Pages

Total Visitors

Friday, May 4, 2012

ಜನನಿ ಜನ್ಮಭೂಮಿ ..

ಕಡಲ ತಡಿಯ ಸುಂದರ ಊರು. ಅಂಗಳದ ಬದಿಯಲ್ಲೆಲ್ಲಾ ತುಂಬಿ ನಿಂತ ಬಗೆ ಬಗೆಯ ಹೂವು ಹಣ್ಣಿನ ಗಿಡಗಳು.. ಮೂಲೆಯಲ್ಲಿ ಕೈಗೆಟಕುವಂತೆ  ಸಿಹಿ  ಎಳೆನೀರು ಹೊತ್ತಿದ್ದ  ಕುಬ್ಜ ಜಾತಿಯ ತೆಂಗಿನ ಮರಗಳು..ಪಕ್ಕದಲ್ಲೇ ಬಿಸಿಲ ಕಿರಣಗಳನ್ನು ತನ್ನೊಳಗೆ ತುಂಬಿಟ್ಟು ಪಳ ಪಳನೆ ಮಿಂಚುತ್ತಾ ತುಂಬಿ ಹರಿವ  ನದಿ..  ಸ್ವರ್ಗದ ತುಣುಕು ಅಲ್ಲೇ ಬಿದ್ದಿದೆಯೇನೋ ಎಂಬಂತಿದ್ದ ಶುಭ್ರ ಪರಿಸರ..  ಗಿಡಗಳಿಗೆ ನೀರುಣಿಸುತ್ತಿದ್ದ ಶಂಕರ ಹತ್ತಿರದಲ್ಲಿ ಕೇಳಿದ ವಾಹನದ ಸದ್ದಿಗೆ ಬೆಚ್ಚಿ ಆ ಕಡೆಗೆ ತಿರುಗಿದ.ಹತ್ತಿರದಲ್ಲೇ ಉಯ್ಯಾಲೆ  ಜೀಕುತ್ತಿದ್ದ ಅವನ ಪುಟ್ಟ ಮಗಳು ನಾಚಿಗೆಯ ನಗು ಹೊದೆದು ಬಂದವರ ಕಡೆಗೆ ನೋಡಿದಳು.

ಭರ್ರನೆ ರಭಸದಿಂದ ಬಂದ ಕಾರಿನೊಳಗಿಂದ ಇಳಿದವರು ರವಿ ,ನಿರ್ಮಲ ಮತ್ತು ಶಂತನು. ಶಂಕರನೆಡೆಗೆ ಕಿರುನೆಗೆ ಬೀರಿ  ಮಾತಿಗೆ ಕಾಯದೆ ನೇರ ಮನೆಯೆಡೆಗೆ ಧಾವಿಸಿದರು. ಕೊಂಚ ಕೊಸರಾಡಿದ ಬೀಗವನ್ನು ತೆಗೆದು ಬಾಗಿಲು ದೂಡಿ ಒಳ ಸರಿದರು. ಅಲ್ಲಿಯವರೆಗೆ ಮುಚ್ಚಿದಂತಿದ್ದ ಮನೆಯೊಳಕ್ಕೆ ಹೊಸಗಾಳಿ ಸುಳಿದು ನನ್ನದೇ ಇದು ಎಂಬಂತೆ ಎಲ್ಲಾ ಕಡೆ ನುಗ್ಗಿತು. 

