್ಲಾ ಪಾತ್ರಗಳು ಅವರವರ ಗಾತ್ರಕ್ಕೂ ಮತ್ತು ಆಟದ ದಿನದಂದು ಅವರು ಹೊಂದಿಸುತ್ತೇವೆಂದು ಒಪ್ಪಿಕೊಂಡ  ಸಾಮಾಗ್ರಿಗಳ ಮೇಲೆ ನಿರ್ಧಾರಿತವಾಗಿ ಹಂಚಲ್ಪಟ್ಟಿತು.  ಯಾಕೆಂದರೆ ವೇಷ ಭೂಷಣಗಳಿಗೆ ಖರ್ಚು ಮಾಡುವಷ್ಟು ಫಂಡ್ ಯಾರ ಕಿಸೆಯಲ್ಲೂ ಇರಲಿಲ್ಲ. 

ಹೇಗೂ ಮುಮ್ಮೇಳ ಸಿದ್ಧವಾಯಿತು. ಆದರೆ ಆಟದ ದಿನ ಹಿಮ್ಮೇಳಕ್ಕೆ ವ್ಯವಸ್ಥೆಯೇನೆಂಬುದು ಮೊದಲೇ ನಿರ್ಧಾರವಾಗಬೇಕಿತ್ತು. ಭಾಗವತಿಕೆಗೆ ಅಪ್ಪನೇ ಉತ್ಸುಕತೆಂದಿದ್ದರು. ದೇವಸ್ಥಾನದಲ್ಲಿ ಚೆಂಡೆ ಹೊಡೆಯುತ್ತಿದ್ದ ಮೋಹನನನ್ನು ಆ ದಿನಕ್ಕೆ ಚೆಂಡೆ ಮತ್ತು ಬಾರ್ಬರ್ ಪುಟ್ಟಪ್ಪನನ್ನು ಮದ್ದಳೆಗೆ ಒಪ್ಪಿಸಿದ್ದಾಯ್ತು.ಹಾರ್ಮೋನಿಯಮ್ ಹಿಡಿದು, ಹಾಡುತ್ತಾ,  ಬೇಡುತ್ತಾ, ಅಲೆಯುತ್ತಿದ್ದ ದಾಸಜ್ಜನನ್ನು ಹಾರ್ಮೋನಿಯಮ್ ಶೃತಿ ಕೊಡಲು ಬೇಡಿಕೊಂಡಿದ್ದಾಯಿತು.

ಇನ್ನು ಪ್ರಾಕ್ಟೀಸು ತೊಡಗುವುದೊಂದು ಬಾಕಿ. ಆದರೆ ಅಪ್ಪನಿಗೆ ಇಡೀ ಪ್ರಸಂಗದ ಹಾಡುಗಳು ಬಾಯಿ  ಪಾಠ ಇಲ್ಲದ ಕಾರಣ ನಮ್ಮೂರ ಅಪುರೂಪದ ಯಕ್ಷ ಪ್ರೇಮಿಯೊಬ್ಬರನ್ನು ಸಂಪರ್ಕಿಸುವುದು ಅನಿವಾರ್ಯವಾಯಿತು. ಅವರ ಬಳಿ ಯಕ್ಷಗಾನ ಪ್ರಸಂಗ  ಪುಸ್ತಕಗಳ ಬಹು ದೊಡ್ಡ ಸಂಗ್ರಹವೇ ಇತ್ತು. ಅದನ್ನು ಅಮೂಲ್ಯ ಆಸ್ತಿಯಂತೆ ಕಾಪಾಡುತ್ತಿದ್ದ ಅವರು ಯಾರಿಗೂ ಪುಸ್ತಕ ಕೊಡುತ್ತಿರಲಿಲ್ಲ. ಹಾಗೇ ಚಿಲ್ಲರೆ ಪಲ್ಲರೆಗಳೆಲ್ಲ ಹೋಗಿ ಕೇಳಿದರೆ ಅವರು ಕೊಡುವರೇ..? ಅಪ್ಪನೇ ಸ್ವತಃ ಒಂದೆರದು ಹಿಂಬಾಲ(ಕ) ರನ್ನು ಇಟ್ಟುಕೊಂಡು ಅವರಲ್ಲಿಗೆ ಹೋಗಿ ಪ್ರಸ್ಥಾಪವಿಟ್ಟರು. 

