ಮರಕುಟಿಗ ಮತ್ತು ಮರ
ಆ ಮರದಲ್ಲಿದ್ದ ಹಕ್ಕಿಗಳೆಲ್ಲ ರೋಷದಲ್ಲಿ ಬೊಬ್ಬಿರಿಯುತ್ತಿದ್ದವು. " ಇದೊಂದು ಮರಕುಟಿಗಕ್ಕೆ ಸ್ವಲ್ಪವೂ ಕೃತಜ್ಞತೆ ಇಲ್ಲ. ಆಶ್ರಯ ಕೊಟ್ಟ ಮರವನ್ನೇ ಕುಟುಕುತ್ತಿದೆ.. ತೊಲಗಾಚೆ.. "
ಮೈಮೇಲಿದ್ದ ಗೆದ್ದಲು ಹುಳಗಳೆಲ್ಲಾ ಖಾಲಿ ಆಗಿ ಮರ ಕುಶಿಯಿಂದ ತಲೆದೂಗಿ ನಕ್ಕಿತು.
ಮರಕುಟಿಗ ಹೊಟ್ಟೆ ತುಂಬಿದ ಸಂತಸದಿಂದ ಹಾರಿ ಹೋಯಿತು.
ಅಬ್ಬಾ .. ನಮ್ಮ ರೋಷಕ್ಕೆ ಹೆದರಿ ಮರಕುಟಿಗ ಹೋಯಿತೆಂದು ತಿಳಿದ ಹಕ್ಕಿಗಳು ನಿರಾಳವಾದವು.
ಚಿಟ್ಟೆ ಹಕ್ಕಿ ಮತ್ತು ಅವನು
ಪ್ರತಿ ನಿತ್ಯ ಅವನು ಅದೇ ದೃಶ್ಯ ನೋಡುತ್ತಿದ್ದ.
ಹಕ್ಕಿಯೊಂದು ಚಿಟ್ಟೆಯನ್ನು ಅಟ್ಟಿಸಿಕೊಂಡು ಬರುವುದು. ಚಿಟ್ಟೆ ತಪ್ಪಿಸಿ ಹಾರುವುದು.
ತನ್ನ ಕ್ಯಾಮೆರಾದೊಳಗೆ ಅವೆರಡೂ ಸೆರೆಯಾಗಬೇಕೆಂದವನ ಆಸೆ. ಆ ದಿನ ಅವನ ಕಣ್ಣುಗಳಿಗೆ ಅಚ್ಚರಿ ಕಾದಿತ್ತು.
ಚಿಟ್ಟೆ ಇನ್ನೇನು ಹಕ್ಕಿಯ ಕೊಕ್ಕಿಗೆ ಸಿಗುವುದರಲ್ಲಿತ್ತು
ಎರಡೂ ಒಟ್ಟಿಗೆ ಸಿಕ್ಕಿದ ಸಂತಸ ಅವನದು.
ಕ್ಲಿಕ್ಕಿಸಿಯೇ ಬಿಟ್ಟ.
ಅವನಾಸೆ ತೀರಿತ್ತು. ಮರುದಿನ ಅವನಲ್ಲಿಗೆ ಹೋಗಲಿಲ್ಲ.
ಹಕ್ಕಿಯ ಬೇಟೆ ಸಿಕ್ಕಿತ್ತು. ಅದೂ ಹೋಗಲಿಲ್ಲ.
ಮತ್ತು
ಚಿಟ್ಟೆಯೂ ಹೋಗಲಿಲ್ಲ.
No comments:
Post a Comment