Pages

Total Visitors

Thursday, December 5, 2013

ಶಿವು


ಅದೊಂದು ಸುಂದರ ಕಡಲ ತೀರ. ಸಂಜೆಯ ಹೊತ್ತು. ಮುಳುಗುವ ಸೂರ್ಯನ ಕೆಂಬಣ್ಣ ಮರಳ ಮೇಲೂ ರಾಚಿ ಇಡೀ ತೀರ ಬಂಗಾರದಲ್ಲಿ ಅದ್ದಿ ತೆಗೆದಂತೆ ಕಾಣಿಸುತ್ತಿತ್ತು. ಪುಟ್ಟ ಬಂಡೆಯ ಮೇಲೆ ಕಾಲು ಚಾಚಿ ಕುಳಿತಿದ್ದ ಅವನು ಪ್ಯಾಂಟಿಗೆ ಅಂಟಿದ ಮರಳನ್ನು ಕೊಡವುತ್ತಾ ಏಳಲು ಹೊರಟ. ಆಗಲೇ ಅವನ ಕಣ್ಣಿಗೆ ತನ್ನಿಂದ ಸ್ವಲ್ಪ ದೂರದಲ್ಲಿ ತನ್ನಂತೆ ಎದ್ದು ನಿಂತು ಸೀರೆ ಕೊಡವುತ್ತಿದ್ದ ಅವಳು ಕಣ್ಣಿಗೆ ಬಿದ್ದಿದ್ದು.  ಇಷ್ಟು ಹೊತ್ತಿನಿಂದ ಇಲ್ಲಿಯೇ ಕುಳಿತಿದ್ದರೂ ಕಾಣದ ಈಕೆ ಯಾವ ಮಾಯಕದಲ್ಲಿ ಈಗೆದ್ದು ನಿಂತಿದ್ದಾಳೆ ಎನ್ನಿಸಿ ಅಚ್ಚರಿಯಾಯಿತವನಿಗೆ. ಆದೇ ಕುತೂಹಲದಲ್ಲಿ ಮತ್ತೊಮ್ಮೆ ಅವಳತ್ತಲೇ ಕಣ್ಣು ಹಾಯಿಸಿದ. ಅವಳೂ ಇವನನ್ನೇ ನೋಡುತ್ತಿದ್ದಳು. ಅವಳ ಮೊಗದಲ್ಲಿ ಪರಿಚಿತ ಭಾವ. ಇವನ ಹತ್ತಿರಕ್ಕೆ ಹೆಜ್ಜೆ ಇಡುತ್ತಾ ಬಂದಳು. ' ಬನ್ನಿ ಶಿವು ಮನೆಗೆ ಹೋಗೋಣ..' ಎಂದಳು. 

'ಕ್ಷಮಿಸಿ.. ನನ್ನ ಹೆಸರು ಹರಿ ಕುಮಾರ್' ಎಂದ.

ಅವಳು   'ಸರಿ ಹಾಗಿದ್ರೆ ನಾನು ಹೋಗ್ತೀನಿ' ಎಂದಳು. ಅವಳ ಮೊಗದಲ್ಲಿ ಬೇಸರವೂ, ಕಣ್ಣಂಚಿನಲ್ಲಿ ನೀರು ಕಾಣಿಸಿದಂತೆನಿಸಿ ಅವನಿಗೂ ಬೇಸರವೆನಿಸಿತು. 'ಪಾಪ ಅವಳ ಶಿವು ಕೂಡಾ ನನ್ನಂತೆ ಇದ್ದನೇನೋ.. ಒಂದು ಕ್ಷಣ ನಾನು ಶಿವು ಅಂತ ಒಪ್ಪಿಕೊಂಡರೆ ಅವಳ ಮೊಗದಲ್ಲಿ ನಗು ಕಂಡೀತೇನೋ'.. ಎಂದುಕೊಂಡ. 

ತನ್ನಿಂದ ಮುಂದೆ ಹೆಜ್ಜೆ ಹಾಕುತ್ತಿದ್ದ ಅವಳನ್ನುದ್ದೇಶಿಸಿ.. ' ನೋಡಿ ನಾನೇ ಶಿವು .. ಆಗ ಸುಮ್ಮನೆ ಸುಳ್ಳು ಹೇಳಿದೆ .. ನೀವು ಬೇಸರ ಮಾಡ್ಕೋಬೇಡಿ' ಎಂದ. 