ಅಪ್ಪನೊಂದಿಗೆ ಕೆಲವೊಮ್ಮೆ ಅಪ್ಪನ ಖರ್ಚಿನಲ್ಲೇ ಆಟ ನೋಡಿದ ಋಣಭಾರ ಅವರ ಮೇಲಿದ್ದುದರಿಂದ ತಮ್ಮ ಪುಸ್ತಕ ಸಂಗ್ರಹದ ಕಷ್ಟ ನಷ್ಟಗಳನ್ನು ನೂರ ಒಂದು ಬಾರಿ ಹೇಳಿ, ತಮ್ಮ ಪುಸ್ತಕದ ದೂಳು ಕೂಡಾ ಅಲುಗದಂತೆ ಜಾಗ್ರತೆಯಾಗಿ ತಂದು ಕೊಡಬೇಕೆಂದು ಒತ್ತಿ ಒತ್ತಿ ಹೇಳಿ, ಮದುವೆಯಾದ ಮೊದಲ ವಾರದಲ್ಲೇ ಹೆಂಡತಿಯನ್ನು ತೌರು ಮನೆಗೆ ಕಳುಹಿಸುವ ಗಂಡನೋಪಾದಿಯಲ್ಲಿ ಪುಸ್ತಕವನ್ನು ಅಪ್ಪನ ಕೈಗೆ ಹಸ್ತಾಂತರಿಸಿದರು. 

ಅಪ್ಪ ಅವರು ಹೇಳಿದ್ದಕ್ಕೆಲ್ಲ ತಲೆ ಅಲುಗಿಸಿ ಹೊತ್ತಗೆಯನ್ನು ಹೊತ್ತು ಹೊರ ಬರುತ್ತಿರುವಾಗ ಅವರು ಪುನಃ ಬಂದು ಅಡ್ಡ ನಿಂತು, ನನಗೂ ಒಂದು ಪಾತ್ರ ಕೊಡಿ ಎನ್ನಬೇಕೆ ! ನಡೆಯಲು ಇನ್ನೊಬ್ಬರ ಸಹಾಯ ಬೇಕಿದ್ದ ಈ ಇಳಿವಯಸ್ಸಿನಲ್ಲಿ ಅವರಿಗೆ ಯಾವ ಪಾತ್ರ ಕೊಡುವುದಪ್ಪಾ ಎಂದು ಚಿಂತಿಸುವಾಗ ಅಪ್ಪನಿಗೆ ಪಕ್ಕನೇ  ದ್ವಾರ ಪಾಲಕನ ಪಾತ್ರ ಹೊಳೆತು. ಅದಾದರೆ ಊರುಗೋಲಿನ  ಸಹಾಯದಿಂದ ರಂಗಸ್ಥಳಕ್ಕೆ ಒಂದು ಸುತ್ತಾದರೂ ಬರಬಹುದು ಎಂಬ ಆಲೋಚನೆ ಅಪ್ಪನದ್ದು. ಅದನ್ನೇ ಸೂಚಿಸಿದಾಗ, ಯಕ್ಷ ಪ್ರೇಮಿ  ಆದೀತಪ್ಪ..ಆಗದೇ ಏನು? ಎಲ್ಲಿ ನೋಡುವ ಎಷ್ಟು ಪದ್ಯ ಇದೆ ಆ ಪಾತ್ರಕ್ಕೆ ಅನ್ನುತ್ತಾ ಪುಸ್ತಕದತ್ತ ಕೈ ಚಾಚಿದರು. ಅಪ್ಪ ನಾಜೂಕಾಗಿ, ನಿಮಗೇನು ಅರ್ಥ ಹೇಳಲು ಈ ಮಕ್ಕಳಂತೆ ಬಾಯಿ  ಪಾಠ ಬೇಕೇ.. ಆ ದಿನ ಸಿದ್ಧವಾಗಿ ಬನ್ನಿ ಸಾಕು ಎಂದು ನುಡಿದು ಹೊರಟೇ ಬಿಟ್ಟರು. 

ಅಂತೂ ಇಂತೂ ಯಕ್ಷಗಾನಕ್ಕೆ ಅಗತ್ಯವಿರುವ ಜನಸಂಪತ್ತು, ಪದಾರ್ಥ ಸಂಪತ್ತು ಒಟ್ಟಾದ ಮೇಲೆ ಪ್ರಾಕ್ಟೀಸು ಎಂಬ 'ಸುಂದರ ಕಾಂಡ' ಸುರು ಆಯಿತು.  

