ವೆಬ್ ಪತ್ರಿಕೆ ಕೆಂಡ ಸಂಪಿಗೆಯಲ್ಲಿ ಓದಿ ಆನಂದಿಸುತ್ತಿದ್ದ ಅವರ ಸರಣಿ ಬರಹಗಳು ಮೊದಲ ಬಾರಿಗೆ ನನ್ನನ್ನು ಅವರ ಬರವಣಿಗೆಯತ್ತ ಸೆಳೆದಿತ್ತು. ಪ್ರತಿಯೊಂದು ಬರಹದಲ್ಲೂ ಅವರ ಅನುಭವಗಳೇ ಹರಳು ಗಟ್ಟಿ ವಜ್ರದಂತೆ ಪ್ರತಿಫಲಿಸುತ್ತಿದ್ದವು. ಅವರ ಜೀವನ ಪ್ರೀತಿ, ಪರಿಸರದ ಬಗೆಗಿನ ಕಾಳಜಿ ಎದ್ದು ತೋರುತ್ತಿತ್ತು. ಇದರ ಜೊತೆಗೆ ಗಮನಿಸಿದ ವಿಷಯವೆಂದರೆ ಅವರ ಉತ್ತಮ ಹಾಸ್ಯ ಪ್ರಜ್ಞೆ. ತಮ್ಮನ್ನು ತಾವು ಹಾಸ್ಯ ಮಾಡಿಕೊಳ್ಳುತ್ತಾ, ನಮ್ಮ ತುಟಿಗಳಲ್ಲಿಯೂ ನಗೆ ಬುಗ್ಗೆ ಏಳುವಂತೆ ಮಾಡುತ್ತಿದ್ದ ಅವರ ಬರಹಗಳು ಕೃಯನ್ನೇ ಪ್ರಧಾನವಾಗಿಸಿ ನಮ್ಮದೇ ಸಮಸ್ಯೆಗಳು, ಉತ್ತರಗಳ ನಡುವೆ ಸಾಗುತ್ತಿದ್ದ ಕಾರಣ ಅವರು ನಮಗೆ ಆತ್ಮೀಯರೆನಿಸಿಕೊಂಡರು. ಅದೇ ಪತ್ರಿಕೆಯಲ್ಲಿ ನಾನು ಬರೆಯುತ್ತಿದ್ದ ಬರಹಗಳಿಗೆ ಹೊಸಬಳೆನ್ನುವ ಯಾವುದೇ ಪೂರ್ವಾಗ್ರಹಗಳಿಲ್ಲದ ಅವರ ಪ್ರತಿಕ್ರಿಯೆ ನನ್ನನ್ನು ಇನ್ನಷ್ಟು ಅವರ ಬಗ್ಗೆ ತಿಳಿಯುವಂತೆ ಮಾಡಿತು. ಹೀಗೆ ಪರಿಚಯವಾದವರೇ ಎಸ್. ಎಮ್. ಪೆಜತ್ತಾಯ. ಅಂದರೆ ನಮ್ಮೆಲ್ಲರ ಪ್ರೀತಿಯ ಪೆಜತ್ತಾಯ ಮಾಮ.
ಈ ಮೇಲ್ ಮೂಲಕ ಸಂಪರ್ಕ ಬೆಳೆಯಿತು. ಮೊದಲಿಗೆ ಲೇಖಕರೆಂದೇ ನನಗೆ ಪರಿಚಿತರಾದರೂ ಅವರಂತೂ ಖಡಾಖಂಡಿತವಾಗಿ ನಾನು ಲೇಖಕ ಅಲ್ಲ ಮಗಳೇ.. ನಾನು ಕೃಷಿಕ.. ನಾನು ಬರೆದ ಎಲ್ಲಾ ವಿಷಯಗಳು ನನ್ನ ಅನುಭವಕ್ಕೆ ಸಿಲುಕಿದ್ದಷ್ಟೇ.. ಕಲ್ಪನೆಗಳಲ್ಲ.. ಎಂದುಬಿಟ್ಟಿದ್ದರು.
