Pages

Total Visitors

Wednesday, August 14, 2013

ಕಾಶ್ಯಪಿ ...



ನಾನು ಕಾಶ್ಯಪಿ .. ಹೀಗೆಂದರೆ ಯಾರೆಂದು ನಿಮಗೆ ತಿಳಿದಿಲ್ಲವೇ.. ತಿಳಿಯುವುದಾದರೂ ಹೇಗೆ ಹೇಳಿ. ನನ್ನನ್ನು ನೋಡಿದ ನೆನಪು, ಮಾತನಾಡಿದ ನೆನಪು ನಿಮ್ಮಲ್ಲಿದ್ದರೆ ತಾನೇ..?ಅರಮನೆಯೆಂಬ ಪಂಜರದಲ್ಲಿ ನಾನು ಸದಾ ಬಂಧಿ. ಅಲ್ಲಿ ನನ್ನ ಮಾತುಗಳು ಸ್ವಂತದ್ದಲ್ಲ.ಕಲಿಸಿದ್ದನ್ನು ನುಡಿಯುವ ಗಿಣಿ ನಾನು.. ಆಕಸ್ಮಿಕವಾಗಿ ನನ್ನನ್ನು ನೋಡಿದ್ದರೂ, ಈಗಂತೂ ಹೀಗೆ  ಅರಮನೆಯ ರೀತಿ ರಿವಾಜಿನ ಮುಸುಕನ್ನು ಸರಿಸಿ ಒಬ್ಬಂಟಿಯಾಗಿ ನಡೆಯುತ್ತಿರುವ ನಾನು ಒಂದು ರಾಜ್ಯದ ರಾಣಿಯಾಗಿದ್ದೆ ಎಂದರೆ ನಂಬುವವರಿದ್ದಾರೆಯೇ..!



ಹಾಂ.. ಏನು ಹೇಳಿದೆ ನಾನು.. ರಾಣಿಯೆಂದೆನೇ.. ನನ್ನೊಳಗೂ ಅದೇ ಆಸೆಯಿತ್ತೇನೋ .. ಈಗ ಹೊರ ಬಂದಿದೆ ಅಷ್ಟೇ.. ಅವನಾವ ರಾಜ್ಯಕ್ಕೂ ರಾಜನೇ ಆಗಿರಲಿಲ್ಲ ಎಂದ ಮೇಲೆ ನಾನು ರಾಣಿಯಾಗಿದ್ದಾದರೂ ಯಾವಾಗ..? ಹಾಗಿದ್ದರೆ ಅವನ ಹೃದಯದ ರಾಣಿಯಾಗಿದ್ದೆ ಎನ್ನಲೇ.. ಹೂಂ.. ಎನ್ನಬಹುದಿತ್ತೇನೋ..ನನ್ನ ಪಾಲಿನ ಆ ಸುಳ್ಳನ್ನು  ನೀವು ನಿಜವೆಂದು ಒಪ್ಪಿಕೊಳ್ಳುವಿರಾದರೆ ...
 ಒಂದು ಕಾಲದಲ್ಲಿ ನಾನು ಹೀಗಿರಲಿಲ್ಲ. ಸೌಂದರ್ಯಕ್ಕೆ ಮಾಪಕ ಬೇಕೆಂದಿದ್ದರೆ ನನ್ನನ್ನೇ ಅಳತೆ ಕೋಲಾಗಿಸಬಹುದಿತ್ತು. ನನ್ನ ಕನ್ನಡಿ ನನ್ನನ್ನು ಹಾಗೆ ತೋರಿಸುತ್ತಿತ್ತು. ವಿವಾಹಾಪೇಕ್ಷಿ ರಾಜಕುವರರು ನಮ್ಮ ಅರಮನೆಗೆ ಭ್ರಮರಗಳಂತೆ ಸುತ್ತುತ್ತಿದ್ದರು. ಯಾರನ್ನು ವರಿಸಿದರೂ ರಾಜ್ಯಕ್ಕೆ ಮತ್ತೆಲ್ಲರೂ ಶತ್ರುಗಳಾಗುವ ಭಯ. ಇದಕ್ಕಾಗಿಯೇ ನನ್ನ ಅಪ್ಪ ಬಾನುಮಂತ ನನಗೂ ಸ್ವಯಂವರ ಏರ್ಪಡಿಸಿದ್ದ. ಅಲ್ಲಿಗೆ ರಾಜಕುವವರ ದಂಡೇ ಬಂದಿತ್ತು. ಅವರಲ್ಲಿ ಕೌರವನೂ ಇದ್ದ. ಅವನನ್ನು ನೋಡಿದರೂ ಯಾವ ಮಧುರ ಭಾವನೆಗಳೂ ನನ್ನೊಳಗೆ ಮೊಳೆತಿರಲಿಲ್ಲ. ದಿಕ್ಕರಿಸಿ ಮುಂದೆ ಹೋದವಳು ನಾನು. ಆದರೆ ಕರ್ಣ ತನ್ನ ಗೆಳೆಯನಿಗಾಗಿ ನನ್ನನ್ನು ಗೆದ್ದುಕೊಟ್ಟ. ಗೆಳೆಯನ ಪೌರುಷದ ಮೇಲೆ ವಿವಾಹವಾದ ಅವನ ಬಗ್ಗೆ ಪ್ರೀತಿಯೆಂದೇನೂ ಇರದಿದ್ದರೂ ಬಂದ ಬದುಕನ್ನು ಒಪ್ಪಿ ಅಪ್ಪಿಕೊಂಡವಳಾಗಿದ್ದೆ.  