ಸಂಜೆಯ ವೇಳೆ ನಮ್ಮೂರಿನ ರಾಮಮಂದಿರದ ಹಳೇ ಕಟ್ಟಡ ಇವರ ಕಲಿಕೆಗೆ ಸೂರು ನೀಡಿತು. ಅಪ್ಪ ಜಾಗಟೆ ಹಿಡಿದು ತಾಳ ಕುಟ್ಟುತ್ತಾ ಒಬ್ಬೊಬ್ಬರನ್ನೇ ಕುಣಿಸತೊಡಗಿದರು. ಎಲ್ಲರೂ ಉತ್ಸಾಹದಲ್ಲಿ ಜಿಗಿದು 'ದಿಂಗಣಾ' ತೆಗೆಯುವಾಗ ಜೀರ್ಣಾವಸ್ಥೆಯಲ್ಲಿದ್ದ ಕಟ್ಟಡದ ಗೋಡೆಗಳು ಅದುರುತ್ತಿದ್ದವು. ಅಪಾಯದ ಅರಿವಾಗಿ ಸೌಮ್ಯ ವೇಷಗಳಿಗೆ ಮಾತ್ರ ಒಳ ಪ್ರವೇಶ ನೀಡಿ ಉಳಿದದ್ದನ್ನು ಹೊರಗಿನ ಅಂಗಳದಲ್ಲಿ ಕುಣಿಸಲಾಯಿತು. ತಿಂಗಳುಗಟ್ಲೆ ಅಭ್ಯಾಸ ಮುಂದುವರೆತು. ಊರಿನ ಜನರೆಲ್ಲಾ ಬೇಗ ಕೆಲಸ ಮುಗಿಸಿ ಸಂಜೆ ಹೊತ್ತು ರಾಮ ಮಂದಿರದಲ್ಲಿ ಇವರನ್ನು ವೀಕ್ಷಿಸಲು ಜಮಾಯಿಸುತ್ತಿದ್ದರು. 

ಎಲ್ಲರೂ ಎಷ್ಟು ಮಗ್ನರಾದರು ಎಂದರೆ ಯಕ್ಷಗಾನ ನಿತ್ಯ ಜೀವನದಲ್ಲೂ ನುಗ್ಗಿಬಿಟ್ಟಿತ್ತು. ಹೋಟೆಲ್ ವೆಂಕಟನಲ್ಲಿಗೆ ಹೋಗಿ ಕುಳಿತರೆ ಸಾಕು, ವೆಂಕಟ ಹೋಟೆಲ್ ಮಾಣಿಯನ್ನು ಕೂಗಿ "ನೀರು ತಾ.. ಥಾ ತೈಯಥ ದಿನಥಾ.. ಬೇಗ ತಾ.. ಇಲ್ಲಿ ತಾ.." ಎಂದು ಹೇಳುತ್ತಿದ್ದ. ಮಾಣಿಯೂ 'ತಿತ್ತಿಥ್ಥೈ ತಿತ್ತಿಥ್ಥೈ' ಎಂದು ನಾಟ್ಯದ ಹೆಜ್ಜೆ ಹಾಕುತ್ತಾ ಬಂದು ನೀರನ್ನು ಟೇಬಲ್ ಮೇಲೆ ಇಡುತ್ತಿದ್ದ. ಡೋಬಿ ಲಾಲು ಮತ್ತು ರಾಜು ಬಟ್ಟೆ ಒಗೆಯುವಾಗ ಬಟ್ಟೆಗಳನ್ನು ತಾಳಕ್ಕೆ ಸರಿಯಾಗಿಯೇ ಕಲ್ಲಿಗೆ ಕುಕ್ಕಿ ಕುಕ್ಕಿ ಒಗೆಯುತ್ತಿದ್ದರು. ಟೈಲರ್ ವೀರುವಿನ ಕಾಲುಗಳು ಮಿಷನನ್ನು ಲಯಬದ್ಧವಾಗಿಯೇ ತುಳಿಯಲು ಪ್ರಾರಂಭಿಸಿ, ಒಂದು ವಾರದಲ್ಲಿ ಕೊಡುತ್ತೇನೆಂದ ಬಟ್ಟೆ ಒಂದು ತಿಂಗಳಾದರೂ ಸಿದ್ಧವಾಗುತ್ತಿರಲಿಲ್ಲ. ಆದರೆ ಊರವರೂ ಕೊಂಚವೂ ಬೇಸರಿಸದೇ ಊರ ಹುಡುಗರ ಈ ಎಲ್ಲಾ ಹುಚ್ಚಾಟಗಳನ್ನು ತಾವು ನೋಡಲಿರುವ ಯಕ್ಷಗಾನಕ್ಕಾಗಿ ಸಹಿಸಿಕೊಂಡರು.   

