Pages

Total Visitors

Friday, June 1, 2012

ಇರುಳಿರುಳಳಿದು ..ಸಂಜೆ ಹೊತ್ತು. ಆಗಸದ ಕೆಂಪು ಗಿಡ ಮರಗಳ ಮೇಲೆ ಪ್ರತಿಫಲಿಸಿ ಸುಂದರ ಮೆರುಗು ನೀಡಿತ್ತು. ಬೆಂಗಳೂರು ಮಂಗಳೂರು ಎಂಬ ಬೋರ್ಡ್ ಹೊತ್ತು ಭರದಿಂದ ಸಾಗುತ್ತಿದ್ದ ಬಸ್ಸಿನ ಕಿಟಕಿ ಬದಿಯಲ್ಲಿ ತೂಕಡಿಸುತ್ತಿದ್ದೆ. 

'ದಡ್' ಎಂಬ ಭಾರೀ ಶಬ್ಧ, ಜೊತೆಗೆ ಬ್ರೇಕಿನ ಕ್ರೀಚ್ ..ಕಿಚ್.. ಕಿಚ್ ಎಂಬ ದೀರ್ಘ ಕರ್ಕಶ ಧ್ವನಿಯೊಂದಿಗೆ  ಬಸ್ ನಿಂತಿತು. ಬಸ್ಸಿನ ಗಾಜುಗಳಿಗೆ ರಪ ರಪನೆ ಕಲ್ಲುಗಳು ಬೀಳತೊಡಗಿದವು. ಗಾಜನ್ನು ಪುಡಿ ಮಾಡಿ ತೂರಿ ಬಂದ ಕಲ್ಲುಗಳು ಒಂದೆರಡು ಪ್ರಯಾಣಿಕರನ್ನು ಗಾಯಗೊಳಿಸಿದವು. ಡ್ರೈವರಿನ ಹಣೆಗೆ ಕಲ್ಲೇಟು ತಗಲಿ ಆತ ಸೀಟಿನಿಂದ ಇತ್ತ ಬಂದು ಬಿದ್ದಿದ್ದ.  ನನ್ನ ಶರ್ಟಿನ ಮೇಲೂ ರಕ್ತದ ಕಲೆಗಳು.  ಏನಾಗುತ್ತಿದೆ ಎಂಬ ಸುಳಿವಿಲ್ಲದೆ, ಬಸ್ಸಿನೊಳಗೆ ಆತಂಕದ ವಾತಾವರಣ ಸೃಷ್ಟಿಯಾಗಿತ್ತು . 
ಕೈಯಲ್ಲಿ ಹಿಡಿದ ಕಲ್ಲಿನೊಂದಿಗೆ ಬಸ್ಸನ್ನು ಪುಡಿಗಟ್ಟುತ್ತಿದ್ದವರ ಆಕ್ರೋಶಭರಿತ ಸ್ವರಗಳು ಹೊರಗಿನಿಂದ ಕೇಳತೊಡಗಿತ್ತು. ಅಷ್ಟರಲ್ಲಿ ಎದುರಿನಿಂದ ವೇಗವಾಗಿ ಬರುತ್ತಿದ್ದ ಇನ್ನೊಂದು ಬಸ್ ಕಂಡು ಪುಂಡರ ಗುಂಪು ಅತ್ತ ತಿರುಗಿತು. ಆ ಸಮಯವನ್ನು ಸದುಪಯೋಗಗೊಳಿಸಿಕೊಂಡ ನಮ್ಮ ಬಸ್ಸಿನ ಕಂಡೆಕ್ಟರ್ ಎಲ್ಲರನ್ನೂ ಲಗೇಜ್ ತೆಗೆದುಕೊಂಡು ಬೇಗ ಬೇಗ ಕೆಳಗಿಳಿಯುವಂತೆ ಮನವಿ  ಮಾಡಿಕೊಂಡ. ಎಲ್ಲರೂ ದಡ ದಡನೆ ಬಸ್ಸಿನಿಂದಿಳಿದು ರಸ್ತೆಯ ಬದಿಗೆ ಸರಿದು ನಿಂತೆವು. 

