ಫೋನ್ ಒಂದೇ ಸಮನೆ ಹೊಡೆದುಕೊಳ್ಳುತ್ತಿತ್ತು. ಮಗಳನ್ನು ಕರೆದು ಅದನ್ನೆತ್ತಿಕೊಳ್ಳುವಂತೆ ನಾನು ಬಾತ್ ರೂಮ್‌ನಿಂದಲೇ ಕಿರುಚಿದೆ. ಯಾರ ಸದ್ದೂ ಇಲ್ಲ. ನಾನಲ್ಲಿಂದ ಹೊರಬರುವಾಗ ಒಂದಲ್ಲ, ಎರಡಲ್ಲ, ನಾಲ್ಕು ಬಾರಿ ರಿಂಗ್ ಆಗಿ ಈಗ ಮೌನವಾಗಿತ್ತು.
ಹೊರಗೆ ಬಂದು ನೋಡಿದರೆ ಅಲ್ಲೇ ಹತ್ತಿರದಲ್ಲೆ ಟಿ ವಿ ಯ ಕಾರ್ಟೂನ್ ಲೋಕದಲ್ಲಿ ಮುಳುಗಿ ಕೂತಿದ್ದ ಮಗಳು ..
ಸಿಟ್ಟು ಸರ್ರನೆ ಏರಿತು. " ದೀಪಾ, ಅಷ್ಟು ಹೊತ್ತಿನಿಂದ ಬಡ್ಕೊಳ್ತಲೇ ಇತ್ತು ಫೋನ್ ,ಇಲ್ಲೇ ಇದ್ರೂ ಯಾಕೆ ರಿಸೀವ್ ಮಾಡಿಲ್ಲ. ಒಮ್ಮೆ ಎತ್ತಿ ಯಾರೂ ಅಂತ ಕೇಳಕ್ಕೇನೇ ನಿಂಗೆ " ಎಂದೆ.
"ಹೋಗ್ ಮಮ್ಮಾ, ಇಷ್ಟೊತ್ನಲ್ಲಿ ಯಾರೋ ನಿನ್ ಫ್ರೆಂಡ್ಸ್ ಫೋನ್ಮಾಡಿರ್ತಾರೆ. ಎತ್ತಿದ್ರೆ ನನ್ ಜೊತೆ ಒಂದು ಮಾತು ಆಡದೆ ಅಮ್ಮಾ ಇಲ್ವಾ ಒಮ್ಮೆ ಕೊಡು ಅಂತಾರೆ . ಇನ್ನು ನೀನು ಬಾತ್ ರೂಮ್ ಗೆ ಹೋಗಿದ್ದಷ್ಟೆ. ಸುಮ್ನೆ ಫೋನೆತ್ತಿ ಅವ್ರ ದುಡ್ಡು ಯಾಕೆ ಹಾಳು ಮಾಡ್ಲಿ ಅಂತ ಎತ್ಲೇ ಇಲ್ಲ" ಅಂತ ತಿರುಗಿ ಬಾಣವೆಸೆದಳು.
ನಾನಿನ್ನೂ ಏನೋ ಹೇಳುವಳಿದ್ದೆ. ಅಷ್ಟರಲ್ಲಿ ಮತ್ತೆ ರಿಂಗಾಯಿತು. ಆತ್ಮೀಯ ಗೆಳತಿ ವನಿತಾ ಅವಳ ಮನೆಯಲ್ಲಿ ನಾಳೆಯೇ ನಡೆಯುವ ಪೂಜಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿ, ಎಲ್ಲರನ್ನೂ ಕರೆತರುವಂತೆ ಬಾರಿ ಬಾರಿಗೂ ಒತ್ತಾಸಿದಳು. ಸರೀ ಕಣೇ ಅಂತ ಫೋನಿರಿಸಿ ಒಮ್ಮೆ ಗೆಳತಿಯ ಭೇಟಿಯಾಗುವ ಅವಕಾಶ ಸಿಕ್ಕಿದ ಸಡಗರದಿಂದ ಮಗಳೆಡೆಗೆ ತಿರುಗಿ ವಿಷಯ ತಿಳಿಸಿ ಅವಳನ್ನೂ ಕರೆದುಕೊಂಡುಹೋಗುವ ಬಗ್ಗೆ ಹೇಳಿದರೆ " ಹೋಗ್ ಮಮ್ಮಾ ನಾನು ಬರಲ್ಲ, ಅಲ್ಲಿ ನಂಗ್ಯಾರು ಪರಿಚಯದೋರೇ ಇಲ್ಲ. ಎಲ್ಲ ಅಂಕಲ್, ಆಂಟೀಸ್ ಗಳೇ ಇರ್ತೀರ".ಎಂದು ಒಂದೇ ವಾಕ್ಯದಲ್ಲಿತಳ್ಳಿ ಹಾಕಿದಳು.