ಅವಳ ಮೊಗದಲ್ಲಿ ಅಪನಂಬಿಕೆಯ ನೆರಳು..'ಇನ್ನೊಮ್ಮೆ ಹೇಳಿ.. ನಿಜವಾಗಿಯೂ ನೀವು ಈ ಮಾತನ್ನು ಹೇಳ್ತಾ ಇದ್ದೀರಾ' ಎಂದಳು. 

ಅವನಿಗೀಗ ಇಬ್ಬಂದಿತನ ಕಾಡಿತು.  ಶಿವು ಎಂದು ಒಪ್ಪಿಕೊಂಡರೆ ಅವಳಿಗೆ ಸಂತಸವೆನಿಸುತ್ತದೆ.. ಅಲ್ಲ ಎಂದರೆ ಅವಳ ಮ್ಲಾನ ಮುಖ ನೋಡಬೇಕು.. ಎರಡರಿಂದಲೂ ಅವನಿಗೆ  ಏನೂ ತೊಂದರೆ ಇರಲಿಲ್ಲ..ಆದರೂ ಯಾಕೋ ಆ ಮುಖವನ್ನು ಅಳಿಸುವುದಕ್ಕವನಿಗೆ ಮನಸ್ಸು ಬರಲಿಲ್ಲ. 'ಹೌದು ನಾನೇ ಶಿವು' ಎಂದ ನಿರ್ಧಾರದ ಧ್ವನಿಯಲ್ಲಿ.. 

ಅವಳು ಅವನ ಕೈ ಹಿಡಿದಳು.. ಅವನ ಕೈಯೂ ಅವಳ ಕೈಯೊಳಗೆ ಸೇರಿತು.ಅವಳು ನಗುತ್ತಾ ಅವನೊಡನೆ ಹೆಜ್ಜೆ ಹಾಕಿದಳು.

ರೂಮಿನ ಒಳಗೆ ಬರುತ್ತಿದ್ದಂತೆ ತನ್ನ ಕೈಯನ್ನು ಬಿಗಿಯಾಗಿ ಹಿಡಿದಿದ್ದ ಅವನ ಕೈಯನ್ನು ಸಡಿಲಿಸಿ ಅವನನ್ನು ಮಂಚದ ಮೇಲೆ ಕೂರಿಸಿ 'ಈಗ ಬಂದೆ' ಎಂದು ಹೊರ ಹೋದಳು. ಅವನು ಕುತೂಹಲದಿಂದ ಮುಂದಾಗುವುದನ್ನು ಕಾಯುತ್ತಿದ್ದ. 

ಒಂದು ಕೈಯಲ್ಲಿ ತುಂಬಿದ ಹಾಲಿನ ಲೋಟ  ಹಿಡಿದು  ಬಂದು  ಅವನನ್ನೆಬ್ಬಿಸಿದಳು. 'ನೋಡಿ ಶಿವು..ನೀವು ತುಂಬಾ ಒಳ್ಳೆಯವರು.. ನನ್ನ ಮಾತು ಕೇಳ್ತೀರಲ್ವಾ.. ಈಗ ಈ ಹಾಲು ಕುಡಿಯಿರಿ ಎಂದಳು. ಅವನು ಕುಡಿದು ಕೊಟ್ಟ ಖಾಲಿ ಲೋಟವನ್ನು ಪಕ್ಕಕ್ಕಿಟ್ಟು ಅವನನ್ನು ಮಂಚದ ಮೇಲೆ ಮಲಗುವಂತೆ ಹೇಳಿ ಕುತ್ತಿಗೆಯವರೆಗೆ ಹೊದಿಕೆ ಹಾಕಿ ಕೆನ್ನೆ ತಟ್ಟಿ 'ಗುಡ್ ಬಾಯ್ ಶಿವು' ಎಂದು ತುಂಟ ನಗೆ ನಕ್ಕು ಹೊರ ಹೋದಳು. 