ನಮ್ಮೊಂದಿಗೆ ನಿಂತಿದ್ದ  ಬಸ್ಸಿನ ಕಂಡೆಕ್ಟರ್ ಪಿಸು ಧ್ವನಿಯಲ್ಲಿ 'ಈಗಷ್ಟೇ ಯಾವುದೋ  ಬಸ್ಸು ಬಡಿದು ಬೈಕಿನವನಿಗೆ ಪೆಟ್ಟಾಗಿದೆಯಂತೆ. ಆ ಬಸ್ಸಿನವ ನಿಲ್ಲಿಸದೆ ಹೋಗಿದ್ದಾನಂತೆ. ಯಾವ ಬಸ್ಸು ಅಂತ ತಿಳ್ಕೊಂಡು ಅವ್ರ ಮೇಲೆ ಆಕ್ಷನ್ ತಗೋಳೋದ್ಬಿಟ್ಟು, ಈ ಕಳ್ಳ ನನ್ ಮಕ್ಳು ಸಿಕ್ಕ ಸಿಕ್ಕ ಬಸ್ಸಿಗೆಲ್ಲ ಕಲ್ಲು ಹೊಡೆದು ಡ್ಯಾಮೇಜ್ ಮಾಡ್ತಾ ಇದ್ದಾರೆ' ಎಂದು ಹೇಳಿದ. 
ಈ ಮಧ್ಯೆ ಯಾರದೋ ಫೋನ್ ಪೋಲಿಸ್ ಠಾಣೆಯನ್ನು ಸಂಪರ್ಕಿಸಿತ್ತು. ಪೇಟೆಯಿಂದ  ಎರಡು ಮೂರು ಕಿಲೋ ಮೀಟರ್ ದೂರವಿದ್ದ ಇಲ್ಲಿಗೆ ಧಾವಿಸಿ ಬರುತ್ತಿರುವ ಅವರ ಸೈರನ್ನಿನ ಸದ್ದು ನಮ್ಮನ್ನು ಕೊಂಚ ಸಮಾಧಾನ ಪಡಿಸಿತು. ಬಂದವರೇ ನಮ್ಮನ್ನುದ್ದೇಶಿಸಿ, ಎಲ್ಲಾ ಬೇಗ ಬೇಗ ಪೇಟೆ ಸೇರ್ಕೊಂಡು ಯಾವುದಾದ್ರೂ ಹೋಟೆಲ್ನಲ್ಲೋ ಅಥವಾ ನೆಂಟರ ಮನೆಯಲ್ಲೋ ತಂಗುವ ವ್ಯವಸ್ಥೆ ಮಾಡಿಕೊಳ್ಳಿ. ಪೇಟೆಯ ಇನ್ನೊಂದು ಬದಿಯಲ್ಲೂ ರೋಡ್ ಬ್ಲಾಕ್ ಆಗಿದೆ. ಸಧ್ಯಕ್ಕೆ ನಾಳೆವರೆಗೆ ಕ್ಲಿಯರ್ ಆಗೋ ತರ ಕಾಣಿಸ್ತಿಲ್ಲ ಅಂದರು.

