Pages

Total Visitors

Friday, October 28, 2011

ಯಾರಿಗೂ ಹೇಳೋಣು ಬ್ಯಾಡಾ... !!ಅಪುರೂಪಕ್ಕೆ ಬೆಳಗ್ಗಿನ ತಿಂಡಿಗೆ ಒಗ್ಗರಣೆ ಹಾಕಿದ ಅವಲಕ್ಕಿ , ಉಪ್ಪಿಟ್ಟು ಮಾಡಿದ್ದೆ.ನಂಗೆ ಇಷ್ಟ ಅನ್ನುವ ಕಾರಣಕ್ಕೇನೋ ಮಾಡಿದ್ದು ಹೆಚ್ಚಾಗಿ ಸ್ವಲ್ಪ ಹೆಚ್ಚೇ ಉಳಿದಿತ್ತು. ಸಂಜೆಗೂ ಅದೇ ತಿಂಡಿ ಅಂತ ಬೆಳಗ್ಗೇನೇ ಡಿಕ್ಲೇರ್ ಮಾಡಿಯೂ ಬಿಟ್ಟಿದ್ದೆ.ಮಗ ಸಂಜೆ ಸ್ಪೆಷಲ್ ಕ್ಲಾಸ್ ಇದೆ.ತಿಂಡಿ ನಂಗೆ ಇಡೊದೇನೂ ಬೇಡ ಅಂದ. ಇವರು ನಾನು ಸಂಜೆ ಎಲ್ಲಾದ್ರು ಹೋಗೋಣ ಅಂತಿದ್ದೀನಿ, ಅಂತಂದು ನನ್ನ ಸಿಡುಕಿನ ಉತ್ತರವನ್ನು ಕಾಯತೊಡಗಿದರು. ಮೆಚ್ಚಿನ ತಿಂಡಿ ಹೊಟ್ಟೆಯೊಳಗಿದ್ದುದರಿಂದಲೋ ಏನೋ, ನಾನು ಏನೂ ಮಾತಾಡದೆ ಒಳ ನಡೆದೆ.

ಮಧ್ಯಾಹ್ನ ಊಟದ ನಂತರ ನಸು ನಿದ್ರೆ ಅಗತ್ಯವೇ.. ಅನ್ನುವ ಲೇಖನವನ್ನು ಕೈಯಲ್ಲಿ  ಹಿಡಿದು ಅದ್ಯಾವ ಮಾಯೆಯಲ್ಲಿ ನಿದ್ದೆಗೆ ಜಾರಿದ್ದೆನೋ ನನಗೇ ತಿಳಿದಿರಲಿಲ್ಲ. 
ಹತ್ತಿರದಲ್ಲಿದ್ದ ಫೋನ್ ಒಂದಿಡೀ ಸುತ್ತಿನ ರಿಂಗ್ ಆಗಿ ಎರಡನೇ ಬಾರಿ ಹೊಡೆದುಕೊಳ್ಳಲು ಪ್ರಾರಂಭಿಸಿತು. ಬಲವಂತವಾಗಿ ಕಣ್ಣು ತೆರೆದು ಎದ್ದೆ. ನೋಡಿದರೆ ದೂರದ ಊರಲ್ಲಿರುವ ಚಿಕ್ಕಮ್ಮ. 'ಸಂಜೆಗೆ  ನಾವೆಲ್ಲರೂ ನಿಮ್ಮಲ್ಲಿಗೆ ಬರ್ತಾ ಇದ್ದೀವಿ ಜೊತೆಗೆ ಚಿಕ್ಕಪ್ಪನ ಸ್ನೇಹಿತರೂ ಒಬ್ರು ಇದ್ದಾರೆ. ನಮ್ಮೂರು ನೋಡಕ್ಕೆ ಕರ್ಕೊಂಡು ಬಂದಿದ್ದೀವಿ.. ಬೇಗ ಬರ್ತೀವಿ ..ಆಮೇಲೆ ಮಾತಾಡೋಣ ಆಗದೇ ..? ಈಗ ಫೋನ್ ಇಡ್ಲಾ ಅಂದಳು. ನಾನು ಸಂತೋಷದಿಂದ 'ಸರಿ  ಬೇಗ ಬನ್ನಿ ಚಿಕ್ಕಮ್ಮ' ಅಂದೆ. 

