ಹೆಣ್ಣಿನ ಬಾಳೆಷ್ಟು ವಿಚಿತ್ರ. ಬದುಕು ಮುಗಿಯುವವರೆಗೆ ಹೋರಾಟ.ಗೆದ್ದರೆ ಕಳೆದುಕೊಳ್ಳುವ ಭಯ. ಹಾಗಾಗಿಯೇ ಏನೋ... ಸೋಲದಿದ್ದರೂ ಎಲ್ಲೂ ಗೆಲ್ಲುವಂತಿಲ್ಲ.ದಶಕಂಠ ಎಂಬ ಹೆಸರು ಕೇಳದವರುಂಟೇ ಈ ಜಗದಲ್ಲಿ.. ಅವನ ಜಾಣ್ಮೆ, ಬಾಹುಗಳ ಅದ್ಬುತ ಶಕ್ತಿ, ಅಪೂರ್ವ ದೈವಭಕ್ತಿ, ಎಲ್ಲವೂ ಅವನನ್ನು ಹಾಗೆ ಕರೆಯುವಂತೆ ಮಾಡಿತ್ತು. ಅಷ್ಟೇಕೆ ಮೂರುಲೋಕಗಳನ್ನು ಕೇವಲ ತನ್ನ ನಾಮ ಮಾತ್ರದಿಂದಲೇ ನಡುಗಿಸಬಲ್ಲಂತಹ ಸಾಮರ್ಥ್ಯಿಕೆ ಹೊಂದಿದ್ದವ ನನ್ನವ. ನಾನೇನು ಕಡಿಮೆ ಇದ್ದೆನೇ? ನನ್ನ ಸೌಂದರ್ಯದ ವರ್ಣನೆ ಎಲ್ಲರ ನಾಲಿಗೆಯಲ್ಲಿ ಸಿ"ತಿಂಡಿಯಂತೆ ಜಗಿದಾಡಲ್ಪಡುತ್ತಿತ್ತು. ಹೆತ್ತವರ ಹೆಮ್ಮೆಯೇ ಆಗಿದ್ದ ಮುತ್ತಿನ ಚೆಂಡಿನಂತಹ ಮೂರು ಲೋಕೋತ್ತರ ಶೂರ ಕುವರರನ್ನು ಹೊತ್ತು ಹೆತ್ತ ಗರ್ಭ ನನ್ನದು.ಅಪಾರ ಸಂಪತ್ತು ಹೊಂದಿದ ಲಂಕಾ ಪಟ್ಟಣದ ಮಹಾರಾಣಿ. ಮಂಡೋದರಿ ಎಂದರೆ ರಾವಣನಿಗೆ ತಕ್ಕ ಮಡದಿ ಎಂದು ಹರಸಿ ಹಾರೈಸುತ್ತಿದ್ದ ರಕ್ಕಸ ಕುಲದವರು. ಓಹ್.. ಬದುಕಿನಲ್ಲಿ ಇದಕ್ಕಿಂತ ಮಿಗಿಲೇನಾದರೂ ಇದೆಯೇ.. ನಾನೂ ಅದೇ ಭ್ರಮೆಯಲ್ಲಿ ಮುಳುಗೇಳುತ್ತಿದ್ದೆ.
ಒಂದು ಹಂತದಲ್ಲಿ ಎಲ್ಲವನ್ನೂ ಹೊಂದಿದ ತೃಪ್ತ ಭಾವವನ್ನೇ ಮೆಲುಕು ಹಾಕುತ್ತಾ ತಟಸ್ಥಳಾದಾಗಲೇ ಆತ ಹೊಸ ಅನುಭವಕ್ಕಾಗಿ ಬಲೆ ಬೀಸತೊಡಗಿದ್ದ.. ಹಾಗೆಂದು ರಾವಣನ ಒಳ್ಳೆಯ ಗುಣಗಳ ಬಗ್ಗೆಯೂ, ಹೆಣ್ಣು ಕಂಡಾಗ ಕಣ್ಣು ಹಾಕುವ ಕಾಮುಕ ಗುಣಗಳ ಬಗ್ಗೆಯೂ ತಿಳಿಯದವಳಲ್ಲ.ತಿಳಿದೂ ಸುಮ್ಮನಿದ್ದೆ.ಯಾಕೆಂದರೆ ಹೆಣ್ಣು ಒಲಿದೋ, ಬೆದರಿಕೆಗೆ ಮಣಿದೋ ತಾನೇ ತಾನಾಗಿ ವಶಳಾಗದ ಹೊರತು ಇವನು ಬಲತ್ಕಾರವಾಗಿ ಹೆಣ್ಣನ್ನು ಕೆಡಿಸಲಾರ. ಇದು ನನಗೆ ಗೊತ್ತಿದ್ದ ಸತ್ಯವೇ ಆಗಿತ್ತು. ವೇದಾವತಿಯನ್ನು ಕೆಣಕಿ ಅವಳನ್ನು ಕೆಡಿಸಲು ಹೋದಾಗ ಅವಳು ವಶಳಾಗದೇ ಅಗ್ನಿಯಲ್ಲಿ ಬೆಂದು ದಗ್ಧಳಾಗುವ ಮೊದಲು 'ಹೆಣ್ಣನ್ನು ಅವಳ ಇಚ್ಚೆಗೆ "