ಕುರುಕುಲದ ಸೊಸೆಯಾಗಿ ಈ ಮನೆಯ ಹೊಸಿಲು ತುಳಿದ ನಾನು ತವರನ್ನು ತೊರೆದು ಬರುವಾಗ ಕನಸ ಮೂಟೆಯನ್ನೂ ಹೊತ್ತೇ ಬಂದವಳು. ಕ್ಷತ್ರಿಯ ಕುಲದ ಹಿರಿಮೆ ಗರಿಮೆ ಎಲ್ಲಾ ಈ ಕುರುಕುಲದ ಕಾಲಡಿಯಲ್ಲೇ ಬಿದ್ದಿತ್ತು. ಯುವರಾಜ ದುರ್ಯೋದನನ ಅರಸಿಯಾಗಿ ಅಂತಃಪುರ ಸೇರಿದ್ದೆ. ದುರ್ಯೋಧನನ ಅತಿ ಪ್ರೀತಿಯ ರಾಣಿ ನಾನು.. ಹಾಗೆಂದು ಅವನು ಕೇವಲ ನನ್ನ ರಮಣ ಮಾತ್ರ ಆಗಿರಲಿಲ್ಲ. ರಾಜ್ಯದ ಹಿತರಕ್ಷಣೆಗಾಗಿ ಒಬ್ಬಳನ್ನು ಮದುವೆಯಾದರೆ, ಯುದ್ಧದಲ್ಲಿ ಗೆದ್ದ ಕನ್ಯೆಯಾಗಿ ಇನ್ನೊಬ್ಬಳು..ಇದು ನಮಗೆ ಹೊಸ ವಿಷಯವೇನೂ ಆಗಿರಲಿಲ್ಲ.  ನನಗೆ ಯಾರ ಮೇಲೂ ಮುನಿಸಿರಲಿಲ್ಲ. ಹೀಗಿರುವುದೇ ರಾಜ ಕುವರನ  ಜೀವನ ಎಂಬುದನ್ನು ಅರಗಿಸಿಕೊಂಡಿದ್ದೆ. ಜೊತೆಗೆ ಅವರ್ಯಾರೂ ನನ್ನ ಸ್ಥಾನವನ್ನು ಕಿಂಚಿತ್ತೂ ಅಲುಗಾಡಿಸುವ ಸಾಮರ್ಥ್ಯ ಹೊಂದಿದವರಾಗಿರಲಿಲ್ಲ ಎನ್ನುವುದೂ ನನ್ನ ನೆಮ್ಮದಿಯ ಮೂಲ ಕಾರಣವಿತ್ತೇನೋ..!
ಇಲ್ಲಿ ನನಗೆ ಸಿಗುತ್ತಿದ್ದ ಬೆಲೆ, ಪ್ರೀತಿ ಆದರಗಳಿಂದಾಗಿ ಇದರಿಂದ ಹೊರಗಿಣುಕುವ ಕಣ್ಣುಗಳನ್ನು ಮುಚ್ಚಿಕೊಂಡಿದ್ದೆ. ಅಂತಃಪುರದ ಹೊರಗಿನ ಲೋಕ ನನ್ನದಲ್ಲ. ನನ್ನರಿವಿಗೆ ಸಿಗದಿದ್ದ ಲೋಕವದು..  ಆದರೆ ರಾಜಕಾರಣ ಮತ್ತು ಕ್ಷತ್ರಿಯರ ಆಯುಧಗಳು ಇನ್ನೊಬ್ಬನ ರಕ್ತಕ್ಕಾಗೇ ಹಪ ಹಪಿಸುತ್ತಿರುವುದನ್ನು ನಾನು ಬಲ್ಲೆ. 
ಅಂದು ಕಿವಿಗೆ ಬಿದ್ದ ಸುದ್ಧಿಯಾದರೂ ಎಂತಹುದು.. ದ್ರುಪದ ಸುತೆ ದ್ರೌಪದಿಗೆ ಸ್ವಯಂವರವಂತೆ..ಅವಳನ್ನು ವರಿಸಲು ರಾಜಕುವರರೆಲ್ಲ ಸಾಲು ಗಟ್ಟಿ ನಿಲ್ಲುತ್ತಿದ್ದರೇನೋ ನಿಜ. ಆದರೆ ನನಗೆ ಆತಂಕ ತಂದಿದ್ದ ವಿಚಾರ ಎಂದರೆ  ಆರ್ಯಪುತ್ರ ದುರ್ಯೋಧನ ಆ ಸ್ವಯಂವರಕ್ಕೆ ಕನ್ಯಾಕಾಂಕ್ಷಿಯಾಗಿ ಹೋಗಲು ತುದಿಗಾಲಲ್ಲಿ ಹೊರಟು ನಿಂತದ್ದು. ಅಂದೊಂದು ದಿನ ಗುರು ದ್ರೋಣಾಚಾರ್ಯರ ಗುರು ದಕ್ಷಿಣೆಯಾಗಿ  ಇದೇ ಕುರುಕುಲದ ಅರ್ಜುನ, ದ್ರುಪದನ ಹೆಡೆಮುರಿ ಕಟ್ಟಿ ಗುರುವಿನ ಕಾಲುಗಳಡಿಯಲ್ಲಿ ಮಲಗಿಸಿದ್ದ. ದ್ರುಪದನ ಎದೆಯೊಳಗೆ ಈ ಅವಮಾನ ಆರದ ಬೆಂಕಿಯಾಗಿ  ಹೊಗೆಯಾಡುತ್ತಿತ್ತು..  ಈ ಸೇಡಿಗಾಗಿಯೇ ಹುಟ್ಟಿ ಬಂದ ಯಜ್ಞಕನ್ಯೆ ಅವಳು.ನನ್ನ ಹಾಗೆ ಕೇದಿಗೆ ಬಣ್ಣದ ಮೈಯ ಒಡತಿಯೇನಲ್ಲ. ಪ್ರಜ್ವಲಿಸಿ ಉರಿದ ನಂತರ ಜಲ ಸ್ಪರ್ಶದಿಂದ ತಣ್ಣಗಾದ ಕೆಂಡದ ಮೈಯವಳು.. ಅವಳ ಪ್ರಖರತೆಗೆ ಕರಗುವವರೇ ಎಲ್ಲ.. ಆದರೂ ಅವಳನ್ನು ಬಯಸಿ ಅಲ್ಲಿಗೆ ನನ್ನರಸ ಹೋಗುವುದು ನನಗೆ ಹರಿತವಾದ ಚೂರಿಯನ್ನು ಮೈಯಲ್ಲಿ ನೆಟ್ಟಂತ ನೋವು ನೀಡುತ್ತಿತ್ತು. ಆರ್ಯಪುತ್ರನಿಗೆ ಇನ್ನಿಲ್ಲದೆ ತಿಳಿಹೇಳಿದೆ. ಕಾಲಿಗೆ ಬಿದ್ದೆ. 'ಯಾರು ಬಂದರೂ ನನ್ನ ಪಟ್ಟದರಸಿ ನೀನೇ ಪ್ರಿಯೆ' ಎಂದು ಮುದ್ದುಗರೆದ.

