Pages

Total Visitors

Saturday, March 23, 2013

ಭಾನುಮತಿಯ ಸ್ವಗತ






ಸೌಂದರ್ಯ ಎಂದರೆ ಏನು 
ನೀನೇ  ನೀನು .. 
ಎಣೆಯಾರು ನಿನಗೆ ಎಂದಿದ್ದವ
ದ್ರೌಪದಿಗೆ ಸ್ವಯಂವರ 
ಎಂಬ ವಾರ್ತೆಗೆ 
ಬಾಸಿಂಗ ಕಟ್ಟಿದ್ದ ಕೌರವ  

ಭುಜಬಲದ  ಗದೆಯಲ್ಲ 
ಎತ್ತಬೇಕಿದೆ ಬಿಲ್ಲು 
ಹೂಡಬೇಕಿದೆ ಬಾಣ 
ನೀರೊಳಗೆ ನಿಜವಲ್ಲದ 
ಪ್ರತಿಬಿಂಬ ಗುರಿ 
ತಿರುಗುವ ಮೀನ ಕಣ್ಣ 

ಸೋತನಂತೆ ಆವ
ಗೆದ್ದೆ  ಎಂದುಕೊಂಡಿದ್ದೆ ನಾನು 
ಒಳಗೆಲ್ಲ ಅವಮಾನದ ಗಾಳಿ 
ಅವಳಿಗಾದರೋ 
ಹೊರಲಾರದ ಭಾರ 
ಕೊರಳೊಳಗೆ ಐವರ ತಾಳಿ 

ತುಂಬಿದ ಸಭೆಯೊಳಗೆ 
ಸೀರೆಯನೆಳೆವ ಹಠ 
ಕಣ್ಣಿಗೆ ಅಸೂಯೆಯ ಬಟ್ಟೆ 
ಬಿಚ್ಚಿದಂತೆ ಮುಚ್ಚಿತ್ತು 
ಅವಳ ಮೈ ಮನಸ್ಸು 
ನಾ ಬೆತ್ತಲಾಗಿದ್ದೆನಷ್ಟೆ 

ಯುದ್ಧದಲಿ ಸತ್ತವರು 
ಯಾರ ಬಂಧುಗಳು ಅಲ್ಲ 
ಇರಲಿಲ್ಲ ಅವರಿಗೆ ಬಂಧನದ ಚಿಂತೆ 
ನನ್ನದೋ  ಒಳಗೊಳಗೇ 
ಉರಿವ ದೇಹ 
ಹಾರಬೇಕೇಕೆ ಮತ್ತೊಮ್ಮೆ ಚಿತೆ 

ನಾನೇನು ಅವಳೇನು 
ಒಂದೇ ದೋಣಿಯ ಪಯಣಿಗರು 
ಕಣ್ಣೊಳಗೆ ಚಿನ್ನದ ಸೂಜಿ 
ಚಿಗುರಿದಂತೆಲ್ಲ  ಬಾಡಿದ್ದೆ
ಬಿದ್ದಿದ್ದೆ ಬೇಡಿದ್ದೆ  
ಕಟ್ಟಬೇಡಿ ಜೀವನದ ಬಾಜಿ

12 comments:

  1. ಸೋತನಂತೆ ಆವ
    ಗೆದ್ದೆ ಎಂದುಕೊಂಡಿದ್ದೆ ನಾನು
    ಒಳಗೆಲ್ಲ ಅವಮಾನದ ಗಾಳಿ
    ಅವಳಿಗಾದರೋ
    ಹೊರಲಾರದ ಭಾರ
    ಕೊರಳೊಳಗೆ ಐವರ ತಾಳಿ... ತುಂಬಾ ಚೆನ್ನಾಗಿದೆ . ಅಭಿನಂದನೆಗಳು ಅನಿತಾ.

    ReplyDelete
  2. ನಾನೇನು ಅವಳೇನು
    ಒಂದೇ ದೋಣಿಯ ಪಯಣಿಗರು
    ಕಣ್ಣೊಳಗೆ ಚಿನ್ನದ ಸೂಜಿ
    ಚಿಗುರಿದಂತೆಲ್ಲ ಬಾಡಿದ್ದೆ
    ಬಿದ್ದಿದ್ದೆ ಬೇಡಿದ್ದೆ
    ಕಟ್ಟಬೇಡಿ ಜೀವನದ ಬಾಜಿ

    tumbaa arthapoorndinda koodida kavana, olagannu teredu odabekada kavana.... very nice madam