ಈಗ ನನ್ನ ಮೊದಲಿನ ಪ್ಲಾನ್ ಗೆ ಕುತ್ತು ಬಂದಿತ್ತು. ತುಂಬಾ ಸಮಯದ ನಂತ್ರ ನಮ್ಮಲ್ಲಿಗೆ ಬರುತ್ತಿರುವ ಅವಳಿಗೆ ನನ್ನ ಅತ್ಯಪರೂಪದ ಬೆಳಗ್ಗಿನ ಉಳಿದ ಉಪ್ಪಿಟ್ಟು , ಅವಲಕ್ಕಿ ಕೊಡೋದು ಹೇಗೆ? ಹಾಗಂತ ಇದನ್ನು ವೇಸ್ಟ್ ಮಾಡಲೂ ಮನಸ್ಸಿಲ್ಲ. ತಲೆಕೆರೆದುಕೊಳ್ಳುತ್ತಲೇ ಅಡುಗೆ ಮನೆಗೆ ಕಾಲಿಟ್ಟೆ. ಸಾಂಬಾರ್ ಗೆ ಕತ್ತರಿಸಿ ಉಳಿದಿದ್ದ ಅರ್ಧ ತುಂಡು ಕ್ಯಾಬೇಜ್, ಮತ್ತೊಂದು ಬೀಟ್ರೂಟ್ ಯಾಕೋ ಕಣ್ಣು ಸೆಳೆದವು. 

