ಮನುಷ್ಯ ಸ್ವಭಾವವೇ ಹೀಗೆ. ಎಲ್ಲವನ್ನೂ ತನ್ನ ಮೂಗಿನ ನೇರಕ್ಕೆ ನೋಡುವುದು, ತನ್ನ ತಿಳುವಳಿಕೆಯ ವ್ಯಾಪ್ತಿಯನ್ನೇ ಸರಿ ಎಂದುಕೊಳ್ಳುವುದು, ತಪ್ಪುಗಳು ಘಟಿಸುವುದೇನಿದ್ದರೂ ಪರರಿಂದ ನಾನ್ಯಾವತ್ತೂ ಮಿಸ್ಟರ್ ರೈಟ್ ಅಂತಲೇ ಅಂದುಕೊಳ್ಳುವುದು. ಆದರೂ ಒಮ್ಮೊಮ್ಮೆ ತಪ್ಪುಗಾರನಾಗಲೇಬೇಕಾಗಿ ಬಂದಾಗ ಅದನ್ನು ತನ್ನ ತಪ್ಪು ಎಂದು ಒಪ್ಪಿಕೊಳ್ಳದೆ ಇನ್ನೊಬ್ಬರ ಮೇಲೆ ನಯವಾಗಿ ಜಾರಿಸಿಬಿಡುವುದು. ಅದೂ ವಿರೋಧಕ್ಕೆ ಎಡೆಯಿಲ್ಲದಂತೆ ..
ಅಂಕಪರದೆ ಮೇಲೇರಿದೊಡನೇ ಕಥೆಯೊಂದು ಶುರುವಾಗುತ್ತದೆ.
ಇದರಲ್ಲೂ ಒಬ್ಬ ಆಮ್ ಆದ್ಮಿ ಇದ್ದಾನೆ. ಸಮಾಜದ ಓರೆಕೋರೆಗಳನ್ನು ನೇರವಾಗಿಸುವ ಮನಸ್ಸು ಇದ್ದರೂ ಅದನ್ನು ಆಗಗೊಡದಂತೆ ಮಾಡುವ ವ್ಯವಸ್ಥೆಗೆ ಬಲಿಯಾಗಲೇ ಬೇಕಾದ ಅನಿವಾರ್ಯತೆ ಅವನದ್ದು.
ಹಾಳಾದ ತನ್ನ ಹಳೇ ಜೀಪನ್ನು ಸರಿ ಮಾಡುತ್ತಾ ಕುಳಿತಿದ್ದವನ ಬಳಿ ಬಂದವ ಲೈನ್ ಮ್ಯಾನ್. ಅವನ ಗಮನ ಸೆಳೆಯಲು ಬಾರದಿರುವ ಕೆಮ್ಮನ್ನು ಬರಿಸಿಕೊಳ್ಳುತ್ತಾನೆ. ಕತ್ತೆತ್ತಿ ನೋಡಿದವನ ಹತ್ತಿರ ತನ್ನ ಕಷ್ಟಗಳನ್ನು ಬಗೆ ಬಗೆಯಾಗಿ ಬಣ್ಣಿಸುತ್ತಾ ಆ ಹಾಳು 'ಕೃಷ್ಣೇಗೌಡರ ಆನೆ'ಯ ದೆಸೆಯಿಂದ ತಾನು ಅನುಭವಿಸುತ್ತಿರುವ ಅವಸ್ಥೆಗಾಗಿ ಆತ ಮರುಕಪಡುವಂತೆ ಮಾಡುತ್ತಾನೆ. ಮತ್ತು ತನಗೀಗ ಅವಶ್ಯ ಬೇಕಾದ ಕೊಡಲಿಯ ಬೇಡಿಕೆಯನ್ನು ನಯವಾಗಿ ಇಡುತ್ತಾನೆ.
