Pages

Total Visitors

Friday, November 14, 2014

ಮ್..ಮ್.. ಅಂದರೆ ಅಮ್ಮನಾ..

ಭಾಷೆ ಅನ್ನುವುದು ಸಂವಹನದ ಮಾಧ್ಯಮ. ಒಬ್ಬನಿಂದ ಇನ್ನೊಬ್ಬನಿಗೆ ಭಾವನೆಗಳನ್ನು ಹಂಚಿಕೊಳ್ಳಲೆಂದೇ ಹುಟ್ಟಿಕೊಂಡದ್ದು. ಪ್ರಪಂಚದಾದ್ಯಂತ ಸಾವಿರಾರು ಭಾಷೆಗಳು ಇರುವ ಕಾರಣ ಒಂದೇ ಭಾಷೆಯನ್ನು ಮಾತನಾಡುವ ಜನರ ಗುಂಪುಗಳು ಪ್ರತ್ಯೇಕವಾಗಿ ತಮ್ಮನ್ನು ಆ ಭಾಷೆಯ ಜನರೆಂದು ಗುರುತಿಸಿಕೊಳ್ಳತೊಡಗಿದರು. ಭಾಷೆಗಳಿಂದಲೇ ಮನುಷ್ಯ ಮನುಷ್ಯನಲ್ಲಿ ಗೋಡೆಗಳು ಎದ್ದವು. ತಮ್ಮ ತಮ್ಮಲ್ಲೇ ತಾನು ಮೇಲು ನೀನು ಕೀಳು ಎಂದು ಪ್ರಾರಂಭವಾದ  ಕಚ್ಚಾಟಗಳು ಇನ್ನೂ ಮುಂದುವರಿಯುತ್ತಲೇ  ಇದೆ.
ಆದರೆ ಇವುಗಳಿಗೂ ಮೀರಿದ, ಪ್ರಪಂಚದಾದ್ಯಂತ ಹೆಚ್ಚಿನೆಲ್ಲಾ ಮನೆಗಳಲ್ಲಿ ಬಳಸಲ್ಪಡುವ 'ಯೂನಿವರ್ಸಲ್ ಲಾಂಗ್ವೇಜ್' ಒಂದಿದೆ ಎಂದರೆ ಅಚ್ಚರಿಯಾಗುತ್ತದೆ ಅಲ್ಲವೇ. ಇದಕ್ಕೆ ಯಾವುದೇ ವರ್ಣಮಾಲೆಗಳಿಲ್ಲ. ಇಂತಹ ಪದಾರ್ಥಕ್ಕೆ ಇಂತಹುದೇ ಶಬ್ಧಗಳೆಂದಿಲ್ಲ.ಒಂದೇ ಪದ ಬೇರೆ ಬೇರೆ ಅರ್ಥಗಳನ್ನು ಹೊಮ್ಮಿಸಬಹುದು. ಅತಿ ಕ್ಲಿಷ್ಟವೆಂದು ಕಾಣುವ, ಅರ್ಥೈಸಿಕೊಳ್ಳಲು ಕಠಿಣ ಎನಿಸುವ ಭಾಷೆಯಾದರೂ ಇದು ಎಲ್ಲರೂ ಮೆಚ್ಚುವ ಭಾಷೆ. 
ಈ ವಿಚಿತ್ರ ಭಾಷೆಯ ಬಗ್ಗೆ ಯಾರಿಗೂ ಯಾವುದೇ ರೀತಿಯ ಪೂರ್ವಾಗ್ರಹಗಳಿಲ್ಲದೇ ಇರುವುದು ಮತ್ತು ಇದನ್ನು ಕೇಳಿದವರೆಲ್ಲ ಆನಂದಿಸುವುದು ಇದರ ಹಿರಿಮೆಗೆ ಸಾಕ್ಷಿ. ಇದನ್ನು ಕಲಿಸುವ ಶಾಲೆಗಳಾಗಲೀ, ಭಾಷೆಯ ಬಳಕೆಯನ್ನು ಅಧ್ಯಯನ ಮಾಡುವ ವಿದ್ವಾಂಸರಾಗಲಿ ಇಲ್ಲದಿದ್ದರೂ ಎಲ್ಲೆಡೆ ಪಸರಿಸಿ ಸಂತಸವನ್ನುಂಟುಮಾಡುವ ಈ ಭಾಷೆಯನ್ನು  ತಿಳಿದವರು ನಮ್ಮ ನಿಮ್ಮ ಮನೆಗಳಲ್ಲೂ ಇದ್ದಾರೆ.
 