ವಿರುದ್ಧವಾಗಿ ಮುಟ್ಟಿದರೆ ನೀನು ಸತ್ತು ಹೋಗುತ್ತೀಯ' ಎಂದು ಶಪಿಸಿದ್ದಳಂತೆ. ಮರಣ ಭಯ ಎಂಬುದು ಕತ್ತಿಯ ಮೊನೆಗೆದುರಾಗಿ ನಿಂದಂತೆ.. ಸ್ವಲ್ಪ ಎಚ್ಚರ ತಪ್ಪಿದರೂ ಇರಿಯುವ ಹೆದರಿಕೆ.. ಅವನಿಗೆ ಸಿಕ್ಕ ಶಾಪ ನನ್ನ ಪಾಲಿನ ವರವಾಗಿತ್ತು. ಹಾಗಾಗಿಯೇ ಅವನು ತಪ್ಪು ಹಾದಿ ತುಳಿಯಲಾರ ಎಂದು ಹೆಚ್ಚೇ ನಂಬಿಬಿಟ್ಟಿದ್ದೆನೇನೋ..
ಅಂದಿನದ್ದು ಗಾಳಿಯಲೆಯ ಸಣ್ಣ ಅಲುಗಾಟವೆಂದುಕೊಂಡಿದ್ದೆ. ಆದರೆ ಮರದ ಬೇರಿಗಾಗಲೇ ಗೆದ್ದಲು ಹಿಡಿದಿದ್ದು ನನ್ನರಿವಿಗೆ ಬರಲೇ ಇಲ್ಲ..
ತುಂಬಿದ ಸಭಾಭವನಕ್ಕೆ ನೆತ್ತರು ಸುರಿವ ಮೋರೆಯಲ್ಲಿ ಬಂದು ನಿಂದಿದ್ದಳು ಶೂರ್ಪನಖಿ.. ಅವಳದ್ದೇನಿತ್ತು ತಪ್ಪು.. ರಾಮನಿಗೆ ಮನಸೋತದ್ದೇ..? ಆತ ಒಪ್ಪದಾಗ ಲಕ್ಷ್ಮಣನ ಬಳಿ ಸಾಗಿದ್ದೇ..? ತುಂಬು ಹರೆಯದಲ್ಲಿ ಪತಿಯನ್ನು ಕಳೆದುಕೊಂಡವಳವಳು.. ಕಳೆದುಕೊಂಡದ್ದೇನು.. ರಾವಣನೇ ಕೊಂದದ್ದು. ಅಪರೂಪದ ಪರಾಕ್ರಮಿಯಾಗಿದ್ದ ವಿದ್ಯುಜ್ಜಿಹ್ವನ ಪರಾಕ್ರಮವೇ ಆತನಿಗೆ ಮುಳ್ಳಾಯಿತು. ಎಂದಾದರೊಂದು ದಿನ ಅವನಿಂದ ತನ್ನ ಸ್ಥಾನಕ್ಕೆ, ಹಿರಿಮೆಗೆ ಚ್ಯುತಿ ಬಂದೀತೆಂದು ಯುದ್ಧದಲ್ಲಿ ಶತ್ರುಸೇನೆಗೆ ಸಹಾಯ ಮಾಡಿದನೆಂಬ ಆರೋಪದಿಂದ ರಾವಣನೇ ಕೊಂದ ಅವನನ್ನು.. ರಾಜಕೀಯದ ಪಗಡೆಯಲ್ಲಿ ಶೂರ್ಪನಖಿ ಎಲ್ಲವನ್ನೂ ಕಳೆದುಕೊಂಡು ಹೊರಬಿದ್ದಿದ್ದಳು. ಅವಳದ್ದು ರಕ್ಕಸ ನೆತ್ತರೇ ತಾನೇ.. ಅವಳ ಕೋಪ ಬುಗಿಲೇಳದಂತೆ ಖರ, ದೂಷಣ, ತ್ರಿಶಿರಸ್ಸು ಸಹಿತ ಹದಿನಾಲ್ಕು ಸಾವಿರ ಸೇನೆಯೊಡನೆ ಅವಳನ್ನು ದಂಡಕಾರಣ್ಯದಲ್ಲಿರುವಂತೆ ರಾವಣನೇ ಕಳುಹಿದ್ದ.ಅಲ್ಲಿ ಅವಳದ್ದೇ ಆಡಳಿತ. ಎಲ್ಲ ಸರಿ ಆಯಿತು ಎಂದುಕೊಂಡು ಪುಟ ಮಗುಚಿದರೆ ಹೊಸ ಹಾಳೆಯ ಕಥೆ ಬೇರೆಯೇ ಆಗಿತ್ತು.
