ವಾಶಿಂಗ್ ಪೌಡರ್ ನಿರ್ಮ, ವಾಶಿಂಗ್ ಪೌಡರ್ ನಿರ್ಮ..' ಇದು ಗೆಳತಿಯ ಬಾಯಲ್ಲಿ ಕೇಳಿ ಬರುತ್ತಿದ್ದ ಹೊಸ ಹಾಡು. 'ಯಾರೇ ಹೇಳ್ಕೊಟ್ಟಿದ್ದು' ಕೊಂಚ ಅಸೂಯೆ ಇತ್ತು ನನ್ನ ಧ್ವನಿಯಲ್ಲಿ. 'ಹೇಳ್ಕೊಡೋದ್ಯಾಕೆ..? ನಾನೇ ಕೇಳಿ ಕಲ್ತಿದ್ದು, ಟಿ ವಿ ನೋಡಿ... ಗೊತ್ತಾ ನಿಂಗೆ , ನಮ್ಮಲ್ಲಿ ಹೊಸ ಟಿ ವಿ ತಂದಿದ್ದಾರೆ.., ಇದರ ಡ್ಯಾನ್ಸ್ ಕೂಡ ಇದೆ ನಿಲ್ಲು ತೋರಿಸ್ತೀನಿ,ಮೊದ್ಲು ಬಟ್ಟೆ ಮಣ್ಣಾಗಿರುತ್ತೆ, ಹೀಗೆ ಮಾಡಿದ ಮೇಲೆ ಬಟ್ಟೆ ಹೊಸದಾಗಿ ಹೊಳೆಯುತ್ತೆ' ಎಂದು ತನ್ನ ಫ್ರಾಕಿನ ಎರಡೂ ತುದಿಗಳನ್ನು ಬೆರಳುಗಳಲ್ಲಿ ಅಗಲಿಸಿ ಹಿಡಿದು ಉರುಟುರುಟಾಗಿ ಸುತ್ತಿದಳು ರಸ್ತೆಯಲ್ಲಿಯೇ.. !!
ಟಿ ವಿ ನಾ..?? ಕೇವಲ ಅದರ ಬಗ್ಗೆ ಕೇಳಿ ಮಾತ್ರ ತಿಳಿದಿದ್ದ ನನ್ನ ಕಣ್ಣ ಗೋಲಿಗಳು ಸಿಕ್ಕಿ ಹಾಕಿ ಕೊಳ್ಳುವಷ್ಟು ಮೇಲೇರಿದವು ಅಚ್ಚರಿಯಿಂದ !! ಕೂಡಲೇ ಅವಳನ್ನು ಕೇಳಿ ಅದರ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಿದೆ.
ಮನೆಗೆ ಹೋದವಳೇ ಕೈಕಾಲು ತೊಳೆಯದೆ ಅಡುಗೆ ಮನೆಗೆ ನುಗ್ಗಿ ಅಮ್ಮನಿಗೆ ಎಲ್ಲಾ ಸುದ್ಧಿಯನ್ನು ಬಿತ್ತರಿಸಿದೆ. ಅಮ್ಮನೂ ಇದನ್ನು ಅಪ್ಪನಿಗೆ ವರದಿ ಒಪ್ಪಿಸಿದಳು. ಅಪ್ಪನೂ ಇಂತಹ ವಿಷಯಗಳಲ್ಲಿ ತುಂಬಾ ಉತ್ಸಾಹಿ . ಹೊಸತೇನೇ ಇದ್ದರೂ ಅದು ಎಲ್ಲರ ಮನೆಗಳಲ್ಲಿ ಕಣ್ಬಿಡುವ ಮೊದಲೇ ನಮ್ಮಲ್ಲಿ ಇರಬೇಕಿತ್ತು.