ಅರ್ರೆರೆ..! ಇದೇನಿದು ಎಂದು  ತಲೆ ಕೆರೆದುಕೊಳ್ಳಬೇಡಿ.

ಇದರ ಬಳಕೆದಾರರು ಮನೆಯೊಳಗಿರುವ ತೊದಲು ನುಡಿಯ ಪುಟಾಣಿಗಳು. ಇವುಗಳು ಪುಟ್ಟ ಮಕ್ಕಳಿರುವ ಎಲ್ಲಾ ಮನೆಗಳಲ್ಲಿ ಅವರವರ ಆಡುನುಡಿಗೆ ಹೊಂದಿಕೊಂಡು ಬೇರೆ ಬೇರೆಯಾಗಿ ಕೇಳಿದರೂ ಎಲ್ಲವನೂ ಒಂದೇ ಹೆಸರಿನಡಿಯಲ್ಲಿ ತರಬಹುದು. ಈ ಭಾಷೆ ಎಷ್ಟು ಆನಂದಕರವೋ ಅಷ್ಟೇ ಅಪಾಯಕಾರಿ ಕೂಡಾ.. ಬಹುಬೇಗ ನಿಮ್ಮನ್ನು ತನ್ನ ಪ್ರಭಾವಲಯದ ತೆಕ್ಕೆಗೆ ಎಳೆದುಕೊಂಡು ನೀವೂ ಕೂಡಾ ಹಾಗೇ ಮಾತನಾಡುವಂತೆ ಪ್ರೇರೇಪಿಸುತ್ತದೆ. ಈ ಭಾಷೆಯ ತಾಕತ್ತೇ ಅಂತಹದು. ಈಗ ನಿಮಗೂ ಅದರ ನೆನಪು ಬರುತ್ತಿರಬಹುದಲ್ಲ.. 

ಹೌದು.. ನಾನು ಬಾಲಭಾಷೆಯ ಬಗೆಗೇ ಹೇಳುತ್ತಿರುವುದು.  





ಮೊದಲಿಗೆ ಈ ಭಾಷೆಯನ್ನು  ಬೇರೆ ಮನೆಗಳಲ್ಲಿ ಕೇಳಿ ಮಾತ್ರ ತಿಳಿದಿದ್ದ ನಾನು 'ನಮ್ಮ ಮನೆಯಲೊಂದು ಪುಟ್ಟ ಪಾಪ ಇರುವುದು' ಎಂದು ಹಾಡಲು ಶುರು ಮಾಡಿ ಸ್ವಲ್ಪ ಸಮಯದಲ್ಲಿ ಈ ಭಾಷೆಯ ವಲಯಕ್ಕೆ ಸಿಲುಕಿ ನನ್ನ ಭಾಷೆಯನ್ನು ಮರೆಯುವಂತಾಯಿತು. 

ಮೊದಲಿಗೆ ಕೇವಲ ಬೆಳದಿಂಗಳ ನಗು ಸೂಸುತ್ತಿದ್ದ ಮಗ ತಿಂಗಳು ಉರುಳಿದಂತೆಲ್ಲಾ ವಿಚಿತ್ರ ಶಬ್ಧಗಳನ್ನು ಉಚ್ಚರಿಸತೊಡಗಿದ. ಆ ಶಬ್ಧಗಳಿಗೆ ಅರ್ಥ ಹುಡುಕುವುದು ಕಷ್ಟವೇ ಆಗಿದ್ದರೂ ನನಗೆ ಬೇಕಾದಂತೆ ಅರ್ಥ ಮಾಡಿಕೊಂಡು ಅದೇ ಸರಿ ಎಂದುಕೊಳ್ಳುತ್ತಿದ್ದೆ. 

