Pages

Total Visitors

Tuesday, October 18, 2011

ಜೀನಿಯಾ..



ಇನ್ನೇನು ಅವಳು ನೀರುಣಿಸಲು ಬರುವ ಹೊತ್ತು.. ಇವತ್ತೇನು ಮಾಡುತ್ತಾಳೆ ಎಂಬ ಕುತೂಹಲ ನನಗೆ..

ಎಲೆಯ ಮರೆಯಿಂದ ಮೆಲ್ಲನೆ ತಲೆಯೆತ್ತಿ ನೋಡಿದೆ. ನನ್ನ ಸುತ್ತೆಲ್ಲ ಸುಂದರ ವರ್ಣದ ಎಸಳುಗಳನ್ನು ಮೈ ತುಂಬಾ ಹೊದ್ದು , ಜಗತ್ತಿನ ಚೆಲುವೆಲ್ಲವನ್ನೂ ತಮ್ಮೊಳಗೆ ತುಂಬಿಟ್ಟುಕೊಂಡ ಹೂಗಳು..

ನಾನಾದರು ಪುಟ್ಟ ಹೂವು. ಪ್ರಕೃತಿ ನನ್ನ ಮೇಲೇಕೆ ಮುನಿದಳೋ.. ಬರೀ ಐದಾರು ಪಕಳೆಗಳನ್ನಷ್ಟೆ ಹೊಂದಿದ್ದ ನನ್ನನ್ನಾರೂ ಕಣ್ಣೆತ್ತಿ ನೋಡುತ್ತಿರಲಿಲ್ಲ.


ಅವಳು ನಸುನಗುತ್ತಲೇ ಬಂದಳು. ಜೊತೆಗೊಂದಿಷ್ಟು ಗೆಳತಿಯರು.. ಅವರ ಕುಲು ಕುಲು ನಗು ಮಾತುಗಳಿದ್ದುದೆಲ್ಲಾ
ಹೂಗಳ ಬಗೆಗೇ .. ಆದರೆ ಅದರಲ್ಲಿ ನಾನಿರಲಿಲ್ಲ. ಇಂದು ಯಾರೊಬ್ಬರಾದರೂ ನನ್ನ ಕಡೆಗೆ ನೋಡಲಿ ಎಂದು ಬಯಸುತ್ತಾ ಗಾಳಿಯ ಬೀಸುವಿಕೆಗೆ ತಲೆ ಕುಲುಕಿಸಿ ನಕ್ಕೆ. ಯಾರ ಗಮನವೂ ನನ್ನ ಕಡೆಗಿಲ್ಲ. ನಾನು ಯಾರಿಗೂ ಬೇಕಾಗಿರಲಿಲ್ಲ. ಮನ ಮುದುಡಿತು.



ಅವಳ ಕೈಯಲ್ಲೇನೋ ಇದೆ. ಅದರಿಂದ ಸುಂದರ ಹೂಗಳನ್ನೆಲ್ಲ ದಂಟು ಸಮೇತ ಕತ್ತರಿಸಿ ಗೆಳತಿಯರ ಕೈಗಿತ್ತಳು. ಗಿಡ ಒಂದಿಷ್ಟು ಕೊಸರಾಡಿ ಮತ್ತೆ ಮೌನವಾಯಿತು. ಕೈಯಲ್ಲಿನ ಹೂಗಳನ್ನು  ಧನ್ಯತೆಯ ಭಾವದಲ್ಲಿ ಹೊತ್ತು ಬೀಗುತ್ತಾ ನಡೆದರು.

ನಾನಿದ್ದ ಗಿಡವೀಗ ಬೋಳು ಬೋಳು. ಇಲ್ಲಿಗೆ ಯಾರೂ ಬರುತ್ತಿಲ್ಲ. ನೋಡಲು.. ಹಾಡಿ ಹೊಗಳಲು..