ರೇಡಿಯೊ, ಟೇಪ್ ರೆಕಾರ್ಡರ್ ಗಳಷ್ಟೆ ಅಲಂಕರಿಸಿದ್ದ ಮೇಜೀಗ ಟಿ ವಿ ಯ ಸ್ವಾಗತಕ್ಕೂ ಸಜ್ಜಾಗಿ ನಿಂತಿತು.ಒಂದು ಶುಭ ಮುಹೂರ್ತದಲ್ಲಿ ಬಲಗಾಲಿಟ್ಟು ಒಳ ಪ್ರವೇಶಿಸಿದಳು ಟಿ ವಿ ಎಂಬ ಸುಂದರಿ. ನಾನಂತೂ'ಯಾರಿಗೂ ಹೇಳೋದ್ಬೇಡ ಗುಟ್ಟು, ನಮ್ಮಲ್ಲಿ ಟಿ ವಿ ತರ್ತಾರೆ' ಅಂತ ಮೊದಲೇ ಎಲ್ಲರ ಬಳಿಯೂ ಪ್ರತ್ಯೇಕ ಪ್ರತ್ಯೇಕವಾಗಿ ಹೇಳಿ ಆಗಿತ್ತು. ಇದರ ಜೊತೆಗೆ ನಮ್ಮದು ವಠಾರದ ಮನೆಯಾಗಿದ್ದ ಕಾರಣ ಕುತೂಹಲದ ಧ್ವನಿಗಳೂ, ಕಣ್ಣುಗಳೂ ನೂರ್ಮಡಿಸಿದವು. ಆ ಹೊತ್ತಿನಲ್ಲಿ ನಮ್ಮಲ್ಲಿ ಜಮಾಯಿಸಿದ್ದ ಜನರನ್ನು ಯಾರಾದರು ಹೊರಗಿನವರು ನೋಡಿದ್ದರೆ ಇಲ್ಲೇನೋ ಬಹು ದೊಡ್ಡ ಸಮಾರಂಭ ನಡೆಯುತ್ತಿದೆ ಎಂದುಕೊಳ್ಳುತ್ತಿದ್ದರು.
ಟಿ ವಿ ಯೇನೋ ಟೇಬಲ್ ಅಲಂಕರಿಸಿತು . ಆದರೆ ಅದರ ಸಿಗ್ನಲ್ ರಿಸೀವ್ ಮಾಡುವ ಆಂಟೆನಾ ವನ್ನು ಅಳವಡಿಸುವ ಕೆಲ್ಸ ಇತ್ತು. ಅದನ್ನು ಸೆಟ್ ಮಾಡಲು ತಾಂತ್ರಿಕ ನೈಪುಣ್ಯದೊಂದಿಗೆ ಮರ ಏರುವ ಚತುರತೆಯೂ ಬೇಕಿತ್ತು.ಸ್ವಲ್ಪ ಹೊತ್ತಿನಲ್ಲಿ ಅಪ್ಪನ ಗೆಳೆಯರು ಹಗ್ಗದ ಸಹಾಯದಿಂದ ಆಂಟೆನಾ ವನ್ನು ಮರಕ್ಕೇರಿಸಿ, ತಾವೂ ಏರಿದರು. ಅದನ್ನು ಎಡಕ್ಕೆ ಬಲಕ್ಕೆ ತಿರುಗಿಸುತ್ತಾ ಬಂತಾ ಬಂತಾ ಎಂದು ಬೊಬ್ಬೆ ಹಾಕುತ್ತಿದ್ದರು. ಒಳಗೆ ಟಿ ವಿ ಯ ಪಕ್ಕದಲ್ಲಿ ನಿಂತವರು' ಇಲ್ಲಾ, ಇಲ್ಲಾ...' ಎಂದು ರಾಗ ಎಳೆಯುತ್ತಿದ್ದರು. ಟಿ ವಿ ಯಲ್ಲೋ 'ಬರ್ ' ಎಂಬ ಶಬ್ಧದೊಂದಿಗೆ ಅಸಂಖ್ಯಾತ ಕಪ್ಪು ಬಿಳುಪಿನ ಚುಕ್ಕಿಗಳು.