ಅವ ರಾಮನಂತೆ. ಅವನ ತಮ್ಮ ಮತ್ತು ಮಡದಿಯೊಂದಿಗೆ ವನವಾಸದಲ್ಲಿದ್ದ ಅರಸು ಕುಲದವರವನು.ಕಾಡಿನ ಪರ್ಣಕುಟಿಯಲ್ಲಿದ್ದ ಅವರು ಶೂರ್ಪನಖಿಯ ಕಣ್ಣಿಗೆ ಬಿದ್ದಿದ್ದು ಈ ಎಲ್ಲಾ ಘಟನೆಗಳಿಗೆ ಮೂಲವಾಯ್ತು. ಮೋಹಪರವಶೆಯಾದ ಶೂರ್ಪನಖಿ ಏಕಪತ್ನೀವೃತತ್ಸನಾದ ರಾಮನನ್ನು ಪಡೆಯುವ ಆತುರದಲ್ಲಿ ಸೀತೆಯನ್ನು ನುಂಗಹೊರಟಿದ್ದು ತಪ್ಪಿರಬಹುದೇನೋ.. ಆದರೆ ಅದಕ್ಕಾಗಿ ಸಿಕ್ಕ ಶಿಕ್ಷೆಯಾದರೂ ಎಂತಹದ್ದು... ಹೆಣ್ಣು ತನ್ನ ರೂಪವನ್ನು ಕೊನೆಗಾಲದವರೆಗೂ ಜತನದಿಂದಲೇ ಕಾಪಾಡುವ ಆಸೆ ಹೊತ್ತವಳು. ಒಂದಿಷ್ಟು ಕೂದಲು ಕೆದರಿದರೂ, ಕಣ್ಣ ಕಾಡಿಗೆ ಚದುರಿದರೂ ಅದನ್ನು ಸರಿ ಪಡಿಸಿಕೊಳ್ಳದೇ ಯಾರೆದುರೂ ಸುಳಿದಾಡಳು.. ಅಂತಹ ಹೆಣ್ಣಿನ ಕಿವಿ ಮೂಗುಗಳನ್ನು ಕತ್ತರಿಸಿ ವಿರೂಪಗೊಳಿಸುವುದೇ.. ಅವಳಾದರೂ ಏನು ಮಾಡಿಯಾಳು..ಪಾಪದ ಹೆಣ್ಣು.. ಒಂದರೆಕ್ಷಣವಷ್ಟೇ ಆ ಮರುಕದ ಭಾವ ನನ್ನೊಳಗಿದ್ದುದು.. ಅದೂ ಅವಳ ಮಾತು ಕೇಳುವವರೆಗೆ..ಅವಳ ರೂಪಿಗೆ ಬಂದ ವಿಕಾರತೆ ಈಗ ಬಂದದ್ದಿರಬಹುದು.. ಆದರೆ ಒಳಗಿನ ವಿಕಾರತೆ ಮೊದಲಿಂದಲೂ ಇದ್ದಿತ್ತಲ್ಲವೇ.. ಇಲ್ಲದಿದ್ದರೆ ಪರ ಪತ್ನಿಯನ್ನು ಅಣ್ಣನೆದುರು ಬಣ್ಣಿಸಿ ಹೇಳಿಯಾಳೇ..
ನನ್ನೊಳಗಿನ ದಂದ್ವ ಸರಿ ತಪ್ಪುಗಳ ವಿವೇಚನೆಯ ಬದಲು ನನಗೆ ಅನುಕೂಲವಾಗುವುದನ್ನೇ ಸರಿ ಎಂದು ಒಪ್ಪಿಕೊಳ್ಳುವತ್ತ ಮನ ಮಾಡಿತೇನೋ.. ಶೂರ್ಪನಖಿಯೇನೂ ದೂರದವಳಾಗಿರಲಿಲ್ಲ. ಅವಳ ವೇದನೆಗೆ ಪರಿಹಾರ ಬೇಕಿತ್ತು..