ತಲೆಯೊಳಗೆ ಸಾವಿರ ವೋಲ್ಟ್ ನ ಬಲ್ಬ್ ಇದ್ದಕ್ಕಿದ್ದಂತೇ ಉರಿಯತೊಡಗಿತು. ಕೂಡಲೇ ಸ್ಟೋರ್ ರೂಮಿಗೆ ಹೋಗಿ, ಅಲ್ಲಿ ಬೆಚ್ಚಗೆ ಕುಳಿತಿದ್ದ ಅಕ್ಕಿ ಹುಡಿ, ಮೈದಾ, ಸಣ್ಣ ರವೆ ಮೂರನ್ನೂ ಅರ್ಧರ್ದ ಕಪ್ ತೆಗೆದುಕೊಂಡು ಅಗಲ ಬಾಯ ಪಾತ್ರಕ್ಕೆ ಸುರಿದೆ. ಸ್ವಲ್ಪ ಎಣ್ಣೆ ಬಿಸಿ ಮಾಡಿ ಸೇರಿಸಿದೆ. ಅದಕ್ಕೆ ಸಣ್ಣಗೆ ಹೆಚ್ಚಿದ ಕ್ಯಾಬೇಜ್ ,ಈರುಳ್ಳಿ,ಹಸಿಮೆಣಸಿನಕಾ, ತುರಿದ ಬೀಟ್ರೂಟ್, ಉಪ್ಪು, ಸ್ವಲ್ಪ ಮೆಣಸಿನ ಹುಡಿ ಎಲ್ಲವನ್ನೂ ಬೆರೆಸಿದೆ.ಅದಕ್ಕೆ ಉಳಿದಿದ್ದ ಉಪ್ಪಿಟ್ಟು ಅವಲಕ್ಕಿಗಳನ್ನು ಸೇರಿಸಿ, ಸ್ವಲ್ಪ ನೀರು ಚಿಮುಕಿಸಿಕೊಂಡು ರೊಟ್ಟಿ  ಹಿಟ್ಟಿನ ಹದಕ್ಕೆ  ಚೆನ್ನಾಗಿ ಕಲಸಿ ಒಂದೈದು ನಿಮಿಷ ಹುದುಗಲು ಬಿಟ್ಟೆ.   ಆ ಹೊತ್ತಿನಲ್ಲಿ ಕಾಯಿ ತುರಿದು ಚಟ್ನಿ ತಯಾರಿಸಿದೆ. ನಿಂಬೆಗಾತ್ರದ ಉಂಡೆಗಳನ್ನು ಮಾಡಿ ಬಾಳೆ ಎಲೆಯಲ್ಲಿ ವಡೆಯ ಆಕಾರದಲ್ಲಿ ತಟ್ಟಿ ಬಿಸಿ ಎಣ್ಣೆಯಲ್ಲಿ ಕರಿದು ತೆಗೆದೆ. 
ಕೊನೆಯ ಒಂದೆರಡು ವಡೆಗಳಿನ್ನೂ ಎಣ್ಣೆಯ ಬಾಣಲೆಗೆ ಬೀಳಲು  ಬಾಕಿ ಇರುವಾಗಲೇ ಚಿಕ್ಕಮ್ಮನ ಮನೆಯವರೆಲ್ಲರೂ ಪ್ರತ್ಯಕ್ಷರಾದರು. ಬಿಸಿ ಬಿಸಿ ವಡೆ, ಚಟ್ನಿ ಮತ್ತು ಟೊಮೇಟೊ ಕೆಚಪ್ ಜೊತೆಗೆ ಎಲ್ಲರೂ ಇಷ್ಟ ಪಟ್ಟು ತಿಂದರು. ಚಿಕ್ಕಮ್ಮನಂತೂ, ಮಗಂಗೇ , ಗಂಡಂಗೆ ಸ್ವಲ್ಪ ತೆಗ್ದಿಟ್ಟಿರೇ.. ಇಲ್ಲಾಂದ್ರೆ ಎಲ್ಲಾ ನಾವೇ ಖಾಲಿ ಮಾಡ್ತೀವಿ ಅಂದ್ಲು. ನನ್ನ ಹೊಸ ರುಚಿ ಎಲ್ಲರಿಗೂ ಇಷ್ಟ ಆಯ್ತಲ್ಲಾ ಅನ್ನುವ ಸಂತಸದಲ್ಲಿ ಖಾಲಿಯಾದ ತಟ್ಟೆಯನ್ನು ಒಳ ಕೊಂಡೊಯ್ಯುತ್ತಿದ್ದೆ. ಅಷ್ಟರಲ್ಲಿ  ಚಿಕ್ಕಪ್ಪನ ಸ್ನೇಹಿತರು ಮೆಲ್ಲನೆ ಅಡುಗೆ ಮನೆಯ ಹತ್ತಿರ ಬಂದು ಈ ತಿಂಡಿಯ ರೆಸಿಪಿ ಬರೆದು ಕೊಡಲು ಸಾಧ್ಯವೇ ಅಂತ ಕೇಳಿದ್ರು.. 

ಅಯ್ಯೋ ..!! ನಾನೇನ್ ಮಾಡ್ಲಿ.. ? ಹೇಳ್ಕೊಡ್ಲಾ.. ಬೇಡ್ವಾ????  

-- 
Anitha Naresh Manchi

6 comments:

 1. ಗ್ಯಾರಂಟಿ ಹೇಳ್ಕೊಡಿ.. ಆದ್ರೆ ಮೊದ್ಲನೇ ಪ್ಯಾರಾ ಬಿಟ್ಟು ಉಳಿದಿದ್ದು :-)

  ReplyDelete
 2. It is unfortunate that many a talent of women relating to this theme go unsung..

  ReplyDelete
 3. nimma hosaruchi nangantu ishta aaytu.....

  ReplyDelete
 4. yajamaanrige kharchu tuMa kaDime alvaa ? Anithakka :) aDuge ruchi sakattaagide :-)

  ReplyDelete
 5. ಸರಿ ನಾವೂನು ದೂರವಾನಿಸಿಯೇ ಬರುತ್ತೇವೆ.. ಗರಿ ಗರಿ ವಡೆ ತಯಾರಗಿರಬಹುದು ಎ..

  ReplyDelete