Pages
Total Visitors
Friday, December 30, 2011
Tuesday, December 27, 2011
ಅತಿಥಿ
ರೀ ..ಇವತ್ತು ನಮ್ಮ ಹೊಸ ಅತಿಥಿಯನ್ನು ಮನೆಗೆ ಕರ್ಕೊಂಡು ಬರೋಣ್ವಾ..
'ನೋಡೇ ಶಿಲ್ಲೂ ನೀನೂ ನಾನೂ ಇಡೀ ದಿನ ಆಫೀಸ್ನಲ್ಲಿ ಕೆಲ್ಸ ಮಾಡಿ ಸುಸ್ತಾಗಿರ್ತೀವಿ ಮನೇಗ್ಬಂದ್ರೆ ಇಲ್ಲಿನೂ ಕಡ್ಮೆ ಕೆಲ್ಸ ಇರಲ್ಲ.ಎಲ್ಲಾ ಮುಗ್ಸಿ ಹಾಸಿಗೆ ಸೇರುವಾಗ ಹನ್ನೊಂದು ಗಂಟೆ ಆಗಿರುತ್ತೆ. ಇದರ ನಡುವೆ ಈ ಹೊಸ ಜವಾಬ್ಧಾರಿ ಅಗತ್ಯ ಇದೆ ಅಂತ ಅನ್ಸುತ್ತಾ ನಿಂಗೆ? ಯೋಚ್ನೆ ಮಾಡು ..
' ಅದೆಲ್ಲಾ ನಂಗೊತ್ತಿಲ್ಲ. ನಂಗೆ ಮನೆಗೆ ಬಂದ್ರೆ ನಿಮ್ ಮುಖ ನಾನು ..ನನ್ನ ಮುಖ ನೀವು ಇಷ್ಟೇ ನೋಡೋದು ಬೇಜಾರಾಗಿ ಬಿಟ್ಟಿದೆ .ಅದೂ ಅಲ್ಲದೆ , ಅದನ್ನ ಜವಾಬ್ಧಾರಿ ಅಂತ ಯಾಕಂದ್ಕೋಬೇಕು?ನಮ್ಮದೇ ಒಂದು ಭಾಗ ಅಂತ ಅಂದ್ಕೊಂಡ್ರಾಯ್ತಪ್ಪ. ನನ್ನ ಕೆಲ್ಸದ ಜೊತೆ ಅವನೇನೂ ನಂಗೆ ಭಾರ ಅನ್ಸಲ್ಲ. ನಿಮ್ಮನ್ನೇನೂ ಅದು ಮಾಡಿ ಇದು ಮಾಡಿ ಅಂತನ್ನಲ್ಲ. .. ಸುರೇಶ್ ಪ್ಲೀಸ್ ಒಪ್ಕೋಳ್ಳೀಪ್ಪಾ.
'ಹ್ಹೋ..! ಆಗ್ಲೇ ನೀನೇ ಎಲ್ಲಾ ಡಿಸೈಡ್ ಮಾಡಿ ಆಗಿದೆ .. ಬಿಡು ಇನ್ನು ನನ್ನೇನು ಕೇಳೋದು..? ನಿನ್ನಿಷ್ಟ ಬಂದಂತೆ ಮಾಡ್ಕೋ..'
'ಪ್ಲೀಸ್ ಸುರೇಶ್ ಸಿಟ್ಟು ಮಾಡ್ಕೋಬೇಡಿ. ನಾನ್ಯಾವತ್ತಾದ್ರು ನಿಮ್ಮನ್ನ ಕೇಳ್ದೆ ಏನಾದ್ರು ಮಾಡಿದ್ದೀನಾ.. ನೀವೂ ಕೂಡಾ ಹಾಗೇ ಅಂತ ನಂಗೊತ್ತು. ನನ್ನ ಆಸೆ ಇದು ಅಂತ ಅಂದ್ಕೊಳ್ಳಿ.. ಅಷ್ಟಕ್ಕೂ ಇದ್ರಲ್ಲಿ ತಪ್ಪೇನಿದೆ ಹೇಳಿ..'
'ತಪ್ಪಿನ ಪ್ರಶ್ನೆ ಅಲ್ಲ ಶಿಲ್ಲೂ.. ಮುಂದೆ ಕಷ್ಟ ಪಡ್ಬೇಕಾಗುತ್ತೇನೋ ಅನ್ನೋ ಭಯ.. ಜೊತೆಗೆ ಅಮ್ಮ ಬೇರೆ ಊರಿಂದ ಬರ್ತಿದ್ದಾರೆ. ಅವರಿಗೆ ನಮ್ಮ ಈ ನಿರ್ಧಾರ ಬೇಸರ ಆಗ್ಬಹುದು. ನಾನು ನೀನು ಒಪ್ಪಿದಷ್ಟು ಸುಲಭ ಅಲ್ಲ ಅವ್ರನ್ನು ಮಣಿಸೋದು..ಅದಲ್ಲದೇ ಆ ಪುಟ್ಟ ಜೀವವನ್ನು ಸಾಕೋ ಅನುಭವ ಆದ್ರೂ ನಿಂಗೇನಿದೆ ಹೇಳು..?'
'ಅನುಭವಕ್ಕೆ ಏನು.. ಯಾರ್ಗೂ ಹುಟ್ಟಿನಿಂದಲೇ ಬಂದು ಬಿಡಲ್ಲ ಅದು. ನಾವೇ ಕಲೀಬೇಕು... ಆದ್ರೆ . ಹೆಣ್ಣಿಗೆ ತಾಯ್ತನ ಅನ್ನೋದು ರಕ್ತದಲ್ಲೇ ಇರುತ್ತೆ ಬಿಡಿ. . ಅದನ್ನು ಹೊಸದಾಗಿ ಕಲಿಯಬೇಕಿಲ್ಲ..'
ಅಷ್ಟಕ್ಕೂ ಇದನ್ನ ನಿರ್ಧಾರ ಮಾಡ್ಬೇಕಾಗಿರೋದು ನೀವು.. ಅವ್ರಲ್ಲ. ಅವ್ರನ್ನ ಒಪ್ಸೋ ಕೆಲ್ಸ ನಂಗೆ ಬಿಟ್ಬಿಡಿ. ನಿಧಾನವಾಗಿ ಹೇಳಿದ್ರೆ ಅರ್ಥ ಮಾಡ್ಕೊಳ್ತಾರೆ. ಅದೂ ಅಲ್ದೇ ನಂಗೀಗ ಆಫೀಸ್ ಟೈಮಿಂಗ್ಸ್ ಕೂಡಾ ಈಗ ಚೇಂಜ್ ಆಗಿದೆ. ಹಾಗಾಗಿ ಅವ್ನನ್ನ ನೋಡ್ಕೋಳ್ಳೋಕೂ ಕಷ್ಟ ಆಗಲ್ಲ. ನಾವಿಬ್ರೇ ಅಲ್ಲದೆ ಇನ್ನೊಂದು ಜೀವ ನಮಗಾಗಿ ಕಾಯ್ತಾ ಇರುತ್ತೆ ಅನ್ನೋದು ಎಷ್ಟು ಸಂತಸದ ವಿಷ್ಯ ಅಲ್ವಾ ಡಿಯರ್..
ಆಹಾ... ಈಗ ಡಿಯರ್ ಗಿಯರ್ ಅಂತೆಲ್ಲ ನನ್ನ ಪೂಸಿ ಮಾಡೋದೇನೂ ಬೇಕಾಗಿಲ್ಲ.
ಹೇ ಇಲ್ಲಾ ಸುರೇಶ್.. ಅವ್ನು ಎಷ್ಟು ಮುದ್ದು ಮುದ್ದು ಇದ್ದಾನೆ ಅಂದ್ರೆ ನೋಡಿದ ಕೂಡ್ಲೇ ಎತ್ಕೊಳ್ಳದೇ ಇರೋಕೆ ಮನ್ಸೇ ಬರಲ್ಲ.. ನೀವೂ ಅಷ್ಟೇ ನೋಡಿ.. ಈವಾಗೇನೋ ಹೀಗೆಲ್ಲ ಮಾತಾಡ್ತೀರಿ ..ಅವ್ನು ಬಂದ್ಮೇಲೆ ನನ್ನ ಕಡೆ ನೋಡೋಕೂ ಟೈಮ್ ಇರಲ್ಲ ನಿಮ್ಗೆ..
ಸರಿ ಸರಿ ಅವ್ನಿನ್ನು ಮನೆಗೇ ಬಂದಿಲ್ಲ .. ಆಗ್ಲೇ ಸುರು ಆಯ್ತು ಗುಣಗಾನ. ಬಂದ್ಮೇಲಂತೂ ನನ್ನ ಹೊಟ್ಟೆಗೆ ತಣ್ಣೀರ ಬಟ್ಟೇನೇ ಗತಿ ಅನ್ಸುತ್ತೆ..
ಅಯ್ಯೋ ಹಾಗ್ಯಾಕಂದ್ಕೋತೀರಿ.. ಎಲ್ರಿಗೂ ನೀವೆ ಬೇಯ್ಸಿ ಹಾಕಿದ್ರಾಯ್ತಪ್ಪ..
ಇರು ನಿಂಗೆ ಮಾಡ್ತೀನಿ.. ಮಾತಲ್ಲಂತೂ ನಿನ್ನ ಗೆಲ್ಲಕಾಗಲ್ಲ ಬಿಡು..ನಿನ್ನ ಕುಶಿನೇ ನಂಗೂ ಬೇಕಾಗಿರೋದು .. ಆದ್ರೆ ಈ ಸಂತೋಷವನ್ನು ಇಷ್ಟು ದೊರ ನಿಂತ್ಕೊಂಡು ಸೆಲೆಬ್ರೇಟ್ ಮಾಡೋದು ತಪ್ಪು ಅಂತ ಅನ್ಸಲ್ವಾ ನಿಂಗೆ..
ಆಹಾ .. ಅದೆಲ್ಲ ಏನೂ ಬೇಡ ರಾಯರೇ.. ಸಧ್ಯಕ್ಕೆ ದೂರದಿಂದಲೇ ಥ್ಯಾಂಕ್ಸ್ ಹೇಳ್ತೀನಿ .. ಯಾಕೆಂದ್ರೆ .ಶುಭಸ್ಯ ಶೀಘ್ರಂ .. ಈವಾಗಲೇ ಹೊರಟು ಬಿಡೋಣ ... ನನ್ನ ಫ್ರೆಂಡ್ ಗೆ ಫೋನ್ ಮಾಡಿ ಈಗ್ಳೆ ಬರ್ತಾ ಇದ್ದೀನಿ ಅಂತ ಹೇಳ್ಬಿಡ್ತೀನಿ. ಆಮೇಲೆ ಬೇರೆ ಯಾರಾದ್ರೂ ಕೇಳಿದ್ರು ಅಂತ ಅವ್ಳು ನಾಯಿ ಮರಿ ಕೊಟ್ಬಿಟ್ರೆ ಕಷ್ಟ..
Sunday, December 25, 2011
ಮಾ(ಬಾ)ತುಕತೆ
ಆಗಷ್ಟೆ ಮರದಿಂದ ಅಡಿಕೆ ತೆಗೆದು ಹಾಕಿ ಆಗಿತ್ತು.ತೋಟದ ತುಂಬೆಲ್ಲ ಕೇಸರಿ ಬಣ್ಣದ ಅಡಿಕೆ. ಹೆಕ್ಕಿ ಬುಟ್ಟಿಗೆ ತುಂಬಿಸುವುದರಲ್ಲೆ ಮಗ್ನಳಾಗಿದ್ದೆ.
ಹಿಂದಿನಿಂದ ಏನೋ ಸದ್ದಾದಂತಾಯ್ತು .ನನ್ನ ಹಿಂಬಾಲಕರಂತೆ ನಿಂತಿದ್ದ ಬಾತುಕೋಳಿಗಳ ಪುಟ್ಟ ಗುಂಪೊಂದು ಕುತೂಹಲದ ನೋಟದಲ್ಲಿ ನನ್ನನ್ನು ನೋಡುತ್ತಿದವು.
ಹತ್ತಿರದಲ್ಲೇ ಹರಡಿಕೊಂಡಿದ್ದ ಅಡಿಕೆಯನ್ನು ಒಂದೆರಡು ಬಾರಿ ಕುಕ್ಕಿ ನೋಡಿದವು.
ನಂತರ ಒಂದಿಷ್ಟೂ ಹೆದರದೆ ನನ್ನ ಬಳಿ ಬಂದು ಏನು ಮಾಡುತ್ತಿದ್ದೀಯಾ ಎಂದಿತು.
ಕೆಲಸದ ತರಾತುರಿಯಲ್ಲಿದ್ದ ನಾನು ಕೊಂಚ ಅಸಹನೆಯಲ್ಲಿ 'ಕಾಣುತ್ತಿಲ್ಲವೇ.. ಅಡಿಕೆ ಹೆಕ್ಕುತ್ತಿರುವುದು'.. ಎಂದೆ.
ಇದನ್ನು ಹೆಕ್ಕಿ ತಿನ್ನಲು ಉಪಯೋಗಿಸುತ್ತೀಯಾ..ಎಂದಿತು.
ಕೆಲಸದ ಬೇಸರ ನೀಗಲು ಮಾತುಕತೆಯೂ ಒಂದು ದಾರಿ ಎಂದುಕೊಂಡು,' ಇಲ್ಲ..ಇದನ್ನು ಮನೆಗೆ ಒಯ್ದು ಒಣಗಿಸುತ್ತೇನೆ' ಎಂದೆ.
'ಆಮೇಲೆ ತಿನ್ನುವುದೋ..?' ಎಂದಿತದು ಸೋಜಿಗದಿಂದ..
'ಇಲ್ಲ..ಚೆನ್ನಾಗಿ ಒಣಗಿದ ನಂತರ ಸುಲಿದು ಮಾರುತ್ತೇವೆ'ಎಂದೆ.
ಕೊಂಚ ಗಲಿಬಿಲಿಯಿಂದ 'ಮಾರುವುದೇ .. ಹಾಗೆಂದರೇನು' ಎಂದಿತು.
'ಬೇರೊಬ್ಬರಿಗೆ ಕೊಡುವುದು. ಅದರ ಬದಲಾಗಿ ನಮಗೆ ಹಣ ನೀಡುತ್ತಾರೆ'. ಎಂದೆ..
'ಹಣವೇ.. ಸರಿ ಸರಿ ಆಮೇಲೆ ಅದನ್ನು ತಿನ್ನುವುದಲ್ಲವೇ'.. ಅಂದು ತಲೆ ಅಲುಗಿಸುತ್ತಾ ಕೇಳಿತು.
'ಇಲ್ಲ ಇಲ್ಲ .. ಹಣವನ್ನು ತಿನ್ನುವುದಿಲ್ಲ.. ಅದರಿಂದ ಆಹಾರ ಪಧಾರ್ಥಗಳನ್ನು ಕೊಂಡು ತಂದು, ಶುಚಿಗೊಳಿಸಿ, ಬೇಯಿಸಿ, ಮಸಾಲೆಗಳನ್ನೆಲ್ಲ ಬೆರೆಸಿ ರುಚಿಕರವಾದ ಬಳಿಕ ತಿನ್ನುವುದು'.. ಎಂದೆ.
Tuesday, December 20, 2011
Sunday, December 18, 2011
ಹೋರಾಟ
ಕುದಿಯುತ್ತಿರುವ ಸಾರಿಗೆ ಏನೋ ಕಡಿಮೆಯಾದಂತನಿಸಿತು. ಕೊತ್ತಂಬರಿ ಸೊಪ್ಪೇ ಹಾಕಿರಲಿಲ್ಲ. ಅದನ್ನು ತರಲು ಅಂಗಳದ ಮೂಲೆಯ ಕೈತೋಟದ ಕಡೆಗೆ ಹೆಜ್ಜೆ ಹಾಕುತ್ತಿದ್ದೆ.
ಪಕ್ಕನೇ ಎರಡು ದೊಡ್ಡ ಜಾತಿಯ ಕಡು ಕಪ್ಪು ಬಣ್ಣದ ಇರುವೆಗಳು ಕಣ್ಣು ಸೆಳೆದವು.ಇರುವೆಗಳ ಸಹಕಾರೀ ಗುಣ, ಶಿಸ್ತು,ಕಾರ್ಯ ಚಟುವಟಿಕೆಗಳ ಬಗ್ಗೆ ಮಾತ್ರ ತಿಳಿದಿದ್ದ ನನಗೆ ಇವುಗಳು ಕಾಳಗಕ್ಕೆ ಸಿದ್ಧರಾದಂತೆ ಎದುರು ಬದುರು ನಿಂತಿರುವ ರೀತಿ ಹೊಸದಾಗಿ ತೋರಿತು.
ಹೊರಟ ಕೆಲಸ ಮರೆತು ಅವುಗಳತ್ತಲೇ ನೋಡುತ್ತಾ ನಿಂತೆ. ನಾನು ಅಂದುಕೊಂಡಿದ್ದು ನಿಜವಾಗಿತ್ತು.ಅವು ಹತ್ತಿರ ಬಂದು ಬಲಾಬಲಗಳ ಪರೀಕ್ಷೆ ಮಾಡುವಂತೆ ಕೈಯಿಂದ ಕಾಲಿನಿಂದ ಪರಸ್ಪರ ದೂಡಿಕೊಳ್ಳುತ್ತಿದ್ದವು. ಇದ್ದಕ್ಕಿದ್ದಂತೆ ಒಂದು ಇರುವೆ ಪಕ್ಕದ ಗೋಡೆಯ ಮೇಲೆ ಹತ್ತಿ ಅಲ್ಲಿಂದ ಕೆಳಗಿದ್ದ ಇರುವೆಯ ಮೇಲೆ ನೆಗೆದು ಅದನ್ನು ಕೆಡವಿತು. ಬಲವಾಗಿ ಒಂದನ್ನೊಂದು ಗಟ್ಟಿ ಹಿಡಿದುಕೊಂಡು ಉಂಡೆಯಾಕಾರದಂತೆ ಅತ್ತಿಂದಿತ್ತ ಇತ್ತಿಂದತ್ತ ಉರುಳಿ ತಮ್ಮ ಚೂಪಾದ ಕೊಂಡಿಗಳಲ್ಲಿ ಚುಚ್ಚಿಕೊಳ್ಳುತ್ತಿದ್ದವು.
.ಬೀದಿ ನಾಯಿಗಳ ಜಗಳ ನೋಡಿ ಅಭ್ಯಾಸವಿದ್ದ ನನಗೆ, ಅವುಗಳಂತೆ ಇವು ಕೂಡಾ ಒಂದು ಶರಣಾಗತಿಯನ್ನು ಸೂಚಿಸುತ್ತಾ ನಿಂತರೆ ಇನ್ನೊಂದು ಅದನ್ನು ಬಿಟ್ಟು ಹೋಗಬಹುದು ಎಂದುಕೊಂಡು, ಮಾಡಬೇಕಿದ್ದ ಕೆಲಸ ನೆನಪಿಸಿಕೊಂಡು ಅಲ್ಲಿಂದ ಕಾಲ್ತೆಗೆದೆ.