ಲೋಕದ ಕಣ್ಣಿಗೆ ಮಣ್ಣೆರೆಚುವುದಕ್ಕೆ ರಾವಣನಿಗೆ ಇನ್ನೊಂದು ಅವಕಾಶ ಸಿಕ್ಕಿತು. ಸೀತೆಯ ಸ್ವಯಂವರಕ್ಕೆ ಹೋಗಿ ಶಿವಧನಸ್ಸನ್ನು ಎತ್ತಲಾರದೇ ಬರಿಗೈಯಲ್ಲಿ ಮರಳಿದ ಸೋಲಿನ ನೋವಿಗೆ ಔಷದವಾಗಿ ಗೆದ್ದು ತರಲಾಗದಿದ್ದ ಸೀತೆಯನ್ನು ಕದ್ದು ತರ ಹೊರಟ.ರಕ್ಕಸರೋ ಮಾಯಾವಿಗಳು.. ಬಹು ಬಗೆಯ ರೂಪಧಾರಣೆ ಮಾಡುವುದು ನಮಗೆ ಕರಗತವಾಗಿತ್ತು. ನಾಡಿನಿಂದ ಬಂದ ಸೀತೆ ನಮ್ಮ ಜಾಡನ್ನರಿಯದೇ ಹೋದಳು. ಹೊನ್ನ ಹರಿಣಕ್ಕೆ ಮನಸೋತಳು. ಮಾರೀಚ ರಾಮ ಲಕ್ಷ್ಮಣರನ್ನು ಅವಳಿಂದ ಬಹುದೂರ ಕೊಂಡೊಯ್ದ. ಸನ್ಯಾಸಿಯ ರೂಪಿನಿಂದ ಸೀತೆಯೆದುರು ನಿಂದು ಭಿಕ್ಷೆ ಬೇಡಿದ. ಲಕ್ಷ್ಮಣ ರೇಖೆಯನ್ನು ದಾಟಿ ಬಂದ ಸೀತೆ ರಾವಣನ ವಶವಾದಳು. ಎತ್ತಿ ಹೆಗಲಿಗೇರಿಸಿಕೊಳ್ಳುತ್ತಿದ್ದ ರಾವಣ.. ಆದರೆ ಪರ ಹೆಣ್ಣನ್ನು ಮುಟ್ಟಬಾರದೆಂಬ ಶಾಪ ಅವನ ಕೈಯನ್ನು ಕಟ್ಟಿ ಹಾಕಿತೇನೋ.. ಅವಳು ನಿಂತಷ್ಟು ನೆಲದ ಸಮೇತ ಅವಳನ್ನು ಪುಷ್ಪಕ ವಿಮಾನಕ್ಕೇರಿಸಿ ನಡೆದ. ಮೋಸದಿಂದ ಜಟಾಯುವನ್ನು ಕೊಂದ. ಸೀತೆಯನ್ನು ತಂದು ಅಶೋಕವನದಲ್ಲಿಟ್ಟ. ಇದೆಲ್ಲ ಸಖಿಯರ ಮೂಲಕ ನನಗೆ ಗೊತ್ತಾಗುವ ಹೊತ್ತಿಗೆ ಸೀತೆಯ ಬಗ್ಗೆ ಇಡೀ ಲಂಕೆ ಮಾತಾಡಿಕೊಳ್ಳುತ್ತಿತ್ತು. ಅದ್ಯಾರು ಅದಕ್ಕೆ ಅಶೋಕವನವೆಂದು ಹೆಸರಿಟ್ಟರೋ ತಿಳಿಯದು. ಸೀತೆ ಅಲ್ಲಿಗೆ ಬಂದ ಮೇಲೆ ಶೋಕವನ್ನಲ್ಲದೆ ಬೇರೇನನ್ನು ಕಾಣಲಿಲ್ಲ.
ಪ್ರತಿ ದಿನ ನನ್ನ ಪತಿ ಅವಳಲ್ಲಿ ಪ್ರಣಯಾರ್ಥಿಯಾಗಿ ಹೋಗುತ್ತಿದ್ದ.ಧರಿಸುತ್ತಿದ್ದ ಹೊಸ ಹೊಸ ಅರಿವೆಗಳೇನು.. ಮೈ ಕೈಗಳಿಗೆ ಪೂಸುತ್ತಿದ್ದ ಚಂದನಗಂಧಾದಿ ಪರಿಮಳಗಳೇನು.. ದೇಹವನ್ನಲಂಕರಿಸುತ್ತಿದ್ದ ಒಡವೆಗಳ ಬಗೆಯದೇನು.. ಹೋಗುವಾಗ ಹೆಮ್ಮೆಂದ ಎತ್ತಿ ನಡೆಯುತ್ತಿದ್ದ ತಲೆ, ಬರುವಾಗ ಸೋತ ಕಾಲ್ಗಳನ್ನೇ ನೋಡಿಕೊಂಡು ಬರುತ್ತಿತ್ತು. ನನ್ನ ಪಕ್ಕದಲ್ಲಿ ಮಲಗಿದವನ ಕನವರಿಕೆಯಲ್ಲೆಲ್ಲ ಅವಳದೇ ಹೆಸರು. ನನ್ನೊಳಗೆ ಅಸೂಯೆಯ ಕಿಚ್ಚು ಹೊತ್ತಿ ಉರಿಯುತ್ತಿತ್ತು. ಅದರೊಂದಿಗೆ ಕೆಟ್ಟ ಕುತೂಹಲವೂ. ನನ್ನವನಂತಹ ಧೀರಾದಿಧೀರನಿಗೆ ಸೋಲದ ಆ ಹೆಣ್ಣು ಹೇಗಿರಬಹುದು.. ನೋಡುವ ಅವಕಾಶವೂ ಬಂದಿತ್ತು.
