Pages

Total Visitors

Monday, July 11, 2016

ಸಮುದ್ರದ ಕಥೆಗಳು

೧. 
ಸೋಮೇಶ್ವರದ ಸಮುದ್ರ ಭೋರ್ಗರೆಯುತ್ತಿತ್ತು.  ಬೇಸಗೆಯ ಕಾಲದಲ್ಲಿ  ಸಂಕೋಚದಿಂದ ಬಂಡೆಗಳನ್ನು  ಸೋಕಿ ಹಿಂತಿರುಗುತ್ತಿದ್ದ ಅಲೆಗಳು ಈಗ ಅವುಗಳ ಮೇಲೆ ಬೆಳ್ನೊರೆಯ ಚಾದರ ಹಾಸಿ ಹಕ್ಕು ಸ್ಥಾಪಿಸಿದ್ದವು. ಗಾಳಿಗೆ ತೂಗಾಡುವ ತೆಂಗಿನಮರಗಳು, ಹಾರಾಡುವ ಹಕ್ಕಿಗಳು ಸಮುದ್ರವನ್ನೇ ಅಚ್ಚರಿಯಿಂದ ನೋಡುವ ಜನರ ಗುಂಪು, ಅಲೆಗಳಲ್ಲಿ ಪಾದಗಳನ್ನು ತೋಯಿಸಿ ನಾಚಿಗೆಯ ನಗು ನಗುವ ಪ್ರೇಮಿಗಳು,  ಇವೆಲ್ಲವೂ ನನಗೆ ಸಂಬಂಧಿಸಿದ್ದೇ ಅಲ್ಲ ಎಂಬಂತೆ ಅವನು ಬಂಡೆಯಾಚೆಯಿಂದ ಏರುತ್ತಾ ಬರುತ್ತಿದ್ದ.
 ಸುಮಾರು ಅರವತ್ತು ವಯಸ್ಸು ದಾಟಿತ್ತೇನೋ  ಪ್ರಾಯ. ಗಂಭೀರ ಮುಖಭಾವ ಅವನ ವಯಸ್ಸಿಗಿಂತ ಹಿರಿಯನನ್ನಾಗಿ ತೋರಿಸುತ್ತಿತ್ತು.  ಮಾಸಿದ ಅಂಗಿ,  ಮಡಚಿ ಕಟ್ಟಿಕೊಂಡ ಹೂವಿನ ಡಿಸೈನ್ ಹೊತ್ತ ಪಂಚೆ. ಹಿಂಬಾಗ ತಳೆದು ನೆಲಕ್ಕೆ ಒರೆಸುವಂತಿದ್ದ ಹವಾಯಿ ಚಪ್ಪಲಿ ಸಂಜೆಯನ್ನು ಆಹ್ಲಾದಕರವಾಗಿ ಕಳೆಯ ಬಂದವರ ಪಟ್ಟಿಗೆ ಆತನನ್ನು ಸೇರಿಸುತ್ತಿರಲಿಲ್ಲ.  ಒಂದು ಕೈಯಲ್ಲಿ ಹಳೆಯ ತಂಗೀಸಿನ ಚೀಲ ತುಂಬಿಕೊಂಡ ಭಾರದಿಂದ ಒಂದು ಬದಿಗೆ ವಾಲಿದಂತಿತ್ತು. ಇನ್ನೊಂದು ಕೈಯಲ್ಲಿ ಗಾಳ.  ಜಾರುವ ಬಂಡೆಯ ಅಂಚಿನಲ್ಲಿ ಜಾಗ್ರತೆಯಾಗಿ ಕುಳಿತುಕೊಂಡ. 
ಮೀನುಗಳ ಪ್ರಾಣ ತೆಗೆಯುವವನಿಗೆ ತನ್ನ ಪ್ರಾಣದ ಬಗ್ಗೆ ಅದೆಷ್ಟು ಕಾಳಜಿ..!! 
 ಸಮುದ್ರದ ಕಡೆಗೆ ಮುಖ ಮಾಡಿ ಕಾಲು ಚಾಚಿ ನಿರಾಳವಾಗಿ ಕುಳಿತುಕೊಂಡವನು ತನ್ನ ಚೀಲವನ್ನು ಒಂದು ಬದಿಗಿರಿಸಿಕೊಂಡ. ಗಾಳದ ತುದಿಗೆ ಏನನ್ನೋ ಕಟ್ಟಿದ.  ಸಮುದ್ರದೊಳಗೆ ಎತ್ತಿ ಎಸೆದ. ಅಲೆಗಳ ರಭಸ ಅವನ ಗಾಳದ ತುದಿಯನ್ನು ಅತ್ತಿತ್ತ ಎತ್ತಿ ಹಾಕುತ್ತಿತ್ತು. ಅವನ ಕೈಗಳು ಅಲುಗಾಡದೇ ನಿಂತಿತ್ತು. ಕಣ್ಣುಗಳು ನೀರಿನಾಳವನ್ನು ಬಗೆದು ನೋಡುವಂತೆ ತೀಕ್ಷ್ಣವಾಗಿತ್ತು. ಇದ್ದಕ್ಕಿದ್ದಂತೆ ಅವನ ಮುಖದ ಗಂಟುಗಳು ಸಡಿಲಾದವು. ತುಟಿಯಂಚು ಕೊಂಚ ಅಗಲವಾಗಿ, ನಗು ನಾನಿದ್ದೇನೆ ಎಂದು ಬಾಗಿಲ ಬಳಿ ನಿಂತಿತು. 
ಯಾವುದೋ ಮೀನು ಹಸಿವಿನಾಸೆಗೆ ಬಂದು ಬಲಿ ಬಿದ್ದು ಗಾಳಕ್ಕೆ ಸಿಲುಕಿ ಒದ್ದಾಡುವಾಗ ತನ್ನ ಹೊಟ್ಟೆ ತುಂಬುವಾಸೆಯ ಸ್ವಾರ್ಥದ  ನಗುವೇನೋ ಅದು.. !!
ಗಾಳ ಹಿಡಿದೆತ್ತಿ ಮತ್ತೆ ಮತ್ತೆ ನೀರಿಗೆಸೆಯುವುದು ಹೊರ ತೆಗೆಯುವುದು ಮಾಡುತ್ತಲೇ ಇದ್ದ. ಒಮ್ಮೆ ಗಾಳವನ್ನೆಳೆದುಕೊಂಡು  ಚೀಲದೊಳಗೆ ಕೈಯಾಡಿಸಿದವನ ಕೈ ಖಾಲಿಯಾಗಿಯೇ ಹೊರ ಬಂತು. ಇಷ್ಟು ಬೇಗ ಖಾಲಿಯಾಯಿತೇ ಎಂಬ ಅಪನಂಬಿಕೆಯಿಂದ ಮತ್ತೊಮ್ಮೆ ಕೈಯಾಡಿಸಿ ಒಳಗೇನೂ ಇಲ್ಲ ಎಂದು ನಿರ್ಧಾರವಾದ ಮೇಲೆ ಕೈ ಹೊರ ತೆಗೆದ. ಹಿಂತಿರುಗಿ  ಇಳಿಜಾರಿನ ಬಂಡೆಯಲ್ಲಿ ಇಳಿಯುವಾಗ ಕಾಲು ಜಾರಿ ಸರಕ್ಕೆಂದು ಮರಳಿನ ಮೇಲೆ ಬಿದ್ದ. 
ತಂಗೀಸಿನ ಚೀಲ ಒಂದು ಕಡೆಗೆ ಗಾಳ ಇನ್ನೊಂದು ಕಡೆಗೆ. ಬಿದ್ದವನು ಏಳಲೆಂದು ಜಾರುವ ಮರಳನ್ನೇ ಆಧಾರವಾಗಿಸಲು ಪ್ರಯತ್ನ ಪಡುತ್ತಿದ್ದ. ಅಲ್ಲೇ ಇದ್ದ ನಾನು ಕೈ ಹಿಡಿದು ಎತ್ತಬಹುದಿತ್ತು. ಆದರೆ  ನನ್ನ ಕಣ್ಣುಗಳು ಅವನ ಚೀಲದ ಕಡೆಗಿತ್ತು. ಅದು ಖಾಲಿಯಾಗಿತ್ತು. ಹಾಗಿದ್ದರೆ ಅವನು ಇಷ್ಟು ಹೊತ್ತು ಗಾಳ ಹಾಕಿ ಹಿಡಿದ ಮೀನುಗಳೆಲ್ಲಾ ಎತ್ತ ಹೋದವು? ಗಾಳದ ಕಡೆಗೆ ನೋಡಿದೆ. ಅದರ ತುದಿಯಲ್ಲಿ ಕೊಕ್ಕೆಯೇ ಇರಲಿಲ್ಲ. 
ಓಹ್.. ನಾನು ಅವನ ಕೈ ಹಿಡಿದು ಎತ್ತುವ ಮೊದಲೇ ಆತ ಮೆಲ್ಲನೆ ಗಾಳವನ್ನು ಮಡಿಚಿ ಕೈಯಲ್ಲಿ ಹಿಡಿದ. ತಂಗೀಸು ಚೀಲವನ್ನು ಹಿಡಿದುಕೊಂಡು ಎದ್ದಿದ್ದ.  ನನ್ನ ಕಡೆಗೂ ನೋಡದೆ ಹಿಂತಿರುಗಿ ಹೋಗುತ್ತಿರುವವನ್ನು ನೋಡುವ ನನ್ನ ಕಣ್ಣುಗಳ ಭಾವ ಬದಲಾಗಿತ್ತು. 