    ReplyDelete
  3. ನಾನೇನು ಅವಳೇನು
    ಒಂದೇ ದೋಣಿಯ ಪಯಣಿಗರು
    ಕಣ್ಣೊಳಗೆ ಚಿನ್ನದ ಸೂಜಿ
    ಚಿಗುರಿದಂತೆಲ್ಲ ಬಾಡಿದ್ದೆ
    ಬಿದ್ದಿದ್ದೆ ಬೇಡಿದ್ದೆ
    ಕಟ್ಟಬೇಡಿ ಜೀವನದ ಬಾಜಿ

    tumbaa arthapoorndinda koodida kavana, olagannu teredu odabekada kavana.... very nice madam

    ReplyDelete
  4. Ondu vibhinna aayaamadalli mahabharatada patragalu nanna kanna munde sulidaadida anubhavavaaytu...uttama kava...tumba kushi aaytu ...

    ReplyDelete
  5. ಇನ್ನೂ ಬೇಕು ಅನಿತಾ, ಭಾನುಮತಿಯ ಸ್ವಗತ...

    ಸಂಧ್ಯಾ ರಾಣಿ

    ReplyDelete
  6. 'ಕಟ್ಟಬೇಡಿ ಜೀವನದ ಬಾಜಿ' ಎಂದು ಅದೆಷ್ಟು ಸಮರ್ಥವಾಗಿ ಇಡೀ ಕವನದಲ್ಲಿ ಅರ್ಥೈಸುತ್ತಾ ಬಂದಿದ್ದೀರಿ ಅನಿತಾ ಅವರೇ. ಪಾತ್ರದ ಸುತ್ತ ಬದುಕನ್ನು ನೋಡುವ ನಿಮ್ಮ ಗ್ರಹಿಕೆಗೆ ನಮ್ಮ ಶರಣು.

    ReplyDelete
  7. sooooooooooooper....

    bahala ishtavaaytu...

    abhinandanegalu sundara kavanakke...

    ReplyDelete
  8. tumba tumba istavaaytu... jeevanada baaji estu artha.. sooper anitha

    ReplyDelete
  9. ಸ್ವಗತವೊಂದು ಅದ್ಭುತವಾಗಿ ಗರಿಬಿಚ್ಚಿದ್ದು ಈ 'ಕಡಲೊಳಗೆ'! ಚಂದದ ಪ್ರಸ್ತುತಿ!

    ReplyDelete
  10. ಚೆನ್ನಾಗಿದೆ :-)

    ReplyDelete
  11. ಕಟ್ಟಬೇಡಿ ಜೀವನದ ಬಾಜಿ........................ ಹೌದಮ್ಮಾ! ಜೀವನದಲ್ಲಿ ಬಾಜಿಕಟ್ಟಲು ನಮ್ಮದೇನಿದೆ? ಎಲ್ಲವೂ ಪೂರ್ವನಿಯಮಿತ. ವಂಶದ ಮರ್ಯಾದಿ ಕಳೆಯುವರ ಕೃತ್ಯಗಳ ಕಂಡು ಸಹಿಸಲಾರದೇ ಭಾನುಮತಿಗೆ " ಸಾವು ಬರುವ ಮೊದಲೇ ಚಿತೆಗೆ ಹಾರಿ ಜೀವಂತ ಬೆಂದ ಅನುಭವ!". ಹೀಗೆಯೇ ಬರೀತಾ ಇರು. ಪ್ರಾಸ ಭಾವಾರ್ಥ ಭಾಷೆ ಇವೆಲ್ಲಾ ಸೇರಿ ನಿನ್ನ ಕವಿತೆ ಮುಖ ಚಿತ್ರದಷ್ಟೇ ಪರಿಣಾಮ ಕಾರಿ ಆಗಿದೆ.
    ಮುಖ ಪುಟದ ಭಾವ ಚಿತ್ರವು ನಮ್ಮ ಮಂಟಪ ಉಪಾಧ್ಯಾಯರದ್ದು ಅಲ್ಲವೇ?
    ಓದಿದವರನ್ನೆಲ್ಲಾ ಭಾನುಮತಿಗೋಸುಗ ಕಣ್ಣೀರು ಸುರಿಸುವಂತೆ ಮಾಡಿದ್ದೀ! All the best! - ಪೆಜತ್ತಾಯ ಮಾಮ

    ReplyDelete
  12. ಮಹತಿಯಲ್ಲಿ ಯಕ್ಷಗಾನ !!
    (Y)

    ReplyDelete