Pages

Total Visitors

Tuesday, August 30, 2011

ಒಂದಾದವರು...


ನಾನೊಂದು ಅಕ್ಷರ 

ಅವಳೊಂದು ಅಕ್ಷರ

ಅರ್ಥೈಸಿಕೊಳಲಾರದಂತೆ  

ನಮ್ಮಿಬ್ಬರ ನಡುವೆ 

ಅದಾರೋ 

ಚುಕ್ಕಿಗಳನ್ನು ಇಟ್ಟಿದ್ದರು....

ನನ್ನ ಮುಖ  ಅವಳೂ 

ಅವಳ ನಗು ನಾನೂ

ದೂರದಿಂದಲೇ ನೋಡಿದೆವು

ಒಂದೊಂದೇ ಚುಕ್ಕಿಗಳನ್ನು ಅಳಿಸಿ 

ನಾವಿಬ್ಬರೊಂದಾದೆವು ....

ಒಂದು ಪದವಾದೆವು 


Sunday, August 28, 2011

ನೆನಪು..




ಎಲ್ಲವನ್ನು ಸೇರಿಸಿ ಹೆಡೆಮುರಿ ಕಟ್ಟಿ 

ಬೀಸಿ ಎಸೆದೆ ಮರೆವಿನ ಕಾರಾಗ್ರಹಕ್ಕೆ 

ಯಾರು ಬೀಗವ ತೆಗೆದರೋ 

ಪುಟಿದೆದ್ದು ತಿರುಗಿ ಬಂದು ಎದೆಬಾಗಿಲ ತಟ್ಟಿತು...

ಸರಿ,.. ಅದಕ್ಕೂ ಬೇಸರವಾಗಿರಬಹುದು 

ಈಗ  ಸುಮ್ಮನಿರಬಹುದು ಎಂದು 

ಮೆತ್ತಗೆ ಬಾಗಿಲು ಸರಿಸಿ ಬಿಟ್ಟೆ ಒಳಕ್ಕೆ 

ಕತೆ ಹೇಳಲೇ ಎಂದು ಕೇಳಿ   ಕುಳಿತೇ ಬಿಡಬೇಕೇ ? .

ಬಿಟ್ಟುಬಿಡು ಹಳೆಯ ಪುರಾಣ 

ಹೊಸತೇನಿದೆ  ಹೇಳಲಿಕ್ಕೆ 

ಎಂದು  ಮಲಗಿದರೂ, ಹೇಳಿತು  ಮುಸುಕ ಸರಿಸಿ...

ಮಗದೊಮ್ಮೆ ಕೇಳಿದರೇನು 

ಮರೆತ  ಸವಿ ಮಾತುಗಳ ?

 .... ಎದ್ದು ಬಿಡು

ಬರಲಾರದ ನಿದ್ದೆಯ  ಸೋಗೇಕೆ......?

ಮುಚ್ಚಿದ ಕಣ್ಣಲ್ಲೂ ಬೆಳದಿಂಗಳು ಹೊರಚೆಲ್ಲಿ

 ತುಟಿ ಕೊಂಕಿ ನಗುವರಳಲು 

ನೆನಪು ಹೊದಿಕೆಯೊಳಗೆ ಸೇರಿ 

ಬೆಚ್ಚಗೆ  ಮಲಗಿಯೇ ಬಿಟ್ಟಿತು ..

ನನ್ನ ಕನಸುಗಣ್ಣ ಕಾವಲಿರಿಸಿ ..


-- 

Saturday, August 27, 2011

ಹೇಳೇ ಗೆಳತಿ ..




ಬೆಳಗ್ಗಿನಿಂದಲೇ ಅವಳ ಮ್ಲಾನ ವದನವನ್ನು ನೋಡಲೇ ಆಗುತ್ತಿರಲಿಲ್ಲ. ನಾವು ಗೆಳತಿಯರೆಲ್ಲ ಗುಂಪುಗೂಡಿ ಪ್ರಶ್ನೆ ಮಾಡಿದರೂ ಉತ್ತರವಿಲ್ಲ. ಯಾಕೋ ಅವಳ ಕಣ್ಣಾಲಿಗಳಲ್ಲಿ ಮಡುಗಟ್ಟಿದ ನೀರನ್ನು ನೋಡಲಾಗದೇ ಒತ್ತಾಯಿಸಿದರೆ ಇನ್ನೆಲ್ಲಿ ಅಳುತ್ತಾಳೊ ಎಂಬ ಭಯದಿಂದ ನಮ್ಮ ನಮ್ಮ ಬೆಂಚುಗಳಿಗೆ ಮರಳಿದೆವು.

ಕ್ಲಾಸಿನೊಳಗೆ ಟೀಚರ್ ಬಂದು ಏನೇನು ಹೇಳಿದರೋ , ಯಾವುದೂ ನನ್ನ ತಲೆಯೊಳಗೆ ಇಳಿಯಲಿಲ್ಲ.ಹಿಂದಿನ  ಬೆಂಚ್ ನಲ್ಲಿ ಕುಳಿತು ಕಣ್ಣೀರಾಗ್ತಿದ್ದ ಗೆಳತಿಯ ಕಡೆಗೇ ಕಣ್ಣೆಳೆಯುತ್ತಿತ್ತು. ಬೇಗ ಒಮ್ಮೆ ಮಧ್ಯಾಹ್ನವಾದರೆ ಸಾಕಿತ್ತು ಎಂಬ ಚಡಪಡಿಕೆ.
ಊಟದ ಬುತ್ತಿ ಕೈಯಲ್ಲಿ  ಹಿಡಿದು ನಾವಿಬ್ಬರೂ ಜೊತೆಯಾದೆವು. ಯಾವತ್ತು  ಹೀಗೆ ಕಂಡವಳೆ ಅಲ್ಲ. ಯಾಕೊ ಅವಳ ಹೊಸ ತರ ನನ್ನಲ್ಲಿ ಅಪರಿಚಿತ ಭಾವವನ್ನು ಮೂಡಿಸಿತು.ಮೌನವಾಗಿಯೆ ಹೆಜ್ಜೆ ಹಾಕುತ್ತಿದ್ದವಳ ಕೈ  ಹಿಡಿದೆ. ಒಮ್ಮೆ ಮೊಗವೆತ್ತಿ ನನ್ನೆಡೆಗೆ ನೋಡಿದವಳೇ, ಮತ್ತೆ ಎಲ್ಲೊ ನೋಟ ಬೀರಿದಳು. ಬಲವಂತ ಮಾಡುವುದು ನನಗೂ ಸಾಧ್ಯವಿಲ್ಲದೆ ಅವಳ ಕೈಯನ್ನೆ ಬಿಗಿಯಾಗಿ ಅದುಮಿ ಹಿಡಿದು ನಡೆದೆ.

ಊಟದ ಬುತ್ತಿ ಬಿಡಿಸಿಟ್ಟು ಚಿತ್ರಪಟದೊಳಗಿನ ಚಿತ್ರದಂತೆ ಕುಳಿತೇ ಇದ್ದಳು. ಕಣ್ಣಲ್ಲಿ ಸೋನೆ ಮಳೆ..ಆದರೂ ಏನೊಂದು ಕೇಳದೆ ಸುಮ್ಮನುಳಿದಿದ್ದ ನನ್ನನ್ನು ತಿವಿದು  ಹೇಯ್ .. !! ನಾನ್ಯಾಕೆ  ಅಳ್ತಿದ್ದೀನಿ ಅಂತ ಕೇಳಲ್ಲವೇನೇ?" ಅಂದಳು ಅದಕ್ಕಾಗಿಯೇ ಕಾದಿದ್ದರೂ, ಬಿಂಕ ಬಿಡದೆ , " ನಿಂಗೆ ಹೇಳ್ಬೇಕು ಅನ್ನಿಸಿದರೆ ನೀನೇ ಹೇಳ್ತೀಯ. ನಮ್ಮೊಳಗೆ ಗುಟ್ಟೇನು " ಎಂದೆ.

ಮೆಲ್ಲನೆ ಮಾತಾದಳು ಹುಡುಗಿ..

"ಹುಂ.. ಆದರೂ ನಿಂಗೆ ಹೇಗೆ ಹೇಳೋದು ಅಂತಾನೇ ಅರ್ಥ ಆಗ್ತಿಲ್ಲ, ಅಥವಾ ನಾನು ಹೇಳಿದ್ದನ್ನು ನಿಂಗೆ ಅರ್ಥ ಮಾಡ್ಕೊಳ್ಳೋಕ್ಕಾಗುತ್ತಾ ಅಂತ್ಲೂ ನಂಗೆ ಗೊತ್ತಿಲ್ಲ" ಅಂದಳು.

"ಯಾಕೆ.. ಏನಾಯ್ತು ಅಂತಾದ್ದು.."ಅಂದೆ ಕುತೂಹಲದಿಂದ

ನನ್ನ ಕೈ ಗಟ್ಟಿ ಹಿಡಿದು ಬಿಕ್ಕಿದಳು.  ಮಾತುಗಳಳಿದು ಮೌನವಾದೆ.

ಸಣ್ಣ ಸ್ವರದಲ್ಲಿ "ನಾನು ದೊಡ್ಡವಳಾಗಿದ್ದೀನಿ" ಅಂದಳು.

.ನಿಜಕ್ಕೂ ಅವಳು ಹೇಳಿದ ಹಾಗೆ ವಿಷಯ ನನಗೆ ಅರ್ಥವೂ ಆಗಲಿಲ್ಲ. ಅವಳ ಕಣ್ಣೀರ ಕೋಡಿ ನೋಡಿ ದೊಡ್ಡವಳಾಗುವುದು ಎಂದರೆ ಅಸಹನೀಯ ವೇದನೆಯೂ ಇರುತ್ತದೇನೋ ಎಂಬ ಭಯವೂ..

ಈಗ ತನ್ನಷ್ಟಕ್ಕೆ ತಾನೇ ಸುಧಾರಿಸಿಕೊಂಡ ಅವಳು ಮೆತ್ತಗೆ ಎಲ್ಲವನ್ನೂ  ವಿವರಿಸಿದಳು.ನನಗಿದು ಕಂಡು ಕೇಳರಿಯದ ವಿಚಿತ್ರ.

ಮೆಲ್ಲಗೆ ಪ್ರಶ್ನಿಸಿದೆ.ನಂಗೂ ಹೀಗೇ ಆಗುತ್ತಾ..

ತುಂಟ ನಗು ಇಣುಕಿತು ಅವಳ ಮೊಗದಲ್ಲಿ .. "ನೀನೂ ಹುಡುಗಿ ಅಲ್ವಾ.. ಎಲ್ರಿಗೂ ಹೀಗೇ  ಆಗುತ್ತೆ"ಎಂದಳು.

ದೂರದಲ್ಲಿದ್ದ ಅಕ್ಕನ ನೆನಪು ಬಂತು.ಮೊದಲೆಲ್ಲಾ ಅವಳು ಬಂದೊಡನೆ ಊರೆಲ್ಲಾ ಸುತ್ತಿ, ಇದ್ದ ಎಲ್ಲಾ ಹಣ್ಣಿನ ಮರಗಳನ್ನು ಎಡತಾಕಿ ಬರುತ್ತಿದ್ದೆವು. ಕಳೆದ ಬಾರಿ ಬಂದಾಗ ಅಮ್ಮ ಅವಳನ್ನು ಹೊರಗೆ ಹೋಗಲೇ ಬಿಟ್ಟಿರಲಿಲ್ಲ.ಹಾಗೆಲ್ಲ ಸುತ್ತಾಡಬಾರದು ಎಂಬ ತಾಕೀತು ಬೇರೆ. ಅಣ್ಣಂದಿರೊಂದಿಗೆ ಮೊದಲಿನಂತೆ ಕುಣಿದಾಡುವ ಹಾಗೂ ಇರಲಿಲ್ಲ.ಅವಳಲ್ಲೂ ಕೇಳಿದ್ದಕ್ಕೆ ದೊಡ್ಡವಳಾಗಿದ್ದೇನೆ. ಎಂಬ ಪದವನ್ನೆ ಉಪಯೋಗಿಸಿದ್ದಳು.ಆದರೆ ಎಷ್ಟೇ ಬೇಡಿಕೊಂಡರೂ "ನಿಂಗೆ ಗೊತ್ತಾಗುತ್ತೆ, ನಾನು ಹೇಳಲ್ಲ ಹೋಗು" ಎಂದಿದ್ದಳು.

