Pages

Total Visitors

Tuesday, March 12, 2013

ಅಜ್ಞಾತ ಸಮರ


ನಿತ್ಯವೂ ನನಗೆ ತಿಳಿದ ಮಟ್ಟಿಗೆ, ರುಚಿ ಶುಚಿಯಾಗಿ ನನಗೆ ಮರ್ಯಾದೆಯಾಗಿ ಮಾಡಲು ಬರುತ್ತಿದ್ದ ಅನ್ನ ಸಾರು ಪಲ್ಯ ಸಾಂಬಾರುಗಳನ್ನೇ ವಿಧ ವಿಧ ತರಕಾರಿ ಬಳಸಿ, ವಿವಿಧ ಸಂಭವನೀಯತೆಗಳನ್ನು ಬಳಸಿಕೊಂಡು ಹೊಸದು ಎಂದು ಲೇಬಲ್ ಹಚ್ಚಿ ಬಡಿಸುತ್ತಿದ್ದೆ. ಆಗೊಮ್ಮೆ ಈಗೊಮ್ಮೆ ಅಪುರೂಪಕ್ಕೆ ಹೋಟೆಲ್ಲಿಗೆ ಹೋಗಿ ಬಂದಾಗ ಒಂದೆರಡು ದಿನ ನನ್ನ ಅಡುಗೆಯ ಬಗ್ಗೆ ಒಂದಿಷ್ಟು ಕೊಂಕು ಕುಹಕಗಳು ಹಿಂದಿನಿಂದ ಕೇಳಿ  ಬಂದರೂ ನನ್ನ ಎದುರಲ್ಲಾಡುವ ಧೈರ್ಯ ಯಾರಿಗೂ ಬಂದಿರಲಿಲ್ಲ. 

ಆದರೆ ಯಾವಾಗ ಮಗರಾಯ ಕಾಲೇಜು ಮೆಟ್ಟಿಲು ಹತ್ತಿಳಿದು ಬಸವಳಿಯತೊಡಗಿದನೋ ಅಂದಿನಿಂದ ನನ್ನ ಅಡುಗೆಗಳೆಲ್ಲ ಅವನ ಕಣ್ಣಿಗೆ ಬಣ್ಣಹೀನವಾಗಿಯೂ,  ಬಾಗೆ ರುಚಿಹೀನವಾಗಿಯೂ ಕಾಣಿಸತೊಡಗಿತು. ಬೆಳಗ್ಗೆ ತಿನ್ನುವ ತಿಂಡಿಯನ್ನು  ಕಮೆಂಟು ಮಾಡಿಕೊಂಡು ತಿನ್ನುವಷ್ಟು ಬೇಗ ಅವನು ಹಾಸಿಗೆಯಿಂದ  ಏಳುತ್ತಿರಲಿಲ್ಲವಾದ್ದರಿಂದ ಅದು ಸಧ್ಯಕ್ಕೆ ಬಚಾವಾಗಿತ್ತು. ರಾತ್ರಿ ಊಟ ಮಾಡುವಾಗ ಸಾಂಬಾರಿನ ತಪಲೆಯ ಮುಚ್ಚಳ ತೆಗೆದು ಸೌಟು ಹಾಕಿ ತಿರುವಿ , ಮೂಗನ್ನು ಅರಳಿಸಿ " ಇವತ್ತು ಕ್ಯಾಂಟೀನಿನ ಮಾಮು ಮಾಡಿದ  ಸಾರು ಎಷ್ಟು ಪರಿಮಳ ಇತ್ತು ಗೊತ್ತಾ.. ಇದ್ಯಾವಾಗ ಹಾಗೆ ಗಮಗಮಿಸುತ್ತದೋ.." ಎಂದು ನನ್ನ ಮುಖ ನೋಡುತ್ತಿದ್ದ. ನಾನು ಸಹಾಯಕ್ಕಾಗಿ ಇವರ ಮುಖ ನೋಡಿದರೆ ಇವರು ರನ್ ಔಟ್ ಆಗುವ ಅಪಾಯದಲ್ಲಿರುವ ಕ್ರಿಕೆಟ್ ಆಟಗಾರ ತನ್ನ ಕ್ರೀಸ್ ಗೆ ಮರಳುವ ವೇಗದಲ್ಲಿ ಅಲ್ಲಿಂದ ಊಟ ಮುಗಿಸಿ ಓಡುತ್ತಿದ್ದರು. ಇನ್ನು ಮಗನ ವಾದ ಸರಪಣಿಗೆ ಇದಿರಾಡಿ ಹೊತ್ತು ಕಳೆದರೆ ನೋಡಬೇಕಾಗುವ ಸೀರಿಯಲ್ಲು ಮಿಸ್ ಆಗುವ ಭಯದಲ್ಲಿ ನಾನು ಮೌನವಾಗಿಯೇ ಊಟ ಮುಗಿಸಿ ಏಳುತ್ತಿದ್ದೆ. 