ಸ್ವಲ್ಪ ಹೊತ್ತು ಕಳೆದು ಪುನಃ ಕುತೂಹಲದಿಂದ ಆ ಜಾಗಕ್ಕೆ ಬಂದು ಪರೀಕ್ಷಿಸಿದೆ. ಎರಡೂ ಇರುವೆಗಳು ಅತ್ಯಂತ ಪ್ರೀತಿಪಾತ್ರರಂತೆ ಒಂದನ್ನೊಂದು ಅಪ್ಪಿಕೊಂಡು ಸತ್ತು ಬಿದ್ದಿದ್ದವು.
ಸಾಲಾಗಿ ಬರುತ್ತಿದ್ದ ಇನ್ನೊಂದು ಜಾತಿಯ ಚಿಕ್ಕ ಇರುವೆಗಳ ಸಾಲು ಅವುಗಳನ್ನು ತಮ್ಮ ಆಹಾರವೆಂಬಂತೆ ಗೂಡಿಗೆ ಹೂತ್ತೊಯ್ಯಲು ಪ್ರಯತ್ನಿಸುತ್ತಿರುವುದು ಯಾಕೋ ಶವ ಮೆರವಣಿಗೆಯಂತೆ ತೋರಿತು.
ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬ ಮಾತೆಷ್ಟು ನಿಜ .. !!
Friday, December 16, 2011
ತುಂ ಬಿನ್ ಜಾವೂ ಕಹಾ ...
ಇನ್ನೂ ಮಲಗಿಯೇ ಇದ್ದ ಹೆಂಡತಿಯ ಕಡೆಗೊಮ್ಮೆ ನೋಡಿದೆ. ಅವಳಿಗೆ ಮೋಸ ಮಾಡುತ್ತಿದ್ದೇನೆ ಎಂಬ ಭಾವ ಒಂದು ಕ್ಷಣ ಮೂಡಿತು. ಮನಸ್ಸನ್ನು ಗಟ್ಟಿ ಮಾಡಿಕೊಂಡು ಕಣ್ಣುಗಳನ್ನು ಕೂಡಲೇ ಅವಳ ಕಡೆಯಿಂದ ಇತ್ತ ತಿರುಗಿಸಿ ಅಗತ್ಯದ ಯಾವುದೇ ವಸ್ತು ಉಳಿದಿಲ್ಲ ಎಂಬುದನ್ನು ಮತ್ತೊಮ್ಮೆ ಕಣ್ಣಾಡಿಸಿ ಪರೀಕ್ಷಿಸಿಕೊಂಡೆ. ಭಾರವಾದ ಸೂಟ್ ಕೇಸನ್ನು ಕೈಯಲ್ಲಿ ಹಿಡಿದು ಸದ್ದಾಗದಂತೆ ಬಾಗಿಲು ಮುಚ್ಚಿ ಹೊರಬಂದೆ. ಮನೆಯ ಮುಂದೆ ಇಳಿಜಾರಾದ ಕಾರಣ ಕಾರನ್ನು ಸದ್ದಾಗದಂತೆ ಕೊಂಚ ದೂರ ನ್ಯೂಟ್ರಲ್‌ನಲ್ಲೆ ಚಲಾಯಿಸಿ ನಂತರ ಸ್ಟಾರ್ಟ್ ಮಾಡಿ ಹೊರಟೆ.
ಮೊಬೈಲ್ ನಲ್ಲಿ ಮೆಸೇಜ್ ಬಂದ ಸದ್ದು. ಕಾಯುತ್ತಿದ್ದೇನೆ ,ಹೊರಟಿದ್ದೀರಾ?.. ಸ್ವರ್ಣ..
ಗಾಡಿ ಇನ್ನೂ ಕೊಂಚ ವೇಗ ವೃದ್ಧಿಸಿಕೊಂಡಿತು ..
ಸ್ವರ್ಣ..ಎಷ್ಟು ಸುಂದರ ಹೆಸರು. ಹೆಸರಿನಷ್ಟೆ ಅವಳೂ , ಅವಳ ವ್ಯಕ್ತ್ವಿತ್ವ, ಅವಳ ಆಲೋಚನೆಗಳು, ಎಲ್ಲವೂ ಸುಂದರವೆ..ಒಂದೆರಡು ಬಾರಿಯ ಭೇಟಿಯಲ್ಲೇ ನನ್ನ ಮನಸ್ಸನ್ನು ಗೆದ್ದು ಬಿಟ್ಟಿದ್ದಳು.
ಕಾರಿನ ಹೆಡ್ ಲೈಟಿನ ಬೆಳಕಿಗೆ ಕಂಡ ಮುಂಜಾನೆಯ ಗಾಳಿಗೆ ಹಾರುತ್ತಿದ್ದ ಅವಳ ಬಣ್ಣದ ಸೆರಗು ನನ್ನ ಯೋಚನಾ ಲಹರಿಯನ್ನು ತುಂಡರಿಸಿತು.
ಕೈಯಲ್ಲಿ ಪರ್ಸ್ ಹಿಡಿದು ಕಾಯುತ್ತಾ ನಿಂತಿದ್ದಳು .ನನ್ನನ್ನು ಕಾಣುತ್ತಿದ್ದಂತೆಯೇ ಅವಳ ಮೊಗದಲ್ಲಿ ಅರಳಿತ್ತು ಸಂತಸ ಬೆರೆತ ನಸು ನಗು.ನನ್ನನ್ನು ಬಿಟ್ಟು ಹೋಗಿಯೇ ಬಿಟ್ರೇನೋ ಅಂದ್ಕೊಂಡೆ.. ಅಂದಳು.
ಕಾರಿನಲ್ಲಿ ಆನ್ ಮಾಡಿದ್ದ ಎಫ್ ಎಂ ನಲ್ಲಿ ' ತುಂ ಬಿನ್ ಜಾವೂ ಕಹಾ .. ' ಎಂದ್ಹು ತೇಲಿ ಬರುತ್ತಿದ್ದ ಹಾಡು ಆಗಷ್ಟೇ ಅವಳ ಕಿವಿಗೆ ಬಿದ್ದು ಮೊಗದಲ್ಲಿ ನಾಚಿಕೆ ಆವರಿಸಿತು.
ನನಗ್ಯಾಕೋ ನಮ್ಮ ನಡುವೆ ಮಾತಿಗಿಂತ ಮೌನ ತುಂಬ ಹಿತಕರವೆನಿತು. ಅವಳೂ ಅದನ್ನು ಅರ್ಥ ಮಾಡಿಕೊಂಡವಳಂತೆ ಒಂದೊಂದಾಗಿ ಓಡುತ್ತಿರುವಂತೆ ಬಾಸವಾಗುವ ರಸ್ತೆ ಬದಿಯ ಮರಗಿಡಗಳ ಕಡೆಗೆ ಕಣ್ಣು ನೆಟ್ಟಳು.
ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ರೋಡ್ ನಿಂದ ಒಂದು ಕವಲು ದಾರಿಯ ಕಡೆಗೆ ಬೆರಳು ತೋರಿಸಿ ಈ ರಸ್ತೆ .. ಎಂದಳು.ತಲೆಯಲುಗಿಸಿದ ನಾನು ಸುತ್ತಲಿನ ಹಸಿರು , ಬೆಳಗಿನ ಬೆಳಕಿಗೆ ಅಲ್ಲಲ್ಲಿ ಅನಾವರಣಗೊಳ್ಳುತ್ತಿದ್ದ ಮನೆಗಳು, ಎಲ್ಲವನ್ನೂ ಕಣ್ಣೊಳಗೆ ಇಳಿಸುತ್ತಲೇ ದಾರಿ ಸವೆಸುತ್ತಿದ್ದೆ.
ದೂರದ ಪರಿವೆಯೇ ಇರಲಿಲ್ಲ. ನನ್ನೆಲ್ಲ ದುಃಖಗಳೂ ಇಂದೇ ಕೊನೆಗೊಳ್ಳುವುದು ಎಂಬ ಸಮಾಧಾನ ಭಾವ ಎಲ್ಲವನ್ನೂ ಮರೆಸಿತ್ತು.
ಹಳೆಯ ದೊಡ್ಡ ಕಟ್ಟಡವೊಂದು ದೂರದಲ್ಲಿ ಕಾಣಿಸಿದಾಗ ಅದರ ಎದುರು ನಿಲ್ಲಿಸಿ ಎಂದಳು. ತಾನೇ ಮುಂದಾಗಿ ಒಳ ನಡೆದು ಯಾರನ್ನೋ ಕರೆದು ಕಾರಿನಲ್ಲಿದ್ದ ಬ್ಯಾಗ್ ಗಳನ್ನು ಒಯ್ಯಲು ಹೇಳಿದಳು.
ನನ್ನ ಮನದಲ್ಲೇನೋ ಕಂಪನ .ಏನನ್ನೋ ಕಳೆದುಕೊಳ್ಳುತ್ತಿದ್ದೇನೆಯೇ.. ಕಣ್ಣಲ್ಲಿ ಕಂಬನಿ ಇಣುಕಿದಂತೆನಿಸಿ, ಕೆನ್ನೆ ಸವರಿಕೊಂಡೆ. ಒದ್ದೆಯಾಯಿತು ಕೈ.. ಎದೆಯೊಳಗಿನ ಭಾರ ಕರಗಿದಂತೆ..
ಜೊತೆಗೊಂದು ನಿರ್ಧಾರ ಭಾವ.. ಇಲ್ಲ... ನನ್ನ ಈ ನಡೆಯಿಂದ ನನ್ನ ಮುಂದಿನ ಬದುಕಿಗೆ ಕೆಡುಕೇನೂ ಆಗಲಾರದು ಎನ್ನುವ ಪೂರ್ಣ ವಿಶ್ವಾಸ.
ಇವಳನ್ನು ಮೊದಲ ಬಾರಿಗೆ ಕಂಡು ,ಭೇಟಿಯಾಗಿ ವಿಷಯ ತಿಳಿಸಿದಾಗಲೇ ತನ್ನ ಅನಾಥ ಆಶ್ರಮಕ್ಕೆ ಅವುಗಳ ಅಗತ್ಯ ಇದೆ ಎಂದು ಇಲ್ಲಿಯವರೆಗೆ ಕರೆತಂದಿದ್ದಳು. ಕಳೆದುಕೊಂಡಿದ್ದ ಮಗನ ಆಟಿಕೆ ಬಟ್ಟೆ ಬರೆಗಳನ್ನು ಹರವಿಟ್ಟುಕೊಂಡು ನಿತ್ಯವೂ ಅಳುತ್ತಿದ್ದ ಹೆಂಡತಿಯನ್ನು ಸಮಾಧಾನ ಗೊಳಿಸಲು ಇದರಿಂದ ಉತ್ತಮ ದಾರಿಯ ಆಯ್ಕೆ ನನ್ನಲ್ಲಿರಲಿಲ್ಲ.ಜೇಬಿಗೆ ಕೈ ಹಾಕಿ ಸಹಿ ಹಾಕಿದ್ದ ಚೆಕ್ ಒಂದನ್ನು ಅವಳ ಕೈಗೆ ನೀಡಿ ಇದು ನನ್ನ ಪುಟ್ಟ ಕಾಣಿಕೆ. ಇನ್ನೊಮ್ಮೆ ನನ್ನವಳೊಡನೆ ಇಲ್ಲಿಗೆ ಬರುತ್ತೇನೆ .. ಎಂದು, ಅವಳೇನೋ ಹೇಳಲು ಬಾಯಿ ತೆರೆಯುತ್ತಿದ್ದಂತೆ ಕಾರು ಚಲಾಯಿಸಿದೆ. ಕಾರಿನ ಸೈಡ್ ಮಿರರ್ ನಲ್ಲಿ ಅವಳು ತನ್ನ ಆಶ್ರಮದ ಪುಟಾಣಿ ಮಕ್ಕಳೊಡನೆ ಕೈ ಬೀಸುತ್ತಿರುವುದು ಕಾಣಿಸಿತು.
Thursday, December 1, 2011
ಸೌಧ ..
ಬಸ್ ಹೊರಡಲು ಇನ್ನೊಂದೆರಡು ನಿಮಿಷ ಅಷ್ಟೆ.. ನನ್ನ ಪಕ್ಕದ ಸೀಟ್ ಕಾಲಿ ಇತ್ತು. ಅದರೆಡೆಗೊಮ್ಮೆ ಕಣ್ಣು ಹಾಸಿ ಆರಾಮವಾಗಿ ಕಾಲು ಚಾಚಿ ಕುಳಿತೆ. ಕೊಂಚ ಭಾರವಿರಬಹುದು ಅನ್ನುವಂತೆ ಭಾಸವಾಗುವ ಬ್ಯಾಗುಗಳನ್ನು ಹೊತ್ತು ಟಿಕೆಟ್ ನಂಬರನ್ನು ಸೀಟಿನ ನಂಬರಿನೊಂದಿಗೆ ತಾಳೆ ಹಾಕುತ್ತಾ ನನ್ನ ಪಕ್ಕಕ್ಕೆ ಬಂದು ನಿಂತವಳನ್ನು ಕತ್ತೆತ್ತಿ ಕುತೂಹಲದಿಂದ ನೋಡಿದೆ. ವಯಸ್ಸು ನನ್ನಿಂದ ಕೊಂಚ ಹೆಚ್ಚೇ ಆಗಿದ್ದಂತೆ ಅವಳ ಕೂದಲಿನ ಬಣ್ಣ ಹೇಳಿತು. ಸ್ವಲ್ಪ ದಡೂತಿ ದೇಹ, ಮೊಗದಲ್ಲಿ ಪ್ರಶಾಂತ ನಗೆ. ಮೆತ್ತಗೆ ಲಗ್ಗೇಜುಗಳನ್ನು ಸೀಟಿನ ಕೆಳಗೆ ಜೋಡಿಸಿ ಕುಳಿತುಕೊಳ್ಳಲು ಅನುವಾದಳು. ಅವಳು ಕುಳಿತುಕೊಳ್ಳುವಾಗ ನನ್ನನ್ನು ಇನ್ನಷ್ಟು ಬದಿಗೆ ಸರಿಸಿದಂತೆನಿಸಿತು. ನಾನು ಸ್ವಲ್ಪ ಬಿಗಿಯಾಗಿ ಕುಳಿತು ಕಿಟಕಿಯ ಹೊರಗಿಣುಕಿದೆ.
ಬಸ್ಸಾಗಲೇ ಹೊರಟಾಗಿತ್ತು. ಅವಳು ಮುಂದಕ್ಕೆ ಬಾಗಿ ಬ್ಯಾಗಿನಲ್ಲೇನೊ ಹುಡುಕುತ್ತಿದ್ದಳು. ಡ್ರೈವರ್ ಒಮ್ಮೆಲೇ ಹಾಕಿದ ಬ್ರೇಕ್ ಗೆ ಜೋಲಿಹೊಡೆದು ನನ್ನಡೆಗೆ ವಾಲಿದಳು. ನಾನು ಓದಲೆಂದು ಹಿಡಿದಿದ್ದ ಪುಸ್ತಕ ಅವಳ ಕೈ ತಗಲಿ ಜಾರಿ ಕೆಳಗೆ ಬಿತ್ತು. ನಾನು ಬಗ್ಗುವುದರೊಳಗೆ ಅದನ್ನು ಹೆಕ್ಕಿ ಕೊಟ್ಟು 'ಸ್ಸಾರೀ' ಎಂದಳು. ಅವಳ ಮಂದಹಾಸ ಮತ್ತೊಮ್ಮೆ ನನ್ನನ್ನು ಸೆಳೆಯಿತು. ನಗು ಅವಳ ಮೊಗದಿಂದ ನನ್ನ ಮೊಗದೆಡೆಗೂ ಹರಿದು ಪ್ರತಿಫಲಿಸಿತು. ತುಟಿಯರಳಿಸಿದ ನನ್ನನ್ನು ಕಂಡು ಮಾತು ಸುರು ಮಾಡಲು ಸಿಕ್ಕಿದ ಅನುಮತಿಯೇನೋ ಎನ್ನುವಂತೆ 'ನೀವು ದೂರ' ಎಂದಳು.
ಮಗಳ ಮನೆಗೆ ಹೋಗ್ತಿದ್ದೀನಿ.. ನೀವು..?
ಒಂದು ಕ್ಷಣ ಏನನ್ನೊ ಧ್ಯಾನಿಸಿದವಳಂತೆ ನನ್ನ ಕಡೆಗೆ ನೋಡಿ 'ಮಗನ ಮನೆಗೆ' ಎಂದಳು.
ಹೌದಾ.. ಏನು ಮಾಡ್ತಿದ್ದಾನೆ ನಿಮ್ಮ ಮಗ, ಎಷ್ಟು ಮಕ್ಕಳು ನಿಮಗೆ ನನ್ನ ಪ್ರಶ್ನೆ ಮರಳಿತು.
'ಎರಡು ಗಂಡು ಮಕ್ಕಳು, ಒಬ್ಬ ಇಂಜಿನಿಯರ್ ಆಗಿದ್ದಾನೆ , ಇನ್ನೊಬ್ಬ ಡೆಲ್ಲಿಯಲ್ಲಿ ಸರ್ಕಾರಿ ಉದ್ಯೋಗಿ. ಅಲ್ಲಿಂದಲೇ ಬರ್ತಾ ಇದ್ದೀನಿ ಈ ಮಗನ ಮನೆಗೆ .. ನಿಮಗೆಷ್ಟು ಮಕ್ಕಳು..' ಎಂದಳು
'ಮೂವರು, ಇಬ್ಬರು ಹುಡುಗರು, ಒಬ್ಬಳು ಹುಡುಗಿ. ಎಲ್ಲರಿಗೂ ಮದುವೆ ಆಗಿದೆ. ಮಗಳು ಚೊಚ್ಚಲ ಬಸುರಿ,ದಿನ ತುಂಬುತ್ತಾ ಬಂತು. ಹಾಗಾಗಿ ಅವಳ ಮನೆಗೆ ಹೊರಟಿದ್ದೇನೆ.ಇನ್ನೇನು ಕೆಲ ದಿನಗಳಲ್ಲಿ ಅಜ್ಜಿಯೂ ಆಗ್ತೀನಿ ಅಂದೆ ನಗುತ್ತಾ..
