'ಖಾದರ್ ಖಾನ್ ಕೈಸಗಿ ಯ ಕೂದಲು ಕೊಂಕದಂತೆ ನಮಗೆ ತಂದುಕೊಡಬೇಕು'
ಕೊಡಗಿನ ರಾಜ ವೀರರಾಜೇಂದ್ರನ ಈ ಆಜ್ಞೆ ಕೊಡಗಿನ ದಂಡಿನ ಸಿಪಾಯಿಗಳಿಗೆ ಅಚ್ಚರಿಯನ್ನು ತಂದಿತು. ಶತ್ರು ಸೈನಿಕರನ್ನು ಕಂಡರೆ 'ಹೊಡಿ, ಬಡಿ, ಕೊಚ್ಚು, ಕೊಲ್ಲು' ಎನ್ನುವಲ್ಲಿ ಈ ಕರುಣೆಯೇಕೋ ಅರ್ಥವೇ ಆಗಲಿಲ್ಲ ಅವರಿಗೆ.
ಕೊಡಗಿನೊಳಗಿನ ಟಿಪ್ಪು ಸುಲ್ತಾನನ ಆಡಳಿತದ ಶವಸಂಸ್ಕಾರಕ್ಕೆ ಕೊನೆಯ ಕೊಳ್ಳಿ ಇದುವೆಯೋ ಏನೋ ಎಂಬಂತೆ ಈಗ ಸಿಗುವಂತಿದ್ದ ಜಯ ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಲ್ಲಿತ್ತು. ಖಾದರ್ ಖಾನ್ ಕೈಸಗಿ ಟಿಪ್ಪು ಸುಲ್ತಾನನ ದಂಡಿನ ಸೈನ್ಯಾಧಿಕಾರಿ. ಮುಂದಡಿಡಲು ಸಾಧ್ಯವಿಲ್ಲದಂತೆ ಸಿಕ್ಕಿಬಿದ್ದಿದ್ದಾನೆ ಎಂದರೆ ಕೊಡಗಿನ ಸಿಪಾಯಿಗಳಿಗೆ ಸಿಹಿಯಾದ ಜೇನನ್ನು ಬಾಯೊಳಗೆ ಸುರಿದಂತೆ. ಪರಮಶತ್ರುವಿನ ಸೈನ್ಯಾಧಿಕಾರಿಯನ್ನು ತರಿದೆಸೆಯುವುದಲ್ಲದೆ ಹಾಗೇ ಬಿಡುವುದುಂಟೇ? ಶತ್ರುಗಳು ಯಾರೇ ಆಗಿರಲಿ ಅವರ ಶಿರ ಚೆಂಡಾಡಿದರಲ್ಲದೆ ನಿದಿರೆ ಹೋಗುವವನಲ್ಲದ ಧಣಿಯ ಬಾಯಲ್ಲಿ ಇಂತಹ ಮಾತು..!! ಇದಕ್ಕೆ ಎದುರಾಡುವುದಾಗಲೀ, ಆಜ್ಞೆಯನ್ನು ಧಿಕ್ಕರಿಸುವುದಾಗಲೀ ಆಗದಿನ್ನು. ಒಡೆಯನ ಅಪ್ಪಣೆಯನ್ನು ಮನದಲ್ಲಿಟ್ಟುಕೊಂಡು ಆಹಾರ ವಸ್ತುಗಳ ಗೋಣಿಯನ್ನೇ ಕೋಟೆಯಂತೆ ಕಟ್ಟಿಕೊಂಡು ನಡುವೆ ಹೆಗ್ಗಣಗಳಂತೆ ಅವಿತಿದ್ದ ಟಿಪ್ಪುವಿನ ಸೈನಿಕರ ದಂಡಿದ್ದ ಜಾಗದತ್ತ ಅಪಹಾಸ್ಯದಿಂದಲೇ ನೋಡುತ್ತಾ ಅದೇ ಕಡೆಗೆ ಹೆಜ್ಜೆಯಿಟ್ಟರು ಕೊಡಗಿನ ಕಲಿಗಳು.
ಇನ್ನೂ ಟಿಪ್ಪುವಿನ ಸ್ವಾಧೀನದಲ್ಲಿದ್ದ ಮಡಿಕೇರಿಯ ಕೋಟೆಯ ಕಿಲ್ಲೇದಾರನಾದ ಜಾಫರ್ ಕುಲಿಬೇಗ್ ರಹಸ್ಯವಾಗಿ ಶ್ರೀರಂಗ ಪಟ್ಟಣದಿಂದ ಆಹಾರ ಸಾಮಗ್ರಿಗಳನ್ನು ತರಿಸುತ್ತಿದ್ದ ಸುದ್ದಿ ವೀರರಾಜೇಂದ್ರನ ಕಡೆಯವರಿಗೆ ಸಿಕ್ಕಿತ್ತು. ಕೊಡಗಿನ ಯಾವ ಕಡೆಯಿಂದಲೂ ಅವರಿಗೆ ಒಂದಗುಳು ಆಹಾರ ದೊರೆಯದಂತೆ ಮಾಡಿ ಅವರನ್ನು ತಾವಾಗಿಯೇ ಕೋಟೆ ಬಿಟ್ಟು ಹೊರಡುವಂತೆ ಮಾಡಿಸುವುದು ವೀರರಾಜೇಂದ್ರನ ಉಪಾಯವಾಗಿತ್ತು. ಅಂತೆಯೇ ಅವರಿಗೆ ಆಹಾರ ಸಾಮಗ್ರಿಗಳನ್ನು ಹೊತ್ತ ಟಿಪ್ಪುವಿನ ಸೈನಿಕರ ದಂಡು ರಹಸ್ಯವಾಗಿ ಬರುತ್ತಿರುವ ವಿಚಾರ ಗೂಡಾಚಾರರ ಮೂಲಕ ಮೊದಲೇ ವೀರರಾಜೇಂದ್ರನ ಗಮನಕ್ಕೆ ಬಂದಿತ್ತು. ತನ್ನ ಸೈನಿಕರನ್ನು ಸೇರಿಸಿಕೊಂಡು ಅವರು ಬರಬಹುದಾಗಿದ್ದ ಹಾದಿಯಲ್ಲೇ ಹೊಂಚು ಹಾಕುತ್ತಿದ್ದನು.