ನಿರ್ಮಲ ಮುಖಕ್ಕೆ ನೀರು ಹನಿಸಿಕೊಂಡವಳೇ, ಅಡುಗೆ ಕೋಣೆಯ ಕಿಟಕಿ ತೆರೆದು, ಒಳಬೀಳುತ್ತಿದ್ದ ಕಿರು ಬಿಸಿಲ ಧಾರೆಯನ್ನು ನೋಡಿದಳು. ಯಾರಿಗೆಲ್ಲಾ ಬ್ಲ್ಯಾಕ್ ಕಾಫೀ ಬೇಕು..?? ಉತ್ತರಕ್ಕಾಗಿ ಕಾಯದೆ ಆಫ್ ಮಾಡಿಟ್ಟಿದ್ದ ಸಿಲಿಂಡರಿನ ನಾಬ್ ತಿರುಗಿಸಿ ಸ್ಟೌವ್ ಉರಿಸಿ ನೀರು ಕಾಯಲಿಟ್ಟಳು. ಏನಿದೆಯೋ ಏನಿಲ್ಲವೋ ಅಂದುಕೊಳ್ಳುತ್ತಾ ನಿಗದಿತ ಸ್ಥಳಕ್ಕೆ ಕೈ ಹಾಕಿದರೆ ಒಂದೇ ರೀತಿಯ ಡಬ್ಬದಲ್ಲಿ  ಕಾಫಿ ಪುಡಿ, ಸಕ್ಕರೆ ಅಚ್ಚುಕಟ್ಟಾಗಿ ಕುಳಿತಿತ್ತು. ಆ  ಸ್ಪರ್ಷಕ್ಕೆ ಏನೋ ಒಂದು ತರದ ಪುಳಕ.. 

ನಂಗೆ ಕಾಫೀ ಜೊತೆಗೆ ಈ ಚಿಪ್ಸ್ ಕೂಡಾ ಬೇಕು ಎಂದು ಕೈಯಲ್ಲಿ ಹಿಡಿದ ಪ್ಯಾಕೇಟನ್ನು ಗಾಳಿಯಲ್ಲಿ ಹಾರಿಸುತ್ತಾ ಒಳ ಬಂದ ರವಿ . ಕತ್ತರಿ ಇರಿಸುತ್ತಿದ್ದ ಟೇಬಲಿನ ಡ್ರಾಯರ್ ಎಳೆದು ಕವರ್ ಕತ್ತರಿಸ ಹೊರಟ. ಹೊಸತು ಎಂಬತಿತ್ತು ಕತ್ತರಿ.  ಕೈ ಬೆರಳ ತುದಿಯೂ ಕತ್ತರಿಯ ಬಾಯಿಗೆ ಸಿಕ್ಕಿ  ಚಿಲ್ಲನೆ ನೆತ್ತರು ಚಿಮ್ಮಿತು.  ' ಅಮ್ಮಾ..' ಎಂಬ ನೋವಿನ ಉದ್ಗಾರದೊಂದಿಗೆ ಬೆರಳು ಒತ್ತಿ ಹಿಡಿದ. ಕಾಣದ ಕೇಳದ ಹೊಳಹೊಂದು ಕಣ್ಣೆದುರು ಮೂಡಿತ್ತು. 

ಪಕ್ಕದ ಕೋಣೆಗೆ ನುಗ್ಗಿ ಫಸ್ಟ್ ಏಡ್ ಕಿಟ್ ಹಿಡಿದು ಬಂದ ಶಂತನು. ಗಾಯವನ್ನು ಹತ್ತಿಯಲ್ಲಿ ಒರೆಸಿ, ಮುಲಾಮು ಹಚ್ಚಿ ಪುಟ್ಟ ಬ್ಯಾಂಡೆಜ್ ಸುತ್ತಿದ. ಅಮ್ಮ ಅತೀವ ಕಾಳಜಿ ವಹಿಸಿ ಸಿದ್ಧವಾಗಿಡುತ್ತಿದ್ದ ಫಸ್ಟ್ ಏಡ್ ಬಾಕ್ಸ್. ಅಮ್ಮ ಇದ್ದಾಗ ಅದರ ಅಗತ್ಯ ಬಿದ್ದಿರಲಿಲ್ಲ. ಅದೊಂದೇ ಅಲ್ಲ. ತೊಟ್ಟಿಲು, ಅಟ್ಟಣಿಗೆಯ ಮೇಲಿದ್ದ ಪುಟ್ಟ ಟ್ರೈಸಿಕಲ್, ಷೋಕೇಸಿನಲ್ಲಿದ್ದ ಟೆಡ್ಡಿ ಬೇರ್,  ಎಲ್ಲಾ ಇದ್ದಲ್ಲೇ ಇತ್ತು ಒಂದಿಷ್ಟೂ ಬದಲಾಗಿರಲಿಲ್ಲ. ಆ ಮನೆಯ ಕಣ ಕಣವೂ ಪರಿಚಿತ, ಆಪ್ತ.. 
ಈಗ ಹೇಗನ್ನಿಸ್ತಿದೆ ಅಣ್ಣಾ? ಪಸ್ಟ್ ಏಡ್ ಕಿಟ್ಟನ್ನು ತೆಗೆದಲ್ಲೇ ಇಡುತ್ತಾ ಕಳಕಳಿಯಿಂದ  ಶಂತನು ಕೇಳಿದ. ರವಿ ನಿಟ್ಟುಸಿರು ಬಿಡುತ್ತಾ ಕಿರುನಗೆಯೊಂದಿಗೆ 'ಅಮ್ಮನ ಪಸ್ಟ್ ಏಡ್ ಕಿಟ್ ಮತ್ತು ನಿನ್ನಂತ ತಮ್ಮ ಇರ್ಬೇಕಾದ್ರೆ ನೋವಿಗೆಲ್ಲಿ ಜಾಗ?' ಆರಾಮಾಗಿದ್ದೀನಿ ಅಂದ. ನೋವು ಮಾಯವಾಗಿ ನಗು  ಕುಣಿದಿತ್ತು ಆ ಕ್ಷಣಗಳಲ್ಲಿ..