ಅವಳು ನಸುನಕ್ಕು, 'ನಾನಾಗಲೇ ಇಬ್ಬರು ಮೊಮ್ಮಕ್ಕಳ ದೊಡ್ಡ ಅಜ್ಜಿ ಆಗಿದ್ದೀನಿ. ಎಷ್ಟು ಸುಂದರ ಅಲ್ವಾ ಪುಟ್ಟ ಮಕ್ಕಳ ಒಡನಾಟ.. ನಮ್ಮ ಬಾಲ್ಯ ಮತ್ತೊಮ್ಮೆ ಮರುಕಳಿಸುತ್ತೆ. ಹಾಗೇ ತುಂಬಾ ಜವಾಬ್ದಾರಿಯ ಕೆಲಸ ಕೂಡಾ.. ಕಳೆದ ಸಲ ನನ್ನ ಡೆಲ್ಲಿಯಲ್ಲಿರುವ ಮೊಮ್ಮಗ ಅಲ್ಲೇ ಮನೆಯ ಕಾಂಪೌಂಡ್ ಒಳಗೇ ಇರುವ ಪುಟ್ಟ ಈಜುಕೊಳಕ್ಕೆ ಬಿದ್ದಿದ್ದ. ನಾನು ಕೂಡಲೇ ಹಾರಿ ಅವನನ್ನು ಎತ್ತಿ ಹಿಡಿದಿದ್ದಕ್ಕಾಯ್ತು. ಇಲ್ಲದಿದ್ದರೆ ...!! ಮಗ ಸೊಸೆ ಮತ್ತೆ ನನ್ನ ಹೊಗಳಿದ್ದೇ ಹೊಗಳಿದ್ದು.. ಅವರ ಕಣ್ಣಲ್ಲಿ ನಾನು ಆ ಕ್ಷಣದಲ್ಲಿ ದೇವರೇ ಆಗಿದ್ದೆ. ಆದ್ರೆ ನಂಗೆ ಅದನ್ನು ನೆನೆಸಿಕೊಂಡರೆ ಈಗಲೂ ಮೈ ಜುಮ್ಮೆನ್ನುತ್ತೆ' ಅಂದಳು.
ನನಗ್ಯಾಕೋ ಅವಳು ತನ್ನ ಮಗನ ಮನೆಯಲ್ಲಿರುವ ಈಜುಕೊಳದ ಬಗ್ಗೆ ಹೇಳಲೇ ಈ ವಿಷಯವನ್ನು ಎತ್ತಿರಬೇಕೆಂದೆನಿಸಿತು. ಈಗ ಸುಮ್ಮನುಳಿದು ಕಡಿಮೆ ಎನಿಸಿಕೊಳ್ಳಲು ನಾನೂ ಇಷ್ಟ ಪಡಲಿಲ್ಲ. ದೊಡ್ಡ ಮಗನ ಫಾರ್ಮ್ ಹೌಸಿನ ಅಂದ, ಎರಡನೇ ಮಗನ ಮೂರಂತಸ್ತಿನ ಮನೆಯ ವೈಭವ, ಮಗಳ ಹೊಸ ಹೊಸ ಡಿಸೈನಿನ ಆಭರಣಗಳ ವಿನ್ಯಾಸ ಎಲ್ಲವನ್ನೂ ಮಾತಿನಲ್ಲಿ ತಂದೆ.
ನಮ್ಮಿಬ್ಬರ ಮಾತುಗಳು, ಬರ್ರೋ ಎಂದು ಸಾಗುತ್ತಿದ್ದ ಬಸ್ಸಿನ ವೇಗವನ್ನು ಮೀರಿಸುವಂತೆ ಅತ್ತಿತ್ತ ಹರಿದಾಡಿದವು.ನಡುವಿನಲ್ಲೊಮ್ಮೆ ಬಸ್ ಊಟಕ್ಕೆ ನಿಲ್ಲಿಸಿದಾಗ ನಾವಿಬ್ಬರೂ ಹಳೆಯ ಗೆಳತಿಯರಂತೆ ಬೆರಳುಗಳನ್ನು ಹೆಣೆದು ಹೋಟೆಲ್ ಗೆ ನುಗ್ಗಿದ್ದೆವು. ಊಟ ಮಾಡಿ ಸಿಹಿ ಬೀಡಾ ಬಾಯೊಳಗೆ ತುರುಕಿಕೊಳ್ಳುತ್ತಾ ಮತ್ತೊಮ್ಮೆ ಮಾತಿನ ಲೋಕದಲ್ಲಿ ವಿಹರಿಸತೊಡಗಿದೆವು.
ನಮ್ಮ ಮಾತಿನಲ್ಲಿ, ನಮ್ಮಿಬ್ಬರ ಕುಟುಂಬದ ಚಿತ್ರಣಗಳು ಅನಾವರಣಗೊಳ್ಳುತ್ತಿದ್ದಂತೆ ಪರಸ್ಪರ ಎಲ್ಲರೂ ಪರಿಚಿತರಾದಂತೆನಿತು.
ನಿಲ್ದಾಣ ಬಂದದ್ದು ಇಬ್ಬರ ಮುಖದಲ್ಲೂ ಬೇಸರದ ಚಿನ್ಹೆ ಮೂಡಿಸಿತು. ಆದರೆ ಅನಿವಾರ್ಯವಾದದ್ದರಿಂದ ಇಬ್ಬರೂ ಎದ್ದು ನಿಂತೆವು. ಕಿಟಕಿ ಬದಿಯಲ್ಲಿದ್ದ ನಾನು ಇನ್ನೇನಾದರೂ ಉಳಿದಿದೆಯೇ ಎಂದು ನಿಧಾನಕ್ಕೆ ಕಣ್ಣು ಹಾಸಿ, ಪರೀಕ್ಷಿಸಿ ಕೆಳಗಿಳಿಯುತ್ತಿದ್ದಂತೇ, ಅವಳು ಅಲ್ಲಿ ಬಂದ ಖಾಲೀ ಆಟೋದೊಳಗೆ,ಕೈಯಲ್ಲಿದ್ದ ಚೀಟಿಯೊಂದನ್ನು ತೋರಿಸಿ, ಹತ್ತುತ್ತಿದ್ದಳು.
ಅವಳ ವಿಳಾಸವನ್ನು ಕೇಳದ ನನ್ನ ಮರೆವಿಗೆ ನಾನೇ ಬೈದುಕೊಳ್ಳುತ್ತಾ, ಅವಳೇರುತ್ತಿದ್ದ ಆಟೋದ ಕಡೆಗೆ ಧಾವಿಸುವಾಗಲೇ ಅದು ಧೂಳೆಬ್ಬಿಸುತ್ತಾ ಮರೆಯಾತು. ಸುಂದರ ಪ್ರಪಂಚವೊಂದು ಕಣ್ಣೆದುರೇ ಪುಡಿಯಾದ ಅನುಭವ.ಒಳಗಿನ ಖಾಲೀತನ ಹೊರಗಿಣುಕಲು ಪ್ರಯತ್ನಿಸಿತು.
ಅಷ್ಟರಲ್ಲಿ ನನ್ನನ್ನು ತಾಕುವಂತೆ ಬಂದು ನಿಂತ ಇನ್ನೊಂದು ಆಟೋ ಹತ್ತಿ , ಹೋಗಬೇಕಿದ್ದ ಜಾಗದ ಹೆಸರು ಹೇಳಿದೆ. ಆಟೊ ಗುರಿ ತಲುಪಿ ನಿಂತರೂ ಅರಿವಾಗದೇ ಅನ್ಯಮನಸ್ಕಳಾಗಿ ಕುಳಿತ ನನ್ನನ್ನು ಡ್ರೈವರ್, 'ಮೇಡಮ್' ಎಂದಾಗ ಗಡಬಡಿಸಿ ಇಳಿದೆ.
ನಿಧಾನಕ್ಕೆ ಹೆಜ್ಜೆ ಹಾಕಿ ಗೇಟ್ ಸರಿಸಿ, ಪರಿಚಿತ ಮುಖಗಳಿಗೆ ಮುಗುಳ್ನಗುತ್ತಾ ನನ್ನ ಕೋಣೆಯ ಕಡೆಗೆ ನಡೆದೆ. ಇನ್ನೇನು ಕೈ ಕಾಲು ಮುಖ ತೊಳೆದುಕೊಳ್ಳಲು ಟವೆಲ್ ಹಿಡಿದು ಹೊರಟಿದ್ದೆನಷ್ಟೆ, ಬಾಗಿಲು ಬಡಿಯ್ತಿತು. 'ಆಸರೆ' ಹಿರಿಯ ನಾಗರಿಕರ ಆಶ್ರಮದ ಜಯ ಮೇಡಮ್ ಹೊರಗೆ ನಿಂತಿದ್ದರು. ನನ್ನ ಪ್ರಶ್ನಾರ್ಥಕ ಮೊಗದ ಕಡೆ ನೋಡಿದವರೇ,ತಮ್ಮ ಹಿಂದಕ್ಕೆ ಬೆರಳು ತೋರಿಸಿ, ಇವರು ಇವತ್ತಿನಿಂದ ನಿಮ್ಮ ಜೊತೆಗಾತಿ. ನಿಮ್ಮ ರೂಮ್ ಇವರೂ ಶೇರ್ ಮಾಡ್ಕೊಳ್ತಾರೆ ಅಂದ್ರು. ಅವರ ಮರೆಯಿಂದ ಇಣುಕಿದವಳನ್ನು ನೋಡಿದರೆ... ಬಸ್ಸಿನಲ್ಲಿದ್ದ ಅದೇ ಪ್ರಶಾಂತ ಮಂದಹಾಸ !
ಅವಳು ಮುಂದಡಿ ಇಟ್ಟು, ಅಚ್ಚರಿಯಿಂದ ಸ್ಥಬ್ಧಳಾಗಿದ್ದ ನನ್ನ ಕೈಗಳನ್ನು ಗಟ್ಟಿಯಾಗಿ ಹಿಡಿದೊತ್ತಿ, 'ನೀವು ಚೆನ್ನಾಗಿ ಕಥೆ ಕಟ್ಟುತ್ತೀರಿ' ಅಂದಳು.
'ನೀವೂ ಕೂಡಾ' ಎಂದೆ ಜೋರಾಗಿ ನಗುತ್ತಾ..
ಇಬ್ಬರ ನಗುವಿನಲ್ಲಿ ಸಮಸ್ತ ನೋವುಗಳಿಗೂ ಪರಿಹಾರವಿದ್ದಂತೆ ಕಾಣುತ್ತಿತ್ತು.
- - ಅನಿತಾ ನರೇಶ್ ಮಂಚಿ .
Sunday, November 27, 2011
ಸಂಧ್ಯೆ ...
ಸಂಜೆ ಆರು ಗಂಟೆಯ ಹೊತ್ತಿಗೆ ಯಾರೇ ಬಂದು ಈ ಪಾರ್ಕಿನ ಉತ್ತರ ಮೂಲೆಯ ಬೆಂಚ್ ಕಡೆಗೆ ದ್ಟೃಷ್ಟಿ ಹಾಯಿಸಿದರೆ ಇಲ್ಲಿ ಕುಳಿತಿರುವ ನನ್ನನ್ನು ನೋಡದಿರಲು ಸಾಧ್ಯವೇ ಇಲ್ಲ. ಸರಿಯಾಗಿ ಅರ್ಧ ಗಂಟೆಯ ನಂತರ ಇಲ್ಲಿಂದೆದ್ದು ಎರಡು ಕಿ ಮೀ ದೂರ ಇರುವ ಮನೆಯ ಕಡೆ ನಿಧಾನಕ್ಕೆ ಹೆಜ್ಜೆ ಹಾಕುತ್ತೇನೆ.
ಆದರೆ ಇವತ್ತು ಗಂಟೆ ಏಳಾದರೂ ಇಲ್ಲಿಂದ ಎದ್ದಿಲ್ಲ. ಏಳೋಣ ಎಂದುಕೊಳ್ಳುವಾಗ ಹೊರಗಿನ ವಿದ್ಯುದ್ದೀಪಗಳ ಬೆಳಕಿನಲ್ಲಿ ಹಗಲಿನಷ್ಟೇ ನಿಚ್ಚಳವಾಗಿ ಕಾಣುವ ಪೇಟೆ, ಜನರ ಓಡಾಟ ನನ್ನನ್ನಿಲ್ಲೇ ಕೂರುವಂತೆ ಮಾಡಿತ್ತು. ಕುಳಿತ ಕಡೆಯಿಂದಲೇ ಜೋಮು ಹಿಡಿದ ಕಾಲನ್ನು ಆಚೆ ಈಚೆ ಮಾಡುತ್ತಿದ್ದೆ ಅಷ್ಟೆ. ನನ್ನ ನೋಟ ಎಲ್ಲಾ ರಸ್ತೆಯ ಕಡೆಗೆ..
ವಾಚಿನ ಕಡೆ ನೋಡಿದೆ. ಏಳೂವರೆ ಸಮೀಪಿಸುತ್ತಿತ್ತು. ಮನೆ ತಲುಪಿ, ಮೆಚ್ಚಿನ ಟಿ ವಿ ಸೀರಿಯಲ್ ನೋಡುವ ಹೊತ್ತು. ಮನೆಯಲ್ಲಿರುವ ಸೊಸೆ, ಮೊಮ್ಮಗಳು ನನ್ನನ್ನು ಕಾಣದೆ ಗಾಭರಿಯಾಗುವುದು ಖಂಡಿತಾ. ಮಗ ಆಫೀಸ್ ಕೆಲಸದ ಮೇಲೆ ಬೇರೆ ಊರಿಗೆ ಹೋಗಿದ್ದ.
ಅರೇ.. ಈ ಜನಗಳೆಲ್ಲ ಇನ್ನೂ ಎಷ್ಟೊಂದು ಸಡಗರದಿಂದ ಅತ್ತಿತ್ತ ತಿರುಗುತ್ತಿದ್ದಾರೆ.. ಬೇಗ ಬೇಗ ಮನೆ ಸೇರಿಕೊಳ್ಳಬಾರದಾ ಇವರಿಗೆ.. ಕೂತಲ್ಲೇ ಸಿಡಿಮಿಡಿಗೊಂಡೆ. ಗಂಟೆ ಮುಳ್ಳು ಎಂಟರ ಹತ್ತಿರ ಬಂದಿತ್ತು. ಇನ್ನು ಸ್ವಲ್ಪ ಹೊತ್ತಿನಲ್ಲಿ ಈ ಪಾರ್ಕಿನ ಗೇಟನ್ನು ಕ್ಲೋಸ್ ಮಾಡ್ತಾರೆ. ಬೀಗ ಹಾಕುವವ ಬಂದು ನನ್ನನ್ನು ನೋಡಿ ಏನ್ಸಾರ್ ಇಲ್ಲೇ ಕೂತಿದ್ದೀರಾ.. ಏಳಿ ಮನೆಗೆ ಹೋಗಿ ಅಂದ್ರೇನು ಮಾಡೋದು.. ಛೇ..
ಮಾಗಿಯ ಚಳಿ ಗಾಳಿ ಶರೀರವನ್ನು ಗಡಗುಟ್ಟಿಸುತ್ತಿತ್ತು. ಎಷ್ಟು ಮುದುಡಿ ಕುಳಿತರೂ ಒಳಗಿನಿಂದಲೇ ನಡುಕ.. ಮನೆಯಲ್ಲಿದ್ದಿದ್ದರೆ ಈಗ ಸೊಸೆ ಕೊಡುವ ಚಪಾತಿ, ಬಿಸಿ ಪಲ್ಯದ ರುಚಿ ನೋಡುವ ಸಮಯ. ನೆನೆಸಿಕೊಂಡ ಕೂಡಲೇ ಯಾಕೋ ಹೊಟ್ಟೆ ಹಸಿಯಲು ಪ್ರಾರಂಭಿಸಿತು.
ಏನಾದರಾಗಲಿ .. ಎದ್ದು ಮನೆ ಕಡೆಗೆ ಹೋಗಿಯೇ ಬಿಡೋಣ ಎಂದುಕೊಳ್ಳುವಷ್ಟರಲ್ಲಿ ಹಿಂದಿನಿಂದ 'ಅಜ್ಜಾ.. ನೀವಿನ್ನೂ ಇಲ್ಲೇ ಕೂತ್ಕೊಂಡು ಏನ್ ಮಾಡ್ತಿದ್ದೀರಾ.. ನಮ್ಗೆಲ್ಲ ಎಷ್ಟು ಗಾಭರಿಯಾಯ್ತು ಗೊತ್ತಾ.. ಹುಷಾರಾಗಿದೀರ ತಾನೇ.. ಏಳಿ .. ಅಮ್ಮ ನಿಮ್ಗೆ ಗಾಡೀಲಿ ಕೂರುವಾಗ ಚಳಿ ಆಗ್ಬಹುದು ಅಂತ ಶಾಲು ಕಳ್ಸಿದ್ದಾಳೆ. ಇದನ್ನು ಹೊದ್ಕೊಂಡು ನನ್ನ ಕೈನೆಟಿಕ್ ಏರಿ..' ಎನ್ನುವ ಮೊಮ್ಮಗಳ ನುಡಿ.
ಕುಳಿತಲ್ಲಿಂದಲೇ ಶಾಲಿಗೆ ಕೈಚಾಚಿ 'ನಡೀ ತಾಯಿ ಬರ್ತೀನಿ' ಅಂದೆ.
ಅವಳು ಮುಂದೆ ಹೋಗುತ್ತಿದ್ದಂತೆ 'ಬದುಕಿದೆಯಾ ಬಡ ಜೀವವೇ' ಎಂದುಕೊಂಡು ಶಾಲನ್ನು ಇಡೀ ದೇಹಕ್ಕೆ ಸುತ್ತಿಕೊಂಡು ಎದ್ದೆ.
ಅವಳು ಮುಂದೆ ಹೋಗುತ್ತಿದ್ದಂತೆ 'ಬದುಕಿದೆಯಾ ಬಡ ಜೀವವೇ' ಎಂದುಕೊಂಡು ಶಾಲನ್ನು ಇಡೀ ದೇಹಕ್ಕೆ ಸುತ್ತಿಕೊಂಡು ಎದ್ದೆ.
ಆದದ್ದಿಷ್ಟೇ.. ಯಾರೋ ನಾನು ನಿತ್ಯ ಕುಳಿತುಕೊಳ್ಳುವ ಬೆಂಚಿನ ಕೆಳಗೆ ತಿಂಡಿ ತಿಂದು ಆ ಪ್ಲಾಸ್ಟಿಕ್ ಕವರನ್ನು ಹಾಗೇ ಎಸೆದು ಹೋಗಿದ್ದರು. ಅದನ್ನು ಡಸ್ಟ್ ಬಿನ್‌ಗೆ ಹಾಕೋಣವೆಂದು ಬಗ್ಗಿ ಹೆಕ್ಕುವಾಗ ಪ್ಯಾಂಟ್ ಪರ್ರನೆ ಹರಿದು ಹೋಗಿತ್ತು. ನನ್ನ ಪುಣ್ಯ.. ಸೊಸೆ ಚಳಿಗೆ ಅಂತ ಕಳುಹಿಸಿ ಕೊಟ್ಟ ಈ ಶಾಲಿನಿಂದ ಮರ್ಯಾದೆ ಉಳೀತಪ್ಪಾ..ಎಂದುಕೊಂಡು ಇನ್ನೂ ಕೈಯಲ್ಲೇ ಉಳಿದಿದ್ದ ಕಸವನ್ನು ಡಸ್ಟ್ ಬಿನ್ನಿನೊಳಕ್ಕೆ ಎಸೆದು, ಮೊಮ್ಮಗಳು ನಿಲ್ಲಿಸಿದ್ದ ಗಾಡಿಯ ಕಡೆಗೆ ಉತ್ಸಾಹದಿಂದ ಬೇಗ ಹೆಜ್ಜೆ ಹಾಕತೊಡಗಿದೆ.
