Pages

Total Visitors

Friday, May 18, 2012

ಹಕ್ಕಿ ಹಾರುತಿದೆ ನೋಡಿದಿರಾ.. ಮಳೆ ಬಂದು ಕೆಲವು ದಿನಗಳಾಗಿತ್ತು. ತೋಟಕ್ಕೆ ಹೋಗಲು ಬೇಸರವೆನಿಸಿದರೂ, ಗಿಡ ಮರಗಳಿಗೆ ನೀರಿನ ಆವಶ್ಯಕತೆ ಇದೆಯೇನೋ ಅನ್ನಿಸಿ ಮೆಲ್ಲನೆ ಆ ಕಡೆ ಕಾಲು ಹಾಕಿದೆ.  ಅಡಿಕೆ ಮರಗಳ ಸಾಲಿನ ನಡುವಿನಲ್ಲಿದ್ದ ,ಕೊಂಚ ಜಾಸ್ತಿಯೇ ನೀರನ್ನು ಬೇಡುವ ಜಾಯಿ ಕಾಯಿ  ಗಿಡಗಳು ಬಸವಳಿದಂತೆ ಕಂಡಿತು. ಕಣ್ಣಾ ಮುಚ್ಚಾಲೆ ಆಡುತ್ತಿರುವ ಮಳೆಯಿಂದಾಗಿ  ಒಮ್ಮೆ ಇಳೆ ತಂಪಾಗುವುದು ಹೌದಾದರೂ, ಮತ್ತೆ ತಲೆದೋರುವ ಬಿರು ಬಿಸಿಲು ಗಿಡ ಮರಗಳನ್ನು ತಾಪಕ್ಕೆ ಒಡ್ಡುತ್ತದೆ. 

ಸ್ಪ್ರಿಂಕ್ಲರ್ ಗಳನ್ನು ಹಿಡಿದುಕೊಂಡು ಎಲ್ಲಿಂದ ಸುರು ಮಾಡುವುದೆಂದು ಯೋಚಿಸುತ್ತಾ ಮುಂದೆ ಹೋಗುತ್ತಿದ್ದಂತೆಯೇ ನನ್ನ ಪಕ್ಕದಲ್ಲಿ ಒಂದೆರಡು ಬಿಳಿ ಬಣ್ಣದ ಕೊಕ್ಕರೆಗಳು ಧರೆಗಿಳಿದವು.  ಸ್ವಲ್ಪ ಅಂತರದಲ್ಲಿ ಕೊಕ್ಕನ್ನು ಆಗಸದೆಡೆಗೆ ಬೊಟ್ಟು ಮಾಡಿ ನಡೆಯುತ್ತಾ ಬರತೊಡಗಿದವು. ನಾನು ಸುಮ್ಮನೆ ನಿಂತು ಬೇರೆಲ್ಲೊ ನೋಡಿದಂತೆ ನಟಿಸಿ ವಾರೆಗಣ್ಣಲ್ಲಿ ಅವುಗಳ ಪ್ರತಿಕ್ರಿಯೆ ಗಮನಿಸಿದೆ. ಅವುಗಳೂ ಈಗ ತಟಸ್ಥವಾಗಿ ನಿಂತು ಕೊರಳುದ್ದ ಮಾಡಿ ಅತ್ತಿತ್ತ ನೋಡುತ್ತಾ ಏನೂ ಅರಿಯವದವರಂತೆ ನಟಿಸುತ್ತಿದ್ದವು! ನಾನು ಮತ್ತೆ ಹೆಜ್ಜೆ ಹಾಕಿದೆ. ಅವು ಮೆಲ್ಲನೆ ಹಿಂಬಾಲಿಸುತ್ತಿದ್ದವು. ಶಿಸ್ತಿನ ಸಿಪಾಯಿಗಳಂತಿದ್ದ ಅವುಗಳ ಹಾವಭಾವ ನನ್ನನ್ನು ಪುಳಕಿತಗೊಳಿಸಿದವು. ಸ್ಪ್ರಿಂಕ್ಲರ್ ಗಳನ್ನು ಜೋಡಿಸಿ ಇತ್ತ ಬಂದು ಪಂಪ್ ಸ್ಟಾರ್ಟ್ ಮಾಡಿ  ನೋಡಿದರೆ, ಆ ಕ್ಷಣಕ್ಕಾಗಿ ಕಾಯುತ್ತಿದ್ದವರಂತೆ, ನೀರ ಧಾರೆಗೆ ಮೈಯೊಡ್ಡಿ ನಲಿಯುತ್ತಿದ್ದ ಕೊಕ್ಕರೆಗಳು ಕಾಣಿಸಿದವು. 