ನಾನೂ ಪಟ್ಟು ಬಿಡದೆ " ಯಾಕಿಲ್ಲ? ವನಿತಾ ಮಗಳೆ ಇರ್ತಾಳೆ, ನಿನ್ ಏಜೇ ಅವ್ಳಿಗೂ , ಹೇಗೂ ಸ್ಕೂಲ್‌ಗೆ ರಜಾ ಈಗ. ನಾಳೆಯೊಂದೇ ದಿನ ಫ್ರೀ ಅಷ್ಟೆ. ನಾಡಿದ್ದಿಂದ ನಿನ್ನ ಸಂಗೀತ, ಚೆಸ್, ಸಂಜೆ ಶೆಟಲ್ ಕ್ಲಾಸ್ ಎಲ್ಲಾನೂ ಸುರು ಆಗುತ್ತೆ" ಅಂದೆ.
ಯಾಕೋ ಕಹಿ ಗುಳಿಗೆ ಕುಡಿದವರಂತೆ ಮುಖ ಮಾಡಿ, " ಮತ್ತೆ ನಾಡಿದ್ದು ಮಾಮ ಬರ್ತಾರೆ ಅಂದೆ. ಯಾಕೆ.. ಈ ಸಲಾನೂ ನಾನು ಅಜ್ಜಿ ಮನೆಗೆ ಉಳಿಯಕ್ಕೆ ಹೋಗೋ ಹಾಗಿಲ್ವಾ.? ನಂಗೆ ಈ ಸಲದ ರಜದಲ್ಲಿ ಈಜು ಹೊಡಿಯೋಕೆ ಕಲಿಸ್ತೀನಿ ಅಂದಿದ್ದಾರೆ ಮಾಮ.. "ಅಂದಳು.
"ಹಾಗೆಲ್ಲಾ ಅಜ್ಜಿ ಮನೆ ಅಂತ ಊರಲ್ಲಿ ಕೂತ್ಕೊಂಡ್ರೆ ನೀನು ಕಲಿಯೋದು ಯಾವಾಗ? ಈ ಸಲ ಆದ್ರು ಸಂಗೀತ ಸೀನಿಯರ್ ಎಕ್ಸಾಂಗೆ ಕಟ್ಟ್ಲಿಲ್ಲಾಂದ್ರೆ ಎಷ್ಟು ನಾಚಿಕೆ. ನಮ್ಗೆಲ್ಲ ನಿಮ್ ತರ ಅವಕಾಶಗಳಿದ್ರೆ ಏನೋ ಆಗ್ತಿದ್ವಿ.."
ಕಣ್ಣೀರು ಹೊರ ಚೆಲ್ಲುವಂತಿದ್ದ ಅವಳ ಕಣ್ಣುಗಳೆಡೆಗೆ ನೋಡಿ ಮೌನವಾದೆ.ಒಮ್ಮೆ ಮನಕ್ಕೆ ಪಿಚ್ಚೆನಿಸಿದರೂ ತೋರಗೊಡದೆ ಒಳನಡೆದೆ.
ರಾತ್ರಿಡೀ ನಮ್ಮ ರಜಾ ಕಾಲವೇ ಕಣ್ಣಿಗೆ ಕಟ್ಟುತ್ತಿತ್ತು.ಯಾವುದೇ ಚಿಂತೆಯಿಲ್ಲದೆ ಅಲೆದಾಡುತ್ತಿದ್ದ ದಿನಗಳವು. ರಜ ಬಂತೆಂದರೆ ನಮ್ಮದೇ ಲೋಕ.. ನಮ್ಮ ಮಕ್ಕಳಿಗೆ ಆ ರೀತಿಯ ಬಾಲ್ಯವೇ ಇಲ್ಲವೆ? ತುಂಬಾ ಹೊತ್ತು ಅದನ್ನೆ ಆಲೋಚಿಸುತ್ತಾ ಮಲಗಿದವಳಿಗೆ ಬೆಳಗಾಗಿದ್ದು ಸ್ವಲ್ಪ ತಡವಾಗಿಯೇ..
ವನಿತಾಳ ಮನೆಗೆ ಮಗಳನ್ನೂ ಒತ್ತಾಯದಿಂದಲೇ ಹೊರಡಿಸಿದೆ.