Wednesday, November 23, 2011
ಕಾಶೀಯಾತ್ರೆ
ದೂರದಲ್ಲಿ ನೋಯುತ್ತಿರುವ ಕಾಲನ್ನು ಎಳೆದು ಹಾಕಿಕೊಂಡು ಬರುತ್ತಿರುವ ಎಂಕಜ್ಜ ಕಾಣಿಸಿದ,ಸ್ಮಶಾನದ ಕಾವಲುಗಾರ ದೇವನಿಗೆ. ಈಗೀಗ ಎಂಕಜ್ಜನಿಗೆ ನಡೆಯುವ ಶಕ್ತಿಯೇ ಕಡಿಮೆಯಾಗಿತ್ತು. ಬಿಕ್ಷೆ ಬೇಡಲು ಹೋಗಬೇಡ ಎಂದು ಹೇಳಿದರೂ ಕೇಳದೆ ನಸುಕಿನಲ್ಲೆದ್ದು ಜೋಳಿಗೆ ಹಿಡಿದು ಹೊರಟು ಬಿಡುತ್ತಿದ್ದ.
ಏದುಸಿರು ಬಿಡುತ್ತಾ ಬಂದವನೇ ಅಲ್ಲಿದ್ದ ಕಟ್ಟಿಗೆಯ ರಾಶಿಯ ಪಕ್ಕದಲ್ಲಿ ಉಸ್ಸಪ್ಪ ಎಂದು ಕುಳಿತ. ಸ್ವಲ್ಪ ದೂರದಲ್ಲಿ ಹೊಸದಾಗಿ ಉರಿಯುತ್ತಿದ್ದ ಚಿತೆಯನ್ನು ನೋಡಿ .ದೇವನ ಕಡೆಗೆ ಮುಖ ಮಾಡಿ 'ಯಾರದೋ'.. ಎಂದು ಕೇಳಿದ.
ಕಾಶೀ ಕೃಷ್ಣಯ್ಯನವರದ್ದು ..ಎಂದ ದೇವ.
'ಪುಣ್ಯವಂತರು ಕಣಪ್ಪ ಅವ್ರು.. ವರ್ಷ ವರ್ಷ ಕಾಶಿಗೆ ಹೋಗಿ ಬಂದು ಕಾಶಿ ಸಮರಾಧನೆ ಮಾಡಿ ಊರಿನ ಜನರಿಗೆಲ್ಲಾ ಹೊಟ್ಟೆ ತುಂಬಾ ಊಟ ಹಾಕಿಸ್ತಿದ್ದರು. ಹೋಗಿಯೇ ಬಿಟ್ರಾ..' ಎಂದು ಚಿತೆಯ ಕಡೆಗೆ ತಿರುಗಿ ಕೈ ಮುಗಿದ.
ಮತ್ತೆ ನಿಟ್ಟುಸಿರಿಡುತ್ತಾ, ಎಲ್ಲದಕ್ಕೂ ಪಡ್ಕೊಂಡು ಬಂದಿರಬೇಕು ಕಣ್ಲಾ... ನಮ್ಗೆಲ್ಲಾ ಎಲ್ಲಿಂದ ಬರಬೇಕು ಅಂತಾ ಅದೃಷ್ಟ.. ಎಂದವನೇ ಜೇಬೆಲ್ಲಾ ತಡಕಾಡಿ ಆ ದಿನದ ಭಿಕ್ಷೆಯ ಗಳಿಕೆಯನ್ನೆತ್ತಿ ದೇವನೆಡೆಗೆ ಚಾಚಿದ. ದೇವ ಆ ಪುಡಿಕಾಸುಗಳನ್ನೆತ್ತಿಕೊಂಡು ಯಾಂತ್ರಿಕವಾಗಿ ಎಣಿಸತೊಡಗಿದ. ಎಂಕಜ್ಜ ಆಸೆ ಹೊತ್ತ ಹೊಳಪುಗಣ್ಣುಗಳನ್ನು ದೇವನೆಡೆಗೆ ನೆಟ್ಟು, ಸಾಕಾದೀತೇನೋ ಮಗ..ಜೀವ ಹೋಗೊದ್ರೊಳಗೆ ಒಂದಪಾ ಕಾಶಿಗೆ ಹೋಗಬೇಕು ಅಂತ ಬಲು ಆಸೆ ಕಣ್ಲಾ..ಅನ್ನುತ್ತಾ ಆಕಾಶದ ಕಡೆಗೆ ಕೈ ಮುಗಿದ. ನಿಂಗೆಲ್ಲೋ ಹುಚ್ಚು ಅಜ್ಜ.. ನಾಲಕ್ಸಲ ನಮ್ಮೂರ ಸಂತೆಗೆ ಹೋಗಿ ಬರೋದ್ರೊಳಗೆ ಮುಗಿಯುತ್ತೆ ನಿನ್ನ ಕಾಸು.. ಇನ್ನು ಕಾಶಿ ಎಲ್ಲಿ.. ಎಂದು ದೇವ ನಗೆಯಾಡಿದ.
ದೇವನ ಮಾತು ಕೇಳಿ ಎಂಕಜ್ಜನಿಗೆ ದುಃಖದಿಂದ ಕಣ್ಣು ಮಂಜಾಗತೊಡಗಿತು. ಇತ್ತೀಚೆಗೆ ದೇಹದ ಶಕ್ತಿ ಕುಂದಿದ ಮೇಲೆ ಚಿಕ್ಕ ಚಿಕ್ಕ ವಿಷಯಕ್ಕೂ ಅಳುತ್ತಿದ್ದ ಎಂಕಜ್ಜ.
ಹೇ.. ಸುಮ್ಕಿರು ಅಜ್ಜ.. ನಾನು ನನ್ ದುಡ್ಡು ಕೂಡಿ ಹಾಕಿ ನಿನ್ನ ಕಾಶಿಗೆ ಕರ್ಕೊಂಡೋಗ್ತೀನಿ.. ಇದ್ರಪ್ಪನಂತಾ ಸ್ಮಶಾನಗಳಿವ್ಯಂತೆ ಅಲ್ಲಿ.. ನಂಗೂ ನೋಡ್ಬೇಕು.. ಈಗ ನೀನು ಒಳಕ್ ನಡಿ.. ಅಲ್ಲಿ ಅಯ್ನೋರ್ ಮನೆಯವರು ಕೊಟ್ಟ ಹಣ್ಣುಗಳಿದೆ. ಬೇಕಾದ್ರೆ ತಿನ್ನು ಎಂದ.
ಕೆನ್ನೆಯಲ್ಲಿಳಿಯುತ್ತಿದ್ದ ಕಣ್ಣೀರನ್ನು ಒರೆಸುವ ಪ್ರಯತ್ನವೂ ಮಾಡದೆ, ನಂಗೇನೂ ಬೇಡಾ ಬಿಡ್ಲಾ.. ಯಾಕೋ ಈಗೀಗ ಹೊಟ್ಟೆನೇ ಹಸಿಯಾಕಿಲ್ಲ ಅಂತದೆ.. ಅನ್ನುತ್ತಾ ಕಾಲೆಳೆದುಕೊಂಡು ಗುಡಿಸಲಿನ ಒಳ ಹೊಕ್ಕ ಎಂಕಜ್ಜ. ಪಾಪ ಕಾಶಿ ಯಾತ್ರೆ ಒಂದೇ ಅಜ್ಜನಿಗಿರೋ ಆಸೆ.ನಮ್ಮಂತವರ ಆಸೆಗಳೆಲ್ಲ ಪೂರೈಸಲುಂಟೇ.. ದೂರದ ಚಿತೆಯ ಕಡೆಗೆ ದ್ಟೃಷ್ಟಿ ಹರಿಸಿದ ದೇವ.
ಹಾಗೆ ನೋಡಿದರೆ ಎಂಕಜ್ಜನಿಗೂ , ದೇವನಿಗೂ ಏನೂ ಸಂಬಂಧವಿರಲಿಲ್ಲ. ಎರಡೂ ಅನಾಥ ಜೀವಗಳು. ಚಿಕ್ಕಂದಿನಲ್ಲೇ ತಬ್ಬಲಿಯಾಗಿ ಬೀದಿಗೆ ಬಿದ್ದಿದ್ದ ದೇವ ಅಲ್ಲಿ ಇಲ್ಲಿ ಚಿಂದಿ ಆಯ್ದು ಬದುಕುತ್ತಿದ್ದ. ರಾತ್ರಿಯಾಗುತ್ತಿದ್ದಂತೇ ಬಸ್ ಸ್ಟ್ಯಾಂಡ್‌ನಲ್ಲೋ , ಅಂಗಡಿ ಮುಂಗಟ್ಟುಗಳಲ್ಲೊ ಮಲಗುತ್ತಿದ್ದಾಗ ಎಂಕಜ್ಜನೂ ತನ್ನ ಹರುಕು ಕಂಬಳಿ ಹೊದೆದು ಜೊತೆಗೂಡುತ್ತಿದ್ದ.
ಒಮ್ಮೊಮ್ಮೆ ಇಡೀ ದಿನ ಹೊಟ್ಟೆಗೇನೂ ಸಿಕ್ಕದೆ ಹಸಿವಿನಿಂದ ನಿದ್ದೆ ಬಾರದೆ ದೇವ ಒದ್ದಾಡುತ್ತಿದ್ದರೆ, ಎಂಕಜ್ಜ ತನ್ನ ಜೋಳಿಗೆಯಿಂದ ಅರ್ಧ ತುಂಡು ಬನ್ನೊ, ಅನ್ನ ಸಾಂಬಾರು ಬೆರೆಸಿದಂತಿದ್ದ ಮಿಶ್ರಣವೋ, ಹೀಗೆ ಏನಾದರು ದೇವನಿಗೆ ನೀಡುತ್ತಿದ್ದ. ದೇವನೂ ಅಷ್ಟೆ, ಅಪರೂಪಕ್ಕೊಮ್ಮೊಮ್ಮೆ ಕಮಾಯಿ ಜೋರಿದ್ದಾಗ ಸಾಬರ ಹೋಟೇಲಿನಿಂದ ಬಿರಿಯಾನಿ ತಂದು ಎಂಕಜ್ಜನಿಗೆ ಉಣಬಡಿಸುತ್ತಿದ್ದ. ನಿದ್ದೆ ಬಾರದ ರಾತ್ರಿಗಳಲ್ಲಿ ಎಂಕಜ್ಜನ ಕತೆಗಳು ಜೊತೆಯಾಗುತ್ತಿದ್ದವು.
ದಿನಗಳು ಯಾವುದೇ ಏರು ಪೇರಿಲ್ಲದೆ ಹೀಗೆ ನಡೆಯುತ್ತಿದ್ದಾಗಲೇ ಪಂಚಾಯತ್ ನವರು ಹೊಸದಾಗಿ ಕಟ್ಟಿಸಿದ ಊರ ಹೊರಗಿನ ಸ್ಮಶಾನ ಕಾಯುವ ಕೆಲಸ ಅಕಸ್ಮಾತಾಗಿ ದೇವನ ಪಾಲಿಗೆ ಒದಗಿ ಬಂದಿತ್ತು. ಕುಳಿರ್ಗಾಳಿಗೆ ನರ್ತಿಸುತ್ತಿದ್ದ ಉರಿಯುವ ಚಿತೆಗಳ ಕೆನ್ನಾಲಗೆಗಳು ಪಿಶಾಚಿಗಳ ಒಡ್ಡೋಲಗದಂತೆ ಕಂಡು, ನಂಗೆ ಹೆದರಿಕೆ ಆಗುತ್ತೆ ನಾನೊಲ್ಲೆ ಎಂದಿದ್ದ .
ಆಗ ಎಂಕಜ್ಜ ದೇವನನ್ನು ಕೂರಿಸಿಕೊಂಡು, ಸ್ಮಶಾನದಾಗೆ ನಮ್ಮಪ್ಪ ಶಿವಾ ಕುಂತಿರ್ತಾನೆ, ಪೀಡೆ ಪಿಶಾಚಿಗಳದ್ದು ಏನೂ ನಡೆಯಾಕಿಲ್ಲ ಅಂತ ಧೈರ್ಯ ತುಂಬಿದ್ದ. ನಿಂಗೆ ಅಷ್ಟು ಹೆದ್ರಿಕೆ ಆಗೋದಾದ್ರೆ ರಾತ್ರಿ ನಾನು ಬರ್ತೀನಿ ನಿನ್ ಜೊತೆಗೆ.. ಸಿಕ್ಕಿದ ಕೆಲ್ಸ ಬೇಡ ಅನ್ಬೇಡ ಎಂದು ಬುದ್ಧಿವಾದ ಹೇಳಿದ್ದ. ನಿಶ್ಚಿತ ವರಮಾನ ಅಲ್ಲದೆ ಹೆಣ ಸುಡಲು ಬಂದವರು ಕೊಡುವ ಕೈಕಾಸುಗಳ ಆಸೆ ತೋರಿಸಿದ್ದ. ಇನ್ನು ರಾತ್ರಿ ಮಲಗಲು, ಅಲ್ಲಿ ತಮ್ಮಿಂದ ಮೊದಲೇ ಮಲಗಿರುತ್ತಿದ್ದ ಬೀದಿ ನಾಯಿಗಳನ್ನು ಓಡಿಸಿ ಜಾಗ ಮಾಡಿಕೊಳ್ಳುವ ಕೆಲ್ಸವೂ ಇಲ್ಲ ಎಂದು ಹೇಳಿ ನಕ್ಕಿದ್ದ. ಅಜ್ಜನ ಮಾತಿಗೆ ಒಪ್ಪಿಕೊಂಡದ್ದಕ್ಕೆ ಅಲ್ಲವೆ ತಾನು ಇಂದು ಸ್ಮಶಾನದ ಮೂಲೆಯಲ್ಲಿರುವ ಆ ಪುಟ್ಟ ಕೋಣೆಯೆಂಬ ಅರಮನೆಗೆ ಒಡೆಯನಾಗಿರುವುದು!
ಹೀಗೆ ಎಷ್ಟು ಹೊತ್ತು ಸಾಗಿತ್ತೊ ದೇವನ ಆಲೋಚನಾ ಲಹರಿ. ಯಾಕೋ ನೀರಡಿಕೆಯಾದಂತೆನಿಸಿ ಎದ್ದು ಗುಡಿಸಿಲಿನೆಡೆಗೆ ನಡೆದ. ಮಂದವಾಗಿ ಉರಿಯುತ್ತಿದ್ದ ಹಣತೆಯ ಬೆಳಕಿನಲ್ಲಿ ನೀರು ಕುಡಿದು ಸುಮ್ಮನೆ ಎಂಕಜ್ಜ ಮಲಗುವ ಕಡೆಗೊಮ್ಮೆ ದ್ಟೃಷ್ಟಿ ಹರಿಸಿದ. ಅರೆ! ಅಲ್ಲಿ ಎಂಕಜ್ಜ ಇರಲಿಲ್ಲ! ಎಲ್ಲಿ ಹೋಗಿರಬಹುದು ಅಂದುಕೊಳ್ಳುವಾಗಲೇ ಬೀಸಿದ ಗಾಳಿಗೆ ಅರ್ಧ ತೆರೆದ ಬಾಗಿಲನ್ನು ಕಂಡು ಹೊರಗಿಣುಕಿದ. ಕಪ್ಪು ಆಗಸದ ನಡುವಲ್ಲಿ ಜರಿಸೀರೆಯ ಬೊಟ್ಟುಗಳಂತೆ ಹರಡಿದ್ದವು ನಕ್ಷತ್ರಗಳು. ಕೃಷ್ಣಯ್ಯನವರ ಚಿತೆ ಸುತ್ತೆಲ್ಲಾ ನಂದಿ ನಡುವಲ್ಲಿ ಮಾತ್ರ ಸಣ್ಣದಾಗಿ ಕೆಂಪಾಗಿ ಕಾಣಿಸುತ್ತಿತ್ತು. ದೇವನ ದ್ಟೃಷ್ಟಿ ಅಂಗಳದ ಸುತ್ತೊಮ್ಮೆ ಅಜ್ಜನಿಗಾಗಿ ಹರಿದಾಡಿತು.ಒಂದು ಮೂಲೆಯಲ್ಲಿ ಕರಿಯ ಕಂಬಳಿಯ ಸಮೇತ ಕುಪ್ಪೆಯಂತೆ ಬಿದ್ದಿದ್ದ ಎಂಕಜ್ಜ. ಧಾವಿಸಿ ಬಂದ ದೇವನ ಕೈಗೆ ತಣ್ಣಗೆ ತಗುಲಿತ್ತು ಅಜ್ಜನ ದೇಹ. ಎದೆ ಒಮ್ಮೆ ಝಲ್ ಎಂದಿತು.
ಹೆಣ ಮುಟ್ಟುವುದು ಹೊಸತೇನೂ ಅಲ್ಲದಿದ್ದರೂ , ಕೈ ಕೂಡಲೆ ಗಾಭರಿಯಿಂದ ಹಿಂದೆ ಬಂತು. ಸುಮ್ಮನೇ ನೋಡುತ್ತಾ ಕುಳಿತ ದೇವ. ಸ್ವಲ್ಪ ಹೊತ್ತಿನ ಮೊದಲು ಕಾಶಿಗೆ ಹೋಗಬೇಕೆಂಬ ಕನಸು ಕಟ್ಟುತ್ತಿದ್ದ ಅಜ್ಜ ಇಷ್ಟು ಬೇಗ ತಣ್ಣಗೆ ಮಲಗಿದ್ದು ದೇವನಿಗೆ ನಂಬಲು ಕಷ್ಟವಾಗುತ್ತಿತ್ತು. ಅಜ್ಜನೊಡನೆ ಹರಕು ಕಂಬಳಿ ಹೊದ್ದು ಮಳೆ ಚಳಿಯೆನ್ನದೆ ಕಳೆದ ಅದೆಷ್ಟೊ ರಾತ್ರಿಗಳು ಇದ್ದಕ್ಕಿದ್ದಂತೆ ಜೀವ ತಳೆದು ಕಣ್ಣ ಮುಂದೆ ಬಂದು ಅಣಕಿಸಿದ ಅನುಭವ. ಕಾಲುಗಳಲ್ಲಿ ಶಕ್ತಿ ಕುಂದಿದಂತೆನ್ನಿಸಿ ದೇವ ಅಲ್ಲೆ ಕುಸಿದು ಕುಳಿತ. ಕಣ್ಣೀರು ಉಕ್ಕಿ ಹರಿಯತೊಡಗಿತು. ಎಷ್ಟು ಹೊತ್ತು ಹಾಗೆ ಕುಳಿತಿದ್ದನೋ ಅವನಿಗೆ ತಿಳಿಯಲಿಲ್ಲ . ಹಕ್ಕಿಗಳ ಕಲರವ ಕಿವಿಗೆ ಬಿದ್ದಾಗ ಪಕ್ಕನೆ ಇಹಕ್ಕೆ ಬಂದಂತೆ ಕಣ್ತೆರೆದ.