ಅವನೊಲುಮೆಗಾಗಿ ಪರಿತಪಿಸುತ್ತಿದ್ದ ನನ್ನ ಆರ್ತನಾದ ಅವನವರೆಗೆ ತಲುಪುತ್ತಲೇ ಇರಲಿಲ್ಲ. ಆದರೆ ಅವಳನ್ನು ಹೊಂದುವ ಆಸೆ ಶುಕ್ಲಪಕ್ಷದ ಚಂದ್ರನಂತೆ ದಿನೇ ದಿನೇ ಏರುತ್ತಲೇ ಹೋಗುತ್ತಿತ್ತು. ಅವನನ್ನು ತೃಣಸಮಾನವೆಂದು ಪರಿಗಣಿಸಿ ಕಡೆಗಣ್ಣ ನೋಟವನ್ನು ಅವನೆಡೆಗೆ ಬೀರದ ಅವಳ ಮೇಲೆ ಅವನಿಗಿನ್ನೂ ಹುಚ್ಚು ವ್ಯಾಮೋಹ.. ಆ ದಿನ ಅದೇಕೋ ಅವನ ಸಹನೆ ಸತ್ತು ಹೋಗಿತ್ತು. ಪ್ರತಿದಿನದಂತೆ ಅವಳ ಬಳಿ ಹೋಗಿದ್ದ ಅವನಿಗೆ ಅವಳ ಹಠ ಕೋಪವನ್ನೆ ತಂದಿತ್ತು. ಖಡ್ಗವನ್ನೆತ್ತಿದ್ದ ಅವಳನ್ನು ತುಂಡರಿಸಲು.. ಹಾಂ..ಅಬಲೆಯಾದವಳನ್ನು ಕೊಂದು ಹಂತಕನಾಗುವುದೇ.. ಛೇ.. ಕೂಡದು.. ಸ್ತ್ರೀ ಹತ್ಯಾ ಪಾಪ ನನ್ನವನ ಹೆಗಲೇರುವುದು ನನಗೆ ವಿಹಿತವೆನ್ನಿಸಲಿಲ್ಲ. ಎತ್ತಿದ ಕೈಯನ್ನು ನನ್ನ ಕೈಯಿಂದ ತಡೆದೆ. ಉರಿಕೋಪದಲ್ಲಿ 'ಒಂದು ತಿಂಗಳ ಕಾಲಾವಕಾಶದಲ್ಲಿ ನನ್ನವಳಾಗಬೇಕವಳು' ಎಂದು ಅಪ್ಪಣೆ ಮಾಡಿ ಕಾಲನ್ನಪ್ಪಳಿಸುತ್ತಾ ಹೊರ ಹೋದನವ. ಆಗಲೇ ಸೀತೆಯನ್ನು ಕಂಡದ್ದು ನನ್ನ ಕಣ್ಣುಗಳು.. ನನ್ನನ್ನೇ ಕನ್ನಡಿಯಲ್ಲಿ ನೋಡಿಕೊಂಡತ್ತಿತ್ತು. ಯಾವ ತಾಯಿ ಹಡೆದ ಶಿಶುವೋ ಏನೋ.. ಸ್ತ್ರೀಯಾಗಿ ಹುಟ್ಟಿದ್ದಕ್ಕೆ ಎಷ್ಟೆಲ್ಲ ಕಷ್ಟ ಅವಳಿಗೆ.. ಏನಿದೆ ನನಗೂ ಅವಳಿಗೂ ವ್ಯತ್ಯಾಸ.. ನಾನು ಪರಪತ್ನಿಯ ಹಿಂದೆ ಹೋಗಿ ನನ್ನಿಂದ ದೂರಾಗುತ್ತಿರುವ ರಾವಣನ ಬಗ್ಗೆ ಚಿಂತೆ ಹೊಂದಿದ್ದರೆ, ಅವಳು ಕಣ್ಣಿಗೆ ಕಾಣಲಾರದಷ್ಟು ದೂರವಿರುವ ರಾಮನ ಧ್ಯಾನದಲ್ಲಿ ಮುಳುಗಿದ್ದಳು.