ನಿರ್ಮಲ ಮೆಲ್ಲನೆ, ಶಾಂತೂ, ರವಿ , ಅಮ್ಮ ಇನ್ನೂ ಇಲ್ಲೇ ಇದ್ದಾಳೆ ಅನ್ನಿಸ್ತಾ ಇದೆ ಕಣ್ರೋ..! ಇಲ್ಲಿರುವ ಪ್ರತಿ ವಸ್ತು ಅವಳ ಕಾಳಜಿ, ಜೀವನ ಪ್ರೀತಿಯಿಂದ  ಆವರಿಸಿದಂತಿದೆ. ನಾವು ಕಳೆದು ಕೊಂಡದ್ದು ಅವಳ ಭೌತಿಕ ಕಾಯ ಮಾತ್ರ. ಹೊರಗೆ ನೋಡು ಆ ಗಿಡ ಮರ ಹಸಿರು ಎಲ್ಲಾ ಅವಳದೇ ಸೃಷ್ಟಿ  ಅಲ್ವಾ.. ಎಷ್ಟೆಲ್ಲಾ ಆಸೆಯಿಂದ  ಬದುಕಿನ ಪ್ರತಿ ಕ್ಷಣವನ್ನೂ ಜೀವ ತುಂಬಿ ಕಳೆದಿದ್ದಳವಳು. ನಾವೀಗ ಮಾಡೋದು ಸರಿ ಅನ್ಸುತ್ತಾ.. ಅವಳ ಆತ್ಮ ನೊಂದ್ಕೊಳ್ಳುತ್ತೇನೋ..? ಎಂದು ನುಡಿದಳು.

ಕಾಫೀ  ಕಪ್ ಹಿಡಿದು ಕುಳಿತ ಮೂವರನ್ನು ಮೌನದ ಬಳ್ಳಿ ಬಂಧಿಸಿತು. ತಿಂಗಳ ಕೆಳಗೆ ಕಳೆದುಕೊಂಡ ಅಮ್ಮ ಗೋಡೆಯಲ್ಲಿ ಫೋಟೊವಾಗಿದ್ದಳು. ಒಬ್ಬರ ಮುಖ ಒಬ್ಬರು ನೋಡುತ್ತ ಕೆಲ ಕ್ಷಣ ಕಳೆದರು. ವಾಚ್ ನೋಡಿಕೊಂಡ ರವಿ , ಈ ಜಾಗೆ ಹಾಗೂ ಮನೆಯನ್ನು ಖರೀದಿಸಲು ಒಪ್ಪಿದ್ದ ಸೇಟ್ ಲೀಲಾಧರ ಬರುವ ಹೊತ್ತು ಸಮೀಪಿಸುತ್ತಿತ್ತು. 