ಸಾವಿನ ಸುದ್ದಿ ಅರುಹಲು ತನ್ನನ್ನು ಬಿಟ್ಟರೆ ಇನ್ಯಾರಿದ್ದರು ಎಂಕಜ್ಜನಿಗೆ ! ಆದರೂ ಊರಿನವರಿಗೆ ತಿಳಿಸುವ ಅನಿವಾರ್ಯತೆಯಿತ್ತು .ಮೆಲ್ಲನೆ ಸಾವರಿಸಿಕೊಂಡು ಎದ್ದವನೇ ಊರಿನ ಕೆಲವು ಜನರಿಗೆ ವಿಷಯ ತಿಳಿಸಿ , ಅಯ್ಯನವರ ಚಿತೆಯ ಪಕ್ಕದಲ್ಲೇ ಇನ್ನೊಂದು ಚಿತೆ ಸಿದ್ಧಗೊಳಿಸಿ ಎಂಕಜ್ಜನ ಶರೀರವನ್ನು ಎತ್ತಿ ಅಗ್ನಿದೇವನಿಗೆ ಅರ್ಪಿಸಿದ.
ಯಾರು ಇರಲಿ ಇಲ್ಲದಿರಲಿ ದಿನಗಳು ತನ್ನ ಪಾಡಿಗೆ ತಾನೇ ಉರುಳುತ್ತವೆ. ಮನೆಯ ಹೊರಗಿನಿಂದ 'ದೇವಾ' ಎಂಬ ಕೂಗು ಕೇಳಿದಾಗ ಹೊರಬಂದಿದ್ದ. ಕಾಶಿ ಕೃಷ್ಣಯ್ಯನ ಕಡೆಯವರು ಹೊರಗೆ ನಿಂತಿದ್ದರು.
ಹೆಣ ಸುಡಲು ತಂದಾಗಲೇ, ಮೂರು ದಿನ ಕಳೆದು ಬರುವುದಾಗಿಯೂ,ಕಾಶಿಯಲ್ಲಿ ಅವರ ಅಸ್ಥಿ ಸಂಚಯನ ಮಾಡಲು ಕೊಂಚ ಬೂದಿ, ಹೊತ್ತದೆ ಉಳಿದ ಮೂಳೆಗಳನ್ನು ಒಂದು ಮಡಿಕೆಯಲ್ಲಿ ಹಾಕಿಡಲು ಹೇಳಿದ್ದರು. ದೇವನಿಗೆ ಇವರನ್ನು ಕಂಡಾಗಲೇ ನೆನಪಾಗಿದ್ದು ಆ ಕೆಲಸ. ಇಲ್ಲೆ ನಿಂತಿರಿ ಈಗ ಬಂದೆ.. ಎಂದು ಪುಟ್ಟ ಮಡಿಕೆ ಮತ್ತು ಅದರ ಬಾಯಿ ಮುಚ್ಚುವಂತೆ ಕಟ್ಟಲು ಒಂದು ಬಿಳಿಯ ಬಟ್ಟೆಯ ತುಂಡು ಹಿಡಿದು ಹೆಣ ಹೊತ್ತಿಸಿದ ಜಾಗಕ್ಕೆ ನಡೆದ.
ಕಾಶಿ ಕೃಷ್ಣಯ್ಯನ ಕಡೆಯವರು ಗುಡಿಸಲಿನ ಬಳಿಯಲ್ಲಿ ಏನೋ ಮಾತಿನಲ್ಲಿ ಮುಳುಗಿದ್ದರು. ದೇವ ಅವರ ಕಡೆಗೊಮ್ಮೆ ನೋಡಿ, ಕೃಷ್ಣಯ್ಯನವರ ಚಿತೆಯತ್ತ ನಡೆದ.ಅಲ್ಲೇ ಹತ್ತಿರದಲ್ಲಿ ಎಂಕಜ್ಜನ ಚಿತೆಯು ಮೌನ ಹೊದ್ದು ಮಲಗಿತ್ತು. ಎರಡು ಕಡೆಯ ಬೂದಿಗೂ ಯಾವುದೇ ವ್ಯತ್ಯಾಸ ಕಾಣಲಿಲ್ಲ.ಮನಸ್ಸಿನಲ್ಲೊಮ್ಮೆ ಎಂಕಜ್ಜನ ಕಾಶೀ ಯಾತ್ರೆಯ ಕನಸು ಹಣಕಾಡಿತು. ದೇವನಿಗೆ ಏನನ್ನಿಸಿತೊ ಏನೋ ... ನಿರ್ಧಾರಕ್ಕೆ ಬಂದವನಂತೆ ಮೆಲ್ಲನೆ ಎಂಕಜ್ಜನ ಚಿತೆಯ ಬೂದಿ ಮತ್ತು ಅಸ್ಥಿಯನ್ನು ಮಡಿಕೆಯೊಳಗೆ ತುಂಬಿ ತಂದು ಕಾದಿದ್ದವರ ಕೈಗೆ ನೀಡಿ, ಮನದೊಳಗೆ 'ಅಜ್ಜಾ ನಿನ್ನನ್ನು ಕಾಶಿಗೆ ಒಂಟಿಯಾಗಿ ಕಳಿಸ್ತಾ ಇದ್ದೀನಿ ನೋಡು' ಎಂದ.
Wednesday, November 16, 2011
ನಕ್ಷತ್ರ ಲೋಕ..
ಪ್ರಪಂಚವಿಡೀ ಒಂದೇ ಶಬ್ಧದೊಳಗೆ ಸೇರಿಕೊಂಡಂತೆ,ಬೇರೆಲ್ಲವೂ ಇದರೊಳಗೆ ಅಡಗಿಕೊಂಡಂತೆ, ಮಗಳಿಗೆ ಮೂಸಂಬಿ ಜ್ಯೂಸ್ ಮಾಡುವ ತಯಾರಿಯಲ್ಲಿ ಬಿಡಿಸಿದ್ದ ತೊಳೆಗಳನ್ನು ಮಿಕ್ಸಿಗೆ ಹಾಕಿ ತಿರುಗಿಸುತ್ತಿದ್ದಳು. ಮಿಕ್ಸಿ ಆಫ್ ಮಾಡಿ ಜ್ಯೂಸನ್ನು ಮಗಳ ಇಷ್ಟದ ಗಾಜಿನ ಲೋಟದೊಳಗೆ ಸುರಿಯುತ್ತಿರುವಾಗಲೇ ಹೊರಗಿನಿಂದ ಬಿಕ್ಕಳಿಸಿ ಅಳುವ ಸ್ವರ ಕೇಳಿಸಿತು ಶಾಂತಾಳಿಗೆ.
ಅರೇ..!! ಪಲ್ಲವಿ .. ಆಗ್ಲೇ ಬಂದಾಯ್ತಾ..ಇವತ್ತೇನಾಯ್ತಪ್ಪಾ ಇವಳಿಗೆ..? ಕೊಂಚ ಹಠಮಾರಿ.. ಜೊತೆಗೆ ಎಲ್ಲಾದಕ್ಕು ಅಳು.. ಎಂದು ಯೋಚಿಸುತ್ತಲೇ ಮಗಳ ಕೋಣೆಯೆಡೆಗೆ ಹೆಜ್ಜೆ ಹಾಕಿದಳು ಶಾಂತಾ..
ಅಪ್ಪನನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡಿದ್ದರಿಂದ ಅಪ್ಪ ಅಮ್ಮ ಎಲ್ಲವೂ ಆಗಿ ಬೆಳೆಸುವ ಅನಿವಾರ್ಯತೆ. ಆದರೂ ಆಗಾಗ ಅಪ್ಪ ಎಲ್ಲಿರಬಹುದು ಈಗ ..? ನಮ್ಮಿಬ್ಬರನ್ನು ನೋಡ್ತಿರಬಹುದಾ.. ಅಂತೆಲ್ಲ ಕೇಳುತ್ತಿದ್ದಳು.
ಆಗಸದಲ್ಲೆಲ್ಲ ಹರಡಿ ಕಣ್ಣು ಮಿಟುಕಿಸುವ ಚಿಕ್ಕಿಗಳೆಡೆಗೆ ಬೆರಳು ತೋರಿಸಿ ' ಅಪ್ಪ ನಕ್ಷತ್ರವಾಗಿದ್ದಾರೆ ಪುಟ್ಟಿ.. ಅಲ್ಲಿಂದಲೇ ನಮ್ಮನ್ನು ನೋಡ್ತಾರೆ ಎಂದು ಮಗಳನ್ನು ಸಮಾಧಾನಿಸುತ್ತಿದ್ದಳು ಶಾಂತಾ ..
ರಾತ್ರಿ ಕೆಲವೊಮ್ಮೆ ಬಹಳ ಹೊತ್ತು ಆಗಸದೆಡೆಗೆ ನೋಟ ಹರಿಸುವುದು ಪಲ್ಲವಿಯ ಇಷ್ಟದ ಕೆಲಸ ಆಗಿತ್ತು. ತನಗ್ಯಾರಾದರು ಬಯ್ದರೆ, ತನ್ನನ್ನು ಹೊಗಳಿದರೆ ಎಲ್ಲವನ್ನೂ ಅಪ್ಪನಿಗೆ ಒಪ್ಪಿಸುತ್ತಿದ್ದಳು ಕಿಟಕಿಯ ಸರಳಿಗೆ ಜೋತು ಹೊರಗೆ ಕಾಣುವ ಆಗಸದೆಡೆಗೆ ನೋಡುತ್ತಾ.. ಆಗಸ ಅವಳ ಪಾಲಿಗೆ ನೆಂಟನೆ ಆಗಿತ್ತು..
ಮಗಳ ಕೋಣೆಯ ಬಾಗಿಲಲ್ಲೇ ಬಿದ್ದಿದ್ದ ಶಾಲೆಯ ಬ್ಯಾಗನ್ನು ಕೈಯಲ್ಲೆತ್ತಿ ಒಳಗೆ ಇಣುಕಿದಳು. ಕಾಲಿನ ಶೂಸ್ ಗಳನ್ನು ತೆಗೆಯದೇ ಹಾಗೇ ಮಂಚದ ಮೇಲೆ ಬಿದ್ದು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು ಪಲ್ಲವಿ .
ಕೊಂಚ ಆತಂಕದಿಂದ ಹತ್ತಿರ ಹೋಗಿ ಕುಳಿತ ಶಾಂತಾ, 'ಏನಾಯ್ತು ಮುದ್ದು, ಯಾಕಳ್ತಿದ್ದೀಯಾ, ಯಾರಾದ್ರು ಏನಾದ್ರು ಅಂದ್ರಾ ನನ್ನ ಗಿಳಿಮರಿಗೆ..' ಎಂದೆಲ್ಲಾ ಪೂಸಿಹೊಡೆದಳು.
ಅಳು ಜೋರಾಯಿತೇ ವಿನಹ ಕಡಿಮೆ ಆಗಲಿಲ್ಲ. ಈಗ ಬರೀ ಪುಟ್ಟ ಹುಡುಗಿಯೇನಲ್ಲ.. ಯಾಕೋ ಅತಿಯಾಯ್ತು ಇವಳದ್ದು ಎನಿಸಿತು ಶಾಂತಾಳಿಗೆ..
ಆದರೂ ಮೆತ್ತಗೆ ಬೆನ್ನು ತಲೆ ಸವರುತ್ತಾ ಅಲ್ಲೇ ಕುಳಿತಳು.
'ಅಮ್ಮಾ' ಎಂಬ ಅಳುವಿನೊಂದಿಗೆ ನಡುಗುವ ಸ್ವರದಲ್ಲಿ ಪಲ್ಲವಿಯ ಸ್ವರ ಕೇಳಿದಾಗ ಮೆಲ್ಲನೆ 'ಏನಾಯ್ತು ಕಂದಾ' ಎಂದಳು
' ಮತ್ತೇ.. ಮತ್ತೇ.. ಅಪ್ಪಾ.. ಪುನಃ ಬಿಕ್ಕಳಿಸತೊಡಗಿದಳು ಪಲ್ಲವಿ .
'ರಾತ್ರಿ ನಾವಿಬ್ಬರೂ ನೋಡೋಣ ಅಪ್ಪನನ್ನು.. ಏನಾಯ್ತು ಹೇಳೀಗ ..'ಎಂದಳು..
ಮಲಗಿದವಳು ಮೆಲ್ಲನೆ ಎದ್ದು ಕೂತು 'ಅಮ್ಮಾ.. ಅಪ್ಪ ನಕ್ಷತ್ರವಾಗಿದ್ದಾರೆ ಅಂದಿದ್ದೀಯಲ್ಲ ನೀನು ಅದು ಸತ್ಯ ತಾನೆ.. ಎಂದಳು ಕಣ್ಣು ಒರೆಸಿಕೊಳ್ಳುತ್ತಾ..
'ಹೌದು ಮರಿ ಯಾಕೀಗ ಈ ಪ್ರಶ್ನೆ..' ಎಂದು ಕೇಳಿದಳು ಶಾಂತಾ..
ದುಃಖ ಇನ್ನಷ್ಟು ಹೆಚ್ಚಿದ ಸ್ವರದಲ್ಲಿ 'ಮತ್ತೇ.. ಇವತ್ತು ಸ್ಕೂಲ್ ನಲ್ಲಿ ಸೈನ್ಸ್ ಟೀಚರ್, ನಕ್ಷತ್ರಗಳಿಗೂ ಸಾವು ಬರುತ್ತೆ ಅಂದ್ರು.. ಹಾಗಾದ್ರೆ ಅಪ್ಪ ಪುನಃ ಸಾಯ್ತಾರಾ.. ಎಂದು ಜೋರಾಗಿ ಅಳತೊಡಗಿದಳು ಪಲ್ಲವಿ ...
Wednesday, November 9, 2011
ಯಾರು ಜೀವವೇ .. ಯಾರು ಬಂದವರು..
'ಬೇಗ ಬೇಗ ಇಳೀರಿ ...' ಎಂದು ಬಸ್ಸು ನಿಲ್ಲುವ ಮೊದಲೇ ಕಂಡಕ್ಟರ್ ಇಳಿಯಲು ಅವಸರ ಮಾಡುತ್ತಿದ್ದ. ಅವನ ಕಡೆಗೊಮ್ಮೆ ಉರಿನೋಟ ಬೀರಿ ನನ್ನ ಲಗೇಜ್ ಹೊತ್ತು ಕೆಳಗಿಳಿದೆ.ಸೂರ್ಯ ಮುಳುಗುವ ಹೊತ್ತು.. ಹಗಲು ತನ್ನ ಕೆಲಸ ಮುಗಿಸಿ ಹೊರಟು ನಿಂತಿದ್ದರೆ ಕತ್ತಲೆ ನಾಚಿಕೊಂಡ ನವವಧುವಿನಂತೆ ಮೆಲ್ಲನಡಿಯಿಡುತ್ತಿತ್ತು.
ಹೋಗಬೇಕಿದ್ದ ದಾರಿಯ ಕಡೆಗೆ ಕಣ್ಣು ಹಾಯಿಸಿದೆ. ದಟ್ಟ ಹಸಿರಿನ ವನಸಿರಿಯ ನಡುವೆ ಹಾವಿನಂತೆ ಬಳುಕಿದ ರಸ್ತೆ. ಇನ್ನು ಹೆಚ್ಚು ಕಡಿಮೆ ಒಂದು ಕಿಲೋ ಮೀಟರ್ ನಷ್ಟು ದೂರವಿತ್ತು ಗೆಳೆಯ ಶೇಖರನ ಮನೆಗೆ..
ನಾನು ಬರುವ ಬಗ್ಗೆ ಮುಂಚಿತವಾಗಿ ಏನೂ ತಿಳಿಸಿರಲಿಲ್ಲ.ಮೊದಲೇ ಪ್ಲಾನ್ ಮಾಡಿಕೊಂಡು ಹೋಗುವುದು ನನ್ನ ಜಾಯಮಾನವಾಗಿರಲಿಲ್ಲ.ನಮ್ಮಿಬ್ಬರಲ್ಲಿದ್ದ ಆತ್ಮೀಯತೆ ಮತ್ತು ನನ್ನ ಸ್ವಭಾವದ ಪರಿಚಯವಿದ್ದ ಶೇಖರನಿಗೂ ಈ ಅನಿರೀಕ್ಷಿತ ಭೇಟಿ ಅಪ್ರಿಯವಾಗಲಾರದೆಂದು ನನ್ನ ನಂಬಿಕೆ.
ಕಣ್ಣನ್ನು ನಸುಗತ್ತಲೆಗೆ ಹೊಂದಿಸಿಕೊಳ್ಳುತ್ತಲೇ ಹೆಜ್ಜೆ ಹಾಕತೊಡಗಿದೆ. ನನ್ನಿಂದ ತುಸು ದೂರದಲ್ಲಿ ಯಾರೋ ನಡೆದು ಹೋಗುತ್ತಿರುವುದು ಕಾಣಿಸಿತು. ಕತ್ತಲಲ್ಲಿ ದಾರಿ ಸವೆಸಲು ಯಾರೋ ಒಬ್ಬರು ಜೊತೆಗೆ ಸಿಕ್ಕರಲ್ಲ ಎಂದು ಸಂತಸದಲ್ಲಿ ವೇಗವಾಗಿ ನಡೆದು ಸಮೀಪಿಸಲೆತ್ನಿಸಿದೆ. ನನ್ನ ಹೆಜ್ಜೆ ಸಪ್ಪಳಕ್ಕೆ ಮೆಲ್ಲನೆ ನನ್ನೆಡೆಗೆ ತಿರುಗಿ ನೋಡಿದ ಆ ವ್ಯಕ್ತಿಯನ್ನು ಕಂಡಾಗ ಅಚ್ಚರಿಂದ ಕಣ್ಣಗಲಿಸಿ ' ಹೇ ನೀನಾ ಶೇಖರ್' ಎಂದು ಕೂಗಿದೆ. ನನ್ನನ್ನು ಕಂಡವನ ಮೊಗದಲ್ಲಿ ಯಾವುದೇ ಅಚ್ಚರಿಯಾಗಲೀ ಸಂತಸವಾಗಲೀ ಇಲ್ಲದೆ, ನಿರ್ವಿಕಾರಭಾವದಲ್ಲಿ 'ನಡಿ ಹೋಗೋಣ ಮನೆಗೆ' ಅಂದ.ಅವನ ಮಾತು ನನಗೆ ತುಸು ಪೆಚ್ಚೆನಿಸಿತು.
ದಾರಿಯುದ್ದಕ್ಕೂ ಅವನ ಹಣಕಾಸಿನ ತಾಪತ್ರಯಗಳ ಬಗ್ಗೆ , ವಿದ್ಯಾಭ್ಯಾಸ ಮುಗಿದು ವರ್ಷಗಳಾಗಿದ್ದರೂ ಒಳ್ಳೆಯ ಉದ್ಯೋಗ ಸಿಗದ ಮಗನ ಬಗ್ಗೆ, ಹೆಂಡತಿಯ ಎಂದೂ ಮುಗಿಯದ ಕಾಯಿಲೆಗಳ ಬಗ್ಗೆ .. ಹೀಗೆ ಹೇಳುತ್ತಲೇ ಹೋದ.