ತುಸು ಎತ್ತರದಲ್ಲಿ ದಿಣ್ಣೆಯ ಮೇಲಿದ್ದ  ಕುಡಿಯುವ ನೀರಿನ ಟ್ಯಾಂಕ್ ಗೆ ನೀರು ತುಂಬಿಸಿ, ಪೈಪನ್ನು ಪಕ್ಕದಲ್ಲಿ ಕೈತೋಟಕ್ಕೆ ಬಳಸುತ್ತಿದ್ದ ಪುಟ್ಟ ನೀರ ಹೊಂಡ ತುಂಬಲೆಂದು ಇಟ್ಟು ಕೆಳಗಿಳಿದು ಬರುತ್ತಿದ್ದೆನಷ್ಟೆ. ಅಲ್ಲಿಯವರೆಗೆ ಆವರಿಸಿದ್ದ ಗಾಡ ಮೌನದಲ್ಲೀಗ  ಹಕ್ಕಿಗಳ ಕಿಚಿ ಕಿಚಿ ಸದ್ದು!!  ಮೆಲ್ಲನೆ ಅತ್ತ ಕತ್ತು ಹೊರಳಿಸಿ ನೋಡಿದರೆ ಬಗೆ ಬಗೆಯ ಬಣ್ಣದ ಹಕ್ಕಿಗಳು. ನೀರಿನ ಹೊಂಡಕ್ಕಿಳಿದು ಪುಟ್ಟ ರೆಕ್ಕಗಳನ್ನು ಪಟ ಪಟ ಆಡಿಸುತ್ತಾ ಮನಸೋ ಇಚ್ಚೆ ಸ್ನಾನ ಮಾಡುತ್ತಿದ್ದವು. ನನ್ನನ್ನು ಗಮನಿಸಿದವೋ ಏನೋ, ಬುರ್ರನೆ ಹಾರಿ ಪಕ್ಕದಲ್ಲಿದ್ದ ಮರದ ಗೆಲ್ಲಿನಲ್ಲಿ ಸಾಲಾಗಿ ಕುಳಿತು ಒದ್ದೆ ಮೈಯನ್ನು ಕೊಡವಿಕೊಳ್ಳ ತೊಡಗಿದವು!

ಅಡುಗೆ ಮನೆಯ ಕಿಟಕಿಯ ನೇರಕ್ಕೆ ಒಂದು ಪುಟ್ಟ ಬಾಲ್ದಿಯ ತುಂಬ ನೀರು. ಆಗಷ್ಟೆ ಅಲ್ಲಿದ್ದ ನೀರನ್ನು ಗಿಡಗಳಿಗೆ ಚೆಲ್ಲಿ ಹೊಸದಾಗಿ ತುಂಬಿಟ್ಟಿದ್ದೆ. ನಾನು ಮರೆಯಾಗುತ್ತಿದ್ದಂತೆಯೇ , ಎಲ್ಲಿ ಕುಳಿತು ಹೊಂಚು ಹಾಕುತ್ತಿದ್ದವೋ ಕಾಣೆ !ಒಂದೊಂದಾಗಿ ಹಕ್ಕಿಗಳು ಕೆಳಗಿಳಿದು ನೀರು ಕುಡಿದು, ಅಲ್ಲೇ ಚಿಲಿ ಪಿಲಿ ಶಬ್ದ ಮಾಡುತ್ತಾ ಆಟವಾಡತೊಡಗಿದವು. 

