Pages

Total Visitors

Friday, June 12, 2015

ಮಳೆಹನಿಯ ಪ್ರೇಮಕಥೆ

ಮತ್ತೆ ಮಳೆ ಹೊಯ್ಯುತಿದೆ ಎಲ್ಲಾ ನೆನಪಾಗುತಿದೆ.. ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮರೆತಿಲ್ಲಾ.. ಅರ್ರೇ ಇದೆಲ್ಲಾ ಹಾಡಿನ ಸಾಲುಗಳಲ್ವಾ.. ಹುಂ.. ಹೌದು ಆದರೆ ಮಳೆಯೊಂದಿಗೆ ನೆನಪಾಗುವುದು ಬಾಲ್ಯ.. 
 
ಅಂದು ಬೋರೆಂದು ಸುರಿಯುತ್ತಿರುವ ಜಡಿಮಳೆಯ ಸಂಗೀತಕ್ಕೆ, ಗಾಳಿಯ ಸುಂಯ್ ಗುಟ್ಟುವಿಕೆಯ ಹಿ ಮ್ಮೇಳವಿರುತ್ತಿತ್ತು. ಶಾಲೆ ಶುರು ಆಗುವುದರ ಜೊತೆಗೆ ಮಳೆಗಾಲವೂ ಶುರು ಆಗುತ್ತಿದ್ದ ಕಾರಣ ಶಾಲೆಯ ಪಠ್ಯ ಪುಸ್ತಕಗಳನ್ನು ಕೊಳ್ಳುವುದರಿಂದ ಹೆಚ್ಚು ಮಹತ್ವದ ವಿಷಯ ಯಾವ ಕೊಡೆ ತನಗೆ ಎಂಬುದೇ ಆಗಿತ್ತು. ವರ್ಷಕ್ಕೊಂದು ಕೊಡೆ ಮನೆಗೆ ಬಂದರೆ ಅದೇ ಬಹು ದೊಡ್ಡ  ಸಂಗತಿ . ಆ  ಕೊಡೆ ಅಪ್ಪನ ಕೈ ಸೇರಿದರೆ, ಮೊದಲಿನ ವರ್ಷದ್ದು ಅಮ್ಮನಲ್ಲಿ ಕೈಯಲ್ಲಿ. 
 ಹಳೇ ಕೊಡೆಗಳು ರಿಪೇರಿ ಭಾಗ್ಯ ಕಂಡು ನನ್ನ ಕೈ ಸೇರುತ್ತಿತ್ತು. ಇದಕ್ಕೆ ಕಾರಣಗಳು ಹಲವಿತ್ತು. ಮಳೆ ಬರುತ್ತಿರುವಾಗ ಎಲ್ಲರೂ ಕೊಡೆ ಬಿಡಿಸಿ ನಡೆಯುತ್ತಿದರೆ ಕೊಡೆಯ ಚೂಪಾದ ಕಡ್ಡಿಂದ ಇನ್ನೊಬ್ಬನ ಕೊಡೆಗೆ ಕುತ್ತುವುದು ಗುನ್ನ ಎಂದು ಕರೆಯಲ್ಪಡುತ್ತಿತ್ತು. ಇದು ಹೆಚ್ಚಾಗಿ ಹುಡುಗರು ಆಡುತ್ತಿದ್ದ ಆಟವಾಗಿದ್ದರೂ ನಾವುಗಳೂ ಏನು  ಆಟದಲ್ಲಿ  ಹಿಂದುಳಿದವರಾಗಿರಲಿಲ್ಲ.  ಹಾಗಾಗಿ ಕೊಡೆ ಬೇಗನೇ ಆಕಾಶದಿಂದ ಬೀಳುವ ನೀರನ್ನು ಹಾಗೆಯೇ ನಮ್ಮ ಮೇಲೆ ರವಾನಿಸುತ್ತಿತ್ತು. ನಮಗಾದರೂ ಒದ್ದೆಯಾಗಬಾರದೆಂಬ ಚಿಂತೆಯೇನೂ ಇದ್ದಿರಲೇ ಇಲ್ಲ ಎಂದ ಮೇಲೆ ಕೊಡೆ ಹೇಗಿದ್ದರೇನು.
ಚಪ್ಪಲಿ ಧರಿಸಿ ಶಾಲೆಗೆ ಹೋಗುತ್ತಿದ್ದವರೇ ಕಡಿಮೆ. ಕೆಲವರಲ್ಲಿ ಚಪ್ಪಲಿ ಇದ್ದರೂ ಅದು ನೀಲಿ ಬಣ್ಣದ ಹವಾ ಚಪ್ಪಲಿಯಾಗಿತ್ತು.  ಆ ಚಪ್ಪಲಿಯನ್ನು ಮಕ್ಕಳ ಸ್ನೇ"ಯಾಗೇ ತಯಾರು ಮಾಡಿದ್ದರು ಅಂತ ನನ್ನ ಅನಿಸಿಕೆ. ಅದನ್ನು ಮೆಟ್ಟಿಕೊಂಡು ಮಳೆನೀರು ತುಂಬಿರುವ ರಸ್ತೆಗಳಲ್ಲಿ ನಡೆಯುವುದೇ ಒಂದು ಮೋಜು. ನೆಲದ ಕೆಸರು ನೀರು ಅಂಗಿಯ ಮೇಲೆ ಚಿತ್ತಾರ ಮೂಡಿಸಿ ಅಲ್ಲಿಂದ ಮೇಲೆ ತಲೆಯವರೆಗೂ ಏರಿ ಒದ್ದೆಯಾಗಿಸುತ್ತಿತ್ತು. 