ಇದನ್ನೇನು ನೋಡುವುದು ಎಂದು ಮಕ್ಕಳಾದ ನಮಗೆಲ್ಲಾ ಬೇಸರ ಬರಲು ಪ್ರಾರಂಭವಾಯಿತು. ಇದ್ದಕ್ಕಿಂದಂತೇ ಏನೋ ಮಾತಾಡಿದಂತೆ ಕೇಳಿಸಲಾರಂಭಿಸಿತು. ನಾವೆಲ್ಲರೂ ಸರಿ ಆಗಿಯೇ ಹೋಯಿತು ಎಂಬಂತೆ ಜೋರಾಗಿ ಚಪ್ಪಾಳೆ ಹೊಡೆದೆವು. ಆದರೆ ನಾವು ನೋಡ ಬಯಸಿದ ಚಿತ್ರಗಳ ದರ್ಶನ ಇನ್ನೂ ಆಗಿರಲಿಲ್ಲ. ಅಷ್ಟರಲ್ಲಿ ರಾತ್ರಿಯಾಗಿ ಟಿ ವಿ ಯ ಕಾರ್ಯಕ್ರಮಗಳು ಮುಗಿಯುವ ಹೊತ್ತೂ ಆಗಿತ್ತು. ಮರ ಹತ್ತಿದವರು ಟಾರ್ಚಿನ ಬೆಳಕಿನಲ್ಲಿ ಕೆಳಗಿಳಿದು 'ನಾಳೆ ಸರಿ ಮಾಡೋಣ ಬಿಡಿ' ಎಂದರು.ನಿರಾಸೆಯಾದರೂ ಎಲ್ಲರೂ ಅವರವರ ಮನೆ ಕಡೆ ನಡೆದರು. ನಾವೂ ಸಂಭ್ರಮವೆಲ್ಲಾ ಮುಗಿದ ಭಾವದಲ್ಲಿ ಬಾಗಿಲು ಹಾಕಿಕೊಂಡೆವು.
ಮನೆಯೊಳಗೆ, ಹೊಸ ಟಿ ವಿ ಯ ಬಗೆಗಿನ ಮಾತಿನ ಸಂಭ್ರಮ ಇನ್ನೂ ಮುಗಿದಿರಲಿಲ್ಲ. ಅಷ್ಟರಲ್ಲಿ 'ಕಿಟಾರ್' ಎಂದು ಕಿರುಚಿದ ಸದ್ದು ವಠಾರದ ಮೂಲೆಯ ನೀಲಮ್ಮಜ್ಜಿಯ ಮನೆಯ ಕಡೆಯಿಂದ ಕೇಳಿ ಬಂತು. ನಮ್ಮ ಯಾವುದೇ ಗೌಜು ಗದ್ದಲಗಳಿಗೆ ತಲೆ ಹಾಕದೇ ತನ್ನ ಪಾಡಿಗೆ ತಾನೇ ಬಾಗಿಲು ಹಾಕಿ ನಿದ್ದೆ ಹೋಗಿದ್ದ ಅವಳಿಗೇನಾಯ್ತಪ್ಪ ಎಂದುಕೊಂಡು ಪುನಃ ಮುಚ್ಚಿದ್ದ ಬಾಗಿಲುಗಳು ತೆರೆದುಕೊಂಡು ಅವಳ ಮನೆ ಕಡೆ ಕಾಲು ಹಾಕಿದವು. ಮೆಟ್ಟಿಲ ಬದಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಬೆವರೊರೆಸಿಕೊಳ್ಳಲೂ ಸಾಧ್ಯವಿಲ್ಲದೆ, ಬಿದ್ದಂತೆ ಕುಳಿತುಕೊಂಡಿದ್ದ ಅಜ್ಜಿಯ ಗಾಭರಿ ಹೊತ್ತ ಮುಖ ಕಂಡು ಬಂತು. ನಮ್ಮೆಲ್ಲರನ್ನು ಕಂಡು ಮೇಲಕ್ಕೆ ಬೆರಳು ತೋರಿಸುತ್ತಾ ' ಅಲ್ಲಿ ದೆವ್ವ.. ದೆವ್ವಾ.. ನಾನೀಗ ನೋಡಿದೆ ಅಂದಳು.