 ಕ್ಷಣಕಾಲ ಕರಗಿದ್ದೆನಷ್ಟೇ.. ಎಚ್ಚೆತ್ತಾಗ ಅವನ ರಥದ ದೂಳು ಕೋಟೆಯ ಆಚೆ ರಂಗೇರಿಸಿತ್ತು. 

ನಾನೂ ಹಠಕ್ಕೆ ಬಿದ್ದೆ. ದ್ರೋಣಾಚಾರ್ಯರನ್ನು ಕಂಡೆ. 'ನಿಮ್ಮ ಶಿಷ್ಯನನ್ನು ತಡೆಯಿರಿ, ನಿಮ್ಮ ಶತ್ರುವಿನ ಮಗಳು ಅರಮನೆಯ ರಾಣಿಯಾಗುವುದನ್ನು ನೀವು ಇಷ್ಟ ಪಡುವುದು ಸಾಧ್ಯವೇ' ಎಂದು ಕೇಳಿದೆ.  ಅವರು ನಕ್ಕು ನುಡಿದರು. 'ಅವನ ಹಠವೇ ಅವನನ್ನು ಸೋಲಿಸುತ್ತದೆ ಮಗಳೇ.. ನಿಶ್ಚಿಂತೆಯಿಂದಿರು .' 

ಅವರು ಹೇಳಿದ್ದು ನಿಜವಾಗಿತ್ತು. ಅವನ ಆಸೆ ಇದ್ದದ್ದು ದ್ರೌಪದಿಯನ್ನು ಪಡೆಯುವತ್ತ ಮಾತ್ರ. ಅದಕ್ಕಾಗಿ ಗೆಲ್ಲಲೇಬೇಕಿದ್ದ ಸ್ಪರ್ಧೆಯಲ್ಲಿ ಗೆಲ್ಲುವ ಚಾತುರ್ಯ ಅವನಲ್ಲಿರಲಿಲ್ಲ. ಸೋತು ಬರಿಗೈಯಲ್ಲಿ ಮರಳಿದ್ದ. ಆದರೆ ಮನದೊಳಗೆ ಇನ್ನಷ್ಟು ದ್ವೇಷದ ಉರಿ ಹೆಚ್ಚಿಸಿಕೊಂಡಿದ್ದ. ಅದಕ್ಕೆ ಕಾರಣ, ಅವನು ಸತ್ತಿದ್ದಾರೆ ಎಂದು ನಂಬಿದ್ದ ಪಾಂಡವರು ಬದುಕಿರುವುದೇ ಆಗಿತ್ತು. ಅಷ್ಟಾದರೆ ಸುಮ್ಮನಿರುತ್ತಿದನೋ ಏನೋ.. ಆದರೆ ಅವನಿಗೆ ಸಿಗದ ಪಾಂಚಾಲಿ ಪಾಂಡವರೈವರ ಪತ್ನಿಯಾಗಿದ್ದಳು. ತಮ್ಮ ಹಕ್ಕಿಗಾಗಿ ಮತ್ತೆ ಇಲ್ಲಿಗೇ ಮರಳುತ್ತಿದ್ದರು. 

ಪಾಂಡವರ ಬಗೆಗಿನ ಅವನ ಕೋಪಕ್ಕೆ ಅವನು ಮಾತ್ರ ಹೊಣೆ ಎಂಬುವುದನ್ನು ನಾನು ಒಪ್ಪಲಾರೆ. ಕಣ್ಣು ಕಾಣದೇ ಇದ್ದರೂ ತಮ್ಮಂದಿರ ಮಕ್ಕಳ ಅವನತಿಯನ್ನು ಬಯಸುತ್ತಿದ್ದ ದೃತರಾಷ್ಟ್ರ ಕಾರಣನಾಗಿದ್ದ. ಕುಂತಿಗೆ ಮಕ್ಕಳಾತೆಂದು ತಿಳಿದು ತನ್ನ ಹೊಟ್ಟೆಯನ್ನೇ ಹೊಸಕಿಕೊಂಡ ನನ್ನತ್ತೆ ಗಾಂಧಾರಿ ಇದ್ದಳು. ಎಲ್ಲಕ್ಕಿಂತ ಮುಖ್ಯವಾಗಿ ಮಾವ ಶಕುನಿ ಇದ್ದ. ಇವರೆಲ್ಲರ ನಡೆ ನುಡಿಗಳೇ ಅವನ ಹಠಕ್ಕೆ ನಾಂದಿ ಎಂಬುದನ್ನು ನಾನು ಬಲ್ಲೆ. ಆದರೆ ಹೇಳಲು ಸಾಧ್ಯವೇ.. ಹೇಳಿದರೂ ಕೇಳುವವರಿದ್ದರೇ.. 