ಕೊಡಗಿನ ದುರ್ಗಮ ಕಾಡು ಕೊಡಗಿನವರ ಪಾಲಿಗೆ ವರವಾಗಿದ್ದರೆ ಅದರ ಆಳ ವಿಸ್ತಾರಗಳನ್ನರಿಯದ ಟಿಪ್ಪುವಿನ ಸೈನಿಕರಿಗೆ ಅದು ನರಕ ದರ್ಶನ ಮಾಡಿಸುತ್ತಿತ್ತು. ಇದಂತೂ ರಹಸ್ಯದ ಕಾರ್ಯಾಚರಣೆ ಆದ ಕಾರಣ ಕಾಡಿನ ಹಾದಿಯೇ ಅವರಿಗೊಲಿದದ್ದು. ಮೊದಲೇ ಕಾದು ಕುಳಿತಿದ್ದ ಕೊಡಗಿನ ಪಡೆಯಿಂದಾಗಿ ಅಲ್ಲಿಗೆ ಬಂದ ಒಂದು ತಂಡದ ಟಿಪ್ಪುವಿನ ಸೈನಿಕರ ರುಂಡಗಳು ಅಲ್ಲಲ್ಲೇ ಚೆಂಡಾಡಲ್ಪಟ್ಟಿದ್ದವು. ಅಳಿದುಳಿದ ಸೈನಿಕ ಪಡೆ ಓಡಿ ಹಿಂದಿನಿಂದ ಬರುತ್ತಿದ್ದ ತಮ್ಮ ಅಧಿಕಾರಿಯ ದಂಡಿನ ಜೊತೆ ಸೇರಿಕೊಂಡಿತ್ತು.
ಅವರು ಕಾವೇರಿ ನದಿ ದಾಟಿ ಬೀಡು ಬಿಟ್ಟಿದ್ದ ವಿಚಾರ ತಿಳಿದೊಡನೆಯೇ ವೀರರಾಜೇಂದ್ರನ ಸೈನ್ಯ ಅಲ್ಲಿಗೆ ದಾಳಿ ಇಟ್ಟಿತ್ತು. ತನ್ನ ಸೈನ್ಯ ಸೋಲುತ್ತಿರುವುದನ್ನು ಕಂಡ ಸೈನ್ಯಾಧಿಕಾರಿ ಖಾದರ್ ಖಾನ್ ಅಳಿದುಳಿದ ಸೈನಿಕರ ದಂಡಿನ ಜೊತೆಗೆ ಎತ್ತರದ ಸ್ಥಳವನ್ನಾರಿಸಿಕೊಂಡು ತಾವು ತಂದಿದ್ದ ಆಹಾರ ವಸ್ತುಗಳ ಗೋಣಿಯನ್ನೇ ಸುತ್ತ ಕೋಟೆಯಂತೆ ಕಟ್ಟಿ ಅದರೊಳಗೆ ಅವಿತು ಬಂದೂಕಿನಿಂದ ಯುದ್ಧ ನಡೆಸುತ್ತಿದ್ದರು. ಇದೀಗ ಎಲ್ಲರೂ ತಾವಾಗಿಯೇ ಪಂಜರದೊಳಗೆ ಸಿಕ್ಕಿಬಿದ್ದಂತಾಗಿತ್ತು. ಅವರಲ್ಲಿ ಒಬ್ಬ ಸೈನಿಕನು ತಪ್ಪಿ ಹೋಗದಂತೆ ವೀರರಾಜೇಂದ್ರ ಆ ಕೋಟೆಯ ಸುತ್ತ ತನ್ನವರನ್ನು ನಿಲ್ಲಿಸಿದ್ದ. ಒಳಗಿನವರು ಎಷ್ಟೇ ಹೋರಾಡಿದರೂ ಸೋಲು ಅವರಿಗೆ ಕಟ್ಟಿಟ್ಟ ಬುತ್ತಿಯಾಗಿತ್ತು. ಹೇಗೂ ಗೆಲ್ಲುವ ಯುದ್ಧವನ್ನು ಬೇಗನೇ ಮುಗಿಸುವ ಆತುರದಲ್ಲಿದ್ದ ಕೊಡಗಿನ ಸೈನಿಕರು ಉತ್ಸಾಹದಿಂದ ' ನೀವು ಅನುಮತಿ ಕೊಟ್ಟರೆ ಇಂದು ರಾತ್ರಿಯೇ ಅವರನ್ನು ಮುಗಿಸಿಬಿಡುತ್ತೇವೆ.ಆ ಆಹಾರ ಸಾಮಗ್ರಿಗಳನ್ನು ನಮ್ಮಲ್ಲೇ ಹಂಚಿಕೊಡಬೇಕು' ಎಂದು ಒಡೆಯನಾದ ವೀರರಾಜೇಂದ್ರನಲ್ಲಿ ಬೇಡಿಕೆ ಇಟ್ಟಿದ್ದರು.
ಆಗಲೇ ವೀರರಾಜೇಂದ್ರ ತನ್ನಾಜ್ಞೆಯನ್ನು ಹೇಳಿದ್ದು. ಅದಕ್ಕೆ ಕಾರಣವಾಗಿ ಆತ 'ಅಂದೊಮ್ಮೆ ನಾವು ಪಿರಿಯಾಪಟ್ಟಣದ ಇಲಾಖೆಯಲ್ಲಿರುವಾಗ ನಂಜರಾಯಪಟ್ಟಣದ ಕಡೆ ಬೇಟೆಗಾಗಿ ಹೋಗಿ ಮರಳಿ ಬರಲು ಆಗದೇ ಇದ್ದ ಕಾಲದಲ್ಲಿ ಖಾದರ್ ಖಾನ್ ನಮ್ಮನ್ನು ಅವನಲ್ಲಿ ಎರಡು ದಿನ ಉಳಿಸಿಕೊಂಡು ಅನ್ನ ನೀರಿಟ್ಟು ಕಾದಿದ್ದಾನೆ. ಆ ಅನ್ನದ ಋಣವನ್ನು ಅವನ ಪ್ರಾಣ ಉಳಿಸುವುದರ ಮೂಲಕ ತೀರಿಸಲು ಇಚ್ಚಿಸುತ್ತೇವೆ' ಎಂದಿದ್ದನು.
ಬಿಡಾರದ ಬಹುಪಾಲು ಜನ ಕಣ್ಣಿದಿರು ಕಾಣುತ್ತಿರುವ ಕೋಟೆಯ ಸುತ್ತ ಪಹರೆ ನಡೆಸುತ್ತಿದ್ದುದು ವೀರರಾಜೇಂದ್ರನಿಗೆ ಕಾಣುತ್ತಿತ್ತು. ಇದೊಂದು ಅದ್ಭುತ ಜಯ ಎಂದು ಅವನಿಗೂ ತಿಳಿದಿತ್ತು. ಆದರೆ ಬೇಹುಗಾರರ ಮೂಲಕ ಆ ಸೈನ್ಯದಲ್ಲಿ ಖಾದರ್ ಖಾನ್ ಕೈಸಗಿ ಸಹಾ ಇದ್ದಾನೆ ಎಂಬ ವಿಷಯ ವೀರರಾಜೇಂದ್ರನನ್ನು ಹಳೆಯ ನೆನಪುಗಳಲ್ಲಿ ಮುಳುಗೇಳುವಂತೆ ಮಾಡಿತ್ತು. ನಡೆದು ಬಂದ ದಾರಿ ಸುರುಳಿ ಸುರುಳಿಗಳಾಗಿ ಬಿಚ್ಚಿಕೊಳ್ಳತೊಡಗಿತ್ತು.
ಟಿಪ್ಪು ಸುಲ್ತಾನನ ಸೆರೆಯಾಗಿ ಬದುಕುತ್ತಿದ್ದ ದಿನಗಳವು.