ಮೊದಲೆಲ್ಲಾ ಆಗೊಮ್ಮೆ ಈಗೊಮ್ಮೆ ಹೊರಡುತ್ತಿದ್ದ ಈ 'ಡೈಲಾಗ್ ಡೆಲಿವರಿ'ಗಳು ಈಗೀಗ ಪ್ರತಿದಿನವೂ ಪ್ರಸವಿಸತೊಡಗಿ ನನಗೆ ನಿತ್ಯ ಹೊಟ್ಟೆ ನೋವು ಕೊಡುತ್ತಿತ್ತು.ಇಷ್ಟುದ್ದ ಇದ್ದ ಪೋರನನ್ನು ಇಷ್ಟೆತ್ತರ ಬೆಳೆಸಲು ಬಳಸಿದ ಅಹಾರ ಈಗ ಇದ್ದಕ್ಕಿದ್ದಂತೇ ಸತ್ವಹೀನವಾಗುವುದೆಂದರೆ  ನನಗೆ ಅವಮಾನವಲ್ಲವೇ..?  ಇದರಿಂದಾಗಿ ನಾನು ಅವನ 'ಕ್ಯಾಂಟೀನಿನ ಮಾಮು'"ನೊಂದಿಗೆ  ಅಜ್ಞಾತ ಕದನಕ್ಕಿಳಿದೆ. 
ಇದರ ಮೊದಲ ಕ್ರಮವಾಗಿ ಟಿ ವಿ  ಯಲ್ಲಿ ಬರುವ ಅಡುಗೆ ಕಾರ್ಯಕ್ರಮ ನೋಡಿ ಹೊಸ ರುಚಿಗಳನ್ನು ಮಾಡೋಣ ಎಂದುಕೊಂಡೆ. ಆದರೆ ಅದರಲ್ಲಿ ಬಳಸುವ  ಸಾಮಗ್ರಿಗಳು ನನ್ನ ಕೈಗೆ ಸುಲಭ ಲಭ್ಯವಾಗದ ಕಾರಣ ಅದನ್ನು ಸೀರಿಯಲ್ ನೋಡಿದಂತೆ  ಸುಮ್ಮನೆ ನೋಡಿ ಆನಂದಿಸುವುದೇ ಒಳ್ಳೆಯದೆನಿಸಿತು. . ಹಾಗೆಂದು ಸುಲಭದಲ್ಲಿ ಸೋಲೊಪ್ಪಿಕೊಳ್ಳುವುದುಂಟೇ. ಮಾರ್ಕೆಟ್ಟಿನಲ್ಲಿ ನನ್ನಂತಹ ಜ್ಞಾನದಾಹಿಗಳಿಗಾಗಿ ತರಹೇವಾರಿ ಹೊಸ ರುಚಿ ಅಡುಗೆ ಪುಸ್ತಕಗಳಿಗೇನು ಬರವೇ..? ಸಿಕ್ಕ ಸಿಕ್ಕ ಅಡುಗೆ ಪುಸ್ತಕಗಳನ್ನೆಲ್ಲಾ ತಂದು ನನ್ನ ಅಡುಗೆ ಮನೆಯ ಕವಾಟು ತುಂಬಿಸತೊಡಗಿದೆ. 