ಮಗುವಿನ ಮೊದಲ ನುಡಿಯೇ ಅಮ್ಮಾ ಎಂದು ಅನೇಕ ಹಾಡುಗಳಲ್ಲೂ, ಸಿನಿಮಾದ ಸೆಂಟಿಮೆಂಟಲ್ ಡೈಲಾಗುಗಳಲ್ಲೂ ಕೇಳಿ ತಿಳಿದಿದ್ದ ನಾನು ನಮ್ಮ ಮನೆಯ ಮುದ್ದು ಕಂದ 'ಮ್..ಮ್..' ಎಂದೊಡನೆ ಪಾಯಸ ಮಾಡಿ ಇವತ್ತು ನನ್ನ ಮಗ ನನ್ನನ್ನು 'ಅಮ್ಮಾ' ಎಂದ ಎಂದು ಸಂತಸ ಪಟ್ಟಿದ್ದೆ. 

ಮರುದಿನದಿಂದ ಮತ್ತೆ ಮತ್ತೆ ಆ ಪದವನ್ನು ಅವನ ಬಾಂದ ಆಲಿಸುವಾಸೆ. 'ಅಮ್ಮಾ ಹೇಳು ಪುಟ್ಟೂ, ಹೇಳು ಕಂದಾ' ಎಂದು ಎಷ್ಟು ಪೂಸಿ ಮಾಡಿದರೂ ಹೇಳದ ಈ ಕಂದ ಊಟ ಮಾಡಿಸುವ ಹೊತ್ತಿಗೆ ಮನೆಯಿಂದ ಹೊರಗೆ ಕರೆದುಕೊಂಡು ಹೋದೊಡನೇ ಪಕ್ಕದ ಮನೆಯ ನಾಯ ಕಡೆಗೆ ಕೈ ತೋರಿಸುತ್ತಾ 'ಮ್.. ಮ್..' ಎಂದ. 

ಸರಿ ಹೋಗಲಿ .. ಸಣ್ಣದಲ್ಲವೇ.. ಕಲಿತುಕೊಳ್ತಾನೆ ಇನ್ನು ಎಂದು ಸುಮ್ಮನಾದೆ. 

ಒಂದೆರಡು ದಿನದಲ್ಲೇ ಇನ್ನೊಂದು ಅಕ್ಷರ ಶಬ್ಧ ರೂಪವನ್ನು ಪಡೆತು. ಅದು 'ಹ'

ಇದಕ್ಕೇನಿರಬಹುದಪ್ಪಾ ಅರ್ಥ ಅಂತೆಲ್ಲಾ ತಲೆಕೆಡಿಸಿಕೊಳ್ಳುತ್ತಿರುವಾಗಲೇ ಆಫೀಸಿಗೆ ಹೊರಟ ಇವರ ಕಾಲಬಳಿ ನಿಂತು 'ಹ' ಎಂದ. ಹೋ.. ಇದು ಅಪ್ಪ ಎಂದು ಕರೆಯುವ ಹೊಸ ವಿಧಾನ ಎಂದುಕೊಂಡು ಅವರ ಸಂತಸಕ್ಕಾಗಿ ಇನ್ನೊಮ್ಮೆ ಪಾಯಸ ಮಾಡಲಾಯಿತು. 