ಮೋಸದ ದ್ಯೂತದಲ್ಲಿ ಮತ್ತೆ ಅವರನ್ನು ಸೋಲಿಸಿದ. ಎಲ್ಲವನ್ನೂ ತನ್ನದಾಗಿಸಿ ಅವರನ್ನು ಸುಮ್ಮನೇ ಹೊರಗಟ್ಟಬಹುದಿತ್ತು. ಆದರೆ ತನಗಾದ ಅವಮಾನದ ಮುಳ್ಳಿನ ಮೊನೆಯನ್ನು ಮತ್ತೆ ಚುಚ್ಚಿಸಿಕೊಳ್ಳಲೆಂದೇ ದ್ರೌಪದಿಯನ್ನು ತುಂಬಿದ ಸಭೆಗೆ ಕರೆತಂದ. ಪರದೆಯಿಲ್ಲದೇ ಹೊರಲೋಕಕ್ಕೆ ತೆರೆದುಕೊಳ್ಳದ ಸ್ತ್ರೀ ಜಗತ್ತು ನಮ್ಮದು. ಆದರೆ ಅವನು ಮಾಡಿದ್ದೇನು. ಅವಳ ಮೇಲೆ ಇದ್ದೊಂದು ಬಟ್ಟೆಯನ್ನೂ ಸೆಳೆಯಲು ದುಶ್ಯಾಸನನಿಗೆ ಅಪ್ಪಣೆ ಮಾಡಿದ. 
ಅಬ್ಬಾ ಎಂತಹ ಸ್ಥಿತಿ ಅವಳದ್ದು. ಆದರೆ ಸುಮ್ಮನೆ ತಲೆ ತಗ್ಗಿಸಿ ನಿಲ್ಲಲಿಲ್ಲ ಅವಳು, ಮೊದಲಿಗೆ ಬೇಡಿದಳು, ತನ್ನ ಮೇಲೆ ಕನಿಕರಿಸಿ ಎಂದು ಹಿರಿಯರನ್ನು ಕೂಗಿ ಕೂಗಿ ಕೇಳಿದಳು. ಯಾರೂ ತಲೆ ಎತ್ತಲಿಲ್ಲ. ದುಶ್ಯಾಸನ ಸೀರೆಯನ್ನು ಸೆಳೆಯುತ್ತಿದ್ದಾಗ ನನ್ನನ್ನೂ ಹೆಸರಿಸಿ ಕೂಗಿದಳಂತೆ. ಅಂತಃಪುರದ ಮುಚ್ಚಿದ ಬಾಗಿಲಿನ ಒಳಗೆ ಅವಳ ಧ್ವನಿ ಹರಿದು ಬರಲಿಲ್ಲ. ಮತ್ತೆ ಕೆರಳಿದಳು, ಪ್ರತಿಭಟಿಸಿದಳು, ಶಪಿಸಿದಳು. ಕೊನೆಗೆ ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಕೃಷ್ಣನಿಗೆ ಶರಣಾದಳು. ವಸುದೇವಪುತ್ರ ಅದೇನು ಮೋಡಿ ಮಾಡಿದನೋ.. ಯಾರು ಅವಳ ಬೆತ್ತಲನ್ನು ಕಾಣಲು ಕಣ್ಣು ಬಿಟ್ಟು ಕುಳಿತಿದ್ದರೋ ಅವರ ಒಳಗೆಲ್ಲಾ ಬೆತ್ತಲಾಯಿತು. ಅವಳು ಇದ್ದಂತೇ ಇದ್ದಳು. 

ಅಯ್ಯೋ.. ಇದೇನಾಗಿಹೋಯಿತು..!! ನಿನ್ನ ತೊಡೆಗಳನ್ನು ಮುರಿದು ನಿನ್ನನ್ನು ಕೊಲ್ಲುತ್ತೇನೆ ಎಂದು ಭೀಮ ತುಂಬಿದ ಸಭೆಯಲ್ಲಿ ಮಾಡಿದ ಪ್ರತಿಜ್ಞೆ ನನ್ನ ಕಿವಿಗಳಿಗೂ ಅಪ್ಪಳಿಸಿತು. ದ್ರೌಪದಿಯ ಬಿರಿದ ಕೇಶಕ್ಕೆ ದುಶ್ಯಾಸನನ ರುಧಿರವನ್ನೇ ಎಣ್ಣೆಯಾಗಿಸಿ ಬಾಚಿ ಕಟ್ಟುತ್ತೇನೆ. ಅಲ್ಲಿಯವರೆಗೆ ಈ ಕೇಶ ಹೀಗೇ ಹಾರಾಡುತ್ತಿರಲಿ .. ಸೋಲಿನಲ್ಲೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳದ ಧೀರೋದ್ದಾತ ಸ್ವರವದು. ಈಗ ದ್ಯೂತದಲ್ಲಿ ಸೋತವರು ತಲೆ ಎತ್ತಿ ಕುಳಿತಿದ್ದರು, ಗೆದ್ದೆವೆಂದುಕೊಂಡಿದ್ದವರು ಮತ್ತಷ್ಟು ಕಶ್ಮಲದ ಗುಂಡಿಗೆ ಬಿದ್ದಿದ್ದರು.  

ಎಂತಹ ಷಂಡನನ್ನು ಗಂಡನಾಗಿ ಪಡೆದಿದ್ದೇನೆ ನಾನು ಎಂದು ಆಗ ಅರಿವಾಯಿತು ನನಗೆ. ಅಂತಃಪುರಕ್ಕೆ ಬಂದವನನ್ನು ನೋಟದಿಂದಲೇ ತಿವಿದೆ. ಬುದ್ಧಿ ಮಾತುಗಳನ್ನು ಹೇಳಿದೆ. ಕಾಲಪ್ಪಳಿಸಿ ಹೋದ. ಕೌರವ ಕೆಟ್ಟವನೇ.. ಅಲ್ಲ ಸಹವಾಸ ದೋಷದಿಂದ ಕೆಟ್ಟವನಾದ ಎಂದಿದ್ದರೆ ಆತ ನನ್ನ ಸಹವಾಸಿಯಾಗಿಯೂ ಇದ್ದನಲ್ಲವೇ.. ನಾನೇಕೆ ಅವನನ್ನು ಬದಲಿಸಲು ಆಗಲಿಲ್ಲ..? ಮೊದಲಿನಿಂದಲೂ ಅವನನ್ನು ಅನುಸರಿಸಬೇಕಾದ  ನನಗೆ ಅವನ ಬೆನ್ನು ಮಾತ್ರ ಕಾಣುತಿತ್ತೇನೋ.. ಮೊಗದ ಕಡೆ ನೋಡಿದರೆ ಅದರ ಕ್ರೂರತನ ತಿಳಿಯುತ್ತಿತ್ತು.. ಅವನ ದಾರಿ ಬೇರೆ.. ನನ್ನದೇ ಬೇರೆ ಎಂದು ಅಂದು ಅರಿವಾಯಿತು. 