ದಾಯಾದಿಗಳ ಜಗಳವನ್ನು ತನಗನುಕೂಲವಾಗಿಸಿಕೊಂಡು ಮೋಸದಿಂದ ಹೈದರಾಲಿ ಕೊಡಗನ್ನು ತನ್ನ ಕೈವಶ ಮಾಡಿಕೊಂಡದ್ದಲ್ಲದೇ ಆಗಿನ್ನು ಚಿಕ್ಕ ವಯಸ್ಸಿನವರಾಗಿದ್ದ ನಮ್ಮನ್ನೆಲ್ಲಾ ಹಾಸನದ ಗೋರೂರಿನ ಕೋಟೆಯಲ್ಲಿ ಸೆರೆಯಲ್ಲಿಟ್ಟಿದ್ದನು.
ಅಧಿಕಾರ ಎನ್ನುವುದು ಎರಡಲಗಿನ ಕತ್ತಿಯಂತೆ. ಇದಕ್ಕೆ ಬಂಧುಗಳೂ, ಶತ್ರುಗಳೂ ಎರಡೂ ಒಂದೇ ತರ. ವಿರೋಧವೆಂದು ಕಂಡು ಬಂದರೆ ಯಾವುದನ್ನೂ ಕತ್ತರಿಸಲು ಹೇಸುವುದಿಲ್ಲ. ಒಂದು ಕಾಲದಲ್ಲಿ ಹೈದರಾಲಿಯ ಗೆಲುವಿಗೆ ಸಹಾಯಕರಾಗಿದ್ದ ಲಿಂಗರಾಜೇಂದ್ರ ಒಡೆಯನ ಮಕ್ಕಳು ನಾವು. ಅರಸನು ಮರಣಿಸಿದ ನಂತರ ನಾವುಗಳು ಚಿಕ್ಕವರೆಂಬ ನೆವದಿಂದ ಕೊಡಗಿನ ಆಳ್ವಿಕೆಯನ್ನು ಮೋಸದಿಂದ ತನ್ನ ವಶ ಮಾಡಿಕೊಂಡಿದ್ದ ಹೈದರಾಲಿಯ ಮಹಾತ್ವಾಕಾಂಕ್ಷೆ ರಾಜಕುಮಾರರಾದ ನಮ್ಮನ್ನು ಭಿಕಾರಿಗಳನ್ನಾಗಿಸಿತ್ತು. ಅವನ ಮರಣದ ನಂತರ ಬಂದ ಟಿಪ್ಪುವಿನ ಹಂಗಿನಲ್ಲಿ ಬದುಕಬೇಕಾದ ದುರವಸ್ಥೆ ನಮ್ಮದು. ಬದುಕು ಹೀಗೆಯೇ ಮುಗಿದು ಹೋಗಿಬಿಡುತ್ತದೆ ಎನ್ನುವ ಚಿಂತೆಯ ನಡುವೆ ಎಲ್ಲರೂ ಒಟ್ಟಿಗೇ ಇದ್ದೇವಲ್ಲ ಎನ್ನುವ ಸಮಾಧಾನದ ಅಂಶವೊಂದಿತ್ತು. ಅದಕ್ಕೂ ಕುತ್ತು ಬಂದು ವಂಶಕ್ಕೊಂದು ಅಳಿಸಲಾರದ ಕಳಂಕ ಒದಗೀತೆನ್ನುವ ಯಾವುದೇ ಸಂಶಯಗಳು ಆಗ ನಮ್ಮೊಳಗೆ ಇದ್ದಿರಲಿಲ್ಲ.
ಹಾಸನದ ಗೋರೂರಿನ ಕೋಟೆಯಿಂದ ಕುಟುಂಬ ಸಮೇತ ಪಿರಿಯಾಪಟ್ಟಣದ ಕೋಟೆಗೆ ವರ್ಗಾಯಿಸಿದ ನಂತರ ನಡೆದ ಅವಮಾನಕಾರಿ ಘಟನೆಯನ್ನು ನೆನೆದರೆ ಇನ್ನೂ ರಕ್ತ ಕುದಿಯುತ್ತದೆ. ಟಿಪ್ಪುವಿನ ನೆತ್ತರು ಹರಿಸಿಯಲ್ಲದೆ ಅದು ಶಮನವಾಗದು.
ಪಿರಿಯಾಪಟ್ಟಣದ ಕೋಟೆ ಬಹುದೊಡ್ಡದೇ..ಮೈಸೂರು ರಾಜ್ಯ, ಹೈದರಾಲಿ ಮತ್ತು ಟಿಪ್ಪುವಿನ ವಶವಾದಾಗ ಪಿರಿಯಾಪಟ್ಟಣದ ಕೋಟೆಯನ್ನು ನೋಡಿಕೊಳ್ಳಲು ಕಿಲ್ಲೇದಾರನೊಬ್ಬನ ನೇಮಕ ನಡೆದಿತ್ತು. ಆತ ಕೋಟೆಯಲ್ಲಿ ವಾಸ ಮಾಡುತ್ತಿದ್ದರೆ ಕೊಡಗಿನ ನಿಜವಾದ ವಾರಿಸುದಾರರಾದ ನಾವುಗಳು ಅದರ ಮೂಲೆಯಲ್ಲಿದ್ದ ಸಾಮಾನ್ಯ ಮನೆಯಲ್ಲಿ ಸೆರಯಾಳುಗಳಾಗಿ ಅನ್ನ ನೀರಿಲ್ಲದೆ ದಿನ ಕಳೆಯುವಂತಹ ದಿನ ಬಂದಿತ್ತು. ರಾಜಕುಟುಂಬವೊಂದು ಇಂತಹ ಹೀನ ಸ್ಥಿತಿಗಿಳಿದೀತೆಂದು ಕನಸು ಮನಸಿನಲ್ಲಿಯೂ ಕೊಡಗಿನ ಜನ ಗ್ರಹಿಸಿರಲಾರರು.
ಅತಿ ಸಾಮಾನ್ಯ ಮನೆಯಲ್ಲಿ ಸರಿಯಾದ ಆಹಾರ ವಸನಗಳಿಲ್ಲದೆ ನಾವು ನರಳುತ್ತಿರುವಾಗಲೇ ಬರ ಸಿಡಿಲಿನಂತಹ ಆಘಾತವೊಂದು ಕುಟುಂಬಕ್ಕೆರಗಿತ್ತು. ಊರಿಗೆ ಬಂದ ಮಾರಿ ಸಿಡುಬು ರೋಗಕ್ಕೆ ಅಮ್ಮ ಮತ್ತು ಚಿಕ್ಕಮ್ಮ ಬಲಿಯಾದರು. ಕುಟುಂಬದ ಇತರ ಜನರೂ ಅವರನ್ನು ಸ್ವಲ್ಪವೇ ಕಾಲದಲ್ಲಿ ಹಿಂಬಾಲಿಸಿದರು.
ಉಳಿದವರು ನಾವೇ .. ತಮ್ಮ ತಂಗಿಯರ ಜೊತೆಗೆ.
