Pages

Total Visitors

Saturday, October 15, 2011

ಆಖಿರ್ ಟೂಟ್ ಜಾತಾ ಹೆ..ಕಂಪ್ಯೂಟರ್ ರೂಮಲ್ಲಿ ಸೇರಿದ ದೂಳನ್ನೆಲ್ಲ ಹೊಡೆದು ಕೆಳಗುರುಳಿಸಿ, ಕತ್ತಿ  ಹಿಡಿದು  ಹೋರಾಡುವ ಯುದ್ಧ  ವೀರನ ಫೋಸ್ ಕೊಡುತ್ತಾ, ಕೈಯಲ್ಲಿನ ಕಸಪೊರಕೆಯಲ್ಲಿ ನಾನೆಷ್ಟು ಹೊರಹಾಕಲೆತ್ನಿಸಿದರೂ ಮತ್ತೆ ಮತ್ತೆ ಒಳಗೆ ನುಗ್ಗಿ ಅಡಗುವ ಜೇಡಗಳನ್ನು ನಿರ್ನಾಮ ಮಾಡುವ ಭರದಲ್ಲಿದ್ದೆ. ಆಗ ಕೇಳಿತ್ತು ಫೋನಿನ ಶಂಖನಾದ... ಹಾಂ! ಈಗ ಒಂದು ಸುತ್ತಿನ ಯುದ್ಧ ಮುಗಿದಂತೆ ಎಂದುಕೊಂಡು ಕೈಯಲ್ಲಿದ್ದ ಶಸ್ತ್ರವನ್ನು ಮಂಚದ ಕೆಳಗೆ ತಳ್ಳಿ ಹೊರಗೆ ನಡೆದೆ.

ಆತ್ತ ಕಡೆಯಿಂದ ಕೇಳಿ ಬಂತು ಅಶರೀರವಾಣಿ. ನಂಗೆ ಒಂದು ಸಣ್ಣ ಆಕ್ಸಿಡೆಂಟ್ ಆಗಿದೆ..

ತಡಬಡಿಸಿ ಕೇಳಿದೆ.. ಸಣ್ಣ ಅಂದ್ರೆ..?

ಹೆದರುವಂತದ್ದು ಏನಿಲ್ಲ.. ಮೂಳೆ ಮುರಿದಿರಬೇಕು ಅನ್ಸುತ್ತೆ. ಮತ್ತೆಲ್ಲ ಸ್ವಲ್ಪ ತರಚಲು ಗಾಯ. ಕೂಡಲೇ ಹೊರಟು ಬಾ ಎಂದು  ಅವರಿರುವ ಆಸ್ಪತ್ರೆಯ ಹೆಸರು ಹೇಳಿದರು.ಇವರ     ' ಸಣ್ಣ' ಗಾಯದ ವಿಸ್ತಾರದ ಬಗ್ಗೆ ಯೋಚಿಸುತ್ತಿದ್ದಂತೆ ಗಾಭರಿಯಾಗತೊಡಗಿತು..

ಬೇಗನೆ ಆಸ್ಪತ್ರೆ ವಾಸಕ್ಕೆ ಬೇಕಾಗುವ ತಯಾರಿಗಳನ್ನು ಮಾಡಿಕೊಂಡು ಚಪ್ಪಲಿ ಸಿಕ್ಕಿಸಿ ಕಾರೇರಿದೆ. ಅಲ್ಲಿಗೆ ತಲುಪುವಾಗ ಸೆಲೈನ್ ಬಾಟಲಿಯಿಂದ  ನಿಧಾನಕ್ಕೆ ಒಳ ಸೇರುತ್ತಿರುವ ಗ್ಲೂಕೋಸ್ ಹನಿಗಳತ್ತ  ದೃಷ್ಟಿ ನೆಟ್ಟು ಅಲ್ಲೊಂದು ಇಲ್ಲೊಂದು ಬ್ಯಾಂಡೇಜ್ ಬಟ್ಟೆಗಳನ್ನು ಮೈಯಲ್ಲೇರಿಸಿಕೊಂಡು ಮಲಗಿರುವ ಇವರು ಕಣ್ಣಿಗೆ ಬಿದ್ದರು.

