ಕರ್ಣನ ರಥ ಯುದ್ಧಭೂಮಿಯ ನೆಲದಲ್ಲಿ ಹೂತು ಹೋಗಿದೆ. ಅರ್ಜುನನ ಕಡೆಗೆ ತಿರುಗಿ ಹೇಳುತ್ತಾನೆ. ಅರ್ಜುನಾ 'ಕಲಹಕಾನುವರೀಗಲಲಸದು ಮತವು ಬಿಲುಹೀನ ಶರಹೀನ ಸಲೆ ವಾಹನಗಳ ಬಲಹೀನರಲ್ಲಿ ಸಲೆ ಬಲ್ಲಿದವ ನೀನು ನಿಲುವೊಂದು ಕ್ಷಣಕೆ ಸಿಲುಕಿರ್ದ ರಥವೆತ್ತುತಲೆ ಬರ್ಪೆ ರಣಕೆ'
ಯುದ್ದದಲ್ಲೂ ನೀತಿಗಳಿರುತ್ತವೆ. ಬೆನ್ನು ತೋರಿಸಿ ಓಡುವವನ ಮೇಲೆ ಯಾರೂ ಯುದ್ದ ಮಾಡುವುದಿಲ್ಲ. ಹಾಗೇ ಆಯುಧವಿಲ್ಲದ ಬಲಹೀನನಾದವನ ಜೊತೆ ಕಲಹ ಸಲ್ಲದು. ನಿನಗೆ ತಿಳಿಯದಿರುವುದು ಏನಿದೆ ಒಂದು ಕ್ಷಣ ನಿಲ್ಲು ರಥವನ್ನು ಎತ್ತಿ ಮತ್ತೆ ನಿನ್ನೊಡನೆ ಹೋರಾಟಕ್ಕೆ ಬರುತ್ತೇನೆ'.
ಅರ್ಜುನನಿಗೂ ಕರ್ಣನ ಮಾತುಗಳು ತಪ್ಪೆನಿಸುವುದಿಲ್ಲ. ನಿಯಮಗಳು ಇರುವುದೇ ಹಾಗೇ ತಾನೇ.
ಒಪ್ಪಿದ.
ರಥವನ್ನೆತ್ತುವ ಪ್ರಯತ್ನದಲ್ಲಿರುತ್ತಾನೆ ಕರ್ಣ.
ಆಗಲೇ ಕೃಷ್ಣ ಅರ್ಜುನನಿಗೆ ಕರ್ಣನನ್ನು ಕೊಲ್ಲಲು ಆದೇಶಿಸುತ್ತಾನೆ. ವೈರಿಗಳಿಗೆ ಆಪತ್ತು ಬಂದಾಗಲೇ ಕೊಲ್ಲುವುದು ರಾಜಧರ್ಮ.ಕಾಯುವುದೇನನ್ನು ..ಹಿಡಿ ಬಿಲ್ಲು ತೊಡು ಬಾಣ..
ಕರ್ಣನ ಬೆನ್ನು ಮಾತ್ರ ಕಾಣುತ್ತಿದೆ ಅರ್ಜುನನಿಗೆ.. ಇದ್ದಕ್ಕಿದ್ದಂತೆ ಬಿಲ್ಲು ಬಾಣಗಳನ್ನು ಕೆಳಗಿಟ್ಟು ಯಾವುದೋ ಭಾವನೆಗಳ ಆವೇಗಕ್ಕೆ ಸಿಲುಕಿದ್ದಾನೆ ಅರ್ಜುನ.ಅಲ್ಲಿಯವರೆಗೆ ವೈರಿಯಾಗಿದ್ದ ಕರ್ಣ ಆ ಕ್ಷಣಕ್ಕೆ ಆಪ್ತನಾಗುತ್ತಾನೆ.
ಅಂಗಲಾಚುತ್ತಾನೆ ಕೃಷ್ಣನಲ್ಲಿ ..