ಹುಟ್ಟಿದ ಮನೆಗೂ,ಕೊಟ್ಟ ಕುಲಕ್ಕೂ ಕೀರ್ತಿಯನ್ನು ತರಬೇಕಾದ ಹೆಣ್ಣು ಮಕ್ಕಳು ಕುಟುಂಬದಲ್ಲಿರುವುದು ಶೋಭೆಯೇನೋ ಸರಿ. ನಾವೂ ಹಾಗೆಯೇ ತಾನೇ ಅಂದುಕೊಂಡಿದ್ದು. ಆದರೆ ನಡೆದದ್ದೇ ಬೇರೆ. ಅದೊಂದು ಪ್ರಮಾದ ಕೊಡಗಿನ ರಾಜನ ಮನೆತನಕ್ಕೆ ಕಪ್ಪು ಚುಕ್ಕೆಯನ್ನಿಟ್ಟ ವಿಷಯವಾಗಿತ್ತು. ಆದರೆ ಇದರಲ್ಲಿ ತಂಗಿಯರದ್ದೇನೂ ತಪ್ಪಿರಲಿಲ್ಲ.ಇನ್ನು ನಾವೋ ಅವರನ್ನು ನಮ್ಮೊಡನೆ ಉಳಿಸಿಕೊಳ್ಳಲಾಗದೆ ಅಸಹಾಯಕರಾಗಿದ್ದೆವು.
ಇತಿಹಾಸವು ಇದಕ್ಕೆ ಮೂಕಸಾಕ್ಷಿಯಾಗಿ ಉಳಿಯಬೇಕಾಯಿತು.
ಪಿರಿಯಾಪಟ್ಟಣದಲ್ಲಿ ನಮ್ಮೊಡನೆ ಇದ್ದವರು ಮೂವರು ತಂಗಿಯರು.ನಮ್ಮ ವಿರೋಧದ ನಡುವೆಯೂ ಅವರೆಲ್ಲರನ್ನೂ ಟಿಪ್ಪು ಬಲಾತ್ಕಾರವಾಗಿ ಶ್ರೀರಂಗಪಟ್ಟಣಕ್ಕೆ ಕರೆಸಿಕೊಂಡಿದ್ದ. ಅವರಲ್ಲಿ ಒಬ್ಬಳು ಒಡ ಹುಟ್ಟಿದವಳೇ ಆಗಿದ್ದರೆ ಉಳಿದಿಬ್ಬರು ಬಲತಂಗಿಯರು. ಸುಂದರಿಯರಾದ ದೇವಮ್ಮಾಜಿ ಮತ್ತು ನೀಲಮ್ಮಾಜಿಯನ್ನು ಟಿಪ್ಪು ಬಲವಂತದಿಂದ ತನ್ನ ಅಂತಃಪುರಕ್ಕೆ ಸೇರಿಸಿದ್ದ. ಉಳಿದೊಬ್ಬಳನ್ನು ತನ್ನ ಆತ್ಮೀಯನಾದ ಖಾದರ್ ಖಾನ್ ಕೈಸಗಿಗೆ ಬಹುಮಾನವಾಗಿ ನೀಡಿದ್ದ.
ಅಬ್ಬಾ ಎಂತಹ ಕ್ರೂರ ದಿನಗಳವು. ಕೊಡಗಿನ ಮಾನಧನಗಳಾಗಿದ್ದ ಹೆಣ್ಣುಮಕ್ಕಳನ್ನು ಮಾರಾಟಕ್ಕಿಟ್ಟ ವಸ್ತುಗಳಂತೆ ನಡೆಸಿಕೊಂಡಿದ್ದರು.
ಟಿಪ್ಪುವಿನ ಜನಾನಕ್ಕೆ ಸೇರಿದವರನ್ನು ಮತಾಂತರಗೊಳಿಸಿ ಮೆಹ್ತಾಬ್, ಆಫ್ತಾಬ್ ಎಂದು ಹೆಸರೂ ಬದಲಿಸಿದ್ದರಂತೆ. ಉಳಿದವಳ ಕಥೆಯೂ ಅದೇ ಆಗುತ್ತಿತ್ತು ಖಾದರ್ ಖಾನ್ ಕೈಸಗಿಯ ಕರುಣೆಯಿಲ್ಲದಿದ್ದರೆ. ತನ್ನ ಪಾಲಿಗೆ ಬಂದ ರಾಜಕುಮಾರಿಯನ್ನು ಆತ ಮಗಳಂತೆ ಕಾಪಾಡಿದ. ಅವಳಿಗಾಗಿ ಪ್ರತ್ಯೇಕ ಮನೆಯೊಂದನ್ನು ಮಾಡಿ ಅಲ್ಲಿ ಅವಳನ್ನಿಟ್ಟು, ಹಿಂದೂ ಯುವತಿಯೊಬ್ಬಳನ್ನೇ ಅವಳ ಸೇವಕಿಯಾಗಿ ನೇಮಿಸಿದ್ದ.
ಅಣ್ಣನಾಗಿ ತಂಗಿಯರ ಮಾನ ಕಾಪಾಡಲು ಸಾಧ್ಯವಾಗದ ದಿನಗಳವು. ನಮ್ಮನ್ನು ನಾವೇ ಎಷ್ಟು ಶಪಿಸಿಕೊಂಡಿದ್ದರೂ ಜೈಲಿನೊಳಗಿದ್ದ ಅಸಹಾಯಕತೆಯಿಂದ ಕೈ ಕಟ್ಟಿ ಕೂರಲೇಬೇಕಿತ್ತು. ಸ್ವಾತಂತ್ರ್ಯಕ್ಕಾಗಿ ಹಾತೊರೆಯುವ ಅಧಮ್ಯ ಆಕಾಂಕ್ಷೆಯ ಹಕ್ಕಿಯ ರೆಕ್ಕೆಗಳು ಬಲವಾಗಲು ಇದೂ ಒಂದು ಕಾರಣವಿದ್ದೀತು.
ಇದಕ್ಕೆ ಸಹಕಾರಿಯಾದದ್ದು ನಮ್ಮ ನಾಡಿನ ಜನ.
ಯಾವ ಕಾರಣಕ್ಕೂ ಟಿಪ್ಪುವಿನ ಆಳ್ವಿಕೆಯನ್ನು ಒಪ್ಪದ ಕೊಡಗಿನ ಜನರು ಅದಕ್ಕಾಗಿ ಪ್ರಾಣ ಕಳೆದುಕೊಂಡದ್ದನ್ನು ಲೆಕ್ಕ ಇಟ್ಟರೆ ಕೊಡಗಿನೆಲ್ಲಾ ಕಲ್ಲುಗಳು ವೀರಗಲ್ಲುಗಳೇ ಆದಾವೇನೋ..!!