ಹತ್ತಿರದ ಟಿ ವಿ ಯಲ್ಲಿ 'ಶೀಶಾ ಹೋ ಯಾ ದಿಲ್ ಹೋ ಆಖಿರ್ ಟೂಟ್ ಜಾತಾ ಹೆ..' ಅಂತ ಹಾಡು ಬರ್ತಾ ಇತ್ತು. ನನ್ನನ್ನು ಕಂಡವರೆ ಆರಾಮದಲ್ಲಿ ನಗುತ್ತಾ ಈಗ ಎಕ್ಸರೆ ತೆಗೆದ್ರು. ತೋಳಿನ ಕೆಳಗೆ ಮೂಳೆ ಮುರಿದಿದೆ. ಆಪರೇಷನ್ ಮಾಡಿ ಜೋಡಿಸಬೇಕಷ್ಟೆ ಅಂದರು .. ಬ್ಯಾಡೇಜ್ ಗಳ ಕಡೆಗೆ ನೋಡಿ ಮತ್ತೇನಾದ್ರು ಗಾಯ ಆಗಿದ್ಯಾ ಅಂದ್ರೆ.. ಅದೆಲ್ಲ ಜುಜುಬಿ ಹೆಚ್ಚೇನಿಲ್ಲ  ಅಂದರು.

ಅಷ್ಟರಲ್ಲಿ ಕೈಯಲ್ಲಿ ಸಿರಂಜ್  ಹಿಡಿದು ಬ್ಲಡ್ ಟೆಸ್ಟ್ ಗೆ ಸ್ಯಾಂಪಲ್ ತೆಗೆಯಲು ಬಂದ ನರ್ಸನ್ನು ಕಂಡು ಮಸ್ಕಿಟೋ ಬಂತು ಅಂತ ಪಿಸುಗುಟ್ಟಿದರು. ಇವರ ತಲೆಗೆ ಮೊಟಕುವಷ್ಟು ಕೋಪ ಬಂದರೂ ಅಲ್ಲಿರುವ ಗಾಯಗಳನ್ನು ಕಂಡು ಸುಮ್ಮನುಳಿದೆ.

ಆಸ್ಪತ್ರೆಯ ನಾಲ್ಕನೆಯ  ಫ್ಲೋರ್ ನಲ್ಲಿ  ರೂಮ್ ಸಿಕ್ಕಿ ತ್ರಿಶಂಕುವಾಸಿಗಳಾದೆವು. ಮೇಲೆ ಕೆಳಗೆ ಓಡಾಡಲು ಲಿಫ್ಟ್ ಏನೋ ಇತ್ತು. ಆದರೆ ಲಿಫ್ಟ್ ನ ಬದಿಯಲ್ಲೆ ಬರೆದ ವಾಕ್ಯ ಕಣ್ಣು ಚುಚ್ಚುತ್ತಿತ್ತು. 'ಲಿಫ್ಟ್ ಅನ್ನು ಹಿತ ಮಿತವಾಗಿ ಬಳಸಿ. ಕಾಲ್ನಡಿಗೆಯಲ್ಲಿ ಹಂತಗಳನ್ನು ಕ್ರಮಿಸುವುದು ಆರೊಗ್ಯಕ್ಕೆ  ಸಹಕಾರಿ '. ಹೌದಲ್ಲ ಬಯಸದೆ ಬಂದ ಆಸ್ಪತ್ರೆ ವಾಸದಿಂದಾಗಿ ನಿತ್ಯದ ವ್ಯಾಯಾಮ, ವಾಕಿಂಗ್ ಗಳಿಗೆ ಅವಕಾಶವಿರಲಿಲ್ಲ. ಇದನ್ನಾದರು ಅನುಸರಿಸಿ ಕೊರತೆ ನೀಗಿಸಿಕೊಳ್ಳಬಹುದಲ್ಲ ಅನ್ನಿಸಿತು. ಕೂಡಲೇ ಪಾಲಿಸಲು ಪ್ರಾರಂಭಿಸಿದೆ.

ಆಗಷ್ಟೆ ನಿತ್ಯದ ನಡೆದಾಟ ಮುಗಿಸಿ ಏದುಸಿರು ಬಿಡುತ್ತಾ ರೂಮಿನೊಳಗೆ ನುಗ್ಗಿದ್ದೆ.ನನ್ನನ್ನು ಶ್ರೀಮತಿ  ವಿಶ್ವಸುಂದರಿಯನ್ನಾಗಿ ಮಾಡಲು ಪಣತೊಟ್ಟವರಂತೆ ನರ್ಸ್ ಒಬ್ಬರು ಕೈಗೆ ಇನ್ನೊಂದು ಪ್ರಿಸ್ಕ್ರಿಪ್ಷನ್ ತುರುಕಿ ಫಾರ್ಮಸಿಯೆಡೆಗೆ ಬೆರಳು ಬೊಟ್ಟು ಮಾಡಿದರು. ಅಬೌಟ್ ಟರ್ನ್ ಅಂತ ಪುನಃ ತಿರುಗಿತು ನನ್ನ ಸವಾರಿ.

