ದೂರದ ಕಾಲೇಜು ಎಂದ ಮೇಲೆ ಉಳಿದುಕೊಳ್ಳಲು ವ್ಯವಸ್ಥೆ ಬೇಡವೇ..?ನನ್ನ ಲಗೇಜ್ ಸಮೇತ ಬಂದಿಳಿದದ್ದು ಮೆಸ್ ಗೆ. ಹೆಸರಾಂತ ಕಾಲೇಜ್ ಆದ ಕಾರಣ ಅದರ ಸುತ್ತ ಮುತ್ತಲಿದ್ದ ಮನೆಯವರಿಗೆ ಇದೊಂದು ಲಾಭದಾಯಕ ಉದ್ಯೋಗವೇ ಆಗಿತ್ತು. ಮನೆಯಂತೆಯೇ ಇದ್ದ ಮೆಸ್ ಜೈಲಿನ ಸೆಲ್ಲುಗಳಂತಹ ಹಾಸ್ಟೆಲ್ ರೂಮುಗಳನ್ನು ನೆನಪಿಸುತ್ತಿರಲಿಲ್ಲ. ಹಾಸ್ಟೆಲ್ಲಿನ ಎಲ್ಲಾ ಸವಲತ್ತುಗಳನ್ನು ಹೊಂದಿದ್ದರೂ, ಅಲ್ಲಿನಂತೆ ವಾರ್ಡನ್ ನ ಹೆದರಿಕೆ ಇರಲಿಲ್ಲ.ಮೆಸ್ಸಿನಲ್ಲಿದ್ದವರನ್ನು ಮೇಡಂ ಎನ್ನದೆ ಆಂಟೀ ಎಂದು ಕರೆದು ಪೂಸಿ ಹೊಡೆಯುವ ಸೌಭಾಗ್ಯವನ್ನು ಹೊಂದಿದ್ದೆವು.
ಹುಡುಗಿಯರ ಮೆಸ್ ಎಂದ ಮೇಲೆ ಕೇಳಬೇಕೆ.. ಸದಾ ಮಾತು ಮಾತು ಮಾತು..ಎಂದೂ ಮುಗಿಯದ ಮಾತಿನ ಪ್ರಪಂಚ ನಮ್ಮದು. ಆಗೆಲ್ಲ ಆಂಟೀ ತಾಳುವಷ್ಟು ತಾಳಿ ನಂತರ ಬಯ್ಯುತ್ತಿದ್ದರು. ' ನೀವೆಂತ ಕಾಲೇಜಿಗೆ ಸೇರಿದ್ದು ಮಾತಾಡ್ಲಿಕ್ಕಾ.. ನಿಮ್ಮ ಪುಸ್ತಕಕ್ಕೆಲ್ಲ ಫಂಗಸ್ ಬಂದಿದೆ ನೋಡಿ. ನನ್ನ ಗ್ರಾಚಾರಕ್ಕೆ ನೀವು ಫೈಲ್ ಆದ್ರೆ ಬರುವ ವರ್ಷ ಒಂದಾದ್ರು ಮಕ್ಕಳು ನನ್ನ ಮನೆಗೆ ಬರ್ಲಿಕ್ಕುಂಟಾ.. ನೀವು ಹೀಗೆ ಮಾಡಿದ್ರೆ ನಾನು ಉಪವಾಸ ಬೀಳ್ಬೇಕಷ್ಟೆ.. ನನ್ನ ಕರ್ಮ ನೀವು ಒಳ್ಳೇ ಮಕ್ಕಳು ಅಂತಲ್ವಾ ನಾನು ಸೇರಿಸಿಕೊಂಡದ್ದು.. ನೀವು ಹೀಗೆ ಮಾತಾಡುವುದಾ..' ಎಂದು ತಮ್ಮ ಭಯವನ್ನು ಹೊರ ಹಾಕಿ ನಮ್ಮನ್ನೂ ಹೆದರಿಸುತ್ತಿದ್ದರು.
ಒಂದೆರಡು ದಿನ ಇಂಟೆನ್ಸಿವ್ ಕೇರ್ ನಲ್ಲಿರುವ ಪೇಶಂಟಿನಷ್ಟು ಸೀರಿಯಸ್ಸು ಮುಖ ಹೊತ್ತು ಪುಸ್ತಕದೊಳಗೆ ಮುಳುಗುತ್ತಿದ್ದೆವು. ಮತ್ತೆ ನಾಯಿ ಬಾಲ ಡೊಂಕಾಗುತ್ತಿತ್ತು.ನಮ್ಮ ಈ ದಿನಚರಿಗೆ ಇನ್ನಷ್ಟು ರಂಗು ಬಂದಿದ್ದು ಹೊಸ ಹುಡುಗಿಯೊಬ್ಬಳು ಬೊಂಬಾಯಿಯಿಂದ ಎಂಟ್ರಿ ಕೊಟ್ಟಾಗ.
