"ಅಮ್ಮಾ.. ಅಮ್ಮಾ.. ಇವತ್ತೇನಾಯ್ತು ಗೊತ್ತಾ..?? ಓಡುತ್ತಾ ಮನೆಯೊಳಗೆ ಬಂದ ಪುಟ್ಟಿ ಏದುಸಿರು ಬಿಡುತ್ತಾ ಹೇಳಿದಳು.
"ಏನಾಯ್ತೇ ಪುಟ್ಟಿ .." ಅಮ್ಮ ಶಬ್ಧ ಮಾಡುತ್ತಾ ತಿರುಗುತ್ತಿದ್ದ ಮಿಕ್ಸಿಯನ್ನು ನಿಲ್ಲಿಸಿದಳು. ಟಿ ವಿ ನೋಡುತ್ತಿದ್ದ ಅಪ್ಪ ವಾಲ್ಯೂಮ್ ಕಡಿಮೆ ಮಾಡಿದ. ಜೋರಾಗಿ ಮಂತ್ರ ಹೇಳುತ್ತಾ ಪೂಜೆ ಮಾಡುತ್ತಿದ್ದ ಅಜ್ಜ ಮನಸ್ಸಿನಲ್ಲೇ ಹೇಳತೊಡಗಿದ. ಅಡಿಕೆ ಹೋಳುಗಳನ್ನು ಗುದ್ದುತ್ತಿದ್ದ ಅಜ್ಜಿ ಕಲ್ಲನ್ನು ಸದ್ದಾಗದಂತೆ ಎತ್ತಿ ಕೈಯಲ್ಲಿ ಹಾಗೇ ಹಿಡಿದುಕೊಂಡಳು.ಪಕ್ಕದ ಮನೆಯ ಹೆಂಗಸಿನ ಕಿವಿಗಳು ಗೋಡೆಗೆ ಅಂಟಿಕೊಂಡವು.
"ಅದೇನು ಗೊತ್ತಾ.. ನಾನು ಬರುವಾಗ.. ನೋಡು .. ಓ ಅಲ್ಲಿ .. ಸರೀ ನೋಡು.. ಕಾಣುತ್ತದಲ್ಲಾ.. ಹುಂ.. ಅಲ್ಲಿ ಒಂದು ಚೆಂದದ ಹಕ್ಕಿ ಕೂತಿತ್ತು. ದೊಡ್ಡ ಕೊಕ್ಕು, ಹೊಳೆಯುವ ಬಣ್ಣ, ಆಹಾ.. ಅದರ ಕಣ್ಣು ಕೂಡಾ ಚಂದ ಇತ್ತು.. ನಾನು ಸದ್ದು ಮಾಡದೇ ಹತ್ತಿರ ಬಂದರೂ ನನ್ನನ್ನು ಅದು ಹೇಗೋ ನೋಡಿ 'ಕಾವ್ ಕಾವ್' ಎಂದು ಹಾರಿಯೇ ಹೋಯಿತು.. ಛೇ.. ಅಲ್ಲೇ ಇದ್ದಿದ್ದರೆ ನಿಮಗೆಲ್ಲಾ ನೋಡಬಹುದಿತ್ತು.." ಅವಳ ಕಣ್ಣುಗಳು ಅದ್ಭುತವೊಂದನ್ನು ತುಂಬಿಕೊಂಡಂತೆ ಮಿಂಚುತ್ತಿತ್ತು. ಪ್ರಕೃತಿಯ ಯಾವೊದೋ ಒಂದು ರಹಸ್ಯ ತನ್ನೆದುರು ಅನಾವರಣಗೊಂಡಂತೆ ಕನವರಿಸುತ್ತಿದ್ದಳು.
ಅಮ್ಮ ಮಿಕ್ಸಿ ಸ್ವಿಚ್ ಆನ್ ಮಾಡಿದಳು. ಟಿ ವಿ ಯ ವಾಲ್ಯೂಮ್ ಮೊದಲಿನಂತೆ ಏರಿತು. ಅಜ್ಜನ ಮಂತ್ರ ಜೋರಾಗಿ ಕೇಳಲಾರಂಭಿಸಿತು. ಅಜ್ಜಿ ಅಡಿಕೆ ಗುದ್ದತೊಡಗಿದಳು.ಪಕ್ಕದ ಮನೆಯ ಹೆಂಗಸು ಮನದೊಳಗೆ 'ತಥ್.. ಕಾಗೆ ಅದು' ಎಂದು ಗೊಣಗಿಕೊಂಡಳು.