ಏನೋ ನಿರ್ಧರಿಸಿದಂತೆ ಎದ್ದ ರವಿ , ಹೊರಗೆ ಮ್ಲಾನ ಮುಖ ಹೊತ್ತು ನಿಂತಿದ್ದ ಶಂಕರನನ್ನು ಕರೆದು, 'ಶಂಕರ ಇನ್ಮೇಲೆ ನೀನು ಔಟ್ ಹೌಸ್ ಬಿಟ್ಟು ಮನೆಯೊಳಗೇ ಇರು. ಅಮ್ಮ ಇದ್ದಾಗ ನೋಡಿಕೊಂಡಿದ್ದಂತೆ ಇನ್ನು ಮುಂದೆ ಒಳಗೂ ಹೊರಗೂ ನೋಡಿಕೊಳ್ಳುವುದು ನಿನ್ನ ಕೆಲಸ. ಬಿಡುವಿದ್ದಾಗಲೆಲ್ಲ  ನಾವು ಬಂದು ಹೋಗ್ತೀರ್ತೀವಿ ಎಂದ.  ಶಂತನು ಫೋನಲ್ಲಿ ಸೇಟ್ ಜೊತೆ ಬದಲಾದ ಇರಾದೆಯ ಬಗ್ಗೆ ಮಾತಾಡುತ್ತಿದ್ದ.

ಶಂಕರನ ಮೊಗದಲ್ಲಿ ಮೂಡಿದ ಸಂತಸಭರಿತ ಅಚ್ಚರಿಯ ನೋಟದ ಹಿಂದೆ  ಅಗಲಿದ್ದ ಒಡತಿಯ ಮನದಾಸೆಯ ಛಾಯೆಯಿತ್ತು.  


-- 

10 comments:

 1. ಚೆನ್ನಾಗಿದೆ ಮೇಡಂ.
  ಮನೆ ಅಂದ್ರೆ ಒಂದು ಜೀವವನ್ನ ನೆನಪಿಸಿಕೊಡೋ
  ಜೀವನವನ್ನ ಕಟ್ಟಿಕೊಡೋ ಜೀವ ಆಗ್ಬಿಡುತ್ತೆ ನಮ್ ಬದುಕಲ್ಲಿ
  ಸ್ವರ್ಣಾ

  ReplyDelete
 2. ಚಂದ ಬರದ್ದೆ ಅಕ್ಕಾ... ರೈಸಿದ್ದು :-)

  ReplyDelete
 3. ಎನ್ನಾದೂ ಕಿರಣಣ್ಣನ ಅಭಿಪ್ರಾಯವೇ :) ಕೆಲವೇ ವಾಕ್ಯಗಳಲ್ಲಿ ಅನಾವರಣಗೊಳ್ಳುವ ಅದ್ಭುತ ಕಥೆ. ಕಥೆಯ ಹಿಂದೂ ಮುಂದೂ ನಮ್ಮ ಮನಸ್ಸು ಸುಳಿಯುವಂತೆ ಮಾಡುವುದರಲ್ಲಿ ಯಶಸ್ವಿ.

  ReplyDelete
 4. ಸರಳವಾಗಿ ಕಥೆ ಏನನ್ನಾ ಹೇಳಬೇಕು ಅದನ್ನ ಹೇಳಿದೆ ಅನಿತಕ್ಕ..

  ReplyDelete
 5. ಅನಿತಾ ಕಥೆ ತುಂಬಾ ಇಷ್ಟವಾಯ್ತು.. ಬಾಡಿಗೆ ಮನೆಗಳಲ್ಲಿ ಕೆಲವೇ ವರ್ಷಗಳು ಇದ್ದರೇನೇ ಏನೋ ಒಂದು ನಂಟನ್ನು ಸೃಷ್ಟಿಸಿರುತ್ತೆ ಅಂತಹದರಲ್ಲಿ ಅಪ್ಪ ಅಮ್ಮ ಅವರದೇ ಬದುಕನ್ನು ಸೃಷ್ಟಿಸಿಕೊಂಡ ಸ್ವಂತದ ಮನೆ ಎಷ್ಟೋ ಭಾವನೆಗಳಲ್ಲಿ ಬೆರೆತು ಹೋಗುತ್ತೆ, ಆ ವ್ಯಕ್ತಿ ಇರಲಿ ಇಲ್ಲದಿರಲಿ ಮನೆಗೂ ಜೀವ ತುಂಬಿ ಹೋಗಿಬಿಡ್ತಾರೆ.