ಆದಿತ್ಯವಾರದ ರಜಾ ದಿನವದು.ಎಂದಿನಂತೆ ಓದುವ ನೆಪದಲ್ಲಿ ಪಿಸಿ ಪಿಸಿ ಹರಟುತ್ತಿದ್ದೆವು. ಹೊರಗಿನ ಬಾಗಿಲು ಬಡಿಯಿತು . ಬಾಗಿಲ ಪಕ್ಕದಲ್ಲೇ ಕುಳಿತಿದ್ದ ನಾನು ಅಂದಿನ ಓದಿಗೆ ಆದ ಸುಖಾಂತದಿಂದಾಗಿ ಸಂತೋಷದಿಂದ ಎದ್ದು ಬಾಗಿಲು ತೆರೆದೆ.ಹೊರಗೆ ಒಬ್ಬಳು ನಮ್ಮದೇ ವಯಸ್ಸಿನ ಹುಡುಗಿ, ಅವಳ ಜೊತೆಯಲ್ಲಿ ಅವಳ ಅಪ್ಪ ಅಮ್ಮ ಆಗಿರಬಹುದು ಎಂದು ನಾನಂದುಕೊಂಡ ಮತ್ತಿಬ್ಬರು ನಡು ವಯಸ್ಕರು. ಅವರು ಹಿಂದಿಯಲ್ಲಿ 'ಮಾಜೀ ಹೆ ಕ್ಯಾ.. ?' ಎಂದರು. ಹಿಂದಿಯನ್ನು ಹೈಸ್ಕೂಲಿನಲ್ಲಿರುವಾಗ ಬಾಯಿ ಪಾಠ ಮಾಡಿ ಹೇಗೋ ಕಷ್ಟಪಟ್ಟು ಫಸ್ಟ್ ಕ್ಲಾಸಿನ ಹೊಸಿಲೊಳಗೆ ಬಲವಂತವಾಗಿ ಅದನ್ನೆಳೆದು ತಂದ ಸಾಹಸಿ ನಾನು. ಕಸ್ತೂರಿ ಕನ್ನಡ ಮಾತ್ರ ಮಾತನಾಡುತ್ತಿದ್ದ ನನಗೆ ,ಹಿಂದಿಯಲ್ಲಿ ಮಾತನಾಡುವುದೆಂದರೆ ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತೆಯೇ ಸರಿ.ಸಹಾಯಕ್ಕಾಗಿ ಗೆಳತಿಯರ ಮುಖ ನೋಡಿದರೆ ಸರಿ ಸುಮಾರು ನನ್ನಷ್ಟೇ ಭಾಷಾಪಾಂಡಿತ್ಯ ಹೊಂದಿದ ಅವರು ಪುಸ್ತಕದೊಳಗೆ ತಮ್ಮ ಮಸ್ತಕ ತೂರಿಸಿ ಗಂಭೀರರಾಗಿದ್ದಾರೆ. ನಾನೇ ಧೈರ್ಯ ತಂದುಕೊಂಡು 'ಆಯಿಯೇ.. ಬೈಟಿಯೇ..' ಎಂದು,ಮರುಕ್ಷಣದಲ್ಲಿ 'ಆಂಟೀ' ಎಂದು ಕೂಗುತ್ತಾ ಅಲ್ಲಿಂದ ಕಾಲು ತೆಗೆದೆ. ಅವರ ಮತ್ತುಳಿದ ಸಂಭಾಷಣೆಗಳೆಲ್ಲಾ ಅವರ ಮಾತೃಭಾಷೆ ಕೊಂಕಣಿಯಲ್ಲೇ ಮುಂದುವರಿದು ಆ ಹುಡುಗಿ ನಮ್ಮ ಮೆಸ್ಸಿನ ಹೊಸ ಸದಸ್ಯಳಾದಳು. ಅವಳ ಅಮ್ಮ ಅವಳನ್ನು ಬಿಟ್ಟು ಅಳುತ್ತಾ ಹೊರನಡೆದರೆ, ಅವರು ಹೊರ ನಡೆದ ತಕ್ಷಣ ಅವಳು ತನ್ನ ಲಗೇಜಿನ ಮೇಲೆಯೇ ಬೋರಲು ಬಿದ್ದು ಅಳತೊಡಗಿದಳು. ಇದೆಲ್ಲಾ ಮಾಮೂಲಿ ಎಂಬಂತೆ ಆಂಟೀ ತಮ್ಮ ಕೆಲಸ ನೆನಪಿಸಿಕೊಂಡು ಒಳಗೆ ಹೋದರು.ನಮಗೆ ಅವಳನ್ನು ಸುಮ್ಮನೆ ಬಿಡಲಾದೀತೇ.. ಎಷ್ಟೆಂದರು ಅವಳು ನಮ್ಮಂತೆ ದೂರದೂರಿಂದ ಬಂದವಳಲ್ಲವೇ..? ಆದರೆ ನಮ್ಮೊಳಗೆ ಗಡಿ ಸಮಸ್ಯೆಯಂತೆ ಭಾಷಾ ಸಮಸ್ಯೆ ಇತ್ತು. ಹಾಗಾಗಿ ನಾವು ಅವಳನ್ನು ಯಾವ ಭಾಷೆಯಲ್ಲಿ ಸಮಾಧಾನಿಸುವುದು ಎಂದು ತಲೆಕೆಡಿಸಿಕೊಳ್ಳತೊಡಗಿದೆವು. ಇದ್ದ ಹದಿನಾಲ್ಕು ಮಂದಿಯೂ ಆಲೋಚಿಸಿ ಅವಳಿಗೆ ಅರ್ಥವಾಗುವ ಹಿಂದಿಯಲ್ಲಿಯೇ ಒಂದೆರಡು ವಾಕ್ಯ ರಚಿಸಿದೆವು. ಅದನ್ನು ಉರು ಹೊಡೆಯಲು ಸಮಯವಿಲ್ಲದ್ದುದರಿಂದ ಹಾಳೆಯೊಂದರಲ್ಲಿ ಬರೆದುಕೊಂಡು ದೊಡ್ಡದಾಗಿ ಓದಿ ಹೇಳಿದೆವು. ಅವಳು ನಮ್ಮ ಈ ಪಚೀತಿಗಳನ್ನು ನೋಡುತ್ತಾ ಆಳುತ್ತಿದ್ದವಳು ಬಿದ್ದು ಬಿದ್ದು ನಗತೊಡಗಿದಳು.
ಸಧ್ಯದ ಪರಿಸ್ಥಿತಿ ಸುಧಾರಿಸಿದರೂ ಇನ್ನು ವರ್ಷ ಪೂರ್ತಿ ಅವಳ ಜೊತೆ ಏಗಬೇಕಲ್ಲ ಎಂಬುದೇ ನಮ್ಮ ಚಿಂತೆ. ಈಗ ಅಚ್ಛ ಕನ್ನಡದ ಹುಚ್ಚು ಕಂದಮ್ಮಗಳಾದ ನಾವು ಅವಳಿಗೆ ಕನ್ನಡ ಕಲಿಸುವ ಬಗ್ಗೆ ಆಲೋಚಿಸುವ ಬದಲು ನಾವೆಲ್ಲ ಹಿಂದಿ ಕಲಿಯಲು ಉತ್ಸುಕರಾದೆವು. ಈ ರಾಷ್ಟ್ರ ಭಾಷೆ ಎಂಬ ಕಬ್ಬಿಣದ ಕಡಲೆ ನಮ್ಮೆಲ್ಲರ ಬಾಯಲ್ಲೂ ತುಂಬಿಕೊಂಡಿತು.