ಅವಳು ಮರಳಿ ರಾಮನನ್ನು ಸೇರುವುದರಿಂದ ಮಾತ್ರ ನಾನು ನನ್ನವನನ್ನು ಮತ್ತೆ ಪಡೆಯಬಹುದಿತ್ತು.ಆದರೆ ಕುಟಿಲ ಮನಸ್ಸು ಹೊಂದಿದ ರಾವಣನನ್ನು ಬುದ್ಧಿ ಮಾತುಗಳಿಂದ ತಡೆಯಬಲ್ಲೆನೇ.. ವಿವೇಕ, ವಿವೇಚನೆ, ಅಧಿಕಾರ ಎಲ್ಲವೂ ಈ ಮೋಹಭಾವನೆಗಿಂತ ಚಿಕ್ಕದೇನೋ.. ಅವಳಾಗಿ ಒಲಿದು ಬಂದಿದ್ದರೆ ನಾನಾದರು ಏನು ಮಾಡುವವಳಿದ್ದೆ. ಕಿರಿಯವಳು ಎಂದು ಆಧರಿಸಿ ಒಪ್ಪಿಕೊಳ್ಳಲೇಬೇಕಿತ್ತು. ರಾಜನಿಗೆ ಅರಸಿಯರ ಸಂಖ್ಯೆ ಏರಿದಷ್ಟು ಅವನ ಹೆಮ್ಮೆಯ ಕಿರೀಟಕ್ಕೆ ಕುಂದಣಗಳ ಹೊಳಪು ಹೆಚ್ಚಾಗುತ್ತಿತ್ತು. ಗಂಡ ತೃಪ್ತಿಯ ಕೇಕೆ ಹಾಕಿ ನಕ್ಕಷ್ಟು ನನ್ನ ಮನಸ್ಸು ನಗುತ್ತಿತ್ತು. ನಾನು ಮಹಾರಾಣಿಯಾಗಿದ್ದರೂ ಅವನಿಗೆ ವಿದೇಯ ಪತ್ನಿಯಾಗಿದ್ದೆ.
ಎಲ್ಲ ಅಂದುಕೊಂಡಂತೆ ಆಗುವುದಿದ್ದರೆ ಪ್ರಪಂಚ ಹೀಗಿರುತ್ತಿರಲಿಲ್ಲ.. ಭೋರ್ಗರೆವ ಕಡಲೇ ನಮ್ಮ ಅಭೇದ್ಯ ಕೋಟೆ. ಅತ್ತ ಕಡೆಂದ ಹಾರಿ ಬರಲು ರಾಮನಿಗೇನಾದರು ರೆಕ್ಕೆಗಳಿವೆಯೇ.. ತಿಂಗಳ ಕಾಲಾವಧಿಯನ್ನು ಕ್ಷಣಕ್ಷಣಕ್ಕೂ ಲೆಕ್ಕ ಹಾಕುತ್ತಿದ್ದ ರಾವಣ ಕನಸ ಲೋಕದಲ್ಲಿ ಕಳೆದುಹೋಗುತ್ತಿದ್ದ..
ಆಗಲೇ ಮೊದಲ ಬಾರಿಗೆ ರಕ್ಕಸನಲ್ಲದ ಒಬ್ಬ ಮಾಯಾವಿ ಲಂಕೆಯೊಳಕ್ಕಿಳಿದಿದ್ದು. ಅದೆಂತ ಧೈರ್ಯ, ಎಂತಹ ಸಾಹಸ. ಸೀತೆಯನ್ನು 'ಹೆಗಲೇರು ಹೊತ್ತೊಯ್ದು ನಿನ್ನ ಪ್ರಭುವಿನ ಹತ್ತಿರ ಬಿಡುತ್ತೇನೆ' ಎಂದಿದ್ದನಂತೆ.. ಆದರೆ ಆಕೆಯ ಆತ್ಮವಿಶ್ವಾಸ, ದೃಢ ನಂಬಿಕೆಗೆ ತಲೆದೂಗಲೇಬೇಕು.. 'ರಾಮನೇ ಬಂದು ನನ್ನನ್ನಿಲ್ಲಿಂದ ಕರೆದೊಯ್ಯಲಿ' ಎಂದಳಂತೆ.... ನಾನಿದ್ದಾಗಲೇ ಬೇರೆಯವರೊಡನೆ ಸರಸಕ್ಕೆ ಹಾರುವ ರಾವಣನೆಲ್ಲಿ.. ಸೀತೆಗಾಗಿ ಸಮುದ್ರ ದಾಟಿ ಬರಬಹುದಾದ ರಾಮನೆಲ್ಲಿ..ರಾಮನ ಶಕ್ತಿಯ ಕಿರು ಪ್ರದರ್ಶನವನ್ನು ಏರ್ಪಡಿಸಿಯೇ ಹೋದನವ,, ತನ್ನ ಬಾಲಕ್ಕೆ ಹಚ್ಚಿದ ಬೆಂಕಿಂದಲೇ ಲಂಕೆಗೆಲ್ಲ ಕಿಚ್ಚಿಟ್ಟು ಹಾರಿದ.. ಸುಂದರ ಲಂಕೆ ಕರಗಿ ಕಪ್ಪಾಯಿತು.ಹರೆಯ ಬಂದಂತಿದ್ದ ರಾವಣನ ಆಸೆ ಆಗಲೇ ಮುಪ್ಪಾಯಿತು.. ಇದು ಮುಂದಿನ ಕೇಡಿನ ದಿನಗಳ ಸುಳಿವೇನೋ.. ಎದೆ ಗೂಡಲ್ಲಿ ಆತಂಕ ಮಡುಗಟ್ಟಿತ್ತು. ಮಡಿಲಲ್ಲಿ ಸೀತೆಯೆಂಬ ಸುಡು ಬೆಂಕಿಯ ಬಿಸಿ..