ಟಿಪ್ಪುವಿನ ಸೈನಿಕರ ಹಿಂಸೆಯನ್ನು ತಾಳಲಾರದೇ ವ್ಯವಸಾಯ ಮಾಡಿಕೊಂಡು ಬದುಕುತ್ತಿದ್ದವರು ತಮ್ಮ ಮನೆ ಮಾರುಗಳನ್ನು ಬಿಟ್ಟು ಕಾಡು ಸೇರಿದರು. ಎದೆಯೊಳಗೆ ಉರಿಯುತ್ತಿದ್ದ ಕ್ರೋಧದ ಬೆಂಕಿಯಿಂದಾಗಿ ಕೊಡಗಿನ ಜನ ಅವನನ್ನು ವಿರೋಧಿಸುವ ಯಾವ ಸಣ್ಣ ಕಾರಣಗಳನ್ನು ಬರಿದೇ ಹೋಗಗೊಡುತ್ತಿರಲಿಲ್ಲ. ನೆತ್ತರ ಹೊಳೆ ಹರಿಸಿಯೇ ಹರಿಸುತ್ತಿದ್ದರು. ಆದರೆ ಗುಂಪಿಗೊಬ್ಬ ಸಮರ್ಥ ನಾಯಕನಿಲ್ಲದೆ ಅವರ ಪ್ರಯತ್ನಗಳೆಲ್ಲಾ ಹುಣಸೆ ಹಣ್ಣನ್ನು ಹೊಳೆಯಲ್ಲಿ ಗಿವುಚಿದಂತಾಗುತ್ತಿತ್ತು. ಆಗಲೇ ಅವರಲ್ಲೂ ತಮ್ಮನ್ನು ಬಿಡಿಸುವ ಹೊಸ ಯೋಜನೆಯೊಂದು ಮೊಳಕೆಯೊಡೆದದ್ದು.
ಪಿರಿಯಾಪಟ್ಟಣ ವ್ಯಾಪಾರ ವಹಿವಾಟಿನ ಪ್ರಮುಖ ಸ್ಥಳ. ಮಲೆಯಾಳಿಗಳೂ. ಕೊಡಗಿನವರೂ ತಮ್ಮಲ್ಲಿ ಮಾರಾಟಕ್ಕಿದ್ದ ವಸ್ತುಗಳನ್ನು ಅಲ್ಲೇ ಕೊಂಡೊಯ್ದು ಮಾರುತ್ತಿದ್ದರು. ಕೊಡಗಿನಲ್ಲೆಲ್ಲೂ ತೆಂಗು ಬೆಳೆಯದ ಕಾರಣ ಕೇರಳದಿಂದ ಬರುತ್ತಿದ್ದ ತೆಂಗಿನ ಎಣ್ಣೆಗೆ ಅಲ್ಲಿ ಬೇಡಿಕೆ ಹೆಚ್ಚಿತ್ತು. ಇದನ್ನು ತಿಳಿದ ನಮ್ಮ ದಂಡಿನವರು ಎಣ್ಣೆ ಮಾರುವವರಂತೆ ವೇಷ ಬದಲಾಸಿ ದೊಡ್ಡ ತಪ್ಪಲೆಗಳಲ್ಲಿ ಎಣ್ಣೆಯನ್ನು ಹೊತ್ತು ಅಲ್ಲಿಗಾಗಮಿಸಿದ್ದರು. ನಾವಿರುವ ಮನೆಯೆದುರು ಎಣ್ಣೆ ಮಾರುವ ವ್ಯಾಪಾರಿಗಳ ಸೋಗು ಹಾಕಿ ಕುಳಿತಿದ್ದರು. ಸಮಯ ನೋಡಿಕೊಂಡು ಯಾರಿಗೂ ತಿಳಿಯದಂತೆ ರಹಸ್ಯವಾಗಿ ನಮ್ಮನ್ನೂ ನಮ್ಮ ಕುಟುಂಬವನ್ನೂ ಅಲ್ಲಿಂದ ಪಾರು ಮಾಡುವ ಸೂಚನೆಯನ್ನು ನಮಗೆ ತಲುಪಿಸಿದ್ದರು.
ನಮ್ಮ ಪುಣ್ಯಕ್ಕೆ ಕೋಟೆಯೊಳಗಿನ ಜನರ ಪೈಕಿ ಟಿಪ್ಪುವಿನ ಸೈನ್ಯದಲ್ಲಿ ಅಧಿಕಾರಿಗಳಾಗಿದ್ದ ಹೊಂಬಾಳೆ ನಾಯಕನೂ, ಮುಸಲ್ಮಾನನಾದ ಇಸ್ಮಾಯಿಲ್ ಖಾನನೂ ನಮಗನುಕೂಲರಾಗಿ ಇದ್ದರು. ನಮ್ಮ ವಯಸ್ಸಿನವನೇ ಆದ ಹೊಂಬಾಳೆ ನಾಯಕನಿಗೂ ನಮಗೂ ಉತ್ತಮ ಮೈತ್ರಿಯ ಬಂಧವೇರ್ಪಟ್ಟಿತ್ತು. ಕೊಡಗಿನ ರಾಜವಂಶದವರಾದ ನಾವುಗಳು ಈ ಹೀನಾಯ ಸ್ಥಿತಿಯಲ್ಲಿದ್ದುದು ಅವನಿಗೆ ಬೇಸರದ ಸಂಗತಿಯಾಗಿತ್ತು. ಅದರಲ್ಲೂ ನಮ್ಮ ತಂಗಿಯರನ್ನು ಮತಾಂತರಿಸಿ ಟಿಪ್ಪು ತನ್ನ ಜನಾನಕ್ಕೆ ಸೇರಿಸಿಕೊಂಡಿದ್ದು ಅವನಿಗೆ ಅಸಹನೀಯವೆನಿಸಿತ್ತು.
ಇನ್ನು ಇಸ್ಮಾಲ್ ಖಾನನಿಗೂ ಕೋಟೆಯ ಕಿಲ್ಲೇದಾರನಿಗೂ ವೈಮನಸ್ಸಿದ್ದ ಕಾರಣ ಆತ ಕಿಲ್ಲೇದಾರನ ಆಡಳಿತದಿಂದ ಬೇಸತ್ತು ಅಲ್ಲಿಂದ ಹೊರ ಬರುವ ಪ್ರಯತ್ನದಲ್ಲಿದ್ದನು. ಇದು ನಮ್ಮ ಪಾಲಿಗೆ ಸುವರ್ಣಾವಕಾಶವಾಗಿ ಪರಿಣಮಿಸಿತು. ನಮ್ಮ ಮಂದಿಗೆ ಕೋಟೆಯ ಒಳಗಿನಿಂದ ಸಿಕ್ಕಿದ ಈ ಸಹಕಾರ ನಾವು ಹೊರಬರುವಂತಾಗಲು ಸಹಾಯ ಮಾಡಿತ್ತು.
ವೀರ ರಾಜೇಂದ್ರ ಪಕ್ಕನೆ ನೆನಪುಗಳಿಂದ ಹೊರಬಂದ. ದೂರದಲ್ಲಿ ದೊಂದಿ ಬೆಳಕಿನಲ್ಲಿ ಇನ್ನೂ ಸೈನಿಕರ ಪಹರೆ ಕಾಣಿಸುತ್ತಿತ್ತು. ಒಳಗಿನ ಪ್ರತಿರೋಧ ನಿಂತಂತಿತ್ತು. ಕೊಡಗಿನ ರಾತ್ರಿಗಳೇ ಹೀಗೆ ಹೊರಗಿನಿಂದ ತಂಪು ತಣ್ಣಗೆ. ಹಾಗಾಗಿಯೇ ಏನೋ ಎಂತಹ ರಹಸ್ಯವನ್ನೂ ತಣ್ಣಗೆ ಹುದುಗಿಸಿಕೊಳ್ಳಬಲ್ಲವು.