ಸ್ವಲ್ಪ ದಿನಗಳಲ್ಲಿ ಇವನ ಶಬ್ಧಕೋಶಗಳು ಹಲವಾರು ಪದಗಳನ್ನು, ಇಡೀ, ಅರ್ಧ ಅಕ್ಷರಗಳನ್ನು ಪಡೆದುಕೊಂಡು ವಿಸ್ತರಿಸಿಕೊಳ್ಳುತ್ತಾ ಹೋಯಿತು. ಈಗ 'ಅಮ್ಮಾ' ಎಂಬುದನ್ನು ನಾನು ಪ್ರಯತ್ನ ಪೂರ್ವಕವಾಗಿ ನನ್ನ ಕಡೆಗೆ ಬೆಟ್ಟು ಮಾಡಿಸಿ ತೋರಿಸಿ ಕಲಿಸಿದ್ದೆ.  ಈಗ ಮುಂದಿನ ಪಾಠವಾಗಿ ಅವನ ಹೆಸರನ್ನು ಹೇಳಿಕೊಡಲು ಪ್ರಯತ್ನ ಮಾಡುತ್ತಿದ್ದೆ. ಚೇ ಹೇಳು ಮುದ್ದು ಎಂದಾಗ ಹೇಳುತ್ತಿದ್ದ. ತ ಹೇಳಿ ಕೊಟ್ಟೆ. ಅದನ್ನೂ ಒಂದೇಟಿಗೆ ಕಲಿತ. ನ ಅಂತಲೂ ಹೇಳಿಕೊಟ್ಟೆ. ಅಯ್ಯೋ ಅದು ಕೂಡಾ ಹೇಳಿದ. ಇನ್ನೇನು ಕಷ್ಟ ಎಂದು ಅವನ ಕಡೆಗೆ ಅವನ ಬೆಟ್ಟು ತಿರುಗಿಸಿ  'ಚೇತನ್ ಹೇಳು..' ಎಂದೆ. 
'ಹೇಹನ್' ಎಂದು ಅವನ ಎದೆ ಅವನೇ ತಟ್ಟಿಕೊಂಡ.  

ಮಕ್ಕಳಿಗೆ ಬಣ್ಣ ಬಣ್ಣದ ಚಿತ್ರಗಳನ್ನು ತೋರಿಸಿ ಅವುಗಳನ್ನು ಗುರುತಿಸಲು ಕಲಿಸುವುದು ಸುಲಭ ಎಂದು ಯಾರೋ ಹೇಳಿದರು. ಅಂದಿನಿಂದ ನಮ್ಮ ಮನೆ ಪುಸ್ತಕ ಭಂಡಾರವೇ ಆಯಿತು, ವಿವಿಧ ಪ್ರಾಣಿ ಪಕ್ಷಿಗಳು,  ಹೂಗಳು ಇರುವ ಹಲವು ಪುಸ್ತಕಗಳು ಟೀಪಾಯನ್ನು ಅಲಂಕರಿಸಿದವು. 

'ನೋಡಿ ಕಲಿ ಮಾಡಿ ತಿಳಿ' ಎಂಬ ನುಡಿಯಲ್ಲಿ ನಂಬಿಕೆಟ್ಟು ಅವನೂ ಸ್ವತಂತ್ರವಾಗಿ ಕಲಿಯಲಿ ಎಂದು ಆ ಪುಟ್ಟ  ಕೈಗೆ ಪಕ್ಷಿಗಳ ಪುಸ್ತಕ ಕೊಟ್ಟು ನಾನು ನನ್ನ ಕೆಲಸಗಳಲ್ಲಿ ಮುಳುಗಿದ್ದೆ. ಮಗನ ಕಲಿಕಾ ಪ್ರಗತಿಯನ್ನು ನೋಡುವ ಸಲುವಾಗಿ ಅವನ ಹತ್ತಿರ ಬಂದಾಗ ಹಕ್ಕಿಗಳೆಲ್ಲಾ ತಮ್ಮ ರೆಕ್ಕೆ ಪುಕ್ಕ ಕಳೆದುಕೊಂಡು ಯಾವುದರ ಮೈಗೆ ಇನ್ಯಾವುದರ ತಲೆಯನ್ನೂ ಪಡೆದು ಇಡೀ ರೂಮಿನಲ್ಲಿ ಫ್ಯಾನಿನ ಗಾಳಿಗೆ ಸಿಕ್ಕ ಸಿಕ್ಕ ಕಡೆ ಹಾರಾಡುತ್ತಿದ್ದವು. ಒಂದೆರಡು ತುಂಡುಗಳು ಅವನ ಬಾಯೊಳಗೂ ಸೇರಿದ್ದವು. ಅದನ್ನೆಲ್ಲಾ ಗುಡಿಸಿ ಕಸದ ಬುಟ್ಟಿಗೆ ಸೇರಿಸಿದೆ. ಅಂದಿನಿಂದ ಅವನ ಸ್ವಕಲಿಕಾ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಹುಚ್ಚು ಕೆಲಸ ಬಿಟ್ಟು ಅವನಿಗೆ ಎಟುಕದಷ್ಟು ಎತ್ತರದಲ್ಲಿ ಪುಸ್ತಕಗಳನ್ನಿರಿಸಿದೆ. 