ರಾಮ ಬಂದ ... ಲಕ್ಷ್ಮಣ ಬಂದ... ಕಪಿವೀರರೆಲ್ಲಾ ಬಂದರು.. ಯುದ್ಧ ಪ್ರಾರಂಭವಾಯಿತು. ಅಲ್ಲಿಯವರೆಗೆ ರಕ್ಕಸ ಕುಲದವರಾದ ನಮ್ಮನ್ನು ಹುಡುಕಿ ಬಂದು ಯುದ್ಧ ಮಾಡಿದವರಿರಲಿಲ್ಲ. ನಾವೇ ಮೋಜಿಗೋ, ನಮ್ಮ ಶಕ್ತಿ ಪ್ರದರ್ಶನಕ್ಕೋ ಇನ್ನೊಬ್ಬರ ಮೇಲೇರಿ ಹೋಗಿ ಸದೆ ಬಡಿಯುತ್ತಿದ್ದೆವು. ಮೊದಲ ಸಲ ನಮ್ಮ ನೆಲದಲ್ಲಿ ನಮ್ಮವರದ್ದೇ ರಕ್ತದ ಧಾರೆ.. ರಾವಣನ ಅರಮನೆಯ ಕಂಬಗಳಂತಿದ್ದ ವೀರರೆಲ್ಲ ಒಬ್ಬೊಬ್ಬರಾಗಿ ಸೋತರು.. ಸತ್ತರು..ಹೆಚ್ಚೇಕೆ ನಾನು ನನ್ನ ಕರುಳಕುಡಿಗಳನ್ನೇ ರಾವಣನ ಕಾಮದಾಸೆಯ ಯಜ್ಞಕ್ಕೆ ಅರ್ಘ್ಯವಿತ್ತೆ. ಲಂಕೆ ಸ್ಮಶಾನವಾಯಿತು.
ವಿಭೀಷಣ ರಾವಣನ ತಮ್ಮನಾದರೂ ವಿವೇಕಶಾಲಿ. ಅಣ್ಣನಿಗೆ ಹೇಳುವಷ್ಟು ಹೇಳಿ ನೋಡಿದ. ಧರ್ಮದ ಮಾರ್ಗ ಹಿಡಿಯುತ್ತೇನೆಂದು ರಾಮನಿಗೆ ಶರಣಾಗಿ ಅವನ ಪಕ್ಷದಲ್ಲಿ ನಿಂತು ನಮ್ಮ ಮೇಲೆರಗಿದ. ನಾನು ಪತಿಯ ಜಯವನ್ನಲ್ಲದೇ ಬೇರೇನನ್ನು ಬೇಡಬಾರದು.. ರಾಮ ಸರಿರಬಹುದು.. ಆದರೆ ನಾನು ತಪ್ಪಬಾರದು.. ನನ್ನ ಪತೀವೃತ ಧರ್ಮ ತಪ್ಪಬಾರದು..ಯಾಕೆಂದರೆ ನಾನೀಗ ಯುದ್ಧದಲ್ಲಿ ಹೋರಾಡುವ ಯೋಧನೊಬ್ಬನ ಮಡದಿ ಮಾತ್ರ.. ಅವನ ಗೆಲುವೇ ನನ್ನ ಗೆಲುವು.. ಅವನಿಗೂ ಈಗ ಯುದ್ಧ ಅನಿವಾರ್ಯವಾಗಿತ್ತು.. "
ಹಿಮ್ಮೆಟ್ಟುವುದು, ಕ್ಷಮೆ ಬೇಡುವುದು ಎರಡರ ಸಮಯವೂ ಮಿಂಚಿ ಹೋಗಿತ್ತು.. ಹೆತ್ತೊಡಲೇ ಬರಿದಾಗಿ ಹೋದ ಮೇಲೆ ಬದುಕಿ ಮಾಡುವುದಾದರೂ ಏನಿತ್ತು. ಪೊಳ್ಳು ಪ್ರತಿಷ್ಟೆಯ ಗಾಳಿಪಟವೇರಿ ಸಾಗುತ್ತಿದ್ದಾಗಲೇ ಹಿಡಿದಿದ್ದ ದಾರ ಕಡಿದಿತ್ತು. ತಪ್ಪಿನ ಬಗೆಗೆ ಅರಿವಾದರೂ ಪಶ್ಚಾತಾಪದ ಗಡು ಮೀರಿತ್ತು. ಆ ಹೆಣ್ಣಿನ ಕಣ್ಣೀರಿನ ಒಂದೊಂದು ಹನಿಗಳಿಗೂ ಲೆಕ್ಕ ಇಟ್ಟಂತೆ ರಾಮ ಬಾಣಗಳು ಘಾಸಿ ಮಾಡಿದವು. ಅವಳು ಅವನ ಪಾಲಿನ ಮೃತ್ಯುದೇವತೆಯಾದಳು, ರಾವಣನ ಆಸೆ ಕೊನೆಗೂ ನೆರವೇರಿತೇನೋ.. ಅವನನ್ನು ಮೃತ್ಯು ದೇವತೆ ಆಲಂಗಿಸಿದಾಗ..