ನನಗೆ ಅಸಹನೀಯ ಎನ್ನಿಸಿತು ಈ  'ದೊಡ್ಡವಳಾಗುವುದು'..ನನ್ನೆಲ್ಲಾ ಚಟುವಟಿಕೆಗಳಿಗೆ ಬೇಲಿಯಾಗುವ ಅದರ ಬಗ್ಗೆ ನಿಜಕ್ಕೂ ಸಿಟ್ಟು ಬಂತು..ಮನಸ್ಸಿನಲ್ಲೇ ಕಾಣದ ದೇವರಿಗೆ ಹರಕೆಯನ್ನೂ ಹೊತ್ತೆ. ನನ್ನನ್ನೆಂದೂ ದೊಡ್ಡವಳನ್ನಾಗಿ ಮಾಡದೆ ಇರು ಎಂದು.ಗೆಳತಿ ಅವಳೆ ಒಪ್ಪಿಕೊಂಡ ಕಾರಣ ತಾನೆ ಈ ಸಂಗತಿ ನನಗೂ ತಿಳಿದಿದ್ದು . ಹಾಗಾಗಿ ನಾನಾಗಿ ಹೇಳದೆ ಯಾರಿಗೂ ಗೊತ್ತಾಗದು ಈ  ವಿಷಯ  ಎಂದು ನನ್ನನ್ನೇ ಸಮಾಧಾನಿಸಿಕೊಂಡೆ. ಇದರೊಂದಿಗೆ ಇಷ್ಟರವರೆಗೆ ನನ್ನರಿವಿಗೆ  ಬರದೆ ಇದ್ದ ಪ್ರಪಂಚದ ಯಾವುದೋ ಒಂದು ರಹಸ್ಯವು ನನ್ನ ವಶವಾದ  ಸಂತಸ.

ನನ್ನಲ್ಲಿ ಇನ್ನೂ ನೂರಾರು ಪ್ರಶ್ನೆಗಳಿತ್ತು. ಮನೆಯಲ್ಲಿ ಕೇಳೋಣವೆಂದರೆ ಅದೇನೋ ಸಂಕೋಚ..

ಎದೆಯೊಳಗೇ ಬಚ್ಚಿಟ್ಟೆ ಎಲ್ಲಾ ಪ್ರಶ್ನೆಗಳನ್ನೂ .... ನಾನಾಗಿಯೇ ಉತ್ತರ ಕಂಡುಕೊಳ್ಳುವವರೆಗೇ..

Friday, August 26, 2011

ತಿರುಗಿ ಹೋಗದಿರು .......

ಇರುಳು ಕಳೆಯುವುದು ಬೇಡ 
ಕತ್ತಲಳಿಯುವುದೂ ಬೇಡ 
 ಮರಳಿ ಬರುವೆನೆಂದುಸುರಿ   
ನೀ  ತಿರುಗಿ ಹೋಗದಿರು 

ಮೊಗೆದಷ್ಟು ಮತ್ತೆ ತುಂಬುವ 
ಮರೆತಷ್ಟು ನೆನಪಾಗಿ ಕಾಡುವ 
ಹೊಸ ಬೆಳಕ ನಡುವಲ್ಲೂ ಕನಸಾಗುವ 
ನೀ ತಿರುಗಿ ಹೋಗದಿರು 

ಕಣ್ಣೊಳಗಿನ ಕಾಂತಿ 
ತುಟಿಯ ತುಂಟ ನಗು 
ಎಲ್ಲವ ಇಲ್ಲೇ ಕಳಚಿಟ್ಟು 
ನೀ ತಿರುಗಿ ಹೋಗದಿರು 


ಬಚ್ಚಿಟ್ಟ ನಿನ್ನ ಎದೆ ಬಡಿತ 
ನನ್ನದೆ ಹೆಸರ ಕನವರಿಸಿದಾಗಲೂ 
ಮತ್ತೆ ಬರುವೆನೆಂಬ ಮಾತೇಕೆ 
ನೀ ತಿರುಗಿ ಹೋಗದಿರು 

ಕಾಯುವ ಪ್ರತಿ ನಿಮಿಷಕ್ಕೂ 
ಅದರದ್ದೇ ಬೇನೆ ಬೇಸರಿಕೆ 
ಉಳಿದು ಬಿಡು ನನ್ನೊಳಗೆ 
ನೀ ತಿರುಗಿ ಹೋಗದಿರು  

ಹೆಜ್ಜೆ ಹೆಜ್ಜೆಗೂ ಜೊತೆಯಾಗಿ 
ಸಾಗುವ ದೂರದ ಹಾದಿ 
ತೆಕ್ಕೆ ಸಡಿಲಿಸಿ ನಕ್ಕು 
ನೀ ತಿರುಗಿ ಹೋಗದಿರು 

Wednesday, August 24, 2011

ಕರೆದರೆ ಬರಬಾರದೇ..





ಪ್ರೀತಿಯ .. ಹುಂ... ಹೀಗೆಂದು  ಹೇಳಬಹುದೇ ಇನ್ನು ನಿನ್ನನ್ನು.. ಎಷ್ಟು ಕಾಲವಾಯಿತು ಹೇಳು ನನ್ನೊಡನೆ ಮಾತನಾಡದೆ.. ನಿನಗಾಗಿ ಕಾದು ಹಂಬಲಿಸುವ ಜೀವವೊಂದಿಲ್ಲಿದೆ ಎಂಬ ನೆನಪಾದರೂ ನಿನಗಿದೆಯೇ?

ಇದ್ದಿದ್ದರೆ ಹೀಗಾ  ನಿನ್ನ ವರ್ತನೆ..? ಮೊನ್ನೆ ಮನೆಯೊಳಗೆ  ಕಾಲಿಟ್ಟವನೇ ಮನೆಯ  ಹಿರಿಯರ ಕಾಲು ಹಿಡಿದು ನಮಸ್ಕರಿಸಿ ಅವರೊಡನೆ ನಾಲ್ಕಾರು ದಿನ ಕಳೆದೆ, ನನ್ನ ಕಡೆಗೆ ಕಣ್ಣೆತ್ತಿಯೂ ನೋಡದೆ..





ಅಪಮಾನ, ಬೇಸರಗಳಿಂದ ನಿನ್ನೆದುರೇ ಕೊಡೆ ಇಲ್ಲದೆ ತೋಟಕ್ಕೆ ಹೋಗಿ ಒದ್ದೆಯಾಗಿ ಬಂದೆ. ನೀನಾದರು ನೋಡಿಯೂ ನೋಡದಂತೆ ನಾಟಕ ಮಾಡಿದೆ ಅಲ್ವಾ..




ನಿನಗದೆಲ್ಲಿಯ ಕನಿಕರ ಹೇಳು. ನಾನೇನು ಸದಾ ಕಾಲ ನೀನು ನನ್ನೊಡನೆ ಇರು ಎಂದು ಬೇಡಿದ್ದೇನೆಯೇ? ಈ ಮಳೆಗಾಲದ ತಣ್ಣಗಿನ ದಿನಗಳಲ್ಲಿ ನಿನ್ನ ಬಿಸಿ ತೆಕ್ಕೆಯಲ್ಲಿ ಕರಗಿ ಹೋಗುವ ನನ್ನ ಬಯಕೆಯಲ್ಲೇನಿದೆ ತಪ್ಪು.. ನಾನಿಲ್ಲಿ ನಿನ್ನ ಪ್ರೀತಿಯ ಆಲಿಂಗನಕ್ಕೆ ಕಾಯುತ್ತಾ ಕುಳಿತಿದ್ದರೆ ನೀನಾಗಲೇ ಹೊಸಿಲಿಳಿದು ಹೊರಗೆ ಕಾಲಿಟ್ಟಿದ್ದೆ. ನಿನ್ನ ಮೇಲಿನ ಸಿಟ್ಟಿನಲ್ಲಿ ಷವರ್ ಬಿಟ್ಟು ತಣ್ಣಗಿನ ನೀರಿಗೆ ತಲೆ ಒಡ್ಡಿ ಸಮಯದ ಪರಿವೆಯಿಲ್ಲದೆ ಕುಳಿತಿದ್ದೆ.

ಮರುದಿನ ಬೆಳಗ್ಗೆ ಯಾಕೋ ಮೊಗವೆಲ್ಲ ಕೆಂಪಾಗಿ ತಲೆ ಭಾರ ಅನ್ನಿಸುತ್ತಿತ್ತು.ಬಿಸಿ ಉಸಿರು ಸುಡುತ್ತಿತ್ತು. ಕಣ್ಣು ಬಿಟ್ಟು ನೋಡಿದರೆ ನೀನಿದ್ದೆ ನನ್ನೊಳಗೆ. ನೀನಾಗಿ ನನ್ನನಾವರಿಸುವಂತೆ ಮಾಡಿದ ನನ್ನ ಹಠಕ್ಕೆ  ಹೆಮ್ಮೆ ಎನಿಸಿತ್ತು. ಮೈ ತುಂಬಾ ಹೊದಿಕೆ ಹೊದ್ದು  ನಿನ್ನ ಸ್ಪರ್ಷಕ್ಕೆ ಕಂಪಿಸುತ್ತಿರುವ ಮೈಯನ್ನು ಸಾಂತ್ವನಗೊಳಿಸಿದೆ.

 ಮನೆಯಲ್ಲಿ ಯಾರೋ ಮಾತನಾಡುವುದು ಕೇಳಿಸುತ್ತಿತ್ತು.


ಮೊನ್ನೆ ನಮಗೆಲ್ಲ ಬಂದಿತ್ತು ಜ್ವರ .. ಈಗ ಇವಳ ಸರದಿ...

Saturday, August 20, 2011

ಪಯಣ

ಸಂಜೆ ರಂಗೇರಿದಂತೆ

ಕೆನ್ನೆಯಲ್ಲೂ ಪ್ರತಿಫಲಿಸಿ 

ನೆನಪುಗಳ ದಾರದಿ ಬಿಗಿದು 
ಮಾಲೆಯಾಗಿ ಮುಡಿಸಿ

ಎಂದೋ ಹೇಳಿದ್ದ ಸವಿ ಮಾತುಗಳ 

ಕಾಲ್ಗೆಜ್ಜೆಯಾಗಿ ಜಲ್ಲೆನಿಸಿ

ಮೈಗೆ ತಾಕಿದ್ದ ಬಿಸಿ ಸ್ಪರ್ಶ 

ಬಳೆಗಳಾಗಿ ಕಲಕಲಿಸಿ

ಕೊಟ್ಟಿದ್ದ ಮುತ್ತುಗಳೆಲ್ಲಾ

ಕೊರಳ ಪದಕವಾಗಿಸಿ

ಕಣ್ಣಿಗೆ ಕಣ್ಣು ಸೇರಿದಾಗಿನ 

ಮಿಂಚ ಬೆಳಕಾಗಿಸಿ

ಹೊರಟಿತು ನನ್ನ ಮನ

ಮತ್ತೆ ನಿನ್ನೆಡೆಗೆ ಪಯಣಿಸಿ.. 

ಜೀವ ಬಂದಂತೆ..