ಇಂದೇಕೆ ಈ ರೀತಿ.. !! ಬೀಸಿ ಬಂದ ತಣ್ಣನೆ ಗಾಳಿ ಸೋಕಿತ್ತಷ್ಟೆ ಮೈಯನ್ನು.. ಶರೀರವೆಲ್ಲ ಹಗುರಾಗಿ ಏನೋ ಕಳಚಿಕೊಂಡಂತೆ..
ಒಂದೊಂದಾಗಿ ಜೀವಕಣಗಳು ಭುವಿಯೆಡೆಗೆ ಧಾವಿಸುತ್ತಿವೆ. ನಾನು ಅವರಿಂದ ಬೇರಾಗುವುದು  ಹೇಗೆ ಸಾಧ್ಯ. ಜೊತೆಗೆ ನಡೆದಿದ್ದೆ. ಯಾವುದೇ ಕನವರಿಕೆ ಬೇಸರಿಕೆಗಳಿಲ್ಲದ ತಾಯ ಮಡಿಲು.

ಭುವಿಯ ಪ್ರತಿ ನೇವರಿಕೆಗೂ ನನ್ನೊಡಲಿನಿಂದ ಜಾರಿದ ಬೀಜಗಳು ಮೆಲ್ಲನೆ ಮೊಳಕೆಯೊಡೆಯುತ್ತಿವೆ.



ಇನ್ನೊಂದು ಜೀವನ ಚಕ್ರವಾಗಲು.. ರೂಪಾಂತರ ಹೊಂದಿದ್ದ ನಾನು ಕೊನೆ ಬಾರಿಗೆಂಬಂತೆ ಗಿಡದ ಕಡೆ ನೋಡಿದೆ. ಗಿಡ ಮೌನವಾಗಿ ತೃಪ್ತಿಯಿಂದ ನಕ್ಕಿತು.


4 comments:

  1. ಅತೀ ಸುಂದರ ಕಲ್ಪನೆ... ಇನ್ನೂ ಸ್ವಲ್ಪ ಹೆಚ್ಚು ವಿವರವಾಗಿ ಬರೆದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು......ಇದು ನನ್ನ ಅನಿಸಿಕೆ.... :)

    ReplyDelete
  2. ಜೀನಿಯಾವು ಸುಂದರ ಹೂ..ಬಣ್ಣದಿಂದಲೇ ಗಮನ ಸೆಳೆಯುತ್ತದೆ..

    ನಿಮ್ಮ ಕಲ್ಪನೆ ಮಸ್ತಾಗಿದೆ...

    ನಮ್ಮಲ್ಲಿ ಈ ಹೂವಿಗೆ ಅಷ್ಟೆನೂ ಪ್ರಾಮುಖ್ಯತೆ ಇಲ್ಲ.. ಬರೀಯ ಅಲಂಕಾರಿಕವಾಗಿ ಬಳಸುತ್ತಾರೆ...ದೇವರ ಮುಡಿಗೆ ಅದು ಸಲ್ಲವುದಿಲ್ಲ...

    ಇಷ್ಟೆಲ್ಲ ಜನಗಳ ಅಸಡ್ಡೆಯ ಮದ್ಯೆಯು ಜೀನಿಯ ಮಾತ್ರ ಎಂದಿನಂತೆ ಸುಂದರ ಪೋಷಾಕು ಧರಿಸಿ ಮದುವಣಗಿತ್ತಿಯಾಗಿ ನಳನಳಿಸುತ್ತದೆ....

    ReplyDelete
  3. ಚೆನ್ನಾಗಿದ್ದು ಅನಿತಕ್ಕ.. ಜಿನಿಯಾದ ಭಾವ ಪದಗಳಲ್ಲಿ, ಚೆನ್ನಾಗಿದ್ದು..

    ReplyDelete
  4. ಎನಗೂ ಜೀನಿಯಾ ಹೂಗಿನ ಭಾವ ವಿಸ್ತಾರ ಕುಶಿ ಆಯಿದು :):)

    ReplyDelete