Pages

Total Visitors

Friday, August 12, 2011

ಬಣ್ಣ..


ಬಣ್ಣ !

ಅಮ್ಮಾ.. ಇವತ್ತು ಶನಿವಾರ ಅಲ್ವಾ..
ಹೌದು ಮುದ್ದು..
ಇವತ್ತು ಯೂನಿಫಾರ್ಮ್ ಇಲ್ಲ ಬಣ್ಣದ ಅಂಗಿ .. ನೆನಪಿದೆ ತಾನೆ ನಿಂಗೆ..
ಹುಂ ಪುಟ್ಟಾ ನೆನಪಿದೆ.. ಮೆಲ್ಲನೆ ಮಗಳ ಕೆನ್ನೆ ಸವರಿದಳು.
ನಂಗ್ಯಾವ ಬಣ್ಣದ ಅಂಗಿ ಅಮ್ಮಾ ಇವತ್ತು..?
ನನ್ನ ಜಾಣಮರಿಗೆ ಎಲ್ಲಾ ಬಣ್ಣದ ಅಂಗಿನೂ ಚೆನ್ನಾಗಿ ಕಾಣುತ್ತೆ, ಎಲ್ಲಿ.. ಸರಿ ನಿಲ್ಲು.. ಅಂಗಿ ಹಾಕಿ ಬಿಡ್ತೀನಿ..
ಬಣ್ಣದ ಅಂಗೀನೆ ಚೆನ್ನಾಗಿ ಕಾಣುವಾಗ ಯೂನಿಫಾರ್ಮ್ ಯಾಕಮ್ಮಾ ಹಾಕೋದು ..
ಎಲ್ಲಾ ಮಕ್ಕಳು ಒಂದೇ ತರದ ಬಟ್ಟೆ ಹಾಕಿದ್ರೆ ಯಾರಿಗೂ ಮೇಲು ಕೀಳು ಇರಲ್ಲ.. ನೋಡೋದಿಕ್ಕು ಚೆನ್ನಾಗಿ ಕಾಣುತ್ತೆ..
 ನೋಡೋದಾ..ಅಮ್ಮಾ.. ಆದ್ರೆ..
.. ನಡಿ ನಡಿ ಶಾಲೆಗೆ ತಡ ಆಯಿತು . ನಿನ್ನನ್ನ ಅಲ್ಲಿ ಬಿಟ್ಟು ಬಂದು ನಂಗೂ ಕೆಲ್ಸಕ್ಕೆ ಹೋಗ್ಬೇಕಲ್ವಾ.. ನನ್ನ ಜಾಣ ಮರಿ ನೀನು..
ಅಮ್ಮನ ಕೈ ಹಿಡಿದು ಹೊರಟಳು. ಗೇಟ್ ನ ಬದಿಯಲ್ಲಿ ನಿಂತಿದ್ದ ಶಾಲೆಯ  ಸಹಾಯಕಿಯ  ಕೈಗೆ ಮಗಳ ಕೈಯ್ಯನ್ನು ವರ್ಗಾಯಿಸಿ, ತಲೆ ಸವರಿ, ಬರ್ಲಾ..  ಸಂಜೆ ಬರ್ತೀನಿ ...
ಹುಂ.. ಸರಿ ಅಮ್ಮಾ..
ಮಗು ಒಳಗೆ ಹೋಗುವುದನ್ನೇ ನೋಡುತ್ತಾ ನಿಂತ ಅಮ್ಮನ ಕಣ್ಣಲ್ಲಿ ರಮಣ ಮಹರ್ಷಿ ಅಂಧರ ಶಾಲೆ ಎಂಬ ಬೋರ್ಡ್ ಪ್ರತಿಫಲಿಸುತ್ತಿತ್ತು.


6 comments:

  1. ನಮ್ಮ ಕ್ಷುಲ್ಲಕ ಸಮಸ್ಯೆಗಳನ್ನು ನಾವು ಅತಿ ದೊಡ್ಡದೆಂದುಕೊಂಡು ಕೊರಗುತ್ತಿರುತ್ತೇವೆ. ಆದರೆ ನಮ್ಮ ಸುತ್ತ ಮುತ್ತಲು ಗಂಭೀರ ಸಮಸ್ಯೆಗಳೊಂದಿಗೆ ಬಾಳುವವರನ್ನು ನಾವು ಗಮನಿಸಿದರೂ ಗಮನಿಸದವರಂತೆ ಸುಮ್ಮನೆ ಕುಳಿತು ಬಿದುತ್ತೇವೆ!
    ಓದಿದವರೆಲ್ಲರೂ ಅಂಧರ ಬದುಕಿನ ಬಗ್ಗೆ ಒಂದು ಕ್ಷಣ ಚಿಂತಿಸುವಂತೆ ಮಾಡುವ ನಿನ್ನ ಸೊಗಸಾದ ಬರಹ ನಿನ್ನ ಸಾಮಾಜಿಕ ಕಳಕಳಿ ಮತ್ತು ಉತ್ತಮ ಅಂತಃಕರಣವನ್ನು ಬಿಂಬಿಸುತ್ತದೆ! Thank you, Anitha.

    ReplyDelete
  2. ತುಂಬಾ ಸುಂದರ ಬರಹ ಅನಿತಾ ..... ಮನಸ್ಸು ಆರ್ದ್ರಗೊಂಡಿದೆ.....

    ReplyDelete
  3. ಚೊಕ್ಕದಾಗಿ ಚಿಕ್ಕದಾಗಿ ಮನ ಸೆಳೆಯುವಂತಿದೆ. ಕುರುಡರ ಕತ್ತಲ ಬದುಕು ಯೋಚಿಸಿ ಮನ ನೊಂದಿತು.
    ವಿಶ್ವಾಸ್ ಕುಲಕರ್ಣಿ.

    ReplyDelete