ಪ್ರದರ್ಶನದ ದಿನ ಹತ್ತಿರ ಬರುತ್ತಿದ್ದಂತೆ ರಣೋತ್ಸಾಹ ಎಲ್ಲರಲ್ಲೂ ತುಂಬಿ ತುಳುಕುತ್ತಿದ್ದರೂ, ಡೈಲಾಗ್ 'ಡೆಲಿವರಿ' ಮಾತ್ರ ನಿಜ ಅರ್ಥದ  ಹೆರಿಗೆ ನೋವಾಗಿ ಎಲ್ಲರನ್ನೂ ಕಾಡತೊಡಗಿತ್ತು. ಮುಂಜಾಗರೂಕತಾ ಕ್ರಮವಾಗಿ ತಪ್ಪಿ ಹೋದ ಡೈಲಾಗುಗಳನ್ನು ನೆನಪಿಸಿಕೊಡಲು ಪರದೆಯ ಹಿಂದಿನಿಂದ ಸಹಕರಿಸಲೆಂದೇ ಎರಡು ಕಂಠಗಳನ್ನು ಸಿದ್ದಪಡಿಸಲಾಯಿತು. 

ಆಟಕ್ಕೆ ಮೂರು ದಿನ ಮುಂಚಿತವಾಗಿ "ಅಕ್ಕ ತಂಗಿಯರೇ ಅಣ್ಣ ತಮ್ಮಂದಿರೇ, ಇದೇ ಬರುವ ಶನಿವಾರದಂದು ನಮ್ಮೂರ ದೇವಸ್ಥಾನದ ಮುಂದೆ ಸಜ್ಜುಗೊಳಿಸಿರುವ, ವಿದ್ಯುತ್ ದೀಪಗಳಿಂದಲಂಕೃತವಾಗಿ ಜಗ ಜಗಿಸುವ ಭವ್ಯ ದಿವ್ಯ ರಂಗುರಂಗಿನ ರಂಗ ಮಂಟಪದಲ್ಲಿ, ಮಣ್ಣಿನ ಮಕ್ಕಳು ಪ್ರದರ್ಶಿಸುವ ಶ್ವೇತಕುಮಾರ ಚರಿತ್ರೆ ಎಂಬ ಅದ್ಭುತ ಪುಣ್ಯ ಕಥಾನಕವನ್ನು ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ" ಎಂಬ ಘೋಷವಾಕ್ಯವನ್ನು  ಜೀಪಿಗೆ ಮೈಕ್ ಕಟ್ಟಿ ಸಾರಲಾಯಿತು. ಅಂತೂ ಇಂತೂ ಎಲ್ಲರೂ ಕಾಯುತ್ತಿದ್ದ ದಿನ ಬಂದೇ ಬಿಟ್ಟಿತು. ಅಪ್ಪ ಕೆಂಪು ಶಾಲು ಹೊದ್ದು ಹಿಮ್ಮೇಳದೊಂದಿಗೆ ಜಾಗಟೆಯೆತ್ತಿ 'ಗಜಮುಖದವಗೆ ಗಣಪಗೇ' ಎಂದು ಹಾಡಿ ಸುರು ಮಾಡಿಯೇ ಬಿಟ್ಟರು. ಮಿರ ಮಿರನೆ ಮಿನುಗುವ ವಿದ್ಯುದ್ದೀಪಾಲಂಕೃತವಾದ ರಂಗಸ್ಥಳದಲ್ಲಿ ವೇಷಗಳು ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದವು. ಊರಿನ ಜನಕ್ಕಂತೂ ಆ ವೇಷದೊಳಗಿರುವ ತಮ್ಮ ಮನೆಯ ಜನರನ್ನು ಕಂಡು ಸಂತಸವೋ ಸಂತಸ. ಕೆಲವು ಪಾತ್ರಗಳಂತೂ ಪದ್ಯ ಮುಗಿದರೂ ಕುಣಿಯುವುದನ್ನು ನಿಲ್ಲಿಸದಿದ್ದಾಗ ಅಪ್ಪನೇ ಕೂತಲ್ಲಿಂದ ಇಳಿದು ಬಂದು ಅವರ ರಟ್ಟೆ ಹಿಡಿದು ನಿಲ್ಲಿಸಿ ಅರ್ಥಗಾರಿಕೆ ಸುರು ಮಾಡಲು ಸೂಚಿಸಬೇಕಾಯಿತು. 