ಇವುಗಳ ಚಿನ್ನಾಟವನ್ನು  ನೋಡುತ್ತಿದ್ದರೆ, ಹೊತ್ತು ತನ್ನಷ್ಟಕ್ಕೆ ತಾನೇ ಕಳೆದು ಹೋಗುತ್ತಿತ್ತು. ಎಂತಹ ಬೇಸರದ ವಾತಾವರಣವಿದ್ದರೂ, ಈ ಬಾನಾಡಿಗಳನ್ನು ಕಂಡೊಡನೆ ದುಃಖವೆಲ್ಲಾ ಕರಗಿ ಮನಸ್ಸಿನಲ್ಲಿ ಶಾಂತಿ ತನ್ನಿಂದ ತಾನೇ ನೆಲೆಗೊಳ್ಳುತ್ತಿತ್ತು. 

ಇದು ಬಾನಾಡಿಗಳ ಒಡನಾಟದ ಸುಂದರ ಪ್ರಪಂಚದ ಒಂದು ಮುಖವಾದರೆ, ಇದರ ಹಿಂದಡಗಿರುವ ಕರಾಳತೆಯ ಇನ್ನೊಂದು ಮುಖವನ್ನು ನಿಮಗೆ ಪರಿಚಯಿಸುತ್ತೇನೆ. ಆಧುನಿಕತೆ ಹೆಚ್ಚಿದಂತೆಲ್ಲ ಮನುಷ್ಯನ ಹಿಡಿತಕ್ಕೆ ಸಿಕ್ಕಿದ ಭೂಮಿಯ  ಬಹುಪಾಲು ಅವನ ಅವಶ್ಯಕತೆಗಳಿಗಾಗಿಯೇ ಉಪಯೋಗವಾಗುತ್ತಿದೆ. ಇದು ನಮ್ಮಂತೆ, ಭೂಮಿಯಲ್ಲಿ ನೈಸರ್ಗಿಕವಾಗಿ ಸಿಗುವ ವಸ್ತುಗಳ ಮೇಲೆ ನಮ್ಮಷ್ಟೆ ಹಕ್ಕನ್ನು ಹೊಂದಿದ ಬೇರೆ ಪ್ರಾಣಿಗಳ ಜೀವನಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ನೀರು ಇದಕ್ಕೆ ಹೊರತಲ್ಲ.
ಈಗೆಲ್ಲ ಕೆರೆ ಬಾವಿಗಳು ಬತ್ತಿ ಹೋಗಿ ಹಕ್ಕಿಗಳಿಗೆ ಸಹಜವಾಗಿ ದಕ್ಕಬೇಕಾದ ನೀರಿನ ಸೆಲೆಗಳು ಮಾಯವಾಗುತ್ತಿವೆ. ಬೇಸಿಗೆಯಲ್ಲಿ ಈ ಪಾಪದ ಜೀವಿಗಳು ಬೇಗೆಯನ್ನು ತಾಳಲಾರದೇ ನೀರಿಗಾಗಿ ಹಾತೊರೆಯುತ್ತಿರುತ್ತವೆ. ಅಲ್ಲಲ್ಲಿ ಮಾನವ ಬೇಕಾಬಿಟ್ಟಿ ಉಪಯೋಗಿಸಿ ಪೋಲು ಮಾಡಿದ ನಂತರ ಚರಂಡಿಯೆಡೆಗೆ   ಹರಿದು ಸಾಗುವ ಕೊಳಕು ನೀರಷ್ಟೆ ಇವುಗಳಿಗೆ ಸಿಗುವ ಅಮೃತ. 

ಬೇಸರವೆನಿಸಿತೇ..?   ಹಾಗಿದ್ದರೆ ನಾವೇಕೆ ಇವುಗಳ ಬಗ್ಗೆ ಕೊಂಚ ಕಾಳಜಿ ವಹಿಸಬಾರದು..? ನಾವು ತೋರುವ ಅಲ್ಪ  ಪ್ರೀತಿಗೆ ಇವುಗಳು ಮರಳಿ ನಮಗೆ ನೀಡುವ ಸಂತಸದ ಅಂದಾಜು ನಿಮಗಿರಲಾರದು! 