ಸಣ್ಣ ಪುಟ್ಟ ನೀರಿನ ಹರಿವಿರುವ ಜಾಗಗಳಲ್ಲಿ ಇದು ಆಟದ  ದೋಣಿಯಾಗಿಯೂ ಬಳಕೆಯಾಗುತ್ತಿತ್ತು. ಚಪ್ಪಲಿಯ ಉಂಗುಷ್ಟದ ಜಾಗದಲ್ಲಿ ಒಳಗೆ ಸೇರಿಸುತ್ತಿದ್ದ ಹುಲ್ಲಿನ ಹೂವೋ, ಅಥವಾ ಕಾಡು ಹೂಗಳೋ ಧ್ವಜದ ಸ್ಥಾನ ವಹಿಸುತ್ತಿದವು. ಕೆಲವೊಮ್ಮೆ ಅತ್ತಿತ್ತ ಹರಿದಾಡುವ ಇರುವೆಗಳನ್ನೋ. ಚಿಕ್ಕ ಪುಟ್ಟ ಕೀಟಗಳನ್ನೋ ಇದರ ಸವಾರರಾಗಿ ಕಳುಹಿ ಕೊಡುತ್ತಿದ್ದೆವು. ಒಬ್ಬ ನೀರು ಹರಿವ ದಿಕ್ಕಿಗೆ ಚಪ್ಪಲಿಯನ್ನು ತೇಲಿ ಬಿಟ್ಟರೆ ಸ್ವಲ್ಪ ದೂರದಲ್ಲಿ  ಎದುರಿಗೆ ನಿಂತ ಇನ್ನೊಬ್ಬ ಅದನ್ನು ಹಿಡಿದು ದಡ ಸೇರಿಸುತ್ತಿದ್ದ. ಈ ಆಟ ದೊಡ್ಡವರು ಬಂದು ನಮ್ಮನ್ನು  ಬಯ್ಯುವಲ್ಲಿಯವರೆಗೆ ನಿರಾತಂಕವಾಗಿ ಸಾಗುತ್ತಿತ್ತು. 
ಇನ್ನು ಪುಸ್ತಕದ ಹಾಳೆಗಳು ದೋಣಿಯಾಗಿ ಆಕಾರ ಪಡೆದುಕೊಳ್ಳುತ್ತಿದ್ದುದಂತೂ ಸರ್ವೇಸಾಮಾನ್ಯ. ಅದರಲ್ಲೂ ವೈವಿಧ್ಯವಿರುತ್ತಿತ್ತು. ಕತ್ತಿ ದೋಣಿ, ಡಬಲ್ ದೋಣಿ, ಹಾ ದೋಣಿ ಹೀಗೇ ನಾನಾ ನಮೂನೆಗಳು ಸಿದ್ಧವಾಗುತ್ತಿದ್ದವು. ಇದನ್ನು ನಮಗೆ ಮಾಡಿಕೊಡುವವರು ಗುರು ಸಮಾನರೆಂದು ನಮ್ಮಿಂದ ಮಿಗಿಲಾದವರೆಂದು  ಪರಾಕ್ ಹೇಳಿಸಿಕೊಳ್ಳುತ್ತಿದ್ದರು. 