ಸ್ವಲ್ಪ ಹೊತ್ತಿನ ನಂತರ ಅವಳು ತನ್ನ ಪಕ್ಕ ಕುಳಿತ ಇನ್ನೊಬ್ಬ ನರ್ಸ್ ಹತ್ತಿರ ಹೇಳುತ್ತಿದ್ದಳು. 'ಆ ರೂಮಿನ ಪೇಷಂಟಿಗೆ ಈಗ ನಿಧಾನಕ್ಕೆ ಜ್ಞಾಪಕ  ಶಕ್ತಿ ಮರಳುತ್ತಿದೆ ಅನ್ನಿಸುತ್ತೆ. ಇವತ್ತು ವಾಕಿಂಗ್ ಮಾಡಿಸಿ ಬರುವಾಗ  ಅವನು  'ನಾನೇ  ಶಿವು'ಅಂತ ಒಪ್ಪಿಕೊಂಡ..'

9 comments:

 1. ಚಿಕಿತ್ಸಕ ವಿಧಾನದ ನಿರೂಪಣೆ ಮನಮುಟ್ಟುವಂತಿದೆ.

  ನಿಮ್ಮ ಛಾಯಾಗ್ರಹಣ ಪ್ರತಿಭೆಗೂ ಸಲಾಮ್.

  ReplyDelete
 2. ಅಹ್..

  ಅವಳಿಗಾಗಿ ಶಿವೂ ಅನ್ಕೊಂಡಿದ್ದು ಇವನಿಗೂ ಸಮಾಧಾನ. ಶಿವೂ ಆಗ್ತಾ ಇರೋದನ್ನ ಕಂಡ ನರ್ಸ್ ಗೂ ಸಮಾಧಾನ.

  ಮನಮುಟ್ಟುವ ಕಥೆ ಅನಿತಕ್ಕ.. ಸೂಪರ್.. :)

  ReplyDelete
 3. ಅಹ್ಹಹ್ .. !! ಅಕ್ಕಾವ್ರೇ ಬಲು ಮಜವಾಗಿದೆ .. ಕುತೂಹಲ ಪ್ರೇಮ ಬೇಸರ ತುಸು ಹಾಸ್ಯ ಜೊತೆಯಲ್ಲಿ ಸುಂದರ ಚಿತ್ರಗಳ ಸಮ್ಮಿಲನ... ಹಾಗೂ ಎಂದಿನಂತೆ ನಿಮ್ಮ ನಿರೂಪಣೆಯ ಶೈಲಿಯ ವಿಶೇಷತೆ ಬಲು ರೋಮಾಂಚಕವಾಗಿದೆ .. ಕಥೆಯನ್ನು ಓದುವುದಕ್ಕಿಂತ ಕಣ್ಣೆದುರಲ್ಲೇ ಕಂಡಂತಾಯಿತು .. :)

  ReplyDelete
 4. " ತಲೆಯೊಳಗೆ ಹುಳ ಬಿಡುವವರು" ಅಂದರೆ ನೀವು...!

  ಸಕತ್ ! ಸೂಪರ್ರು !

  ReplyDelete
 5. ಆನಿತಕ್ಕ ಕಥೆ ಸೂಪರ್

  ReplyDelete
 6. Ee mano vaijnyanika kathe manasika rogigala bagge ningiruva kalajiyannu toruttade. Tumba kushi aaytu :)
  Ashoka A.s

  ReplyDelete
 7. Anithàkka kathe bharee laaika barette
  Time sikkiyappaga pakka odutte

  ReplyDelete
 8. ಕೊನೆ ಸಾಲು ಎರಡೆರಡು ಸಲ ಓದಿಸಿತು..

  ಇಷ್ಟವಾಯ್ತು ಅನಿತಕ್ಕಾ... :)

  ReplyDelete
 9. ಶಿವು ಕಥೆ ಓದಿ ಸಂತೋಷವಾಯಿತು, ಆದರೆ ಅವನು ಒಬ್ಬ ರೋಗಿ ಅಂದಾಗ ಸ್ವಲ್ಪ ಬೇಸರಾಯಿತು,
  ಆದರೆ, ಅವನು ಮರುವು ರೋಗಿ ಅಂತ ತಿಳಿದದ್ದು, ಕಮೆಂಟಗಳನ್ನು ನೋಡಿದ ನಂತರ.............
  ..
  www.spn317.blogspot.in

  ReplyDelete