ಮನಸಿಜ ಪಿತ ನೀನು ಮಾತಿಲಿ ಬಿಟ್ಟಾಡು ಕರ್ಣನಾರೈ
ಎನ್ನ ಮನದಲಿ ಹಲವು ಹಂಬಲಿಸುತಲಿರ್ಪುದು ಕರ್ಣನಾರೈ
ಧನುವೆತ್ತಲಾರೆ ಕೂರ್ಗಣೆ ತೊಡಲಾರೆನು ಕರ್ಣನಾರೈ
ಮೇಣೆನಗೀಸು ಪಗೆಗಾಣದಾತನ ಮೇಲಿನ್ನು ಕರ್ಣನಾರೈ
ಪೊಡವಿ ಪಾಲಕನಿಂದ ಹೆಚ್ಚು ತೋರುತಲಿದೆ ಕರ್ಣನಾರೈ
ಎನ್ನ ಒಡಹುಟ್ಟಿದವನೋ ಸಂಬಂಧಿಯೋ ತಿಳಿಯದು ಕರ್ಣನಾರೈ
ನಡೆಯದೆನ್ನಯ ಮಾರ್ಗಣಂಗಳಾತನ ಮೇಲೆ ಕರ್ಣನಾರೈ
ದೇವ ನುಡಿ ನುಡಿ ಮರೆಮಾಜಬೇಡ ಯಥಾರ್ಥವ ಕರ್ಣನಾರೈ
ಇಲ್ಲಿ ಕವಿ ಅರ್ಜುನನ ವಿಲಾಪವನ್ನು, ಅವನ ಮನದಾಳದ ನೋವನ್ನು ಸರಳ ಶಬ್ಧಗಳಲ್ಲಿ ಹಿಡಿದಿಡುತ್ತಾನೆ. ಕಣ್ಣರಿಯದಿದ್ದರೂ ಕರುಳರಿಯದೇ ಎಂಬ ಮಾತು ನೆನಪಾಗುವುದು ಈಗಲೇ..
ಈ ಪರಿಸ್ಥಿತಿಯಲ್ಲಿ ಕೊಲ್ಲಬಹುದೇ ಕರ್ಣನನ್ನು ಎಂಬುದು ಅರ್ಜುನನ ಪ್ರಶ್ನೆಯಲ್ಲ.ಕೊಲ್ಲಬಾರದವನನ್ನು ಎಂಬುದೇ ಅವನ ಇಚ್ಛೆ. ಕೊಲ್ಲದಿರಲು ಕಾರಣಗಳನ್ನು ಹುಡುಕುತ್ತಾನೆ..
'ಕೃಷ್ಣಾ ನಾನೀಗ ಕೊಲ್ಲಲಾರೆ ಕರ್ಣನನ್ನು.. ಅವನ ಜೊತೆ ಇದ್ದಕ್ಕಿದ್ದಂತೆ ಬಂಧವೊಂದು ಬೆಸೆದಿದೆ. ಆ ನಂಟಿನ ಅಂಟು ಬಿಗಿಯಾಗಿದೆ. ಬಿಡಿಸಿಕೊಳ್ಳಲಾಗದಷ್ಟು..ನಿನಗೆ ತಿಳಿಯದಿದ್ದುದು ಯಾವುದಿದೆ ಜಗದಲ್ಲಿ ಹೇಳಿಬಿಡು ನನಗೆ ಯಾರಿವನು ಈ ಕರ್ಣ..
ಬಿಲ್ಲನ್ನೆತ್ತಲಾರೆನಯ್ಯಾ.. ಬಾಣವನ್ನು ಗುರಿಡಲಾರೆ ಅವನೆಡೆಗೆ.. ಸಮರವೆಸಗಬೇಕಾದರೆ ಹಗೆ ಬೇಕು.. ನನಗೆ ಅವನ ಮೇಲೆ ಕಿಂಚಿತ್ತೂ ಆ ಭಾವನೆಲ್ಲ. ಅಷ್ಟೇ ಏಕೆ ನನ್ನಣ್ಣ ಧರ್ಮರಾಯನಿಂದಲೂ ಈತನೇ ನನಗೆ ಹೆಚ್ಚು ಪ್ರಿಯವಾಗಿ ತೋರುತ್ತಿದ್ದಾನೆ ಹೇಳಬಾರದೇ ಯಾರವನು?'
ಹೇಳಬಹುದಿತ್ತಲ್ಲ ಕೃಷ್ಣನಿಗೆ.. ಇವನು ನಿನ್ನ ಅಣ್ಣ ಎಂದು..ಕೃಷ್ಣನಲ್ಲದೇ ಬೇರೆ ಯಾರೇ ಆಗಿದ್ದರೂ ಅರ್ಜುನನಿಗೆ ನಿಜ ನುಡಿಯುವ ಅಪಾಯವಿತ್ತು. ಯುದ್ಧವಲ್ಲಿಗೆ ನಿಲ್ಲುತ್ತಿತ್ತೇನೋ?
ಆದರೆ ಕೃಷ್ಣ ಹಾಗೆ ಹೇಳುವುದಿಲ್ಲ.. ಕರ್ಣನ ಪಾಪಗಳ ಲೆಕ್ಕ ಹಾಕುತ್ತಾನೆ.. ರೊಚ್ಚಿಗೆಬ್ಬಿಸುತ್ತಾನೆ ಅರ್ಜುನನನ್ನು..