ಪೋಲಿಸ್ ಬಂದ ತಕ್ಷಣ ಕಲ್ಲೆಸೆಯುವುದನ್ನು ನಿಲ್ಲಿಸಿದ ಜನರು ದೊಡ್ದ ಸ್ವರದಲ್ಲಿ ನ್ಯಾಯ ಕೊಡಿಸಿ ಅಂತ ಕಿರುಚತೊಡಗಿದರು. ಅಷ್ಟರಲ್ಲಿ ಇನ್ಯಾರೋ ಕಿಡಿಗೇಡಿಗಳು ಪೋಲೀಸರತ್ತ ಕಲ್ಲು ತೂರಿದರು. ಸಹನೆ ಕಳೆದುಕೊಂಡ ಪೋಲೀಸರು ಲಾಠಿ ಚಾರ್ಜ್ ಮಾಡ ತೊಡಗಿದರು. ನಾವೆಲ್ಲ ಗಾಭರಿಯಿಂದ  ಲಗ್ಗೇಜ್ ಹಿಡಿದುಕೊಂಡು ಹೊರಟೆವು. ಪಕ್ಕದ ಬಸ್ಸಿನ ಜನರೂ ಸಹ ಭಯ ಭೀತರಾಗಿ  ಬಸ್ಸಿನಿಂದಿಳಿದು ನಮ್ಮ ಜೊತೆ ಪೇಟೆಯ ಕಡೆಗೆ ಹೆಜ್ಜೆ ಹಾಕತೊಡಗಿದರು.

ಅವರ ನಡುವೆಯೇ ಅವಳ ಮುಖ ಕಂಡಿದ್ದು.. ಹೆಗಲ ಮೇಲೆ ನಿದ್ದೆ ಮಾಡುತ್ತಿರುವ ಕಂದಮ್ಮ, ಇನ್ನೊಂದು ಕೈಯಲ್ಲಿ ಭಾರದ ಬ್ಯಾಗ್ ಹಿಡಿದು ನಿಧಾನಕ್ಕೆ ಹೆಜ್ಜೆ ಹಾಕುತ್ತಿದ್ದಳು. ನಾನು ಕೂಡಲೇ ಹೋಗಿ ಆ ಬ್ಯಾಗ್ ಹಿಡಿದುಕೊಳ್ಳೋಣವೆಂದುಕೊಂಡೆ. ಅಷ್ಟರಲ್ಲೇ ಯಾರೋ ಯುವಕನೊಬ್ಬ 'ಕೊಡಿ ಇತ್ಲಾಗಿ ಬ್ಯಾಗ್, ನೀವು ನಡೀರಿ, ನಾನು ಹಿಡ್ಕೊಳ್ತೀನಿ' ಎಂದು ಅದನ್ನು ಎತ್ತಿ ಅನಾಮತ್ತಾಗಿ ತನ್ನ ಹೆಗಲಿಗೇರಿಸಿಕೊಂಡ. 
ಆ ಕ್ಷಣದಲ್ಲೇ ಅವಳ ಕಣ್ಣುಗಳು ನನ್ನ ಕಣ್ಣುಗಳನ್ನು ಸೇರಿದ್ದು. ಅದರ ತೀಕ್ಷ್ಣತೆಗೆ   ನನ್ನೊಳಗೊಮ್ಮೆ ಮಿಂಚು  ಸುಳಿದಂತಾಯಿತು. ಅಷ್ಟೇ.. ಅವಳು ಎಚ್ಚರಗೊಳ್ಳುತ್ತಿರುವ ಮಗುವಿನ ಬೆನ್ನು ತಟ್ಟುತ್ತಾ ಅದನ್ನು ಸಮಾಧಾನಗೊಳಿಸುತ್ತಾ ಮುಂದೆ ಹೆಜ್ಜೆ ಹಾಕಲಾರಂಭಿಸಿದಳು. 

