Pages

Total Visitors

Tuesday, August 9, 2011

ಸಂಜ್ಞಾ ಕೋವಿದರು


ನನಗೆ ನಿಲ್ಲಲು ಕೊಂಚ ಜಾಗ ಮತ್ತು ಒಂದು ದೊಡ್ಡ ಸನ್ನೆಗೋಲು ಇವಿಷ್ಟು ಕೊಟ್ರೆ ಸಾಕು. ಭೂಮಿಯನ್ನೇ ಜರುಗಿಸಿ ಪಕ್ಕಕ್ಕಿಡಬಲ್ಲೆ ಎಂದು ಹೆಮ್ಮೆಯಿಂದ  ನುಡಿದಿದ್ದನಂತೆ ಒಬ್ಬ ವಿಜ್ಞಾನಿ. ಆದರೆ ನಾನಿಲ್ಲಿ        ಸನ್ನೆಗೋಲಿನ ಸುದ್ದಿ ಮಾತಾಡುತ್ತಿಲ್ಲ. ಅಪಾಯಕಾರಿಯಾದ ಕೋಲನ್ನು ತೆಗೆದಿಟ್ಟು ಕೇವಲ ಸನ್ನೆಯ ಬಗ್ಗೆ ಮಾತಾಡೋಣ ಆಗದೆ?


ಮಾತಿನ ಜೊತೆಗೂ ಮತ್ತು ಮಾತಿಗೆಡೆಯಿಲ್ಲದಲ್ಲೂ ಮನದಿಂಗಿತವನ್ನು ವ್ಯಕ್ತ ಪಡಿಸಲು ಸಂಜ್ಞೆಗಳೇ ಅಥವಾ ನಮ್ಮ ನಿಮ್ಮಂತಹ ಪಾಮರರ ಭಾಷೆಯಲ್ಲಿ ಹೇಳೋದಾದ್ರೆ ಸನ್ನೆಗಳೇ ಮಿತ್ರರು ! ಸಾಂದರ್ಭಿಕವಾಗಿ    ಸನ್ನೆಗಳನ್ನು ಮಾಡುವುದು ಒಂದು ಕಲೆಯಾದರೆ, ಅನುಸರಿಸುವುದು     ಇನ್ನೊಂದು ಕಲೆ ! 


ಒಂದಲ್ಲ ಒಂದು ಸಾರಿ ಕ್ಲಾಸಿಗೆ ತಡವಾಗಿ ಹೋಗಿ,  ಕನಕದಾಸ ಪಿಕ್ಚರ್ ನಲ್ಲಿ ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ ಎಂದು ಹಾಡೋ ಅಣ್ಣಾವ್ರ ಸ್ಟೈಲ್ನಲ್ಲಿ, ಇಲ್ಲದ ದೈನ್ಯತೆಯನ್ನು ಮೈದಳೆದು ನಿಂದವರಲ್ಲವೆ ನಾವು!? ಇದನ್ನು ಕಂಡಾಗ  ಮೇಸ್ಟ್ರಿಗೆ   ಸಿಕ್ಕಾಪಟ್ಟೆ ರಿಯಾಕ್ಟ್ ಆಗಬೇಕನ್ನಿಸಿದರೂ, ತಮ್ಮಬಿಪಿ ಕಾಯಿಲೆಗೆ ಡಾಕ್ಟರ್ ಬರೆಯುತ್ತಿದ್ದ ಉದ್ದದ ಪ್ರಿಸ್ಕ್ರಿಪ್ಷನ್‌ಗಳು ನೆನಪಾಗಿ ಸನ್ನೆಗೆ ಶರಣು ಹೋಗುತ್ತಿದ್ದರು. ಕಪ್ಪು ಹಲಗೆಯಿಂದ ತಲೆ ಹೊರಳಿಸದೆ   ಅಸಹನೆಯಿಂದ ಕೈ ಕೊಡವಿ ಒಳ ಬರುವಂತೆ ಮಾಡಿದ ಸನ್ನೆಯನ್ನು ಕ್ಷಣಾರ್ಧದಲ್ಲಿ ಗ್ರಹಿಸಿ ತಲೆ ತಗ್ಗಿಸಿ ಹಿಂದಿನ ಬೆಂಚಿನೆಡೆಗೆ ನಡೆದು ಸಂಜ್ಞಾ ಕೋವಿದರಾದ ಅನುಭವ ನಮ್ಮಂತೆ ನಿಮ್ಮದೂ ಕೂಡ ಆಗಿರಬಹುದು.