೨. 

ಸಮುದ್ರ ದಂಡೆ ಉದ್ದಕ್ಕೆ  ಹಾದು ಹೋಗಿತ್ತು. ಅಲೆಗಳು ಹೊರಳಿ ಮರಳಿ ದಡವನ್ನೇ ಪ್ರೀತಿಸುತ್ತಿದ್ದವು.  ಪುಟ್ಟ ಕೆಂಪು ಬಣ್ಣದ ಏಡಿಯೊಂದು ಮರಳಿನ ಪೊಟರೆಯಿಂದ  ಹೊರ ಬಂದು ಇನ್ನೊಂದು ತೂತಿನೊಳಕ್ಕೆ ಇಳಿಯಿತು. ಹದ್ದುಗಳು ಕಾಗೆಗಳು ನಿರಾಸೆಯಿಂದ  ನಿಟ್ಟುಸಿರಿಟ್ಟವು. ಸಮುದ್ರ ಅವರನ್ನು ನೋಡಿ ಅಟ್ಟಹಾಸದ ನಗೆ ನಕ್ಕಿತು. ಕಪ್ಪು ದೊಡ್ಡ ಬಂಡೆಯೊಂದರ ಮೇಲೆ ನಿಂತಿದ್ದ ಪ್ರೇಮಿಗಳು ಸಮುದ್ರದ ಬೋರ್ಗರೆತಕ್ಕೆ ತಮ್ಮ ಸಲ್ಲಾಪ ಕೇಳಿಸದೇನೋ ಎಂಬಂತೆ ಕೈಯೊಳಗೆ ಕೈಯನ್ನಿಟ್ಟು. ಕೆನ್ನೆಗೆ ಕೆನ್ನೆ ಒತ್ತಿ  ಕಿವಿಗಳಲ್ಲೇ ಪಿಸುಗುಟ್ಟುತ್ತಿದ್ದರು.  ಕಡಲ  ಹಕ್ಕಿಯೊಂದು ಸುಯ್ಯನೆ ನೀರ ಮೇಲಿಳಿದು ಮೇಲೇರಿ ಕೊಕ್ಕಿನಲ್ಲೇನೋ ಕಚ್ಚಿಕೊಂಡು ಹಾರಿತು. ಅಲೆಗಳೊಂದಿಗೆ ಬರುವ ಮೀನಿಗಾಗಿ ಬಲೆ ಹಾಕಿ ಕಾದವನೊಬ್ಬ ಹಕ್ಕಿಯನ್ನು ಶಪಿಸತೊಡಗಿದ. ಮೂರ್ನಾಲ್ಕು ನಾಯಿಗಳು ಸಮುದ್ರದ ಮೊರೆತವನ್ನು ಜೋಗುಳವೇನೋ ಎಂಬಂತೆ ಕೇಳುತ್ತಾ ತೂಕಡಿಸುತ್ತಿದ್ದವು. ಇದ್ದಕ್ಕಿದ್ದಂತೆ ಒಂದು ನಾಯಿ ಎದ್ದು ಬೊಗಳತೊಡಗಿತು. ಅನತಿ ದೂರದಲ್ಲಿ ಕಡು ಕಪ್ಪು ಬಣ್ಣದ ನಾಯಿ ಒಂದು ಮುಖ ತಗ್ಗಿಸಿ ಬಾಲ ಅಲ್ಲಾಡಿಸುತ್ತಾ ಆಗಾಗ ಬಗ್ಗಿ ಸಲಾಮು ಹೊಡೆಯುತ್ತಾ ನಿಮ್ಮ ಪರಿಧಿಯೊಳಗೆ ಬರಬಹುದೇ ಎಂದು ಅಪ್ಪಣೆ ಬೇಡುತ್ತಿತ್ತು. ಉಳಿದೆರಡು ನಾಯಿಗಳು ರಭಸದಿಂದ ಅದರ ಬಳಿಗೆ ಹೋಗಿ ಸುತ್ತ ಮುತ್ತ ತಿರುಗಿ ಪರಿಚಿತ ಎಂದಾದ ಮೇಲೆ ಮರಳಿ ತಮ್ಮ ಸ್ಥಾನಕ್ಕೆ ಮರಳಿದವು. ಹೊಸದಾಗಿ ಬಂದ ನಾಯಿ ಈಗ ಎದೆ ಸೆಟೆಸಿ ಒಳ ಬಂದು ಉಳಿದವರಂತೆ  ಸಮುದ್ರ ನೋಡುತ್ತಾ ಜೂಗರಿಸತೊದಗಿತು. . 