  ReplyDelete
 6. Tumba sogasaada barha...congrats...keept it up

  ReplyDelete
 7. ಬದುಕೇ ಹಾಗೆ ಅಲ್ವಾ ಹಳೆಯದನ್ನೆಲ್ಲ ಮೆರೆಸುತ್ತಾ ಹೊಸದರತ್ತ ಸಾಗುತ್ತದೆ... ಹಳೆಯದರ ಸವಿನೆನಪು ಸ್ಮೃತಿಪಟಲದಲ್ಲಿ ಮರೆಯದೆ ಹಾಗೆಯೇ ಇರುತ್ತದೆ, ನಾವು ಆ ಸ್ಥಳಕ್ಕೆ ಭೇಟಿಕೊಟ್ಟಾಗ ಅವುಗಳು ಒಮ್ಮೆಗೆ ಉಮ್ಮಳಿಸಿ ಬರುತ್ತವೆ, ಕಳೆದುಹೋದ ತಾಯಿಯ ನೆನಪು ಮಾತ್ರ ನಮ್ಮ ಇರುವಿಕೆ ಮುಗಿಯುವವರೆಗೆ ಮರೆಯಲಾಗದು... ಅವರು ಬದುಕು ಸವೆಸಿದ್ದು ಮಾತ್ರ ನಮ್ಮ ಕಣ್ಣಲ್ಲಿ ನೀರು ಹರಿದು ಬರದೇ ಇರಲು ಸಾಧ್ಯವಿಲ್ಲ... ಆದರೆ, ನೀವು ಮಾತ್ರ ಒಂದಿಂಚು ಬಿಡದೆ ಲೇಖನದಲ್ಲಿ ಹೊರಹಾಕಿದ್ದೀರಿ... ನಾವು ಕಳೆದ ದಿನಗಳನ್ನು ಹೆಚ್ಚು ಮೆಲುಕು ಹಾಕುವುದು ಬಹಳ ಕಡಿಮೆ... ನೀವು ಕೆಳದ ದಿನಗಳನ್ನು ನಿಮ್ಮ ಲೇಖನದಲ್ಲಿ ಅಚ್ಚುಕಟ್ಟಾಗಿ ತೋರಿಸಿ ಅದನ್ನು ಇನ್ನು ಜೀವಂತವಾಗಿರುವಂತೆ ನೋಡಿಕೊಳ್ಳುತ್ತಾ ಸಾಗುತ್ತಿದ್ದೀರಾ... ಅದಕ್ಕೆ ನಿಮಗೆ ನನ್ನ ಧನ್ಯವಾದಗಳು... ಹಳೆಯ ನೆನಪುಗಳ ಮತ್ತೆ ಮರುಕಳಿಸಲಾಸಧ್ಯ... ಕಳೆದುಹೋದವರು ಮತ್ತೇ ಬರಲಾರದ ಸ್ಥಿತಿಯಲ್ಲಿಯು ಅವರನ್ನು ನೆನಪಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ... ಅವರು ಹಾಕಿಕೊಟ್ಟ ಮಾರ್ಗದರ್ಶನ ಅತ್ಯಗತ್ಯ... ನಿಮ್ಮ ಲೇಖನ ಚೆನ್ನಾಗಿದೆ... ಲೇಖನ ಅನ್ನುವುದಕ್ಕಿಂತ ಮನದಾಳದ ನೋವು-ನಲಿವುಗಳೆಂದರೆ ಸೂಕ್ತ... ಇದು ಎಲ್ಲರಲ್ಲೂ ಘಟಿಸುವಂತಹದು... ಅದಕ್ಕೆ ನಾನು ಹೇಳಿದ್ದು...

  ReplyDelete
 8. ಮನೆ ನೆನಪುಗಳ ಮೆರವಣಿಗೆ. ಒಳ್ಳೆಯ ಮನೋಜ್ಞ ಶೈಲಿ.

  ReplyDelete