ಸುಲಭವೇ ಅವನೊಳಗಿನ
 ಅವನ ಹುಡುಕಾಟ 
ಬಂದಾನೋ ಬಾರನೋ .. 
ಒಳಗೊಳಗೇ ಚಡಪಡಿಕೆ 
ಆಗೊಮ್ಮೆ ಈಗೊಮ್ಮೆ ಕಣ್ಣೆತ್ತರಿಸಿ
ಕಾಣುವಷ್ಟರವರೆಗೆ ಹರಿದು ನೋಟ
ಕಾಯುವುದು ಲೋಕದ ದೃಷ್ಟಿಗಾದರೆ
 ಒಳಗಿನ ಪ್ರೇಮ ತಪಸ್ಸು  
ಸವಿ ನೆನಪುಗಳ ಹರವಿ 
ಅಲ್ಲಿಟ್ಟು ಇಲ್ಲಿಟ್ಟು ಸಿಂಗರಿಸಿ 
ಮುತ್ತಿಟ್ಟು ಮೈದಡವಿ ಪೂಸಿ 
ಪರಿಮಳಕೆ ಮತ್ತೇರಿದಾಗ  
ಕಂಬನಿಗೂ   ಬಳಲಿಕೆ 
ದೂರದ ಕೊಳಲ ಗಾನಕೆ 
ಜಗವೆಲ್ಲ ಕಿವಿ ತೆರೆದಿರಲು 
ರಾಧೆ ಮತ್ತೆ ಜೀವಂತ .. 


Friday, August 19, 2011

ಚದುರಿದ ಮೋಡ..


ಮನೆಯಲ್ಲಿ ಸೂತಕದ ಛಾಯೆ.

ಅಪ್ಪ ಕೈಯಲ್ಲಿ ಹಿಡಿದಿದ್ದ  ಪೇಪರನ್ನು ಅತ್ತಿತ್ತ ಎಸೆದು ಅಸಮಾಧಾನ ವ್ಯಕ್ತ ಪಡಿಸಿದರೆ , ಅಮ್ಮ ಪಾತ್ರೆಗಳ ಶಬ್ಧವನ್ನು ಏರಿಸಿ ಸೂಚಿಸುತ್ತಿದ್ದಳು. ಮಕ್ಕಳೇನೂ ಕಡಿಮೆ ಇರಲಿಲ್ಲ. ದೊಡ್ಡವಳು ಕೈಯಲ್ಲಿ ಪುಸ್ತಕ ಹಿಡಿದಿದ್ದರೂ ಕಣ್ಣೆಲ್ಲ ಅಲ್ಲೇ ನೆಟ್ಟು ಶತಪಥ ಸುತ್ತುತ್ತಿದ್ದಳು. ಚಿಕ್ಕವಳಂತೂ ಗೊಣಗಾಡಿಕೊಂಡು ಅದರೆದುರೇ ಕುಳಿತಿದ್ದಳು.ರಜಾ ದಿನವಾದ ಇಂದೇ ಹೀಗಾಗಬೇಕೇ..?

 ಅಪ್ಪನಿಗೆ ಕಾಲು ಚಾಚಿ  ಅದರತ್ತಲೇ ನೋಡುತ್ತಾ ಕುಳಿತುಕೊಳ್ಳುವುದು ಪ್ರಿಯವಾದರೆ, ಅಮ್ಮನಿಗೆ ಅದರೊಡನೆ ಮಾತುಕತೆ.ಮಕ್ಕಳಿಬ್ಬರಿಗಂತೂ ಅದುವೇ ದೈವ. ತಮ್ಮೆಲ್ಲ ಕಷ್ಟ ಸುಖಃಗಳು ಅದರ ಮೂಲಕವೇ ಜಾಹೀರಾಗಬೇಕಿತ್ತು.
ಇಂದದು ಯಾರೊಂದಿಗೂ ನಗದೇ ತಣ್ಣಗೆ ಮಲಗಿತ್ತು.ಮನದ ನೆಮ್ಮದಿ ಕದಡಿತ್ತು..

ಚಿಕ್ಕವಳು ಕುಳಿತಲ್ಲಿಂದಲೇ ಜೋರಾಗಿ ಕಿರುಚಿದಳು. ಎಲ್ಲರೂ ಅವಳಿದ್ದ ಕೋಣೆಯ ಒಳಗೆ ಹೋಗಿ ನೋಡತೊಡಗಿದರು. ಹಾಂ .. ನೋಡುತ್ತಿದ್ದಂತೇ ಎಲ್ಲರ ಮುಖದ ಮೇಲೆ ನಗು ತಾನೆ ತಾನಾಗಿ ಪಸರಿಸಲು ಪ್ರಾರಂಭಿಸಿತು. ನಿಧಾನಕ್ಕೆ ಮೋಡೆಮ್ ನಲ್ಲಿ ಹಳದಿ ಲೈಟ್ ಕಣ್ಣು ಮಿಟುಕಿಸುತ್ತಾ  ಉರಿಯಲಾರಂಭಿಸಿತು.

ಅಬ್ಬಾ.. ಅಂತೂ ನೆಟ್ ಸರಿ ಆಯ್ತು..


Thursday, August 18, 2011

ಹಿಂಬಾಲಕ ...



ಛೇ...!! ಎಂತಾ ಕೆಲಸ ಆಗೋಯ್ತು ......ಸ್ವಲ್ಪ ಬೇಗನೆ ಹೆಜ್ಜೆ ಹಾಕಿದ್ರೆ ಈ ಬಸ್ಸಲ್ಲೇ ಮನೆಗೆ ಹೋಗ್ಬಹುದಿತ್ತು.....ಸ್ವಲ್ಪ ದೂರದಲ್ಲೇ ನನಗೆ ಬೆನ್ನು ಹಾಕಿ ದೂರ ಸಾಗುತ್ತಿದ್ದ ಬಸ್ಸನ್ನು ಕಂಡು ನನ್ನನ್ನು ನಾನೇ ಹಳಿದುಕೊಂಡೆ. ಇನ್ನು ಒಂದು ಗಂಟೆ ಕಾಯಬೇಕು ಇನ್ನೊಂದು ಬಸ್ಸಿಗೆ...    ಮನೆಯಲ್ಲಿಇವಳ್ಯಾಕೆ ಇನ್ನೂ ತಲುಪಿಲ್ಲವೆಂದುಕೊಂಡರೆ!  ಸರಿ, ವಿಷಯ ತಿಳಿಸಿಬಿಡುವ ಎಂದು ಮೊಬೈಲ್ ತೆಗೆದರೆ ಅದರಲ್ಲಿನ ಬ್ಯಾಟರಿ ಸತ್ತು ಅದು ತಣ್ಣಗೆ ಮಲಗಿತ್ತು. ಇರಲಿ ಇದೇನೂ ಕೊನೆಯ ಬಸ್ಸಲ್ಲವಲ್ಲ. ಗಾಬರಿಯೇನಿಲ್ಲವೆಂದುಕೊಂಡು  ಸುಮ್ಮನುಳಿದೆ.

ಅಂತೂ ಇಂತೂ ಸುಮ್ಮನೆ ಒಂದು ಗಂಟೆ ಕಾಲು ನೋಯಿಸಿಕೊಂಡು ಕಾದ ನಂತರವೇ ಇನ್ನೊಂದು ಬಸ್ಸು ಬಂದಿದ್ದು. ಬರುವಾಗಲೇ ದಿನ ತುಂಬಿದ ಬಸುರಿಯಂತಿದ್ದ ಬಸ್ಸಿನೊಳಗೆ ನಾನೂ ನುಗ್ಗಿದೆ. ನನ್ನನ್ನು ನೋಡಿದೊಡನೆ ಪರಿಚಯದವರೊಬ್ಬರು ಎದ್ದು ಕಿಟಕಿಯ ಪಕ್ಕದ ಸೀಟ್ ನೀಡ ಬೇಕೆ ! ಅವರಿಗೆ  ತುಂಬಾ ಧನ್ಯವಾದಗಳನ್ನು ಹೇಳಿ, ಸುಲಭದಲ್ಲಿ ಸೀಟ್ ಗಿಟ್ಟಿಸಿದ ನನ್ನ ಮೇಲೆ ಅಸೂಯೆಗೊಂಡ ಬೇರೆ ಕಣ್ಣುಗಳ ಕಡೆಗೆ ನೋಡದೆ ಕುಳಿತೆ.

ಅಷ್ಟರಲ್ಲಾಗಲೇ ಕತ್ತಲಾಗಿತ್ತು. ಪೇಟೆಯ ವಿದ್ಯುದ್ದೀಪಗಳ  ಭರಾಟೆ ಮುಗಿದ ನಂತರ ಸುಮ್ಮನೆ ಕತ್ತಲಿಗೆ ಕಣ್ಣನ್ನು ಹೊಂದಿಸಿ ಹೊರಗೆ ದಿಟ್ಟಿಸಿದೆ. ಒಂದೇ ಕ್ಷಣ ಅಷ್ಟೇ... ಯಾರೋ ನನ್ನೆಡೆಗೆ ನೋಡುತ್ತಾ ಹಿಂಬಾಲಿಸಿ ಬರುತ್ತಿರುವಂತೆ ಅನ್ನಿಸಿತು. ನಿಜ.. ನಮ್ಮ ಬಸ್ಸಿನೊಂದಿಗೆ ಅವನ ಸವಾರಿಯು ಸಮಾನಾಂತರದಲ್ಲೇ ಇತ್ತು. ಅವನ ಕಡೆಗೆ ದೃಷ್ಟಿ ಹಾಯಿಸಿದಾಗೆಲ್ಲ ಮುಗುಳ್ನಗುವಿನಲ್ಲೇ ಮೋಡಿ ಮಾಡುತ್ತಿದ್ದ! ಇದೊಳ್ಳೆ ಗ್ರಹಚಾರವಾಯಿತಲ್ಲ ಎಂದುಕೊಂಡು ಅವನ ಕಡೆಗೆ ನೋಡದಂತೆ ಕಣ್ಣನ್ನು ಬಲವಂತವಾಗಿಯೇ ಬೇರೆಡೆಗೆ ತಿರುಗಿಸಿದೆ. ಆದರೂ ಅವನು ನನ್ನನ್ನೇ ನೋಡುವುದು, ಅವನ ಕಣ್ಣೋಟ ನನ್ನಿಂದ ಬೇರಾಗದಿರುವುದು ನನ್ನರಿವಿಗೆ ಬರುತ್ತಿತ್ತು.

ಬಸ್ಸಿಳಿಯುವ ಸಮಯ ಸಮೀಪಿಸುತ್ತಿದ್ದಂತೆ ಹೆದರಿಕೆ ಆವರಿಸ ತೊಡಗಿತು. ನಾನು ಇಳಿಯುವುದನ್ನು ಅವನು ನೋಡಿದರೆ.. ಅಲ್ಲಿಯೂ ಹಿಂಬಾಲಿಸಿದರೆ... ಯಾಕೋ ಅಷ್ಟೇನೂ ತೊಂದರೆ ಕೊಡಲಾರನೆನಿಸಿತು. ಹೇಗೂ ಮನೆಗೆ ಹೆಚ್ಚು ದೂರವಿಲ್ಲ. ಬೇಗನೆ ನಡೆದು ಸೇರಿಕೊಳ್ಳಬಹುದು ಎಂದು ಮನದಲ್ಲೇ ಅಂದು ಕೊಂಡೆ. ಬಸ್ಸಿಂದ ಇಳಿದು ಸುತ್ತಲೂ ಕಳ್ಳ ನೋಟ ಬೀರಿದೆ. ದಟ್ಟನೆಯ ಮರಗಳು ಕತ್ತಲನ್ನು ಇನ್ನಷ್ಟು ಗಾಢವಾಗಿಸಿದ್ದವು. ಅವನೆಲ್ಲೂ ಕಾಣಿಸಲಿಲ್ಲ!


ಅಬ್ಬ.. ಎಂದುಕೊಂಡು ಕತ್ತಲಲ್ಲಿ ದಾರಿ ಹುಡುಕಲೆಂದು ಟಾರ್ಚನ್ನು ತಡಕಿದರೆ..ಅದೆಲ್ಲಿದೆ?!  ಬೆಳಗ್ಗಿನ ಗಡಿಬಿಡಿಯಲ್ಲಿ ಮೇಜಿನ ಮೇಲೆಯೆ ಬಿಟ್ಟು ಬಂದದ್ದು ನೆನಪಾಯಿತು. ಛೇ..ಇದು ಬೇರೆ ಇವತ್ತೇ ಆಗಬೇಕಿತ್ತಾ...ಎಂತಾ ಹಾಳು ಮರೆವು ಎಂದುಕೊಂಡು ಕತ್ತಲಲ್ಲೇ ಎರಡು ಹೆಜ್ಜೆ ಮುಂದಿಟ್ಟೆ.