ಶಾಲೆಯೆಂದ ಮೇಲೆ ಪರೀಕ್ಷೆ ಇಲ್ಲದೆ ಉಂಟೆ!? ಇವುಗಳು ನಡೆಯುವ  ಕೊಠಡಿಗಳಂತೂ ಈ ಸನ್ನೆಗಳ ತಂಗುದಾಣವೇ ಸರಿ. ಇಲ್ಲಿ ಹೊಸ      ಸನ್ನೆಗಳ ಆವಿಷ್ಕಾರಕ್ಕೂ ಬೇಕಾದಷ್ಟು ಅವಕಾಶಗಳಿರುತ್ತದೆ. ಮೊದಲೆಲ್ಲ ಕೊಶ್ಚನ್ ಪೇಪರ್ ನಲ್ಲಿ ಹೊಂದಿಸಿ ಬರೆಯಿರಿ ಎಂಬುದಿತ್ತು. ಕ್ಲಾಸಿನಲ್ಲಿ ಎಲ್ಲರೂ ಅದರಲ್ಲಿ ಪೂರ್ತಿ ಅಂಕಗಳನ್ನು ಗಿಟ್ಟಿಸುತ್ತಿದ್ದೆವು. ಎಲ್ಲ ಕೈ ಬೆರಳುಗಳ ಸನ್ನೆ೦‌ು ಮೂಲಕವೇ ಸಂಹವನೆ  ನಡೆಯುತ್ತಿತ್ತು .


ಸನ್ನೆಗಳು ಮಾತನ್ನು ಮೀರಿಸಬಲ್ಲವು ಎಂದು ಅರಿಯಬೇಕಾದರೆ   ನೃತ್ಯಗಳನ್ನೋ, ಹಳೆ ಸಿನಿಮಾ ಹಾಡುಗಳನ್ನೋ ನೋಡಿ. ಅಲ್ಲಿ ನಟ ನಟಿಯರು ಬರೇ ಕತ್ತು ಕಣ್ಣುಗಳನ್ನು ಹೊರಳಿಸಿ ಹಾಡಿನ ಭಾವವನ್ನು ಹೊರ ಹಾಕುವುದರಲ್ಲಿ ಯಶಸ್ವಿಯಾಗುತ್ತಿದ್ದರು. ಆದರೆ ಈಗಿನ ಸಿನಿಮಾ ಹಾಡುಗಳಲ್ಲಿ ಪ್ರೀತಿ ಪ್ರೇಮದಂತಹಾ ನವಿರಾದ ಭಾವಗಳಿಗೂ ನಾಯಕ ನಾಯಕಿಯರು ತಮ್ಮ ಕೈ ಕಾಲುಗಳನ್ನು ವಿಚಿತ್ರವಾಗಿ ನಾಲ್ದೆಸೆಗೂ ಎಸೆದು ಕೇಳಿದ್ದು ಏನೋ, ನೋಡಿದ್ದು ಇನ್ನೇನೋ ಅನ್ನುವ ಹಾಗೆ ಮಾಡಿ ಬಿಡುತ್ತಾರೆ!


 ಇನ್ನೂ ಸನ್ನೆಗಳ ಕೈ ಮೇಲಾಗುವುದು ನೋಡಬೇಕೆಂದರೆ ಸುತ್ತ ಮುತ್ತಲಿನ ಪ್ರೇಮಿಗಳನ್ನು ಗಮನಿಸಿ. ಲೋಕಾಪವಾದಕ್ಕೆ ಹೆದರಿ ಸದಾ ಮೌನದ ನೆರಳಲ್ಲೇ ಬಾಳುತ್ತಾ ಬರೇ ಸನ್ನೆಗಳಿಂದಲೇ ವ್ಯವಹರಿಸುತ್ತಾರೆ. ಇವರ  ಸನ್ನೆಗಳ ಬಗ್ಗೆ ಹೇಳಲು ಹೊರಟರೆ ಸಂಜ್ಞಾರ್ಥ ಪ್ರಭೋದಿನಿ ಎಂಬ ಗ್ರಂಥವನ್ನೇ ಬರೆಯಬೇಕಾದೀತು.ಹಾಗಾಗಿ ಅವರನ್ನು ಅವರ ಪಾಡಿಗೆ ಬಿಡೋಣ.
ಕೆಲವೊಮ್ಮೆ ಈ ಸನ್ನೆಗಳು ವಿಪರೀತವನ್ನು ಉಂಟು ಮಾಡುತ್ತವೆ.


