ಬಾಗಿಲ ಬದಿಯಲ್ಲಿ 41+ 2 ಸೀಟುಗಳು ಎಂಬ ಅರೆಮಾಸಿದ ಪೈಂಟಿನ ಬರಹವನ್ನು ಹೊತ್ತ ಬಸ್ಸು ನನ್ನ ಬಳಿಗೆ ಬಂದು ನಿಂತಿತು. ಚುರುಕಿನಲ್ಲಿ ಮೆಟ್ಟಿಲೇರಿ ಡ್ರೈವರನ ಎಡಬದಿಯಲ್ಲಿದ್ದ ನನ್ನ ಮಾಮೂಲಿ ಸ್ಥಳವಾದ ಅಡ್ಡ ಸೀಟಿನ ಮೇಲೆ ಕುಳಿತೆ. ಎಂದಿನಂತೆ ನನ್ನ ದೃಷ್ಟಿ ಹರಿದಿದ್ದು ಮಹಿಳೆಯರ ಸೀಟಿನ ನಿಶ್ಚಿತ ಜಾಗದೆಡೆಗೆ. ಅವಳು ನಸು ನಾಚಿಕೆಯಲ್ಲಿ ತಲೆ ಬಗ್ಗಿಸಿ ಮುಗುಳು ನಗೆ ಬೀರುತ್ತಿದ್ದಳು.
ಓದುಗ ಮಹಾಶಯರು ಕಥೆಯ ತಲೆ ಬರಹವನ್ನು ಮೊದಲೇ ಓದಿದ್ದರೆ ಇದು ನನ್ನ ಕಥೆಯೇ ಎಂದು ತಪ್ಪು ತಿಳಿದುಕೊಳ್ಳುವ ಸಂಭವವುಂಟು. ಆದರೆ ನೀವೊಮ್ಮೆ ನನ್ನ ಪರಿಚಯ ಮಾಡಿಕೊಂಡಲ್ಲಿ ಹಾಗಾಗದು ಎನ್ನುವ ಸದಾಶಯ ನನ್ನದು.
ನಾನು ಈ ಬಸ್ಸಿನ ಅಜ್ಜನ ಕಾಲದಿಂದಲೇ ಇದರ ಸಹಸವಾರ. ನನ್ನ ಸರ್ವೀಸಿನ ಕಾಲದಲ್ಲಿ ಇದೇ ರೂಟಿನಲ್ಲಿ ಬರುತ್ತಿದ್ದ ಮೊದಲಿನೆರಡು ಬಸ್ಸುಗಳು ನಮ್ಮ ಕರಾವಳಿಯ ಉಪ್ಪು ಗಾಳಿಯ ಹೊಡೆತಕ್ಕೆ ತುಕ್ಕು ಹಿಡಿದು, ಎತ್ತರ ತಗ್ಗಿನ ತಿರುವು ಮುರುವಿನ ಮಾರ್ಗದಲ್ಲಿ ಸುತ್ತಿ ಸುಳಿದು ಬಸವಳಿದು ಗೂರಲು ರೋಗ ಅಂಟಿ ಸತ್ತೇ ಹೋಗಿದ್ದವು. ಅಂದರೆ ನನ್ನ ಜೀವಿತಾವಧಿಯಲ್ಲಿ ಈ ಮಾರ್ಗದಲ್ಲಿ ನಾನು ಹೋಗಲೇಬೇಕಾದ ಹೊತ್ತಿಗೆ ಬರುತ್ತಿದ್ದ ಬಸ್ಸುಗಳಲ್ಲಿ ಇದು ಮೂರನೆಯದು.