ಈಗ ನಿಮಗೂ ಹಕ್ಕಿಗಳ ಲೋಕಕ್ಕೆ ಎಂಟ್ರಿ ಬೇಕು ಅನ್ನಿಸ್ತಿದೆಯಾ.. 
ನೀವು ಮಾಡಬೇಕಾದುದಿಷ್ಟೆ. ನಿಮ್ಮ ಮನೆಯ ಹೂವಿನ ಸಾಲಿನಲ್ಲೋ, ಮರ ಗಿಡಗಳ ನೆರಳಿನಲ್ಲೋ ಅಥವಾ ಬಾಲ್ಕನಿಯ ಮೇಲೋ ಹೆಚ್ಚು ಆಳವಿರದ ಅಗಲವಾದ ಪಾತ್ರೆಗಳಲ್ಲಿ ನೀರು ತುಂಬಿಡಿ. ಪ್ರತಿದಿನ ಅವುಗಳನ್ನು ಬದಲಾಯಿಸುತ್ತಿರಿ. ಕೆಲವೇ ದಿನಗಳಲ್ಲಿ ನಿಮ್ಮಲ್ಲೂ ಹಕ್ಕಿಗಳು ತಮ್ಮ ಮ್ಯಾಜಿಕ್ ತೋರಿಸಲು ತೊಡಗುತ್ತವೆ. 
ಪುಟ್ಟ ಮಕ್ಕಳಿಗೂ ಈ ವಿಷಯದ ಬಗ್ಗೆ ತಿಳಿಹೇಳಿ. ಅವರೂ ಈ ಪುಟಾಣಿ ಜೀವಿಗಳನ್ನು ನೋಡಿ ಕಲಿಯಲು, ಅವರ ಗುಣ ಸ್ವಭಾವಗಳನ್ನು ಹತ್ತಿರದಿಂದ ತಿಳಿಯಲು ಸಹಾಯವಾಗುತ್ತದೆ. ಮಕ್ಕಳಲ್ಲಿ ಪರಿಸರದ ಬಗೆಗಿನ ಪ್ರೀತಿಯೂ ಹೆಚ್ಚುತ್ತದೆ. 

ಮತ್ತೇಕೆ ತಡ ಇಂದಿನಿಂದಲೇ ಸಿದ್ಧರಾಗಿ ಹೊಸ ಗೆಳೆಯರನ್ನು ಸ್ವಾಗತಿಸಲು.. !! 

15 comments:

 1. nimma majic trick adbhuta..baraha atmeeya anisitu..

  ReplyDelete
 2. ಪಟ್ಟಣದ ವಾಹನಗಳ ಹೋಗೆ ತುಂಬಿದ ವಾತಾವರಣದಲ್ಲಿ ಬದುಕುತ್ತಿರುವ ನಮಗೆ ನಿಮ್ಮ ಪಕ್ಷಿಲೋಕ ಅಪ್ಯಾಯಮಾನ .ನಿಮ್ಮ ಪ್ರತಿ ಬರಹದಲ್ಲೂ ಕೊನೆಗೊಂದು ಅಚ್ಚರಿ ಕಾದಿರುತ್ತದೆ .ಪರಿಸರ ಪ್ರೇಮದ ಬಗ್ಗೆ ,ಪಕ್ಷಿಸಂಕುಲ ಉಳಿಸಿ ಬೆಳೆಸುವ ಬಗ್ಗೆ ಕಿವಿಮಾತುಗನ್ನು ತಿಳಿಸಿದ್ದೀರಿ.ಇನ್ನೂ ಮುಂದೆ ಅಗಲದ ಪಾತ್ರೆಯಲ್ಲಿ ನೀರಿಟ್ಟು..ಹಕ್ಕಿ ಹಾರುತಿದೆ ನೋಡಿದಿರಾ ಎನ್ನಬೇಕು . ಹಾರ್ದಿಕ ಅಭಿನಂದನೆಗಳು .