ಅಷ್ಟೇ.... ಎಲ್ಲಿದ್ದನೋ ಅವನು! ನಾ ನಡೆವ ಹಾದಿಗೆ ಬೆಳಕ ಬೀರಿ ನನ್ನತ್ತ ನೋಡಿ ನಕ್ಕ! ನಾನು ತಲೆ ತಗ್ಗಿಸಿ ಅವನತ್ತ ನೋಡದೆ ಬೆಳಕಿನ ದಾರಿಯಲ್ಲೇ ನಡೆಯುತ್ತಾ ಮನೆಯ ಅಂಗಳವನ್ನು ತಲುಪಿದೆ.

ನನ್ನ ದಾರಿಯನ್ನೇ ಕಾಯುತ್ತಿದ್ದ ಅತ್ತೆ, ಯಾಕೆ ಟಾರ್ಚ್ ತಗೊಂಡು ಹೋಗಿಲ್ವಾ, ಕತ್ತಲಲ್ಲಿ ಹೇಗೆ ಬಂದೆ ಎಂದು ಆತಂಕಗೊಂಡರೆ, ನನ್ನ ಮುಖ ಕಂಡೊಡನೆ ನಿರಾಳವಾದ ನನ್ನವರು, ತಿಂಗಳು ಬೆಳಕಿದೆಯಲ್ಲಮ್ಮ, ದಾರಿಗೆ ಸಾಲದೆ? ಎಂದು ತಾಯಿಗೆ ಸಮಾಧಾನ ಮಾಡಿದರು.

ನಾನು ಜೊತೆಗೆ ಬಂದಿದ್ದ ಅವನ ಕಡೆಗೆ ಕಣ್ಣೆತ್ತಿ ನೋಡಿದೆ. ಅವನಾಗ ಮೆಲ್ಲನೆ ಮೋಡದ ಮರೆಗೆ ಸರಿದು ತುಸುವೇ ಕಣ್ಣು ಮಿಟುಕಿಸಿ ನಕ್ಕ...!!

Wednesday, August 17, 2011

ಸಾಹಸಗಾಥೆ..



ಸಂಜೆ ಹೊತ್ತು. ಸೂರ್ಯ ತನ್ನ ಕರ್ತವ್ಯವನ್ನು ಮುಗಿಸಿ ಮನೆಗೆ ಹೋಗುವ ತರಾತುರಿಯಲ್ಲಿದ್ದ. ಈ ಹೊತ್ತಿನಲ್ಲಿ ಏನೂ ಮಾಡದೆ ಸುಮ್ಮನೆ ಅತ್ತಿತ್ತ ನೋಡುತ್ತ ಕುಳಿತಿರುವುದು ನನಗೆ ಅತಿ ಇಷ್ಟ.

ಆಗಲೇ ನನ್ನ ಕಣ್ಣಿಗೆ ಬಿದ್ದಿತ್ತದು. ಪುಟ್ಟ ಪುಟ್ಟ ಇರುವೆಗಳು ಒಂದು ಹಸಿರಿನ ಮಿಡತೆಯ ಸತ್ತ ದೇಹವನ್ನು ಹೊತ್ತೊಯ್ಯುತ್ತಿದ್ದವು. ಸ್ವಲ್ಪ ದೂರ ಸಾಗಿದ ಬಳಿಕ ಗೋಡೆಯಲ್ಲಿದ್ದ ಚಿಕ್ಕ ತೂತಿನೊಳಗೆ ಸಾಗಬೇಕಿತ್ತು ಇವರ ಮೆರವಣಿಗೆ.

ಎಷ್ಟು ಸಲ ಸುತ್ತು ಬಂದರೂ  ಈ ಭಾರೀ ಗಾತ್ರದ ಆಹಾರವನ್ನು ಗೂಡಿನೊಳಗೆ ಎಳೆದೊಯ್ಯಲು ಸಾಧ್ಯವಾಗಲಿಲ್ಲ. ನಾನು ಕುತೂಹಲದಿಂದಲೇ ಅವರ ಕಾರ್ಯವನ್ನು ವೀಕ್ಷಿಸುತ್ತಿದ್ದೆ. ನೋಡುತ್ತಿದ್ದಂತೆ ಮಿಡತೆಯ ಅಂಗಗಳನ್ನು ತುಂಡಾಗಿಸತೊಡಗಿದವು. ಬೇರೆ ಬೇರೆಯಾಗಿಸಿದ ಚೂರುಗಳನ್ನು ವಿಜಯ ಪತಾಕೆಯಂತೆ  ಎತ್ತಿ ಹಿಡಿದು ಅತ್ತಿತ್ತ ಓಡಾಡಿದವು.

ನಂತರ ಒಂದೊಂದಾಗಿ ನಿಧಾನಕ್ಕೆ ಗೂಡಿನೊಳಗೆ ಹೋಗತೊಡಗಿದವು. ಅಷ್ಟೇ.. ಸ್ವಲ್ಪ ಹೊತ್ತಿನಲ್ಲಿ ಮಿಡತೆಯ ಇಡೀ ಶರೀರ ಗೂಡಿನೊಳಗೆ ಸೇರಿ ಹೋಗಿತ್ತು ತುಂಡು ತುಂಡುಗಳಾಗಿ..

ನಾನು ಮೆಲ್ಲನೆದ್ದು ಅಡುಗೆ ಮನೆಯಲ್ಲಿ ಹರವಿಟ್ಟಿದ್ದ ಉದ್ದನೆಯ ಪಡುವಲಕಾಯನ್ನು ತುಂಡಾಗಿಸಿ ಫ್ರಿಡ್ಜ್‌ನೊಳಗಿರಿಸಿದೆ.

Tuesday, August 16, 2011

ಎಲ್ಲಿದ್ದನೋ ವಸಂತ ..

ಎಲ್ಲೆಲ್ಲೂ ಹಸಿರಸಿರಿ
ರಾರಾಜಿಸುತ್ತಿರುವಾಗ.....
ನಾ ನನ್ನೆಲ್ಲವನ್ನು ಕಳೆದುಕೊಂಡು
ಬೋಳಾಗಿ ನಿಂತಿದ್ದೆ...
ಎಲ್ಲಿಂದ ಬಂತೋ ಕುಳಿರ್ಗಾಳಿ
ಎಲ್ಲಿದ್ದನೋ ವಸಂತ.....
ಒಂದೇ ಒಂದು ಸ್ಪರ್ಶದಿಂದ 
ಮೈಯೆಲ್ಲಾ ನಾಚಿ ಕೆಂಪೇರಿತು...

ಯಾರೋ ಕಟ್ಟಿದ ಬೇಲಿಯಳತೆ
ಮೀರಿಲ್ಲ ನಾನಿನ್ನೂ ...
ನನ್ನ ಹರೆಯಕ್ಕೆ ಉಂಟೇ
ಈ ಪರಿಧಿ ................
ಪರಿಮಳ ಪಸರಿಸಿದೆಡೆಯೆಲ್ಲ
ನನ್ನದೇ ಸಾಮ್ರಾಜ್ಯ.
ಕಳೆದು ಹೋಗದವರಿಲ್ಲ ಇಲ್ಲಿ ... !!!

Saturday, August 13, 2011

ನನ್ನಣ್ಣ..


ಅವಳಿಗಳಾದ ನಮ್ಮ ಹುಟ್ಟುಹಬ್ಬ  ಎಂದು ಅಪ್ಪ, ನನಗು ಅಣ್ಣನಿಗೂ ಬಟ್ಟೆ ತಂದಿದ್ದರು. ಹೊಸಿಲಲ್ಲೆ ಕಾಯುತ್ತಾ ಕುಳಿತಿದ್ದ ಇಬ್ಬರ ಕೈಗು ಒಂದೊಂದು ಪ್ಯಾಕೆಟ್ ನೀಡಿ ಒಳನಡೆದರು. ಅವಸರದಲ್ಲೇ ಪ್ಯಾಕೆಟ್ ಹರಿದು ಬಟ್ಟೆ ಹೊರಗೆಳೆದೆ. ನನ್ನಿಷ್ಟದ ಬಣ್ಣದ ಪ್ಯಾಂಟು ಶರ್ಟ್.. ಸಂತಸದಿಂದ  ಕಣ್ಣು "ಮಿಟುಕಿಸುವುದರಲ್ಲೇ ಅಣ್ಣ 'ನನ್ನದದು ಕೊಡು.. ನಿನ್ನದಿಲ್ಲಿದೆ' ಎಂದು ಅವನ ಕೈಯಲ್ಲಿದ್ದ ಡ್ರೆಸ್ ನನ್ನೆಡೆಗೆ ನೂಕಿದ.ಯಾಕೋ ಮೊದಲ ಬಾರಿಗೆ ನಮ್ಮಿಬ್ಬರೊಳಗೆ  ಏನೋ ಭಿನ್ನತೆ ಇದೆ ಎಂಬ ಅನುಮಾನ ನನ್ನಲ್ಲಿ ಮೊಳೆಯಿತು.
ಮರುದಿನ ಬೆಳಗ್ಗೆ ಏಳುವಾಗ ಅಣ್ಣನ ಅಂಗಿ ನನ್ನ  ತಲೆದಿಂಬಿನ ಮೇಲೆ  ಇತ್ತು. ನಿನಗೆ ಬೇಕಿದ್ರೆ ಇದನ್ನೆ ಹಾಕು ಎಂದ. ಅವ ಹಾಕಿದ ಸ್ವಲ್ಪ ಹಳೇ ಅಂಗಿಯ ಕಡೆಗೆ ನೋಡಿ ಮೆಲ್ಲನೆ, ಬೇಡ .. ನನ್ನ ಅಂಗಿಯೇ ಚಂದ ಎಂದೆ..

ಒಂಟಿ ಮನೆಯಲ್ಲಿ ವಾಸವಾಗಿದ್ದ ನಾವು ಮೊದಲ ಬಾರಿಗೆ  ಪುಟ್ಟ ವಠಾರದ ಮನೆಯಲ್ಲಿ ವಾಸಿಸಲು ಬಂದಿದ್ದೆವು.  ಎಲ್ಲ್ರ ಮನೆಯಲ್ಲೂ ಮಕ್ಕಳ ಸೈನ್ಯ ಇತ್ತು.ಬಂದ ಮರುದಿನವೆ ಬಾಗಿಲೆಡೆಯಲ್ಲಿ ಮುಖ ಹೊರಗೆ ತೂರಿಸಿ ಇಣುಕುತ್ತಿದ್ದ ನಮ್ಮಿಬ್ಬರನ್ನು ಪಕ್ಕದ ಮನೆಯ ಹುಡುಗರು ಆಟಕ್ಕೆ ಕರೆದರು. ಸದಾ ಅಣ್ಣನ ಜೊತೆಯಲ್ಲೇ ಆಡುತ್ತಿದ್ದ ನಾನು ಅವನೊಡನೆ ಸಾಗಿದೆ.ಬುಗುರಿ ಆಟ ಆಡುತ್ತಿದ್ದ ಅವರು ನನ್ನನ್ನು ಆಟದಿಂದ ಹೊರಗೇ ಉಳಿಸಿದರು. ಅಣ್ಣನೂ, ಆಗೊಮ್ಮೆ ಈಗೊಮ್ಮೆ ನನ್ನೆಡೆಗೆ ನೋಡುತ್ತಿದ್ದವನು, ಮೆಲ್ಲನೆ ಅವರ ಕಡೆಯಿಂದ  ನನ್ನ ಬಳಿ ಬಂದು ನನಗೆ ಬುಗುರಿ ತಿರುಗಿಸುವುದನ್ನು ಹೇಳಿಕೊಡಲಾರಂಬಿಸಿದ.