ದೈಹಿಕವಾಗಿ ಬಸವಳಿಯುತ್ತಾ ಇದ್ದರೂ ತಮ್ಮ ನೋವನ್ನೇ ತಮಾಷೆಯ ವಸ್ತುವಾಗಿಸಿದ್ದರವರು. 'ನೋಡು ಮಗು ನೀನು ಸಣ್ಣವಳಾಗಿರುವಾಗ ಚಂದಾಮಾಮ ಓದಿದ್ದೀಯಾ? ಅದರಲ್ಲಿ ಒಂಟಿ ಕಣ್ಣಿನ ಒಂದು ಕಿವಿಯ ಬಕ್ಕ ತಲೆಯ ರಕ್ಕಸನ ಬಗ್ಗೆ ಗೊತ್ತುಂಟೋ.. ನೋಡಬೇಕು ಅಂತ ಇದ್ರೆ ಹೇಳು ನನ್ನ ಫೊಟೋ ಕಳಿಸ್ತೇನೆ.. ನನ್ನ ಒಂದು ಕಣ್ಣು ಕಾಣುವುದಿಲ್ಲ, ಒಂದು ಕಿವಿ ಪೊಟ್ಟಾಗಿದೆ. ಆದ್ರೆ ಬದುಕಲಿಕ್ಕೆ ಉಳಿದ ಒಂದು ಕಿವಿ ಒಂದು ಕಣ್ಣು ಸಾಕು ಮಗಳೇ.. ನನ್ನ ಅವಶ್ಯಕತೆಗಳನ್ನು ಅದೂ ಪೂರೈಸುತ್ತದೆ ಅಂದ್ರೆ ನಾನು ಆರೋಗ್ಯವಂತನೇ ಅಲ್ವಾ' ಎಂಬ ಮಾಮನ ಮಾತಿಗೆ ಯಾರಾದರೂ ತಲೆ ದೂಗಲೇ ಬೇಕು.
ಮತ್ತಿನ ನಮ್ಮ ಸಂಭಾಷಣೆಗಳೆಲ್ಲಾ 'ತೋಟಕ್ಕೆ ಮದ್ದು ಬಿಟ್ಟಾಯ್ತಾ ಮಗಳೇ.. ಈ ಸಲ ಯಾವ ಸ್ಪ್ರೇ ಮಾಡ್ತೀರಿ? ಕೊಕ್ಕೋ ಗಿಡ ಅಡಿಕೆಯ ಮಧ್ಯದಲ್ಲಿ ಚೆನ್ನಾಗಿ ಬರುತ್ತಾ ಮಗೂ, ನಮ್ಮಲ್ಲಿ ಹಂದಿಯ ಕಾಟ ಜೋರು ..ಹಂದಿ ಕೊಕ್ಕೋ ತಿನ್ನುತ್ತಾ.. ಹಾಗೇನಾದರೂ ತಿಂದರೆ ಪೇಟೆಯ ಮಕ್ಕಳು ಹಂದಿಯ ಪಿಟ್ಟೆಯನ್ನೂ ಚಾಕಲೇಟ್ ಅಂದುಕೊಂಡಾರೋ ಏನೋ? ನಮ್ಮ ಕಡೆ ಕಂಡಾಬಟ್ಟೆ ನವಿಲಿನ ಕಾಟ.. ಓಡಿಸುವ ಅಂದ್ರೆ ಎಲ್ಲಿಗೆ ಓಡಿಸುವುದು ಹೇಳು.. ಯಾವ ಬೇಲಿಯೂ ಹಾರುವ ಹಕ್ಕಿಗಳನ್ನು ಬಾರದಂತೆ ತಡೆಯುವುದಿಲ್ಲ ಅಲ್ವಾ.. ನಮ್ಮ ಗ್ರಾಚಾರಕ್ಕೆ ಎಲ್ಲಿಯಾದ್ರು ಅದು ಪ್ರಾಯ ಆಗಿ ನಮ್ಮ ತೋಟದಲ್ಲಿ ಸತ್ತರೂ ಮಾರನೇ ದಿನ ನಾವು ಜೈಲೊಳಗೆ.. ನಿಮ್ಮ ಕಡೆ ಕಾಡು ಕೋಣದ ಉಪದ್ರ ಉಂಟಾ.. ನಮ್ಮಲ್ಲಿ ಅದೂ ಜೋರು.. ಅದಕ್ಕೆ ಬೆನ್ನು ತುರಿಸುತ್ತದೆ ಅಂತ ಅಡಿಕೆ ಮರಕ್ಕೆ ಉಜ್ಜಿಕೊಂಡರೆ ಆ ಮರದ ಜೊತೆ ಜೊತೆಗೆ ಇನ್ನೂ ನಾಲ್ಕು ಮರ ಕೆಳಗೆ ಬಿದ್ದಾಯ್ತು. ಅಲ್ಲಾ ಮಗೂ.. ಅದಾದ್ರೂ ಎಲ್ಲಿಗೆ ಹೋಗ್ಬೇಕು ನೀನೇ ಹೇಳು.. ಅದರ ಕಾಡನ್ನು ಕಡಿದು ನಾವುಗಳು ತೋಟ ಗದ್ದೆ ಅಂತ ಮಾಡಿದ್ದೇವೆ. ಅದಕ್ಕೆ ಕುಡಿಯಲು ಬೇಕಿರುವ ನೀರನ್ನು ನಾವು ಹಾಳು ಮಾಡ್ತಿದ್ದೇವೆ.. ಅವುಗಳಿದ್ರೆ ನಮಗೂ ಬದುಕು ಅಂತ ನಂಬಿದ್ರೆ ಇಬ್ಬರೂ ಬದುಕಿಯೇವು.. ನೀನೇನು ಹೇಳ್ತೀಯಾ.. ? ಅದೆಲ್ಲಾ ಇರಲಿ ನಿಮ್ಮಲ್ಲಿ ಹಲಸಿನ ಕಾಯಿ ಆಗಿದೆಯಾ? ನಾನು ಹಣ್ಣು ತಿನ್ನುವ ಹಾಗಿಲ್ಲ.. ನನ್ನ ಹತ್ತಿರ ಶುಗರ್ ಫ್ಯಾಕ್ಟರಿಯೇ ಉಂಟು.. ಜಂಬು ನೇರಳೆ ಮರ ಉಂಟಲ್ವಾ ನಿಮ್ಮಲ್ಲಿ.. ನನಗೊಂದು ಗಿಡ ಬೇಕು ಆಯ್ತಾ.. ಈ ಸಲ ನಿಮ್ಮ ಮನೆಗೆ ಬಂದಾಗ ಅದನ್ನು ಕೊಡು.. ಮಂಚಿಯ ಹಣ್ಣು ಅಂತಲೇ ಹೆಸರಿಡ್ತೇನೆ.. ಇನ್ನೇನು ವಿಶೇಷ.. ನಿನ್ನ ಸ್ವರ ಕೇಳುವ ಅಂತ ಮಾತಾಡಿದೆ ಮಗೂ ಎಂದು ಹೇಳುತ್ತಿದ್ದವರು ಮಗು ಮನಸ್ಸಿನ ಪೆಜತ್ತಾಯ ಮಾಮಾ..
ಅವರ ಜೊತೆ ಮಾತನಾಡುವಾಗ ಬದುಕು ಇಷ್ಟೊಂದು ಸುಲಭವೇ ಅನ್ನಿಸುತ್ತಿತ್ತು. ಅವರನ್ನು ನೋಡಿಲ್ಲದ ನನಗೆ ಕೆಲವೊಮ್ಮೆ ಅವರು ಯಾವುದೇ ತೊಂದರೆಗಳಿಲ್ಲದ ಆರೋಗ್ಯವಂತರೇ ಇರಬಹುದು ಅಂತಲೂ ಅನ್ನಿಸುತ್ತಿತ್ತು.
ಫೋನಿನಲ್ಲಿ ಮಾತನಾಡುವಾಗ ನಾನು ಹೇಳಿದ್ದು ಅವರಿಗೆ ಕೇಳದೇ ಹೋದಲ್ಲಿ ಮಗೂ ನೀನೀಗ ಹೇಳಿದ್ದು ಗಾಳಿಗೆ ಹಾರಿ ಹೋಗಿದೆ. ಸ್ವಲ್ಪ ( ಇಂಟರ್ ನೆಟ್) ಬಲೆಯೊಳಗೆ ತುಂಬಿಸಿ ಮೇಲ್ ಮಾಡು ಎನ್ನುತ್ತಿದ್ದರು.ಉಪಯೋಗಕಾರಿ, ಕುತೂಹಲಕಾರಿ ಎನ್ನಿಸಿದ ವಿಷಯಗಳನ್ನು ಮೇಲ್ ಮೂಲಕ ಎಲ್ಲರೊಡನೆ ಹಂಚಿಕೊಳ್ಳುತ್ತಿದ್ದುದು ಅವರ ದೊಡ್ಡ ಗುಣ.