ಇದರಿಂದಾದ ಮೊದಲ ಪ್ರಯೋಜನ ಎಂದರೆ ಅಲ್ಲಿನ ಖಾಲಿ ಜಾಗಲ್ಲಿ ನಿರಾತಂಕವಾಗಿ ಅಡ್ಡಾಡಿಕೊಂಡು ಕಣ್ಣಿಗೆ ಬೀಳದೆ ಮರೆಯಾಗಿದ್ದ ಜಿರಳೆ ವಂಶಜರು ಅಲ್ಲಿ ಜಾಗ ಇಲ್ಲದೆ ಹೊರ ಬಿದ್ದರು. ನನ್ನ ಪೊರಕೆಯ ಪ್ರಹಾರಕ್ಕೆ ಸಿಕ್ಕಿ ವೀರ ಸ್ವರ್ಗ ಪಡೆದರು. ಒಂದು ದಿನ ನಾನು ಒಂದು ಕೈಯಲ್ಲಿ ಅಡುಗೆ ಪುಸ್ತಕ ಮತ್ತು ಇನ್ನೊಂದು ಕೈಯಲ್ಲಿ ಬಿಸಾಡಲೆಂದು  ಮೀಸೆಯಿಂದೆತ್ತಿ  ಹಿಡಿದ ಸತ್ತ  ಜಿರಳೆಯಿಂದ  ಅಲಂಕೃತಳಾಗಿ ನಿಂತಿದ್ದನ್ನು  ಕಂಡು ತಪ್ಪು ತಿಳಿದ ನನ್ನ ಮಗ " ಇವತ್ತು ಅಮ್ಮ ಚೈನೀಸ್ ಸ್ಪೆಷಲ್ ಮಾಡ್ತಾಳೆ ಅನ್ಸುತ್ತೆ ಅಪ್ಪಾ" ಅಂತ ಇವರ ಕಿವಿಯೂದಿದ್ದ. ನನಗೆ ಕಾಣದಂತೆ ಇವರು ಮೀಸೆಯಡಿಯಲ್ಲೇ ನಕ್ಕಿದ್ದರು. 

ಒಂದು ದಿನ  ನನ್ನ ಪುಸ್ತಕದ ರಾಶಿ ನೋಡಿದ ಇವರು "ಈ ಎಲ್ಲಾ ಪುಸ್ತಕ ಓದಿ  ದಿನಕ್ಕೆರಡು ಅಡುಗೆ ಮಾಡಿದ್ರೂ ಇದು ನಮ್ಮ ಮೊಮ್ಮಕ್ಕಳ ಕಾಲದವರೆಗೆ ಮುಗಿಯಲಾರದೇನೋ, ಆದ್ರೆ ಈ ಪುಸ್ತಕ ಬಂದ ಮೇಲೆ ನೀನು ಹೆಚ್ಚಾಗಿ ಅವಲಕ್ಕಿಯ  ಬಗೆ ಬಗೆ ಅವತಾರಗಳನ್ನೇ ತಿಂಡಿ ಅಂತ ಕೊಡ್ತಾ ಇದ್ದೀಯಾ" ಎಂದು ಗಂಭೀರ ಆರೋಪ ಹೊರಿಸಿದರು. ಅಲ್ಲ .. ನಾನಾದ್ರು ಏನು ಮಾಡಲಿ ಹೇಳಿ..  ಒಂದು ಪುಸ್ತಕ ತೆಗೆದು ಯಾವ ತಿಂಡಿ ಒಳ್ಳೆಯದು ಎಂದು ಪುಟ ಮಗುಚುವಾಗಲೇ ಇವರೆಲ್ಲರಿಗೂ ಆಫೀಸಿಗೆ, ಕಾಲೇಜಿಗೆ ಹೋಗಲು ಅವಸರವಾಗುತ್ತಿತ್ತು. ಹಾಗಾಗಿ ಬಹುತೇಕ ದಿನ ಅವಸರದ ಅವಲಕ್ಕಿಯೇ ತಿಂಡಿಯಾಗುತ್ತಿತ್ತು.