'ಏನು ಹುಚ್ಚು ಹಿಡಿದಿದೆ ನಿನಗೆ ಅರ್ಜುನಾ.. ಎಷ್ಟೆಷ್ಟು ಮೋಸವೆಸಗಿದ್ದಾನೆ ಇವನು ಲೆಕ್ಕಹಾಕು.. ಆಗೆಂದಾದರು ಸಂಬಂಧಗಳ ಸುಳಿಯಲ್ಲಿ ಸಿಲುಕಿ ನಿಮ್ಮನ್ನು ಪಾರು ಮಾಡಿದ್ದಾನೆಯೇ? ಇವನು ನಿನ್ನ ಬಂಧುವೆಂತಾದಾನು? ರಣರಂಗದಲ್ಲಿ ಮೋಸದಿಂದ ನಿನ್ನ ಕಂದನನ್ನು ಕೊಂದವನಲ್ಲವೇ ಇವನು.ಏನಾದರೂ ಸಂಬಂಧವೋ ಅನುಬಂಧವೋ ಇದ್ದೀತೆಂದು ಎತ್ತಿದ ಕತ್ತಿ ಕೆಳಗಿಳುಹಿದ್ದಾನೆಯೇ? ಯುದ್ಧಭೂಮಿಗೆ ಬಂದು ಬಂಧುತ್ವವನ್ನು ಹುಡುಕಬೇಡ.. ಕೊಂದು ಕಳೆ ..'
ಮತ್ತರೆಕ್ಷಣದಲ್ಲಿ ಅರ್ಜುನನ ಬಾಣ ಕರ್ಣನೆದೆಗೆ ತಾಕಿ ಕರ್ಣ ಕುಸಿಯುತ್ತಾನೆ.
ಪ್ರಶ್ನೆ ಮೂಡುವುದು ಈಗಲೇ..
ಕರ್ಣನಿಗೆ ಗೊತ್ತಿದೆ ಅರ್ಜುನ ಯಾರೆಂದು..
ತನಗೂ ಅವನಿಗೂ ಇರುವ ಬಂಧುತ್ವವೇನೆಂದು.. ಆದರೆ ಎಲ್ಲಿಯೂ ಆ ಬಂಧನದ ಪಾಶಕ್ಕೆ ಸಿಲುಕದೆ ಒಡೆಯನ ಉಪ್ಪಿನ ಋಣ ತೀರಿಸುವೆಂದು ಮಾಡಬಾರದ್ದನ್ನೆಲ್ಲಾ ಮಾಡುತ್ತಾನೆ.
ಕೃಷ್ಣನಿಗೂ ತಿಳಿದಿದೆ ಅವರಿಬ್ಬರ ನಡುವಿನ ಬಂಧವೇನೆಂದು..
ನ್ಯಾಯಾನ್ಯಾಯಗಳ ತಕ್ಕಡಿಯಲ್ಲಿ ತೂಗಿದಾಗ ಕರ್ಣನ ಪಾಪಗಳ ತೂಕ ಹೆಚ್ಚಾಗಿಯೇ ಇತ್ತು.
ಹಾಗೊಂದು ವೇಳೆ ಸತ್ಯ ಹೇಳಿದ್ದರೆ.. ಕರ್ಣ ಬದುಕಬಹುದಿತ್ತು.. ಆದರೆ ಅದು ಅವನ ಸೋಲಾಗುತ್ತಿತ್ತು.
ದ್ರೌಪದಿಯ ಮುಖ ನೋಡುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದ ಕರ್ಣ, ಸುಭದ್ರೆಯ ಮಗನ ಹಂತಕ ಕರ್ಣ, ಪಾಂಡವರನ್ನು ಅವಮಾನಿಸುವ ಯಾವ ಕ್ಷಣವನ್ನೂ ಕಳೆದುಕೊಳ್ಳದೆ ಬಳಸಿದ್ದ ಕರ್ಣ.. ಸಾಯದೇ ಉಳಿದರೆ ಗೌರವವಿತ್ತೇ ಅವನಿಗೆ.. ಅನಿವಾರ್ಯವಾಗಿ ಪಾಪಪ್ರಜ್ಞೆಯಿಂದ ಬದುಕಿನುದ್ದಕ್ಕೂ ನರಳಬೇಕಿತ್ತವನು.. ಅವನ ಗೆಲುವು ಇದ್ದುದ್ದು ಸಾವಿನಲ್ಲಿಯೇ..
ಕೃಷ್ಣನ ಆಲೋಚನೆಯೂ ಅದೇ ಆಗಿತ್ತು. ಅವನಿಗೆ ಕರ್ಣನನ್ನು ಗೆಲ್ಲಿಸಬೇಕಿತ್ತು. ಜೊತೆಗೆ ಅರ್ಜುನನನ್ನೂ ..
ಒಂದು ಬಾಣ.. ಎರಡು ಗುರಿ..