ಒಂದಷ್ಟು ದಿನ ಕಣ್ಣಿನೊಳಗಿನ ರಕ್ತ ಸ್ರಾವದಿಂದಾಗಿ ಇಂಟರ್ ನೆಟ್ಟಿನ ಬಳಕೆಂದ ವಿಶ್ರಾಂತಿ ಪಡೆಯಬೇಕಾಗಿ ಬಂದಾಗ ಅದನ್ನು ಮೊದಲಾಗಿಯೇ ತಿಳಿಸಿ 'ಫೋನ್ ಮಾಡಬಹುದು ಮಗಳೇ.. ಯಾಕಂದ್ರೆ ಕಿವಿ ನೆಟ್ಟಗುಂಟಲ್ಲಾ' ಎಂದು ತಮ್ಮ ಬಗ್ಗೆ ತಾವೇ ನಗೆಯಾಡಿದ್ದರು.
ಅದ್ಯಾಕೋ ಒಂದು ದಿನ ನನಗೂ ಮಾಮನಿಗೂ ಗರುಡ ಪುರಾಣ ಪುಸ್ತಕದ ಬಗ್ಗೆ ಚರ್ಚೆ ಶುರು ಆತು. 'ಮಗೂ ನೀನೀಗ ಅದನ್ನು ಓದಬೇಡ.. ನೀನು ಓದಬೇಕಾಗಿದ್ದು ಕಾಮಿಕ್ಸ್ ಪುಸ್ತಕ. ಆಯ್ತಪ್ಪಾ ನೀನೀಗ ದೊಡ್ಡ ಜನ ಅಂತಾದ್ರೆ ಸ್ವಲ್ಪ ಕಥೆ ಕಾದಂಬರಿ ವ್ಯಕ್ತಿಗಳ ಜೀವನ ಚರಿತ್ರೆ ಇದೆಲ್ಲಾ ಓದು. ರಾಮಾಯಣ ಮಹಾಭಾರತ ಓದು.. ಆ ಗರುಡಪುರಾಣದಲ್ಲಿ ಏನುಂಟೋ ಅದೆಲ್ಲವೂ ನಮ್ಮ ನಂತರದ್ದು. ನಾವು ನೋಡದೇ ಇರುವಂತದ್ದು.. ಅಷ್ಟೂ ನಿನಗೆ ಬೇಕು ಅನ್ನಿಸಿದರೆ ನಾನೇ ಅತ್ಲಾಗಿ ಹೋಗುವಾಗ ಗೂಗಲ್ ಮ್ಯಾಪ್ ತೆಗೆದು ನಿಂಗೆ ಕಳಿಸಿಬಿಡ್ತೇನೆ.. ಅಲ್ಲಿ ಹೋಗುವ ರೂಟ್ ಮಾರ್ಕ್ ಕೂಡ ಇರುತ್ತದೆ. ಹೋಗುವ ದಾರಿ ಇದ್ದೀತು. ನನ್ನ ಕಣ್ಣು ಸರೀ ಕಾಣದ ಕಾರಣ ಬರುವ ದಾರಿ ಇದ್ದರೆ ನನಗೆ ಕಾಣ್ಲಿಕ್ಕಿಲ್ಲ.. ನಿಂಗೆ ಕಂಡರೆ ಕೂಡಲೇ ಹೇಳು.. ಸ್ವರ್ಗಕ್ಕೋ, ನರಕಕ್ಕೋ, ಬೈ ಬೈ ಹೇಳಿ ವಾಪಾಸ್ ನಮ್ಮ ಕಾಫಿ ತೋಟದಲ್ಲಿ ಕೂತುಬಿಡುತ್ತೇನೆ. ಇಲ್ಲಾ ನಿಮ್ಮ ಮನೆಯ ಹತ್ತಿರ ಇರುವ ಪೆಜದ ಮರದಲ್ಲಿ ಕೂತುಕೊಳ್ತೇನೆ ಆಯ್ತಾ.. ಹ್ಹಹ್ಹ' ಎಂದು ಮಗು"ನಂತೆ ನಕ್ಕು ಬಿಟ್ಟಿದ್ದರು ಮಾಮಾ ..
ನಾನು ಬರೆದ ಲಲಿತ ಪ್ರಬಂಧಗಳ ಪುಸ್ತಕ ಓದಿ ಒಂದೇ ಸಿಟ್ಟಿಂಗಿನಲ್ಲಿ ಅವರು ಬರೆದ ವಿಮರ್ಶೆಯ ಜೊತೆಗಿದ್ದ ಇನ್ನೊಂದು ವಿಷಯವೆಂದರೆ 'ನಿನ್ನೆ ಸರೋಜಮ್ಮನಿಗೆ ಉಸಿರಾಟದ ತೊಂದರೆ ಜೋರಾಗಿ ಆಸ್ಪತ್ರೆಗೆ ಸೇರಿಸಿದೆವು.. ಈಗ ತೊಂದರೆ ಇಲ್ಲಾ..'