ಆಗಷ್ಟೆ ಹೈಸ್ಕೂಲಿನ ಮೆಟ್ಟಲೇರಿದ್ದು. ಶಾಲೆಯಿಂದ ಪ್ರವಾಸ ನಿಶ್ಚಯವಾಗಿತ್ತು. ಕೇವಲ ಎರಡು ದಿನದ್ದು. ಅಪ್ಪ ಅಮ್ಮ ಒಪ್ಪಿಯಾರೆಂಬ ಧೈರ್ಯದಲ್ಲಿ ಹೆಸರು ನೀಡಿದ್ದೆವು. ಮನೆಗೆ ಬಂದೊಡನೆ ವರದಿ ಸಲ್ಲಿಸಿ ಆಗಿತ್ತು. ಅಪ್ಪ ಒಪ್ಪಿ ತಲೆಯಾಡಿಸಿದ್ದೂ ಆಗಿತ್ತು.ಆದಿನ ರಾತ್ರೆ ಅಮ್ಮ, ಅಪ್ಪನ ಜೊತೆ ತುಂಬಾ ಹೊತ್ತು ಮಾತನಾಡುತ್ತಿದ್ದುದು ಕೇಳಿಸಿತ್ತು.
ಮರುದಿನ,  ರಜದಲ್ಲಿ ಅಪ್ಪ ಅಮ್ಮನೇ ನನ್ನನ್ನು  ಅದೇ ಜಾಗಕ್ಕೆ ಕರೆದುಕೊಂಡು ಹೋಗುವ ಭರವಸೆ ನೀಡಿ  ಅಣ್ಣನಿಗೆ ಮಾತ್ರ  ಈಗ ಹೋಗಲು ಅನುಮತಿ ಕೊಟ್ಟರು.ಹಾಗಿದ್ರೆ ನಾನೂ ನಿಮ್ಮ ಜೊತೆಗೇ ಹೋಗೋದು.. ಈಗೊಮ್ಮೆ ಯಾಕೆ.. ಎಂದ ಅಣ್ನ ಅಲ್ಲಿಂದ ಸರಿದು ಹೋದ.
.
ಮೊದಲ ಬಾರಿಗೆ ಸಭೆಯಲ್ಲಿ ಭಾಷಣ ಮಾಡಿದ್ದೆ. ಬಹುಮಾನವೂ ಬಂದಿತ್ತು. ಅದೇ ಸಂಭ್ರಮದಲ್ಲಿ ಮನೆಗೆ ಬಂದಿದ್ದೆ. ನೆರೆಮನೆಯರೂ ಅಮ್ಮನೊಂದಿಗೆ ಮಾತಿಗೆ ನಿಂತಿದ್ದರು. ನನ್ನ ಉತ್ಸಾಹ ನೋಡಿ 'ಇದೆಲ್ಲ ನಾಲ್ಕು ದಿನ ಅಷ್ಟೆ ಆಮೇಲೇನಿದೆ? ಯಾರು ಕೇಳ್ತಾರೆ ನಮ್ಮ ಭಾಷಣ.. ಮನೆಯರು ಹೇಳಿದ್ದನ್ನ ಕೇಳ್ಕೊಂಡು ಇರಬೇಕು..ಎಂದು ಮೂಗು ಮುರಿದು ಹೋದರು. ಕೈಯಲ್ಲಿದ್ದ ಟ್ರೋಫಿಯನ್ನು  ಪಕ್ಕಕ್ಕೆಸೆದೆ.ಹೊರಗಿನಿಂದ ಆಗಷ್ಟೆ ಒಳ ಬಂದ ನನ್ನಣ್ಣ ಅಮ್ಮನೊಡನೆ ನನ್ನ ಭಾಷಣದ ಶೈಲಿಯ ವರ್ಣನೆ ಮಾಡಿ ಅಲ್ಲಿ ಬಿಸುಡಿದ್ದ ಟ್ರೋಫಿಯನ್ನು  ಸುರಕ್ಷಿತ ಸ್ಥಳ ಸೇರಿಸಿದ.

ನನ್ನ ಪ್ರತಿದಿನದ ಎಲ್ಲಾ ಕೆಲಸ ಕಾರ್ಯಗಳ ಒಂದು ಭಾಗ ನನ್ನ ಅಣ್ಣನದೇ ಆಗಿತ್ತು. 'ಹೆಣ್ಣಿನ ಜನುಮಕ್ಕೆ ಅಣ್ಣ ತಮ್ಮರು ಬೇಕು' ಎನ್ನುವ ಜನಪದ ಗೀತೆ ನನ್ನ ಮಟ್ಟಿಗೆ ನಿಜವೇ ಆಗಿತ್ತು. ಭಾಂದವ್ಯದ ಮೂಲ ಇರುವುದು ತ್ಯಾಗದಲ್ಲಿ ಎಂದು ನನಗೆ ತನ್ನ ಕೆಲಸಗಳಿಂದಲೇ ತಿಳಿಸಿದವನು.ಅವಳಿಗಳಾದ್ದರಿಂದ ಅವನಿಂದ ಕೇವಲ ಗಂಟೆಗಳ ಲೆಕ್ಕದಲ್ಲಿ ನಾನು ಚಿಕ್ಕವಳಾಗಿದ್ದರೂ ಇನ್ನೂ ನನ್ನನ್ನು ಸಣ್ಣ ಮಗುವೆಂದೇ ತಿಳಿದ ಅವನ ಪ್ರೀತಿಗೆ ಎಲ್ಲೆಯೆಲ್ಲಿ.. ಇದು ಕೂಡಾ ನನ್ನ ಸ್ವಾರ್ಥವೋ ಏನೋ .. ಆದರೂ ನಿತ್ಯವೂ ನನ್ನೆಡೆಗೆ ಹರಿದು ಬರುವ ಅವನ ಮಮತೆಯ ಧಾರೆ ನಿರಂತರವಾಗಿರಲಿ ಎಂಬ ಹಾರೈಕೆಯಷ್ಟೆ ನನ್ನದು.

Friday, August 12, 2011

ಬಣ್ಣ..


ಬಣ್ಣ !

ಅಮ್ಮಾ.. ಇವತ್ತು ಶನಿವಾರ ಅಲ್ವಾ..
ಹೌದು ಮುದ್ದು..
ಇವತ್ತು ಯೂನಿಫಾರ್ಮ್ ಇಲ್ಲ ಬಣ್ಣದ ಅಂಗಿ .. ನೆನಪಿದೆ ತಾನೆ ನಿಂಗೆ..
ಹುಂ ಪುಟ್ಟಾ ನೆನಪಿದೆ.. ಮೆಲ್ಲನೆ ಮಗಳ ಕೆನ್ನೆ ಸವರಿದಳು.
ನಂಗ್ಯಾವ ಬಣ್ಣದ ಅಂಗಿ ಅಮ್ಮಾ ಇವತ್ತು..?
ನನ್ನ ಜಾಣಮರಿಗೆ ಎಲ್ಲಾ ಬಣ್ಣದ ಅಂಗಿನೂ ಚೆನ್ನಾಗಿ ಕಾಣುತ್ತೆ, ಎಲ್ಲಿ.. ಸರಿ ನಿಲ್ಲು.. ಅಂಗಿ ಹಾಕಿ ಬಿಡ್ತೀನಿ..
ಬಣ್ಣದ ಅಂಗೀನೆ ಚೆನ್ನಾಗಿ ಕಾಣುವಾಗ ಯೂನಿಫಾರ್ಮ್ ಯಾಕಮ್ಮಾ ಹಾಕೋದು ..
ಎಲ್ಲಾ ಮಕ್ಕಳು ಒಂದೇ ತರದ ಬಟ್ಟೆ ಹಾಕಿದ್ರೆ ಯಾರಿಗೂ ಮೇಲು ಕೀಳು ಇರಲ್ಲ.. ನೋಡೋದಿಕ್ಕು ಚೆನ್ನಾಗಿ ಕಾಣುತ್ತೆ..
 ನೋಡೋದಾ..ಅಮ್ಮಾ.. ಆದ್ರೆ..
.. ನಡಿ ನಡಿ ಶಾಲೆಗೆ ತಡ ಆಯಿತು . ನಿನ್ನನ್ನ ಅಲ್ಲಿ ಬಿಟ್ಟು ಬಂದು ನಂಗೂ ಕೆಲ್ಸಕ್ಕೆ ಹೋಗ್ಬೇಕಲ್ವಾ.. ನನ್ನ ಜಾಣ ಮರಿ ನೀನು..
ಅಮ್ಮನ ಕೈ ಹಿಡಿದು ಹೊರಟಳು. ಗೇಟ್ ನ ಬದಿಯಲ್ಲಿ ನಿಂತಿದ್ದ ಶಾಲೆಯ  ಸಹಾಯಕಿಯ  ಕೈಗೆ ಮಗಳ ಕೈಯ್ಯನ್ನು ವರ್ಗಾಯಿಸಿ, ತಲೆ ಸವರಿ, ಬರ್ಲಾ..  ಸಂಜೆ ಬರ್ತೀನಿ ...
ಹುಂ.. ಸರಿ ಅಮ್ಮಾ..
ಮಗು ಒಳಗೆ ಹೋಗುವುದನ್ನೇ ನೋಡುತ್ತಾ ನಿಂತ ಅಮ್ಮನ ಕಣ್ಣಲ್ಲಿ ರಮಣ ಮಹರ್ಷಿ ಅಂಧರ ಶಾಲೆ ಎಂಬ ಬೋರ್ಡ್ ಪ್ರತಿಫಲಿಸುತ್ತಿತ್ತು.


Thursday, August 11, 2011

ಸಂತೆ..

ಕನಸುಗಳಿದೆಯೇ ಇಲ್ಲಿ ಮಾರಲಿಕ್ಕೆ 
ಹುಡುಕಿದರೆ ಹೆಕ್ಕಲಿಕ್ಕೆ.. 
ಯಾರಾದರು ಕಳೆದುಕೊಂಡಿರುವರೆ
ಈ ಸಂತೆಯೊಳಗೆ.. 
ಬದುಕುಗಳ ಮಾಲೆ ಕಟ್ಟಿ 
ಬಣ್ಣ ತುಂಬಿ ..  ನೇತು ಹಾಕಿದ್ದಾರಿಲ್ಲಿ
ಕೊಳ್ಳಬಲ್ಲವರಿಗಾಗಿ .ಕಾಯುತಿದೆ.. 
ಹಳೆಯದಕ್ಕೆ ಹೊಸ ಮೆರಗು 
ನೀಡಿ ಕರೆಯುತಿದೆ..
ನುಗ್ಗಿ ಕೊಳ್ಳುವ ಜನ ಇರುವವರೆಗೆ.. 
ಒಂದಿಷ್ಟು  ಪರಿಚಿತ ಮುಖಗಳಲ್ಲೂ 
ಅಪರಿಚಿತ ಭಾವ ......
ಗುರುತರಿಯದಿದ್ದರೂ ಕಿರುನಗೆಯ ಧಾರೆ .. 
 ಸಣ್ಣ ಹೂವ ಮಾಲೆಯಾದರೂ ಸರಿ.. 
ಕೊಂಡು ಕೊಡುವವರಿದ್ದರೆ.. 
ಮೊಗದಲ್ಲಿ ನಗು ತುಳುಕಿ ಬೆಳಗೀತು... 
ಹೊರಳಿ ಮನೆಗೆ ನಡೆವ ವೇದನೆಯೋ .. 
ಮರಳಿ ಬರುವ ಕಿರು ಆಸೆಯ ತುಡಿತವೋ .. 
ಕಾಡೀತು ಯಾವತ್ತಿಗೂ..
ಸಂತೆಯೊಳಗಿನ ಏಕಾಂತದ 'ಮತ್ತು'... 
ಇನ್ನೊಮ್ಮೆ ಹಂಚಲು ಸಂತಸವ  ಹೊತ್ತು... 


Wednesday, August 10, 2011

ಕಥೆಯಾದವಳು..