ಉಲ್ಟಾ ಹಾಕಲ್ಪಟ್ಟ ಕೊಡೆಗಳು ದೋಣಿಯಾಗಿ ಕೆಲವೊಮ್ಮೆ ಪರಿವರ್ತನೆಗೊಳ್ಳುತ್ತಿದ್ದರೂ ಹಿರಿಯರ ಕಣ್ಣಿಗೆ ಬಿದ್ದರೆ ಬೆನ್ನಿನಲ್ಲಿ ಬಾಸುಂಡೆ ಮೂಡುವ ಭಯವಿದ್ದುದರಿಂದ ಅದೊಂದು ರಹಸ್ಯ ಕಾರ್ಯಾಚರಣೆಯಾಗಿ ಮಾತ್ರ ನೋಡಲು ಸಿಗುತ್ತಿತ್ತು. 
ಈ ಮಳೆಗಾಲ. ಶಾಲೆಗೆ ಹೋಗಲು ಇಷ್ಟವಿಲ್ಲದ ಮಕ್ಕಳಿಗೆ ವರಪ್ರಧಾನವೇ ಆಗಿದ್ದ ಕಾಲ ಎಂದರೆ ತಪ್ಪೇನಿಲ್ಲ.  ಶೀತವೆಂಬುದು ನಿತ್ಯ ಸಂಗಾತಿಯಾಗಿರುತ್ತಿತ್ತು. ಇದಕ್ಕೆ ನಮಗೆ ಗೊತ್ತೇ ಇಲ್ಲದ ತಲೆನೋವು ಎಂಬುದನ್ನು ಆರೋಪಿಸಿಕೊಂಡು ಮನೆಯಲ್ಲೇ ಹೊದ್ದು ಮಲಗಬಹುದಿತ್ತು. ಮರುದಿನ ಶಾಲೆಗೊಂದು ರಜಾ ಅರ್ಜಿಯ ಸಮೇತ ಹೋದರಾಯಿತು. 
  ನಮ್ಮ ಶಾಲೆಯಲ್ಲಿ ರಜಾ ಅರ್ಜಿಗಳು ಹಳೆಯ ಕೊಡೆಯ ಕಡ್ಡಿಯನ್ನು ಬಗ್ಗಿಸಿ ಮಾಡಿದ ಒಂದು ಕೊಕ್ಕೆಯಂತಹ ಉಪಕರಣದಲ್ಲಿ ಚುಚ್ಚಿ ಇಡಲ್ಪಡುತ್ತಿತ್ತು. ಯಾರಾದರು ಕುತೂಹಲಕ್ಕೆ ಅದನ್ನು ಓದಲು ತೆಗೆದುಕೊಂಡಿರಿ ಎಂದಾದರೆ ಅಲ್ಲಿದ್ದ ಎಲ್ಲ ಅರ್ಜಿಗಳಲ್ಲೂ ಮಕ್ಕಳ ರಜಾದ ಕಾರಣ ಶೀತ ಮತ್ತು ಜ್ವರವೇ ಆಗಿರುತ್ತಿತ್ತು.ಪರೀಕ್ಷೆಯಲ್ಲಿಯೂ ರಜಾ ಅರ್ಜಿ ಬರೆರಿ ಎಂಬ ಪ್ರಶ್ನೆಗೆ ಇರುವ ಉತ್ತರಕ್ಕು ಇದಕ್ಕೂ ಯಾವ ವ್ಯತ್ಯಾಸವೂ ಇರುತ್ತಿರಲಿಲ್ಲ. ಮತ್ತು ಇದರಿಂದ ಬೇರೆಯಾಗಿ ರಜಾ ಅರ್ಜಿಗಳು ಇರಬಹುದೆಂಬ ಕಲ್ಪನೆಯೇ ನಮಗಿರಲಿಲ್ಲ.  