ನನ್ನ ಯೌವನ ಕಾಲದಲ್ಲಿ ಅಪ್ಪ ಗಳಿಸಿಟ್ಟ ಅಷ್ಟು ಆಸ್ತಿಯನ್ನೇ ಐಸ್ ಕ್ಯಾಂಡಿಯಂತೆ ಕರಗಿಸುತ್ತಾ ಕಾಲ ಕಳೆಯುವ ನನ್ನನ್ನು ನೋಡಿ ಸಹಿಸಲಾಗದೇ ಅಪ್ಪನೇ ಯಾರ್ಯಾರ ವಶೀಲಿ ಮಾಡಿ ನನಗೆ ಸರಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಕೊಡಿಸಿದ್ದರು. ಅಲ್ಲಿಂದ ನನ್ನ ಜೀವನ ಇದೇ ಆರು ಚಕ್ರದ ಗಾಡಿಯನ್ನೇರುತ್ತಲೇ ಚಲಿಸಲಾರಂಭಿಸಿತು. ಹಾಗಾಗಿಯೇ ಏನೋ ಈ ಬಸ್ಸಿನಲ್ಲಿ ಬರುವ ಚರಾಚರಗಳೂ, ಪ್ರ್ಯಾಂ.. ಎನ್ನುವ ಹಾರನ್ನು, ಕ್ರೀಂ.. ಎಂದೊರಲುವ ಬ್ರೇಕು, ದಡ ಬಡ ಸದ್ದೆಸಗುವ ಬಸ್ಸಿನ ಶರೀರ.. ಹೀಗೆ ಸಕಲವೂ ನನ್ನನ್ನು ಕಂಡೊಡನೆ ಪರಿಚಯದ ನಗೆ ಬೀರಿದಂತಾಗುತ್ತಿತ್ತು.
ಮೊದಲೆಲ್ಲಾ ಶಿಕ್ಷಕ ವೃತ್ತಿಧರ್ಮದಂತೆ ಮುಖ ಗಂಟಿಕ್ಕಿಕೊಂಡೇ ಬಸ್ಸೇರುತ್ತಿದ್ದ ನನಗೆ ಬಸ್ಸಿನೊಳಗಿನ ಲೋಕದ ಪರಿಚಯವೇ ಕಡಿಮೆಯಿತ್ತು. ಆದರೀಗ ಘನ ಸರ್ಕಾರದವರು ನನ್ನ ಕೆಲಸದಿಂದ ನನಗೆ ಮುಕ್ತಿ ಕೊಡಿಸಿ ಮನೆಯಲ್ಲೇ ಕುಳಿತುಣ್ಣುವಂತೆ ಪೆನ್ಷನ್ ಕೊಡಲು ಶುರು ಮಾಡಿ ನನ್ನ ಸರ್ವೀಸಿನ ಅರ್ಧಕ್ಕಿಂತಲೂ ಹೆಚ್ಚು ಕಾಲ ಕಳೆದಿತ್ತು. ಮನೆಯಲ್ಲಿ ಕುಳಿತು ಮಾಡುವುದೇನು ಎಂಬುದಕ್ಕಿಂತಲೂ ಹೆಚ್ಚಾಗಿ, ಕುಳಿತರೆ ಏನಾದರೂ ಮಾಡಬೇಕಾಗಬಹುದು ಎನ್ನುವ ಭಯಕ್ಕೆ ನಾನು ನಿತ್ಯವೂ ಈ ಬಸ್ಸೇರುತ್ತಿದ್ದೆ. ಬಸ್ಸಿನ ಸಕಲ ಆಗುಹೋಗುಗಳನ್ನು ಗಮನವಿಟ್ಟು ನೋಡುತ್ತಿದ್ದೆ. ಈಗ ನಿಮಗೆ ನನ್ನ ಪರಿಚಯ ಆದ ಕಾರಣ ಕಥೆಯ ನಾಯಕ ನಾನಲ್ಲ ಎಂಬುದನ್ನು ಗ್ರಹಿಸಿದ್ದೀರಿ ಎಂದುಕೊಂಡಿದ್ದೇನೆ.
ನನ್ನ ಕಣ್ಣೋಟ ಮಹಿಳೆಯರಿಗಾಗಿ ಮೀಸಲಾದ ಸೀಟಿನಲ್ಲಿ ಕೇಂದ್ರೀಕೃತಗೊಂಡಿತ್ತು ಎಂದೆನಲ್ಲ.. ಅಲ್ಲಿಯೇ ಕಥಾ ನಾಯಕಿ ಕುಳಿತು ತಮ್ಮ ಕೈಯಲ್ಲಿದ್ದ ಮೊಬೈಲನ್ನು ನಸು ನಾಚಿಕೆಯಲ್ಲಿ ತಲೆ ಬಗ್ಗಿಸಿ ಮುಗುಳು ನಗೆ ಬೀರಿ ನೋಡುತ್ತಿದ್ದಳು.