ನಮ್ಮ ಮನೆಗೆ ವರ್ಷದಲ್ಲಿ 2 -3 ಬಾರಿಯಾದರು ಭೇಟಿ ನೀಡುವ ಶೇಖರ್, ಬರುವಾಗೆಲ್ಲಾ ಅವನ ಹಳ್ಳಿಮನೆಯಿಂದ ತೆಂಗಿನಕಾಯಿ, ಹೊಲದಲ್ಲಿ ಬೆಳೆದ ತಾಜಾ ತರಕಾರಿಗಳ ಬುಟ್ಟಿಗಳ ಜೊತೆಗೇ ಆಟೋದಿಂದ ಇಳಿಯುತ್ತಿದ್ದ. ಸದಾ ತಮಾಷೆ ಮಾಡುತ್ತಾ, ಎಲ್ಲರನ್ನು ನಗಿಸುತ್ತ ಇರುವ ಇವನೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಇಷ್ಟರವರೆಗೆ ತನ್ನ ಮನೆಯ ತಾಪತ್ರಯಗಳ ಬಗ್ಗೆ ಒಂದು ಮಾತು ಹೇಳಿದವನಲ್ಲ. ನಾನೂ ಅಷ್ಟೆ.. ಎಷ್ಟೇ ಆತ್ಮೀಯನಾಗಿದ್ದರೂ ವೈಯುಕ್ತಿಕ ಸಮಸ್ಯೆಗಳನ್ನು ವಿಚಾರಿಸಿಕೊಂಡವನಲ್ಲ. ಇಂದೇಕೊ ತದ್ವಿರುದ್ಧವಾಗಿ, ಕುಶಲ ವಿಚಾರಿಸಲು ಕೂಡ ವ್ಯವಧಾನವಿಲ್ಲದವರಂತೆ, ತನ್ನ ಸಮಸ್ಯೆಗಳ ಬಗ್ಗೆ ತೋಡಿಕೊಂಡಿದ್ದ. ಇವನ ಈ ನಡವಳಿಕೆ ನನಗೆ ತೀರ ಹೊಸದಾದ್ದರಿಂದ ನಾನು ಹೇಗೆ ಪ್ರತಿಕ್ರಯಿಸುವುದು ಎಂದು ತಿಳಿಯದೆ ಗೊಂದಲದಲ್ಲಿ ಹೂಂಗುಡುತ್ತಾ ಸಾಗುತ್ತಿದ್ದೆ.
ಅಷ್ಟರಲ್ಲಿ ನನಗೆ ತೀರಾ ಪರಿಚಿತವಾದ ಜುಳು ಜುಳು ಶಬ್ದ ಮಾಡುತ್ತಾ ಹರಿಯುವ ಸಣ್ಣ ತೊರೆ ಬಂದೇ ಬಿಟ್ಟಿತು. ಅದನ್ನು ದಾಟಿ ಎರಡು ಹೆಜ್ಜೆ ನಡೆದರೆ ಶೇಖರನ ಮನೆಯ ಗೇಟ್ ಕಾಣಿಸುತ್ತಿತ್ತು. ಅಷ್ಟೊತ್ತಿಗಾಗಲೇ ಕತ್ತಲು ತನ್ನ ಸಾಮ್ರಾಜ್ಯ ವಿಸ್ತರಿಸತೊಡಗಿದ್ದರೂ, ಮರದ ಮರೆಯಿಂದ ಇಣುಕುತ್ತಿದ್ದ ಚಂದ್ರನ ಬೆಳಕಿನಲ್ಲಿ ತೊರೆಯ ನೀರು ಬೆಳ್ಳನೆ ಹೊಳೆಯುತ್ತಿತ್ತು. ಸುತ್ತೆಲ್ಲಾ ಆವರಿಸಿದ್ದ ಸಸ್ಯರಾಶಿಯಲ್ಲಡಗಿದ ಬಿಬ್ಬರಿ ಹುಳುಗಳು ತೊರೆಯ ಬಳಿಯಲ್ಲಿದ್ದ ಕಪ್ಪೆಗಳೊಡನೆ ಪೈಪೋಟಿಗೆ ಬಿದ್ದವರಂತೆ ವಿಚಿತ್ರ ಸ್ವರದಲ್ಲಿ ಸಂಗೀತ ಕಛೇರಿ ನಡೆಸುತ್ತಿದ್ದವು.
ಇನ್ನೇನು ಮನೆ ಬಂತು ಎನ್ನುವಷ್ಟರಲ್ಲಿ ಶೇಖರ್ ನನ್ನೆಡೆಗೆ ತಿರುಗಿ 'ನಿನ್ನಿಂದ ನನ್ನ ಕುಟುಂಬಕ್ಕೆ ಏನಾದರು ಸಹಾಯ ಮಾಡಲು ಸಾಧ್ಯವಿದ್ದರೆ ಮಾಡು. ಇದು ನಿನ್ನ ಗೆಳೆಯನ ಬೇಡಿಕೆ ಅಷ್ಟೇ.. ಒತ್ತಾಯವಲ್ಲ.. ನೀನು ಒಳಗೆ ಹೋಗು.. ನನಗೊಂದಿಷ್ಟು ಕೆಲಸವಿದೆ' ಎಂದು ಹೇಳಿ, ಯಾಕೋ ಮಾತುಗಳೆಲ್ಲಾ ಮುಗಿದೇ ಬಿಟ್ಟಿತೇನೋ ಎಂಬಂತೆ ಮೌನವಾಗಿ, ತಿರುಗಿ ಕತ್ತಲಲ್ಲೇ ಮರೆಯಾದ.
ಇದ್ದಕ್ಕಿದ್ದಂತೆ ನನ್ನ ಹೆಜ್ಜೆಗಳು ಭಾರವಾದಂತೆನಿಸಿತು. ಮನೆಯ ಬಾಗಿಲ ಬಳಿ ಶೇಖರನ ಮಗ ದೊಡ್ಡ ಸ್ವರದಲ್ಲಿ ಉದ್ವೇಗಗೊಂಡವರಂತೆ ಫೋನಿನಲ್ಲಿ ಯಾರೊಡನೆಯೋ ಮಾತಾಡುತ್ತಿದ್ದವನು, ನನ್ನನ್ನು ನೋಡಿದವನೇ, ಫೋನ್ ಕೈಯಿಂದ ಜಾರಿ ಹೋದುದನ್ನು ಲೆಕ್ಕಿಸದೆ ಓಡಿ ಬಂದು ಅಪ್ಪಿಕೊಂಡ. ಕಣ್ಣುಗಳು ತುಂಬಿ ಹನಿಯೊಡೆದಿತ್ತು . ಅಲ್ಲೇ ಮುದುರಿ ಕುಳಿತಂತಿದ್ದ ಗೆಳೆಯನ ಮಡದಿ ನನ್ನನ್ನು ಕಂಡವಳೇ ಜೋರಾಗಿ ಅಳಲು ಪ್ರಾರಂಭಿಸಿದಳು. ಗಾಭರಿಯಿಂದ 'ಏನಾಯ್ತು ಅತ್ತಿಗೆ, ದಿನೇಶ ಏನಾಯ್ತೋ?' ಎಂದೆ.
'ಈಗ ಸ್ವಲ್ಪ ಹೊತ್ತಿನ ಮೊದಲು ಅಪ್ಪ ಎದೆನೋವೆಂದು ಕುಸಿದು ಬಿದ್ದರು. ಅಷ್ಟೆ.. ಅಪ್ಪ ನಮ್ಮನ್ನೆಲ್ಲ ಬಿಟ್ಟು ಹೋದರು ಅಂಕಲ್..ನೋಡಿ ಅಲ್ಲಿ ; ಎಂದು ಬಿಕ್ಕುತ್ತಲೇ ಕೈಯನ್ನು ಪಕ್ಕದ ಕೋಣೆಯ ಕಡೆಗೆ ತೋರಿಸಿದ. ಮಂದವಾಗಿ ಉರಿಯುತ್ತಿದ್ದ ದೀಪ ... ಬಿಳಿ ಬಟ್ಟೆಯ ಕೆಳಗೆ ಮಲಗಿತ್ತು ಶೇಖರನ ದೇಹ...
ಹಾಗಿದ್ದರೆ ನನ್ನೊಡನೆ ಇಷ್ಟು ಹೊತ್ತು ಮಾತಾಡಿಕೊಂಡು ಬಂದವರು ಯಾರು..? ತಣ್ಣನೆಯ ಗಾಳಿಯ ಅಲೆಯೊಂದು ಸೋಕಿ ಮೈಯನ್ನೊಮ್ಮೆ ಕೊಡವಿಕೊಳ್ಳುವಂತೆ ಮಾಡಿತು. ವಿಭ್ರಾಂತನಂತೆ ಹಾಗೇ ನಿಂತುಕೊಂಡೆ.
Monday, November 7, 2011
ಕಿಟಕಿ ..
ನಾನಿದ್ದೆ ಜೀರ್ಣವಾಗಿದ್ದ ಪುಟ್ಟ ಮನೆಯಲ್ಲಿ ...
ಆಗಸದ ಸುಡು ಸೂರ್ಯ ಸುಡುತ್ತಿದ್ದ ನನ್ನ
ಮಳೆನೀರ ಎರಚಲಿಗೆ ಮುಖವೊಡ್ಡುತ್ತಿದ್ದೆ..
ತಂಗಾಳಿ ನನ್ನ ಒಳ ಹೊರಗೆ
ಪ್ರತಿ ಕಂಬಿ ಕಂಬಿಗಳಲ್ಲೂ
ಪ್ರಿಯಕರನ ಕಾದಿದ್ದ ಪ್ರೇಯಸಿಯ ಕೈಯ ಬಿಸಿ,
ಬರದಾಗ ನಿಂತು ಕಣ್ಣೀರು ಸುರಿಸಿದ್ದ ಅವಳ ಹೃದಯದ ಚೂರು .....
ಮೇಲೇರ ಹೋಗಿ ಬಿದ್ದು ಅತ್ತಿದ್ದ
ಪುಟ್ಟ ಕಂದನ ಅಳು ......
ಅಪ್ಪನ ಹೆಗಲೇರಿ ನನ್ನಿಂದ ಎತ್ತರ ಎಂದು ನಕ್ಕಿದ್ದ ಮು ಗ್ದ ಹಾಸ ...
ಕೈಯಾಸರೆಯಲ್ಲೇ ನಡೆಯುತಿದ್ದ ಅಜ್ಜಿಯ ಭರವಸೆ....
ಯಾರೋ ಬಂದು ನನ್ನಂದವ ಕಂಡು ಎತ್ತಿ ಒಯ್ದರು
ಸುಂದರ ಅರಮನೆಗೆ.........
ಅಮೃತ ಶಿಲೆಯ ಗೋಡೆಯೇರಿದ ನಾನು ಕಪ್ಪು ಕನ್ನಡಿಯೊಳಗೆ ಬಂಧಿ .. .
ಒಳಗಿನಿಂದಾದರೋ ಕಸೂತಿಯ ಪರದೆಗಳ ಮಾ ಲೆ...
ಇಲ್ಲಿ ನನ್ನನಾರು ನೋಡುವರಿಲ್ಲ ....ಕಾಡು ವರಿಲ್ಲ...ಆಡುವರಿಲ್ಲ....
ನನ್ನ ಅಗತ್ಯವೇ ಇಲ್ಲದ ಸದಾ ಮುಚ್ಚಿರುವ ಬಾ ಗಿಲಿನ ಈ ಮನೆಯಲ್ಲಿ.....
Tuesday, November 1, 2011
ಬಣ್ಣದ ಕಡ್ಡಿ..
ಅಂಗಳದ ಬದಿಯಲ್ಲಿ ಸಣ್ಣ ಹಳದಿ ಬಣ್ಣದ ಹೂವನ್ನು ಮೈ ತುಂಬಾ ಅರಳಿಸಿ, ಹಾಸಿಗೆಯಂತೆ ಕಾಣುತ್ತಿದ್ದ ಗಿಡಗಳು, ಅದಕ್ಕೆ ಮುತ್ತುತ್ತಿದ್ದ ಬಗೆ ಬಗೆಯ ಸುಂದರ ಚಿಟ್ಟೆಗಳು,ಅದನ್ನೆ ಗಮನವಿಟ್ಟು ನೋಡುತ್ತಿದ್ದ ನಂಗೆ ಹಾರಾಡುವ ಚಿಟ್ಟೆಯ ಚಿತ್ರ ಬಿಡಿಸೋದು ಸುಲಭ ಅಂತನ್ನಿಸ್ತು. ಈಗಲೇ ಸ್ಲೇಟ್ ನಲ್ಲಿ ಬಿಡಿಸಿ ನಾಳೆ ಗೆಳತಿಯರಿಗೆಲ್ಲ ತೋರಿಸಿ ಅವರನ್ನು ಅಚ್ಚರಿಗೊಳಿಸಬೇಕೆಂದುಕೊಂಡು ಒಳ ಬಂದೆ.
ಬ್ಯಾಗ್ ತೆರೆದು ಕಂಪಾಸ್ ಬಾಕ್ಸನ್ನು ಸದ್ದಾಗದಂತೆ ಮೆಲ್ಲನೆ ಮುಚ್ಚಳ ತೆಗೆದಾಗ ಮೊದಲಿಗೆ ಕಣ್ಣಿಗೆ ಬಿದ್ದಿದ್ದು ಸ್ಲೇಟಿನ ಬಣ್ಣದ ಕಡ್ಡಿ, ನರಸಿಂಹಾವತಾರದಂತೆ ಪೆನ್ನಿನ ಕೆಳಗಿನ ಭಾಗದ ಒಳ ಹೊಕ್ಕು ತಲೆ ಪೆನ್ಸಿಲ್, ದೇಹ ಪೆನ್ನು ಆಗಿರುವ ಪೆನ್ಸಿಲ್. ಅಕ್ಷರಗಳೆಲ್ಲಾ ಅಳಿಸಿಹೋದ ನಸು ಹಳದಿ ಬಣ್ಣದ, ದೊಡ್ಡಣ್ಣ ಕೊಟ್ಟ ಪುಟ್ಟ ಸ್ಕೇಲ್, ಪೆನ್ಸಿಲ್‌ನಿಂದ ಕುತ್ತಿ ಕುತ್ತಿ ಅರೆಜೀವವಾಗಿರುವ ಗಾಯಾಳು ರಬ್ಬರ್..ಅದನ್ನೆಲ್ಲಾ ಕೆಳಗಿಟ್ಟು ಅದರಡಿಯ ಪೇಪರನ್ನು ಮೆಲ್ಲನೆತ್ತಿದೆ.
ಒಂದು ಸಣ್ಣ ನವಿಲುಗರಿ,ಎರಡು ಐದು ಪೈಸೆಯ ಪಾವಲಿಗಳು, ಮತ್ತೊಂದು ಎಲೆ. ಈ ಎಲೆ ಮರಿ ಹಾಕುತ್ತೆ ಅಂತ ಗೆಳತಿ ನೈನಾ ಕೊಟ್ಟಿದ್ದಳು.ಸ್ವಲ್ಪ ಬಾಡಿ ಕಪ್ಪಗಾಗಿತ್ತು. ಆದ್ರೆ ಇನ್ನೂ ಮರಿ ಹಾಕಿರಲಿಲ್ಲ.
ನವಿಲುಗರಿ ಕೂಡಾ ಪುಸ್ತಕದ ಒಳಗಿಟ್ಟರೆ ಮರಿ ಹಾಕುತ್ತಂತೆ. ಆದ್ರೆ ಪುಸ್ತಕ ತೆರೆಯುವಾಗ ಅಮ್ಮ ನವಿಲುಗರಿ ಮತ್ತು ಮರಿ ಎಲ್ಲಾದ್ರು ಬಿದ್ದು ಹೋದರೆ ಗೊತ್ತೇ ಆಗಲ್ಲ ಅಂತ ನಾನು ಇದರೊಳಗೆ ಜೋಪಾನ ಮಾಡಿದ್ದೆ.
ಇದೆಲ್ಲ ಸರಿ .. !! ಇದರೊಳಗೆ ನಾನು ಭದ್ರವಾಗಿಟ್ಟಿದ್ದ ಬಣ್ಣದ ಕಡ್ಡಿ ಎಲ್ಲಿ ಹೋಯ್ತು? ಬ್ಯಾಗೆಲ್ಲ ಬೋರಲು ಹಾಕಿ ಹುಡುಕಿದೆ. ಉಹುಂ ..!! ಎಲ್ಲೂ ಇಲ್ಲ.
ಇನ್ನೊಬ್ಬ ಗೆಳತಿ ಜಾನಕಿಯ ಹತ್ತಿರ ತುಂಬಾ ಬೇಡಿಕೊಂಡ ಮೇಲೆ, ಅವಳ ಹತ್ತಿರ ಇದ್ದ ಉದ್ದದ ಕಡ್ಡಿಯನ್ನು ಸ್ವಲ್ಪವೇ ಸ್ವಲ್ಪ ತುಂಡು ಮಾಡಿ ಕೊಟ್ಟಿದ್ದಳು. ಇನ್ನೊಂದು ಚೂರು ಉದ್ದ ಮಾಡಿ ಕೊಡಬಹುದಾಗಿತ್ತು. ಆದ್ರೆ ಅವ್ಳು ಸ್ವಲ್ಪ ಕಂಜೂಸ್.ಜೊತೆಗೆ ಕ್ಲಾಸಲ್ಲಿ ಯಾರಿಗೂ ತೋರಿಸಬಾರದು, ಹೇಳಲೂಬಾರದು ಅಂತ ನನ್ನಿಂದ ದೇವರ ಆಣೆ ಹಾಕಿಸಿಕೊಂಡಿದ್ದಳು. ಹಾಗಾಗಿಯೇ ಅದನ್ನು ಕಂಪಾಸ್ ಬಾಕ್ಸಿನ ಅಡಿಯಲ್ಲಿಟ್ಟಿದ್ದೆ.
ಎಲ್ಲಿಗೆ ಹೋಯ್ತೀಗ..? ಕಣ್ಣಲ್ಲೆಲ್ಲಾ ನೀರು ತುಂಬಿಕೊಳ್ಳುತ್ತಿತ್ತು. ಲಂಗದ ತುದಿಯಲ್ಲೇ ಅದನ್ನು ಒರಸಿಕೊಂಡು ಮತ್ತೂ ಹುಡುಕಿದೆ. ಆದರೆ ಹುಡುಕಿದಷ್ಟೂ ಎಲ್ಲೂ ಕಾಣದೆ ಅಳು ಜೋರಾಗಿ ಉಕ್ಕಿ ಬಂತು. ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದೆ.