ಈಗ ' ಆಮ್ ಆದ್ಮಿ' ಕಥೆಗಾರನಾಗುತ್ತಾನೆ. ಹೇಗೆ ಕೃಷ್ಣೇಗೌಡರ ಆನೆ ನಮ್ಮೂರಿಗೆ ಬಂತು ಎನ್ನುವಲ್ಲಿಂದ ನೆನಪುಗಳನ್ನು ಹೆಕ್ಕಿ ತೆಗೆಯುತ್ತಾನೆ.
ರಾಜ ಮಹಾರಾಜರ ತಲೆ ಮೇಲೆ ಕೈಟ್ಟು ಆಶೀರ್ವಾದ ಮಾಡುವುದು ಬಿಟ್ಟರೆ ಬೇರೇನೂ ಮಾಡದ ಮಠವೊಂದು ತನ್ನ ಬಳಿ ಇರುವ ಆನೆಯನ್ನು ಅದರ ಕೊರತೆಗಳನ್ನು ಮುಚ್ಚಿಟು , ಕುಡುಕ ಮಾವುತನನ್ನು ಸರಿಪಡಿಸಲಾಗದೇ ಸಿಕ್ಕ ಹಣಕ್ಕೆ ಮಾರುತ್ತದೆ. ಅದನ್ನು ಕೊಂಡುಕೊಂಡ ಮನುಷ್ಯನು ಕೂಡಾ ಸ್ವಾರ್ಥಿಯೇ..
ಘಟ್ಟದ ಮೇಲೆ ಬೆಂಕಿಪೆಟ್ಟಿಗೆಗಾಗಿ ಮರ ಕಡಿಯುವ ಕಂಪೆನಿಯೊಂದು ಗುತ್ತಿಗೆಗೆ ಕಾಡನ್ನು ಕಡಿಯುವ ಕೆಲಸ ಮಾಡಲಿದ್ದು ಅಲ್ಲಿ ಕಡಿಯುವ ಮರ ಸಾಗಿಸಲು ತನ್ನ ಆನೆಯನ್ನು ಬಾಡಿಗೆ ಕೊಟ್ಟು ಹಣ ಪಡೆಯುವ ಹಂಚಿಕೆ ಅವನದ್ದು.
ಆದರೆ ಮಠದಲ್ಲಿ ಕೊಟ್ಟದ್ದನ್ನು ತಿಂದು ಬೆಳೆದ ಆನೆ ಇಲ್ಲೂ ಬೇಡಿ ಬದುಕುವುದನ್ನೇ ವೃತ್ತಿಯಾಗಿಸುತ್ತದೆ. ತಾನು ನಡೆದದ್ದೇ ದಾರಿ ಎಂಬಂತೆ ಮೂಡಿಗೆರೆ ಬೀದಿ ಬೀದಿಯಲ್ಲಿ ಸುತ್ತುತ್ತದೆ. ಅವರಿವರು ಕೊಟ್ಟದ್ದನ್ನು ತಿಂದು ಬದುಕುತ್ತದೆ. ಆ ಊರಿನಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ತನ್ನ ಸಹಜ ನಡೆಂದ ತನಗೆ ತಿಳಿಯದಂತೆ ತಾನೇ ಹೊಣೆಗಾರನಾಗುತ್ತದೆ. ಕರೆಂಟ್ ಲೈನಿನ ಮೇಲೆ ಮರ ಬೀಳುವುದು, ಯಾವತ್ತೋ ಹಾಕಿದ್ದ ಕಂಬಗಳು ಆನೆಯ ಬೆನ್ನು ತುರಿಸುವ ಕ್ರಿಯೆಂದ ಮುರಿದು ಬೀಳುವುದು, ಅಂಗಡಿಯೊಂದನ್ನು ದೂಡಿ ಹಾಕುವುದು, ಕುರಿಗಳ ಶೆಡ್ಡಿನ ಮೇಲೆ ಮರ ಬೀಳಿಸುವುದು, ಇಷ್ಟು ಸಾಲದು ಎಂಬಂತೆ ಲಾರಿಯನ್ನು ಅಡ್ಡ ಹಾಕಿ ಬೀಳಿಸಿ ಅದರ ಡ್ರೈವರ್ ಸಾಯುವಂತೆ ಮಾಡುವುದು.. ಹೀಗೆ ಸರಣಿ ಪ್ರಕರಣಗಳು ನಡೆಯುತ್ತಾ ಹೋಗುತ್ತವೆ. ಎಲ್ಲರ ಬಾಯಲ್ಲಿಯೂ ಆನೆಯದ್ದೇ ಸುದ್ದಿ.