ನನ್ನನ್ನು ತಮಾಷೆ ಮಾಡುವ ಇವರುಗಳು ಬೆರಳು ಚಪ್ಪರಿಕೊಂಡು ತಿನ್ನುವ ತಿಂಡಿ ಮಾಡಿಯೇ ಸಿದ್ಧ ಎಂದು ಇವತ್ತು ಪ್ರತಿಜ್ಞೆ ಮಾಡಿಯೇ ಬಿಟ್ಟಿದ್ದೆ. ಬೆಳಗ್ಗಿನ ಗಡಿಬಿಡಿಗೆ ಅದೆಲ್ಲ ಆಗುವುದಿಲ್ಲ. ಶನಿವಾರವಾದ್ದರಿಂದ  ಹೇಗೂ ಮಧ್ಯಾಹ್ನಕ್ಕೆ ಮಗನೂ ಕಾಲೇಜಿನಿಂದ ಊಟಕ್ಕೆ ಮನೆಗೆ ಬರುತ್ತಾನೆ. ಅವನಿಗೆ ನನ್ನ ಕೈಯ ಜಲಕ್ ತೋರಿಸಿಯೇ ಬಿಡುತ್ತೇನೆ ಎಂದು ಮನದಲ್ಲೆ ವಿಘ್ನ ವಿನಾಶಕನನ್ನು ನೆನೆದು ಕಣ್ಣು ಮುಚ್ಚಿ ಪುಸ್ತಕದ ಪುಟವೊಂದನ್ನು ಬಿಡಿಸಿ, ಈಗ ಕಣ್ಣು ಬಿಟ್ಟೆ. 

ಕಡಲೆ ಬೇಳೆ ಉಪಯೋಗಿಸಿ ಮಾಡುವ ಅಡುಗೆಯೊಂದಿತ್ತು ಅದರಲ್ಲಿ. ಮಾಡಲು ಹೆಚ್ಚು ಸಾಮಗ್ರಿಯೂ ಬೇಡ ಎಂದು ಖುಶಿಪಟ್ಟುಕೊಂಡು ಕಡಲೆ ಬೇಳೆಯನ್ನು ಕುಕ್ಕರಿನಲ್ಲಿ ಬೇಯಲಿಟ್ಟು ಬಾಕಿ ತಯಾರಿ ಸುರು ಮಾಡಿದೆ. ತೆಂಗಿನಕಾಯಿ  ಹೆರೆದಿಡಿ. ಏಲಕ್ಕಿ ಹುಡಿ ಮಾಡಿ, ಬೆಲ್ಲ ತುರಿದಿಡಿ ಎಂಬೆಲ್ಲ ಆಜ್ಞೆಗಳನ್ನು ಓದುವಾಗ ಯಾಕೋ ಸಿಟ್ಟು ಬರಲಿಕೆ ಶುರು ಆಯ್ತು. ಅಲ್ಲಾ ಮದ್ವೆಯಾಗಿ ಇಷ್ಟು ಸಮಯವಾಯ್ತು ಯಾರೂ ನನ್ನನ್ನು ಅದು ಮಾಡು, ಇದು ಮಾಡು.. ಎಂದು ಅಂದಿರಲಿಲ್ಲ. ಅಂತಾದ್ದರಲ್ಲಿ ನಾನೇ ದುಡ್ಡು ಕೊಟ್ಟು ತಂದ ಪುಸ್ತಕ ನನಗೇ ಆರ್ಡರ್ ಮಾಡುವುದೆಂದರೆ.. ಕೋಪ ಬರದಿರುತ್ತದೆಯೇ..ಕೂಡಲೇ ಕ್ಯಾಂಟೀನ್ ಮಾಮು"ನ ಮೇಲಿನ ನನ್ನ ಸ್ಪರ್ಧೆ ನೆನಪಿಗೆ ಬಂದು ಸಮಾಧಾನಿಸಿಕೊಂಡೆ. 

ಮತ್ತೆ  ಪುಸ್ತಕದತ್ತ ಕಣ್ಣಾಡಿಸಿದರೆ  ಅದರಲ್ಲಿ ಈರುಳ್ಳಿ ಬೆಳ್ಳುಳ್ಳಿ ಬಿಳಿ ಪೇಸ್ಟ್, ಶುಂಠಿ ಹಸಿಮೆಣಸಿನ ಪೇಸ್ಟ್, ಪುದೀನ ಕೊತ್ತಂಬರಿ ಸೊಪ್ಪಿನ ಹಸಿರು ಪೇಸ್ಟ್, ಕೆಂಪು ಮೆಣಸಿನ ಸಿಪ್ಪೆಯ ಕೆಂಪು ಪೇಸ್ಟ್ ಎಂದೆಲ್ಲಾ ಇತ್ತು. ಛೇ.. ಆಗ ಇದನ್ಯಾಕೆ ಓದದೇ ಉಳಿದೆ .. ಬಹುಷಃ ಸಿಟ್ಟುಬಂದಿದ್ದಾಗ ಕಣ್ಣು ಕಾಣದೇ ಇದ್ದಿರಬಹುದು ಎಂದುಕೊಂಡು ಅದನ್ನೆಲ್ಲ ರೆಡಿ ಮಾಡಿದೆ.