ಒಳಗಿದ್ದ ಅಮ್ಮನಿಗೆ ಕೇಳಿಸಿತೇನೋ..!! ಹೊರಬಂದು 'ಏನಾಯ್ತು? ಏನಾದ್ರು ತಾಗಿಸಿಕೊಂಡ್ಯಾ' ಅಂದ್ಲು. ಇಲ್ಲ ಎಂಬಂತೆ ತಲೆ ಅಲುಗಿಸಿ ಅಳು ಮುಂದುವರಿಸಿದೆ.ನಾನು ಬ್ಯಾಗೆಲ್ಲ ಹರಡಿಕೊಂಡು ಕುಳಿತಿದ್ದನ್ನು ನೋಡಿ 'ಏನಾಯ್ತು, ಹೇಳ್ಬಾರದಾ.. ಸುಮ್ಮನೆ ಅತ್ತರೆ ಹೇಗೆ ಗೊತ್ತಾಗೋದು? ಪುನಃ ಎಲ್ಯಾದ್ರು ಮೊನ್ನೆಯ ಹಾಗೆ ಹೊಸ ಪೆನ್ಸಿಲ್ ಕಳೆದು ಹಾಕಿಕೊಂಡ್ಯಾ'..? ಅಂದಳು.
ಅಮ್ಮ ಹೇಳುವ ಈ ಮೊನ್ನೆ ಅನ್ನುವುದು ಕಳೆದು ಒಂದು ವರ್ಷ ಹೆಚ್ಚಾಗಿದೆ. ಆದರೂ ಇನ್ನೂ ನಾನ್ಯಾವತ್ತೋ ಕಳೆದುಕೊಂಡ ಪೆನ್ಸಿಲನ್ನು ನೆನಪಿಸಿ ಇನ್ನೂ ಬಯ್ಯುತ್ತಿರುತ್ತಾಳೆ. ಅದೂ ಕೂಡಾ ನಾನು ಕಳೆದುಕೊಂಡದ್ದೇನೂ ಆಗಿರಲಿಲ್ಲ. ವನಜ ತಂದುಕೊಟ್ಟ ನೇರಳೆ ಹಣ್ಣಿಗೆ ಬದಲಾಗಿ ಕೊಟ್ಟಿದ್ದು. ಮನೆಯಲ್ಲಿ ಹೇಳಿದರೆ ಅಮ್ಮ ಕೋಲು ಮುರಿಯುವಂತೆ ಹೊಡೆಯುತ್ತಾಳೆ ಎಂದು ಕಳೆದುಹೋಗಿದೆ ಎಂದಿದ್ದೆ. ಅದಕ್ಕೂ ಪೆಟ್ಟೇನೂ ಕಡಿಮೆ ಬಿದ್ದಿರಲಿಲ್ಲ.. !! ಸುಳ್ಳು ಹೇಳಬಾರದು ಅಂತ ಪ್ರತಿದಿನ ಹೇಳಿಕೊಡುತ್ತಿದ್ದ ಅಮ್ಮನಿಗೆ ನಾನು ಸುಳ್ಳು ಹೇಳಿದ್ದು ಅಂತ ಗೊತ್ತಾಗಿದ್ದರೆ ಇನ್ನೂ ಬೀಳ್ತಿತ್ತು.
ನನ್ನ ಮೌನ ನೋಡಿ,ಅಮ್ಮ ಸ್ವಲ್ಪ ದೊಡ್ದ ಸ್ವರ ಮಾಡಿ ಬೇಗ ಹೇಳು ಅಂದಳು.ಇನ್ನು ಹೇಳದಿದ್ದರೆ ಬೆನ್ನಿಗೆ ಬಿದ್ದರೂ ಬಿದ್ದೀತು ಎಂದು 'ನನ್ನ ಬಣ್ಣದ ಕಡ್ಡಿ ಕಾಣ್ತಾ ಇಲ್ಲ, ಜಾನಕಿ ನಂಗೆ ಅಂತ್ಲೇ ಕೊಟ್ಟಿದ್ದು..' ಎಂದೆ ಸ್ವಲ್ಪ ಹೆದರಿಕೆಯಿಂದ. ಬೇರೆಯವರ ವಸ್ತು ತಂದರೆ ಅಮ್ಮನಿಗೆ ವಿಪರೀತ ಸಿಟ್ಟು ಬರುತ್ತಿತ್ತು.
ಆದರೆ ಇವತ್ಯಾಕೋ ಸಮಾಧಾನದ ಸ್ವರದಲ್ಲಿ, 'ಕೇಳಿದ್ರೆ ನಾನು ಹೇಳ್ತಿರಲಿಲ್ವಾ.. ಅಷ್ಟ್ಯಾಕೆ ಅಳ್ಬೇಕಿತ್ತು'..? ಅಂತ ಒಳ ನಡೆದು ನನ್ನ ಕೈಗೆ ಬಣ್ಣದ ಕಡ್ಡಿ ತಂದಿತ್ತಳು. ಒಂದಿಂಚು ಉದ್ದದ ಕಡ್ಡಿಯ ಒಂದು ಭಾಗ ಆಗಲೇ ಏನೋ ಬರೆದಂತೆ ತೆಳ್ಳಗಾಗಿತ್ತು.
ಸ್ವಲ್ಪ ಸಿಟ್ಟಿನಿಂದ ನನ್ನ ಕಡ್ಡಿ ಯಾಕೆ ತೆಗೆದಿದ್ದು ಅಂದೆ. ಗ್ಯಾಸ್ ಅಂಡೆಯ ಮೇಲೆ ತಾರೀಕು ಬರೆಯೋಕೆ ಅಂತ ತೆಗೊಂಡಿದ್ದು ಅಂದಳು. ಈಗಂತೂ ನನ್ನ ಸಿಟ್ಟು ಮೇರೆ ಮೀರಿತು. ನಾನು ಅಷ್ಟು ಕಷ್ಟ ಪಟ್ಟು ಸಂಪಾದಿಸಿದ ಬಣ್ನದ ಕಡ್ಡಿಯ ಮಹತ್ವ ತಿಳಿಯದೆ ಅದನ್ನು ಗ್ಯಾಸ್ ಅಂಡೆಯ ಮೇಲೆ ತಾರೀಕು ಬರೆಯಲು ಉಪಯೋಗಿಸಿದ್ದಾಳಲ್ಲ.. ಏನೆನ್ನಬೇಕು ಇವಳಿಗೆ..
ಇವತ್ತು ಹೇಗೂ ತಪ್ಪು ಅಮ್ಮಂದೇ ಆದ್ದರಿಂದ, 'ನೀನ್ಯಾಕೆ ನಂಗೆ ಹೇಳದೆ ತೆಗೊಂಡಿದ್ದು? ಇಷ್ಟು ಸಣ್ಣ ಮಾಡಿ ಕೊಟ್ಟಿದ್ದೀಯಾ.. ನಂಗೆ ಬೇಡಾ ಇದು .. ದೊಡ್ಡ ಮಾಡಿ ಕೊಡು' ಅಂತ ನನ್ನ ವರಸೆ ಸುರು ಮಾಡಿದೆ.
ಅಮ್ಮನಿಗೇನನ್ನಿಸಿತೋ.. ಮೆಲ್ಲನೆ ನನ್ನ ಹತ್ತಿರ ಬಂದು ನನ್ನ ಕೈಯಿಂದ ಆ ಬಣ್ಣದ ಕಡ್ಡಿಯನ್ನು ತೆಗೆದುಕೊಂಡು 'ಇದು ನಂಗೆ ಆಯ್ತು. ಇದ್ರಲ್ಲಿ ಅಂಡೆಯ ಮೇಲೆ ಬರೆದರೆ ಚೆನ್ನಾಗಿ ಕಾಣುತ್ತೆ. ಬೇಗ ಅಳಿಸಿ ಹೋಗಲ್ಲ, ನಿಂಗೆ ಅಪ್ಪನತ್ರ ದೊಡ್ಡ ಕಡ್ಡಿ ತರ್ಲಿಕ್ಕೆ ಹೇಳ್ತೀನಿ.ಅಂತ ನನ್ನ ಪೂಸಿ ಮಾಡಿದಳು.
ನಾನು ಕುಶಿಯಲ್ಲಿ ' ಹೌದಾ , ನಿಜಕ್ಕೂ ದೊಡ್ದ ಕಡ್ಡಿ ತರಕ್ಕೆ ಹೇಳ್ತೀಯಾ.. ಅಂದೆ. ಅಮ್ಮ ನನ್ನ ಅಳು ನಿಂತ ಸಮಾಧಾನದಲ್ಲಿ 'ಹುಂ, ನಿಜವಾಗಿಯೂ ಹೇಳ್ತೀನಿ ' ಅಂದು ಒಳ ನಡೆದಳು.
ಇದಾಗಿ ನಾಲ್ಕೈದು ಗ್ಯಾಸ್ ಅಂಡೆಯ ಮೇಲೆ ನನ್ನ ಬಣ್ಣದ ಕಡ್ಡಿಯಲ್ಲಿ ತಾರೀಕುಗಳು ಮೂಡಿದರೂ, ನಂಗಿನ್ನು ಹೊಸ ದೊಡ್ದ ಕಡ್ಡಿ ಬಂದಿಲ್ಲ. ಕೇಳಿದಾಗೆಲ್ಲ ಕೊಡಿಸ್ತೀನಿ ಇರು ಅಂತ ಹೇಳೋದನ್ನು ಬಿಟ್ಟಿಲ್ಲ.. ಅಮ್ಮ ಸುಳ್ಳು ಹೇಳಲ್ಲ ಅಲ್ವಾ ..
Friday, October 28, 2011
ಯಾರಿಗೂ ಹೇಳೋಣು ಬ್ಯಾಡಾ... !!
ಅಪುರೂಪಕ್ಕೆ ಬೆಳಗ್ಗಿನ ತಿಂಡಿಗೆ ಒಗ್ಗರಣೆ ಹಾಕಿದ ಅವಲಕ್ಕಿ , ಉಪ್ಪಿಟ್ಟು ಮಾಡಿದ್ದೆ.ನಂಗೆ ಇಷ್ಟ ಅನ್ನುವ ಕಾರಣಕ್ಕೇನೋ ಮಾಡಿದ್ದು ಹೆಚ್ಚಾಗಿ ಸ್ವಲ್ಪ ಹೆಚ್ಚೇ ಉಳಿದಿತ್ತು. ಸಂಜೆಗೂ ಅದೇ ತಿಂಡಿ ಅಂತ ಬೆಳಗ್ಗೇನೇ ಡಿಕ್ಲೇರ್ ಮಾಡಿಯೂ ಬಿಟ್ಟಿದ್ದೆ.ಮಗ ಸಂಜೆ ಸ್ಪೆಷಲ್ ಕ್ಲಾಸ್ ಇದೆ.ತಿಂಡಿ ನಂಗೆ ಇಡೊದೇನೂ ಬೇಡ ಅಂದ. ಇವರು ನಾನು ಸಂಜೆ ಎಲ್ಲಾದ್ರು ಹೋಗೋಣ ಅಂತಿದ್ದೀನಿ, ಅಂತಂದು ನನ್ನ ಸಿಡುಕಿನ ಉತ್ತರವನ್ನು ಕಾಯತೊಡಗಿದರು. ಮೆಚ್ಚಿನ ತಿಂಡಿ ಹೊಟ್ಟೆಯೊಳಗಿದ್ದುದರಿಂದಲೋ ಏನೋ, ನಾನು ಏನೂ ಮಾತಾಡದೆ ಒಳ ನಡೆದೆ.
ಮಧ್ಯಾಹ್ನ ಊಟದ ನಂತರ ನಸು ನಿದ್ರೆ ಅಗತ್ಯವೇ.. ಅನ್ನುವ ಲೇಖನವನ್ನು ಕೈಯಲ್ಲಿ ಹಿಡಿದು ಅದ್ಯಾವ ಮಾಯೆಯಲ್ಲಿ ನಿದ್ದೆಗೆ ಜಾರಿದ್ದೆನೋ ನನಗೇ ತಿಳಿದಿರಲಿಲ್ಲ.
ಹತ್ತಿರದಲ್ಲಿದ್ದ ಫೋನ್ ಒಂದಿಡೀ ಸುತ್ತಿನ ರಿಂಗ್ ಆಗಿ ಎರಡನೇ ಬಾರಿ ಹೊಡೆದುಕೊಳ್ಳಲು ಪ್ರಾರಂಭಿಸಿತು. ಬಲವಂತವಾಗಿ ಕಣ್ಣು ತೆರೆದು ಎದ್ದೆ. ನೋಡಿದರೆ ದೂರದ ಊರಲ್ಲಿರುವ ಚಿಕ್ಕಮ್ಮ. 'ಸಂಜೆಗೆ ನಾವೆಲ್ಲರೂ ನಿಮ್ಮಲ್ಲಿಗೆ ಬರ್ತಾ ಇದ್ದೀವಿ ಜೊತೆಗೆ ಚಿಕ್ಕಪ್ಪನ ಸ್ನೇಹಿತರೂ ಒಬ್ರು ಇದ್ದಾರೆ. ನಮ್ಮೂರು ನೋಡಕ್ಕೆ ಕರ್ಕೊಂಡು ಬಂದಿದ್ದೀವಿ.. ಬೇಗ ಬರ್ತೀವಿ ..ಆಮೇಲೆ ಮಾತಾಡೋಣ ಆಗದೇ ..? ಈಗ ಫೋನ್ ಇಡ್ಲಾ ಅಂದಳು. ನಾನು ಸಂತೋಷದಿಂದ 'ಸರಿ ಬೇಗ ಬನ್ನಿ ಚಿಕ್ಕಮ್ಮ' ಅಂದೆ.
ಈಗ ನನ್ನ ಮೊದಲಿನ ಪ್ಲಾನ್ ಗೆ ಕುತ್ತು ಬಂದಿತ್ತು. ತುಂಬಾ ಸಮಯದ ನಂತ್ರ ನಮ್ಮಲ್ಲಿಗೆ ಬರುತ್ತಿರುವ ಅವಳಿಗೆ ನನ್ನ ಅತ್ಯಪರೂಪದ ಬೆಳಗ್ಗಿನ ಉಳಿದ ಉಪ್ಪಿಟ್ಟು , ಅವಲಕ್ಕಿ ಕೊಡೋದು ಹೇಗೆ? ಹಾಗಂತ ಇದನ್ನು ವೇಸ್ಟ್ ಮಾಡಲೂ ಮನಸ್ಸಿಲ್ಲ. ತಲೆಕೆರೆದುಕೊಳ್ಳುತ್ತಲೇ ಅಡುಗೆ ಮನೆಗೆ ಕಾಲಿಟ್ಟೆ. ಸಾಂಬಾರ್ ಗೆ ಕತ್ತರಿಸಿ ಉಳಿದಿದ್ದ ಅರ್ಧ ತುಂಡು ಕ್ಯಾಬೇಜ್, ಮತ್ತೊಂದು ಬೀಟ್ರೂಟ್ ಯಾಕೋ ಕಣ್ಣು ಸೆಳೆದವು.
ತಲೆಯೊಳಗೆ ಸಾವಿರ ವೋಲ್ಟ್ ನ ಬಲ್ಬ್ ಇದ್ದಕ್ಕಿದ್ದಂತೇ ಉರಿಯತೊಡಗಿತು. ಕೂಡಲೇ ಸ್ಟೋರ್ ರೂಮಿಗೆ ಹೋಗಿ, ಅಲ್ಲಿ ಬೆಚ್ಚಗೆ ಕುಳಿತಿದ್ದ ಅಕ್ಕಿ ಹುಡಿ, ಮೈದಾ, ಸಣ್ಣ ರವೆ ಮೂರನ್ನೂ ಅರ್ಧರ್ದ ಕಪ್ ತೆಗೆದುಕೊಂಡು ಅಗಲ ಬಾಯ ಪಾತ್ರಕ್ಕೆ ಸುರಿದೆ. ಸ್ವಲ್ಪ ಎಣ್ಣೆ ಬಿಸಿ ಮಾಡಿ ಸೇರಿಸಿದೆ. ಅದಕ್ಕೆ ಸಣ್ಣಗೆ ಹೆಚ್ಚಿದ ಕ್ಯಾಬೇಜ್ ,ಈರುಳ್ಳಿ,ಹಸಿಮೆಣಸಿನಕಾ, ತುರಿದ ಬೀಟ್ರೂಟ್, ಉಪ್ಪು, ಸ್ವಲ್ಪ ಮೆಣಸಿನ ಹುಡಿ ಎಲ್ಲವನ್ನೂ ಬೆರೆಸಿದೆ.ಅದಕ್ಕೆ ಉಳಿದಿದ್ದ ಉಪ್ಪಿಟ್ಟು ಅವಲಕ್ಕಿಗಳನ್ನು ಸೇರಿಸಿ, ಸ್ವಲ್ಪ ನೀರು ಚಿಮುಕಿಸಿಕೊಂಡು ರೊಟ್ಟಿ ಹಿಟ್ಟಿನ ಹದಕ್ಕೆ ಚೆನ್ನಾಗಿ ಕಲಸಿ ಒಂದೈದು ನಿಮಿಷ ಹುದುಗಲು ಬಿಟ್ಟೆ. ಆ ಹೊತ್ತಿನಲ್ಲಿ ಕಾಯಿ ತುರಿದು ಚಟ್ನಿ ತಯಾರಿಸಿದೆ. ನಿಂಬೆಗಾತ್ರದ ಉಂಡೆಗಳನ್ನು ಮಾಡಿ ಬಾಳೆ ಎಲೆಯಲ್ಲಿ ವಡೆಯ ಆಕಾರದಲ್ಲಿ ತಟ್ಟಿ ಬಿಸಿ ಎಣ್ಣೆಯಲ್ಲಿ ಕರಿದು ತೆಗೆದೆ.
ಕೊನೆಯ ಒಂದೆರಡು ವಡೆಗಳಿನ್ನೂ ಎಣ್ಣೆಯ ಬಾಣಲೆಗೆ ಬೀಳಲು ಬಾಕಿ ಇರುವಾಗಲೇ ಚಿಕ್ಕಮ್ಮನ ಮನೆಯವರೆಲ್ಲರೂ ಪ್ರತ್ಯಕ್ಷರಾದರು. ಬಿಸಿ ಬಿಸಿ ವಡೆ, ಚಟ್ನಿ ಮತ್ತು ಟೊಮೇಟೊ ಕೆಚಪ್ ಜೊತೆಗೆ ಎಲ್ಲರೂ ಇಷ್ಟ ಪಟ್ಟು ತಿಂದರು. ಚಿಕ್ಕಮ್ಮನಂತೂ, ಮಗಂಗೇ , ಗಂಡಂಗೆ ಸ್ವಲ್ಪ ತೆಗ್ದಿಟ್ಟಿರೇ.. ಇಲ್ಲಾಂದ್ರೆ ಎಲ್ಲಾ ನಾವೇ ಖಾಲಿ ಮಾಡ್ತೀವಿ ಅಂದ್ಲು. ನನ್ನ ಹೊಸ ರುಚಿ ಎಲ್ಲರಿಗೂ ಇಷ್ಟ ಆಯ್ತಲ್ಲಾ ಅನ್ನುವ ಸಂತಸದಲ್ಲಿ ಖಾಲಿಯಾದ ತಟ್ಟೆಯನ್ನು ಒಳ ಕೊಂಡೊಯ್ಯುತ್ತಿದ್ದೆ. ಅಷ್ಟರಲ್ಲಿ ಚಿಕ್ಕಪ್ಪನ ಸ್ನೇಹಿತರು ಮೆಲ್ಲನೆ ಅಡುಗೆ ಮನೆಯ ಹತ್ತಿರ ಬಂದು ಈ ತಿಂಡಿಯ ರೆಸಿಪಿ ಬರೆದು ಕೊಡಲು ಸಾಧ್ಯವೇ ಅಂತ ಕೇಳಿದ್ರು..