ರಂಬೆ ಪಾತ್ರದಾರಿ ರಾಜು, ಮಹಿಳಾ ಸಂಘದ ಅದ್ಯಕ್ಷೆ ಮೀನಾಕ್ಷಮ್ಮನ ಹೊಸ ಸೀರೆಯಲ್ಲಿ ಮಿಂಚುತ್ತಾ ಒಂದು ಸುತ್ತು ನಾಟ್ಯ ಮಾಡಿ ಕಾಲಿಗೆ ಸೀರೆ ತೊಡರಿಸಿಕೊಂಡು ಸ್ಟೇಜಿನಿಂದ ಕೆಳಗೆ ಬಿದ್ದ. ಕೆಳಗಿದ್ದ ಸಭಿಕರು ಅವನನ್ನೆತ್ತಿ ಸ್ಟೇಜಿನ ಮೇಲೆ ಬಿಟ್ಟರು. ಬೀಳುವಾಗ ನಿಲ್ಲಿಸಿದ ಪದ್ಯವನ್ನು ಪುನಃ ಹೇಳಿ ಎಂದು ಭಾಗವತರಾದ ನನ್ನಪ್ಪನಿಗೆ ತಿಳಿಸಿ ಮತ್ತೊಮ್ಮೆ ಕುಣಿದ. ಆಟದ ದಿನ ಸಮೀಪಿಸಿದಾಗ ಯಾರೊಬ್ಬರೂ ಸೀರೆ ಎರವಲು ಕೊಡಲು ಒಪ್ಪದಿದ್ದ ಕಾರಣ ಕಾಳಯ್ಯ ಗುಟ್ಟಿನಲ್ಲಿ ಹೆಂಡತಿಯೊಡನೆ ಸಂಧಾನ ಮಾಡಿಕೊಂಡು ಮರಳಿ ಮನೆಗೆ  ಕರೆ ತಂದದ್ದು ಯಾರಿಗೂ ಗೊತ್ತಿರಲಿಲ್ಲ. ಹೆಂಡತಿಯ ರೇಷ್ಮೆ ಸೀರೆಯನ್ನುಟ್ಟು,  ಪ್ರೇಕ್ಷಕರ ನಡುವೆ ಕುಳಿತಿದ್ದ ಅವಳನ್ನೇ ನೋಡುತ್ತಾ ವೈಯ್ಯಾರದಿಂದ ಕಾಳಯ್ಯ ಕುಣಿಯುವುದನ್ನು ಕಂಡು ಅವಕ್ಕಾದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ವಿಷಲ್ ಹಾಕಿ ಸ್ಪಂದಿಸಿದರು. ಅವಳಂತೂ ಮತ್ತೆ ತನ್ನ ಗಂಡನೆಡೆಗೆ ಮರಳಿಸಿದ 'ಆಟ'ವನ್ನು ಆರಾಧನಾ ಭಾವದಲ್ಲಿ ನೋಡುತ್ತಾ ಕುಳಿತಿದ್ದಳು.

ಅಷ್ಟರಲ್ಲಿ ಸಮಯದೊಂದಿಗೆ ಕಥೆಯೂ ಬೆಳೆದು ಯಮಧರ್ಮರಾಯನೂ ಪ್ರೇತರೂಪದ ಶ್ವೇತ ಕುಮಾರನೂ ಮುಖಾಮುಖಿಯಾಗುವ ಸನ್ನಿವೇಶ ಬಂದೇ ಬಿಟ್ಟಿತು. ಯಮ ಧರ್ಮನ ಪಾತ್ರದಾರಿ ಬೋಪಯ್ಯನಿಗೆ ಗದೆ ಎಂಬ ಆಯುಧ ಸಕಾಲಕ್ಕೆ ಎಲ್ಲೂ ಸಿಗದ ಕಾರಣ ಕೊಡಗಿನ ಮನೆ ಮನೆಯಲ್ಲೂ ಸರ್ವೇ ಸಾಧಾರಣವಾಗಿದ್ದ ಕೋವಿಯನ್ನೇ ಎತ್ತಿಕೊಂಡು ಸ್ಟೇಜಿಗೆ ಬಂದಿದ್ದ. ದೀಪಗಳನ್ನಾರಿಸಿ ಕತ್ತಲುಂಟು ಮಾಡಿದ್ದ ರಂಗ ಸ್ಥಳಕ್ಕೆ ಪ್ರವೇಶಗೈದ ಪ್ರೇತ ವೇಷದಾರಿಯ ವಿಕಾರ ರೂಪಿನಿಂದ ಭಯಗೊಂಡ ಪುಟ್ಟ ಮಕ್ಕಳ ಚಡ್ಡಿಗಳೂ ಒದ್ದೆಯಾದವು. ಕೆಲವು ಹಿರಿ ತಲೆಗಳು ಕಣ್ಣು ಮುಚ್ಚಿಕೊಂಡು ಹನುಮ ಜಪ ಪಠಿಸತೊಡಗಿದವು. 