ನನ್ನ ಅಜ್ಜ ಸ್ನಾನ ಮಾಡಿ ಪೂಜಾ ಕೋಣೆಗೆ ನುಗ್ಗಿದ ನಂತರ ಮಾತನಾಡುವುದಿಲ್ಲ. ಒಮ್ಮೆ ಪೂಜೆಗೆ ಕುಳಿತಾದ ಮೇಲೆ ನೀರು ತುಂಬಿಟ್ಟ ಚೆಂಬು ಹೊರಗೆ ಮರೆತು ಬಂದದ್ದು ನೆನಪಾಯಿತು.ತಾನೇ ಏಳುವಂತಿಲ್ಲ.. ಹತ್ತಿರದಲ್ಲೇ ಹಾದು ಹೋಗುತ್ತಿದ್ದ ಚಿಕ್ಕಪ್ಪನನ್ನು ಕಂಡು, ಚೆಂಬನ್ನು   ತಂದಿಡಲು ಸನ್ನೆ ಮಾಡಿದರು. ಚಿಕ್ಕಪ್ಪ ಅವರ ಕೈ೦‌ು ಸನ್ನೆ ನೋಡಿ ಹೊರಹೋಗಿ ಒಂದು ಬೊಂಡ ತಂದು ಹತ್ತಿರ ಇರಿಸಿದರು. ಅಜ್ಜ      ಇನ್ನೊಮ್ಮೆ ಸನ್ನೆ ಮಾಡಿ ತೋರಿಸಿದರು. ಈಗ ಸುಲಿದಿಟ್ಟ ತೆಂಗಿನಕಾಯಿ ಬಂತು. ಈಗ ಸಿಟ್ಟು ಇನ್ನಷ್ಟು ಏರಿ ಕಣ್ಣು, ಕೈ ಕಾಲುಗಳಲ್ಲೆಲ್ಲ ಸನ್ನೆಗಳು ಪ್ರಾರಂಭವಾದವು. ಚಿಕ್ಕಪ್ಪ ತಲೆ ಬಿಸಿಯಲ್ಲಿ ಇನ್ನೇನಪ್ಪ ಇವರಿಗೆ ಬೇಕಿರುವುದು ಎಂದು ಒಳ ಬಂದು ಇನ್ನೊಂದು ದೊಡ್ದ ಕುಂಬಳಕಾಯಿ ತೆಗೆದುಕೊಂಡು ಹೋಗಿ ಕೊಟ್ಟರು.  ಅಷ್ಟರಲ್ಲಿ ಸ್ನಾನ ಮಾಡಿ ಬಂದ  ಅಜ್ಜಿ ಹೊರಗಿಟ್ಟಿದ್ದ ಚೆಂಬನ್ನು ಗಮನಿಸಿ,ಅದನ್ನು ತಂದಿಟ್ಟರು. ದೇವತಾರ್ಚನೆ ಮುಗಿದದ್ದೇ ತಡ .. ಚಿಕ್ಕಪ್ಪನಿಗೂ ಸಹಸ್ರನಾಮಾರ್ಚನೆ ಪ್ರಾರಂಭವಾಯಿತು.


ಇದು ಹುಲು ಮಾನವರ ಕಥೆಯಾದರೆ ಇನ್ನು ಸ್ವಲ್ಪ ಪುರಾಣಗಳ ಪುಟ ತಿರುವಿ ಅಲ್ಲಿ ಸನ್ನೆಗಳು ಏನೇನು ಮಾಡಿವೆ ಅಂತ ನೋಡಿ ಬಿಡೋಣ..