ಬೇಗ ಹೋಗದಿದ್ದರೆ ಹೋಟೆಲಿನಲ್ಲಿ ರೂಂ ಸಿಗದಿದ್ದರೆ ಎಂಬ  ಮುಂದಾಲೋಚನೆಯಿಂದ  ನನ್ನ ನಡಿಗೆ ಚುರುಕುಗೊಳಿಸಿದೆ. ಮೊದಲು ಕಾಣ ಸಿಕ್ಕಿದ  ಹೋಟೆಲ್‌ವೊಂದರ ಕೌಂಟರಿನಲ್ಲಿ ಹಣ ಕಟ್ಟಿ ರೂಮ್ ಪಡೆದೆ. ಜೋಡಿ ಮಂಚಗಳಿದ್ದ ರೂಮಿನೊಳಗೆ ಅತ್ತಿತ್ತ ಸರಿದಾಡಲು ಸ್ವಲ್ಪ ಜಾಗವಿತ್ತಷ್ಟೆ. ಮೇಲೆ ಧೂಳು ಹಿಡಿದ ಸೀಲಿಂಗ್ ಫ್ಯಾನ್ ಒಂದು ನೇತಾಡುತ್ತಿತ್ತು. ಮೂಲೆಯಲ್ಲಿ ಪುಟ್ಟ ಕನ್ನಡಿ ಹೊತ್ತಿದ್ದ ಡ್ರೆಸ್ಸಿಂಗ್ ಟೇಬಲ್. ಕನ್ನಡಿಯ ಮೇಲೆಲ್ಲಾ ಯಾರೋ ಅಂಟಿಸಿ ಮರೆತಿದ್ದ ಬಿಂದಿಗಳು. ಅದರ ನೇರಕ್ಕೆ ಇಕ್ಕಟ್ಟಾದ ಒಂದು ಬಾತ್ ರೂಮ್. ನನ್ನಂತೆ ಬೇಗ ಬಂದ  ಕೆಲವು ಪ್ರಯಾಣಿಕರಿಗೆ ಇಷ್ಟಾದರು ಸಿಕ್ಕಿದ್ದು ನಸೀಬು. ಹೋಟೇಲಿನವರಾಗಲೇ 'ನೋ ರೂಮ್ಸ್" ಎಂದು ಬೋರ್ಡ್  ಹಾಕಿದ್ದರು. ಆದರೂ ಕೆಲವರು ದೊಡ್ಡ ಸ್ವರದಲ್ಲಿ ತಗಾದೆ ತೆಗೆಯುತ್ತಿದ್ದದ್ದು ಕೇಳಿ ಬರುತ್ತಿತ್ತು. ಉಳಿದವರು ವೈಟಿಂಗ್ ಹಾಲ್ ನಲ್ಲಿ ಲಗ್ಗೇಜು ಹರಡಿಕೊಂಡು ಕೂತಿದ್ದರು. ಒಳಗಿದ್ದ ಕಿಟಕಿಯನ್ನು ಹೊರಗಿನ ಹೊಸ ಗಾಳಿಗೆ ತೆರೆದು ಬಾಗಿಲ ಬಳಿ ಬಂದು ಯಾರನ್ನೊ ಕಾಯುವವರಂತೆ ಸುಮ್ಮನೆ ನಿಂತುಕೊಂಡೆ. 

ಮಗುವನ್ನೆತ್ತಿಕೊಂಡು ಕಾಲ ಬಳಿ ಲಗೇಜ್ ಇರಿಸಿ, ಹುಡುಕುವ ನೋಟ ಬೀರುತ್ತಿದ್ದ ಅವಳು ನನ್ನನ್ನು ಕಂಡೊಡನೇ ಹತ್ತಿರ ಬಂದಳು. ನನ್ನ ಮೌನವನ್ನೇ ಸಮ್ಮತಿ ಎಂದುಕೊಂಡಳೇನೋ .. ಒಳ ನುಗ್ಗಿ ಮಗುವನ್ನೆತ್ತಿ ಮಂಚದ ಮೇಲೆ ಮಲಗಿಸಿದಳು. ಅಮ್ಮನ ಬೆಚ್ಚನೆಯ ಆಸರೆ ತಪ್ಪಿದ ಅನುಭವಕ್ಕೆ  ಮಗು ಅಳಲು ಪ್ರಾರಂಭಿಸಿತು. ಕೂಡಲೇ ಅವಳು ಹಾಸಿಗೆಯ ಮೇಲೊರಗಿ ಮಗುವನ್ನು ಅವುಚಿಕೊಂಡಳು. 