ಅವಳಿಂದ ಸರಿಯಾಗಿ ಎರಡು ಸೀಟು ಹಿಂದೆ ಟೈಟ್ ಜೀನ್ಸು, ಬ್ರೈಟು ಮುಖ ಹೊತ್ತ ಹುಡುಗನೊಬ್ಬ 'ಮೈಸೂರ್ ಸಿಲ್ಕ್ ಪ್ಯಾಲೆಸ್' ಎಂಬ ಹೆಸರು ಹೊತ್ತ ಕಡು ಹಳದಿಯ, ನುಣುಪಾದ ಪ್ಲಾಸ್ಟಿಕ್ ಲಕೋಟೆಯನ್ನು ತನ್ನ ತೊಡೆಯ ಮೇಲಿಟ್ಟು ಅದರ ಮೇಲೆ ಇಟ್ಟಿಗೆಯಷ್ಟಗಲದ ತನ್ನ ಮೊಬೈಲನ್ನು ಮಲಗಿಸಿ ಆಗೊಮ್ಮೆ ಈಗೊಮ್ಮೆ ಹುಡುಗಿಯ ಕಡೆ ಕಳ್ಳ ನೋಟ ಬೀರುತ್ತಾ ಕುಳಿತಿದ್ದ.ಅವರಿಬ್ಬರನ್ನು ಯಾವ ಮಾಯೆ ಜೊತೆಯಾಗಿ ಬಂಧಿಸಿತ್ತೋ ಏನೋ..
ನಾನು ಬಸ್ಸು ಹತ್ತಿ ಕುಳಿತು ಸರಿಯಾಗಿ ಇಪ್ಪತ್ತು ನಿಮಿಷ ಕಳೆದೊಡನೆ ಅವಳು ತನ್ನ ಮೊಬೈಲನ್ನು ಪರ್ಸಿನೊಳಗೆ ಸೇರಿಸಿಕೊಳ್ಳುತ್ತಾ ಚೂಡಿದಾರದ ಶಾಲನ್ನು ಸರಿಪಡಿಸಿಕೊಳ್ಳುತ್ತಾ ತನ್ನಿಂದ ಎರಡು ಸೀಟು ಹಿಂದೆ ಕುಳಿತ ಹುಡುಗನ ಕಡೆಗೊಂದು ಕಣ್ಬಾಣ ಎಸೆದು ಘಾಸಿಗೊಳಿಸಿ ತನ್ನಂತೆ ಇಳಿಯ ಹೊರಟ ಉಳಿದ ಹುಡುಗಿಯರ ಸಾಲನ್ನು ಸೇರುತ್ತಿದ್ದಳು. ಅವರ ಜೊತೆಯಲ್ಲೇ ಸ್ವಲ್ಪ ದೂರದಲ್ಲಿ ಕಾಣುತ್ತಿದ್ದ 'ಕ್ಯಾsಷ್ಯೂ ಫ್ಯಾಕ್ಟರಿ' ಎಂಬ ಬೋರ್ಡು ಹಾಕಿದ ಕಟ್ಟಡದೆಡೆಗೆ ನಡೆಯುತ್ತಿದ್ದಳು.
ಅವಳ ಶಾಲಿನ ಕುಚ್ಚಿನ ತುದಿಯ ನೂಲೂ ಮರೆಯಾಗುವವರೆಗೆ ಅವಳನ್ನು ನೋಡುವ ಯುವಕ ಮತ್ತೆ ಅನಾಥನಂತೆ ಇತ್ತ ತಿರುಗಿ, ತನ್ನ ಮೊಬೈಲನ್ನು ಕುಳಿತಲ್ಲೇ ತನ್ನ ಪಾಂಟಿನ ಕಿಸೆಗೆ ಸೇರಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದ. ಮುಂದಿನ ಸ್ಟಾಪಿನಲ್ಲಿ ದೊಡ್ಡದಾಗಿ ಕಾಣುವ 'ಗಣೇಶ್ ಗ್ಯಾರೇಜ್' ಎಂಬಲ್ಲಿಗೆ ಅವನ ಬೆಳಗಿನ ಪಯಣದ ಕೊನೆ.