ಔಷದ ತೆಗೆದುಕೊಂಡು ಮರಳಿ ಬರುವಾಗ , ಅಲ್ಲಿಯವರೆಗೆ ಆಸ್ಪತ್ರೆಯಲ್ಲಿ ನನ್ನ ಹೆಜ್ಜೆಗೆ ಹೆಜ್ಜೆ ಜೋಡಿಸುತ್ತಿದ್ದ ಚಪ್ಪಲಿಗಳಲ್ಲಿ ಒಂದು ಯಾಕೋ ಮುನಿಸಿಕೊಂಡು ನಿನ್ನೊಡನಿನ್ನು ಬರಲಾರೆ ಅಂತ ಪಕ್ಕಕ್ಕೆ ವಾಲಿತು. ಪಕ್ಕದ ಗೋಡೆ  ಹಿಡಿದುಕೊಂಡು ಸಾವರಿಸಿ ನಿಂತು ವಿಶ್ವಾಸಘಾತಕ ಚಪ್ಪಲಿಯನ್ನೆತ್ತಿ ನೋಡಿದರೆ ಉಂಗುಷ್ಟ ಕಿತ್ತು ಬಂದಿತ್ತು. ಏನು ಮಾಡಲೂ ತೋಚದೇ ಇಲ್ಲಿಯವರೆಗೆ ನನ್ನನ್ನು ಹೊತ್ತೊಯ್ಯುತ್ತಿದ್ದ ಚಪ್ಪಲಿಗಳನ್ನು ನಾನೇ ಹೊತ್ತು ತಂದು ರೂಮಿನೊಳಗಿರಿಸಿದೆ.

ಈಗ ಇವರ ಮುರಿದ ಮೂಳೆಗಿಂತ ನನ್ನ ತುಂಡಾದ ಚಪ್ಪಲಿಯೇ ದೊಡ್ದ ಸಮಸ್ಯೆಯಾಗಿ ಕಾಡತೊಡಗಿತು. ಮೂಳೆಯನ್ನು ಜೋಡಿಸಲು ಹತ್ತಾರು ಸ್ಪೆಷಲಿಸ್ಟ್ ಗಳನ್ನು ಹೊಂದಿದ ಇಲ್ಲಿ ನನ್ನ ಚಪ್ಪಲಿಯ ಚಿಕಿತ್ಸೆ ಸಾಧ್ಯವಿರಲಿಲ್ಲ. ಅದಿಲ್ಲದೆ ನಡೆಯುವುದು ನನ್ನಿಂದಲೂ ಆಗುತ್ತಿರಲಿಲ್ಲ. ಇವರ ಬಳಿ ಹೇಳಿದರೆ...

"ಇವಳ ನವಿರಾದ ಪಾದಗಳಿಗೆ
ಬೇಕೊಂದು ಜೊತೆ ಚಪ್ಪಲಿ,
ಕಾಸೆಷ್ಟಾದರೂ ಚಿಂತಿಲ್ಲ
ಒಮ್ಮೆ ಕಿರಿ ಕಿರಿ ತಪ್ಪಲಿ ..."

...ಅಂತ ಕವನ ರಚಿಸ ಬೇಕೆ ! ಇವರ ಕಾವ್ಯ ಪ್ರಜ್ಞೆಯನ್ನು   ಪ್ರಶಂಸಿಸುವ ಮೂಡ್ ಇರಲಿಲ್ಲ. ಏನ್ರೀ ಮಾಡೋದು  ಅಂತ ದುಂಬಾಲು ಬಿದ್ದೆ. ಕವನಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ಬಾರದ ಕಾರಣ ಮುನಿಸಿಕೊಂಡು, ಅಲ್ಲಿ ಆಪರೇಷನ್ ಥಿಯೇಟರ್ ಗೆ  ಹೋಗಿ ಸೂಜಿ ದಾರ ಕೇಳು ಅಂತ ಒದರಿ ಮಗ್ಗುಲು ಬದಲಾಯಿಸಿದರು.