ಕೊನೆಗೆ ಮಾಡುವ ವಿಧಾನ ಓದಿಕೊಂಡು ಒಂದೊಂದೇ ಪೇಸ್ಟುಗಳನ್ನು ಹಾಕಿ ಕಲಕಿರಿ, ಮಗುಚಿರಿ, ತಿರುವಿರಿ .. ಎಂದೆಲ್ಲಾ ಮಾಡಿದೆ.  ಕೊನೆಗೆ ಇಳಿಸಿರಿ ಎಂದಿತ್ತು. ಅದನ್ನೂ ಮಾಡಿದೆ. ಈಗ ರುಚಿ ಬಣ್ಣ ಸುವಾಸನೆ ಎಲ್ಲಾ ಅದ್ಭುತವಾಗಿ ಹೊರ ಹೊಮ್ಮುತ್ತಿತ್ತು. ಆದರೆ ನಾನು ಮೊದಲೇ ಸಿದ್ಧಪಡಿಸಿಟ್ಟುಕೊಂಡಿದ್ದ ಕಾಯಿ  ತುರಿ ಏಲಕ್ಕಿ ಹುಡಿ ಬೆಲ್ಲಗಳು ಪಕ್ಕದಲ್ಲೇ ತಣ್ಣಗೆ ಕುಳಿತಿದ್ದವು...ಅರ್ರೇ .. ಇದೇನು ಮಾಯ  ಎಂದುಕೊಂಡು  ಇನ್ನೊಮ್ಮೆ ಓದಿದೆ. 

ಹೇಳಿ ಕೇಳಿ ನಮ್ಮೂರು ಕರಾವಳಿ. ತಲೆ ಮೇಲೆ ಫ್ಯಾನ್ ಎಂಬ ಇಂಜಿನ್ನು ಭರ್ರೋ ಎಂದು ಸದಾಕಾಲ ಅರಚಿಕೊಂಡು ಸುತ್ತದಿದ್ರೆ ನಾವು ನಿಲ್ಲಲೇ ಸಾಧ್ಯವಿಲ್ಲ. ಅಂತಾದ್ರಲ್ಲಿ ಅಡುಗೆ ಮನೆ ಇನ್ನಷ್ಟು ಬಿಸಿ ಏರಿಸುವ ತಾಣ. ಇಲ್ಲಿ ಕೆಲ್ಸ ಮಾಡುವಾಗ ಫ್ಯಾನ್ ತನ್ನ ಯೋಗ್ಯತೆಯನ್ನು ಮೀರಿ ಫುಲ್ ಸ್ಪೀಡಿನಲ್ಲಿ ಇರಲೇಬೇಕಾದದ್ದು ಅನಿವಾರ್ಯ. ಈ ಫ್ಯಾನ್ ತಿರುಗುವ ಸ್ಪೀಡಿಗೆ ಪುಸ್ತಕದ ಪುಟ ಮಗುಚಿಕೊಂಡು ಇನ್ನೊಂದು ಪೇಜಿಗೆ ಹೋಗಿ ಅಲ್ಲಿ ಕಡಲೇ ಬೇಳೆ ಬಳಸಿ ಮಾಡುವ ದಾಲ್ ಸ್ಪೆಷಲ್ ವಿವರಿಸಿತ್ತು. ಯಾವುದೋ ಒಂದು ಅಡುಗೆ ತಿನ್ನುವಂತಾಗಿದೆಯಲ್ಲ ಎಂದು ನನ್ನನ್ನು ನಾನೇ ಹೊಗಳಿಕೊಳ್ಳುತ್ತಾ ಕಾಯಿ  ತುರಿಯನ್ನು ಫ್ರಿಜ್ಜಿನೊಳಕ್ಕೆ ತಳ್ಳಿ, ಬೆಲ್ಲ, ಏಲಕ್ಕಿಗಳನ್ನು ಅವುಗಳ ಯಥಾಸ್ಥಾನದಲ್ಲಿಟ್ಟೆ. 
ಅಷ್ಟರಲ್ಲೇ ಮಗನ ಬೈಕ್ ದೂಳೆಬ್ಬಿಸುತ್ತಾ ಅಂಗಳಕ್ಕೆ ಬಂದೇ ಬಿಟ್ಟಿತು.ಕುಶಿಯಿಂದ  ಹೊರಗಿಣುಕಿದರೆ ಅವನ ಹಿಂದಿನಿಂದ ಶುಭ್ರ ಬಿಳಿ ವಸ್ತ್ರಧಾರಿಯೊಬ್ಬರು ಇಳಿಯುತ್ತಿದ್ದಾರೆ.  ಕಣ್ಣಲ್ಲೇ ಮಗನನ್ನು ಕೇಳಿದೆ. 