ಹಾಗೆಂದು ಅವರು ಬಸ್ಸಿನಲ್ಲಿ ಒಂದು ಸಲವೂ ಮಾತಾಡಿಕೊಂಡದ್ದು ಇಲ್ಲವೇ ಇಲ್ಲ ಎನ್ನುವ ಹಾಗಿಲ್ಲ ಎಂಬುದಕ್ಕೆ ಅವರ ಮೊದಲ ಭೇಟಿಯೇ ಸಾಕ್ಷಿ. ಅದೆಲ್ಲಿಯೋ, ಯಾವೂರಲ್ಲಿಯೋ ನಡೆದ ಕೋಮುಗಲಭೆ ಎಂಬ ಹಳಸಲು ಪದಕ್ಕೆ ಮರ್ಯಾದೆ ಒದಗಿಸುವ ಕೆಲಸಕ್ಕೆ, ಬೇರೇನೂ ಕೆಲಸವಿಲ್ಲದ ಕೆಲ ನಮ್ಮೂರ ಯುವಕರೂ ಉತ್ಸಾಹದಿಂದ ಧುಮುಕಿದ್ದರು.ಅಲ್ಲಿಯವರೆಗೆ ನಾನು ಗಮನಿಸದ ಇದೇ ಈ ಕಥೆಯ ನಾಯಕಿ ಆಗಷ್ಟೇ ತಾನಿಳಿಯುವ ಜಾಗ ಬಂತೆಂದು ಎದ್ದು ನಿಂತಿದ್ದಳು. ಆಗಲೇ ಬಸ್ಸಿನ ಗಾಜಿಗೆ ಎಲ್ಲಿಂದಲೋ ಕಲ್ಲೊಂದು ಅಪ್ಪಳಿಸಿ ಗಾಜನ್ನು ಭೇದಿಸಿತ್ತು. ಹೆದರಿದ ಹರಿಣಿಯಂತಾದ ಆಕೆ ಆ ಆಘಾತಕ್ಕೋ, ಬಸ್ಸಿನ ಡ್ರೈವರ್ ಅದೇ ಕಾಲಕ್ಕೆ ಅದುಮಿದ ಬ್ರೇಕಿಗೋ ವಾಲಾಡಿ ಕುಳಿತಿದ್ದ ಯುವಕನ ಮಡಿಲಿಗೆ ಬಿದ್ದಿದ್ದಳು.
ಇದರಿಂದ ಯುವಕನ ಮೈಗೆ ಮಿಂಚು ಬಡಿದು, ಇದ್ದಕ್ಕಿದ್ದಂತೆ ಕ್ಷಾತ್ರ ತೇಜನ್ನು ಉಕ್ಕೇರಿ ' ಯಾವನವನು ... ಮಗ, ಬಸ್ಸಿಗೆ ಕಲ್ಲೆಸದವನು, ಧೈರ್ಯವಿದ್ದರೆ ಬಾ ಮುಂದೆ' ಎಂದು ಹುಡುಗಿಯ ತೋಳನ್ನು ಬಿಗಿಯಾಗಿಯೇ ಹಿಡಿದು ಯಕ್ಷಗಾನದ ಆರ್ಭಟೆ ತೆಗೆದೇ ಬಿಟ್ಟ. ಆ ದಿನ ಮುಂದಿನ ಸ್ಟಾಪಿನಲ್ಲಿ ಇಳಿಯಬೇಕಾದ ಆತ ಅಲ್ಲೇ ಹುಡುಗಿಯೊಂದಿಗೆ ಇಳಿದು ಅವಳು ಅವಳ ಫ್ಯಾಕ್ಟರಿ ಗೇಟ್ ದಾಟಿದ ಮೇಲೆಯೇ ಬಂದಿದ್ದು. ಬಸ್ಸಿನವರು ಕೂಡಾ ಆತನ ಸಾಹಸಕ್ಕೆ ಸರ್ಟಿಫಿಕೇಟ್ ಕೊಡುವವರಂತೆ ಅವನು ಬರುವವರೆಗೆ ನಿಲ್ಲಿಸಿಯೇ ಇದ್ದರು.