ನಮ್ಮನ್ನು ಕಂಡೊಡನೆ ವನಿತಾ ಆತ್ಮೀಯತೆಯಿಂದ ಬರಮಾಡಿಕೊಂಡು, ಉಪಚರಿಸತೊಡಗಿದಳು. "ದೀಪಾ ಅಲ್ವಾ, ಎಷ್ಟು ದೊಡ್ಡವಳಾಗಿದ್ದಾಳೆ.." ಅಂತ ಮಗಳ ತಲೆ ಸವರಿದಳು. ಇನ್ನೇನೋ ಮಾತಿಗೆ ತೊಡಗಬೇಕೆನ್ನುವಷ್ಟರಲ್ಲಿ ಬೇರೆ ಯಾರೋ ಆಹ್ವಾನಿತರು ಬಂದಿದ್ದರಿಂದ " ಈಗ ಬಂದೆ" ಎಂದು ಅವರ ಕಡೆ ಹೆಜ್ಜೆ ಹಾಕಿದಳು.
ಮಗಳು ಅಲ್ಲಿ ನಡೆಯುವ ಪೂಜಾ ಕಾರ್ಯಕ್ರಮದ ಬಗ್ಗೆ ಕುತೂಹಲಗೊಂಡು ಅತ್ತ ಕಣ್ಣು ಹಾಯಿಸಿದರೆ, ನಾನೂ ಪರಿಚಿತ ಮುಖಗಳೆಲ್ಲಾದರೂ ಕಾಣುತ್ತವೇನೋ ಎಂದು ಕುತ್ತಿಗೆ ತಿರುಗಿಸತೊಡಗಿದೆ. ಮಗಳ ಸಮ ವಯಸ್ಸಿನವರ್ಯಾರಾದರು ಇದ್ದರೆ, ಹತ್ತಿರ ಕರೆದು ಪರಿಚಯ ಮಾಡಿಸಿ ಬಿಟ್ಟರೆ ಅವಳಿಗೂ ಬೋರ್ ಆಗಲಾರದು ಎಂಬ ಆಲೋಚನೆ ಜೊತೆಗೇ ಇತ್ತು. ಕೆಲವು ಪುಟ್ಟ ಕಂದಮ್ಮಗಳು ಅಮ್ಮನಿಗಂಟಿ ಕುಳಿತದ್ದು ಬಿಟ್ಟರೆ ಮಕ್ಕಳ ಸಂಖ್ಯೆಯೇ ಕಡಿಮೆ ಇತ್ತು.
ಹಿಂದಿನಿಂದ ಯಾರೋ ನನ್ನ ಹೆಸರೆತ್ತಿ ಕರೆದಂತಾಗಿ ತಿರುಗಿ ನೋಡಿದರೆ ಅನೇಕ ಗೆಳತಿಯರ ಗುಂಪೇ ಅಲ್ಲಿ ನೆರೆದಿತ್ತು. ಅವರೊಡನೆ ಮಾತನಾಡುತ್ತಾ ಕುಳಿತೆ. ಅಷ್ಟರಲ್ಲಿ ವನಿತಾ ಕೂಡಾ ಹತ್ತಿರ ಬಂದಳು. ಕೂಡಲೇ ಅವಳ ಮಗಳ ನೆನಪಾಗಿ "ಎಲ್ಲೇ ರಾಗಿಣಿ ಕಾಣ್ತಾ ಇಲ್ಲ" ಅಂದೆ.
" ಇಲ್ಲಾ ಕಣೆ, ಅವ್ಳಿಗಿವತ್ತು ಕಂಪ್ಯೂಟರ್ ಕ್ಲಾಸ್ ಇದೆ. ಅವ್ಳೇನೋ ಹೋಗಲ್ಲ ಅಂತ ಹಠ ಹಿಡಿದಿದ್ದಳು. ನಾನೇ ಬಯ್ದು ಕಳ್ಸಿದೆ.ಫೀಸ್ ತುಂಬಾ ಹೆಚ್ಚು ಕಣೆ. ಒಂದು ದಿನ ಮಿಸ್ ಆಯ್ತೂಂದ್ರೆ ಎಷ್ಟೊಂದು ಲಾಸ್ ಅಂತೀಯಾ..? ಮತ್ತೆ ಅವಳು ಇಲ್ಲಿ ಉಳಿದು ಮಾಡೋದೇನಿದೆ ಹೇಳು. ಯಾರನ್ನೂ ಪರಿಚಯ ಇಲ್ಲ. ಅವಳಾಗಿ ಮಾತಾಡೋದು ಇಲ್ಲ", ಅಂತೆಲ್ಲ ಹೇಳತೊಡಗಿದಳು.