ಅವಳು ಅಕ್ಕಿ ಅರೆಯುವುದು ಎಂದರೆ ಅದೊಂದು ಯಾಗವಿದ್ದಂತೆ. ಮೊದಲಿಗೆ ಕಲ್ಲಿನ ಹತ್ತಿರದಲ್ಲಿ ನೆನೆಸಿಟ್ಟ ಅಕ್ಕಿ ,ನೀರು, ಕುಳಿತುಕೊಳ್ಳಲು ಮಣೆ ಎಲ್ಲಾ ಅಚ್ಚುಕಟ್ಟಾಗಿ ಜೋಡಿಸುತ್ತಿದ್ದಳು.ಕಲ್ಲನ್ನು ಸ್ವಚ್ಚಗೊಳಿಸುವುದರಲ್ಲೂ ಏನೋ ತನ್ಮಯತೆ.
ಮತ್ತೆ ನನ್ನನ್ನು ಕಣ್ಣೋಟದಲ್ಲೇ ಕರೆಯುತ್ತಿದ್ದಳು.ಒಂದು ಕೈ  ಕಡೆಯುವ ಕಲ್ಲಿನಲ್ಲಿ ಅಕ್ಕಿಯನ್ನು ತಿರುವುತ್ತಿದ್ದರೆ , ಇನ್ನೊಂದು ನನ್ನ ಕೈಯ್ಯಲ್ಲಿ ಹಿಡಿದಿರುವ ಸ್ಲೇಟಿನ ಅಕ್ಷರಗಳನ್ನು ಸರಿ ಪಡಿಸುತ್ತಿತ್ತು. ನನ್ನ ಸಂಯಮದ ಕಟ್ಟೆ ಒಡೆಯುವುದು ಆವಾಗಲೇ..  ಸಾಕು ಅದೆಲ್ಲ ಸರಿಯೇ ಇದೆ. ಈಗ ಕಥೆ ಹೇಳು ಎಂದು ಪೀಡಿಸುತ್ತಿದ್ದೆ.

ಒಂದಾನೊಂದು ಕಾಲದಲ್ಲಿ ಎಂದು ಕಥೆ ಸುರು ಆದರೆ ನಾನೆಲ್ಲೊ ಮುಖ ತಿರುಗಿಸುತ್ತಿದ್ದೆ. ನನಗೆ ಅದೇ ರಾಜ, ಅದೇ ರಾಣಿ ಅವರ ಸಂಪತ್ತು ತುಂಬಿದ ರಾಜ್ಯದ ನೋವೆ ಇರದ, ಇದ್ದರೂ ಅದು ನನ್ನರಿವಿಗೆ ಬರದಂತೆ ಇರುವ ಕಥೆಗಳು ಸ್ವಲ್ಪವೂ ರುಚಿಸುತ್ತಿರಲಿಲ್ಲ.

ಅವಳೂ ನನ್ನಾಳವನ್ನು ಬಲ್ಲಳು.                                                          

ಕಲ್ಲಿನ ಪ್ರದಕ್ಷಿಣೆ ಅದರ ಗುಂಡಿಯ ಒಳಗೇ ಆಗುವಂತೆ ಅವಳೂ ತನ್ನದೇ ಬಾಲ್ಯಕ್ಕೊ, ಕಳೆದು ಹೋದ ಯೌವನಕ್ಕೊ ಸುತ್ತು ಬರುತ್ತಿದ್ದಳು. ಅವಳ ಪ್ರತಿ ಕಥೆಯಲ್ಲೂ ಅವಳೇ ನಾಯಕಿ.  ಆ ಕಥೆಗಳಲ್ಲಿ ಅವಳ ನಗು, ಅವಳದೇ ಅಳು.. ಎಲ್ಲವನ್ನು ಮೊಗೆ ಮೊಗೆದು ತುಂಬಿ ನನಸಾಗದ ಕನಸುಗಳನ್ನು ಅಲ್ಲಿ ಹಸನಾಗಿ ಹರವುತ್ತಿದ್ದಳು. ನಿಧಾನಕ್ಕೆ ಒಂದೊಂದನ್ನೆ ಹೆಕ್ಕಿ , ಪೋಣಿಸಿ  ನನ್ನ ಮುಡಿಯಲ್ಲೇ ಇಡುತ್ತಿದ್ದಳು. ಅದು ನನ್ನಲ್ಲೇ ಅರಳಿ ಪರಿಮಳಿಸಲಿ ಎಂಬ ಹಾರೈಕೆ ಜೊತೆಗೆ..

ಎಲ್ಲೆಲ್ಲೊ ಹರಡಿದ್ದ ನನಗೇ ತಿಳಿಯದ ಸಂಬಂಧಗಳ ಬಂಧವನ್ನು ಮತ್ತೆ ಬೆಸೆಯುತ್ತಿದ್ದಳು. ಕಳೆದ ಕಾಲದ ಬುತ್ತಿಯ ಗಂಟಿನ ಸವಿಯೂಟವದು. ಅವಳ ಕಥೆಗಳಿಂದಲೇ ನನ್ನ ಜಗತ್ತು ವಿಶಾಲವಾಗುತ್ತಿತ್ತು.

ತಾನಿಟ್ಟ ಪ್ರತಿ ಹೆಜ್ಜೆಗಳ ಮೇಲೆ ನನ್ನ ಪುಟ್ಟ ಪಾದವನ್ನೂ ನೆಟ್ಟಗೆ ನಿಲ್ಲಿಸುವ ಅವಳ ಪ್ರಯತ್ನ..

ಅಕ್ಕಿ ನುಣ್ಣಗಾಗುತ್ತಿದ್ದಂತೆ ನಾನೂ ನಯವಾಗುತ್ತಾ ಸಾಗುತ್ತಿದ್ದೆ. ಅವಳ ಎಲ್ಲಾ ಭಾವಗಳು ನನ್ನಲ್ಲೂ ಮೂಡಿದರೆ ತೃಪ್ತಿಯಿಂದ ನಸು ನಗುತ್ತಿದ್ದಳು. ಅವಳ ಕಣ್ಣ ಹನಿಯೊತ್ತಿದ ಸೆರಗಿನಿಂದಲೇ ನನ್ನ ಮುಖವೊರೆಸುತ್ತಿದ್ದಳು. ಬಿಚ್ಚಿಟ್ಟ ಕಳೆದ ಬದುಕಿನ ಮಾಯೆಯಲ್ಲಿ ತಾನೂ ಕಳೆದು ಹೋದುದಕ್ಕೆ ಸಂಕೋಚಿಸುತ್ತಲೇ ಕುಳಿತಲ್ಲಿಂದ ಎದ್ದೇಳುತ್ತಿದ್ದಳು..

 ನನಗಾಗಿ?? ಕಥೆಯಾಗಿದ್ದ ಅವಳು... ನನ್ನಮ್ಮ..



ನನ್ನಂತೆ ಇವಳೂ..


ಹಿಟ್ಟು ನುಣ್ಣಗಾಗುವಾಗ ನೀರು ಕೂಡಾ ಬಸವಳಿಯುತ್ತದೆ....ತಿರುಗುತ್ತಿದ್ದುದು ಕಲ್ಲೋ.. ಕಾಲವೋ..ತಿಳಿಯದಂತೆ.. ತಿರುವುವ ಕೈ ತೂಕಡಿಸುತ್ತಲೇ ತಿರುವುತ್ತಿತ್ತು ಇದಾವುದರ ಪರಿವೆಯಿಲ್ಲದೆ..


ಸದಾ ಕಥೆಗಳಿಗಾಗಿಯೇ ಪೀಡಿಸುವ, ಕಥೆಯನ್ನೇ ನಿಜವೆಂದು ಭ್ರಮಿಸುವ ಹುಚ್ಚು ಹುಡುಗಿಯಾಗಿದ್ದ  ಇವಳು.. ಪ್ರತಿ ನೋವಿಗೂ ಅಳುವೊಂದೇ ಉತ್ತರವಲ್ಲ.. ನಕ್ಕೂ ಮರೆಸಬಹುದೆಂದು ತಿಳಿಯದಿದ್ದವಳು.
ಇವಳ ಕುತೂಹಲ ಇದ್ದುದು ನನ್ನ ಬಗೆಗೇ.. ಹರಿದ ನನ್ನ ಸೀರೆಯ  ತುಂಡನ್ನೇ ಉಟ್ಟು  ನನ್ನಂತೇ ಆಗುತ್ತಿದ್ದ ಬಿನ್ನಾಣಗಿತ್ತಿ....
ಎಲ್ಲವನ್ನೂ ಇದ್ದಂತೆ ಹೇಳಿದರೆ ಕಥೆ ಹೇಗಾದೀತು..?ಹಾಗೆಂದು ಮನ ಬಯಸಿದ್ದನ್ನೆಲ್ಲ ನಾಲಿಗೆ ನುಡಿದರೆ ಇವಳರಿವಿನ ಅಳತೆ ಮೀರಬಹುದೆಂಬ ಚಿಂತೆ.. ಸೋಲುಗಳೆಷ್ಟೇ ಬರಲಿ ,ಪ್ರತಿ ಕೊನೆಯೂ  ಗೆಲುವಿನ ಮೆಟ್ಟಿಲೇರಲೇಬೇಕಾದ ಅನಿವಾರ್ಯತೆಯೂ ಜೊತೆಗಿತ್ತು. ಇವಳ ಕಣ್ಣಲ್ಲಿ ಆ ಮೆಚ್ಚುಗೆ ಒಂದು ಕ್ಷಣ ಫಳಫಳಿಸಿ ಮಿಂಚುವುದೂ ನನ್ನ ಎದೆಯುಬ್ಬಿಸುತ್ತಿತ್ತು.


ಪ್ರತಿ ಕಿರಣದ ಗುರಿಯೂ ಬೆಳಕಾಗಿಸುವುದರ ಕಡೆಗೇ ..


ಹರಿವ ತಿಳಿನೀರ ಝರಿಯಂತೆ  ಕಪಟವಿಲ್ಲದ ಮುದ್ದು ಕೂಸು.. ನನ್ನ ಒಳಗಿದ್ದ ಕಿಡಿಯ ನಂದಿಸುವ ನೀರು  


ಇನ್ನೂ ಹೆಜ್ಜೆ ಮೂಡದ ಹಾದಿಯಲ್ಲಿ ಸಾಗಬೇಕಿದ್ದವಳು ,ಮುಳ್ಳು ಕಲ್ಲುಗಳ ಪರಿಚಯ  ಒಳ್ಳೆಯದೇ..


ನನ್ನ ನೆನಹುಗಳಿಗೆ ಕಾವು ಕೊಟ್ಟು ಮತ್ತೆ ಮರಿಯಾಗಿಸುವ, ಇವಳ ರೆಕ್ಕೆಯ ಆಸರೆಯಲ್ಲಿ ಆಗಸಕ್ಕೇರುವ ನನ್ನ ನಿಲುವು  ಸ್ವಾರ್ಥವೇ ಎಂಬ ಶಂಕೆಯೂ ಮೂಡುತ್ತಿತ್ತು.

ಆದರೆ ಅನುಭವಗಳ ತಳಹದಿ ಗಟ್ಟಿಯಾಗಿದ್ದಷ್ಟು ಕಟ್ಟಡ ಭದ್ರವಾಗಿ  ನಿಂತೀತು ಎಂಬ ಆಸೆ ನನ್ನೊಳಗೆ .


ಏಕೆಂದರೆ  ನನಗಾಗಲೇ ತಿಳಿದಿತ್ತಲ್ಲ.. ಇವಳೂ ನನ್ನಂತೆ ಹೆಣ್ಣಾಗುವವಳು..

Tuesday, August 9, 2011

ಸಂಜ್ಞಾ ಕೋವಿದರು


ನನಗೆ ನಿಲ್ಲಲು ಕೊಂಚ ಜಾಗ ಮತ್ತು ಒಂದು ದೊಡ್ಡ ಸನ್ನೆಗೋಲು ಇವಿಷ್ಟು ಕೊಟ್ರೆ ಸಾಕು. ಭೂಮಿಯನ್ನೇ ಜರುಗಿಸಿ ಪಕ್ಕಕ್ಕಿಡಬಲ್ಲೆ ಎಂದು ಹೆಮ್ಮೆಯಿಂದ  ನುಡಿದಿದ್ದನಂತೆ ಒಬ್ಬ ವಿಜ್ಞಾನಿ. ಆದರೆ ನಾನಿಲ್ಲಿ        ಸನ್ನೆಗೋಲಿನ ಸುದ್ದಿ ಮಾತಾಡುತ್ತಿಲ್ಲ. ಅಪಾಯಕಾರಿಯಾದ ಕೋಲನ್ನು ತೆಗೆದಿಟ್ಟು ಕೇವಲ ಸನ್ನೆಯ ಬಗ್ಗೆ ಮಾತಾಡೋಣ ಆಗದೆ?