ಮತ್ತಿನದೆಲ್ಲಾ ನೀವು ಸಿನಿಮಾದಲ್ಲಿ ನೋಡಿದ ಹಾಗೆ. ಒಮ್ಮೊಮ್ಮೆ ಅವಳು ತನ್ನ ಸ್ಟಾಪ್ ಬರುವಾಗಲೂ ಏಳದೇ, ಆ ದಿನ ಇವನೂ ತನ್ನ ಗ್ಯಾರೇಜ್ ಕಡೆ ಮೊಗ ತಿರುಗಿಸದೇ ಅದರ ನಂತರದ ಪಿಕ್ಚರ್ ಥಿಯೇಟರ್ ಸ್ಟಾಪಿನಲ್ಲಿ ಇಳಿಯುತ್ತಿದ್ದರು. ನನಗೂ ಬೇರೇನೂ ಕೆಲಸವಿಲ್ಲದೇ ನಾನೂ ಅವರ ಹಿಂದಿನಿಂದಲೇ ಇಳಿದು ಥಿಯೇಟರಿನೊಳಗೆ ನುಗ್ಗುತ್ತಿದ್ದೆ. ಒಳಗೆ ನಡೆದೊಡನೇ ಅವರ ಕೈ ಕೈ ಸೇರಿಕೊಳ್ಳುತ್ತಿತ್ತು. ಕಣ್ಣಿಗೆ ಕಣ್ಣೂ ಕೂಡುತ್ತಿತ್ತೋ ಏನೋ ಆ ಕತ್ತಲಿನಲ್ಲಿ ನನಗದು ಕಾಣುತ್ತಿರಲಿಲ್ಲ. ಮತ್ತೆ ಕೆಲವೊಮ್ಮೆ ಕೊನೆಯ ಸ್ಟಾಪ್ ಆದ ಬೀಚಿನ ಮಾರ್ಗದಲ್ಲಿ ಸಾಗುತ್ತಿದ್ದರು. ಬಿಸಿಯಾದ ಮರಳ ಮೇಲೆ ಹಾಯಾಗಿ ಕುಳಿತು ಸಮುದ್ರದ ಅಲೆಗಳನ್ನು ಲೆಕ್ಕ ಹಾಕುವವರಂತೆ ಗಂಟೆಗಟ್ಟಲೆ ಜೊತೆಯಾಗಿ ಕುಳಿತು ಬಿಡುತ್ತಿದ್ದರು. ಆಗಂತೂ ನಾನು ನನ್ನ ಬೋಳು ಮಂಡೆಗೆ ಬಿಸಿಯ ಝಳ ತಡೆಯಲಸಾಧ್ಯವಾಗಿ ಈ ಊರಿಗೆ ಬೀಚ್ ಯಾಕೆ ಬೇಕಿತ್ತು ಎಂದು ಶಪಿಸಿದ್ದಿತ್ತು.