ಅವನ ಉತ್ತರ ಬರುವ ಮೊದಲೇ ಅವರು " ನಮಸ್ಕಾರ ಅಮ್ಮ, ನಾನು ನಿಮ್ಮ ಮಗನ ಕಾಲೇಜಿನ ಕ್ಯಾಂಟೀನಿನ ಮಾಮು. ನನ್ನ ಸರ್ವೀಸಿನಲ್ಲೇ ನಿಮ್ಮ ಮಗನಂತವನನ್ನು ನೋಡಿರಲಿಲ್ಲ. ನನ್ನ ಕ್ಯಾಂಟೀನಿನಲ್ಲಿ ಎಷ್ಟೇ ಚೆನ್ನಾಗಿ ಅಡುಗೆ ಮಾಡಿರಲಿ ಇವನು ಊಟಕ್ಕೆ ಕುಳಿತು, 'ಏನೇ ಹೇಳಿದ್ರು ಮಾಮು, ನನ್ನಮ್ಮ ಮಾಡಿದಷ್ಟು ರುಚಿ ಇಲ್ಲ ಇದು' ಅನ್ನುತ್ತಾನೆ ನೋಡಿ. ಹಾಗೇ ಇವತ್ತು ಶನಿವಾರ ಅಲ್ವ.. ಮಧ್ಯಾಹ್ನಕ್ಕೆ ಕ್ಯಾಂಟೀನಿನಲ್ಲಿ  ಯಾರೂ ಊಟಕ್ಕಿರೋದಿಲ್ಲ.ಅದಕ್ಕಾಗಿ ನಾನೇ ನಿಮ್ಮ ಕೈ ಅಡುಗೆ ಊಟ ಮಾಡುವ ಅಂತ ಬಂದೆ" ಎಂದು ಕೈ ಕಾಲು ತೊಳೆದು ಪದ್ಮಾಸನ ಹಾಕಿ ಬಾಳೆ ಎಲೆಯೆದುರು ಕುಳಿತೇ ಬಿಟ್ಟರು. 

ನನ್ನ ಹಿಂದೆಯೇ ಅಡುಗೆ ರೂಮಿಗೆ ಬಂದ ನನ್ನ ಮಗನ ತಲೆ ಮೇಲೆ ಮೊಟಕಿದೆ. ಅವನು ತುಂಟ ನಗೆ ನಕ್ಕು ತಾನೂ ಅವರೊಂದಿಗೆ ಊಟಕ್ಕೆ ಕುಳಿತ. ಮರು ಮಾತನಾಡದೇ ಇದ್ದದ್ದನ್ನೆಲ್ಲಾ ನನ್ನ ಹೊಸ ರುಚಿಯ ಸಮೇತ ಬಡಿಸಿದೆ. ಮೌನವಾಗಿಯೇ ಊಟ ಮುಗಿಸಿದ ಅವರು,ನಂತರ ಕೈ ತೊಳೆದುಕೊಂಡು " ಊಟ ಚೆನ್ನಾಗಿತ್ತು.. ನಿಮ್ಮ ಮಗ ಹೊಗಳೋದು ಸುಮ್ಮನೆ ಅಲ್ಲ.. ಅದ್ರಲ್ಲೂ ಈ ಬೇಳೆ ಐಟಮ್ ಅಂತೂ ಬೊಂಬಾಟ್.. ಏನೆಲ್ಲ ಹಾಕಿದ್ರಿ ಎಂದರು. ಪಟ ಪಟನೆ  ಆ ಎಲ್ಲಾ ಸಾಮಗ್ರಿಗಳ ಉತ್ತರ ಹೊರ ಬರಲು ನಾನೇನು ಬಾಯಿ ಪಾಠ ಮಾಡಿದ ವಿದ್ಯಾರ್ಥಿಯೇ..? ಪಕ್ಕನೇ ಏನೂ ನೆನಪಿಗೆ ಬರಲಿಲ್ಲ. ಆದರೆ ಕೊನೆಗೆ ಒಳಗಿಟ್ಟ ಬೆಲ್ಲ, ಏಲಕ್ಕಿ, ತೆಂಗಿನಕಾಯಿ  ನೆನಪಿಗೆ ಬಂದು ಅದನ್ನೇ ಹೇಳಿದೆ. ಅವರು ವಿಶ್ವದ ಎಂಟನೇ ಅದ್ಭುತವನ್ನು ನೋಡಿದಷ್ಟೇ ಬೆರಗಿನಿಂದ ನನ್ನ ಕಡೆ ನೋಡುತ್ತಾ ನಿರ್ಗಮಿಸಿದರು.   