ಈಗ ನಾನು ಅವನನ್ನು ಪಕ್ಕದಲ್ಲಿ ಕೂರಿಸಿಕೊಂಡು ಪ್ರಾಣಿಗಳ ಚಿತ್ರವಿರುವ ಪುಸ್ತಕವನ್ನು ಎದುರಿರಿಸಿ, ಅವನ ಎರಡೂ ಕೈಗಳನ್ನು ನನ್ನ ವಶದಲ್ಲೇ ಇಟ್ಟುಕೊಂಡು ಚಿತ್ರ ತೋರಿಸಿ ಅವುಗಳ ಹೆಸರನ್ನು ಹೇಳಿಕೊಡಲಾರಂಭಿಸಿದೆ. ಹುಲಿ, ಸಿಂಹ ಚಿರತೆಗಳನ್ನೆಲ್ಲಾ ಮೌನವಾಗೇ ನೋಡಿದ ಅವನು ಖಡ್ಗ ಮೃಗದ ಚಿತ್ರ ಬಂದಾಗ ತುಟಿ ಅರಳಿಸಿದ. 
ಇದು ಖಡ್ಗಮೃಗ ಎಂದು ಹೇಳಿಕೊಟ್ಟೆ.
ಹಗ್ಗುಬುದ ಎಂದ. 