ಇದಲ್ಲದೆ ನಮ್ಮೂರ ಪಾರ್ಕಿನ ಲಂಟಾನ ಬಲ್ಲೆಯ ಮೂಲೆಯಲ್ಲಿ ಕಾಲು ಚಾಚಿ ಕೂರುತ್ತಿದ್ದ ಅವರನ್ನು ನಾನು ಕಂಡಿದ್ದೇನೆ. ಕೆಲವೊಮ್ಮೆ ಅಲ್ಲೇ ಇರುವ ಕಲ್ಲಿನ ಮೇಲೋ, ಮರದ ಬೊಡ್ಡೆಯ ಮೇಲೋ ತಮ್ಮ ಹೆಸರುಗಳನ್ನು ಕೆತ್ತಿ ಅಮರ ಶಿಲ್ಪಿಯ ಫೋಸ್ ಕೊಡುತ್ತಿದ್ದ ಹುಡುಗನನ್ನು ಹತ್ತಿರಕ್ಕೆ ಎಳೆದು ಕೂರಿಸುತ್ತಿದ್ದ ಅವಳು ಕಾಣಿಸುತ್ತಿದ್ದಳು. ಹೀಗೆ ಅವರ ಪ್ರೇಮ ದಿನದಿಂದ ದಿನಕ್ಕೆ ನಿರ್ಮಲವಾಗುತ್ತಾ ಸಾಗಿದಂತೆ ನನಗೆ ನೋಡುವ ಕೆಲಸ ಹೆಚ್ಚಾಗುತ್ತಾ ಹೋಯಿತು.
ಇನ್ನು ಮುಂದಿನದನ್ನು ಕೇಳಲು ನೀವು ಆತುರರಾಗಿದ್ದೀರಿ ಎಂದು ನನಗೆ ತಿಳಿದಿದೆ ಆದರೇನು ಮಾಡಲಿ ಹೊತ್ತಲ್ಲದ ಹೊತ್ತಿನಲ್ಲಿ ಹರೆಯ ಬಂದವರಂತೆ ಅವರ ಬೆನ್ನ ಹಿಂದೆ ಅಲೆದುದಕ್ಕೋ ಏನೋ ಇದ್ದಕ್ಕಿದ್ದಂತೆ ಕಾಲು ಗಂಟು ನೋವು ಪ್ರಾರಂಭವಾಯಿತು. ಅದು ನೋವು ಎಂದರೆ ಅಂತಿಂತದಲ್ಲ.. ಕಾಲೆತ್ತಿ ಇಡುವುದೇ ನರಕಯಾತನೆಯಾಯಿತು. ಇದರಿಂದಾಗಿ ನನ್ನ ಬಸ್ಸು ಪ್ರಯಾಣ ನಿಂತೇ ಹೋಯಿತು.
ಸುಮಾರು ಎರಡು ಮೂರು ವರ್ಷಗಳೇ ಉರುಳಿತ್ತು ನಾನು ಮನೆಯಿಂದ ಅಲುಗಾಡದೇ..
ಆದರೀಗ ಕಾಲು ನೋವಿಗೆ ಕೊನೆಯ ಪರಿಹಾರವಾಗಿ ಆಪರೇಷನ್ ಸೂಕ್ತ ಎಂದು ಹೇಳಿದ್ದರಿಂದ ದೊಡ್ಡಾಸ್ಪತ್ರೆಗೆ ಸೇರಿ ರೂಮ್ ನಂ. 302 ರ ಖಾಯಂವಾಸಿಯಾಗಿಯೇ ಎರಡು ತಿಂಗಳು ಕಳೆದಿತ್ತು. ಈಗ ಡಾಕ್ಟರು ಪ್ರತಿದಿನ ಕಾರಿಡಾರಿನಲ್ಲೇ ನಿಧಾನಕ್ಕೆ ನಡೆದಾಡಬೇಕೆಂದು ಸೂಚಿಸಿದ ಕಾರಣ ನಾನು ಮಲಗಿ ಬೇಸರಾದಾಗ ಅದನ್ನೇ ಮಾಡುತ್ತಿರುತ್ತೇನೆ.