ನಮ್ಮೆದುರಿಗಿದ್ದ ಏಕಮಾತ್ರ ಉಪಾಯವೆಂದರೆ ಏಕಲವ್ಯರಾಗುವುದು. ನಮ್ಮ ಗುರು ದ್ರೋಣಾಚಾರ್ಯರು ನಮ್ಮೆದುರು ನ್ಯಾಷನಲ್ ಟಿ ವಿ ಯ ರೂಪದಲ್ಲಿ ಕಾಣತೊಡಗಿದರು. ಕುಳಿತಲ್ಲಿ ನಿಂತಲ್ಲಿ ನಮ್ಮ ಶಬ್ಧವೇದಿ ಬಾಣಗಳು ಯಾರ್ಯಾರಿಗೋ ತಗಲತೊಡಗಿದವು.ಆಗ ಟಿ ವಿ ಯಲ್ಲಿ ಬರುತ್ತಿದ್ದ ರಾಮಾಯಣ ಸೀರಿಯಲ್ಲಿನಿಂದ ಪ್ರೇರಣೆ ಹೊಂದಿ ಮಾತಾಶ್ರೀ, ಪಿತಾಶ್ರೀ ಗಳಂತೆ ಎಲ್ಲರ ಹೆಸರಿನ ಮುಂದೆ ಶ್ರೀಗಳನ್ನು ಹಚ್ಚಿ ಅವರನ್ನು ಧನ್ಯರಾಗಿಸಿದೆವು.
ನಮ್ಮ ಗೆಳತಿಯೂ ಈಗ ನಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಅವಳ ಹಿಂದಿಯನ್ನು ಕುಲಗೆಡಿಸಿ ನಮ್ಮ ಲೆವೆಲ್ಲಿನಲ್ಲೇ ಮಾತನಾಡತೊಡಗಿದಳು.
' ಪಾನೀ ಕಾಯ್ತಾ ಇದೆ ಜಲ್ದಿ ನಹಾಕೆ ಬಾ..' ಎಂದರೆ ಎದ್ದು ಸ್ನಾನದ ಮನೆಗೆ ಹೋಗುವಷ್ಟು ಬುದ್ಧಿವಂತಳಾದಳು. ನಾವುಗಳು ಇದೇ ಲೆವೆಲ್ಲಿನಲ್ಲಿ ಉಳಿದುಬಿಡುತ್ತಿದ್ದೆವೇನೋ ಆ ಮಹಾಗುರುವಿನ ಎಂಟ್ರಿ ಆಗದಿರುತ್ತಿದ್ದರೆ ...
ನಮ್ಮ ಮೆಸ್ಸಿನಲ್ಲಿ ಒಂದು ಪೀಚಲು ಶರೀರಿ ನಾಯಿ ಇತ್ತು.ಅದು ಬ್ಯಾಂಕ್ ಮೆನೇಜರರೊಬ್ಬರ ನಾಯಿಯೆಂದೂ, ಅವರು ಟ್ರಾನ್ಸ್ಪರ್ ಆಗಿ ಹೋಗುವಾಗ ನಾಯಿಯನ್ನು ಅನಾಥವಾಗಿ ಇಲ್ಲಿಯೇ ಬಿಟ್ಟು ಹೋಗಿದ್ದರು ಎಂಬ ಇತಿಹಾಸ ಹೊತ್ತ ನಾಯಿ ಅದಾದ ಕಾರಣ ನಮ್ಮೆಲ್ಲರ ಕರುಣೆಗೂ ಅದು ಪಾತ್ರವಾಗಿತ್ತು.ಮತ್ತು ಇಲ್ಲಿ ನಿತ್ಯ ಆಹಾರ ಸಿಗುತ್ತಿದ್ದುದರಿಂದ ಅದು ಇಲ್ಲಿಯೇ ಅತ್ತಿತ್ತ ಸುಳಿಯುತ್ತಾ ಇದ್ದುದರಿಂದಾಗಿ ಇಲ್ಲಿಯದೇ ನಾಯಿ ಎಂಬಂತಾಗಿತ್ತು. ಅದಕ್ಕೆ ಅದರ ಪಾಲಿನ ಆಹಾರವಲ್ಲದೇ ನಮ್ಮೆಲ್ಲರ ಉಳಿಕೆಯ ಆಹಾರವನ್ನು ಹಾಕುತ್ತಿದ್ದೆವು. ಅದು ಎಲ್ಲವನ್ನೂ ಗಬ ಗಬನೆ ನುಂಗಿ ಮತ್ತೆ ನಮ್ಮನ್ನು ನೋಡಿ ಬೊಗಳುತ್ತಿತ್ತು. ನಾವೆಷ್ಟೇ ಬೆಣ್ಣೆ ಹಚ್ಚಿ ದೋಸೆ ತಿನ್ನಿಸಿದರೂ ಅದು ನಮ್ಮನ್ನು ನೋಡಿ ಗುರ್ ರ್ರ್.. ಅನ್ನುತ್ತಲೇ ಇತ್ತು.ಅಷ್ಟೇಕೆ ಮೆಸ್ಸಿನ ಆಂಟಿಯನ್ನು ನೋಡಿಯೂ ಆಗೀಗ ಬೊಗಳಿ ಗದ್ದಲವೆಬ್ಬಿಸುತ್ತಿತ್ತು. ನಾವ್ಯಾರೂ ಆ ನಾಯಿ ಬಾಲ ಅಲ್ಲಾಡಿಸುವುದನ್ನೇ ನೋಡಿರಲಿಲ್ಲ. ಒಮ್ಮೊಮ್ಮೆ ಬಯ್ಯುವವರು ಯಾರೂ ಕಾಣಿಸದೇ ಇದ್ದರೆ ಮನೆಯ ಒಳಗೆ ನುಗ್ಗಿ ಬರುತ್ತಿತ್ತು.ಅದಕ್ಕೆ ತಂಟೆ ಮಾಡಿದರೆ ಹೊಡೆಯಲೆಂದೇ ಆಂಟೀ ಒನಕೆಯಿಂದ ಸ್ವಲ್ಪ ಕಡಿಮೆ ದಪ್ಪದ ಕೋಲೊಂದನ್ನು ತಂದಿರಿಸಿದ್ದರು.