ಕೇವಲ ಮಾತಿನ ಪೌರುಷದಲ್ಲಿ ಎಲ್ಲವನ್ನೂ ವಿರೋಧಿಸುವ ಶ್ರೀಸಾಮಾನ್ಯ ಯಾವಾಗ ತಾನು ಘಟನೆಗಳಿಗೆ ಸಾಕ್ಷಿಯಾಗಿ ವಿವರಣೆ ನೀಡುವ ಹೊಣೆ ಹೊರಬೇಕಾಗುತ್ತದೋ ಆಗ ಮೆಲ್ಲನೆ ಅಲ್ಲಿಂದ ಮರೆಯಾಗಿಬಿಡುತ್ತಾನೆ. ಆದರೆ ಅದೇ ಘಟನೆಯ ಬಗೆಗೆ ರೆಕ್ಕೆ ಪುಕ್ಕ ಹಚ್ಚಿ ಗಾಳಿಯಲ್ಲಿ ಹಾರಬಿಡುವಾಗ ತಮ್ಮ ಪಾಲನ್ನು ದಾರಾಳವಾಗಿ ಸೇರಿಸುತ್ತಾ ಹೋಗುತ್ತಾನೆ.
ನಗು ಬರಿಸುವಂತೆ ಕಥೆ ಮುಂದುವರಿಯುತ್ತಾ ಹೋದಂತೆ ಆಳದಲ್ಲಿ ಚಿಂತನೆಯನ್ನು ಮೂಡಿಸುತ್ತಾ ಹೋಗುತ್ತದೆ. ವ್ಯವಸ್ಥೆಗಳನ್ನು ಎದುರಿಸಿ ಬದಲಿಸಲು ಒಗ್ಗೂಡದ ನಾವುಗಳು ಅದರ ತಣ್ಣಗಿನ ಕ್ರೌರ್ಯಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬಂದಾಗಲು ರೋಧಿಸುವುದನ್ನು ಬಿಟ್ಟು ಇನ್ನೇನೂ ಮಾಡಲಾರದೆ ಅದರ ಸುಳಿಯಲ್ಲಿ ಮುಳುಗುತ್ತಾ ಹೋಗುವುದನ್ನಿಲ್ಲಿ ಕಾಣಬಹುದು.
ಸರಕಾರದಿಂದ ಸಾಮಾನ್ಯ ಪ್ರಜೆಗಳ ಸಹಾಯಕ್ಕೆಂದು ರಚಿಸಲ್ಪಟ್ಟ, ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಬೇಕಾದ ವ್ಯವಸ್ಥೆಗಳು ಪ್ರತಿಷ್ಟೆಯನ್ನು ಮುಂದಿಟ್ಟು ತಮ್ಮ ತಮ್ಮಲ್ಲೇ ಬಡಿದಾಡಿಕೊಳ್ಳುತ್ತಾ ಹೋಗುತ್ತವೆ. ಎಲ್ಲಾ ನ್ಯೂನತೆಗಳಿಗೂ ಇನ್ನೊಬ್ಬನನ್ನು ಬೆಟ್ಟು ಮಾಡುತ್ತಾ ಹೋಗುತ್ತಾರೆ.. ವಿಚಾರಗಳು ಸರಿ ತಪ್ಪುಗಳ ವಿಮರ್ಶೆಯ ಒಳಗೂ ಸಿಗದೆ ಮನುಷ್ಯನ ಜೀವ ಅಗ್ಗವಾಗುತ್ತದೆ. ವ್ಯವಸ್ಥೆ ಅವನ ಕೊರಳಿನ ಹಗ್ಗವಾಗುತ್ತದೆ.