ಈಗ ನನ್ನ ಸಮಸ್ಯೆ ಗಂಭೀರವಾಗತೊಡಗಿತು. ನನ್ನ ಎರಡು ಕಾಲನ್ನು ಒಟ್ಟಿಗೆ ಒಂದೆ ಚಪ್ಪಲಿಯೊಳಕ್ಕೆ ತೂರುವಷ್ಟು ದೊಡ್ಡದಿರುವ ಇವರ ಚಪ್ಪಲಿ ನನಗೆ ರೂಮ್ ನಿಂದ ಹೊರಹೋಗಲು ಉಪಯೋಗವಾಗುತ್ತಿರಲಿಲ್ಲ. '
ಚಪ್ಪಲಿ ಇಲ್ಲದೆ ಹೊರ ಹೋಗಲು ಸಾಧ್ಯವಿಲ್ಲ , ಹೊರ ಹೋಗದೆ ಚಪ್ಪಲಿ ಸಿಗಲ್ಲ ' ಅಂತ ಒಂದು ಹೊಸ ಗಾದೆಯನ್ನೇ  ಸೃಷ್ಟಿ ಮಾಡಿಯೂ  ಆಯ್ತು.

 ಏನೇ  ಆದರೂ  ಇವರ 'ಸಣ್ಣ' ಅಪಘಾತದ ಸುದ್ಧಿ ಹೆಚ್ಚಿನವರಿಗೆ ತಿಳಿಸದ ಕಾರಣ ಬಂದು ಹೋಗುವವರ ಸಂಖ್ಯೆಯೂ ಕಡಿಮೆ ಇತ್ತು. ಯಾರಾದರೊಬ್ಬರು ಬರಲಿ ಎಂದು ನಾನೇ ಹಾತೊರೆದು ಅವರಿಗೆ ಸುದ್ಧಿ ಹೇಳಲಾ, ಇವರಿಗೆ ಫೋನ್ ಮಾಡಲಾ ಅಂತೆಲ್ಲ ಇವರನ್ನು ಕಾಡತೊಡಗಿದೆ.

ಅದೇನು ಅದೃಷ್ಟವೋ .. ನಮ್ಮ ಆತ್ಮೀಯರೊಬ್ಬರು ಯಾರ ಮುಖೇನವೋ ಇವರ ಆಕ್ಸಿಡೆಂಟ್ ವಿಷಯ ತಿಳಿದು ಬಂದೇ ಬಿಡಬೇಕೇ..? ಅವರು ಮೂಳೆಮುರಿತದ  ವಿವರಗಳನ್ನು ಕೇಳುವ ಆತುರ ತೋರಿದರೆ ನಾನು ನನ್ನ ಚಪ್ಪಲಿಯ ಕಥೆ ಹೇಳತೊಡಗಿದೆ.. !  ಪುಣ್ಯಕ್ಕೆ  ನನ್ನ ಕಷ್ಟ ಅರ್ಥ ಮಾಡಿಕೊಂಡು ನನಗಾಗಿ ಅವರೇ ಅಂಗಡಿಗೆ ಹೋಗಿ, ಅಲ್ಲಿಂದಲು ಫೋನ್ ಮಾಡಿ ಬಣ್ಣ, ಗುಣ, ವಿಷೇಶಣಗಳ ಬಗ್ಗೆ ಮಾಹಿತಿ   ನೀಡಿ ನನಗೆ ಬೇಕಾದಂತಿರುವುದನ್ನೆ ಆಯ್ಕೆ ಮಾಡಿ ಒಂದು ಜೊತೆ ಪಾದುಕೆಗಳನ್ನು ನನಗೆ ಪ್ರಧಾನ ಮಾಡಿದರು.ಕೇವಲ ನೆಲದಿಂದ ಅರ್ಧ ಅಡಿಯಷ್ಟು ನನ್ನ ಎತ್ತರವನ್ನು ಏರಿಸುತ್ತಿದ್ದ ಅದನ್ನು  ಧರಿಸಿ ನಾನು ಅತ್ತಿಂದಿತ್ತ, ಇತ್ತಿಂದತ್ತ ನಡೆಯುವುದನ್ನು ನೋಡಿದೊಡನೆ ಇವರು, ಬೋನ್ ಸ್ಪೆಷಲಿಸ್ಟ್ ರ ಬಳಿ ಒಂದು ಅಪಾಯಿಂಟ್ ಮೆಂಟ್    ತೆಗೊಂಡು  ಪಕ್ಕದ ರೂಮಿಗೆ ಈಗಲೇ ಬುಕ್ಕಿಂಗ್ ಮಾಡಿಬಿಡೋಣವೇ ಎನ್ನುತ್ತಾ ಆಪರೇಷನ್  ಆದ ಕೈಯನ್ನು ಅಭ್ಯಾಸ ಬಲದಿಂದ  ತಲೆಯ ಮೇಲಿಡಲು ಹೋಗಿ ಸಾಧ್ಯವಾಗದೇ ಹಾಯ್ ಎಂದು ಕಿರುಚಿದರು...