ಇಂತದೇ ನೀರವ ರಾತ್ರಿಯಾಗಿತ್ತಲ್ಲವೇ ನಾವು ಟಿಪ್ಪುವಿನ ಸೆರೆಯಿಂದ ತಪ್ಪಿಸಿಕೊಂಡು ಹೊರ ಬಂದ ದಿನವೂ..
ಜನರೆಲ್ಲಾ ಬೇಗನೆ ಹೊದ್ದು ಮಲಗುವ ಕೀಲಕ ಸಂವತ್ಸರದ ಮಾರ್ಗಶಿರ ಬಹುಳ ಸಪ್ತಮಿಯ ಅತಿ ಚಳಿಯ ದಿನವಾಗಿತ್ತದು. ಕಪ್ಪು ಕತ್ತಲು ಆಗಸವನ್ನು ತುಂಬಿತ್ತು.ಈ ದಿನವನ್ನೇ ನಮ್ಮ ಬಿಡುಗಡೆಗಾಗಿ ಪ್ರಶಸ್ತ ದಿನವೆಂದು ಎಲ್ಲರೂ ಆರಿಸಿದ್ದರು.
ಮೊದಲನೆಯದಾಗಿ ಪಹರೆಯವರ ಕೈಗೆ ಸಿಕ್ಕಿ ಬೀಳದಂತೆ ಹೊರ ಬರಬೇಕಿತ್ತು. ಅದಕ್ಕಾಗಿ ಹೊಂಬಾಳೆ ನಾಯಕನು ಆ ದಿನ ವಿಶೇಷ ಊಟೋಪಚಾರಗಳನ್ನು ಮಾಡಿಸಿ ಕಾವಲಿದ್ದ ಸೈನಿಕರಿಗೆ ಹೊಟ್ಟೆ ಬಿರಿಯ ಉಣಬಡಿಸಿದ್ದ. ಮನಸೋ ಇಚ್ಚೆ ಹೀರಲು ಮದ್ಯವನ್ನೂ ಒದಗಿಸಿದ್ದ . ಅವರೆಲ್ಲಾ ಅಮಲೇರಿ ಮಲಗುವುದನ್ನೇ ಜಾಗೃತವಾಗಿ ಕಾಯುತ್ತಿತ್ತು ನಮ್ಮ ಜನಗಳ ದಂಡು. ಆ ಕತ್ತಲಿನಲ್ಲಿ ಕರಿಯ ನೂಲಿನಿಂದ ಮಾಡಿದ ಗಟ್ಟಿ ಏಣಿಯ ಒಂದು ತುದಿ ಕೋಟೆಯ ಒಳಗಿದ್ದರೆ ಇನ್ನೊಂದು ತುದಿ ಕೋಟೆಯ ಹೊರಗಿನ ಕಂದಕದಾಚೆಗೆ ಬಿಗಿಯಲ್ಪಟ್ಟಿತ್ತು. ಎಣ್ಣೆ ಮಾರುವ ವೇಷದಲ್ಲಿದ್ದ ಅವರು ಎಣ್ಣೆ ಮಾರುವ ಪಾತ್ರೆಯನ್ನಿಡುವ ಅಗಲ ಕುಕ್ಕೆಗಳನ್ನು ಸಮೀಪ ಇರಿಸಿಕೊಂಡಿದ್ದರು. ಇಸ್ಮಾಯಿಲ್ ಖಾನನೂ ತನ್ನ ಕೈ ಕೆಳಗಿನ ಪಹರೆಯವರಿಗೆ ಮದ್ಯ ಕುಡಿಸಿ ಅಮಲೇರಿ ನಿದ್ದೆ ಹೋಗುವಂತೆ ಮಾಡಿದ್ದನು.
ಕರಿ ನೂಲಿನ ಏಣಿಯ ಆಸರೆಯಲ್ಲಿ ಪತ್ನಿ, ಮಗಳು ತಮ್ಮಂದಿರ ಜೊತೆ ಹೊಂಬಾಳೆ ನಾಯಕನ ಬೆನ್ನ ಹಿಂದಿನಿಂದ ನಡೆದು ಬಂದು ಕಂದಕದಾಚೆ ಸೇರಿದ್ದೆವು. ದೊಡ್ಡ ದೊಡ್ಡ ಬುಟ್ಟಿಗಳಲ್ಲಿ ನಮ್ಮನ್ನು ಕೂರಿಸಿ ವೇಗವಾಗಿ ಕೊಡಗಿನ ಗಡಿಯ ಕಡೆ ನಡೆದಿದ್ದರು ನಮ್ಮ ಜನ.
ಉಸಿರು ಬಿಗಿ ಹಿಡಿದು ಮೌನದಲ್ಲೇ ದಾರಿ ಸವೆದಿತ್ತು. ನಾವೆಲ್ಲರೂ ಬುಟ್ಟಿಗಳ ಒಳಗಿದ್ದರೆ ಸಣ್ಣ ಕೂಸು ದಂಡಿನವನಾದ ಅಪ್ಪಾಜಿಯ ಕೈಯಲ್ಲಿತ್ತು. ಇನ್ನೊಂದು ಪಹರೆಯ ಉಕ್ಕುಡವನ್ನು ಹಾದು ಹೋದರೆ ಎಲ್ಲವೂ ಸಾಂಗವಾಗಿ ನಡೆಯುತ್ತಿತ್ತು. ಆದರೆ ಅದು ಸಮೀಪಕ್ಕೆ ಬರುತ್ತಿರುವಾಗಲೇ ಅಪ್ಪಾಜಿಯ ಕೈಯಲ್ಲಿದ್ದ ನಮ್ಮ ಪುಟ್ಟ ಕೂಸು ಅಳತೊಡಗಿತ್ತು. ಎಲ್ಲರೂ ಗಾಬರಿಗೊಂಡಿದ್ದೆವು. ತಾಯ ಹಾಲಲ್ಲದೇ ಅದನ್ನು ಸಮಾಧಾನ ಪಡಿಸುವ ಯಾವ ಮಂತ್ರ ದಂಡವೂ ಇರಲಿಲ್ಲ. ಆದರೆ ನಂಜಮ್ಮಾಜಿ ಬುಟ್ಟಿಯೊಳಗಿದ್ದ ಕಾರಣ ಮಗುವನ್ನೆತ್ತಿ ಹಾಲುಣಿಸುವುದು ಸಾಧ್ಯವೇ ಇರಲಿಲ್ಲ.