ಮೋಸದ ಜೂಜಿನಾಟದಲ್ಲಿ ಪಾಂಡವರ ಸರ್ವಸ್ವವನ್ನೂ ಗೆದ್ದ ಕೌರವ, ದ್ರೌಪದಿಗೆ ತೊಡೆಯೇರುವಂತೆ ಮಾಡಿದ ಸನ್ನೆಯಿಂದಾಗಿ ಮುಂದೊಂದು ದಿನ ಭೀಮನಿಂದ ತೊಡೆ ಮುರಿಸಿಕೊಂಡು ಸತ್ತ. ಅದೇ ಮಹಾಭಾರತದ ಸಂದರ್ಭವೊಂದರಲ್ಲಿ ಭೀಮನು ಜರಾಸಂಧನನ್ನು ಹಲವು ಬಾರಿ ಉದ್ದುದ್ದ ಸೀಳಿ ಬಿಸುಟರೂ ಮತ್ತೆ ಕೂಡಿಕೊಂಡು ಕದನೋತ್ಸಾಹದಿಂದ ನಿಂತು ಚಕಿತಗೊಳಿಸುತ್ತಿದ್ದ! ಅವನ ಸಾವಿನ ರಹಸ್ಯ ಭೀಮನ ಅರಿವಿಗೆ ಮೀರಿದ್ದಾಗಿತ್ತು. ಅದನ್ನು ಶ್ರೀ ಕೃಷ್ಣ ಎಷ್ಟು ಸುಂದರವಾಗಿ ಸನ್ನೆಯ ಮೂಲಕ ಭೀಮನಿಗೆ ತಿಳಿಸುತ್ತಾನೆ ನೋಡಿ.. ತಿನ್ನಲು ಹಿಡಿದಿದ್ದ ವೀಳ್ಯದ ಎಲೆಯೊಂದನ್ನು ಉದ್ದಕ್ಕೆ ಎರಡಾಗಿ ಸೀಳಿ ಒಂದಕ್ಕೊಂದು ತಲೆ ಕೆಳಗಾಗಿ ಹಿಡಿದು ತೋರುತ್ತಾನೆ. ಚಾಣಾಕ್ಷಮತಿ ಭೀಮ ಅದನ್ನು ಗ್ರಹಿಸಿ ಕೂಡಲೆ ಇನ್ನೊಂದು ಭಾರಿ ಜರಾಸಂಧನನ್ನು ಸೀಳಿ ತುಂಡುಗಳ ಕೊನೆ ಬದಲಿಸಿ ಕೆಡವಿ ರಕ್ಕಸನು ಅಸು ನೀಗುವಂತೆ ಮಾಡುತ್ತಾನೆ.


ಅಂದ ಹಾಗೆ ಸನ್ನೆಗಳು ಮನುಷ್ಯರಿಗೆ ಮಾತ್ರ ಸೀಮಿತವೆಂದೇನಿಲ್ಲ. ಸರ್ಕಸ್‌ನಲ್ಲಿ ಪ್ರಾಣಿಗಳು ಸಂಜ್ಞಾನುವರ್ತಿಗಳಾಗಿ ಹೇಗೆ ನಮ್ಮ ಮನ ರಂಜಿಸುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಷ೦‌ುವೇ. ಕೆಲವು      ದಿನಗಳ ಹಿಂದೆ ಒಂದು ಡಾಗ್ ಶೋ ಗೆ ಹೊಗಿದ್ದೆವು. ನೋಡಲು ಮುದ್ದಾಗಿದ್ದ ಪಮೇರಿಯನ್ ನಾಯಿಗಳು ನಮ್ಮ ಗುಂಪಿನವರ ವಾಚು, ಕರ್ಚೀಫನ್ನು ಮರಳಿ ಅವರಿಗೇ ಒಪ್ಪಿಸಿದ್ದು ಯಜಮಾನನ ಕೋಲಿನ     ಸನ್ನೆಯಿಂದಲೇ. ಅಷ್ಟಕ್ಕೆ ಸುಮ್ಮನಾಗಬೇಕೇ ಆ ಯಜಮಾನ?         ಇಲ್ಲಿರುವವರಲ್ಲಿ ಉದ್ದ ಯಾರು  , ದಪ್ಪ ಯಾರು, ಗಿಡ್ಡ ಇರೋರು ಯಾರು ಎಂದೆಲ್ಲ ಪ್ರಶ್ನೆ ಹಾಕಿದ. ಮೊದಲೆರಡಕ್ಕೆ ಸಮರ್ಪಕವಾಗಿಯೇ ಉತ್ತರಿಸಿದ ಅದು, ಕೊನೆ೦‌ು ಪ್ರಶ್ನೆ೦‌ು ಉತ್ತರವಾಗಿ ನನ್ನ ಮುಖ ನೋಡುತ್ತಾ ಬಾಲ ಅಲ್ಲಾಡಿಸಹತ್ತಿತು. ನಾನೋ ಐಶ್ವ೦‌ು ರೈಗಿಂತ ಕೇವಲ ಒಂದೂವರೆ ಅಡಿ೦‌ುಷ್ಟೆ ಕಮ್ಮಿ ಉದ್ದದವಳು. ಪಾಪ ನಾಯಿ.. ಅದಕ್ಕೇನು ಗೊತ್ತಾಗುತ್ತೆ ಅಲ್ವಾ..