ಅಯ್ಯೋ ..!! ನಾನೇನ್ ಮಾಡ್ಲಿ.. ? ಹೇಳ್ಕೊಡ್ಲಾ.. ಬೇಡ್ವಾ????
Anitha Naresh Manchi
Monday, October 24, 2011
ದೀಪಾವಳಿ ..
ಅಲ್ಲೊಮ್ಮೆ ಇಲ್ಲೊಮ್ಮೆ
ಇಣುಕುವ ಅಂಜಿಕೆ
ಅವನು ಕೈಯಲ್ಲಿ ಕೈಯಿಟ್ಟು
ನುಡಿದೇ ನುಡಿಯುತ್ತಾನೆ
ನೀ ಬೇಲೂರ ಶಿಲಾ ಬಾಲಿಕೆ
ಸುತ್ಯಾರಿಲ್ಲದಿದ್ದರೂ ಪಿಸುಮಾತು
ಹತ್ತಿರವಾದಷ್ಟು ಕರಗುವ ತನು ಮನ
ಕುಡಿಯೊಡೆದು ತುಸು ನಾಚಿಕೆ
ಕಾಲ ಉರುಳುತ್ತದೆ ಬೇಡದಿದ್ದರೂ
ಗಂಟೆಗಳು ನಿಮಿಷದಷ್ಟು ವೇಗದಿ
ನಾಳೆ ಮರಳಿ ನನ್ನೆಡೆಗೆ ಬಾ ಎಂಬ ಕೋರಿಕೆ ..
ಮತ್ತೆ ಮತ್ತೆ ಹೆಣೆದುಕೊಳ್ಳುವ ಬೆರಳ ಸಡಿಲಿಸಿ
ತಿರುಗಿ ನೋಡುವ ನೋಟದೊಳಗೆ
ಹಚ್ಚಿಟ್ಟ ಸಾಲು ಸಾಲು ದೀಪಾವಳಿಯ ದೀಪಿಕೆ
Friday, October 21, 2011
ಬಂದು ನೋಡಾ.. ನಮ್ಮೂರ ರೋಡಾ..
ನೀವು ಧೈರ್ಯವಂತರಾಗಿದ್ದರೆ ಈ ಆಹ್ವಾನವನ್ನು ಸ್ವೀಕರಿಸುತ್ತೀರಿ ಎಂಬ ನಂಬಿಕೆ ನನ್ನದು..ಅರೆ..!! ಹೊರಟೇ ಬಿಟ್ರಾ.. ಸರಿ.. ಬನ್ನಿ ಬನ್ನಿ ....
ಸಧ್ಯಕ್ಕೆ ನಾವು ವಿಮಾನ ಹೆಲಿಕಾಪ್ಟರ್ ಗಳಲ್ಲಿ ಹಾರುವಷ್ಟು ಅನುಕೂಲ ಹೊಂದಿಲ್ಲದ ಕಾರಣ ಎಲ್ಲರೂ ರಸ್ತೆಯ ಮೂಲಕವೇ ಬರಬೇಕೆನ್ನುವುದು ಸತ್ಯವಷ್ಟೆ. ಹಾಗಾಗಿ ನಮ್ಮೂರಿನ ರಸ್ತೆಯಲ್ಲಿ ಸಂಚರಿಸುವಾಗ
ಪಾಲಿಸಲೇಬೇಕಾದ ಕೆಲವು ಕಿವಿಮಾತುಗಳನ್ನು ನಿಮಗೆ ಹೇಳಲು ಇಷ್ಟ ಪಡುತ್ತೇನೆ.
ನಿಮ್ಮ ಸೀಟ್ ಬೆಲ್ಟ್ ಗಳನ್ನು ಅಗತ್ಯವಾಗಿ ಕಟ್ಟಿಕೊಳ್ಳಿ.
ಒಂದೆರಡು ಜೊತೆ ಬಟ್ಟೆಗಳನ್ನು , ತುಂಬಿರುವ ನೀರಿನ ಬಾಟಲ್ ಗಳನ್ನು ಇರಿಸಿಕೊಳ್ಳಿ.
ಎಲ್ಲಾ ವಾಹನದವರು ಹೆಲ್ಮೆಟ್ ಜೊತೆಗಿರಿಸಿಕೊಳ್ಳುವುದು ಉತ್ತಮ.
ಇದಿಷ್ಟು ಪೂರ್ವ ಸಿದ್ಧತೆಗಳಾಗಿದ್ದರೆ, ರಾಷ್ಟ್ರೀಯ ಹೆದ್ದಾರಿ ಬಿಟ್ಟು ಒಳ ತಿರುಗಿ ಕೆಲವು ಹೊಂಡ ಗುಂಡಿಗಳನ್ನು ಲೀಲಾಜಾಲವಾಗಿ ದಾಟಿ ಬನ್ನಿ. ಕೊಂಚ ಮುಂದೆ ಬರುವಾಗ ಒಂದು ಸ್ವಾಗತ ಕಮಾನು ನಿಮ್ಮನ್ನು ಹೊಸ ಲೋಕದೆಡೆಗೆ ಕರೆದೊಯ್ಯುತ್ತದೆ .
ಮುಂದಿನ ಮಾರ್ಗದೆಡೆಗೆ ಕಣ್ಣು ಹಾಯಿಸಿದಾಗಲೇ ಡರ್ ಕೆ ಆಗೆ ಜೀತ್ ಹೆ.. ಎಂಬ ಜಾಹೀರಾತು ನೆನಪಿಗೆ ಬರುತ್ತಿದೆಯೇ ..?
ದೊಡ್ಡ ದೊಡ್ಡ ಗುಂಡಿಗಳ ಮಧ್ಯೆ ಸಣ್ಣ ಪೆನ್ಸಿಲ್ ರೇಖೆಯೆಳೆದಂತೆ ಕಪ್ಪಗಿನ ಬಣ್ಣದ ಎಂದೋ ಒಂದು ಸಲ ಇಲ್ಲಿಗೆ ಟಾರ್ ಹಾಕಿದ್ದರು ಎಂಬ ಗುರುತು ಕಾಣಿಸಿತೇ? ಹಾಗಿದ್ದರೆ ನೀವೀಗ ನಮ್ಮ ಮಾರ್ಗವನ್ನು ಪ್ರವೇಶಿಸಿದ್ದೀರಿ. ಅತಿ ಸಾಹಸದಿಂದ ವಾಹನದ ಒಳಗೇ ಇರಲು ಪ್ರಯತ್ನಿಸಿ .
ನಿಮ್ಮ ವಾಹನದಿಂದ ಒಂದಿಬ್ಬರನ್ನು ಕೆಳಗೆ ಇಳಿಸಿ,ನಡೆದುಕೊಂಡು ಬರಲು ತಿಳಿಸಿ. ನೀವು ವಾಹನದ ಮೂಲಕ ಗಮ್ಯವನ್ನು ತಲುಪುವ ಹೊತ್ತಿನಲ್ಲಿ ಅವರು ನಡೆದೂ ತಲುಪುತ್ತಾರೆ.. !!
ಅಚ್ಚರಿಯಾಯಿತೇ.!! . ನಿಮ್ಮ ಉತ್ತರ ಹೌದೆಂದಾಗಿದ್ದರೆ ನೀವೂ ಈ ರಸ್ತೆಯನ್ನು ಪ್ರೀತಿಸತೊಡಗಿದ್ದೀರಿ ಎಂದರ್ಥ.
ಈಗ ನಮ್ಮೂರಿನ ರಸ್ತೆಯನ್ನು ಪ್ರಖ್ಯಾತ ಪ್ರವಾಸಿ ತಾಣವಾಗಿಸುವತ್ತ ಗಮನ ಹರಿಸೋಣ.
ಶಾಲಾ ಮಕ್ಕಳನ್ನು ಕರೆತಂದು ಇಲ್ಲಿನ ಹೊಂಡಗಳಲ್ಲಿ ಗಿಡ ನೆಡುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಬಹುದು.
ದಕ್ಷಿಣ ಕನ್ನಡದ ಪ್ರಸಿದ್ಧ ಜಾನಪದ ಕ್ರೀಡೆಯಾದ ಕಂಬಳವನ್ನು ಇಲ್ಲಿ ಸುಲಭವಾಗಿ ನಡೆಸಬಹುದು.
ಮಹೀಂದ್ರ ಕಂಪೆನಿಯವರ ಗ್ರೇಟ್ ಎಸ್ಕೇಪ್ ಮಹೀಂದ್ರ ರಾಲಿಯನ್ನು ನಡೆಸಲು ಅವರನ್ನು ಇಲ್ಲಿಗೆ
ಆಹ್ವಾನಿಸಬಹುದು. ಅವರಿಲ್ಲಿಂದ ಎಸ್ಕೇಪ್ ಆಗಿ ಹೋದರೆ ಅದೇ ದೊಡ್ಡ ರಾಷ್ಟ್ರೀಯ ಸುದ್ದಿಯಾಗಲೂ ಬಹುದು .ಮಳೆಗಾಲದಲ್ಲಿ ಇದು ಸಹಜ ಇಂಗು ಗುಂಡಿಗಳಾಗಿ ವರ್ತಿಸಿ ಭೂಮಿಯ ನೀರಿನ ಮಟ್ಟ ಏರಿಸುವುದನ್ನು ನೀವು ಕಾಣಬಹುದು
ಆಸಕ್ತ ರೈತರಿಗೆ ಇದರಲ್ಲಿ ಮೀನಿನ ಸಾಕಾಣಿಕೆಯನ್ನು ಕೆರೆ ಕಟ್ಟಿಸುವ ಖರ್ಚಿಲ್ಲದೆ ಮಾಡಬಹುದು.
ಡಾಕ್ಟರ್ ಗಳಿಗೆ ಮತ್ತು ವಾಹನ ರಿಪೇರಿ ಮಾಡುವವರಿಗೆ ಹೆಚ್ಚಿನ ಆಧಾಯ ನೀಡುವ ಕಾರಣ ಅವರ ಮೇಲೆ ಒಂದಿಷ್ಟು ಹೆಚ್ಚಿನ ಟಾಕ್ಸ್ ಹಾಕಿ ಹಣ ವಸೂಲಿ ಮಾಡುವ ಬಗ್ಗೆ ಸರಕಾರ ಚಿಂತನೆಯನ್ನು ನಡೆಸಬಹುದು
ಇಂತಹ ರಸ್ತೆಯ ನಿತ್ಯ ಸಂಚಾರಿಗಳಾದ ನಮ್ಮನ್ನು ಅಂದರೆ, ಇನ್ನು ನೆಟ್ಟಗೆ ನಡೆದಾಡಲು ಸೊಂಟ ಕೈಕಾಲು ಸಹಕರಿಸುತ್ತಿರುವವರನ್ನು ಉತ್ತಮ ಆರೋಗ್ಯ ಹೊಂದಿದ ವ್ಯಕ್ತಿ ಎಂದು ಸನ್ಮಾನ ನೀಡಬಹುದು.
ಇಂತಹ ಅದ್ಭುತಗಳಿಗೆ ಅನುವು ಮಾಡಿಕೊಟ್ಟ ನಮ್ಮೂರ ರಸ್ತೆಗೆ ಈಗ ಎಲ್ಲರೂ ಜೈ
ಅನ್ನೋಣವೇ..!!
Tuesday, October 18, 2011
ಜೀನಿಯಾ..
ಇನ್ನೇನು ಅವಳು ನೀರುಣಿಸಲು ಬರುವ ಹೊತ್ತು.. ಇವತ್ತೇನು ಮಾಡುತ್ತಾಳೆ ಎಂಬ ಕುತೂಹಲ ನನಗೆ..
ಎಲೆಯ ಮರೆಯಿಂದ ಮೆಲ್ಲನೆ ತಲೆಯೆತ್ತಿ ನೋಡಿದೆ. ನನ್ನ ಸುತ್ತೆಲ್ಲ ಸುಂದರ ವರ್ಣದ ಎಸಳುಗಳನ್ನು ಮೈ ತುಂಬಾ ಹೊದ್ದು , ಜಗತ್ತಿನ ಚೆಲುವೆಲ್ಲವನ್ನೂ ತಮ್ಮೊಳಗೆ ತುಂಬಿಟ್ಟುಕೊಂಡ ಹೂಗಳು..
ನಾನಾದರು ಪುಟ್ಟ ಹೂವು. ಪ್ರಕೃತಿ ನನ್ನ ಮೇಲೇಕೆ ಮುನಿದಳೋ.. ಬರೀ ಐದಾರು ಪಕಳೆಗಳನ್ನಷ್ಟೆ ಹೊಂದಿದ್ದ ನನ್ನನ್ನಾರೂ ಕಣ್ಣೆತ್ತಿ ನೋಡುತ್ತಿರಲಿಲ್ಲ.
ಅವಳು ನಸುನಗುತ್ತಲೇ ಬಂದಳು. ಜೊತೆಗೊಂದಿಷ್ಟು ಗೆಳತಿಯರು.. ಅವರ ಕುಲು ಕುಲು ನಗು ಮಾತುಗಳಿದ್ದುದೆಲ್ಲಾ
ಹೂಗಳ ಬಗೆಗೇ .. ಆದರೆ ಅದರಲ್ಲಿ ನಾನಿರಲಿಲ್ಲ. ಇಂದು ಯಾರೊಬ್ಬರಾದರೂ ನನ್ನ ಕಡೆಗೆ ನೋಡಲಿ ಎಂದು ಬಯಸುತ್ತಾ ಗಾಳಿಯ ಬೀಸುವಿಕೆಗೆ ತಲೆ ಕುಲುಕಿಸಿ ನಕ್ಕೆ. ಯಾರ ಗಮನವೂ ನನ್ನ ಕಡೆಗಿಲ್ಲ. ನಾನು ಯಾರಿಗೂ ಬೇಕಾಗಿರಲಿಲ್ಲ. ಮನ ಮುದುಡಿತು.
ಅವಳ ಕೈಯಲ್ಲೇನೋ ಇದೆ. ಅದರಿಂದ ಸುಂದರ ಹೂಗಳನ್ನೆಲ್ಲ ದಂಟು ಸಮೇತ ಕತ್ತರಿಸಿ ಗೆಳತಿಯರ ಕೈಗಿತ್ತಳು. ಗಿಡ ಒಂದಿಷ್ಟು ಕೊಸರಾಡಿ ಮತ್ತೆ ಮೌನವಾಯಿತು. ಕೈಯಲ್ಲಿನ ಹೂಗಳನ್ನು ಧನ್ಯತೆಯ ಭಾವದಲ್ಲಿ ಹೊತ್ತು ಬೀಗುತ್ತಾ ನಡೆದರು.
ನಾನಿದ್ದ ಗಿಡವೀಗ ಬೋಳು ಬೋಳು. ಇಲ್ಲಿಗೆ ಯಾರೂ ಬರುತ್ತಿಲ್ಲ. ನೋಡಲು.. ಹಾಡಿ ಹೊಗಳಲು..
ಇಂದೇಕೆ ಈ ರೀತಿ.. !! ಬೀಸಿ ಬಂದ ತಣ್ಣನೆ ಗಾಳಿ ಸೋಕಿತ್ತಷ್ಟೆ ಮೈಯನ್ನು.. ಶರೀರವೆಲ್ಲ ಹಗುರಾಗಿ ಏನೋ ಕಳಚಿಕೊಂಡಂತೆ..
ಒಂದೊಂದಾಗಿ ಜೀವಕಣಗಳು ಭುವಿಯೆಡೆಗೆ ಧಾವಿಸುತ್ತಿವೆ. ನಾನು ಅವರಿಂದ ಬೇರಾಗುವುದು ಹೇಗೆ ಸಾಧ್ಯ. ಜೊತೆಗೆ ನಡೆದಿದ್ದೆ. ಯಾವುದೇ ಕನವರಿಕೆ ಬೇಸರಿಕೆಗಳಿಲ್ಲದ ತಾಯ ಮಡಿಲು.
ಭುವಿಯ ಪ್ರತಿ ನೇವರಿಕೆಗೂ ನನ್ನೊಡಲಿನಿಂದ ಜಾರಿದ ಬೀಜಗಳು ಮೆಲ್ಲನೆ ಮೊಳಕೆಯೊಡೆಯುತ್ತಿವೆ.
ಇನ್ನೊಂದು ಜೀವನ ಚಕ್ರವಾಗಲು.. ರೂಪಾಂತರ ಹೊಂದಿದ್ದ ನಾನು ಕೊನೆ ಬಾರಿಗೆಂಬಂತೆ ಗಿಡದ ಕಡೆ ನೋಡಿದೆ. ಗಿಡ ಮೌನವಾಗಿ ತೃಪ್ತಿಯಿಂದ ನಕ್ಕಿತು.
ಕರಗುವ ಕ್ಷಣಗಳು..
ಕರಗಿ ಬಿಡಬೇಕೇ ಕತ್ತಲು...
ಹೊಸತೊಂದು ಆಟದ ಆವಿಷ್ಕಾರವಾಗಿತ್ತು
ಮುಗಿದೇ ಬಿಟ್ಟಿತು ಬಾಲ್ಯ
ಪ್ರಿಯನ ಕಣ್ಣಿಗಿನ್ನೂ ಕಣ್ಣು ಕೂಡಿತ್ತಷ್ಟೇ
ಹರೆಯ ಕೈಗೆ ಸಿಗದಂತೆ ಜಾರಿತ್ತು
ತುಟಿಗಿನ್ನೂ ಸೋಕಿತ್ತಷ್ಟೇ ರುಚಿಕರ ತಿನಿಸು
ಖಾಲಿಯಾಗಿತ್ತು ತುಂಬಿದ್ದ ತಟ್ಟೆ
ಶಬ್ಧಗಳಿನ್ನೂ ಹಾಡಾಗಿರಲಿಲ್ಲ
ಉಡುಗಿತ್ತು ಗಂಟಲಿನ ಧ್ವನಿ
ಅಲ್ಲಲ್ಲಿ ಬೆಳ್ಳಿ ಕೂದಲು ಕಾಣಿಸಿತ್ತಷ್ಟೇ
ಹೇಳದೆ ಕೇಳದೆ ಕಾಲ ಮೀರಿತ್ತು
ಪಯಣದ ಸುಖವಿನ್ನೂ ಸುರುವಾಗಿತ್ತಷ್ಟೇ
ಗಮ್ಯ ಕಾಣಿಸಿ ವಾಹನದಿಂದ ಇಳಿಸಿತ್ತು
ಬೇಕೆನಿಸಿದ್ದೆಲ್ಲ ಹೀಗೆ ಬೇಗನೆ ಕಳೆದು ಹೋಗುವುದ್ಯಾಕೋ ..
Subscribe to:
Posts (Atom)