ನಾನು ಮೆಲ್ಲನೆ ಅಪ್ಪನ ಕೈ ಹಿಡಿದುಕೊಂಡರೆ , ಅಂತಹದನ್ನೆಲ್ಲ ನಂಬದ ಅಪ್ಪ ' ಎಲ್ಲಿ ತೋರ್ಸಿ .. ಏನೋ ಕನಸು ಬಿದ್ದಿರಬೇಕು ನಿಮ್ಗೆ ..' ಅಂದರು . ಆಕೆ ಮಾತ್ರ ಇಲ್ಲ ಸತ್ಯವಾಗಿಯೂ ನೋಡಿದೆ.. ಹಾಂ.. ಇನ್ನೂ ಅಲ್ಲೇ ಇದೆ ನೋಡಿ ಎಂದು ನಡುಗತೊಡಗಿದಳು. ಅವಳು ಕೈ ತೋರಿಸಿದ ಕಡೆ ಚಂದ್ರನ ಮಂದ ಬೆಳಕಿನಲ್ಲಿ ತನ್ನ ಬಾಹುಗಳನ್ನು ವಿಸ್ತರಿಸಿ ನಿಂದಿದ್ದ ಸ್ವಲ್ಪ ಹೊತ್ತಿನ ಮೊದಲು ಮರವೇರಿದ್ದ ಆಂಟೆನಾ ಇತ್ತು. ಎಲ್ಲರೂ ಜೋರಾಗಿ ನಗುತ್ತ ಮನೆಗೆ ಮರಳಿದರೂ ಅಂಟೆನಾಕ್ಕೆ ಮರುದಿನದಿಂದ 'ದೆವ್ವ' ಎಂದೇ ಎಲ್ಲರೂ ಕರೆಯತೊಡಗಿದರು.
ಮತ್ತೂ ಒಂದೆರಡು ದಿನ ಮರವೇರಿ ಇಳಿದರೂ ಚಿತ್ರಗಳು ಕಾಣದೇ ಯಾಕೋ ಟಿ ವಿ ಯ ಉಸಾಬರಿಯೆ ಬೇಡ ಎನ್ನಿಸಿ ಬಿಟ್ಟಿತು. ನನಗಂತೂ ಶಾಲೆಯಲ್ಲಿ ಗೆಳತಿಯರು ಕೇಳುವ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಹೇಳಲು ಸುಳ್ಳಿನ ಕತೆ ಪೋಣಿಸುವುದೇ ಕೆಲಸವಾಗಿತ್ತು. ಆದರೆ ಎಲ್ಲಾ ಕಷ್ಟಗಳಿಗೂ ಕೊನೆ ಎಂಬುದು ಇದ್ದೇ ಇರುತ್ತದಲ್ಲವೇ!!