ಅವರ ಪ್ರೀತಿಯ ಮಡದಿ ಸರೋಜಮ್ಮ ಈಗೆರಡು ವರ್ಷಗಳ ಕೆಳಗೆ ಅವರನ್ನಗಲಿ ಹೋದಾಗ ನಮ್ಮ ಸಾಂತ್ವನವನ್ನು ಸ್ವೀಕರಿಸುವ ಬದಲಿಗೆ ಅವರೇ ನಮಗೆ ಸಾಂತ್ವನ ಹೇಳುತ್ತಿದ್ದರು. ಎಂದೂ ತಮ್ಮ ನೋವನ್ನು ದೊಡ್ಡದಾಗಿ ಹೇಳಿಕೊಳ್ಳುತ್ತಲೇ ಇರಲಿಲ್ಲ
ನಿಜಕ್ಕೂ ಆಗೆಲ್ಲಾ ಮಾಮಾ ಎಂದರೆ ಯಾರೋ ಶಾಪಗ್ರಸ್ಥ ದೇವತೆಯಾಗಿರಬಹುದೇ ಎಂಬ ಅನುಮಾನ ಹುಟ್ಟಿಬಿಡುತ್ತಿತ್ತು.
ನನ್ನ ಸಣ್ಣ ಕಥೆಗಳಿಗೆ ಮುನ್ನುಡಿ ಬರೆದು ಕೊಡಿ ಮಾಮಾ ಎಂದಾಗ, ಮಗೂ ನಾನು ನಿನ್ನಷ್ಟೂ ಬರೆದಿಲ್ಲ. ನನ್ನ ಹತ್ತಿರ ಯಾಕೆ ಬರೆಸ್ತೀಯಾ.. ಎಂದು ತಮಾಷೆ ಮಾಡುತ್ತಾ ನಕ್ಕಿದ್ದರು. ಆದರೆ ಅಷ್ಟೇ ಕಾಳಜಿಯಿಂದ ನನ್ನೆಲ್ಲಾ ಕಥೆಗಳನ್ನೂ ಕಣ್ಣಿನ ತೊಂದರೆಯ ನಡುವೆಯೂ ಓದಿ ಮುನ್ನುಡಿ ಬರೆದು ಹರಸಿದರು.
ನಮ್ಮ ಮನೆಯಲ್ಲೇ ನಡೆದ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಅವರು ತಮ್ಮ ಮಗಳೊಡನೆ ಬರುವ ಬಗ್ಗೆಯೂ ನಮ್ಮ ನಡುವೆ ಮಾತುಕತೆಗಳು ನಡೆದಿದ್ದವು. ಆದರೆ ಮತ್ತೆ ಆರೋಗ್ಯ ಕೈ ಕೊಟ್ಟ ಕಾರಣ ನನ್ನ ಅವರ ಭೇಟಿ ತಪ್ಪಿ ಹೋಯಿತು.
ನನಗೂ ಅವರಿಗೂ ಮಾತನಾಡಲಿದ್ದ ಇನ್ನೊಂದು ಸಮಾನ ವಿಷಯವೆಂದರೆ ನನ್ನ ಅಪ್ಪನ ವಿಷಯ. ಮೂವತ್ತೈದು ವರ್ಷಗಳ ಕೆಳಗೆ 'ಮಾಗುಂಡಿ' ಯಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ, ಈಗ ನಮ್ಮನ್ನಗಲಿದ ನನ್ನ ಅಪ್ಪ ಅವರಿಗೂ ಪರಿಚಿತರೆಂದು ತಿಳಿದಾಗ ಅಚ್ಚರಿಯೆನಿಸಿತ್ತು. ಅಪ್ಪನ ಆಗಿನ ಕಾಡಿನ ಸಾಹಸಗಳ ಜೊತೆ ಪೆಜತ್ತಾಯ ಮಾಮನ ಸಾಹಸ ಗಳು ಜುಗಲ್ ಬಂಧಿ ನಡೆಸಿ ನನ್ನ ಬಾಲ್ಯದ ನೆನಪನ್ನು ಹಸಿರುಗೊಳಿಸುತ್ತಿದ್ದವು. ನಾನೂ ನನ್ನಂತಹ ಇನ್ನೂ ಅನೇಕ ಮಿತ್ರರು ಪೆಜತ್ತಾಯ ಎಂಬ ಬೃಹತ್ ಮರದ ಕೊಂಬೆ ಕೊಂಬೆಗಳಲ್ಲಿ ಕುಳಿತು ಎಬ್ಬಿಸುತ್ತಿದ್ದ ಕಲರವವನ್ನು ಅವರು ಕುಳಿತಲ್ಲಿಯೇ ಆನಂದಿಸುತ್ತಿದ್ದರು.
