ಬಸ್ಸಿನಲ್ಲಿ ಕಿಟಕಿಯ ಪಕ್ಕ ಕುಳಿತಿದ್ದ ಅವಳಿಗೆ ಹೊರಗಿನಿಂದ ಬೀಸುತ್ತಿದ್ದ ಚಳಿಗಾಳಿ ಮುಖಕ್ಕೆ ಬಡಿಯುತ್ತಿದ್ದರೂ ಹಣೆಯಲ್ಲಿ ಬೆವರ ಹನಿ. ಮೈಯಲ್ಲೇನೋ ನಡುಕ. ಎದೆ ಬಡಿತದ ಸದ್ದು ಅವಳಿಗೇ ಕೇಳಿಸುತ್ತಿತ್ತು. ಹಿಂದಿನಿಂದ ಬರುತ್ತಿದ್ದ ಅವನ ಹೆಜ್ಜೆಗಳು ತನ್ನನ್ನು ಸಮೀಪಿಸುತ್ತಿವೆ ಎಂದು ಅವಳಿಗೆ ನೋಡದೆಯೂ ತಿಳಿಯುತ್ತಿತ್ತು.. ಪ್ರತಿ ದಿನ ನೋಡುವವನೇ..
ಆದರೂ ಇಂದು ಇಷ್ಟು ಜನರ ಎದುರಲ್ಲೇನಾದರೂ ಅವನು ಮಾತನಾಡಿದರೆ..
ಮತ್ತಷ್ಟು ಮುದುರಿದಳು. ಅವನ ಹೆಜ್ಜೆ ಇನ್ನಷ್ಟು ಹತ್ತಿರಕ್ಕೆ ಬಂತು..
ಬೇರೇನೂ ಮಾಡಲರಿಯದೇ ಅವಳು ಕೈಯಲ್ಲಿದ್ದ ಕರ್ಚೀಫನ್ನು ಕೆಳ ಹಾಕಿ ಅದನ್ನು ಹುಡುಕುವಂತೆ ನಟನೆ ಮಾಡುತ್ತಾ ಬಗ್ಗಿದಳು. ಸ್ವಲ್ಪ ಹೊತ್ತು ಅವನ ಹೆಜ್ಜೆಗಳು ಅಲ್ಲಿಯೇ ತಟಸ್ಥವಾಗಿ ನಿಂತಿದ್ದು ಅವಳಿಗೆ ಅರಿವಾಯಿತು. ಬಗ್ಗಿಸಿದ ತಲೆಯನ್ನು ಎತ್ತಲೇ ಇಲ್ಲ.
ಮೆಲ್ಲನೆ ಹೆಜ್ಜೆಗಳ ಸದ್ದು ಮುಂದಕ್ಕೆ ಚಲಿಸತೊಡಗಿತು. ಅಬ್ಬಾ ಎಂದು ನಿಟ್ಟುಸಿರು ಬಿಡುತ್ತಾ ತಲೆ ಎತ್ತಿ ಅವನ ಕಡೆಗೆ ನೋಡದೇ ಕುಳಿತುಬಿಟ್ಟಳು.
ಬಸ್ಸು ನಿಂತಿತು.
ಎಲ್ಲರೂ ಇಳಿಯುವ ಮೊದಲೇ ಅವನು ಬಾಗಿಲಿನ ಕೆಳಗಿಳಿದು ನಿಂತಿದ್ದ.
ಸ್ವಲ್ಪವೂ ಜಾರದಂತೆ ಪಿನ್ ಮಾಡಿದ್ದ ಚೂಡಿದಾರದ ಶಾಲನ್ನು ಸುಮ್ಮಸುಮ್ಮನೆ ಎಳೆದೆಳೆದು ಸರಿ ಮಾಡಿಕೊಳ್ಳುತ್ತಾ ಅವನ ಪಕ್ಕದಿಂದ ದಾಟಲು ಪ್ರಯತ್ಸಿಸಿದಳು.
ಆದರೂ ಅವನ ಮೊಗದ ಭಾವವನ್ನು ಈಕ್ಷಿಸುವ ಕುತೂಹಲ ಹತ್ತಿಕ್ಕಲಾರದೇ ಕಣ್ಣೆತ್ತಿದ್ದಳಷ್ಟೇ..
'ನಾಳೆಯಿಂದ ಬಸ್ ಪಾಸ್ ತಾರದೇ ಬಸ್ಸಿಗೆ ಹತ್ತಬೇಡಿ..' ಎಂದು ಅವಳಿಗೆ ಮಾತ್ರ ಕೇಳುವಂತೆ ಸಣ್ಣದಾಗಿ ಹೇಳಿ, 'ರೈಟ್' ಎಂದು ಕಿರುಚುತ್ತಾ ಬಸ್ಸೇರಿದ ಅವನ ಅಂಗಿಯ ಖಾಕಿ ಬಣ್ಣ ಅವಳ ಕಣ್ಣಿನಿಂದ ಮೆಲ್ಲನೆ ಮರೆಯಾಯಿತು.
ಎಂತ ಮುಜುಗರದ ಕ್ಷಣ ಪಾಪ ಆಕೆಯದು?
ReplyDeleteಸಂಶಯವನ್ನು ವಸ್ತುವಾಗಿಸಿ ಹೆಣೆದ ಕಥೆ ಕೊನೆಯ ಸಾಲಿಗೆ ಬಂದಾಗ "ಹ ಹ ಹ" ತರಿಸಿದ್ದಂತೂ ದಿಟ. ಇಷ್ಟವಾಯಿತು!
ReplyDeleteThe story is in kannada mixed with English ,it leads confusion to under stand ! please write in either kannada script or in English ! I prefer kannada !
ReplyDeleteನಿಮಗೆ ಯಾವ ಆಂಗ್ಲ ಶಬ್ಧ ತೊಂದರೆ ಕೊಟ್ಟಿತು ಎಂಬುದನ್ನು ಬಿಡಿಸಿ ಹೇಳಿದರೆ ಅರ್ಥವಾದೀತಷ್ಟೆ.. ನನಗೆ ಈ ಕಥೆಯಲ್ಲಿ ಅಂತಹ ಯಾವುದೇ ಆಂಗ್ಲಪದಗಳು ಕಾಣಿಸುತ್ತಿಲ್ಲ ..
DeleteShaale dinagalanna nenapu maadithu...sogasagide
ReplyDeleteChennagide kathe....
ReplyDeleteಸರಳ ಸುಂದರ ಕಥೆ....ಇಷ್ಟವಾಯಿತು...
ReplyDelete