ಪತ್ರಿಕೆಯನ್ನು ಹಿಡಿದು ಬಂದ ವಯಸ್ಸಾದವರೋರ್ವರು ತಮ್ಮ ಚಪ್ಪಲಿಯನ್ನೇ ತಲೆದಿಂಬಾಗಿ ಇಟ್ಟು ಬಂಡೆಯ ಮೇಲೆ ಮಲಗಿ ಓದತೊಡಗಿದರು. ಅವರ ಮಿತ್ರರೊಬ್ಬರು ಅವರ ಪಕ್ಕದಲ್ಲೇ ಕಾಲು ಚಾಚಿ ಆಗಸದಲ್ಲಿ ಇನ್ನಷ್ಟೇ ಹುಟ್ಟಬೇಕಿರುವ ನಕ್ಷತ್ರಗಳನ್ನು ನಿರೀಕ್ಷಿಸುತ್ತಾ ಮಲಗಿದರು. ಯುವತಿಯರ  ಗುಂಪೊಂದು ಸಮುದ್ರ ನೋಡಲೆಂದು ಬಂದವರು ತಮ್ಮ ಫೊಟೋಗಳನ್ನು ತೆಗೆಯುತ್ತಾ ಸಮುದ್ರವನ್ನು ಮರೆತೇಬಿಟ್ಟರು. ನಾಲ್ಕಾರು ಯುವಕರು ಜೊತೆ ಜೊತೆಯಾಗಿ ಹರೆಯದ ಕಣ್ಣುಗಳ ಮಿಲನಕ್ಕೆ ಕಾತರಿಸುತ್ತಾ ಸಮುದ್ರದ ದಂಡೆಯಲ್ಲೇ ಕುಳಿತರು.ಪುಟ್ಟ ಪೋರನೊಬ್ಬ  ತನ್ನದೇ ಚಡ್ಡಿಯನ್ನು ಸಮುದ್ರದತ್ತ ಎಸೆದು ಅದು ಮರಳಿ ಬಾರದಿರುವುದನ್ನು ಕಂಡು ಅಳುತ್ತಿದ್ದರೆ ಅವನ ಜೊತೆಗೆ ಬಂದ ಹಿರಿಯರು ನಗುತ್ತಿದ್ದರು.  
 ಅಲ್ಲೇ ದಂಡೆಯಲ್ಲಿ ಮಾರುತ್ತಿದ್ದ ಉಪ್ಪು  ಮೆಣಸು ಹಾಕಿದ ಉದ್ದುದ್ದ ಮಾವಿನ ಹೋಳುಗಳ ರುಚಿ ನಾಲಿಗೆಗೆ ತಾಗುತ್ತಿದ್ದಂತೆಯೇ ಮನಸ್ಸಿನೊಳಗೂ ಚುರುಕು ಮುಟ್ಟಿಸಿತೇನೋ ಎಂಬಂತೆ ಕಿರುಚಿದ ಸುಂದರ ಕಪ್ಪು ಕಣ್ಣುಗಳ ಒಡತಿಯನ್ನು ಹಲವಾರು ಕಣ್ಣುಗಳು ಅರಳಿ ನೋಡಿದವು. 
ಸೂರ್ಯ ಇದೆಲ್ಲಾ ನನ್ನದೇ ಒಡೆತನದ ರಾಜ್ಯ ಎಂಬಂತೆ ಕೆಂಪು ಶಾಯಿಯ ಮುದ್ರೆಯನ್ನು ಎಲ್ಲೆಡೆಗೊ ಒತ್ತಿ ಪಶ್ಚಿಮದ ಅರಮನೆಯತ್ತ  ಹಾಕಿದ. 
ಇಷ್ಟೆಲ್ಲಾ ಆಗುತ್ತಿದ್ದರೂ ಸೋಮಾರಿ ಸಂಜೆಯೊಂದು ತಣ್ಣಗೆ ಮಲಗಿತ್ತು. 