ಆ ದಿನವೂ ಅತ್ತಿತ್ತ ಠಳಾಯಿಸುತ್ತಾ ಇರಬೇಕಾದರೆ ಅವಳನ್ನು ಕಂಡದ್ದು. ತುಂಬಿದ ಬಸುರಿಯನ್ನು ಸೀದಾ ನನ್ನೆದುರಿದ್ದ ಲೇಬರ್ ರೂಮಿಗೆ ಕರೆದೊದ್ದರು. ನನಗೂ ಈ ಆಸ್ಪತ್ರೆಯಲ್ಲಿ ಈ ಲೇಬರ್ ರೂಮಿನ ಎದುರು ನಡೆದಾದುವುದೆಂದರೆ ಅತಿ ಪ್ರಿಯ. ಅಲ್ಲಿನ ಕಾತರತೆ, ಹೊಸ ಜೀವದ ಸ್ವಾಗತಕ್ಕೆ ಸಂಭ್ರಮದ ಸಿದ್ದತೆ, ಕೆಲವೊಮ್ಮೆ ನಿರಾಸೆ. ಇದೆಲ್ಲವನ್ನೂ ನನ್ನ ಅಳತೆಯಲ್ಲಿ ಅಳೆಯುವುದು ನನಗೆ ಪ್ರಿಯವಾಗಿತ್ತು. ಮತ್ತೂ ಒಂದು ಗುಟ್ಟಿನ ವಿಷಯವೆಂದರೆ ಈ ಆಸ್ಪತ್ರೆಯ ಕ್ಯಾಂಟೀನಿನ ಒಂದೇ ರುಚಿಯ ನೀರು ಬಣ್ಣದ ಸಾರು, ಮೆಣಸಿನ ಬಣ್ಣದ ಸಾಂಬಾರು ಎಂಬ ಮತ್ತೊಂದು ನೀರು ಇದನ್ನೇ ತಿಂದು ತಿಂದು ಬಾಯಿ ರುಚಿ ಸತ್ತಿರುವಾಗ ಈ ವಾರ್ಡಿನ ಎದುರು ಹೆಚ್ಚಾಗಿ ಹೊಸ ಜೀವ ಹುಟ್ಟಿದ ಸಂತಸಕ್ಕಾಗಿ ಜನರು ಹಂಚುತ್ತಿದ್ದ ಲಾಡು, ಮೈಸೂರ್ ಪಾಕ್, ಪೇಡೆಗಳೇ ನನ್ನ ಜಿಹ್ವೆಯನ್ನು ಜೀವಂತವಿಡುತ್ತಿದ್ದುದು.
ಆ ದಿನ ನನ್ನ ಕಣ್ಣುಗಳಿಗೆ ಇನ್ನೂ ಒಂದು ಅಚ್ಚರಿ ಕಾದಿತ್ತು. ಅದೇ ಬಸ್ಸಿನ ಯುವಕ ಲೇಬರ್ ವಾರ್ಡಿನ ಹೊರಗೆ ಮುಖ ಕಿವುಚಿಕೊಂಡು ಅತ್ತಿತ್ತ ಸುಳಿದಾಡುತ್ತಿದ್ದ. ಸ್ವಲ್ಪ ಹೊತ್ತಿನಲ್ಲಿ ಗೋಡೆಯ ಮೇಲೆ ಉರಿದ ಹಸಿರು ಲೈಟಿನ ಕೆಳಗಿನ ಬಾಗಿಲಿಗೆ ಎರಗಿ ಒಳಗಿನ ಪಲಿತಾಂಶಕ್ಕಾಗಿ ಕಾದು ನಿಂದ. ನರ್ಸೊಬ್ಬಳು ಇಣುಕಿ ಇವನ ಮುಖ ನೋಡಿ ನಗುತ್ತಾ 'ಹೆಣ್ಣು ಮಗು' ಎಂದು ಹೇಳಿ ಬಾಗಿಲು ಮುಚ್ಚಿಕೊಂಡಳು. ನಿಂತಲ್ಲೇ ಕುಪ್ಪಳಿಸಿದ. ಅವನು ಮೊದಲೇ ಕೈಯಲ್ಲಿ ಹಿಡಿದಿದ್ದ ದೊಡ್ಡ ಡಬ್ಬದಿಂದ ಸೋನ್ ಪಾಪ್ಡಿ ಹಂಚತೊಡಗಿದ.ನನ್ನ ಕೈಗೂ ಒಂದು ತುಂಡು ಬಿದ್ದಿತು. ಅದರ ನವಿರಾದ ಎಳೆಗಳನ್ನು ಆಸ್ವಾದಿಸುತ್ತಾ ಈ ಸೋನ್ ಪಪ್ಡಿಯನ್ನು ಯಾರು ಕಂಡು ಹಿಡಿದರಪ್ಪಾ ಎಂದು ಅಚ್ಚರಿ ಪಡುತ್ತಾ ಆಲೋಚಿಸುತ್ತಿರುವಾಗಲೇ ಆ ಯುವಕ ದೂರಕ್ಕೆ ನಡೆದು ನನ್ನ ಕಣ್ಣಿಂದ ಮರೆಯಾದ.