ಇದು ಮಲ್ಟಿ ಪರ್ಪಸ್ ಕೋಲು. ನಮ್ಮ ಆಂಟೀ ಕೆಲಸದಲ್ಲಿ ತುಂಬಾ ಚುರುಕು. ನಮ್ಮೆಲ್ಲರಿಗೂ ಹೊತ್ತು ಹೊತ್ತಿಗೆ ರುಚಿ ರುಚಿಯಾಗಿ ಅಡುಗೆ ಮಾಡಿ ಹಾಕುತ್ತಿದ್ದುದಲ್ಲದೇ,ಹಪ್ಪಳ ಸಂಡಿಗೆ ಬಾಳ್ಕ ಗಳಂತವುಗಳನ್ನು ಮಾಡಿ ಮಾರಾಟ ಮಾಡುತ್ತಿದ್ದರು. ಅದನ್ನು ಒಣಗಲು ಹಾಕಿದ್ದು ಅದು ಹೇಗೆ ಕಾಗೆಗಳಿಗೆ ಗೊತ್ತಾಗುತ್ತಿತ್ತೋ ಏನೋ?? ಹುಡುಗರು, ಹುಡುಗಿಯರ ಹಾಸ್ಟೆಲ್ಲಿನ ಮುಂದೆ ಅತ್ತಿತ್ತ ಠಳಾಸುವಂತೆ ಇವು ಹಾರಾಟ ಪ್ರಾರಂಭಿಸುತ್ತಿದ್ದವು. ಆಗ ಆಂಟಿ ಈ ಕೋಲನ್ನು ನೆಲಕ್ಕೆ ಹೊಡೆದು ದೊಡ್ಡ ಶಬ್ಧವೆಬ್ಬಿಸಿ ಅವುಗಳನ್ನು ಹೆದರಿ ಹಾರುವಂತೆ ಮಾಡುತ್ತಿದ್ದರು. ಮನೆಯೊಳಗೆ ಸೇರಿಕೊಂಡ ಜಿರಲೆಗಳನ್ನು ಹೊಡೆಯಲು, ಅಪುರೂಪಕ್ಕೊಮ್ಮೆ ನಮ್ಮ ಕೈಗೆ ಸಿಗುತ್ತಿದ್ದ ಮೂಷಿಕವನ್ನು ಮುಗಿಸಲು ಇದೇ ಕೋಲು ಉಪಯೋಗವಾಗುತ್ತಿತ್ತು.ನನ್ನಂತಹ ಉದ್ದ ಕಮ್ಮಿ ಇರುವವರಿಗೆ ಬಟ್ಟೆ ಹರವಲು ಉಪಯೋಗಿಸಲ್ಪಡುತ್ತಿತ್ತು. ನಾವೇನಾದರೂ ರಾಜ ಮಹಾರಾಜರ ವಂಶಸ್ಥರಾಗಿದ್ದರೆ ಈ ಮಲ್ಟಿ ಪರ್ಪಸ್ ಕೋಲಿಗೆ ಚಿನ್ನದ ಕಟ್ಟು ಹಾಕಿಸುತ್ತಿದ್ದುದರಲ್ಲಿ ಸಂಶಯವೇ ಇರಲಿಲ್ಲ. ಅದು ಯಾರು ಕಣ್ಣು ಮುಚ್ಚಿ ಕೈ ನೀಡಿದರೂ ಹಿಂದಿನ ಬಾಗಿಲಿನ ಮೂಲೆಯಲ್ಲಿ ಕೈಗೆ ಸಿಗುವಂತಿರುತ್ತಿತ್ತು. ಮತ್ತು ಯಾರೇ ತೆಗೆದರೂ ಅಲ್ಲೇ ಇಡಬೇಕೆನ್ನುವ ಸುಗ್ರೀವಾಜ್ಞೆಗೂ ಒಳಪಟ್ಟಿತ್ತು.
ಆದಿನ ಬೆಳ್ಳಂಬೆಳಗ್ಗೆ ನಾಯಿ ಒಳಬಂದು ಡೈನಿಂಗ್ ಟೇಬಲ್ ಕೆಳಗೆ ಮಲಗಿ ನಮಗೆ ಹಲ್ಲು ತೋರಿಸಿ ಜೋರು ಮಾಡುತ್ತಿತ್ತು. ಅದನ್ನು ಹೆದರಿಸಲು ನಮ್ಮ ಮಲ್ಟಿ ಪರ್ಪಸ್ ಕೋಲು ಇರುವ ಕಡೆ ಧಾವಿಸಿದರೆ ಅಲ್ಲೆಲ್ಲಿದೆ ಕೋಲು?
. ನಮ್ಮ ಮೆಸ್ಸಿನ ಆಂಟಿಯಂತೂ ಮೆಸ್ಸಿನ ಹುಡುಗಿಯರು ಕಳೆದು ಹೋಗಿದ್ದರೂ ಇಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.ತಮ್ಮ ದೇಹದ ಭಾಗವೇ ತುಂಡಾಯಿತೇನೋ ಎಂಬಂತಹ ದುಃಖದಲ್ಲಿ ಮುಳುಗಿದ್ದರು.ನಾವೆಲ್ಲರೂ ಎಲ್ಲಾ ಕಡೆ ಹುಡುಕಿ ಬಸವಳಿದೆವು. ನಮ್ಮ ಹಿಂದಿ ಹುಡುಗಿಯೊಬ್ಬಳ ವಿನಃ ಉಳಿದೆಲ್ಲರೂ ಈ ಸಂತಾಪದ ಸಮಯದಲ್ಲಿ ಒಟ್ಟಾಗಿ ನಿಂತಿದ್ದೆವು.