ದೃಶ್ಯದಲ್ಲಿ ನೈಜತೆ ಇರಲೆಂದು ಯಮನ ಜೊತೆ ಒಂದು ಕೋಣವನ್ನೂ ಸ್ಟೇಜಿನ ಮೇಲೆ ತರುವುದೆಂದು ಮಾತಾಗಿತ್ತು. ಆದರೆ ಗುಂಡೂ ರಾಯರ ಮನೆಯಲ್ಲಿದ್ದ ಏಕಮೇವ ಕೋಣವು ಎರಡು ದಿನಗಳಿಂದ ಸೊಪ್ಪು ಹುಲ್ಲು ಹಿಂಡಿ  ಮುಟ್ಟದೆ ಉಪವಾಸ ಸತ್ಯಾಗ್ರಹ ಮಾಡುತ್ತಿತ್ತು. ಇದರಿಂದಾಗಿ ಸ್ವಲ್ಪ ತಲೆ ಖರ್ಚು ಮಾಡಿದ ಅಪ್ಪನ ಶಿಷ್ಯ ಗಣ ಡೋಬಿ ಲಾಲುವಿನ  ಕತ್ತೆಗೆ ಹಳೇ ಕರಿಗಂಬಳಿ ಹೊದಿಸಿ ತಲೆಗೆ ಕೃತಕ ಕೊಂಬು ಕಟ್ಟಿ ಸ್ಟೇಜಿನ ಮೇಲೆ ತಂದಿದ್ದರು. ಯಮ ವೇಷದಾರಿ ಬೋಪಯ್ಯ ಎಷ್ಟೇ ಜಗ್ಗಿದರೂ  ಕತ್ತೆ ಮಾತ್ರ  ತನಗೆ ಪರಿಚಿತ ವಾಸನೆರುವ ಪ್ರೇತ ವೇಷದಾರಿ ಲಾಲುವಿನ ಹಿಂದೆ  ಹೋಗಿ ನಿಲ್ಲುತ್ತಿತ್ತು. ಈ ಅವಾಂತರದಿಂದಾಗಿ ಗೊಳ್ಳನೆ ಕೇಕೆ ಹಾಕಿ ನಗುತ್ತಿದ್ದ ಸಭಿಕರೆದುರು ತಬ್ಬಿಬ್ಬಾಗಿ ನಿಂತಿದ್ದ  ಯಮನಿಗೂ, ಪ್ರೇತಕ್ಕೂ ತಮ್ಮ ತಮ್ಮ ಸಂಭಾಷಣೆಗಳು ಮರೆತು ಹೋದವು. ಹೇಗೋ ತೆರೆಯ ಹಿಂದೆ  ನಿಂತಿದ್ದ ಕಂಠದಾನಿಗಳು ಎಲ್ಲವನ್ನೂ ಆಡಿ ಸುಧಾರಿಸಿದರು. 

ಈ ಗಲಭೆಯಲ್ಲಿ ಕತ್ತೆಯನ್ನು ಯಾರೂ ಗಮನಿಸಿರಲಿಲ್ಲ. ಅಪ್ಪ ತಮ್ಮ ಮುಂದಿರಿಸಿಕೊಂಡಿದ್ದ ಪ್ರಸಂಗ ಪುಸ್ತಕವನ್ನು ಮೇವು ಎಂದುಕೊಂಡು ಒಂದೇ ತುತ್ತಿಗೆ ಬಾಯಿಗೆ ಸೇರಿಸಿಕೊಂಡಿತು. ಕೊನೇ ಗಳಿಗೆಯಲ್ಲಿ ಇದನ್ನು ಕಂಡ ಅಪ್ಪ ಅದರ ತಲೆಗೆ ಜಾಗಟೆಯ ಕೋಲಿನಲ್ಲಿ ಸಿಟ್ಟಿನಿಂದ ಮೊಟಕಿದರು. ಅದು ಬ್ರೇಂ .. ಎಂದರಚುತ್ತಾ ಸ್ಟೇಜಿನಿಂದ ಕೆಳಗೆ ಜಿಗಿದು ಸಭಿಕರ ಸಾಲಿನ ಮದ್ಯದಲ್ಲಿ ತೂರಿ ಹೊರಗೆ ಓಡಿ ಹೋಯಿತು. ಪುಣ್ಯಕ್ಕೆ ಪ್ರಸಂಗ ಪುಸ್ತಕ ನೀಡಿದ ಯಕ್ಷಪ್ರೇಮಿ  ಆ ದಿನ ತಮ್ಮ ಉಲ್ಬಣಗೊಂಡ ಕಾಲು ನೋವಿನಿಂದಾಗಿ ಇತ್ತ ಕಡೆ ತಲೆ ಹಾಕಿರಲಿಲ್ಲ. ಇಲ್ಲದಿದ್ದರೆ ಈ ದೃಶ್ಯವನ್ನು ನೋಡಿದ್ದರೆ ಎದೆಯೊಡೆದುಕೊಳ್ಳುತ್ತಿದ್ದರೇನೋ..!!