ಆಚೆ ಸುಳಿದಾಡುತ್ತಿದ್ದ ರೂಮ್ ಬಾಯ್‌ಗೆ ಎರಡು ಊಟ ಎಂದೆ. ಸಮ್ಮತಿಯೆಂಬಂತೆ ತಲೆಯಾಡಿಸಿದ ಅವನು ಅವಳೆಡೆಗೊಂದು ಕುತೂಹಲದ ನೋಟ ಬೀರಿ,ಉಳಿದವರ ಆರ್ಡರ್ ತೆಗೆದುಕೊಳ್ಳಲು ಮುಂದೆ ಹೋದ. 
ಆಗೊಮ್ಮೆ ಈಗೊಮ್ಮೆ ನಿದ್ದೆಯಲ್ಲಿದ್ದ ಮಗುವಿನ ಕುಸು ಕುಸು ಅಳು ಬಿಟ್ಟರೆ ನಮ್ಮ ನಡುವೆ ಮೌನದ  ಪರದೆ ಹರಡಿತ್ತು. ಊಟ ಮುಗಿಸಿ ಕೈ ತೊಳೆದು ಸುಮ್ಮನೆ ಕಿಟಕಿಯ ಹೊರಗಿಣುಕುತ್ತಾ ನಿಂತೆ. ಎಷ್ಟು ಹೊತ್ತು ನಿಂತಿದ್ದೆನೇನೋ.. ದೂರದಲ್ಲಿ ಪೇಟೆಯ ದೀಪಗಳು ಒಂದೊಂದಾಗಿ ಆರಿ ನಿದ್ರೆ ಎಲ್ಲರನ್ನೂ ತನ್ನ ತೆಕ್ಕೆಗೆಳೆದುಕೊಳ್ಳುತ್ತಿರುವಂತೆ ಕಂಡಿತು. ಮೆತ್ತಗೆ ತಿರುಗಿ ನೋಡಿದರೆ ಅವಳು ಮಗುವನ್ನಪ್ಪಿ ನಿದ್ದೆ ಹೋಗಿದ್ದಳು. ಮೇಲೆ ಕಿರ ಕಿರ ಸದ್ದು ಮಾಡುತ್ತಾ ಸುತ್ತುತ್ತಿದ್ದ ಫ್ಯಾನಿನ ಗಾಳಿಗೆ ಅವಳ ಮುಂಗುರುಳುಗಳು ಗಲ್ಲಕ್ಕೆ ಕಚುಗುಳಿಡುತ್ತಿರುವುದನ್ನು ನೋಡುತ್ತಾ ನಿಂತೆ. 
ಅವಳಿಗೆ ಗೊತ್ತಾಯಿತೇನೋ! ಭಾರವಾಗಿದ್ದ ರೆಪ್ಪೆಗಳನ್ನು ತೆರೆದು 'ಸ್ವಲ್ಪ ಕಿಟಕಿ ಮುಚ್ತೀರಾ ಪ್ಲೀಸ್.. ಸೊಳ್ಳೆ ಕಚ್ಚಿದರೆ ಮಗು ಆಗಾಗ ಏಳುತ್ತೆ ಅಂದಳು. ಮಾತಿಲ್ಲದೆ ಕಿಟಕಿ ಭದ್ರ ಪಡಿಸಿ ಹಿಂದೆ  ತಿರುಗಿ ನೋಡಿದೆ. ' ಇಲ್ಲೇ ಮಲಗಿ' ಎಂದು ಮಂಚದ  ಖಾಲಿ ಜಾಗದೆಡೆಗೆ  ಕೈ ತೋರಿಸಿದಳು. ಸುಮ್ಮನೆ ಮಲಗಿದೆ. ಮಲಗಿದ್ದ ಮಗು ನನ್ನ ಕಡೆಗೆ ಹೊರಳಿ ಅಪ್ಪಿಕೊಂಡಿತು. ಮಗುವನ್ನು ತಟ್ಟುತ್ತಿದ್ದ ಅವಳ ಕೈಗಳು ನನ್ನನ್ನು ಸ್ಪರ್ಷಿಸಿದವು. 
ಹಿಂತೆಗೆಯುವಳೇನೋ ಎಂದುಕೊಂಡೆ.. ಉಹೂಂ.. ನಾನಂತೂ ಆ ಸ್ಪರ್ಷವನ್ನೇ ಬಯಸಿದವನಂತೆ ಇನ್ನಷ್ಟು ಹತ್ತಿರವಾದೆ. 