ಮಾತಿನ ಜೊತೆಗೂ ಮತ್ತು ಮಾತಿಗೆಡೆಯಿಲ್ಲದಲ್ಲೂ ಮನದಿಂಗಿತವನ್ನು ವ್ಯಕ್ತ ಪಡಿಸಲು ಸಂಜ್ಞೆಗಳೇ ಅಥವಾ ನಮ್ಮ ನಿಮ್ಮಂತಹ ಪಾಮರರ ಭಾಷೆಯಲ್ಲಿ ಹೇಳೋದಾದ್ರೆ ಸನ್ನೆಗಳೇ ಮಿತ್ರರು ! ಸಾಂದರ್ಭಿಕವಾಗಿ    ಸನ್ನೆಗಳನ್ನು ಮಾಡುವುದು ಒಂದು ಕಲೆಯಾದರೆ, ಅನುಸರಿಸುವುದು     ಇನ್ನೊಂದು ಕಲೆ ! 


ಒಂದಲ್ಲ ಒಂದು ಸಾರಿ ಕ್ಲಾಸಿಗೆ ತಡವಾಗಿ ಹೋಗಿ,  ಕನಕದಾಸ ಪಿಕ್ಚರ್ ನಲ್ಲಿ ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ ಎಂದು ಹಾಡೋ ಅಣ್ಣಾವ್ರ ಸ್ಟೈಲ್ನಲ್ಲಿ, ಇಲ್ಲದ ದೈನ್ಯತೆಯನ್ನು ಮೈದಳೆದು ನಿಂದವರಲ್ಲವೆ ನಾವು!? ಇದನ್ನು ಕಂಡಾಗ  ಮೇಸ್ಟ್ರಿಗೆ   ಸಿಕ್ಕಾಪಟ್ಟೆ ರಿಯಾಕ್ಟ್ ಆಗಬೇಕನ್ನಿಸಿದರೂ, ತಮ್ಮಬಿಪಿ ಕಾಯಿಲೆಗೆ ಡಾಕ್ಟರ್ ಬರೆಯುತ್ತಿದ್ದ ಉದ್ದದ ಪ್ರಿಸ್ಕ್ರಿಪ್ಷನ್‌ಗಳು ನೆನಪಾಗಿ ಸನ್ನೆಗೆ ಶರಣು ಹೋಗುತ್ತಿದ್ದರು. ಕಪ್ಪು ಹಲಗೆಯಿಂದ ತಲೆ ಹೊರಳಿಸದೆ   ಅಸಹನೆಯಿಂದ ಕೈ ಕೊಡವಿ ಒಳ ಬರುವಂತೆ ಮಾಡಿದ ಸನ್ನೆಯನ್ನು ಕ್ಷಣಾರ್ಧದಲ್ಲಿ ಗ್ರಹಿಸಿ ತಲೆ ತಗ್ಗಿಸಿ ಹಿಂದಿನ ಬೆಂಚಿನೆಡೆಗೆ ನಡೆದು ಸಂಜ್ಞಾ ಕೋವಿದರಾದ ಅನುಭವ ನಮ್ಮಂತೆ ನಿಮ್ಮದೂ ಕೂಡ ಆಗಿರಬಹುದು.


ಶಾಲೆಯೆಂದ ಮೇಲೆ ಪರೀಕ್ಷೆ ಇಲ್ಲದೆ ಉಂಟೆ!? ಇವುಗಳು ನಡೆಯುವ  ಕೊಠಡಿಗಳಂತೂ ಈ ಸನ್ನೆಗಳ ತಂಗುದಾಣವೇ ಸರಿ. ಇಲ್ಲಿ ಹೊಸ      ಸನ್ನೆಗಳ ಆವಿಷ್ಕಾರಕ್ಕೂ ಬೇಕಾದಷ್ಟು ಅವಕಾಶಗಳಿರುತ್ತದೆ. ಮೊದಲೆಲ್ಲ ಕೊಶ್ಚನ್ ಪೇಪರ್ ನಲ್ಲಿ ಹೊಂದಿಸಿ ಬರೆಯಿರಿ ಎಂಬುದಿತ್ತು. ಕ್ಲಾಸಿನಲ್ಲಿ ಎಲ್ಲರೂ ಅದರಲ್ಲಿ ಪೂರ್ತಿ ಅಂಕಗಳನ್ನು ಗಿಟ್ಟಿಸುತ್ತಿದ್ದೆವು. ಎಲ್ಲ ಕೈ ಬೆರಳುಗಳ ಸನ್ನೆ೦‌ು ಮೂಲಕವೇ ಸಂಹವನೆ  ನಡೆಯುತ್ತಿತ್ತು .


ಸನ್ನೆಗಳು ಮಾತನ್ನು ಮೀರಿಸಬಲ್ಲವು ಎಂದು ಅರಿಯಬೇಕಾದರೆ   ನೃತ್ಯಗಳನ್ನೋ, ಹಳೆ ಸಿನಿಮಾ ಹಾಡುಗಳನ್ನೋ ನೋಡಿ. ಅಲ್ಲಿ ನಟ ನಟಿಯರು ಬರೇ ಕತ್ತು ಕಣ್ಣುಗಳನ್ನು ಹೊರಳಿಸಿ ಹಾಡಿನ ಭಾವವನ್ನು ಹೊರ ಹಾಕುವುದರಲ್ಲಿ ಯಶಸ್ವಿಯಾಗುತ್ತಿದ್ದರು. ಆದರೆ ಈಗಿನ ಸಿನಿಮಾ ಹಾಡುಗಳಲ್ಲಿ ಪ್ರೀತಿ ಪ್ರೇಮದಂತಹಾ ನವಿರಾದ ಭಾವಗಳಿಗೂ ನಾಯಕ ನಾಯಕಿಯರು ತಮ್ಮ ಕೈ ಕಾಲುಗಳನ್ನು ವಿಚಿತ್ರವಾಗಿ ನಾಲ್ದೆಸೆಗೂ ಎಸೆದು ಕೇಳಿದ್ದು ಏನೋ, ನೋಡಿದ್ದು ಇನ್ನೇನೋ ಅನ್ನುವ ಹಾಗೆ ಮಾಡಿ ಬಿಡುತ್ತಾರೆ!


 ಇನ್ನೂ ಸನ್ನೆಗಳ ಕೈ ಮೇಲಾಗುವುದು ನೋಡಬೇಕೆಂದರೆ ಸುತ್ತ ಮುತ್ತಲಿನ ಪ್ರೇಮಿಗಳನ್ನು ಗಮನಿಸಿ. ಲೋಕಾಪವಾದಕ್ಕೆ ಹೆದರಿ ಸದಾ ಮೌನದ ನೆರಳಲ್ಲೇ ಬಾಳುತ್ತಾ ಬರೇ ಸನ್ನೆಗಳಿಂದಲೇ ವ್ಯವಹರಿಸುತ್ತಾರೆ. ಇವರ  ಸನ್ನೆಗಳ ಬಗ್ಗೆ ಹೇಳಲು ಹೊರಟರೆ ಸಂಜ್ಞಾರ್ಥ ಪ್ರಭೋದಿನಿ ಎಂಬ ಗ್ರಂಥವನ್ನೇ ಬರೆಯಬೇಕಾದೀತು.ಹಾಗಾಗಿ ಅವರನ್ನು ಅವರ ಪಾಡಿಗೆ ಬಿಡೋಣ.
ಕೆಲವೊಮ್ಮೆ ಈ ಸನ್ನೆಗಳು ವಿಪರೀತವನ್ನು ಉಂಟು ಮಾಡುತ್ತವೆ.


ನನ್ನ ಅಜ್ಜ ಸ್ನಾನ ಮಾಡಿ ಪೂಜಾ ಕೋಣೆಗೆ ನುಗ್ಗಿದ ನಂತರ ಮಾತನಾಡುವುದಿಲ್ಲ. ಒಮ್ಮೆ ಪೂಜೆಗೆ ಕುಳಿತಾದ ಮೇಲೆ ನೀರು ತುಂಬಿಟ್ಟ ಚೆಂಬು ಹೊರಗೆ ಮರೆತು ಬಂದದ್ದು ನೆನಪಾಯಿತು.ತಾನೇ ಏಳುವಂತಿಲ್ಲ.. ಹತ್ತಿರದಲ್ಲೇ ಹಾದು ಹೋಗುತ್ತಿದ್ದ ಚಿಕ್ಕಪ್ಪನನ್ನು ಕಂಡು, ಚೆಂಬನ್ನು   ತಂದಿಡಲು ಸನ್ನೆ ಮಾಡಿದರು. ಚಿಕ್ಕಪ್ಪ ಅವರ ಕೈ೦‌ು ಸನ್ನೆ ನೋಡಿ ಹೊರಹೋಗಿ ಒಂದು ಬೊಂಡ ತಂದು ಹತ್ತಿರ ಇರಿಸಿದರು. ಅಜ್ಜ      ಇನ್ನೊಮ್ಮೆ ಸನ್ನೆ ಮಾಡಿ ತೋರಿಸಿದರು. ಈಗ ಸುಲಿದಿಟ್ಟ ತೆಂಗಿನಕಾಯಿ ಬಂತು. ಈಗ ಸಿಟ್ಟು ಇನ್ನಷ್ಟು ಏರಿ ಕಣ್ಣು, ಕೈ ಕಾಲುಗಳಲ್ಲೆಲ್ಲ ಸನ್ನೆಗಳು ಪ್ರಾರಂಭವಾದವು. ಚಿಕ್ಕಪ್ಪ ತಲೆ ಬಿಸಿಯಲ್ಲಿ ಇನ್ನೇನಪ್ಪ ಇವರಿಗೆ ಬೇಕಿರುವುದು ಎಂದು ಒಳ ಬಂದು ಇನ್ನೊಂದು ದೊಡ್ದ ಕುಂಬಳಕಾಯಿ ತೆಗೆದುಕೊಂಡು ಹೋಗಿ ಕೊಟ್ಟರು.  ಅಷ್ಟರಲ್ಲಿ ಸ್ನಾನ ಮಾಡಿ ಬಂದ  ಅಜ್ಜಿ ಹೊರಗಿಟ್ಟಿದ್ದ ಚೆಂಬನ್ನು ಗಮನಿಸಿ,ಅದನ್ನು ತಂದಿಟ್ಟರು. ದೇವತಾರ್ಚನೆ ಮುಗಿದದ್ದೇ ತಡ .. ಚಿಕ್ಕಪ್ಪನಿಗೂ ಸಹಸ್ರನಾಮಾರ್ಚನೆ ಪ್ರಾರಂಭವಾಯಿತು.


ಇದು ಹುಲು ಮಾನವರ ಕಥೆಯಾದರೆ ಇನ್ನು ಸ್ವಲ್ಪ ಪುರಾಣಗಳ ಪುಟ ತಿರುವಿ ಅಲ್ಲಿ ಸನ್ನೆಗಳು ಏನೇನು ಮಾಡಿವೆ ಅಂತ ನೋಡಿ ಬಿಡೋಣ..