  ReplyDelete
 3. Anitha Naresh Manchi ರವರೇ ನಿಮ್ಮ ಹಕ್ಕಿಗಳ ಬಗೆಗಿನ ಲೇಖನ ಅನ್ನುವುದಕ್ಕಿಂತ ಕಾಳಜಿ ತುಂಬಾ ಇಷ್ಟವಾಯಿತು... ಅವುಗಳ ಒಡನಾಟ ಹೆಚ್ಚು ಮಧುರತೆಯನ್ನು ಕೊಡುತ್ತದೆ, ನಮ್ಮ ಒಡನಾಟ ಬರೀ ಮನುಷ್ಯರೊಂದಿಗೆ ಅಲ್ಲ ಸೃಷ್ಟಿಯಲ್ಲಿರುವ ಜೀವಿಗಳ ಹಾವಭಾವ, ಕರೆತೊರೆಗಳು, ಪ್ರಕೃತಿಯ ಸಿರಿಯನ್ನು ಸವಿಯಲು, ಆದರೆ, ಈಗ ನೈಸರ್ಗಿಕ ಸಂಪತ್ತು ಬರಿದಾಗುತ್ತಿದೆ, ನಾನು ನಮ್ಮ ಮನೆಯ ಪಕ್ಕದಲ್ಲಿರುವ ಒಂದು ತೆಂಗಿನತೋಟವನ್ನು ನಗರಾಭಿವೃದ್ಧಿ ಪ್ರಾಧಿಕಾರದವರು ನಗರ ವ್ಯಾಪ್ತಿಗೆ ಒಳಪಡುತ್ತದೆ ಎನ್ನುವ ಕಾರಣಕ್ಕೆ, ಸೈಟುಗಳ ಹಂಚಿಕೆಗಾಗಿ, ಸುಮಾರು 200 ಕ್ಕೂ ಹೆಚ್ಚು ತೆಂಗಿನ ಮರಗಳನ್ನು ಒಂದೇ ದಿನದಲ್ಲಿ ಕೆಡವಿ ಹಾಕಿದರು, ನನಗೆ ಆ ದಿನ ನಿದ್ದೆಯೇ ಬರಲಿಲ್ಲ... ಕುಂಬಾರನಿಗೆ ಒಂದು ವರುಷ ದೊಣ್ಣೆಗೆ ಒಂದು ನಿಮಿಷ ಎನ್ನುವ ಹಾಗೆ ನಾಶ ಮಾಡಿದರು. ಮಾನವ ತನ್ನ ಕಷ್ಟ-ಸುಖಗಳನ್ನು ಹೇಳಿಕೊಳ್ಳುವುದಕ್ಕೆ ಸಮಾನಮನಸ್ಕರಿರುತ್ತಾರೆ, ತಮ್ಮ ಸ್ಥಿತಿಯನ್ನು ಹೇಳಿಕೊಳ್ಳದಂತಹ ಸ್ಥಿತಿಯಲ್ಲಿ ಇರುವ ಪ್ರಾಣಿ-ಪಕ್ಷಿಗಳೇ ಆಗಲಿ, ಗಿಡ ಮರಗಳೇ ಆಗಲಿ ಯಾರ ಬಳಿ ಹೇಳಿಕೊಳ್ಳಲು ಸಾಧ್ಯ, ಮಾನವೀಯ ಗುಣಗಳನ್ನು ಹೊಂದಿರುವ ನಾವು ಯಾಕೆ ಸುಪ್ತವಾಗಿರುವ ಮಾನವೀಯ ಗುಣಗಳನ್ನು ಎಚ್ಚರಿಸುತ್ತಿಲ್ಲ ಎನ್ನುವುದು ಸೂಜಿಗ...!!! ಅದನ್ನು ಎಲ್ಲರಲ್ಲೂ ಕಾಣಲು ಬಯಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು... ಅದು ಎಲ್ಲರೂ ಅಳವಡಿಸಿಕೊಂಡು, ಅದಕ್ಕೆ ಬದ್ಧವಾಗಿ ನಡೆದರೇ, ಅದೇ ನಾವು ಮುಂದಿನ ಪೀಳಿಗೆಗೆ ನೀಡುವ ಕೊಡುಗೆಯಾಗುತ್ತದೆ.

  ReplyDelete
 4. Good one Anitha!! very true... me too watch the birds when i go to my totaa...niha has some nice pic...my fav are the white peacocks...so proud and beautiful
  i liked ur story gaaLa..but alli comment hOgle illaa..
  :-)
  malathi S

  ReplyDelete
 5. ನಿರೂಪಣೆ ತುಂಬಾ ಸುಂದರವಾಗಿದೆ.ನಮ್ಮ ಸುತ್ತ ಮುತ್ತ ಕಾಣುವ ಸಣ್ಣ ಸಣ್ಣ ಸಂಗತಿಗಳೇ ನಮಗೆ ಎಷ್ಟೊಂದು ಮುದ ನೀಡಬಹುದು ಮತ್ತು ಎಷ್ಟೊಂದು ಪಾಠ ಕಲಿಸಬಹುದು ಎಂಬುದು ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಬರವಣಿಗೆಯ ಶೈಲಿಯಂತೂ ಅನುಪಮ....