ಬೆಳಗಿನ ಕಿರಣಗಳು ಮುಚ್ಚಿದ ಕಿಟಕಿಯ ಗಾಜಿನೊಳಗೆ ತೂರಿ ನನ್ನನ್ನೆಬ್ಬಿಸಿದವು. ಮಗು ಗೋಡೆಯ ಬದಿಯಲ್ಲಿ ಹಾಯಾಗಿ ಮಲಗಿದ್ದರೆ, ಅವಳು ನನ್ನ ತೋಳ್ತೆಕ್ಕೆಯಲ್ಲಿದ್ದಳು. ಮೆಲ್ಲನೆ  ಏಳುವ ನನ್ನ ಪ್ರಯತ್ನ ಅವಳನ್ನೂ  ಎಚ್ಚರಗೊಳಿಸಿತು. ಒಮ್ಮೆಲೇ ನಾಚಿಕೆಯಿಂದ  ಕೆಂಪಡರಿ ' ನೀವು ಬರೀ ಕೆಟ್ಟವರು' ಎಂದು ನನ್ನ ಎದೆಗೆ ಗುದ್ದಿದಳು. 
ಆ ಕೈಯನ್ನು ಅಲ್ಲಿಗೇ ಒತ್ತಿಕೊಂಡು ' ಅದೇನಪ್ಪ ಅಂತಹ ಕೆಟ್ಟತನ ಈಗ ಕಂಡಿದ್ದು ನನ್ನಲ್ಲಿ' ಎಂದೆ ನಗುತ್ತಾ.. 

ಮತ್ತೇನು.. ನಾನು ಇನ್ನೊಂದು ನಾಲ್ಕು ದಿನ  ತವರಲ್ಲಿ ಇದ್ದು ಬರ್ತೀನಿ ಅಂದಿದ್ದಕ್ಕೆ ಎಷ್ಟೋಂದು ಕೋಪ ನಿಮ್ಗೆ.. ಯಾವತ್ತೂ ಮಾತಾಡಲ್ಲ ಅಂತ ಬೇರೆ ಚಾಲೆಂಜ್ ಮಾಡ್ತೀರ?  ಅದಕ್ಕೆ ಎರಡು ದಿನ ಮುಂಚಿತವಾಗಿ ಬಂದು ನಿಮ್ಮನ್ನು ಸರ್‌ಪ್ರೈಸ್ ಮಾಡೋಣ ಅಂತ  ಹೊರಟಿದ್ದೆ' ಅಂದಳು. 

 'ನಿನ್ನನ್ನು ಬಿಟ್ಟು ಯಾರಿರ್ತಾರೆ? ನಾನೂ ಕೂಡಾ  ನಿನ್ನನ್ನು ಕರ್ಕೊಂಡು ಹೋಗೋದಕ್ಕೆ ಅಂತಾನೆ ನಿಮ್ಮಪ್ಪನ ಮನೆ ಕಡೆ ಹೊರಟಿದ್ದೆ ಚೆಲುವೇ..'ಎಂದವಳ ದುಂಡು ಕೆನ್ನೆ ಹಿಂಡಿದೆ.