ಈಗಿನ ಮಕ್ಕಳು ಹಾಗೆ.. ಯಾರ ಜೊತೆಗೂ ಬೆರೆಯಲ್ಲ, ಅವರಾಯ್ತು ಅವರ ಸ್ನೇಹಿತರಾಯ್ತು. ಉಳಿದವರೆಲ್ಲ ಗೊತ್ತೇ ಇಲ್ಲ, ಅಂತೆಲ್ಲ ಗೆಳತಿಯರ ಟೀಕೆ ಟಿಪ್ಪಣಿಗಳು ಸುರು ಆಯಿತು.
ಯಾಕೋ ಇವರ ನಾಲಿಗೆ ತುದಿಯ ಮಾತುಗಳು ಬೇಸರವೆನಿಸಿ ಮಗಳು ಕುಳಿತ ಕಡೆ ತಪ್ಪಿತಸ್ಥ ನೋಟ ಬೀರಿದೆ. ಅವಳಾಗಲೇ ಅಲ್ಲಿದ್ದ ಪುಟ್ಟ ಮಕ್ಕಳ ಸೈನ್ಯ ಕಟ್ಟಿ ಅವರ ಜೊತೆ ನಲಿಯುತ್ತಿದ್ದಳು.
ಮನದೊಳಗೆ ತುಮುಲ ಪ್ರಾರಂಭವಾಯಿತು. ಈಗಿನ ಮಕ್ಕಳ ಬಗ್ಗೆ ದೂರುವ, ನಾವೆಷ್ಟು ಸರಿ? ಎಂದು ನನ್ನೊಳಗೆ ಪ್ರಶ್ನಿಸಿಕೊಂಡೆ. ನಮ್ಮ ಸ್ಟೇಟಸ್ ಏರಿಸಿಕೊಳ್ಳಲು ಊರಲ್ಲಿದ್ದ ಎಲ್ಲ ಕೋರ್ಸುಗಳಿಗೆ ಸೇರಿಸಿ, ಅವರಿಗೆ ಒಂದಿಷ್ಟೂ ಉಸಿರಾಡಲು ಸಮಯ ನೀಡದ ನಮ್ಮ ನಡವಳಿಕೆಯೇ ಅಲ್ಲವೇ ಇದಕ್ಕೆಲ್ಲ ಮೂಲ ಕಾರಣ ಎನ್ನಿಸಿತು. ಮಕ್ಕಳಿಗೆ ನಮ್ಮವರೊಂದಿಗೆ ಬೆರೆಯಲು ಆಸೆಯಿದ್ದರೂ, ನಮ್ಮಿಂದಾಗಿಯೇ ಅವಕಾಶಗಳನ್ನು ಕಳೆದುಕೊಳ್ಳುವ ಅವರ ಬಗ್ಗೆ ಚಿಂತಿಸತೊಡಗಿತು ಮನ.
ಊಟ ಆಗುತ್ತಿದ್ದಂತೆಯೇ ಹೊರಟೆ. "ಇರೇ ಸ್ವಲ್ಪ ಹೊತ್ತು, ನಿನ್ಜೊತೆ ಏನೂ ಮಾತಾಡಕ್ಕಾಗಿಲ್ಲ. ಅಷ್ಟು ಅವಸರ ಏನಿದೆ ಮನೆಗೆ ಹೋಗೋಕ್ಕೆ.." ಎಂಬ ಗೆಳತಿಯ ಮಾತಿಗೆ " ನಾಳೆ ನನ್ನ ತಮ್ಮ ಬರ್ತಿದ್ದಾನೆ. ಅವ್ನ ಜೊತೆ ದೀಪಾ ಅಜ್ಜನ ಮನೆಗೆ ಹೋಗ್ತಿದ್ದಾಳೆ. ಪ್ಯಾಕಿಂಗ್ ಇನ್ನೂ ಅಗಿಲ್ಲ ಕಣೆ" ಎಂದೆ. ನನ್ನ ಉತ್ತರ ಕೇಳಿ ದೀಪಾ ಸಂತಸದಿಂದ ಅಲ್ಲಿ ಸುತ್ತು ಜನಗಳಿರುವುದನ್ನು ಮರೆತು, " ಥಾಂಕ್ಸ್ ಮಮ್ಮಾ.. ಎಂದು ಮುತ್ತಿಟ್ಟಳು.