ಅಪ್ಪನ ಸ್ನೇಹಿತರಲ್ಲೊಬ್ಬರು ಮರದ ಗೆಲ್ಲುಗಳಿಂದಾಗಿ ಸಿಗ್ನಲ್ ಬರುತ್ತಿಲ್ಲ ಅದನ್ನು ಕಡಿಸಿದರೆ ಎಲ್ಲಾ ಸರಿ ಹೋಗುತ್ತದೆ ಎಂದು ಸಲಹೆಯಿತ್ತರು. ಅವರ ಮಾತನ್ನು ಪಾಲಿಸುವ ಭರದಲ್ಲಿ ನಳನಳಿಸುತ್ತಿದ್ದ ಮರ ತನ್ನೆಲ್ಲ ಗೆಲ್ಲುಗಳನ್ನು ಕಳೆದುಕೊಂಡು ಬೋಳಾಯಿತು. ಈಗ ಆಂಟೆನಾವನ್ನು ಅತ್ತಿತ್ತ ತಿರುಗಿಸತೊಡಗಿದಾಗ ನಿಧಾನಕ್ಕೆ ಚಿತ್ರಗಳು ಮೂಡಲಾರಂಭಿಸಿದವು. ಮೊದ ಮೊದಲು ನಮ್ಮ ಕಲ್ಪನೆಯ ಮೇರೆಗೆ ಅದು ಇಂತಹ ಚಿತ್ರ ಎಂದು ಹೇಳಬೇಕಾಗುವ ಪರಿಸ್ಥಿತಿ ಇದ್ದರೂ, ಕ್ರಮೇಣ ನಿಜರೂಪ ತೋರಿದವು. ' ಇಷ್ಟೇ.. ಇನ್ನೂ ಚೆನ್ನಾಗಿ ಕಾಣಬೇಕೆಂದರೆ ಎತ್ತರದ ಮರಕ್ಕೆ ಕಟ್ಟ ಬೇಕಷ್ಟೆ ಎಂದರು. ಅಂತೂ ಇಂತೂ ಇನ್ನೂ ಕೆಲವು ಮರಗಳು ತಮ್ಮ ರೆಂಬೆ ಕೊಂಬೆಗಳನ್ನು ಕಳೆದುಕೊಂಡಾದ ಮೇಲೆ ಚಿತ್ರಗಳು ನಿಚ್ಚಳವಾಗಿ ತೋರತೊಡಗಿದವು.
ಈಗ ಮನೆಯಲ್ಲಿ ನಿತ್ಯವೂ ಜಾತ್ರೆ. ಭಾಷೆ ಅರ್ಥವಾಗದಿದ್ದರೂ ಅದು ಚಕ್ರ ತಿರುಗಿಸುತ್ತಾ 'ಊಂ..ಊಂ ' ಎಂದು ಸುರುವಾಗುವುದರಿಂದ ಪರದೆ ಎಳೆಯುವವರೆಗೆ ಎಲ್ಲವನ್ನೂ ನೋಡುತ್ತಿದ್ದೆವು. ಬಾನುವಾರಗಳಂತೂ ನಮ್ಮ ಮನೆ ಯಾವ ಪಿಕ್ಚರ್ ಥಿಯೇಟರಿಗೂ ಕಡಿಮೆ ಇಲ್ಲದಂತೆ ಕಂಗೊಳಿಸುತ್ತಿತ್ತು.ಯಾಕೆಂದರೆ ಆ ದಿನಗಳಲ್ಲಿ ಮಧ್ಯಾಹ್ನ ಪ್ರಾದೇಶಿಕ ಭಾಷಾ ಚಿತ್ರವೆಂದು ಅಧಿಕೃತ ಭಾಷೆಗಳ ಚಿತ್ರಗಳನ್ನು ವಾರಕ್ಕೊಮ್ಮೆ ತೋರಿಸುತ್ತಿದರು. ತೆಲುಗು, ತಮಿಳು, ಮಲಯಾಳಂ ಗಳು ಮಿಂಚಿ ಮರೆಯಾದರೂ, ಕನ್ನಡವಿನ್ನೂ ಪರದೆಯ ಮರೆಯಲ್ಲೇ ಅಡಗಿತ್ತು.