ನಿದ್ರೆ ತಿಳಿದೆದ್ದ ಕಂದಮ್ಮ,ಹೊಳೆವ ಕಂಗಳಿಂದ  ನನ್ನನ್ನು ದಿಟ್ಟಿಸಿ ನೋಡಿ, ತೊದಲು ನುಡಿಯಲ್ಲಿ 'ಅಪ್ಪಾ ..' ಎಂದಿತು.


14 comments:

 1. ಒಂದು ಪ್ರಯಾಣದ ಅನುಭವವದ ಕಥೆಯನ್ನು ನೀಡುವ ಬದುಕಿನ ಚಿತ್ರಣದಲ್ಲಿ ಮನದ ನವಿರಾದ ಭಾವನೆಗಳು ಓದುತಿದ್ದಂತೆಲ್ಲಾ ಮುದ ನೀಡುತ್ತಾ ಸಾಗುವ ಒಂದು ಉತ್ತಮ ಬರಹ.

  -ವೀರಣ್ಣ ಮಂಠಾಳಕರ್

  ReplyDelete
 2. ಚೆನ್ನಾಗಿ ಹೊಸೆದ ಕಥೆ...ನೀನು ಕಥೆಗಳನ್ನು ಹೆಕ್ಕಿ ತೆಗೆಯುವ ರೀತಿ ಅಚ್ಚರಿ ಮೂಡಿಸುತ್ತದೆ. ಕಥೆ ಚೆನ್ನಾಗಿ ಓದಿಸಿಕೊಂಡು ಹೋಯಿತು..
  Happy weekend Anitha :)

  ReplyDelete
 3. woy maaraayre sakhath punch koneyalli...kootuhala huTTisida kate!!!mastercraftman birudu nimage..
  :-)
  malathi S

  ReplyDelete
 4. ಸೊಗಸಾಗಿದೆ ನಿರೂಪಣೆ. ಕಡೆಯವರೆಗೂ ಒಂದು ಸುಸ್ಪೆನ್ಸೆ ತುಂಬಿಕೊಂಡೆ ನಿರೂಪಿಸುವ ನಿಮ್ಮ ಶೈಲಿ ಅದ್ಭುತ.

  ReplyDelete
  Replies
  1. ಸೊಗಸಾದ ಸಣ್ಣ ಕಥೆ, ಇಷ್ಟ ಆಯ್ತು ಅನಿತ :) ನಿರೂಪಣೆ ತುಂಬ ಚೆನ್ನಾಗಿದೆ .

   Delete
  2. ನಿಮ್ಮ ಕಥೆಗಳಲ್ಲಿ ಕುತೂಹಲಕಾರಿ ಅಂತ್ಯ ಇದ್ದೇ ಇರತ್ತೆ .. ಒಬ್ಬ ಅಪರಿಚಿತನ ಪಕ್ಕದಲ್ಲಿ ಮಲಗುವ ಧೈರ್ಯ ಮಾಡಲಾರಳು ..ಆ ಘಟ್ಟದಲ್ಲಿ ಸ್ವಲ್ಪ ಗುಟ್ಟು ರಟ್ಟಾಗುತ್ತದೆ!! ಓದಿಸಿಕೊಂಡು ಹೋಗುವ ನವಿರಾದ ರೋಮಾಂಟಿಕ್ ಎಳೆ ಇರುವ ಕಥೆ
   ಅಭಿನಂದನೆಗಳು .