ಹದಿನೆಂಟು ದಿನಗಳ ಯುದ್ಧ ಮುಗಿದಿತ್ತು.ಗೆದ್ದವರು ಯಾರಿದರಲ್ಲಿ.. ಯಾರ ಮೊಗದಲ್ಲೂ ಗೆಲುವಿನ ನಗೆಯಿರಲಿಲ್ಲ. ಎಲ್ಲರೂ ಕಳೆದುಕೊಂಡವರೇ ಆಗಿದ್ದರು. ಎತ್ತ ನೋಡಿದರೂ ಹೆಣಗಳ ರಾಶಿ. ಗಂಗೆಯ ದಡದಲ್ಲಿ ಚಿತೆಗಳು ಸಾಲಾಗಿ ಉರಿಯುತ್ತಿದ್ದವು. ಗುರುತು ಹಿಡಿದವರೆಷ್ಟೋ, ಅನಾಥ ಹೆಣಗಳೆಷ್ಟೋ.. ಅದರ  ಬೆಂಕಿಯ ದಗೆಗೆ ಗಂಗೆಯ ನೀರೇ ಕುದಿಯುತ್ತಿದೆ.. 

ಹಾಂ.. ಯಾವ ಭೂಮಿಗಾಗಿ ಆಸೆ ಪಟ್ಟಿದ್ದನೋ ಅದೇ  ಭೂಮಿಯಲ್ಲಿ ಮಲಗಿದ್ದ ದುರ್ಯೋಧನ. ಅವನನ್ನು ಏಳಿಸಿ ಪರಾಕು ಹೇಳುವವರಾರೂ ಇರಲಿಲ್ಲ.ಜೀವ ಇರುವಾಗ ಏನನ್ನೆಲ್ಲಾ ಬೇಡಿದ್ದನೋ, ಸಾಯುವಾಗ ಒಂದನ್ನೂ ಒಯ್ಯಲಿಲ್ಲ.ಅಲ್ಲಿಯವರೆಗೆ ದುರ್ಯೋಧನನಾಗಿದ್ದವ ಸತ್ತ ನಂತರ ತನ್ನ ಭೌತಿಕ ಲಾಂಚನಗಳು, ಅಧಿಕಾರ ದರ್ಪ, ಮೋಹ ಮಾತ್ಸರ್ಯ ಎಲ್ಲವನ್ನೂ ಕಳಚಿ ತಣ್ಣಗೆ ಬಿದ್ದ ಹೆಣವಾಗಿದ್ದ. ಏನನ್ನು ಸಾಧಿಸಿದ ಕೌರವ.. ಯಾಕಾಗಿ ಹೋರಾಡಿದ..?  ಸೋಲು ಖಚಿತ ಎಂದು ತಿಳಿದಿದ್ದರೂ ಯುದ್ಧ ಮಾಡಿ ಸೋತ. ಸಾಯುತ್ತೇನೆ ಎಂದು ತಿಳಿದಿದ್ದರೂ ಓಡಿ ಹೋಗದೆ ಸತ್ತ.. ಮಲಗಿರುವ ಅವನು ಉತ್ತರ ಹೇಳದೇ ಮೌನವಾಗಿದ್ದ. ಅವನ ಮೌನ ಇನ್ನೂ ಸಾವಿರ ಸಾವಿರ ಇಂತಹ ಪ್ರಶ್ನೆಗಳಿಗೆ ತಾನಾಗೆ ಉತ್ತರ ಹೇಳುತ್ತಿತ್ತು.
ಕುರುಕ್ಷೇತ್ರದ ಯುದ್ಧಭೂಮಿಯ ಪ್ರತಿಕ್ಷಣವನ್ನೂ ಸಂಜಯ, ಕಣ್ಣು ಕಾಣದ ನನ್ನ ಮಾವ ದೃತರಾಷ್ಟ್ರನಿಗೆ ಹೇಳುತ್ತಿದ್ದನಂತೆ. ಇಡೀ ಯುದ್ಧಭೂಮಿಯ ಯಾವ ಭಾಗವೂ ಅವನ ಕಣ್ಣಿಂದ ಮರೆಯಾಗಿರಲಿಲ್ಲ.ಆದರೆ ಅವನ ಆ ಕಣ್ಣುಗಳಿಗೂ ನಮ್ಮ ಒಳಗಿನ ಯುದ್ಧದ ಅರಿವೇ ಇರಲಿಲ್ಲ. ನಿಟ್ಟುಸಿರಿನಲ್ಲಿ ನಿತ್ಯ ಬೇಯುವ ನಮ್ಮ ನೋವಿನ ಭಾವ ಅವನ ಎದೆಯನ್ನು ತಟ್ಟಿರಲೇ ಇಲ್ಲ. ಒಮ್ಮೆ ಅವನ ಒಳಗಣ್ಣ ನೋಟಕ್ಕೆ ನಮ್ಮ ನೋವು ನಿಲುಕುವಂತಿದ್ದರೆ.. ಬದುಕೇ ಬದಲಾಗುತ್ತಿತ್ತೇನೋ.. ಈಗ ಚಿಂತಿಸಿ ಏನು ಪ್ರಯೋಜನ..!!