12 comments:

 1. ಹ..ಹ..ಹ ಗ್ರೇಟ್ ....ತುಂಬ ಚೆನ್ನಾಗಿದೆ ...ಓದುತ್ತಾ ನಗುವುದನ್ನು ನೋಡಿ ನನ್ನ ಮಗಳು ಏನಾಯ್ತಮ್ಮ ಅಂತ ಕೇಳ್ತಿದ್ದಾಳೆ... ಏನಿಲ್ಲ ಸುಮ್ನೆ ಏನೋ ಜೋಕ್ ಅಷ್ಟೆ ಅಂತ ಹೇಳಿಬಿಟ್ಟೆ :)

  ReplyDelete
 2. hoi aa canteen maamu enna dosth...bardaddu laykaayidu :))

  ReplyDelete
 3. Fantastic! ಮಾಮುವಿನೊಡನೆ ನಾನೂ ಬೇಸ್ತ್! ಒಂದು ಭಾನುವಾರ ಹೇಳಿಯೇ ಊಟಕ್ಕೆ ಬರುತ್ತೇನೆ. - ಪೆಜತ್ತಾಯ ಎಸ್. ಎಮ್

  ReplyDelete
 4. ಬಾಯಲ್ಲಿ ನೀರು ಬರಿಸುವ ತಿಂಡಿ ತಿನಿಸುಗಳ ಜೊತೆಯಲ್ಲಿ ಹಾಸ್ಯ ಬೆರೆಸುವ ನಿಮ್ಮ ಬರಹಕ್ಕೆ ಶರಣು
  ಸೂಪರ್ ಲೇಖನ
  ಈ ಸಾಲುಗಳು ಸಕತ್ ನಗೆ ತಂದಿತು "
  ನಾನು ಸಹಾಯಕ್ಕಾಗಿ ಇವರ ಮುಖ ನೋಡಿದರೆ ಇವರು ರನ್ ಔಟ್ ಆಗುವ ಅಪಾಯದಲ್ಲಿರುವ ಕ್ರಿಕೆಟ್ ಆಟಗಾರ ತನ್ನ ಕ್ರೀಸ್ ಗೆ ಮರಳುವ ವೇಗದಲ್ಲಿ ಅಲ್ಲಿಂದ ಊಟ ಮುಗಿಸಿ ಓಡುತ್ತಿದ್ದರು"

  ReplyDelete
 5. nanagenimma badukinapriiti ideyalla adu istavaagutte...naavu nivella amma maadida anna saaru mudde,rotti.kaalu palya unasekaayi chatni,tambuli. chitranna aagomme iigomme bellada kadlebele payasa,, idaralle svarga kaanutiddevu... habbada dinagalli holige maadidaaga aa holige saaru kottiro suka indigu mareyaraddu...aadare iiga aduge maadalu talme illa..tv seriel galu bahuteka janara maneya shantiyannu haalu maaduttive gruhapravesha ukkabekada haalu dinaalu ukkiuttide..vaggarane sidu aa vasaneyinda palye tinnallaguttilla... iigina hudugaru swalpa hechhu kammiyaadare tinnade malaguttare... ellavu gondaladallide....nimma barha nanage tumbaa ista sahityikavaagi estu ghambiiravaagi baeyuttiro aste aduge bagge kuda... i like it...
  d.ravi varma....