ಅವಳು ಎರಡು ತಿಂಗಳಲ್ಲಿ ಬರುವ ಆದಿತ್ಯವಾರದಲ್ಲಿ ಇದು ಕೊನೆಯ ಆದಿತ್ಯವಾರವಾದ್ದರಿಂದ, ತನ್ನ ಬಟ್ಟೆಗಳನ್ನು ಒಗೆಯಲು ಬಾತ್ ರೂಮ್ ಸೇರಿದ್ದಳು. ಉಳಿದೆಲ್ಲಾ ಆದಿತ್ಯವಾರಗಳಲ್ಲಿ ನಾವು ನಮ್ಮ ಒಂದು ವಾರದ ಬಟ್ಟೆಯನ್ನು ಒಗೆಯುತ್ತಾ ಕಷ್ಟ ಪಡುತ್ತಿದ್ದರೆ ಅವಳು ಅವಳ ಹಾಕಿದ ಬಟ್ಟೆಗಳಿಗೆ ಸೆಂಟ್ ಸಿಂಪಡಿಸಿ, ಮಡಿಚುವ ಕಾಯಕವೆಸಗುತ್ತಿದ್ದಳು. ಈಗ ಬಾತ್ ರೂಮಿನಿಂದ ಅವಳ ಹಿಂದಿ ಹಾಡುಗಳು ನಮ್ಮ ಕಿವಿಯ ತಮ್ಮಟೆಯನ್ನಪ್ಪಳಿಸುತ್ತಿದ್ದವು. ಅವಳ ಹಾಡುಗಳು ಎಷ್ಟು ಚೆನ್ನಾಗಿದ್ದವೆಂದರೆ, ರೊಮ್ಯಾಂಟಿಕ್ ಹಾಡುಗಳು ಶೋಕ ಗೀತೆಯಂತೆಯೂ, ಶೋಕಗೀತೆಗಳು ಯಕ್ಷಗಾನದ ಏರುಪದಗಳಂತೆಯೂ ಕೇಳಿಸುತ್ತಿದ್ದವು.ಆದರೆ ನಮ್ಮ ಬಾತ್ ರೂಮಿನ ಚಿಲಕ ಸರಿ ಇಲ್ಲದ ಕಾರಣ ಎಲ್ಲರೂ ಹಾಡು ಹೇಳುವುದು ಅನಿವಾರ್ಯವಾಗಿತ್ತು.
ಹೊರಗೆ ನಿಂತು 'ಕೋಲ್ ಹೆ ಕ್ಯಾ ನಿನ್ನ ಪಾಸ್' ಅಂತ ವಿಚಾರಿಸಿಕೊಂಡೆವು.. ಅವಳು ನ ಹೀ.. ಡಂಡಾ ಹೆ ಎಂದು ಎಂದು ಕಿರುಚಿ ಹಾಡು ಮುಂದುವರಿಸಿದಳು. ದಂಡಪಿಂಡ ಯಾವುದಿದ್ದರೂ ನಮಗೇನನಂತೆ ಎಂದು ನಾವು ಮತ್ತೆ ಕೋಲನ್ನು ಅರಸುತ್ತಾ ಮನೆಯ ಮೂಲೆ ಮೂಲೆ ಸುತ್ತುತ್ತಿದ್ದೆವು. ಇದ್ದಕ್ಕಿದ್ದಂತೇ ಬಾತ್ ರೂಮಿ ನಿಂದ ಹಿಂದೀ ಹಾಡಿನ ಜೊತೆ ಟಪ್ ಟಪ್ ಎಂಬ ಸದ್ದು ಹಾಡಿನೊಡನೆ ಶೃತಿಯಂತೆ ಕೇಳಿ ಬರತೊಡಗಿತು. ನಾವೆಲ್ಲ ಹೋಗಿ ಬಾತ್ ರೂಮಿನ ಬಾಗಿಲು ತೆರೆಯುವುದನ್ನು ಕಾದು ನಿಂತೆವು. ಬಾಗಿಲು ತೆರೆಯಿತು. ನಮ್ಮೆಲ್ಲರ ಗದ್ದಲವನ್ನು ಒಳಗಿನಿಂದಲೇ ಕೇಳಿದ್ದ ಅವಳು, 'ಕ್ಯಾ ಹುವಾ ಕ್ಯಾ ಡೂಂಡ್ ರಹೆ ಹೆ ಆಪ್ 'ಅಂತ ಕೇಳುತ್ತಾ ಹೊರಬಂದಳು. ಅವಳೀಗ ಒನಕೆ ಓಬವ್ವನ ಸ್ಟೈಲಿನಲ್ಲಿ ಕಚ್ಚೆಯ ಬದಲು ಹಾಫ್ ಪ್ಯಾಂಟ್ ಹಾಕಿ ಕೈಯಲ್ಲಿ ಒನಕೆಯ ಬದಲು ಕೋಲು ಹಿಡಿದು ನಿಂತಿದ್ದಳು. ಕಲ್ಲಿನಲ್ಲಿ ಬಟ್ಟೆ ಒಗೆಯುವ ಅಬ್ಯಾಸ ಇಲ್ಲದ ಕಾರಣ ಅವಳು ಕೋಲನ್ನು ಬಟ್ಟೆಗಳಿಗೆ ಬಡಿದು ನಮಗೆ ತಿಳಿಯದ ಹೊಸ ರೀತಿಯಲ್ಲಿ ಬಟ್ಟೆ ಒಗೆಯುತ್ತಿದ್ದಳು. ಇದನ್ನೇ ಹುಡ್ಕಿದ್ದು ಅಂತ ಅವಳ ಕೈಯಲ್ಲಿದ್ದ ಕೋಲನ್ನು ತೋರಿಸಿದೆ. 'ಪೆಹೆಲೆ ಬತಾಯಾತಾನಾ.. ಡಂಡಾ ಹೆ ಮೆರೆ ಪಾಸ್..' ಎಂದು ತಣ್ಣಗೆ ಹೇಳುತ್ತಾ ಬಾಗಿಲ ಮೂಲೆಯಲ್ಲಿಟ್ಟಳು. ಕೋಲು ಕಂಡ ಕೂಡಲೇ ನಾಯಿಯೂ ಬಾಲ ಮುದುರಿ ಹೊರಗೋಡಿತು.
