ಭಿಕ್ಷುಕರಿಬ್ಬರು ನಡೆಯುತ್ತಿದ್ದರು. ಸಾಗುತ್ತಿದ್ದ ದಾರಿ ಕೊಂಚ ದೂರದಲ್ಲಿ ಕವಲೊಡೆಯುವಂತೆ ಕಂಡಿತು. ಅಲ್ಲಿಯವರೆಗೆ ಜೊತೆಯಾಗಿದ್ದ ಅವರು ಆ ಕವಲಿನಲ್ಲಿ ಬೇರಾಗುವುದನ್ನು ಬಯಸಿದರು. ಅವರು ಸಾಗಬೇಕಿದ್ದ ಪ್ರತ್ಯೇಕವಾದ ಹಾದಿಗಳು ಒಂದೊಂದು ಊರನ್ನು ನಿರ್ದೇಶಿಸುತ್ತಿದ್ದವು. ಒಂದು ಊರಿನ ಹೆಸರು ಸಿರಿನಗರ ಎಂದಿದ್ದರೆ ಮತ್ತೊಂದು ಸಾಮಾನ್ಯಪುರ ಎಂದಿತ್ತು.
ಭಿಕ್ಷುಕರಿಬ್ಬರಲ್ಲೂ ಸಿರಿನಗರಕ್ಕೆ ಹೋಗುವವನು ತಾನು ತಾನು ಎಂಬ ಸ್ಪರ್ಧೆ ಏರ್ಪಟ್ಟಿತು. ಕೊನೆಗೆ ಅವರಿಬ್ಬರೂ ಈಗ ಯಾರು ಹೋಗಬೇಕೆಂಬುದನ್ನು ನಾಣ್ಯ ಚಿಮ್ಮಿ ನಿರ್ಧರಿಸೋಣ. ಆದರೆ ಯಾರೇ ಹೋಗಲಿ ಸರಿಯಾಗಿ ಒಂದು ತಿಂಗಳ ನಂತರ ಇಲ್ಲೇ ಮತ್ತೆ ಭೇಟಿಯಾಗಿ ತಮ್ಮ ತಮ್ಮ ಊರನ್ನು ಬದಲಾಯಿಸಿಕೊಳ್ಳಬೇಕೆಂಬ ಒಪ್ಪಂದಕ್ಕೆ ಬಂದರು.
ಸಿರಿನಗರವನ್ನು ಮೊದಲು ಪ್ರವೇಶಿಸುವ ಭಾಗ್ಯ ಸಿಕ್ಕಿದ ಭಿಕ್ಷುಕ ಹೆಮ್ಮೆಯಿಂದ ಅಲ್ಲಿಗೆ ಕಾಲು ಹಾಕಿದ. ಅಬ್ಬಾ ಆ ನಗರವಾದರೂ ಹೇಗಿತ್ತು.. ನೋಡಲೆರಡು ಕಣ್ಣು ಸಾಲದು.. ಆಳೆತ್ತರದ ಗೋಡೆಯಾಚೆ ದೂರದಲ್ಲಿ ಕಾಣುವ ಅರಮನೆಯಂತಹ ಮನೆಗಳು, ಒಂದಿಷ್ಟು ಕಸ ಕಡ್ಡಿ ಕೊಳಕುಗಳಿರದ ರಾಜಮಾರ್ಗಗಳು, ರಸ್ತೆ ಬದಿಯಲ್ಲಿ ದೊಡ್ಡ ದೊಡ್ಡ ಗೇಟುಗಳಿರುವ ಕಪ್ಪು ಗಾಜಿನ ಆವರಣದ ಒಳಗೇನಿದೆ ಎಂದು ಕಾಣದಂತಿರುವ ಅಂಗಡಿಗಳು, ಹೋಟೇಲುಗಳು, ರಸ್ತೆಗಳಿರುವುದು ಕೇವಲ ವಾಹನ ಸಂಚಾರಕ್ಕೇನೋ ಅಂಬಂತೆ ಅತ್ತಿತ್ತ ಹರಿದಾಡುವ ವಾಹನಗಳು, ವಾಹನಗಳ ಸದ್ದು ಬಿಟ್ಟರೆ ಬೇರೇನೂ ಕೇಳದಂತಿರುವ ಮೌನ.. ಎಲ್ಲಿಯೂ ನಡೆದಾಡುವ ಜನರ ಸುಳಿವಿಲ್ಲ.. ಬೇಡುವುದಾದರೂ ಯಾರಲ್ಲಿ.. ? ನಡೆದ ನಡೆದ ... ಮುಗಿಯದ ಹಾದಿ.. ಇವನು ಹೋದಲ್ಲೆಲ್ಲಾ ಮತ್ತೊಂದು ಇಂತಹದೇ ದೃಶ್ಯ ತೆರೆದುಕೊಳ್ಳುತ್ತಿತ್ತು.. ಇನ್ನೂ ಮುಂದೆ ಯಾರಾದರು ಸಿಗಬಹುದು ಎಂದು ಮತ್ತೂ ನಡೆಯುತ್ತಲೇ ಹೋದ.. ಇದ್ದಕ್ಕಿದ್ದಂತೆ ನಾಲ್ಕಾರು ಕಡೆಯಿಂದ ವಾಹನಗಳು ಬಂದು ಇವನನ್ನು ಸುತ್ತುವರಿದು ಪಂಜರದಂತಾ ಗೂಡಿನೊಳಗೆ ತಳ್ಳಿತು..