ನನ್ನವನ ಶವ ಚಿಂದಿಯಾಗಿ ನೆಲದ ಮೇಲೆ ಬಿದ್ದಿದ್ದರೆ ಸೀತೆಯ ಕಣ್ಣಲ್ಲಿ ಹೊಳಪಿನ ರಾಮ ಕುಣಿಯುತ್ತಿದ್ದ. ನನ್ನೆಲ್ಲ ಆಸೆಗಳು ಕಮರಿ ಕಪ್ಪಾಗಿದ್ದರೆ ಅವಳ ಬಾಳಲ್ಲಿ ಹೊನ್ನ ಬೆಳಕು ರಂಗವಲ್ಲಿ ಇಡುತ್ತಿತ್ತು. ಕಣ್ಣೀರು ಕಡಲಲೆಯಂತೆ ಮತ್ತೆ ಮತ್ತೆ ... ಆ ನೋವು ಆ ದುಃಖ ನನ್ನವ ಸತ್ತ ಎಂಬುದಕ್ಕಿಂತ ಅವನನ್ನು ಕಣ್ಣೆತ್ತಿಯೂ ನೋಡದ ಅವಳಿಗಾಗಿ ಸತ್ತ ಎನ್ನುವುದಕ್ಕಾಗಿತ್ತು. ಪ್ರೀತಿಸುವ ಪತ್ನಿ ಪುತ್ರರು, ಸುವರ್ಣನಗರಿಯಾಗಿದ್ದ ಲಂಕೆ, ಎಲ್ಲವನ್ನು ಎಲ್ಲರನ್ನೂ ಕೇವಲ ಅವಳನ್ನು ಪಡೆಯುವ ಮೋಹದ ಬೆಂಕಿಗೆ ಒಡ್ಡಿ ಪತಂಗವಾಗಿ ಉರಿದು ಬಿದ್ದಿದ್ದ. ನನ್ನವನು ಹಲವು ಸದ್ಗುಣಗಳ ಅರಸ..ಆದರೆ ಇನ್ನು ಯಾರೂ ರಾವಣನನ್ನು ಉತ್ತಮ ರಾಜನಾಗಿ ನೆನಪಿಸಿಕೊಳ್ಳುವುದಿಲ್ಲ ಪ್ರೀತಿಯ ಗಂಡನಿಗೆ ಅವನ ಹೆಸರನ್ನು ಉಧಾಹರಿಸುವುದಿಲ್ಲ.. ಯೋಗ್ಯ ತಂದೆಯಾಗಿ .. ಅಣ್ಣನಾಗಿ..ಬಂಧುವಾಗಿ.. ಉಹುಂ.. ಇಲ್ಲ ಇಲ್ಲ.. ರಾವಣ ಎಂದೊಡನೇ ಅವನ ಹೇಸಿಗೆಯ ಮುಖ ಮಾತ್ರ ನೆನಪಿಗೆ ಬರುತ್ತದೆ. ಉಳಿದ ಮುಖಗಳು ಇದ್ದೂ ಇಲ್ಲದಂತೆ..ನಾನು ಕೊನೆಯವರೆಗೆ ಅವನೊಂದಿಗೆ ಇದ್ದೆ.. ಅವನು ತಪ್ಪುಗಳನ್ನೆಣಿಸುತ್ತಲಲ್ಲ.. ಅವನು ಸರಿಯಾಗಬಹುದಾಗಿದ್ದ ದಾರಿಗೆ ತೋರಿಸಬೇಕಾಗಿದ್ದ ಬೆಳಕನ್ನರಸುತ್ತಾ..ಆದರೆ ಬೆಳಕಾಗಬಹುದಾಗಿದ್ದ ಕಿರಣ ಕತ್ತಲೆಯಲ್ಲಡಗಿ ಮಾಯವಾಯಿತು.. ನನ್ನನ್ನು ಅಂಧಕಾರಕ್ಕೆ ನೂಕಿ..