ಒಬ್ಬ ಮನುಷ್ಯ ಎಷ್ಟೆಲ್ಲಾ ದೈಹಿಕ ತೊಂದರೆಗಳನ್ನು ಅನುಭವಿಸಬಹುದೋ ಅಷ್ಟನ್ನು ಅವರು ಅನುಭವಿಸುತ್ತಿದ್ದರು. ಕೆಲ ತಿಂಗಳುಗಳ ಹಿಂದೆ ಅವರು ಮಾತನಾಡುತ್ತಾ ' ಮಗಳೇ.. ನಾನು ಹಿಂದಿನ ಜನ್ಮದಲ್ಲಿ ನುಂಗಿದ ಕಪ್ಪೆ ಮರಿ ಈಗ ನನ್ನ ಲಿವರಿನ ಮೇಲೆ ಕುಳಿತು ಡೋಂಕ್ರು ಕಪ್ಪೆ ( ದೊಡ್ಡ ಜಾತಿಯ ಕಪ್ಪೆ) ಆಗಿದೆಯಂತೆ. ಅದೀಗಾ ಫುಟ್ ಬಾಲ್ ನಂತೆ ಊದಿಕೊಂಡಿದೆಯಂತೆ ಅದನ್ನು ಟೆನ್ನಿಸ್ ಬಾಲ್ ಗಾತ್ರಕ್ಕೆ ತರಬೇಕಂತೆ.. ಅಲ್ಲಾ ಮಗೂ ಅದು ಯಾ ಗಾತ್ರದಲ್ಲಿ ಹೊರ ಬಂದರೂ ನನಗೇನು ಆಡ್ಲಿಕ್ಕೆ ಕೊಡ್ತಾರ. ಈ ಡಾಕ್ಟರ್ ಗಳಿಗೆ ಕೆಲಸ ಇಲ್ಲ..
ಪ್ರತಿ ಸಲದ ಹೆಲ್ತ್ ಚೆಕ್ ಅಪ್ ನಡೆದಾಗಲೂ ಅದನ್ನು ಈ ಮೇಲ್ ಮಾಡಿ ಅವರೆಲ್ಲಾ ಮಿತ್ರರಲ್ಲೂ ಹಂಚಿಕೊಂಡು ಕೊನೆಯಲ್ಲಿ 'ಡೋಂಟ್ ವರಿ, ಐ ಆಮ್ ಫೈನ್' ಎಂಬ ವಾಕ್ಯ ಸೇರಿಸುತ್ತಿದ್ದರು.
ಇತ್ತೀಚೆಗೆ ನಾನು ಅವರ ಮನೆಗೆ ಭೇಟಿ ಕೊಡುವ ಎಲ್ಲಾ ತಯಾರಿಗಳನ್ನು ಮಾಡಿಕೊಂಡಾಗಿತ್ತು. ಅವರೂ ಆತ್ಮೀಯವಾಗಿ ಸ್ವಾಗತಿಸಿದ್ದರು. ಅವರಿಗೆಂದೇ ಜಂಬು ನೇರಳೆ ಗಿಡ ತೆಗೆದುಕೊಂಡು ಹೋಗಿದ್ದೆ. ಆದರೆ ಇದ್ದಕ್ಕಿದ್ದಂತೆ ಕೀಮೋತೆರಫಿಯ ನಂತರ ಉಂಟಾದ ಅವರ ಆರೋಗ್ಯದಲ್ಲಿ ಏರು ಪೇರಿನಿಂದಾಗಿ ಅವರನ್ನು ಕಂಡು ಮಾತನಾಡುವ ಅವಕಾಶವನ್ನು ಕಳೆದುಕೊಂಡೆ.
ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಯಾದ ಅವರ ಪುಸ್ತಕ ರೈತನೊಬ್ಬನ ನೆನಪುಗಳು. ನನ್ನ ಹತ್ರ ಒಂದು ಪುಸ್ತಕ ಇದೆ ಮಗಳೇ.. ಉಳಿದದ್ದು ಬರ್ಬೇಕಷ್ಟೇ.. ಎಲ್ಲಿ ನಿನ್ನ ಅಡ್ರಾಸ್ ಕೊಡು. ಅದನ್ನು ನಿಂಗೆ ಕಳಿಸ್ತೇನೆ ಎಂದು ತಮ್ಮ ಸ್ವ ಅಕ್ಷರದಲ್ಲಿ ಪ್ರೀತಿಯ ಸೋದರ ಸೊಸೆ ಅನಿತಾಗೆ ಅಂತ ಬರೆದು ಕಳುಹಿಸಿದ್ದರು. ಸಾಹಿತ್ಯ ಲೋಕಕ್ಕೆ ಈ ಪುಸ್ತಕ ಅವರ ಅತ್ಯುತ್ತಮ ಕೊಡುಗೆಯೇ ಸರಿ. ಕಾಗದದ ದೋಣಿ ಯ ಮುಂದಿನ ಆವೃತ್ತಿಯಂತೆಯೇ ಇರುವ ಇದು ಕೂಡಾ ಅವರದ್ದೇ ಅನುಭವಗಳು. ಇತ್ತೀಚೆಗೆ ಅವರು ಮತ್ತು ಅವರ ಅಮೇರಿಕಾದ ಗೆಳೆಯ ಇಬ್ಬರೂ ಸೇರಿ ಬರೆದಿದ್ದ ಪುಸ್ತಕದ ಬಿಡುಗಡೆಯೂ ಅಮೆರಿಕಾದಲ್ಲಿ ನಡೆತು. ಕೆ.ಟಿ ಗಟ್ಟಿ. ನಾ ಡಿಸೋಜ ಅಂತಹ ಹಲವು ಹಿರಿಯ ಸಾಹಿತಿಗಳ ಪುಸ್ತಕವನ್ನು ಇಂಗ್ಲೀಗೂ ಅನುವಾದಿಸಿ ಗಟ್ಟಿಗರೆನಿಸಿಕೊಂಡವರು ನಮ್ಮ ಮಾಮಾ..
ನಿನ್ನ ಮನೆಗೊಮ್ಮೆ ಬರಬೇಕು ಅಂತ ಆಸೆ ಇದೆ ಮಗಳೇ ... ಎನ್ನುತ್ತಲೇ ಇದ್ದ ಮಾಮಾ ಇದರ ಜೊತೆಗೆ ತಮ್ಮ ಹೊಸ ಪುಸ್ತಕದ ಬಗೆಗಿನ ಸಂವಾದಕ್ಕಾಗಿ ಅಮೆರಿಕೆಗೆ ತೆರಳುವ ಬಗ್ಗೆಯೂ ಆಸೆ ಹೊತ್ತಿದ್ದರು. ಎಪ್ರಿಲ್ ೨೧ಕ್ಕೆ ಬಂದ ಅವರ ಈ ಮೇಲ್ ಹೇಳಿದ್ದಿದನ್ನು..
Good Evening
Next Monday I am on to an Angioplasty like procedure on my tumor
I am fine.
Next Monday I am on to an Angioplasty like procedure on my tumor
I am fine.
ಮರುದಿನ ತಾವೇ ತಮ್ಮ ಮೈಕ್ರೋ ಮಾಕ್ಸ್ ಕ್ಯಾನ್ವಾಸ್ ಮೊಬೈಲಿನಿಂದ ತೆಗೆದ ಒಂದು ಪುಟ್ಟ ಹಳದಿ ಹೂವು.
ಆಗಾಗ ಮೇಲಿನಿಂದ ಕಾಲ್ ಬರ್ತಾ ಇರ್ತದೆ ಮಗಳೇ.. ಯಾವತ್ತು ರಿಸೀವ್ ಮಾಡುವ ಮನಸ್ಸಾಗುತ್ತದೋ ಗೊತ್ತಿಲ್ಲಾ.. ಎಂದ ಮಾಮಾ ಕಾಲನ ಕರೆಗೆ ಓಗೊಟ್ಟು ಹೊರಟೇ ಹೋಗಿದ್ದಾರೆ ಎಂದರೆ ನಂಬಲು ಕಷ್ಟವಾಗುತ್ತಿದೆ. ಯಾಕೆಂದರೆ ಇನ್ನೂ ನೂರಾರು ವರ್ಷಗಳ ಕಾಲ ಬದುಕುವಷ್ಟು ಜೀವನೋತ್ಸಾಹ ಅವರಲ್ಲಿತ್ತು.
