Pages

Total Visitors

Thursday, August 18, 2011

ಹಿಂಬಾಲಕ ...ಛೇ...!! ಎಂತಾ ಕೆಲಸ ಆಗೋಯ್ತು ......ಸ್ವಲ್ಪ ಬೇಗನೆ ಹೆಜ್ಜೆ ಹಾಕಿದ್ರೆ ಈ ಬಸ್ಸಲ್ಲೇ ಮನೆಗೆ ಹೋಗ್ಬಹುದಿತ್ತು.....ಸ್ವಲ್ಪ ದೂರದಲ್ಲೇ ನನಗೆ ಬೆನ್ನು ಹಾಕಿ ದೂರ ಸಾಗುತ್ತಿದ್ದ ಬಸ್ಸನ್ನು ಕಂಡು ನನ್ನನ್ನು ನಾನೇ ಹಳಿದುಕೊಂಡೆ. ಇನ್ನು ಒಂದು ಗಂಟೆ ಕಾಯಬೇಕು ಇನ್ನೊಂದು ಬಸ್ಸಿಗೆ...    ಮನೆಯಲ್ಲಿಇವಳ್ಯಾಕೆ ಇನ್ನೂ ತಲುಪಿಲ್ಲವೆಂದುಕೊಂಡರೆ!  ಸರಿ, ವಿಷಯ ತಿಳಿಸಿಬಿಡುವ ಎಂದು ಮೊಬೈಲ್ ತೆಗೆದರೆ ಅದರಲ್ಲಿನ ಬ್ಯಾಟರಿ ಸತ್ತು ಅದು ತಣ್ಣಗೆ ಮಲಗಿತ್ತು. ಇರಲಿ ಇದೇನೂ ಕೊನೆಯ ಬಸ್ಸಲ್ಲವಲ್ಲ. ಗಾಬರಿಯೇನಿಲ್ಲವೆಂದುಕೊಂಡು  ಸುಮ್ಮನುಳಿದೆ.

ಅಂತೂ ಇಂತೂ ಸುಮ್ಮನೆ ಒಂದು ಗಂಟೆ ಕಾಲು ನೋಯಿಸಿಕೊಂಡು ಕಾದ ನಂತರವೇ ಇನ್ನೊಂದು ಬಸ್ಸು ಬಂದಿದ್ದು. ಬರುವಾಗಲೇ ದಿನ ತುಂಬಿದ ಬಸುರಿಯಂತಿದ್ದ ಬಸ್ಸಿನೊಳಗೆ ನಾನೂ ನುಗ್ಗಿದೆ. ನನ್ನನ್ನು ನೋಡಿದೊಡನೆ ಪರಿಚಯದವರೊಬ್ಬರು ಎದ್ದು ಕಿಟಕಿಯ ಪಕ್ಕದ ಸೀಟ್ ನೀಡ ಬೇಕೆ ! ಅವರಿಗೆ  ತುಂಬಾ ಧನ್ಯವಾದಗಳನ್ನು ಹೇಳಿ, ಸುಲಭದಲ್ಲಿ ಸೀಟ್ ಗಿಟ್ಟಿಸಿದ ನನ್ನ ಮೇಲೆ ಅಸೂಯೆಗೊಂಡ ಬೇರೆ ಕಣ್ಣುಗಳ ಕಡೆಗೆ ನೋಡದೆ ಕುಳಿತೆ.

ಅಷ್ಟರಲ್ಲಾಗಲೇ ಕತ್ತಲಾಗಿತ್ತು. ಪೇಟೆಯ ವಿದ್ಯುದ್ದೀಪಗಳ  ಭರಾಟೆ ಮುಗಿದ ನಂತರ ಸುಮ್ಮನೆ ಕತ್ತಲಿಗೆ ಕಣ್ಣನ್ನು ಹೊಂದಿಸಿ ಹೊರಗೆ ದಿಟ್ಟಿಸಿದೆ. ಒಂದೇ ಕ್ಷಣ ಅಷ್ಟೇ... ಯಾರೋ ನನ್ನೆಡೆಗೆ ನೋಡುತ್ತಾ ಹಿಂಬಾಲಿಸಿ ಬರುತ್ತಿರುವಂತೆ ಅನ್ನಿಸಿತು. ನಿಜ.. ನಮ್ಮ ಬಸ್ಸಿನೊಂದಿಗೆ ಅವನ ಸವಾರಿಯು ಸಮಾನಾಂತರದಲ್ಲೇ ಇತ್ತು. ಅವನ ಕಡೆಗೆ ದೃಷ್ಟಿ ಹಾಯಿಸಿದಾಗೆಲ್ಲ ಮುಗುಳ್ನಗುವಿನಲ್ಲೇ ಮೋಡಿ ಮಾಡುತ್ತಿದ್ದ! ಇದೊಳ್ಳೆ ಗ್ರಹಚಾರವಾಯಿತಲ್ಲ ಎಂದುಕೊಂಡು ಅವನ ಕಡೆಗೆ ನೋಡದಂತೆ ಕಣ್ಣನ್ನು ಬಲವಂತವಾಗಿಯೇ ಬೇರೆಡೆಗೆ ತಿರುಗಿಸಿದೆ. ಆದರೂ ಅವನು ನನ್ನನ್ನೇ ನೋಡುವುದು, ಅವನ ಕಣ್ಣೋಟ ನನ್ನಿಂದ ಬೇರಾಗದಿರುವುದು ನನ್ನರಿವಿಗೆ ಬರುತ್ತಿತ್ತು.