 ಅರೇ..! ಯಾರಲ್ಲಿ ಸಾಲಾಗಿ ಹೋಗುತ್ತಿರುವವರು.. ಈ ಹೆಣಗಳ ರಾಶಿಯ ನಡುವೆಯೂ ಸಿಂಗರಿಸಿಕೊಂಡು, ಪರಿಮಳ ದ್ರವ್ಯವನ್ನು ಪೂಸಿಕೊಂಡು ನಡೆಯುತ್ತಿರುವವರು.. ಓಹ್.. ಅಂತಃಪುರದ ರಾಣಿಯರು.. ಗಂಡನೊಡನೆ ಚಿತೆಯೇರಲು ಹೋಗುತ್ತಿದ್ದಾರೆ. ನಾನೂ ಅವರಲ್ಲೊಬ್ಬಳಾಗಲೇ.. ಎಲ್ಲರ ದೃಷ್ಟಿ  ನನ್ನ ಮೇಲಿದೆ. ಅವನು ಸತ್ತ ಮೇಲೆ ನನಗೆ ಬದುಕುವ ಹಕ್ಕಿಲ್ಲ ಎಂದಿರಬಹುದೇ ಆ ನೋಟದ ಭಾವ.. ಇಲ್ಲಿ ಹೀಗೆ ಒಂಟಿಯಾಗಿ ನಿಲ್ಲುವುದು ಅಸಹನೀಯವೆನಿಸಿತು. ಹಿಂತಿರುಗೋಣವೆಂದುಕೊಂಡೆ.

..ಮಂದಮಾರುತವೊಂದು ಸನಿಹದಲ್ಲೇ ಸುಳಿದಂತೆ...!! ಕಣ್ಣೆತ್ತಿ ನೋಡಿದೆ... ಮೊಗದ ಮೇಲೆ ಆರದ ಮಂದಹಾಸ. ಅದೂ ಇಂತಹ ಸಮಯದಲ್ಲೂ.. ಕೃಷ್ಣನಲ್ಲವೇ ಅವನು.. ನನ್ನ ಹತ್ತಿರವೇ ಬರುತ್ತಿದ್ದಾನೆ.. ಮರಳಿ ಹೋಗಲೇ..ಹೆಜ್ಜೆಗಳು ಕದಲಲಿಲ್ಲ..  
"ಭಾನುಮತಿ.. ದುರ್ಯೋಧನನ ಸತಿ.." ಅವನ ಸ್ವರ ಕೋಮಲವಾಗಿತ್ತು. 
ಮಾತಾನಾಡದೇ ವಂದಿಸಿದೆ. " ನೀನು ಸಹಗಮನ ಮಾಡುವುದಿಲ್ಲ ಎಂದು ನಿರ್ಧರಿಸಿದ್ದು ನನಗೆ ಸಂತಸ ತಂದಿತು" ಎಂದ. 

ಬದುಕನ್ನು ಜೂಜಿನಂತೆ ತಿಳಿದ. ಇನ್ನೊಬ್ಬರು ಬಿದ್ದಾಗ , ಸೋತಾಗ, ಸತ್ತಾಗ ಅದು ತನ್ನ ಗೆಲುವು ಎಂದುಕೊಂಡ ಅವನ ಹಿಂದೆ  ಹೋಗುವುದೇ..  ಅವನು ಗೆಲುವೆಂದುಕೊಂಡದ್ದು ಸೋಲಿನ ಪ್ರಪಾತವಾಗಿತ್ತು. ಎದ್ದು ಬರಲು ಸಾಧ್ಯವೇ ಇರಲಿಲ್ಲ. ಕೈ ಹಿಡಿದೆತ್ತಲಾರದಷ್ಟು ಆಳಕ್ಕೆ ಮುಳುಗಿದ್ದ ಕೌರವ. ಬದುಕಿರುವಾಗಲೇ ಅವನ ದಾರಿಯಲ್ಲಿ ಹೆಜ್ಜೆ ಹಾಕದವಳಿಗೆ ಸತ್ತ ನಂತರ ಕಾಣದ ಮಾರ್ಗವನ್ನು ತುಳಿಯಲೇನಿತ್ತು. ಅವನಿಲ್ಲದೇ ಬದುಕಿಲ್ಲ ಎಂಬುದು ಸುಳ್ಳು..  ಬದುಕಿಗೆ ಅನಿವಾರ್ಯ ಯಾರೂ ಇಲ್ಲ ಎಂಬುದರ ಅರಿವು ನನ್ನೊಳಗಿತ್ತು. ಅವನ ಅನೀತಿ, ಅನಾಚಾರ, ಅನ್ಯಾಯಗಳ ಮಾರ್ಗದಲ್ಲಿ ಎಲ್ಲೂ ನನ್ನ ಹೆಜ್ಜೆ ಗುರುತುಗಳಿರಲಿಲ್ಲ. ಹಾಗಾಗಿ ಈಗಲೂ ಅವನು ಹೋದ ದಾರಿ ನನ್ನದಾಗಿರಲಿಲ್ಲ.
ಅವನ ಮೊಗವನ್ನು ಮತ್ತೊಮ್ಮೆ ನೋಡಿದೆ. ಕೊಂಕಿತ್ತೇ ಅವನ ನುಡಿಗಳಲ್ಲಿ.. ಇಲ್ಲ.. ಉತ್ತರದ ನಿರೀಕ್ಷೆಯೂ ಅವನಿಗಿರಲಿಲ್ಲ. ಆದರೆ ನನ್ನೊಳಗು ತಿಳಿದವನಂತೆ ಕಣ್ಣಲ್ಲೇ ಸಾಂತ್ವನ ಹೇಳಿ ನಿರ್ಗಮಿಸಿದ.

ಓಹ್.. ಎಷ್ಟೆಲ್ಲಾ ಕೆಲಸಗಳಿವೆ ನನಗೆ.. ನಾನಿನ್ನೂ ಇಲ್ಲಿಯೇ ಯಾಕೆ ನಿಂತಿದ್ದೇನೆ..?
ಈಗ ಬದುಕುಳಿದವರಲ್ಲಿ ಸ್ತ್ರೀಯರೇ ಹೆಚ್ಚು. ಅವರ ಕಣ್ಣೀರಿಗೆ ಸಾಂತ್ವನ ಹೇಳಬೇಕು.ದುರ್ಯೋಧನನ ಹಠದಿಂದಾಗಿ ತಮ್ಮವರೆಲ್ಲರನ್ನೂ ಕಳೆದುಕೊಂಡವರಿಗೆ ಆಸರೆಯಾಗಬೇಕು. ಹೆಚ್ಚೇಕೆ ಐವರು ಗಂಡಂದಿರನ್ನು ಪಡೆದ ದ್ರೌಪದಿಯೂ ನನ್ನಂತೆಯೇ ಹತಭಾಗ್ಯಳಾಗಿದ್ದಳು. ನಾಳಿನ ಬೆಳಕಾಗಿದ್ದ ತನ್ನ ಮಕ್ಕಳನ್ನು ಕಳೆದುಕೊಂಡು ದುಃಖಿತೆಯಾಗಿದ್ದಳು. ಈ ಘೋರಪಾತಕ ನಡೆದದ್ದು ಕೌರವನ ಕೊನೆಯ ಕುತ್ಸಿತ ಕುಮ್ಮಕ್ಕಿನಿಂದಾಗಿಯೇ..ಅದಕ್ಕಾಗಿ ಅವಳ ಕ್ಷಮೆ ಕೇಳಬೇಕು. 