ಹೊಳೆಯ ನೀರು ಮಳೆಗಾಲದಲ್ಲಿ ಉಕ್ಕೇರುತ್ತಿತ್ತು. ನೀರು ಮೇಲೆ ಬರುವ ಜಾಗದಲ್ಲಿ ಸ್ವಲ್ಪ ದೊಡ್ಡ ಹೊಂಡ ಮಾಡುತ್ತಿದ್ದೆವು. ಇದು ಒಬ್ಬರಿಂದಾಗುವ ಕೆಲಸವಲ್ಲವಾದ ಕಾರಣ ಇದು ಒಂದೊಂದು ಗುಂಪಿನ ಹೊಂಡ ಎಂದೇ ಹೆಸರು ಹೊತ್ತುಕೊಳ್ಳುತ್ತಿತ್ತು. ಇದ್ದುದರಲ್ಲಿ ಸ್ವಲ್ಪ ಬಲಶಾಲಿಯಾದ ಹುಡುಗನೋ, ಗಟ್ಟಿಗಿತ್ತಿ ಹುಡುಗಿಯೋ ಗುಂಪಿನ ಮುಖಂಡರಾಗುತ್ತಿದ್ದರು. ಮಳೆ ಬರುವಾಗ ಉಕ್ಕೇರುವ ನದಿಗಳು, ಮಳೆ ಕಡಿಮೆಯಾದಾಗ  ಇಳಿಯುತ್ತಿದ್ದವು. ಆಗ ಈ ಹೊಡದೊಳಗೆ ಇಳಿದ ಕೆಲವು ಮೀನುಗಳು ಇಲ್ಲೇ ಉಳಿದುಕೊಳ್ಳುತ್ತಿದ್ದವು.  ಅವುಗಳು ಕೆಲ ಸಮಯದವರೆಗೆ ನ್ಯಾಚುರಲ್ ಅಕ್ವೇರಿಯಮ್ ಗಳಾಗಿ ನಮ್ಮ ಬಹುಪಾಲು ಸಮಯವನ್ನು ಕಸಿದುಕೊಳ್ಳುತ್ತಿದ್ದವು. ಇದಕ್ಕೆ ಕಪ್ಪೆಯ ಗೊದ್ದಗಳೂ ಸೇರಿಕೊಂಡು ಅವು ದಿನ ಕಳೆದಂತೆ  ಕಪ್ಪೆಯಾಗಿ ಪರಿವರ್ತಿತವಾಗುವುದನ್ನು ನಾವು ಕಣ್ಣಾರೆ ಕಾಣುತ್ತಿದ್ದೆವು.