ಇನ್ನು ಕೆಲವರು ಸನ್ನೆಯ ವಿರೋಧಿಗಳೂ ಇದ್ದಾರೆ. ಒಮ್ಮೆ ಚೈನ್ ಸ್ಮೋಕರ್ ಮಂದಣ್ಣನವರು ಬಾಯಲ್ಲಿ ಸಿಗರೇಟ್ ಕಚ್ಚಿಕೊಂಡು ಪಕ್ಕದಲ್ಲಿ ನಿಂತಿದ್ದ ಅಪರಿಚಿತನೆಡೆಗೆ ತಿರುಗಿ ಮ್ಯಾಚ್ ಬಾಕ್ಸ್‌ಗಾಗಿ ಕಡ್ಡಿ ಗೀರುವ ಹಾಗೆ ಸನ್ನೆ ಮಾಡಿದರಂತೆ. ಅವನೋ ಜೇಬಲ್ಲಿ ಬೆಂಕಿ ಪೆಟ್ಟಿಗೆ ಇದ್ದರೂ ಬೇಕಂತಲೇ ಪೆನ್ ತೆಗೆದು ಕೊಟ್ಟನಂತೆ! ಮಂದಣ್ಣನವರು ಕಕ್ಕಾಬಿಕ್ಕಿಯಾಗಿ ಅಲ್ಲ ಸ್ವಾಮಿ ನಾನು ಮ್ಯಾಚ್ ಬಾಕ್ಸ್ ಕೇಳಿದ್ದು ಅಂತ ತಡವರಿಸಿದರು. ಅದಕ್ಕಾತ ಇವರನ್ನು ಯಾವುದೊ ಮಿಕವನ್ನು ನೋಡುವಂತೆ ನೋಡಿ ದರ್ಪದಿಂದ  ನಿಮ್ಗೂ ಬಾಯಿ ಬರುತ್ತೇನ್ರಿ? ಮತ್ತೆ ಮೊದಲೇ ಮ್ಯಾಚ್ ಬಾಕ್ಸ್ ಕೊಡಿ ಅಂತ ಕೇಳೋದಕ್ಕೆ ಏನು ದಾಡಿ ಬಡಿದಿತ್ತು ಅಂದು ಬಿಡುವುದೆ!


ಹೋಗಲಿ ಬಿಡಿ ಅವರಿವರ ಸುದ್ಧಿ ನಮಗ್ಯಾಕೆ.. ನಮ್ಮ ಆಗಮ ಶಾಸ್ತ್ರಗಳಲ್ಲೂ ಮುದ್ರೆ ಎಂಬ ಹೆಸರಿನಲ್ಲಿ ಸನ್ನೆಗಳು ಸ್ಥಾನ ಪಡೆದಿವೆ. ಇವುಗಳಲ್ಲಿ ನನಗೆ ಮೆಚ್ಚಿದ್ದು ಧೇನು ಮುದ್ರೆ...ಅಯ್ಯೋ .. ಏನಾಯ್ತು .? ಯಾಕೆ ನಿಲ್ಲಿಸು ಅಂತ ಕೈ ಸನ್ನೆ ಮಾಡ್ತೀರಿ..?ಇನ್ನೂ ಮುಗಿದಿಲ್ಲ..     ಸರಿ ..ಸರಿ.. ನಿಮಗೆ ಇಷ್ಟ ಇಲ್ಲ ಅಂತಾದ ಮೇಲೆ ನಾನ್ಯಾಕೆ ಬಲವಂತ ಮಾಡಲಿ. ಮೊದಲಿಗೆ ನಾನು ತೆಗೆದಿರಿಸಿದ್ದ ಕೋಲನ್ನು ನೀವು ಕೈಗೆತ್ತಿಕೊಳ್ಳುವ ಮೊದಲೇ, ನಾನೇ ಜಾಣೆಯಾಗಿ ನಿಲ್ಲಿಸಿ ಬಿಡ್ತೀನಿ.


                           

3 comments:

  1. Tumba tumba laikaytu! hihi Keep writing Anitha...I enjoy reading your work!

    ReplyDelete
  2. ಬಹಳ ನವಿರಾದ ಕಚಗುಳಿಯಿಡುವಂತಹ ಹಾಸ್ಯ. ಇಡೀ ಪುಟದುದ್ದಕ್ಕೂ ಅಧ್ಬುತವಾದ ಲಾಸ್ಯ ಇದೆ ಮುದ ಇದೆ, ಗ್ರೇಟ್ ವರ್ಕ್. ಹೀಗೆ ಹಾಸ್ಯ ಸಿಂಚನ ಆಗಾಗ ನಮ್ಮ ಮೇಲೆ ಬೀಳ್ತಾ ಇರ್ಲಿ .

    ReplyDelete