ಮಗ ಸಣ್ಣವನಾದ ಕಾರಣ ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಅಲ್ಲೇ ನನ್ನೊಡನೆ ಕಾಲ ಕಳೆಯುತ್ತಿದ್ದ. ಇದನ್ನೂ ಕಲಿಕಾ ಕೇಂದ್ರವಾಗಿ ಉಪಯೋಗಿಸಬಾರದೇಕೆ ಎಂಬ ಆಸೆ ನನ್ನಲ್ಲಿ ಮೊಳಕೆಯೊಡೆದಿದ್ದೇ ಸರಿ. ಹೊಸ ಪಠ್ಯ ಸಿದ್ಧವಾಯ್ತು. ಅಡುಗೆ ಮನೆಯಲ್ಲಿ ಸಿಗುವ ಅವನಿಗೆ ಇಷ್ಟವಾದ ಪದಾರ್ಥದಿಂದಲೇ ವಿದ್ಯೆಯ ಓಂಕಾರ ಶುರು ಆಯಿತು. ಪುಟ್ಟ ಪುಟ್ಟದಾಗಿ ಬೆಲ್ಲ ತುಂಡು ಮಾಡಿ ಅವನೆದುರಿಗಿಟ್ಟು ಬೆಲ್ಲ ಎಂದು ಹೇಳಿಕೊಟ್ಟೆ. ಒಂದೆರಡು ದಿನ ತಿನ್ನುವುದು ಮಾತ್ರ ಮಾಡಿದ ಅವನು ಹೆಸರು ಹೇಳುವುದರ ಕಡೆಗೆ ಗಮನವೇ ಕೊಡಲಿಲ್ಲ. ಈಗ ನಾನು ಅದನ್ನು ದೂರದಲ್ಲಿಟ್ಟು ಇದೇನು ಹೇಳು, ಹೇಳಿದರೆ ಕೊಡುತ್ತೇನೆ ಎಂದು ಆಸೆ ತೋರಿಸಿದೆ. ಅವನೋ ನನ್ನಿಂದ ಬುದ್ಧಿವಂತ. ಬೆಲ್ಲ ಕೈಗೆ ಬರುವಲ್ಲಿಯವರೆಗೆ ಆ.. ಆ.. ಅಂತ ಅಳಲು ಶುರು ಮಾಡಿದವನು ನಿಲ್ಲಿಸಲೇ ಇಲ್ಲ.
ಮರುದಿನ ಬೆಲ್ಲದ ಪಾಠ ನಿಲ್ಲಿಸುವ ಅಂದಾಜಿನಲ್ಲಿದ್ದೆ. ಆದರೆ ವಿದೇಯ ವಿದ್ಯಾರ್ಥಿಯಂತೆ ಆ ಹೊತ್ತಿಗೆ ಅಡುಗೆ ಮನೆಗೆ ಬಂದ ಅವನು ಬೆಲ್ಲದ ಡಬ್ಬ ತೋರಿಸಿ ' ಮಿಂಗ' ಕೊ.. ಎಂದು ಕೈ ಚಾಚಿದ. ಅಲ್ಲಿಂದ ನಂತರ ನಾವು ಪಾಯಸಕ್ಕೆ ಬೆಲ್ಲದ ಬದಲು ಮಿಂಗ ಹಾಕಲು ಪ್ರಾರಂಭಿಸಿದೆವು. 
ಕಡ್ಲೆ ಎಂಬುದು 'ಹಂಡ'ವಾಯಿತು.  ಪ್ಯಾಂಟು 'ಹ್ಯಾಮು' ಆಗಿ ಬದಲಾಗಿ, ಪೆನ್ನು 'ಹಮ್ಮು' ಆತು. ಕುಳಿತುಕೋ ಎಂಬುದು 'ತೀಕ' ಎಂದಾತು. ಈಗ ಅವನು ಶಿಕ್ಷಕನಾದ. ನಾನು ಕಲಿಯುತ್ತಲೇ ಹೋದೆ. 

ಪ್ರಪಂಚದ ಅತಿ ಸೌಂದರ್ಯಯುತ ಭಾಷೆಯ ಬಗೆಗೆ ಆಗಿನ  ಅವನ ಜ್ಞಾನದ ಕಡಿಮೆ ಪಾಲು ಅನುಭವ ನನ್ನದಾದರೂ ಆ ಅನುಭವ ಕೊಟ್ಟ ಆನಂದದ ಬುತ್ತಿ ಜೀವನ ಪೂರ್ತಿ ನನ್ನೊಡನೆಯೇ ಇರುತ್ತದೆ. ಈಗ ಅವನು ದೊಡ್ಡವನಾಗಿ ಹಲವಾರು ಭಾಷೆಗಳನ್ನು ಒಂದಿಷ್ಟೂ ವ್ಯಾಕರಣ ತಪ್ಪಿಲ್ಲದೇ ಮಾತನಾಡಬಹುದು. ಆದರೆ ಆಗಿನ ಆ ಬಾಲಭಾಷೆ ನೀಡಿದ  ಸಂತಸದ  ಅನುಭೂತಿ ನನ್ನೊಳಗೆ ಈಗಲೂ ಜೀವಂತವಾಗಿ ಉಳಿದಿರುವುದು, ಆಗಾಗ ಮೆಲುಕು ಹಾಕುವಂತಾಗಿ ನಗೆ ತರಿಸುವುದು ಅದರ ಹೆಚ್ಚುಗಾರಿಕೆಯಲ್ಲದೆ ಇನ್ನೇನು..!!




Sunday, September 14, 2014

ನವ್ವಾಲೆ ಬಂತಪ್ಪ ನವ್ವಾಲೆ..