ಒಂದು ದಿನ ಬೆಳಗ್ಗೆ ಇದ್ದಕ್ಕಿದ್ದಂತೆ ನಾಯಿ ಕುಂಯ್ ಕುಂಯ್ ಎಂದು ಬಾಲ ಅಲ್ಲಾಡಿಸುತ್ತಾ ಕುಣಿಯುವುದು ಕಾಣಿಸಿತು. ಅದರೆದುರಲ್ಲಿ ನಮ್ಮ ಬಾಂಬೇ ಬೆಡಗಿ ಹುಣಸೇ ಬೀಜದಷ್ಟು ದೊಡ್ಡ ಮಾರೀ ಬಿಸ್ಕೆಟ್ಟಿನ ತುಂಡನ್ನು ಹಿಡಿದು 'ಆವೋ ರಾಜಾ.. ತುಮ್ಹೇ ಬಿಸ್ಕೆಟ್ ಕಿಲಾತೀ ಹೂಂ..' ಎಂದು ನಿಂತಿದ್ದಳು ನಾವು ಇಡೀ ಪ್ಯಾಕೆಟ್ ಬಿಸ್ಕೆಟ್ ಹಾಕಿದರೂ ಬಾಲ ಎತ್ತದೇ ಗುರ್ರ್ ಅನ್ನುವ ನಾಯಿ ಈಗ ಈ ರೀತಿ ವರ್ತಿಸುವುದು ಅಚ್ಚರಿ ತರಿಸಿತು. ಅದು ಅವಳನ್ನು ಎಷ್ಟು ಹಚ್ಚಿಕೊಂಡಿತೆಂದರೆ ಅವಳ ಆಜ್ಞಾನುಸಾರಿಯಾಗಿ ಅವಳು 'ಬೈಟೊ' ಎಂದರೆ ಕುಳಿತು, 'ಉಠೋ' ಎಂದರೆ ನಿಂತು ನಮಗೆ ಅಚ್ಚರಿ ತರಿಸಿತು.
ನಾವೆಲ್ಲರೂ ಈಗ ನಮ್ಮ ಪಾಠ ಪುಸ್ತಕಗಳನ್ನು ಬದಿಗಿಟ್ಟು ನಾಯಿಯ ಈ ನಡವಳಿಕೆಯ ಬಗ್ಗೆ ಸಂಶೋಧನೆ ಪ್ರಾರಂಭಿಸಿದೆವು. ಆ ಸಂಶೋದನೆ ಎಷ್ಟು ಗಂಭೀರವಾಗಿತ್ತೆಂದರೆ ನಾವು ನಾಯಿಯ ಬಾಲದಂತೆ ಅದರ ಹಿಂದೆಯೇ ಬಿದ್ದಿರುತ್ತಿದ್ದೆವು.ಅದನ್ನು ನಾವೂ ಒಲಿಸಿಕೊಳ್ಳಲು ಮನೆಯವರು ಗೋಗರೆದು ಕೇಳಿದರೂ ಕೊಡದ ನಮ್ಮ ನಮ್ಮ ಪಾಕೆಟ್ ಮನಿಯನ್ನು ಖರ್ಚು ಮಾಡಿ ನಾಯಿಗಾಗಿ ಬ್ರೆಡ್ಡಿನಿಂದ ಹಿ ಡಿದು ರಸ್ಕಿನವರೆಗೆ, ಮೊಟ್ಟೆಯಿಂದ ಹಿಡಿದು ಮೂಳೆಯವರೆಗೆ ತಂದು ಹಾಕುತ್ತಿದ್ದೆವು. ಅದಕ್ಕೆ ಖುಷಿ ಆಗಲೆಂದು 'ನಾಯಿಮರಿ ನಾಯಿಮರಿ' ಪದ್ಯವನ್ನು ಚೆನ್ನಾಗಿ ಕಲಿತು ಹಾಡುತ್ತಿದ್ದೆವು.ಆದರೂ ಅದು ಮೊದಲಿನಂತೆ ನಾವು ಕೊಟ್ಟದ್ದನ್ನು ತಿಂದು ನಮಗೆ 'ಗುರ್ರ್' ಎನ್ನುತ್ತಾ ಇರುತ್ತಿತ್ತು.
ಮೆಸ್ ಹತ್ತಿರವಿದ್ದುದರಿಂದ ಮದ್ಯಾಹ್ನ ಊಟಕ್ಕೆ ಅಲ್ಲಿಗೆ ಬರುತ್ತಿದ್ದೆವು. ಆ ದಿನ ನಾವು ಮನೆಗೆ ಬರುವಾಗ ಸೂಟ್ ಬೂಟಿನಿಂದ ಅಲಂಕೃತರಾದವರೊಬ್ಬರು ಆಂಟಿಯೊಂದಿಗೆ 'ಅದು ನನ್ನ ನಾಯಿ ನಾನು ಅದನ್ನೀಗ ತೆಗೊಂಡು ಹೋಗ್ತೀನಿ' ಅಂತ ಪಟ್ಟು ಹಿಡಿದು ಕುಳಿತಿದ್ದರು. ಆಂಟೀ ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ನುಡಿಯುತ್ತಿದ್ದರು. ನಾಯಿಯೂ ಅವರನ್ನು ಗುರುತು ಹಿಡಿದು ಬಾಲ ಅಲ್ಲಾಡಿಸುತ್ತಿತ್ತು. ಇದು ಮಾತಿನಿಂದ ಬಗೆ ಹರಿಯುವಂತೆ ಕಾಣುತ್ತಿರಲಿಲ್ಲ. ಕೊನೆಯದಾಗಿ ಅವರು 'ಆಯ್ತು ಹಾಗಿದ್ರೆ..ನಾನು ಕರೆದಾಗ ನಾಯಿ ನನ್ನ ಕಡೆ ಬಂದರೆ ನನಗೆ.. ನಿಮ್ಮ ಕಡೆ ಬಂದರೆ ನಿಮಗೆ.. ನಾಯಿ ಯೇ ಫೈಸ್ಲಾ ಮಾಡ್ಲಿ' ಎಂದು ಕೊನೆಯ ತೀರ್ಮಾನ ಹೇಳಿ ಬಿಟ್ಟರು. ನಮಗೂ ಒಪ್ಪದೇ ಬೇರೆ ವಿಧಿಯಿರಲಿಲ್ಲ. ನಮ್ಮ ಮೌನವನ್ನು ಒಪ್ಪಿಗೆ ಎಂದುಕೊಂಡ ಅವರು 'ಆವೋ ರಾಜ ಮೇರೆ ಪಾಸ್..' ಎಂದರು.