ಮೋಸದ ಜೂಜಿನಾಟದಲ್ಲಿ ಪಾಂಡವರ ಸರ್ವಸ್ವವನ್ನೂ ಗೆದ್ದ ಕೌರವ, ದ್ರೌಪದಿಗೆ ತೊಡೆಯೇರುವಂತೆ ಮಾಡಿದ ಸನ್ನೆಯಿಂದಾಗಿ ಮುಂದೊಂದು ದಿನ ಭೀಮನಿಂದ ತೊಡೆ ಮುರಿಸಿಕೊಂಡು ಸತ್ತ. ಅದೇ ಮಹಾಭಾರತದ ಸಂದರ್ಭವೊಂದರಲ್ಲಿ ಭೀಮನು ಜರಾಸಂಧನನ್ನು ಹಲವು ಬಾರಿ ಉದ್ದುದ್ದ ಸೀಳಿ ಬಿಸುಟರೂ ಮತ್ತೆ ಕೂಡಿಕೊಂಡು ಕದನೋತ್ಸಾಹದಿಂದ ನಿಂತು ಚಕಿತಗೊಳಿಸುತ್ತಿದ್ದ! ಅವನ ಸಾವಿನ ರಹಸ್ಯ ಭೀಮನ ಅರಿವಿಗೆ ಮೀರಿದ್ದಾಗಿತ್ತು. ಅದನ್ನು ಶ್ರೀ ಕೃಷ್ಣ ಎಷ್ಟು ಸುಂದರವಾಗಿ ಸನ್ನೆಯ ಮೂಲಕ ಭೀಮನಿಗೆ ತಿಳಿಸುತ್ತಾನೆ ನೋಡಿ.. ತಿನ್ನಲು ಹಿಡಿದಿದ್ದ ವೀಳ್ಯದ ಎಲೆಯೊಂದನ್ನು ಉದ್ದಕ್ಕೆ ಎರಡಾಗಿ ಸೀಳಿ ಒಂದಕ್ಕೊಂದು ತಲೆ ಕೆಳಗಾಗಿ ಹಿಡಿದು ತೋರುತ್ತಾನೆ. ಚಾಣಾಕ್ಷಮತಿ ಭೀಮ ಅದನ್ನು ಗ್ರಹಿಸಿ ಕೂಡಲೆ ಇನ್ನೊಂದು ಭಾರಿ ಜರಾಸಂಧನನ್ನು ಸೀಳಿ ತುಂಡುಗಳ ಕೊನೆ ಬದಲಿಸಿ ಕೆಡವಿ ರಕ್ಕಸನು ಅಸು ನೀಗುವಂತೆ ಮಾಡುತ್ತಾನೆ.


ಅಂದ ಹಾಗೆ ಸನ್ನೆಗಳು ಮನುಷ್ಯರಿಗೆ ಮಾತ್ರ ಸೀಮಿತವೆಂದೇನಿಲ್ಲ. ಸರ್ಕಸ್‌ನಲ್ಲಿ ಪ್ರಾಣಿಗಳು ಸಂಜ್ಞಾನುವರ್ತಿಗಳಾಗಿ ಹೇಗೆ ನಮ್ಮ ಮನ ರಂಜಿಸುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಷ೦‌ುವೇ. ಕೆಲವು      ದಿನಗಳ ಹಿಂದೆ ಒಂದು ಡಾಗ್ ಶೋ ಗೆ ಹೊಗಿದ್ದೆವು. ನೋಡಲು ಮುದ್ದಾಗಿದ್ದ ಪಮೇರಿಯನ್ ನಾಯಿಗಳು ನಮ್ಮ ಗುಂಪಿನವರ ವಾಚು, ಕರ್ಚೀಫನ್ನು ಮರಳಿ ಅವರಿಗೇ ಒಪ್ಪಿಸಿದ್ದು ಯಜಮಾನನ ಕೋಲಿನ     ಸನ್ನೆಯಿಂದಲೇ. ಅಷ್ಟಕ್ಕೆ ಸುಮ್ಮನಾಗಬೇಕೇ ಆ ಯಜಮಾನ?         ಇಲ್ಲಿರುವವರಲ್ಲಿ ಉದ್ದ ಯಾರು  , ದಪ್ಪ ಯಾರು, ಗಿಡ್ಡ ಇರೋರು ಯಾರು ಎಂದೆಲ್ಲ ಪ್ರಶ್ನೆ ಹಾಕಿದ. ಮೊದಲೆರಡಕ್ಕೆ ಸಮರ್ಪಕವಾಗಿಯೇ ಉತ್ತರಿಸಿದ ಅದು, ಕೊನೆ೦‌ು ಪ್ರಶ್ನೆ೦‌ು ಉತ್ತರವಾಗಿ ನನ್ನ ಮುಖ ನೋಡುತ್ತಾ ಬಾಲ ಅಲ್ಲಾಡಿಸಹತ್ತಿತು. ನಾನೋ ಐಶ್ವ೦‌ು ರೈಗಿಂತ ಕೇವಲ ಒಂದೂವರೆ ಅಡಿ೦‌ುಷ್ಟೆ ಕಮ್ಮಿ ಉದ್ದದವಳು. ಪಾಪ ನಾಯಿ.. ಅದಕ್ಕೇನು ಗೊತ್ತಾಗುತ್ತೆ ಅಲ್ವಾ..


ಇನ್ನು ಕೆಲವರು ಸನ್ನೆಯ ವಿರೋಧಿಗಳೂ ಇದ್ದಾರೆ. ಒಮ್ಮೆ ಚೈನ್ ಸ್ಮೋಕರ್ ಮಂದಣ್ಣನವರು ಬಾಯಲ್ಲಿ ಸಿಗರೇಟ್ ಕಚ್ಚಿಕೊಂಡು ಪಕ್ಕದಲ್ಲಿ ನಿಂತಿದ್ದ ಅಪರಿಚಿತನೆಡೆಗೆ ತಿರುಗಿ ಮ್ಯಾಚ್ ಬಾಕ್ಸ್‌ಗಾಗಿ ಕಡ್ಡಿ ಗೀರುವ ಹಾಗೆ ಸನ್ನೆ ಮಾಡಿದರಂತೆ. ಅವನೋ ಜೇಬಲ್ಲಿ ಬೆಂಕಿ ಪೆಟ್ಟಿಗೆ ಇದ್ದರೂ ಬೇಕಂತಲೇ ಪೆನ್ ತೆಗೆದು ಕೊಟ್ಟನಂತೆ! ಮಂದಣ್ಣನವರು ಕಕ್ಕಾಬಿಕ್ಕಿಯಾಗಿ ಅಲ್ಲ ಸ್ವಾಮಿ ನಾನು ಮ್ಯಾಚ್ ಬಾಕ್ಸ್ ಕೇಳಿದ್ದು ಅಂತ ತಡವರಿಸಿದರು. ಅದಕ್ಕಾತ ಇವರನ್ನು ಯಾವುದೊ ಮಿಕವನ್ನು ನೋಡುವಂತೆ ನೋಡಿ ದರ್ಪದಿಂದ  ನಿಮ್ಗೂ ಬಾಯಿ ಬರುತ್ತೇನ್ರಿ? ಮತ್ತೆ ಮೊದಲೇ ಮ್ಯಾಚ್ ಬಾಕ್ಸ್ ಕೊಡಿ ಅಂತ ಕೇಳೋದಕ್ಕೆ ಏನು ದಾಡಿ ಬಡಿದಿತ್ತು ಅಂದು ಬಿಡುವುದೆ!


ಹೋಗಲಿ ಬಿಡಿ ಅವರಿವರ ಸುದ್ಧಿ ನಮಗ್ಯಾಕೆ.. ನಮ್ಮ ಆಗಮ ಶಾಸ್ತ್ರಗಳಲ್ಲೂ ಮುದ್ರೆ ಎಂಬ ಹೆಸರಿನಲ್ಲಿ ಸನ್ನೆಗಳು ಸ್ಥಾನ ಪಡೆದಿವೆ. ಇವುಗಳಲ್ಲಿ ನನಗೆ ಮೆಚ್ಚಿದ್ದು ಧೇನು ಮುದ್ರೆ...ಅಯ್ಯೋ .. ಏನಾಯ್ತು .? ಯಾಕೆ ನಿಲ್ಲಿಸು ಅಂತ ಕೈ ಸನ್ನೆ ಮಾಡ್ತೀರಿ..?ಇನ್ನೂ ಮುಗಿದಿಲ್ಲ..     ಸರಿ ..ಸರಿ.. ನಿಮಗೆ ಇಷ್ಟ ಇಲ್ಲ ಅಂತಾದ ಮೇಲೆ ನಾನ್ಯಾಕೆ ಬಲವಂತ ಮಾಡಲಿ. ಮೊದಲಿಗೆ ನಾನು ತೆಗೆದಿರಿಸಿದ್ದ ಕೋಲನ್ನು ನೀವು ಕೈಗೆತ್ತಿಕೊಳ್ಳುವ ಮೊದಲೇ, ನಾನೇ ಜಾಣೆಯಾಗಿ ನಿಲ್ಲಿಸಿ ಬಿಡ್ತೀನಿ.


                           

Monday, August 8, 2011

ಉಳಿದ ಕೆಲಸ

ವೆಂಕಣ್ಣ ಒಣಗಿದ ಸೌದೆಯ ಸಂಗ್ರಹ ಸಾಕಷ್ಟಿದೆಯೇ ಎಂದು ಪರೀಕ್ಷಿಸುತ್ತಿದ್ದ. ಕೆಲಸದವರಿಗೆ ಅಗತ್ಯದ ಕೆಲಸಗಳ ಬಗ್ಗೆ ನಿರ್ದೇಶನ ನೀಡಿ ಒಳ ಬಂದ. ಮನೆಯೊಳಗಾಗಲೇ ಅವನ ಹೆಂಡತಿ ಸಾತು ನೆಂಟರಿಷ್ಟರಿಗೆಲ್ಲ  ಫೋನ್ ಮಾಡುತ್ತಿದ್ದಳು.ಮಗ ಕಾರ್ ತೆಗೆದುಕೊಂಡು ಪೇಟೆಯ  ಕಡೆ ಅವಶ್ಯಕ ಸಾಮಾನುಗಳ ಪಟ್ಟಿ ಹಿಡಿದುಕೊಂಡು ಹೋಗಿ ಆಗಿತ್ತು. ಸ್ವಲ್ಪ ಹೊತ್ತಿನಲ್ಲಿ ಎಲ್ಲರೂ ಅವರವರ ಕಾರ್ಯಗಳನ್ನು ಮುಗಿಸಿ ನಿರಾಳರಾದರು.

ವೆಂಕಣ್ಣ ಎಷ್ಟಾದರೂ ಮನೆಯ ಹಿರಿಯನಲ್ಲವೇ? ಹೆಂಡತಿಯ ಕಡೆ ತಿರುಗಿ ಯಾರಾದ್ರು ಬಾಕಿ ಆಗಿದ್ದಾರಾ ಎಂದ . ಅವಳು ಮೌನವಾಗಿಯೇ ಇಲ್ಲ ಎನ್ನುವಂತೆ ತಲೆ ಅಲುಗಿಸಿದಳು. ಮಗನಲ್ಲಿ , ಸಾಮಾನೆಲ್ಲ ಸಿಕ್ಕಿತಾ? ಬಟ್ಟೆ ಅಂಗಡಿ ಬಾಗಿಲು ತೆರೆದಿತ್ತು ತಾನೆ? ಪುನಃ  ಹೋಗಬೇಕಾಗಿಲ್ಲ ಅಲ್ವಾ ಎಂದು ವಿಚಾರಿಸಿದ. ಮಗ ಎಲ್ಲಾ ಸಾಮಾನು ಸಿಕ್ಕಿದೆ ಎಂದುತ್ತರಿಸಿದ..ಮತ್ತೊಮ್ಮೆ ಹೊರಗೆ ಹೋಗಿ ಕೆಲಸದವರಿಗೆ ಹೇಳಿದ ಕೆಲಸ ಎಲ್ಲಿವರೆಗೆ ಮುಟ್ಟಿತು ಎಂದು ನೋಡಿ ಬಂದ.
  ಯಾಕೋ ಸಮಾಧಾನವಾಗದೇ ಇನ್ನೇನಾದರು ಕೆಲಸ ಉಳಿದಿದೆಯಾ ಮಗಾ ಎಂದು ಮಗನಲ್ಲಿ ಕೇಳಿದ.
    ಮನೆಯೊಳಗೆ ಹೋಗಿ ಕೆಲ ಸಮಯ ಕಳೆದು ಹೊರ ಬಂದ ಮಗ," ಇನ್ನೇನಿಲ್ಲ ಅಪ್ಪಾ, ಎಲ್ಲಾ ಸಿದ್ಧವಾಗಿದೆ. ಆದರೆ ಅಜ್ಜಿ ಇನ್ನೂ ಉಸಿರಾಡುತ್ತಿದೆ ಎಂದ.