ಮತ್ತೆ ಬಂದ ಪಾತ್ರಗಳೆಲ್ಲವೂ ಅಪ್ಪನಿಗೆ ಬರುತ್ತಿದ್ದ ಬೇರೆ ಯಾವುದೋ ಪದ್ಯಗಳಿಗೆ ಕುಣಿದು ಈ ಆಟದ ಡೈಲಾಗ್ ಹೇಳಿದವು. ಅಂತೂ ಇಂತೂ ಬೆಳಗಾದಾಗ ಶೃತಿ ಪೆಟ್ಟಿಗೆ ಹಿಡಿದು ಕುಳಿತಿದ್ದ ದಾಸಜ್ಜ ಕುಳಿತಲ್ಲೇ ನಿದ್ರೆ ಹೋಗಿದ್ದನು. ಅಪ್ಪ ಮುಗಿಸುವುದೋ ಎಂಬರ್ಥದಲ್ಲಿ ಚೆಂಡೆ ಮದ್ದಲೆಯ ವಾರಸುದಾರರತ್ತ ಪ್ರಶ್ನಾರ್ಥಕ ನೋಟ ಬೀರಿದರು. ಸಮ್ಮತಿಪೂರ್ವಕವಾಗಿ ಅವರುಗಳು ತಲೆಯಾಡಿಸಿದರು. ಅಪ್ಪ ಸುಶ್ರಾವ್ಯವಾಗಿ "ಕರದೊಳು ಪರಶು ಪಾಶಾಂಕುಶ ಧಾರಿಗೇ... ಹರುಷದಿ ಭಕ್ತರ ಪೊರೆವವಗೇ.." ಎಂದು ಮಂಗಳ ಹಾಡಿದರು. ಜೊತೆಗೆ ಮೋಹನನೂ ಪುಟ್ಟಪ್ಪನೂ ಇನ್ನಿಲ್ಲದಂತೆ ಪ್ರಚಂಡವಾಗಿ ಚೆಂಡೆ ಮದ್ದಲೆ ಬಾರಿಸಿ ಮುಕ್ತಾಯ ಮಾಡಿದರು. ಇದರೊಂದಿಗೆ ನಮ್ಮೂರ ಹಮ್ಮೀರರ ಯಕ್ಷಗಾನದಾಟಕ್ಕೆ ತೆರೆ ಬಿದ್ದಂತಾಯ್ತು.

ಹೀಗೆ ಊರವರನ್ನು ಅನಾಯಾಸವಾಗಿ ನಕ್ಕು ನಲಿಸಿದ ಯಕ್ಷಗಾನ ಮುಗಿದು ತಿಂಗಳುಗಟ್ಟಲೆಯಾದರೂ ಜನ ಅದರ ಬಗ್ಗೆ ಮಾತಾಡುವುದು ಬಿಡಲಿಲ್ಲ. ಮೊದಲು ಸುಮ್ಮನೆ ಹೂಗುಟ್ಟುತ್ತಿದ್ದವರೆಲ್ಲಾ ಈಗ ಯಕ್ಷಗಾನದ ಬಗ್ಗೆ ಭಾಷಣ ಬಿಗಿಯಲು ಸುರು ಮಾಡಿದ ನಂತರ ಅಪ್ಪನೇ ಯಾಕೋ ಸಾಕೆನಿಸಿ ಕ್ಲಿನಿಕ್ನಲ್ಲಿ ಆಟದ ವಿಷಯ ಪ್ರಸ್ತಾಪ ಮಾಡುವುದನ್ನು ಬಿಟ್ಟು ಬಿಟ್ಟರು. 

( ಹೊಸದಿಗಂತ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಬರಹ ) 







9 comments:

  1. ondu vishayavannu rasavatthaagi heluva nimma shaili nanage hidisitu .chennaagide .
    -sujaha .

    ReplyDelete
  2. ತುಂಬಾ ಸಮಯದ ಬಳಿಕ ಓದುತ್ತಿರುವ ವಿಷಯವನ್ನು ಅನುಭವಿಸುತ್ತಾ ಓದಿದೆ :)
    ಹಿತವಾಗಿ, ನಗಿಸುತ್ತಾ ಓದಿ ಸಿಕೊಂಡು ಹೋಯ್ತು .. ಧನ್ಯವಾದ .
    ನಿಮ್ಮ ಭಾಷೆ ಸವಿಯಾಗಿದೆ :)

    ReplyDelete
  3. chennagide .. nimma lekhanagaLu yaavaagalu nagu tarisutte..