   Delete
 5. Tv 9 heegoo oonte stlynalli kathe ide! suspense, ending with new matter Good

  ReplyDelete
 6. ಅದ್ಭುತ ರಚನೆ.....congrats

  ReplyDelete
 7. ನಿಮ್ಮ ಕಥನ ಶೈಲಿಯ ಮತ್ತೊಂದು ಅದ್ಭುತ ಉದಾಹರಣೆ ಈ ಕಥೆ. ಕ್ಲೈಮ್ಯಾಕ್ಸಿನವರೆಗೂ ಕುತೂಹಲವನ್ನು ಕಾಯ್ದಿಟ್ಟು ಕಡೆಗೆ ಓದುಗನಿಗೆ ಒಂದು ತಿರುವುಕೊಡುವುದು ನಿಮ್ಮ ಪದ್ಧತಿ. ಒಳ್ಳೆಯ ಕುತೂಹಲ ಪೇರಿಸುವ ಕಥೆಗಾರ್ತಿ ನೀವು.

  ReplyDelete
 8. ನಿಮ್ಮ ಲೇಖನದಲ್ಲಿ ಎರಡು ರೀತಿಯ ಘಟನಾವಳಿಗಳ ತಂದು ನಿಲ್ಲಿಸಿದ್ದೀರಾ... ನಮ್ಮ ನಡುವೆ ನಡೆಯುವ ತಾಳ್ಮೆ ಕಳೆದುಕೊಂಡ ವಿಕೃತ ಮನಸ್ಸುಗಳ ಯಾವ ರೀತಿ ನಡೆದುಕೊಳ್ಳುತ್ತಾರೆ ಎನ್ನುವುದನ್ನು ತೋರಿಸಿದ್ದೀರಾ... ಇನ್ನೊಂದು ಮಾನವೀಯ ಸಂಬಂಧಗಳು ಬಿಟ್ಟಿರಲಾಗದಷ್ಟು ಗಟ್ಟಿಯಾಗುವುದನ್ನು ತೋರಿಸಿದ್ದೀರಾ ನಿಜಕ್ಕೂ ಇದು ನಮ್ಮನ್ನು ನಾವು ಅರಿಯುವುದಕ್ಕೆ ಕೈಗನ್ನಡಿಯಂತಿತ್ತು ನಿಮ್ಮ ಲೇಖನ, ಏನೇ ಆದರೂ ನಿಮ್ಮ ಲೇಖನ ಸಮಾಜಕ್ಕೆ ಏನಾದರೂ ಒಂದು ಸಂದೇಶ ಕೊಡುವಲ್ಲಿ ಯಶಸ್ವಿಯಾಗುತ್ತದೆ... ಹೀಗೆ ಇರಲಿ ಸಮಾಜಮುಖಿ ಬರಹಗಳು.

  ReplyDelete
 9. ಚೌಚೌ, ಹುರಿಗಾಳು, ಚಿಪ್ಸ್, ಈ ನಿಮ್ಮ ಸಣ್ಣಕಥೆ ಸವಿಯಲು, ಕೊಂಚ ಹೊತ್ತು ಮೆಲುಕು ಹಾಕಲು ಚೆನ್ನ. ಭಾವನೆಗಳೆಂಬ ಹಲ್ಲುಸಂದಿಗಳಲ್ಲಿ ಈ ಕಥೆ ಆಹಾರದ ತುಣುಕಾಗಿ ಸೇರಿ ಹಿತವಾಗಿ ಕಾಡಿದರೂ ಅಚ್ಚರಿಯಲ್ಲ

  ReplyDelete
 10. ಒಳ್ಳೆ ಸೆಮಿ ರೊಮ್ಯಾಂಟಿಕ್... ಸತ್ಯಕ್ಕೂ ಕೊನೆಯನ್ನು ಊಹಿಸಿ ಬಿಟ್ಟೆ :-)

  ReplyDelete
 11. Thumbaa olleya kathe, achhariyondige antyagolluva kathe odugarannu gelluvalli yashsviyaaguttade.

  ReplyDelete
 12. tumbaa channaagide anitakka....:) ella kategalalloo ondu vichitravaada tiruvu iTTirutteeri...bahala ishtavaayitu...

  ReplyDelete