  ReplyDelete
 6. ಅಕ್ಕ ಸಕ್ಕತ್ತಾಗಿ ಬರೆದಿದ್ದೀರಿ. ನಕ್ಕೂ ನಕ್ಕೂ ಹೊಟ್ಟೆ ಹುಣ್ಣಾಯ್ತು! ನಿಮ್ಮ ಬರವಣಿಗೆಯಲ್ಲಿನ ಹಾಸ್ಯ ಪ್ರಜ್ಞೆ ಮತ್ತು ಅದನ್ನು ಓದುಗರಿಗೆ ಹದವಾಗಿ ಉಣ ಬಡಿಸುವ ತಂತ್ರಗಾರಿಕೆ ಮೆಚ್ಚುಗೆಗಳಿಸುತ್ತವೆ. ನಿಮ್ಮ ಬರಹಗಳನ್ನು ಓದುವುದೇ ಒಂದು ಖುಷಿ.

  - ಪ್ರಸಾದ್.ಡಿ.ವಿ.

  ReplyDelete
 7. ಹ್ಹ ಹ್ಹ... ಕ್ಯಾ ಭಾತ್ ಹೈ ... ಅನಿತಾ .. ನಮ್ಮನೆಯಲ್ಲೂ ಸುಮಾರು ಅಡುಗೆ ಪುಸ್ತಕಗಳು ಎಲ್ಲೆಂದರಲ್ಲಿ ಬಿದ್ದು ಹೊರಳಾಡುತ್ತಿವೆ.. ನೀವು ಎದುರಿಸಿದ ಎಲ್ಲಾ ಸಂಕಷ್ಟಗಳೂ ನನ್ನವೇ ಎಂದು ಭಾಸವಾಗುತ್ತಿದೆ.. ಕ್ಯಾಂಟೀನು ಮಾಮು ಮಾತ್ರಾ ಇನ್ನೂ ನಮ್ಮನೆಗೆ ಬಂದಿಲ್ಲ ಅಷ್ಟೇ ...:)

  ReplyDelete
 8. haha good one Anitha! enjoyed!
  :-)
  malathi S

  ReplyDelete
 9. haha good one Anitha! enjoyed!
  :-)
  malathi S

  ReplyDelete
 10. ನಿಮ್ಮ ಬರಹ ತುಂಬಾ ಚೆನ್ನಾಗಿದೆ, ನಗು ಒಂದು ಕಡೆ ತಡೆಯಲಾರದಷ್ಟು ಬರುತ್ತಿತ್ತು... ನಮ್ಮ ನಡುವೆ ಎಷ್ಟೇಲ್ಲಾ ಹಾಸ್ಯಪ್ರಜ್ಞೆ ಮೂಡಿಸುವಂತಹ ಪ್ರಸಂಗಗಳು ಎಷ್ಟಿವೆ ಅಂದರೆ ಅದನ್ನು ಗಮನಿಸುವುದು ಇಲ್ಲವೇನೋ ನಾವು, ನೀವು ನಿಮ್ಮ ಬರಹದ ಮೂಲಕ ಹೊರತಂದು ನಮ್ಮಲ್ಲಿ ಘಟಿಸಿದ ನೆನಪುಗಳನ್ನು ಮೆಲುಕು ಹಾಕಿ ನಗು ತರುವಂತಿತ್ತು ನಿಮ್ಮ ಬರಹ. ನಿತ್ಯ ಮನೆಯಲ್ಲಿ ಅಡುಗೆ ಮಾಡುವುದಕ್ಕೆ ಪರದಾಡುವುದನ್ನು ನೋಡಿದರೇ ಅವರ ಕಷ್ಟದ ಅರಿವು ಯಾರಿಗೂ ಗೊತ್ತೇ ಆಗುವುದಿಲ್ಲ. ಏನೇ ಆದರೂ ನಿಮ್ಮ ಯಾವುದಾದರೂ ವಿಷಯವನ್ನು ಹೇಳಬೇಕಾದರೇ ಅದರ ಆಳಕ್ಕೆ ಇಳಿದು ಒಂದಿಂಚು ಬಿಡದೇ ಓದುಗನನ್ನು ಹಿಡಿದಿಡುವಲ್ಲಿ ಯಶಸ್ಸು ಗಳಿಸಿದ್ದೀರಾ.

  ReplyDelete
 11. ಓದಿ ನೆಗೆ ಬಂತು !ಆಯಾ ಇದ್ದು

  ReplyDelete