ಆ ವಾರವೂ ನಾವೆಲ್ಲ ಟಿ ವಿ ಯ ಮುಂದೆ ಕುಳಿತು ಬರುವ ಜಾಹೀರಾತುಗಳ ಹಾಡುಗಳಿಗೆ ನಮ್ಮ ಧ್ವನಿ ಸೇರಿಸುತ್ತಿದ್ದೆವು. ಇದಕ್ಕಿಂದಂತೆ ಟಿ ವಿ ಯ ಒಳಗಿನಿಂದ ಚೆಲುವೆಯೊಬ್ಬಳು ' ಆಗೆ ದೇಖಿಯೇ ಕನ್ನಡ ಫೀಚರ್ ಫಿಲ್ಮ್ ಅಮೃತ ಗಲೀಜು' ಅಂದಳು, ದೊಡ್ಡವರೆಲ್ಲ ಮುಖ ಮುಖ ನೋಡಿಕೊಂಡು ಇದ್ಯಾವುದಪ್ಪಾ ಎಂದು ಚರ್ಚೆ ಮಾಡತೊಡಗಿದರು. ಆಷ್ಟರಲ್ಲಿ ಕನ್ನಡ ಭಾಷೆಯ ಬರಹಗಳು ಕಾಣಿಸಿಕೊಂಡು ' ಅಮೃತ ಘಳಿಗೆ' ಎಂಬ ಹೆಸರು ಮೂಡಿತು. ಘಳಿಗೆ ಯನ್ನು ಇಂಗ್ಲೀಷ್ ನಲ್ಲಿ ಬರೆದುಕೊಂಡಿದ್ದಳೇನೋ..?? ಮ್ಯಾರೇಜ್, ಗ್ಯಾರೇಜ್ ಗಳಂತೆ ಇದನ್ನು ಗಲೀಜ್ ಎಂದು ಓದಿದ್ದಳು. ಅವಳು ಗಲೀಜು ಎಂದರೂ ಒಳ್ಳೆಯ ಚಲಚಿತ್ರದ ವೀಕ್ಷಣೆಯ ಸಮಾಧಾನ ನಮ್ಮದಾಗಿತ್ತು. ಮತ್ತೆ ಬಂದ ರಾಮಾಯಣವಂತೂ ಟಿ ವಿ ಯನ್ನು,ದೇವಸ್ಥಾನದ ಸ್ಥಾನಕ್ಕೇರಿಸಿ ಪರಮ ಪೂಜ್ಯವನ್ನಾಗಿ ಮಾಡಿತು.
ಇಂತಿಪ್ಪ ಕಾಲದಲ್ಲಿ,ಮನೆಯವರೆಲ್ಲ ಒಟ್ಟಾಗಿ ಸೇರಿ,ನ್ಯಾಷನಲ್ ಚ್ಯಾನಲ್ ನ ಏಕ ಚಕ್ರಾದಿಪತ್ಯದಲ್ಲಿ ಸುಖದಿಂದ ಬದುಕುತ್ತಿದ್ದೆವು. ಜೊತೆಗೆ ಏನೇ ಆದರೂ ರಾತ್ರಿಯ ನಿರ್ಧಿಷ್ಟ ಹೊತ್ತಿನಲ್ಲಿ ತನ್ನ ಮುಖಕ್ಕೆ ಹೊದಿಕೆಯೆಳೆದುಕೊಂಡು ನಿದ್ದೆ ಮಾಡುತ್ತಿದ್ದ ಈ ಸುರಸುಂದರಾಂಗಿ ಎಲ್ಲರಿಗೂ ನೆಮ್ಮದಿಯ ನಿದ್ದೆಯನ್ನೂ ಕರುಣಿಸಿ, ಮರುದಿನದ ವೀಕ್ಷಣೆಗೆ ಇನ್ನಷ್ಟು ಉಲ್ಲಾಸದಿಂದ ಸಿದ್ಧರಾಗುವಂತೆ ಮಾಡುತ್ತಿದ್ದಳು. ಯಾಕೆಂದರೆ ಈಗಿನಂತೆ ಆ ಸುಂದರಿ ಇಪ್ಪತ್ನಾಲ್ಕು ಗಂಟೆಯೂ ತನ್ನ ಅವಕುಂಠನವನ್ನು ಸರಿಸಿ ಮುಖದರ್ಶನ ನೀಡುತ್ತಿರಲಿಲ್ಲ.ಇದರಿಂದಾಗಿ ಆಕೆಯನ್ನು ನೋಡುವ ನಮ್ಮ ಹಂಬಲವೂ ಕಡಿಮೆಯಾಗುತ್ತಿರಲಿಲ್ಲ.
ಇನ್ನೆಲ್ಲಿ ಆ ಕಾಲ.. !!
--