ತೋಟದ ಕೆಲಸಕ್ಕೆಂದು ಗದಗದ ಕಡೆಯಿಂದ ನಾಲ್ಕು ಜನ ಗಟ್ಟಿಮುಟ್ಟಾದ ಯುವಕರು  ಬಂದಿದ್ದರು. ಎಲ್ಲಾ ಸಾಧಾರಣ ಇಪ್ಪತ್ತರ ಹರೆಯದವರು. ಮುನ್ನಾದಿನ ಸಂಜೆ ಬಂದು ತೋಟದ ಮನೆಯಲ್ಲಿ ಉಳಿದುಕೊಂಡಿದ್ದರು. ದ ಕ ಜಿಲ್ಲೆಗೆ ಹೀಗೆ ಹೊರಗಿನಿಂದ ಕೆಲಸದವರು ಬರುವುದು ಮಾಮೂಲಿಯಾದರೂ  ಅವರ ಕೆಲಸ ಹೇಗಿರಬಹುದೋ, ಸರಿಯಾಗಿ ಕತ್ತಿ ಗುದ್ದಲಿಯಾದ್ರೂ ಹಿಡಿಯಲಿಕ್ಕೆ ಬರುತ್ತದೋ, ಅಡಿಕೆ ತೋಟದ ಕೆಲಸಗಳಿಗೆ ಒಗ್ಗುತ್ತಾರೋ  ಇಲ್ಲವೋ ಅಂತನ್ನುವ ಚಿಂತೆ ನಮ್ಮನ್ನು ಕಾಡುತ್ತಿತ್ತು. ಬೆಳಗ್ಗೆ ಎಂಟು ಗಂಟೆಗೆಲ್ಲಾ ಮನೆಯಂಗಳದಲ್ಲಿ ಇರಲೇಬೇಕು ಎನ್ನುವ ಟೈಮ್ ಟೇಬಲ್ ಕೊಟ್ಟಾಗಿತ್ತು. 
 ಇನ್ನೂ ಬೆಳಕು ಮೂಡಿತ್ತಷ್ಟೇ.. ಬೆಳಗ್ಗಿನ ತಿಂಡಿಯ ಸಿದ್ಧತೆಗೆ ಅಡುಗೆ ಮನೆಯಲ್ಲಿದ್ದೆ. ಅಷ್ಟರಲ್ಲಿ ಹೊರಗಿನ ಅಂಗಳದಲ್ಲಿ ಬಡ ಬಡನೆ ಯಾರೋ ಓಡಿ ಬಂದು  ನಿಂತ ಸದ್ದಾಯಿತು. ಹೋಗಿ ನೋಡಿದರೆ ನಾಲ್ಕೂ ಯುವಕರು ಮುಖದಲ್ಲಿ ಆತಂಕ ಹೊತ್ತು ಬಂದು ನಿಂತಿದ್ದಾರೆ. ರಾತ್ರಿ ಉಳಿದುಕೊಂಡಿದ್ದ ಕೋಣೆಯಲ್ಲಿ ಹಾವೇನಾದರೂ ಕಂಡು ಹೆದರಿದರೇನೋ ಎಂದುಕೊಂಡು ಇವರನ್ನು ಹೊರಗೆ ಕರೆದೆ ಹುಡುಗರ ವಿಚಾರಣೆಗಾಗಿ.
ಏನಾಯ್ತು ಅನ್ನುವ ಇವರ ಪ್ರಶ್ನೆಗೆ ಅವರೊಳಗೆ ಮುಖ ಮುಖ ನೋಡಿಕೊಂಡು ನೀನು ಹೇಳು ನೀನು ಹೇಳು ಅಂತ ಕಿತ್ತಾಡಲು ತೊಡಗಿದರು.
ಮತ್ತೊಮ್ಮೆ ಕೇಳಿದಾಗ "ಅಲ್ಲಿ ತೋಟ್ದಾಗೆ ದೆವ್ವ ಇದೆ ಧನಿ.. ನಾವು ಇರಾಂಗಿಲ್ಲ ಅಲ್ಲಿ" ಅಂದರು. 