ಇದ್ದಷ್ಟು ದಿನ ಅನ್ಯಾಯವೆಂದು ಗೊತ್ತಿದ್ದೂ ಪ್ರತಿಭಟಿಸದ ನನ್ನ ಪಾಪವನ್ನು ಈಗ ಬೇರೆಯವರ ನೋವಿಗೆ ಔಷಧವಾಗುವ ಮೂಲಕವಾದರೂ ತೊಡೆದುಕೊಳ್ಳಬೇಕು. ಇನ್ನು ಕೂಡುವುದಾಗಲೀ ಕಳೆಯುವುದಾಗಲೀ ಇರದ ನನ್ನ ಬದುಕನ್ನು ನನ್ನ ಆತ್ಮತೃಪ್ತಿಗಾಗಿಯೇ ಬದುಕಬೇಕು..  ಸಾವಿಗೇನು..? ಯಾವತ್ತಿದ್ದರೂ ಅದಾಗಿಯೇ ಆಲಂಗಿಸುತ್ತದೆ.. 

ಹೆಜ್ಜೆಗಳು ದೃಢವಾಗಿ ಮತ್ತೆ ಅರಮನೆಯ ಕಡೆಗೆ ಮರಳತೊಡಗಿದವು. 

13 comments:


  1. ಅಬ್ಬಾ...
    ಒಂದೇ ಉಸಿರಲ್ಲಿ ಓದಿ ಮುಗಿಸಿದೆ... ಅಷ್ಟು ದೊಡ್ಡದ ಕಥೆಯನ್ನು ಇಷ್ಟೇ ಆಗಿ ಹೇಳಿದರೂ ಮನಮುಟ್ಟುವಂತೆ ಹೇಳಿದ್ದಿರಲ್ಲಾ.. ವಾವ್ಹ್.. ಪ್ರತಿಕ್ರಿಯಿಸಲೂ ತೋಚುತ್ತಿಲ್ಲ... ಸೂಪರ್ ಸೂಪರ್ ಸೂಪರ್..

    ಇದೆ ಮೊದಲ ಬಾರಿಗೆ ಬಾನುಮತಿ ಇಷ್ಟೊಂದು ಕಾಡಿದ್ದು , ಇಷ್ಟವಾಗಿದ್ದು....

    ReplyDelete
  2. ಹೆಣ್ಣೊಬ್ಬಳ ಮನದಲ್ಲಿ ಅದೆಷ್ಟೊಂದು ಕಥೆಗಳಿರುತ್ತವೆ...
    ಭಾನುಮತಿಯ ಸ್ವಾಗತ ಚೆನ್ನಾಗಿದೆ ಎಂದರೆ ಕ್ಲೀಷೆಯಾದಿತು

    ReplyDelete
  3. Replies
    1. ತುಂಬಾ ಚೆನ್ನಾಗಿದೆ... ಭಾನುಮತಿ ಪಾತ್ರವನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡು ಹೋಗಿದ್ದೀರಾ,,, ಅವಳ ಮನಸ್ಸಿನಲ್ಲಿ ಆಗುತ್ತಿದ್ದ ತಳಮಳಗಳ ಭಾವವನ್ನು ಅಚ್ಚುಕಟ್ಟಾಗಿ ಹೊರತಂದಿದ್ದೀರಾ. ಅವಳಲ್ಲಿ ಮೂಡುತ್ತಿದ್ದ ಅದೆಷ್ಟೋ ಜಿಜ್ಞಾಸೆಗಳನ್ನು ಅರ್ಥಪೂರ್ಣವಾಗಿ ಎಲ್ಲಿಯೂ ಕೊರತೆಯಾಗದಂತೆ ಚಿತ್ರಿಸಿದ್ದೀರಾ. ಆ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಕಾಣಸಿಗದ ಇರುವಾಗ, ನೀವು ಮಾತ್ರ ಆ ಪಾತ್ರಕ್ಕೆ ಎಷ್ಟೆಲ್ಲ ಜೀವ ತುಂಬಬೇಕಿತ್ತೋ ಅಷ್ಟನ್ನೂ ತುಂಬುತ್ತಾ, ಅವಳ ತುಡಿತಗಳನ್ನೆಲ್ಲವನ್ನು ಅಚ್ಚುಕಟ್ಟಾಗಿ ಹೇಳಿದ್ದೀರಾ. ಅಚ್ಚುಕಟ್ಟಾಗಿದೆ.

      Delete
  4. Adbutha.... Adbhuthavaagidhe

    ReplyDelete
  5. sundaravaagi Bhanumatiya olagannu teredittiddeeri.. excellent..!

    ReplyDelete
  6. ಪಾತ್ರದ ಔಚಿತ್ಯ ಮತ್ತು ಅದರ ಭಾವಾಭಿನಯ ಎರಡನ್ನೂ ಸಚಿತ್ರವಾಗಿ ಕಟ್ಟಿಕೊಟ್ಟ ನಿಮಗೆ ಶರಣು.

    ಇಲ್ಲಿ ಹಾಕಿರುವ ಯಕ್ಷಗಾನ ಎಲ್ಲಿ ನಡೆಯಿತು ಮತ್ತು ಪಾತ್ರಧಾರಿಯಾರು?