ಇದ್ದಕ್ಕಿದ್ದಂತೆ ನಮ್ಮ ಬುದ್ಧಿಯ ಟ್ಯೂಬ್ ಲೈಟುಗಳು ಪ್ರಖರವಾಗಿ ಉರಿದು ನಾಯಿಯ ನಡವಳಿಕೆಯ ಮಿಸ್ಟ್ರಿ ಸಾಲ್ವ್ ಆಯ್ತು. ಅದು ಹಿಂದಿ ಭಾಷೆಗೆ ಒಗ್ಗಿದ ನಾಯಿ ಯಾದ ಕಾರಣ ನಮ್ಮ ಕನ್ನಡ ಅದಕ್ಕೆ ಅರ್ಥವಾಗುತ್ತಿರಲಿಲ್ಲ. ಎಲ್ಲರೂ ಮುಖ ಮುಖ ನೋಡಿಕೊಂಡೆವು. ನಾವು ಸೋಲುವ ಭಯವೂ ಹುಟ್ಟಿಕೊಂಡಿತು. ಆದ್ರೆ ನಾಯಿಯನ್ನು ನಮ್ಮ ಕಡೆ ಉಳಿಸಿಕೊಳ್ಳಬೇಕಿದ್ರೆ ಅದಕ್ಕೆ ಅರ್ಥವಾಗುವಂತೇ ಮಾತಾಡಬೇಕಿತ್ತು. ನಮ್ಮಹಿಂದೀ ಸುಂದರಿ ಬೇರೆ 'ಇವತ್ತು ಪ್ರಾಕ್ಟಿಕಲ್ಸ್ ಇದೆ ಕ್ಯಾಂಟೀನಿಗೆ ಹೋಗ್ತೀನಿ' ಅಂತ ಊಟಕ್ಕೆ ಬಂದಿರಲಿಲ್ಲ.. ಸ್ವಲ್ಪ ಹೊತ್ತು ನಮ್ಮ ಎದೆ ಬಡಿತದ ಸದ್ದೇ ನಮಗೆ ಕೇಳುವಂತಹ ಮೌನ. ಪರೀಕ್ಷಾ ಕಾಲದ ತಲ್ಲಣ.. ಪಾಸಾಗುವುದು ಮಾತ್ರವಲ್ಲ ನೂರಕ್ಕೆ ನೂರು ಬಾರದಿದ್ರೆ ನಾಯಿಯನ್ನು ಕಳೆದುಕೊಳ್ಳುವ ಭಯ ..
.ಈಗ ನಮ್ಮ ನಡುವಿನಿಂದ ಒಂದು ಸ್ವರ ನಿಧಾನಕ್ಕೆ ಎದ್ದಿತು. 'ಆವೋ ರಾಜ ತುಮ್ಹೆ ಅಂಡಾ ಕೊಡ್ತೀನಿ..' ನಮ್ಮ ಶ್ವಾನ ಸುಂದರನೀಗ ಕಿವಿ ನಿಮಿರಿಸಿ ನಮ್ಮತ್ತ ನೋಡಿತು.ನಮ್ಮನ್ನು ನೋಡಿ ಬಾಲ ಅಲ್ಲಾಡಿಸುತ್ತಾ ಹತ್ತಿರ ಬಂತು.ನಾವೆಲ್ಲ ಸಂತೋಷದಿಂದ ಕೈ ಕೈ ಹಿಡಿದು ಕುಣಿದೆವು. ಬಂದವರು ಸುಮ್ಮನೆ ಎದ್ದು ಹೋದರು.
ನಾಯಿ ಕೂಡಾ ತಾನು ಕಲಿತ ಭಾಷೆಗೆ ಕೊಡುವ ಮರ್ಯಾಧೆಯನ್ನು ಕಂಡು ನಾವು ನಮ್ಮ ನುಡಿ ಕನ್ನಡವನ್ನು ಹಿಂದಿ ಹುಡುಗಿಗೆ ಚೆನ್ನಾಗಿ ಕಲಿಸಬೇಕೆಂಬ ದೃಢ ನಿರ್ಧಾರಕ್ಕೆ ಬಂದೆವು. ಜೊತೆಗೆ ಹಿಂದಿಯನ್ನು ತಪ್ಪಿಲ್ಲದೆ ಮಾತನಾಡುವಷ್ಟಾದರು ಕಲಿಯಬೇಕೆಂಬ ಹಠವೂ ಹುಟ್ಟಿತು. ಅಂದಿನಿಂದ ನಮ್ಮ ಹರಟೆಯ ಸಮಯವೆಲ್ಲ ಭಾಷಾ ಕಲಿಕೆಯ ಸಮಯವಾಗಿ ಮಾರ್ಪಟ್ಟಿತು. ನಮ್ಮ ಆಂಟೀ ನಮಗೆಲ್ಲಾ ಬಂದ ಒಳ್ಳೆಯ ಬುದ್ಧಿಗಾಗಿ ಸಂತೋಷ ಪಡುತ್ತಾ, ಬರುವ ವರ್ಷ ತಮ್ಮ ಮೆಸ್ಸಿಗೆ ಇನ್ನಷ್ಟು ಹುಡುಗಿಯರು ಬರುವ ಬಗ್ಗೆ ಕನಸು ಕಾಣ ತೊಡಗಿದರು.
Anithaji,
ReplyDeleteNimma barahada laya just incredible,,,,,good write-up
ಅಕ್ಕಾ,
ReplyDelete'mess' ಹೇಳಿರೆ ಬರೇ 'ಊಟದ ಮನೆ' ಹೇಳಿ ಅರ್ಥ ಬತ್ತಲ್ದಾ ?
'PG (Paying Guest)' ಹೇಳಿ ಮಾಡಿದ್ದರೆ ಸರಿ ಆವ್ತಿತ್ತು ಹೇಳಿ ಎನ್ನ ಅಭಿಪ್ರಾಯ.
ಅಯ್ಯೋ ನಾಯಿಗೂ ಹಿಂದೀ ಪಥ್ಯವೇ?