೩. 
 ಆಕಾಶ ನೀಲಿಯ ಅಂಗಿ, ಮಾಸಲು ಮಣ್ಣಿನ ಬಣ್ಣದ ಪ್ಯಾಂಟು ಹಾಕಿದ ಆತ ಹಿಡಿದ ಚೀಲದಲ್ಲಿ ಬಗೆ ಬಗೆಯ ತರಕಾರಿಗಳ ರಾಶಿ ಇತ್ತು.  ಅದರ ತೂಕಕ್ಕೆ ವಾಲಿದಂತೆ ನಡೆಯುತ್ತಿದ್ದರೂ ಅವನ ನಡಿಗೆ ನಿರ್ದಿಷ್ಟ ಜಾಗದ ಕಡೆಗೇ ಇತ್ತು. ಅಲೆಗಳು ಬಡಿಯುತ್ತಿದ್ದ ಬಂಡೆಯ ಸೀಳಿನ ತುದಿಯಲ್ಲಿ ಜಾಗ ಹಿಡಿದು ಕುಳಿತುಕೊಂಡ. ಕೈಯಲ್ಲಿ ಹಿಡಿದ ಗಾಳದ ತುದಿಗೆ ತರಕಾರಿಗಳನ್ನು ಸಿಕ್ಕಿಸಿ ಸಮುದ್ರದೆಡೆಗೆ ಎಸೆಯುತ್ತಿದ್ದ. ಅದು ಒಮ್ಮೊಮ್ಮೆ ಭಾರಕ್ಕೆ ಜಗ್ಗಿದಂತೆ ಕಂಡರೂ ಅವನು ಎಳೆದಾಗ ಅದರ ತುದಿಯ ತರಕಾರಿ ಹಾಗೇ ಉಳಿದಿರುತ್ತಿತ್ತು. ಈಗ ಬೇರೆ ಬಗೆಯ ತರಕಾರಿ.. ಮತ್ತೆ ಮತ್ತೆ ಅದೇ ಪ್ರಯತ್ನ. ನಿರಾಸೆಯಲ್ಲದೇ ಮತ್ತೇನೂ ಅವನ ಗಾಳಕ್ಕೆ ಬೀಳಲಿಲ್ಲ. ಸಿಟ್ಟಿನಿಂದ ಗಾಳವನ್ನೇ ಸಮುದ್ರದತ್ತ ಎಸೆಯುವ ಪ್ರಯತ್ನದಲ್ಲಿ ವಾಲಿ ಸಮುದ್ರಕ್ಕೆ ಬಿದ್ದ. ಅಲೆಗಳೆತ್ತ ಕೊಂಡೊಯ್ದವೋ ಕಾಣಲೇ ಇಲ್ಲ. 
ಎರಡು ದಿನ ಕಳೆದ ಮೇಲೆ ಪೇಪರಿನ ಒಂದು ಮೂಲೆಯಲ್ಲಿ ಸಣ್ಣ ಸುದ್ದಿಯೊಂದಿತ್ತು.
ಮೀನುಗಳು ತಿಂದು ಗುರುತು ಸಿಗದಂತಾದ ದೇಹವೊಂದು ಸಮುದ್ರ ದಂಡೆಯಲ್ಲಿ ಸಿಕ್ಕಿದೆ.  ತೆಳು ನೀಲಿ ಬಣ್ಣದ ಅಂಗಿ, ಮಾಸಲು ಮಣ್ಣಿನ ಬಣ್ಣದ ಪ್ಯಾಂಟು ಧರಿಸಿದ್ದ ಈ ವ್ಯಕ್ತಿಯ ವಿವರ ತಿಳಿದವರು ವೆನ್ಲಾಕ್ ಆಸ್ಪತ್ರೆಯ ಶವಾಗಾರ ಸಂಪರ್ಕಿಸಿ. 






1 comment:

  1. Intadde barahagalige mattu intadde innoo adeshto vishayagalige.. neenandre tumbaa hemme nange :)

    ReplyDelete