  ReplyDelete
 6. nimma lekhana tumba mana muttide. naanu namma maneya horage ondu tatteyalli dina neeru haaki idttene.......hakkgalu kudiyalendu

  ReplyDelete
 7. hmmm idannu odi nanna parisara haagoo pakshi prema keralitu. sundara niroopane. Thank you Anitha :)

  ReplyDelete
 8. ನನ್ನದು ಪಾರಿವಾಳ ಸೇವೆ ಇದೇ ರೀತಿ ನಡೆಯುತ್ತಿದೆ....:)ಅಕ್ಕಿ ಕಾಳು ಮತ್ತು ನೀರು ...:)

  ReplyDelete
 9. ಅಕ್ಕ, ಆನುದೆ ಎನ್ನ ರೂಮಿನ ಟೇರೇಸ್ ಮೇಲೆ ನೀರುದೆ ಅಕ್ಕಿದೆ ಮಡುಗುತ್ತೆ :-)

  ವಿಷಯ ಪ್ರಸ್ತುತಿ ಸೂಪರ್ As always :-) hats off to your writing skills :)

  ReplyDelete
 10. ನಿಜ, ನಮ್ಮ ಬಾಲ್ಕನಿಯಲ್ಲೂ ಅನೇಕ ವಿಧದ ಪಕ್ಷಿಗಳು ಬಂದು ಹಣುಕುತ್ತವೆ . ಅವುಗಳ ಚಿಲಿಪಿಲಿ ಸದ್ದಿಗೆ ಎಂತಹ ಕೆಟ್ಟ ಮೂಡೂ ಸುಧಾರಿಸುತ್ತದೆ.

  ReplyDelete
 11. ಪಕ್ಷಿ ಪ್ರೀತಿ....
  ನಿಮ್ಮ ಉತ್ಸಾಹ ನನ್ಗೆ ನಿಜವಾಗಲು ನನ್ನನ್ನು ಹಾತೊರೆಯುವಂತೆ ಮಾಡಿದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಾಣಿಗಳ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದ್ದಾನೆ. ಎಲ್ಲವೂ ನನಗೇ ಬೇಕೆಂದು ಪರಿಸರ ಹಾಳುಮಾಡುತ್ತಿದ್ದಾನೆ. ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪ್ರಾಣಿಗಳ ಭಾವಚಿತ್ರಗಳನ್ನು ಮುಂದಿನ ಜನಾಂಗ ನೋಡಬೇಕಾದ ಪರಿಸ್ಥಿತಿ ಎದುರಾಗಬಹುದು. ನಿಮ್ಮ ಕಾಳಜಿ ನಿಜಕ್ಕೂ ಮೆಚ್ಚುವಂತಹದ್ದು. ನೀವು ಈ ಉತ್ಸಾಹವನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ........

  ReplyDelete
 12. ಮನುಷ್ಯರ ಹೃದಯಗಳು ಬತ್ತಿಹೊಗಿರುವ ಈ ಕಾಲಘಟ್ಟದಲ್ಲೂ ನಿಮ್ಮ ಈ ಅಕ್ಕರೆಯ ಕಾಳಜಿ ಅನನ್ಯವಾದದ್ದು ಈ ಕ್ಷಣದಿಂದಲೇ ಚಾಚೂ ತಪ್ಪದೆ ನಿತ್ಯ ನಿರಂತರ ಹೊಸ ಹೊಸ ಗೆಳೆಯರನ್ನ ಸ್ವಾಗತಿಸಲು ಸಿದ್ದನಾಗಿದ್ದೇನೆ...ಪ್ರಾಮಿಸ್

  ReplyDelete
 13. ವಾಹ್.. ಒಳ್ಳೆ ಕೆಲಸ ಅನಿತಾ...

  ReplyDelete