ReplyDeleteಚೆನ್ನಾಗಿದೆ ಪರಸ್ಪರ ಭಾಷೆ ಕಲಿತು ಕಲಿಸೋ ನಿರ್ಧಾರ.
ಈ ಬರಹದಿಂದ ಮೇಸ್ಸಿನ ಪರಿಸರ ಕಣ್ಣಿಗೆ ಕಟ್ಟಿದಂತಾಯ್ತು.
ಚೆನ್ನಾಗಿದೆ ..ಇಷ್ಟ ಆಯ್ತು :)
ReplyDeleteಭಾಷಾ ಕೊರತೆ ಹಹಹ ನಾಯಿ ಕಥೆ ಸೂಪರ್.. ತುಂಬಾ ಚೆನ್ನಾಗಿದೆ ಅಕ್ಕ
ReplyDeleteVery nice.... :)
ReplyDeleteಅನಿತಕ್ಕೋ .. ಸೂಪರ್ ನಾಯಿ ಸೂಪರ್ ಭಾಷೆ.. ಸೂಪರ್ ಬರಹ..:)
ReplyDeleteನಾಯಿಗೂ ಭಾಷಾ ಪ್ರೇಮ. ಪ್ರೀತಿಯಿಂದ ಸಲಹಿದವರ ಬಗ್ಗೆಯೂ ಪ್ರೇಮ. ನಮ್ಮ ನಮ್ಮ ಭಾಷೆ ನಮಗೆ ಪ್ರೀತಿ ಅಲ್ಲವೇ? . ನಾಯಿ ನಿಮಗೆ ರಾಷ್ಟ್ರ ಭಾಷೆ ಕಲಿಸಿದ ವಿಧಾನವೂ ವಿಚಿತ್ರ. ಮುಂಬಾಯಿಯ ಹುಡುಗಿ "ಕೋಲು ಹಿಡಿದು" ಸಾಧಿಸಿಕೊಂಡಿದ್ದ ಬಟ್ಟೆ ಒಗೆಯುವಿಕೆಯ ವಿಧಾನವನ್ನು ನೋಡಿ ನೀವೆಲ್ಲಾ ಅಚ್ಚರಿ ಪಟ್ಟ ವೈಖರಿ ನನಗೆ ಸಂತೋಷ ಕೊಟ್ಟಿತು. ಅನಿತಾ. ನಿನ್ನ ಬರಣಿಗೆಯಲ್ಲಿನ "ಹದಿಹರೆಯದವರ ಕಾಲೇಜು ಹಾಸ್ಟೆಲ್ ಭಾಷೆಯನ್ನು ಓದಿ" ಬಹಳ ಸಂತಸ ಪಟ್ಟೆ. ಒಂದು ಸಾಮಾನ್ಯ ನಾಯಿ ನಿರ್ಮಿಸಿದ ಭಾವಾನುಬಂಧದ ಸೆಲೆ ಕಂಡು ಅಚ್ಚರಿ ಪಡುತ್ತಾ ಇದ್ದೇನೆ. ಹೀಗೆಯೇ ನಿನ್ನ ಬರಹ ಮುಂದುವರೆಯಲಿ. - ಪೆಜತ್ತಾಯ ಮಾಮ
ReplyDeletebahuth accha bahuth accha :) :)
ReplyDeleteನಾಯಿ ಕ ಫಂಡಾ ಬಹುತ್ ಅಚ್ಚಾ ಥಾ ಮಜ್ಹಾ ಆಯಾ.. ;) :D :D
ReplyDeleteನಿಮ್ಮ ಕಥೆಯವನ್ನು ಓದುತ್ತಾ ಹೋದಂತೆ ನನ್ನ ಹಿಂದಿನ ನೆನಪುಗಳ ಮೆಲುಕು ಹಾಕಿಕೊಳ್ಳುವಂತಾಯಿತು. ನಾಯಿಗೂ ಭಾಷೆಯೇ ಎಂದು ಅನ್ನಿಸಬಹುದು....! ನಾಯಿ ನಮ್ಮ ನಡವಳಿಕೆಯನ್ನು ಗ್ರಹಿಸುವಿಕೆಯಲ್ಲಿ ಅತ್ಯಂತ ಸೂಕ್ಷ್ಮ ಎನ್ನಿಸುತ್ತದೆ. ನಾವು ತೋರಿಸುವ ಪ್ರೀತಿ, ವಿಶ್ವಾಸಗಳಿಂದ ನಮ್ಮ ಸುತ್ತಮುತ್ತ ಸುಳಿದಾಡಿ ನಮ್ಮಲ್ಲಿ ಒಂದಾಗಿ, ಅದನ್ನು ಬಿಟ್ಟಿರಲಾರದ ಮನಸ್ಥಿತಿಯನ್ನು ತಲುಪಿಬಿಡುತ್ತೇವೆ. ನಾಯಿಗೆ ಭಾಷೆಯ ಪ್ರೇಮಕ್ಕಿಂತ ಅದನ್ನು ಪ್ರೀತಿಯಿಂದ ನೋಡಿಕೊಳ್ಳುವವರು ಮುಖ್ಯ ಅನ್ನಿಸುತ್ತದೆ ಅದಕ್ಕೆ ಅದು ನಿಮ್ಮ ಮಾತಿನ ಹರಟೆಯಿಂದ ಬೇಸತ್ತು. ಮುಂಬಾಯಿ ಹುಡುಗಿಯ ತಾಳಕ್ಕೆ ತಕ್ಕಂತೆ ಕುಣಿಯಲಾರಂಭಿಸಿತ್ತೇನೋ... ಏನೇ ಆಗಲೀ ನಿಮ್ಮ ಒಂದು ಕಥಾ ಲೋಕದಲ್ಲಿ ಒಂದಷ್ಟು ಹಾಸ್ಯ, ಒಂದಷ್ಟು ಬದುಕಿನ ನವಿರುಗಳನ್ನು ಖಂಡಿತ ಕಾಣಬಹುದಾಗಿದೆ, ನಾಯಿಗೂ ಹಿಂದಿ ಭಾಷೆಯ ವ್ಯಾಮೋಹ ...!! ತುಂಬಾ ಚೆನ್ನಾಗಿದೆ.
ReplyDelete