ಆದರೆ ನನಗೆ ನಂಬಿಕೆದೆ ಅವರು ಅಲ್ಲಿಯೂ ಸರೋಜಮ್ಮನೊಡನೆ ಸೇರಿ ಕಾಫಿ ತೋಟ ಮಾಡಿ ಸುರಾಪಾನ ಮಾಡುವ ದೇವಾನು ದೇವತೆಗಳಿಗೆ ಕಾಫಿಯ ಹುಚ್ಚು ಹಿಡಿಸಿಯೇ ಬಿಡುತ್ತಾರೆ..ಇಲ್ಲಿಯಂತಹುದೇ ಇನ್ನೊಂದು ಸುಳಿಮನೆ ಎಸ್ಟೇಟ್ ಅಲ್ಲಿಯೂ ಮಾಡಿಬಿಡುತ್ತಾರೆ.
ಮಾಮಾ ಅಲ್ಲಿನ ವಿಷಯಗಳ ಬಗೆಗೆ ನಿಮ್ಮ ಮೇಲ್ ಗಾಗಿ ನಾನು ನನ್ನಂತಹ ಹಲವರು ಕಾಯುತ್ತಿದ್ದೇವೆ..
ಉತ್ತರಿಸುತ್ತೀರಲ್ಲಾ..
ಎಸ್. ಎಮ್. ಪೆಜತ್ತಾಯರ ವ್ಯಕ್ತಿ ಚಿತ್ರಣ ಮತ್ತು ಸಾಹಿತ್ಯದ ಪರಿಚಯ ಮನಸಿಗೆ ಹಿಡಿಸಿತು.
ReplyDeleteWe miss you sir. :-(
ವ್ಯಕ್ತಿಚಿತ್ರಣ ಇಷ್ಟ ಅಯ್ತು.. ಮದ್ದಿನ ಮಾತು, ನವಿಲಿನ ಕಾಟ, Angioplasty ,ಮೇಲಿನ ಕರೆಗಳ ಮಾತುಕತೆ ಓದ್ತಿದ್ದಾಗ ಮಾತುಕತೆ ನನ್ನ ಕಣ್ಣೆದುರೇ ನಡೆದ ಅನುಭವ.. ಮರೆಯಾದ ಒಂದು ಹಿರಿಯ ಚೇತನ :-(
ReplyDeleteತೇವಗೊಂಡ ಕಣ್ಣುಗಳೇ ಇಡೀ ಬರಹವನ್ನು ಓದಿಸಿತು,ಜೀವಮಾನದಲ್ಲಿ ನಾ ಬರೆದ ಏಕಮಾತ್ರ ಬರಹ ಒಂದು ಪ್ರವಾಸ ಕಥನ,ಅದನ್ನು ಓದಿ,ಏನೇ ಹುಡುಗಿ ಎಂದು ಸಂಬೋಧಿಸಿ ಮೆಚ್ಚುಗೆಯ ಮಾತುಗಳನ್ನಾಡಿ ಮನವನ್ನು ಅರಳಿಸಿದ್ದರು,ಆಮೇಲೆ ಅವರಿಗೆ facebookನಲ್ಲಿ ಸ್ನೇಹ ಕೋರಿಕೆ ಸಲ್ಲಿಸಿದರೂ ಅವರನ್ನು ಅವರ ಬರಹಗಳಿಗಿಂತಲೂ ಹೆಚ್ಚಾಗಿ ಫೋಟೋಗಳಿಂದ ಅವರೊಬ್ಬ ಸ್ನೇಹಮಯಿ,ಸರಳ ಸಜ್ಜನ ವ್ಯಕ್ತಿ ಎಂದರಿತರೂ ಎಂದೂ ಮಾತನಾಡಿಸುವ ಗೋಜಿಗೇ ಹೋಗಿಲ್ಲ ಎಂಬುದಕ್ಕೆ ವಿಷಾದವಿದೆ
ReplyDeleteಮರೆಯಲಾರದ ಮರೆಯಬಾರದ ಜೀವ. ನನಗೆ ಇವರೆಂದರೆ ತುಂಬ ಪ್ರೀತಿ.
ReplyDelete