ಕಥೆ ಹೇಳುವವನು ಮೌನವಾಗುತ್ತಾನೆ ..
ಆದರೆ ದುರಂತದಲ್ಲಿ ಕೊನೆಯಾದಂತೆ ಕಾಣುವ ಕಥೆ ಇಲ್ಲಿ ನಿಲ್ಲದೆ ಮುಂದುವರಿಯುತ್ತಾ ಹೋಗುತ್ತದೆ. ಬಹುಷಃ ಪ್ರಪಂಚದ ಕೊಟ್ಟ ಕೊನೆಯ ಮನುಷ್ಯ ತಾನಾಗಿ ಹೊದ್ದು ಮಲಗಿದ ದಬ್ಬಾಳಿಕೆಯ ಹೊದಿಕೆಯನ್ನು ಕಿತ್ತೆಸೆಯುವವರೆಗೂ ಇದು ಮುಂದುವರಿಯುತ್ತಲೇ ಇರುತ್ತದೆ.
ಕಥೆಗಳು, ನಾಟಕಗಳು ಇದರಲ್ಲೆಲ್ಲಾ ಪಾತ್ರಗಳು ನಾಯಕ, ಖಳನಾಯಕ, ನಾಯಕಿ ಅಂತೆಲ್ಲಾ ಮನುಷ್ಯ ಸ್ವಭಾವಗಳನ್ನು ಹಂಚಿಕೊಳ್ಳುವುದು ಸಾಮಾನ್ಯ. ಆದರೆ ಕಥೆಯೇ ನಾಯಕನಾಗುವ ಮೂಲಕ 'ಕೃಷ್ಣೇಗೌಡರ ಆನೆ' ಪಾತ್ರದಾರಿಗಳ ಕೆಲಸವನ್ನು ಹಗುರಗೊಳಿಸುತ್ತದೇನೋ ಅನ್ನಿಸಿತು. ತೇಜಸ್ವಿಯವರ ಕಥೆಗಳ ಮೋಡಿಯೇ ಅಂತಹದು. ಸುಮ್ಮನೇ ಓದುವಾಗಲೇ ಅದು ನಿಮ್ಮನ್ನು ಕಾಡು ಮೇಡು ಅಲೆಸುವ, ನೀವೂ ಕಥೆಯೊಳಗೆ ನುಗ್ಗಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುವ ಶಕ್ತಿಯುಳ್ಳದ್ದು. ಅದನ್ನು ನಾಟಕವಾಗಿ ಒಂದು ಚೌಕಟ್ಟಿನೊಳಗೆ ಕೂರಿಸಿದಾಗ ಆ ಅಗಾಧತೆಯನ್ನೆಲ್ಲೋ ಸ್ವಲ್ಪ ಕಳೆದುಕೊಂಡ ಅನುಭವವಾಗುವುದು ಸತ್ಯ.
ಆದರೂ ನಗು ಉಕ್ಕಿಸುತ್ತಲೇ ಅಳು ತರಿಸುವ, ದುರಂತವಾದರೂ ಸುಖಾಂತದ ಬಯಕೆ ಮೂಡಿಸುವ ಇಂತಹ ಕಥೆಯ ಆಶಯ ನಮ್ಮೊಳಗೆ ಇಳಿಯುವಂತೆ ಮಾಡುವಲ್ಲಿ ನಾಟಕ ಯಶಸ್ವಿಯಾದದ್ದೇ ಅದರ ಹೆಚ್ಚುಗಾರಿಕೆ ಎನ್ನಬಹುದು.