ರಜಾ ದಿನಗಳಲ್ಲಿ ದೊಡ್ಡವರ ಮುಂದಾಳತ್ವದಲ್ಲಿ ಗದ್ದೆಗಳಲ್ಲಿ ಶೇಖರವಾದ ನೀರಿನಲ್ಲಿ ಈಜಿನ ಪಾಠ ನಡೆಯುತ್ತಿತ್ತು. ಶುರು ಶುರುವಿಗೆ ಕೆಸರು ನೀರು ಕಣ್ಣು ಮೂಗು ಬಾಗೆಲ್ಲಾ ಹೋಗಿ ಒಂದೆರಡು ದಿನ ಜ್ವರ ಬರಿಸಿ ಮಲಗಿಸಿದರೂ ಬಿಟ್ಟು ಬಿಡದ ಈ ಪಾಠ ಒಂದು ಮಳೆಗಾಲ ಕಳೆಯುವಾಗ ಕಿರಿಯರನ್ನು ಈಜಲು ತರಬೇತುಗೊಳಿಸುತ್ತಿತ್ತು. 
ಮಳೆಗಾಲಕ್ಕೆಂದೇ ಇರುವ ತಿಂಡಿಗಳಾದ ಹಲಸಿನ ಹಣ್ಣಿನ ವಿವಿಧ ಖಾಧ್ಯಗಳು, ಕೆಸುವಿನ ಸೊಪ್ಪಿನ ಪತ್ರೊಡೆ, ಬೆಚ್ಚಗಿರಲೆಂದು ಮಾಡುವ  ಕಷಾಯಗಳು, ಆಟಿ ತಿಂಗಳಿನ ಔಷಧೀಯ ಆಟಿ ಸೊಪ್ಪಿನ ಪಾಯಸ, ಸಪ್ಪಳ ಸಂಡಿಗೆಗಳ ಜೊತೆಯಲ್ಲಿ ಸುಟ್ಟು ಹಾಕಿದ ಹಲಸಿನ ಬೀಜ,  ಉಪ್ಪು ಹಾಕಿ ಬೇಸಿ ಒಣಗಿಸಿದ ಹಲಸಿನ ಬೀಜದ ಸಾಂತಾಣಿ, ಬೇಸಿಗೆಯಲ್ಲಿ ಒಣಗಿಸಿದ ಮಾವಿನ ಹಣ್ಣಿನ ರಸದ ಮಾಂಬುಳ.. ಒಂದೇ ಎರಡೇ.. ಎಲ್ಲವೂ ನಮ್ಮ ಜಿಹ್ವೆಯನ್ನು ತಣಿಸಿ ನಲಿಯುವಂತೆ ಮಾಡುತ್ತಿತ್ತು. 
ಇನ್ನೆಲ್ಲಿದೆ ಆ ಕಾಲ.. 
ಸ್ಕೂಲ್ ಯೂನಿಫಾರ್ಮ್ ಎಂಬ ಬಟ್ಟೆಯೊಳಕ್ಕೆ ತಳ್ಳಿ ಕುತ್ತಿಗೆಯಲ್ಲಿ ಟೈ ಹಾಕಿ ಬಂಧಿಸಿದ ಪುಟ್ಟ ಜೀವಗಳು ಶಾಲೆಯ ವಾಹನ ಎಂಬ ಪೆಟ್ಟಿಗೆಯೊಳಗೇ ಪ್ಯಾಕ್ ಆಗಿ ಶಾಲೆ ಸೇರುತ್ತಾರೆ. ಅದೇ ವಾಹನದಲ್ಲಿ ಹಾಗೇ ಇಳಿದು ಮನೆ ಸೇರುತ್ತಾರೆ. ಮತ್ತೆ ಹೋಮ್ ವರ್ಕು, ಟ್ಯೂಶನ್ ಕ್ಲಾಸು, ಆ ಕ್ಲಾಸು, ಈ ಕ್ಲಾಸುಗಳ ಜಂಜಾಟದಲ್ಲಿ ಮನೆ ಸೇರುತ್ತಾರೆ. ಮಳೆಯ ಅನುಭೂತಿ, ಅದರೊಂದಿಗೆ ಪ್ರಕೃತಿಯ ಹೊಸ ವಿಷಯಗಳನ್ನು ಅರಿತುಕೊಳ್ಳುವ ಸಡಗರ ಎಲ್ಲ ಇವರಿಗೆ ಸಿಗದ ಮಾಯಾಪೆಟ್ಟಿಗೆಯಲ್ಲಿ ಅಡಗಿಸಿಟ್ಟ ನಿಧಿ. 
ಕಾಲ ಇನ್ನೊಮ್ಮೆ ಮರುಕಳಿಸುವಂತಿದ್ದರೆ.. ನನ್ನದೂ ಇದೇ ಹಾಡು.. 
 'ಎ ದೌಲತ್ ಬಿ ಲೇಲೋ ಎ ಶೊಹರತ್ ಬಿ ಲೇಲೋ
ಬಲೇ ಚೀನ್ ಲೆ ಮುಜ್ ಸೆ ಮೇರೀ ಜವಾನಿ
ಮಗರ್ ಮುಜ್ ಕೊ ಲೌಟಾದೋ ಬಚ್ಪನ್ ಕಾ ಸಾವನ್ 
ವೋ ಕಾಗಜ್ ಕಿ ಕಸ್ತಿ ವೋ ಬಾರಿಶ್ ಕಾ ಪಾನಿ ..'
-- 



4 comments:

  1. ಸುಂದರ ಬರಹ,ಹಳೆ ನೆನಪುಗಳ ಹೊಳೆ ಹರಿಸಿತು..

    ReplyDelete
  2. This comment has been removed by the author.

    ReplyDelete
  3. ಕೊಡೆ ಬಗ್ಗೆ ಆವತ್ತು ವಿಜಯವಾಣಿಯಲ್ಲಿ ಓದಿದ ನಿಮ್ಮ ಲಲಿತ ಪ್ರಬಂಧ ನೆನಪಾಯ್ತು.

    ReplyDelete
  4. ನಮ್ಮೂರ ಮಳೆಗಾಲ ನೆನ್ಪಾತು

    ReplyDelete