ಬಸ್ಸಿಳಿಯುವ ಸಮಯ ಸಮೀಪಿಸುತ್ತಿದ್ದಂತೆ ಹೆದರಿಕೆ ಆವರಿಸ ತೊಡಗಿತು. ನಾನು ಇಳಿಯುವುದನ್ನು ಅವನು ನೋಡಿದರೆ.. ಅಲ್ಲಿಯೂ ಹಿಂಬಾಲಿಸಿದರೆ... ಯಾಕೋ ಅಷ್ಟೇನೂ ತೊಂದರೆ ಕೊಡಲಾರನೆನಿಸಿತು. ಹೇಗೂ ಮನೆಗೆ ಹೆಚ್ಚು ದೂರವಿಲ್ಲ. ಬೇಗನೆ ನಡೆದು ಸೇರಿಕೊಳ್ಳಬಹುದು ಎಂದು ಮನದಲ್ಲೇ ಅಂದು ಕೊಂಡೆ. ಬಸ್ಸಿಂದ ಇಳಿದು ಸುತ್ತಲೂ ಕಳ್ಳ ನೋಟ ಬೀರಿದೆ. ದಟ್ಟನೆಯ ಮರಗಳು ಕತ್ತಲನ್ನು ಇನ್ನಷ್ಟು ಗಾಢವಾಗಿಸಿದ್ದವು. ಅವನೆಲ್ಲೂ ಕಾಣಿಸಲಿಲ್ಲ!


ಅಬ್ಬ.. ಎಂದುಕೊಂಡು ಕತ್ತಲಲ್ಲಿ ದಾರಿ ಹುಡುಕಲೆಂದು ಟಾರ್ಚನ್ನು ತಡಕಿದರೆ..ಅದೆಲ್ಲಿದೆ?!  ಬೆಳಗ್ಗಿನ ಗಡಿಬಿಡಿಯಲ್ಲಿ ಮೇಜಿನ ಮೇಲೆಯೆ ಬಿಟ್ಟು ಬಂದದ್ದು ನೆನಪಾಯಿತು. ಛೇ..ಇದು ಬೇರೆ ಇವತ್ತೇ ಆಗಬೇಕಿತ್ತಾ...ಎಂತಾ ಹಾಳು ಮರೆವು ಎಂದುಕೊಂಡು ಕತ್ತಲಲ್ಲೇ ಎರಡು ಹೆಜ್ಜೆ ಮುಂದಿಟ್ಟೆ.

ಅಷ್ಟೇ.... ಎಲ್ಲಿದ್ದನೋ ಅವನು! ನಾ ನಡೆವ ಹಾದಿಗೆ ಬೆಳಕ ಬೀರಿ ನನ್ನತ್ತ ನೋಡಿ ನಕ್ಕ! ನಾನು ತಲೆ ತಗ್ಗಿಸಿ ಅವನತ್ತ ನೋಡದೆ ಬೆಳಕಿನ ದಾರಿಯಲ್ಲೇ ನಡೆಯುತ್ತಾ ಮನೆಯ ಅಂಗಳವನ್ನು ತಲುಪಿದೆ.

ನನ್ನ ದಾರಿಯನ್ನೇ ಕಾಯುತ್ತಿದ್ದ ಅತ್ತೆ, ಯಾಕೆ ಟಾರ್ಚ್ ತಗೊಂಡು ಹೋಗಿಲ್ವಾ, ಕತ್ತಲಲ್ಲಿ ಹೇಗೆ ಬಂದೆ ಎಂದು ಆತಂಕಗೊಂಡರೆ, ನನ್ನ ಮುಖ ಕಂಡೊಡನೆ ನಿರಾಳವಾದ ನನ್ನವರು, ತಿಂಗಳು ಬೆಳಕಿದೆಯಲ್ಲಮ್ಮ, ದಾರಿಗೆ ಸಾಲದೆ? ಎಂದು ತಾಯಿಗೆ ಸಮಾಧಾನ ಮಾಡಿದರು.

ನಾನು ಜೊತೆಗೆ ಬಂದಿದ್ದ ಅವನ ಕಡೆಗೆ ಕಣ್ಣೆತ್ತಿ ನೋಡಿದೆ. ಅವನಾಗ ಮೆಲ್ಲನೆ ಮೋಡದ ಮರೆಗೆ ಸರಿದು ತುಸುವೇ ಕಣ್ಣು ಮಿಟುಕಿಸಿ ನಕ್ಕ...!!

8 comments:

 1. Nice short story!Derived maximum pleasure reading it.I have been tracking your work here from quite some time now. I appreciate your writing skills.
  Thank you very much.

  ReplyDelete
 2. Anitha manchiyavare,
  Idondu bhinna reethiya kate...chennagi odisikondu hoyitu. nimma kavanagalante, kathegaloo vismayakariyagiruttave. kannadalli nanage ruchisida barahagararalli neevoo obbaru.

  vandanegalu.
  Sidde gowda, Mandya.

  ReplyDelete
 3. Namasthe Madam,
  I read your story HIMBALAKA.
  You have nicely maintained the suspense till the end.
  Have a Nice day madam.

  ReplyDelete
 4. ತುಂಬಾ ಚೆನ್ನಾಗಿದೆ.....

  ReplyDelete
 5. Excellent Anitha! Liked the photo also!
  Whatever you write has a certain hue and tint which is difficult to find elsewhere!You have developed your own style and I like it very much. Keep writing. :):):):):)

  ReplyDelete
 6. ಕುತೂಹಲದಿಂದ ಸಾಗುವ ಕಥೆ
  ಓದಿ ಮುಗಿಸಿದಾಗ ಬಾನಲ್ಲಿ ಚಂದ್ರಮ ನಸುನಕ್ಕ.

  ReplyDelete