ಮತ್ತೊಮ್ಮೆ ಲೇಬರ್ ವಾರ್ಡ್ ಬಾಗಿಲು ತೆರೆಯಿತು. ಹೊರಗೆ ನಿಂತಿದ್ದವರು ಎದ್ದು ಬಾಗಿಲ ಬಳಿ ನಿಂತರು. ಆ ಹುಡುಗಿಯನ್ನು ಸ್ಟ್ರೆಚರಿನಲ್ಲಿ ಮಲಗಿಸಿ ಹೊರಗೆ ಕರೆತರುತ್ತಿದ್ದರು. ಅವಳ ಜೊತೆ ಇದ್ದವರಾರೋ ನನ್ನ ಕೈಗೆ ಮೋತೀ ಚೂರ್ ಲಡ್ಡೊಂದನ್ನು ತುರುಕಿ 'ಗಂಡು ಮಗು' ಎಂದರು.
ಅವಳನ್ನು ರೂಮ್ ನಂ. 337 ಕ್ಕೆ ಕರೆದೊಯ್ದರೆ ಅವನು ರೂಂ. ನಂ. 372ರಲ್ಲಿ ಕಾಯುತ್ತಾ ನಿಂತಿದ್ದ.
ಚೆನ್ನಾಗಿದೆ ..... ಬರಹ.. ಮೇಡಂ ...
ReplyDeleteತಿಂದು ತಿಂದು ಬಾಯಿ ರುಚಿ ಸತ್ತಿರುವಾಗ ಈ ವಾರ್ಡಿನ ಎದುರು ಹೆಚ್ಚಾಗಿ ಹೊಸ ಜೀವ ಹುಟ್ಟಿದ ಸಂತಸಕ್ಕಾಗಿ ಜನರು ಹಂಚುತ್ತಿದ್ದ ಲಾಡು, ಮೈಸೂರ್ ಪಾಕ್, ಪೇಡೆಗಳೇ ನನ್ನ ಜಿಹ್ವೆಯನ್ನು ಜೀವಂತವಿಡುತ್ತಿದ್ದುದು. >> :D :D nakkU nakkU sustaaytu akka... Twist and turn chennagi bandide :)
ReplyDeleteವಿಶಿಷ್ಟ ಕಥೆ. ಅಂತ್ಯ ಮನಗೆದ್ದಿತು.
ReplyDeleteGreat narration Akko..good one :)
ReplyDeleteಓ ಮನಸೇ ಯಲ್ಲಿಯೇ ಓದಿಯಾಯ್ತು
ReplyDeleteಇಷ್ಟಪಟ್ಟಾಯ್ತು..
ಒಂದು ವಿಭಿನ್ನ ಮತ್ತು ವಾಸ್ತವದ ನೆಲೆಗಟ್ಟಲ್ಲಿ ಮೂಡಿ ಬಂದ ಪ್ರೇಮ ಕಥೆ ಇದು..
ಕಥೆಯ ನಿರೂಪಣೆಯನ್ನು ಹೊತ್ತಿದ್ದ ಪಾತ್ರವೇ ಬಹಳ ವಿಶೇಷವೆನಿಸಿದ್ದು ನನಗೆ..
ಖುಷಿಯಾಯ್ತು..
Beautiful..... Ani, neevu prasthuthapaDisuva reetiyinda kathe innashtu ishtavaaythu :) madh-madhye nagisuva nimma saalugaLu sooper :)
ReplyDeleteನಿರೂಪಣೆ ಇಷ್ಟ ಆಯ್ತು.. ಕಥೆಯ ಅಂತ್ಯದಲ್ಲಿ ಅಚ್ಚರಿಯಾಯಿತು. ತುಂಬ ಚೆನ್ನಾಗಿದೆ!
ReplyDelete