ಮಗುವಿನ ಅಳುವಿನಿಂದ ಎಲ್ಲರೂ ಸಿಕ್ಕಿಬೀಳುವ ಸಾಧ್ಯತೆ ಇತ್ತು. ಸಿಕ್ಕಿಬಿದ್ದರೆ ನಮ್ಮ ಈ ಪ್ರಯತ್ನಕ್ಕೆ ಬದಲಾಗಿ ಟಿಪ್ಪುವಿನ ಬಹುಮಾನ ನಮ್ಮ ಸಾವೇ ಆಗಿದ್ದುದು ಅಷ್ಟೇ ಖಚಿತವಾಗಿತ್ತು. ನಮ್ಮ ಸಾವು ಎಂದರೆ ಕೊಡಗಿನ ಸಾವಿರಾರು ಜನರ ಆಶೋತ್ತರಗಳ ಸಾವೂ ಆಗಿತ್ತು. ಈಗ ಸೋಲನ್ನೊಪ್ಪಿಕೊಳ್ಳುವ ಪ್ರಶ್ನೆಯೇ ಇರಲಿಲ್ಲ. ನಾವು ಮನಸ್ಸನ್ನು ಗಟ್ಟಿ ಮಾಡಿಕೊಳ್ಳಬೇಕಾದುದಿತ್ತಷ್ಟೇ. ಕೊಡಗನ್ನು ಟಿಪ್ಪುವಿನಿಂದ ಮುಕ್ತಿಗೊಳಿಸಲು ಇನ್ನೊಂದು ನೆತ್ತರ ತರ್ಪಣವೂ ಬೇಕಿತ್ತೇನೋ..! ಅದೂ ರಾಜಮನೆತನದ್ದೇ ಆಗಿರಬೇಕೆಂದು ವಿಧಿ ನಿರ್ಣಯವಿದ್ದರೆ ಬದಲಾಯಿಸಲು ನಾವಾರು? ಎಷ್ಟೊಂದು ಮಂದಿಯ ಬಲಿದಾನದ ನಂತರ ಪಡೆದ ಸ್ವಾತಂತ್ರ್ಯವನ್ನು ಸುಮ್ಮನೆ ಹೋಗಗೊಡುವ ಬದಲು ನಮ್ಮದೇ ನೆತ್ತರು ಹರಿಸಿ ಗೆದ್ದುಕೊಳ್ಳುವ ಪ್ರಯತ್ನ ಮಾಡ ಹೊರಟೆವು.
ನಡುಗುತ್ತಿದ್ದ ಧ್ವನಿಯನ್ನು ಸ್ಥಿರವಾಗಿಸಿ ಹೊಂಬಾಳೆ ನಾಯಕನಿಗೆ 'ಮಗುವನ್ನು ಕತ್ತಿಯಿಂದ ಕತ್ತರಿಸಿಬಿಡು' ಎಂದಿದ್ದೆವು. ಪಕ್ಕದಲ್ಲೇ ಸಾಗುತ್ತಿದ್ದ ಬುಟ್ಟಿಯಲ್ಲಿದ್ದ ನಂಜಮ್ಮಾಜಿಗೂ ನಮ್ಮ ಮಾತು ಕೇಳಿರಬೇಕು. ತಾಯ ಕರುಳಲ್ಲವೇ? ಆಕೆಯ ತುಟಿ ಕಚ್ಚಿ ತಡೆಯುತ್ತಿದ್ದ ಬಿಕ್ಕುಗಳು ಒಮ್ಮೊಮ್ಮೆ ಮೌನವನ್ನು ಭಂಗಗೊಳಿಸುತ್ತಿದ್ದವು. ಅದಾಗಿ ಸ್ವಲ್ಪ ಹೊತ್ತಿನಲ್ಲೇ ಮಗುವಿನ ಸದ್ದು ನಿಂತು ಹೋಯಿತು. ಹೇಗೂ ಕತ್ತಲು. ಎದೆಯೊಳಗಿನ ಬೇಗುದಿ ಕಣ್ಣೀರಾಗಿ ಹರಿದರೂ ಯಾರರಿವಿಗೂ ಬಾರದು.
ಉಕ್ಕುಡದ ಪಹರೆಯವರು ಗಾಢ ನಿದ್ರೆಯಲ್ಲಿದ್ದುದರಿಂದ ಅಲ್ಲಿಂದ ಯಾವ ತೊಂದರೆಯೂ ಇಲ್ಲದೆ ಆ ಕತ್ತಲಿನಲ್ಲೇ ನಡೆದು ಕೊಡಗಿನ ಗಡಿ ಸಮೀಪಿಸಿದೆವು. ಅಲ್ಲಿ ಬೋಯಿಗಳು ಪಲ್ಲಕ್ಕಿಗಳನ್ನಿಟ್ಟುಕೊಂಡು ಕಾದು ಕುಳಿತಿದ್ದರು.
ಆ ಹೊತ್ತಿಗೆ ರಾತ್ರಿಯಿಡೀ ನಿದ್ರೆಯಿಲ್ಲದೆ, ಜೊತೆಗೆ ಮಗುವನ್ನು ಕಳೆದುಕೊಂಡ ನೋವಿನಲ್ಲಿದ್ದ ನಂಜಮ್ಮಾಜಿ ಜ್ವರದಿಂದ ತತ್ತರಿಸುತ್ತಿದ್ದಳು. ದುಃಖಾತಿರೇಕದಿಂದ 'ನನ್ನ ಮಗುವಿನ ಹೆಣದ ಮೊಗವನ್ನಾದರೂ ತೋರಿಸಿ ನನಗೂ ಒಂದಿಷ್ಟು ವಿಷ ಕೊಟ್ಟು ಬಿಡಿ' ಎಂದು ಬೋರಾಡಿ ಅಳತೊಳಗಿದಳು. ಮುದ್ದು ಕೂಸಿನ ನೆನಪಿಗೆ ನಮ್ಮ ಕಣ್ಣಾಲಿಗಳೂ ಮತ್ತೆ ತುಂಬಿ ಬಂದು 'ಮಗುವನ್ನು ಎಲ್ಲಿ ಕೊಂದು ಬಂದಿರಿ' ಎಂದು ಹೊಂಬಾಳೆ ನಾಯಕನನ್ನು ಕೇಳಿದೆವು.
ಆತ ನಮ್ಮನ್ನು ನೋಡಿ ತಲೆ ಬಗ್ಗಿಸುತ್ತಾ ' ನಿಮ್ಮ ಅಪ್ಪಣೆಯನ್ನು ಪಾಲಿಸದ ನಮ್ಮನ್ನು ಕ್ಷಮಿಸಿ' ಎಂದಿದ್ದ.
ಅಂದರೆ..?
ಮಗು ಇನ್ನೂ ಬದುಕಿದೆಯೇ..? ಹೇಗೆ ಸಾಧ್ಯ..?