8 comments:

 1. ಅನಿತಾ.... ಹ ಹ್ಹ ಹ್ಹಾ..... ಅವರ ಚಿಕ್ಕ ಅಪಘಾತದಿಂದ ಆರಂಭವಾಗುವ ಘಟನೆ... ಅವರ ಉಪಚಾರಕ್ಕಾಗಿ ಓಡಾಡುವ ಭರದಲ್ಲಿ ಕಿತ್ತು ಹೋಗುವ ಚಪ್ಪಲಿಯ ಉಂಗುಷ್ಟ... ಮಾತನಾಡಿಸಲು ಬಂದುಹೋಗುವವರ ಕೃಪೆಯಿಂದ ಮತ್ತೆ ದೊರಕುವ ಅಂಗುಲ ಎತ್ತರದ ಹೊಸ ಚಪ್ಪಲಿ... ಹಿಮ್ಮಡಿ ಚಪ್ಪಲಿ ಧರಿಸುವ ಅಭ್ಯಾಸವಿಲ್ಲದೇ ಕಾಲು ...ಉಳುಕೀತು ಅನ್ನುವ ನಿಮ್ಮವರ ಕಾಳಜಿ.... ಮತ್ತೆ ಆಸ್ಪತ್ರೆ ಸೇರಿದರೂ ಸೈ ಪಕ್ಕದಲ್ಲಿಯೇ ಇರಲಿ ಎನ್ನುವ ಅವರ ಆತ್ಮೀಯತೆಯ ಚಟಾಕಿ.... ವಾ-ವ್ಹಾ.... :) ಲಘು ಪ್ರಬಂಧ ಅತ್ತಂತ ನವಿರಾಗಿ ಬಂದಿದೆ... ಅಭಿನಂದನೆಗಳು... :)

  ReplyDelete
 2. anitakka , idu aaspatre puraaNavo.. Illa paadaraksheya puraaNavo.. :-) endinate chennagide:)

  ReplyDelete
 3. ಲೇಖನದ ಶೀರ್ಷಿಕೆಯೇ ಸಕತ್ತಾಗಿದೆ. ಕಥೆಯನ್ನು ರೋಚಕವಾಗಿ ತೆಗೆದುಕೊಂಡು ಹೋಗುವ ಕಲೆ ನಿಮಗೆ ಸಿದ್ಧಿಸಿದೆ. ಸೂಪರ್!

  ReplyDelete
 4. ಅನಿತಾ, ಆಸ್ಪತ್ರೆಯ ವಾತಾವರಣವನ್ನೂ ಹಾಸ್ಯಮಯಗೊಳಿಸುವ ಶಕ್ತಿ ನಿಮಗೆ ಅಂದರೆ ದಂಪತಿಗಳಿಗಿಬ್ಬರಿಗೂ ಉಂಟು. ನಿಮ್ಮ ಚಪ್ಪಲಿ ಪುರಾಣ ಚೆನ್ನಾಗಿದೆ.

  ReplyDelete
 5. ಹಾ ಹಾ....ತುಂಬಾ ತಮಾಷೆಯಿದೆ ಬರಹದಲ್ಲಿ. ಅಗಾಗ ಬರೀತಾ ಇರು ಪ್ಲೀಸ್! :):)

  ReplyDelete
 6. tumbaa channaagide....aspatre haagu chappali puraanavannu haasyamayavaagi namma munde ittiddiri. dhanyavaadagalu......:)

  ReplyDelete
 7. thumba channagide anitha mam :)

  ReplyDelete