    ReplyDelete
  4. ಒಂದು ಮಾತು ಮೊದಲೇ ಹೇಳಿಬಿಡುತ್ತೇನೆ ಅನಿತಕ್ಕಾ... ನಿಮ್ಮ ಲೇಖನಗಳನ್ನು ಓದುತ್ತಿರುವಾಗ ಎಷ್ಟು ಪ್ಲೇಟ್ ಗೋಳಿ ಬಜ್ಜಿ ಖಾಲಿಯಾಗತ್ತೆ ಅಂತ ಲೆಕ್ಕವಿಡೋದಕ್ಕೆ ಆಗೋದಿಲ್ಲ... ಈ ಬರಹವಂತೂ ಪ್ರತಿ ಸನ್ನಿವೇಶವನ್ನೂ ಕಣ್ಮುಂದೆ ತಂದುಕೊಳ್ಳುತ್ತ ಅನುಭವಿಸುವಂತೆ ಇದೆ. ನಾನೂ 'ರಂಗಕ್ರಿಮಿ'ಯಾದ್ದರಿಂದ ('ಪುಸ್ತಕದ ಹುಳು' ಹೇಗೋ ಹಾಗೆ 'ನಾಟಕದ ಹುಳು' ಅಥವಾ 'ರಂಗಕ್ರಿಮಿ') ಇದನ್ನು ಬಾಯಿ ಚಪ್ಪರಿಸಿ ಚಪ್ಪರಿಸಿ ಆಸ್ವಾದಿಸಿದೆ.
    ಎಲ್ಲ ಓದಿದ ಮೇಲೆ ನಿಮ್ಮ ಬಗ್ಗೆ, ನಿಮ್ಮ ಶೈಲಿಯ ಬಗ್ಗೆ ಅಸೂಯೆ ಶುರುವಾಗಿದೆ ನನಗೆ...

    ReplyDelete
  5. ನಗೆಯ ಚಂಡೆ ಬಾರಿಸಬೇಕಾಯ್ತು ನಿಮ್ಮೀ ಲೇಖನ ಓದಿ. ಲಘುಧಾಟಿಯ ಲೇಖನ ಮೋಜಿನ ಥಕಧಿಮಿತ ತಂದು ಕೊಟ್ಟಿತು!

    ReplyDelete
  6. hale ghataneyannu aadharisi bareda naghu baraha chennagide.. naanoo kooda ee kalaa prayogada bhagavaagidde emdu nenesikollalu kushiyaguttide :)

    ReplyDelete
  7. ಹಾಸ್ಯವೇ ಪ್ರಧಾನವಾಗಿ ಮೂಡಿಬಂದಿದೆ ನಿಮ್ಮ ಲೇಖನದಲ್ಲಿ ... ಯಕ್ಷಗಾನವಾಗಲಿ, ನಾಟಕವಾಗಲಿ ಆಡಿಸುವುದು ಬಹಳ ಪ್ರಯಾಸದ ಕೆಲಸ,,, ನಿಮ್ಮ ತಂದೆಯವರು ಅನುಭವಿಸಿದ ಯಕ್ಷಗಾನದ ಪ್ರಸವ ವೇದನೆಯನ್ನು ಅಚ್ಚುಕಟ್ಟಾಗಿ ನಗುವಿನ ಸೆಳೆತದೊಂದಿಗೆ ನಿರೂಪಿಸಿದ್ದೀರಾ, ಅಚ್ಚುಕಟ್ಟಾದ ಬರಹ

    ReplyDelete
  8. ಮೊದಲು ಹೊಸದಿಗಂತ ದೀಪಾವಳಿ ವಿಶೇಷಾಂಕದಲ್ಲಿ ಈ ಬರಹ ಪ್ರಕಟವಾಗಿದ್ದಕ್ಕೆ ಅಭಿನಂದನೆಗಳು.

    ಸುಲಲಿತ ಶೈಲಿಯಲ್ಲಿ ರಸವತತಾಗಿ ವರ್ಣಿಸಿದ್ದೀರ.

    ReplyDelete
  9. ಎಷ್ಟು ನವಿರಾಗಿ ಒಂದು ಕಥಾ ಪ್ರಸಂಗವನ್ನು ಹಾಸ್ಯ ಲಾಸ್ಯದ ಜೊತೆ ಹೆಣೆದಿದ್ದೀರಿ...ನಿಜಕ್ಕೂ ಅಮೋಘ...ಒಂದು ಊರಿನಲ್ಲಿ ನಡೆಯುವ ಪ್ರಸಂಗ ಊರಿನ ಜನರನ್ನು, ಮುರಿದ ಸಂಸಾರವನ್ನು, ಅಹಂ ಅನ್ನು ತಣಿಸುವ ಒಂದು ಸುಂದರ ಅನುಭವ ಇದರಲ್ಲಿ ಅಡಗಿದೆ..ಅಭಿನಂದನೆಗಳು..ತುಂಬಾ ಖುಷಿ ಕೊಟ್ಟಿತು ನಿಮ್ಮ ಈ ಲೇಖನ...

    ReplyDelete