ನಮ್ಮಾಜ್ಞೆಯನ್ನು ಕೇಳಿದ್ದ ಹೊಂಬಾಳೆ ನಾಯಕ ಅದನ್ನು ಇಸ್ಮಾಯಿಲ್ ಖಾನನ ಕಿವಿಗೂ ಉಸುರಿದ್ದ. ಅವನಿಗೆ ಪಕ್ಕನೆ ನೆನಪಿಗೆ ಬಂದದ್ದು ತನ್ನ ಬಿಡದ ಚಾಳಿಯಾದ ಅಫೀಮು. ಇಸ್ಮಾಯಿಲ್ ಖಾನ್ ತನ್ನ ಜೋಳಿಗೆಯಲ್ಲಿ ಯಾವತ್ತೂ ಇರುತ್ತಿದ್ದ ಅಫೀಮನ್ನು ಎಂಜಲಿನಲ್ಲೇ ಅರೆದು ಮಗುವಿಗೆ ತಿನ್ನಿಸಿದ್ದನಂತೆ.ಆ ಅಮಲಿನ ಜೊಂಪಿಗೆ ಮಗು ಅಳು ನಿಲ್ಲಿಸಿ ಮೈ ತಿಳಿಯದಂತೆ ನಿದ್ರೆಯಲ್ಲಿ ಮುಳುಗಿತ್ತು.
ನಂಜಮ್ಮಾಜಿ ಸಂತಸದಿಂದ ಮಗುವನ್ನೆತ್ತಿಕೊಂಡು ಲೊಚ ಲೊಚನೆ ಮುದ್ದಿಕ್ಕುತ್ತಾ ಹಾಲೂಡತೊಡಗಿದ್ದಳು. ಸ್ವಲ್ಪ ಹೊತ್ತಿಗೆ ಮಗು ನಿದ್ರೆ ತಿಳಿದೆದ್ದು ಚೇತರಿಸಿಕೊಂಡು ಅಳತೊಡಗಿತ್ತು.
ಓಹ್.. ಎಲ್ಲಿ ಕಳೆದುಹೋಗಿ ಬಿಟ್ಟೆವು ನಾವು..!!
ಎಷ್ಟೊಂದು ಜನರ ಉಡುಗೊರೆ ನಮ್ಮ ಬಾಳು. ನಿಚ್ಚಳ ಬೆಳಕಿಲ್ಲದ ಹೋರಾಟದ ಬದುಕಿನಲ್ಲೂ ಇಂತಹ ಒಂದೊಂದು ಘಟನೆಗಳು ಬೆಳಕ ಕಿರಣಗಳಾಗಿ ಒಳ ನುಸುಳಿ ಮುಂದಿನ ಬದುಕ ದಾರಿಗೆ ಸಂತಸದ ಕೈ ದೀವಿಗೆಯಾಗಿದ್ದವು.
ಇಲ್ಲದಿದ್ದರೆ ಸೈನ್ಯಾಧಿಕಾರಿಗೆ ಉಡುಗೊರೆಯಾಗಿ ಕೊಡಲ್ಪಟ್ಟ ತಂಗಿ ಮಾನಪ್ರಾಣಗಳನ್ನುಳಿಸಿಕೊಂಡು ಮತ್ತೆ ದಕ್ಕುವಳೆಂದು ಆಲೋಚಿಸಿದ್ದಿದೆಯೇ? ನಾವು ತಪ್ಪಿಸಿಕೊಂಡು ಬಂದ ಸುದ್ದಿ ತಿಳಿದ ಕೆಲ ಕಾಲದ ನಂತರ ಟಿಪ್ಪುವಿನ ಅರಿವಿಗೆ ಬಾರದಂತೆ ಗೌರವ ಪೂರ್ವಕವಾಗಿ ತಂಗಿಯನ್ನು ನಮ್ಮಲ್ಲಿಗೆ ಮರಳಿಸಿದ್ದ ಖಾದರ್ ಖಾನ್ ಕೈಸಗಿ. ಇದಕ್ಕಿಂತ ದೊಡ್ಡ ಉಪಕಾರ ಯಾರಾದರೂ ಮಾಡುವುದು ಶಕ್ಯವಿತ್ತೇ?
ಆತ ಮಾಡಿದ್ದ ಉಪಕಾರಕ್ಕೆ ಪ್ರತಿಯಾಗಿ ನಾವೇನು ಮಾಡಬಹುದಿತ್ತೆಂದು ಕೆಲಕಾಲ ಯೋಚಿಸಿದ್ದಿತ್ತು. ಜೊತೆಗೇ ಇದ್ದ ಹೊಂಬಾಳೆ ನಾಯಕನಿಗೂ, ಇಸ್ಮಾಯಿಲ್ ಖಾನನಿಗೂ ಅಂದೇ ಭೂಮಿಕಾಣಿಗಳನ್ನಿತ್ತು ಗೌರವಿಸಿದ್ದೆವು. ಆದರೆ ಟಿಪ್ಪುವಿನ ಆಧೀನನಾಗಿರುವ ಖಾದರ್ ಖಾನನ ಋಣವನ್ನು ಹೊತ್ತೇ ಜೀವನ ಮುಗಿಸಬೇಕಾಗುತ್ತದೆ ಎಂದುಕೊಂಡಿದ್ದೆವು.
ಸದ್ಯ.. ಹಾಗಾಗಲಿಲ್ಲ.
ಅವನುಳಿಸಿದ ಪ್ರಾಣಕ್ಕೆ ಅವನ ಪ್ರಾಣವನ್ನುಳಿಸುವುದೇ ಸರಿಯಾದ ನಿರ್ಧಾರ. ಟಿಪ್ಪುವಿನ ಹೆಮ್ಮೆಯ ಕೋಡು ಮುರಿಯಲೂ ಇದೊಂದು ಅಸ್ತ್ರ. ತನ್ನ ಸೈನ್ಯಾಧಿಕಾರಿ ಕೊಡಗು ರಾಜನ ಪ್ರಾಣಭಿಕ್ಷೆಯಿಂದ ಉಳಿದು ಬಂದಿದ್ದಾನೆಂದರೆ ಅವನಿಗೂ ಅವಮಾನವಲ್ಲವೇ? ಅದಲ್ಲ.. ಕೈಸಗಿ ಮರಳಿ ಆ ನಾಡಿಗೆ ಹೋಗುವವನಲ್ಲವೆಂದಾದರೆ ನಮ್ಮ ಈ ಕೃಪೆಯಿಂದ ಶತ್ರುವಂತೂ ಆಗಲಾರ. ಹಾಗಾಗಿಯೇ ಆತ ಶತ್ರುಗಳ ಕಡೆಯವನಾದರೂ ಅವನನ್ನುಳಿಸುವ ನಮ್ಮ ನಿರ್ಧಾರಕ್ಕೆ ಪಶ್ಚಾತ್ತಾಪ ಪಡಬೇಕಾಗಿ ಬರಲಿಕ್ಕಿಲ್ಲ ಎಂಬ ನಂಬುಗೆಯಿಂದ ನಿದ್ರೆಗಾಗಿ ಹಾತೊರೆಯುವ ಕಣ್ಣುಗಳನ್ನು ಸಂತೈಸುತ್ತಾ ಬಿಡಾರದೊಳಗೆ ನಡೆದನು ರಾಜಾ ವೀರರಾಜೇಂದ್ರ.