    ReplyDelete
  7. ಅನೀತಕ್ಕ ನೀವು ಮಾಧವಿಯನ್ನು ಚಿತ್ರಿಸಿದ್ದಾಗಲೇ ಹೇಳಿದ್ದೆ. ಪುರಾಣದಲ್ಲಿ ಸ್ತ್ರೀಸಹಜ ಮನೋಭಾವದ ಒಳಗನ್ನು ನೋಡುವ ನಿಮ್ಮ ಸೂಕ್ಷ್ಮಸಂವೇದನೆಗೆ ನನ್ನದೊಂದು ಸಲಾಂ. ನಿಮ್ಮ ಹಾಸ್ಯಬರಹವನ್ನು ಓದಿ ನಕ್ಕು ಹಗುರಾಗುವಂತೆ, ಇಂತಹ ಘನೀಕರಿಸಿದ ಭಾವಾಭಿವ್ಯಕ್ತಿಯನ್ನು ನೋಡುವಾಗ ಹೃದಯ ಹೆಪ್ಪುಗಟ್ಟುವುದು ಸುಳ್ಳಲ್ಲ. ನನ್ನ ಆಶ್ಚರ್ಯಕ್ಕೆ ಮತ್ತೊಂದು ಕಾರಣ, ನಿಮ್ಮ ಬರಹಗಳಿಗನುಗುಣವಾಗಿ ಬದಲುಗೊಳ್ಳುವ ನಿರೂಪಣಾ ಶೈಲಿ ಮತ್ತು ಭಾಷೆ. ಅಪ್ಪಟ ಬರಹಗಾರ್ತಿ ನೀವು :)

    - ಪ್ರಸಾದ್.ಡಿ.ವಿ.

    ReplyDelete
  8. ಭಾನುಮತಿಯನ್ನು ನಮಗೆಲ್ಲ ಇಷ್ಟು ಚೆನ್ನಾಗಿ ಪರಿಚಯಿಸಿ, ಇಡಿ ಮಹಾಭಾರತವನ್ನು ಕೇವಲ ನೂರಾರು ಶಬ್ದಗಳಲ್ಲಿ ವಿವರಿಸಿ ಹೇಳಿದ ನಿಮ್ಮ ಬರಹದ ವೈಖರಿಗೆ ನನ್ನ ಶರಣು.
    ಪ್ರತಿಯೊಂದು ಸಾಲುಗಳಲ್ಲಿ ನಾವು ಇಡಿ ಸನ್ನಿವೇಶವನ್ನು ಕಣ್ಣ ಮುಂದೆ ಕಾಣಬಹುದು

    ಯಾರು ಅವಳ ಬೆತ್ತಲನ್ನು ಕಾಣಲು ಕಣ್ಣು ಬಿಟ್ಟು ಕುಳಿತಿದ್ದರೋ ಅವರ ಒಳಗೆಲ್ಲಾ ಬೆತ್ತಲಾತು. ಅವಳು ಇದ್ದಂತೇ ಇದ್ದಳು.
    ಅಲ್ಲ ಸಹವಾಸ ದೋಷದಿಂದ ಕೆಟ್ಟವನಾದ ಎಂದಿದ್ದರೆ ಆತ ನನ್ನ ಸಹವಾಸಿಯಾಗಿಯೂ ಇದ್ದನಲ್ಲವೇ.. ನಾನೇಕೆ ಅವನನ್ನು ಬದಲಿಸಲು ಆಗಲಿಲ್ಲ..?
    ಅವನನ್ನು ಏಳಿಸಿ ಪರಾಕು ಹೇಳುವವರಾರೂ ಇರಲಿಲ್ಲ.ಜೀವ ಇರುವಾಗ ಏನನ್ನೆಲ್ಲಾ ಬೇಡಿದ್ದನೋ, ಸಾಯುವಾಗ ಒಂದನ್ನೂ ಒಯ್ಯಲಿಲ್ಲ.
    ಆದರೆ ಅವನ ಆ ಕಣ್ಣುಗಳಿಗೂ ನಮ್ಮ ಒಳಗಿನ ಯುದ್ಧದ ಅರಿವೇ ಇರಲಿಲ್ಲ. ನಿಟ್ಟುಸಿರಿನಲ್ಲಿ ನಿತ್ಯ ಬೇಯುವ ನಮ್ಮ ನೋವಿನ ಭಾವ ಅವನ ಎದೆಯನ್ನು ತಟ್ಟಿರಲೇ ಇಲ್ಲ. ಒಮ್ಮೆ ಅವನ ಒಳಗಣ್ಣ ನೋಟಕ್ಕೆ ನಮ್ಮ ನೋವು ನಿಲುಕುವಂತಿದ್ದರೆ.. ಬದುಕೇ ಬದಲಾಗುತ್ತಿತ್ತೇನೋ.. ಈಗ ಚಿಂತಿಸಿ ಏನು ಪ್ರಯೋಜನ..!!
    ಇನ್ನು ಕೂಡುವುದಾಗಲೀ ಕಳೆಯುವುದಾಗಲೀ ಇರದ ನನ್ನ ಬದುಕನ್ನು ನನ್ನ ಆತ್ಮತೃಪ್ತಿಗಾಗಿಯೇ ಬದುಕಬೇಕು.. ಸಾವಿಗೇನು..? ಯಾವತ್ತಿದ್ದರೂ ಅದಾಗಿಯೇ ಆಲಂಗಿಸುತ್ತದೆ..

    ಹೆಜ್ಜೆಗಳು ದೃಢವಾಗಿ ಮತ್ತೆ ಅರಮನೆಯ ಕಡೆಗೆ ಮರಳತೊಡಗಿದವು.

    ReplyDelete
  9. ಭಾನುಮತಿಯ ಚಿತ್ರಣ ಸೊಗಸಾಗಿ ಮನ ಪಟಲದಲ್ಲಿ ನಿಲ್ಲುವಂತೆ ವರ್ಣಿಸಿದ್ದೀರಿ.ತುಂಬ ಇಷ್ಟವಾಯಿತು.

    ReplyDelete