ಸಾಮಾನ್ಯಪುರವನ್ನು ಹೊಕ್ಕ ಭಿಕ್ಷುಕ ಕೊಂಚ ನಿರಾಸಕ್ತಿಂದಲೇ ಪ್ರವೇಶಿಸಿದ. ಗೆಳೆಯನಿಗೆ ಸಿಕ್ಕ ಅದೃಷ್ಟದ ಬಗ್ಗೆ ಕರುಬುತ್ತಾ ತನ್ನ ಭಾಗ್ಯವನ್ನು ಹಳಿಯುತ್ತಾ ನಡೆಯುತ್ತಿದ್ದವನಿಗೆ ಎದುರಾದದ್ದು ಪುಟ್ಟ ಪುಟ್ಟ ಮನೆಗಳು.. ಜೋಪಡಿಗಳು.. ರಸ್ತೆಯಲ್ಲಿ ಕುಣಿಯುತ್ತಾ ಸಾಗುತ್ತಿರುವ ಮಕ್ಕಳು. ಬೆವರಿನಿಂದ ತೋಯ್ದು ಹೊಲದಲ್ಲಿ ದುಡಿಯುತ್ತಿರುವ ಹೆಣ್ಣು ಗಂಡುಗಳು.. ಹಕ್ಕಿಗಳ ಇಂಚರ ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರು ಮರ ಗಿಡ.. ಜುಳಜುಳನೆ ಹರಿಯುತ್ತಿರುವ ನದಿ.. ಸುಮ್ಮನೆ ನಡೆಯುತ್ತಿದ್ದವನಲ್ಲಿ ಉತ್ಸಾಹ ಮೂಡಿತು.ತನ್ನ ಕಡೆಗೆ ನೋಡಿಕೊಂಡ.. ತಾನು ಹಾಕಿದ ಮಾಸಲು ಬಟ್ಟೆಯೇ ಅವರ ಬಟ್ಟೆಗಿಂತ ಎಷ್ಟೋ ಚೆನ್ನಾಗಿತ್ತು..ಹೀಗಿದ್ದು ಅವರೊಡನೆ ಬೇಡುವುದೇ.. ವಿಶಾಲ ವೃಕ್ಷದಡಿಯಲ್ಲಿ ಕುಳಿತು ಯೋಚಿಸಿದ. ಅಲ್ಲೇ ಬುತ್ತಿ ಉಣ್ಣಲು ಕುಳಿತವನೊಬ್ಬ ಇವನೊಡನೆ ತನ್ನ ಊಟವನ್ನು ಹಂಚಿಕೊಂಡ.. ಅವನ ಜೊತೆಗೆ ಕರೆದೊಯ್ದ.
ಒಂದು ತಿಂಗಳು ಕಳೆಯಿತು..
ಸಿರಿನಗರದ ಭಿಕ್ಷುಕ ಏನಾದ ಎಂದು ಯಾರಿಗೂ ಗೊತ್ತಾಗಲಿಲ್ಲ. ಸಾಮಾನ್ಯಪುರದಲ್ಲಿ ಭಿಕ್ಷುಕರೇ ಇಲ್ಲ..