ನಮ್ಮಿಬ್ಬರಿಗೂ ಇದು ಹೊಸ ವಿಷಯ. ಇಷ್ಟು ದಿನ ನಮ್ಮ ಕಣ್ಣಿಗೆ ಬೀಳದೆ ಕದ್ದು ಕುಳಿತಿದ್ದ ದೆವ್ವ ಇವರ ಕಣ್ಣಿಗೆ ಬಿದ್ದದ್ದಾದರೂ ಹೇಗಪ್ಪ ಎಂದು ಕುತೂಹಲಕ್ಕೊಳಗಾಗಿ "ಹೇಗಿತ್ತು ದೆವ್ವ" ಎಂದು ಎಂದು ಕೇಳಿದೆವು.
"ನೋಡ್ಲಿಲ್ಲಾರಿ" ಎಂದ ಬಸವ.
"ಅಯ್ಯೋ ನೋಡದೆ ದೆವ್ವ ಇದೆ ಅನ್ನೋದು ಗೊತ್ತಾಗಿದ್ದು ಹೇಗೆ" ಅಂದೆ.
"ಕಿರ್ಚೋದು ಕೇಳಿಸ್ತೂರೀ ಅವ್ವಾರೇ" ಅಂದ. 
ತಕ್ಷಣ ಮತ್ತೊಮ್ಮೆ ಎಲ್ಲರೂ ಸ್ತಬ್ದರಾಗಿ ನಿಂತು "ಕೇಳ್ರೀ.. ಕೇಳ್ರೀ.. ಈವಾಗ್ಲೂ ಕೇಳಿಸ್ತದೆ" ಅಂದ ಒಬ್ಬ. 
ಹೌದು ಆಗ ನಮಗೂ ಕೇಳಿಸಿತ್ತು.. ದೆವ್ವದ ಸದ್ದಲ್ಲ ..
 ನವಿಲು ಕೂಗುವ ಶಬ್ಧ. 
ನವಿಲಿನ ಬಗ್ಗೆ ಏನೂ ಗೊತ್ತಿಲ್ಲದಿರುವವರಿಗೆ ಆ  ಕರ್ಕಶ ಸದ್ದು ಅವರೊಳಗಿನ ಹೆದರಿಕೆ ಎಂಬ ದೆವ್ವದ ಕಾಟವನ್ನು ಹೊರಗೆಳೆದಿತ್ತಷ್ಟೇ..
'ಅದು  ನವಿಲು .. ದೊಡ್ಡ ಹಕ್ಕಿ  ಗೊತ್ತಲ್ಲಾ.. ನಮ್ಮ ರಾಷ್ಟ್ರ ಪಕ್ಷಿ' ಎಂದೆಲ್ಲಾ ವಿವರಣೆ ನೀಡಿದರೂ ಪೂರ್ತಿಯಾಗಿ ನಂಬದೆ ಅರೆ ಬರೆ ಹೆದರಿಕೆಯಲ್ಲೇ ತಮ್ಮ ಕೋಣೆಗೆ ತೆರಳಿದ್ದರಾಗ ಅವರು.
ಸುತ್ತು ಮುತ್ತೆಲ್ಲಾ ಕಾಡನ್ನು ಹೊಂದಿದ್ದ ನಮ್ಮ ಮನೆ ಇರುವ ಪರಿಸರದಲ್ಲಿ ಬೇರೆ ಬೇರೆ ತರದ ಹಕ್ಕಿಗಳು ಇದ್ದವು. ಕೇಳುವ ಮನಸ್ಸಿದ್ದರೆ ಇಡೀ ದಿನ ಅವುಗಳ ಸಂಗೀತ ಕಚೇರಿಯನ್ನು ಆಲಿಸಬಹುದಿತ್ತು. ಇಂಪಾಗಿ ಹಾಡುವ ಕೋಗಿಲೆಂದ ಹಿಡಿದು ಹೀಗೆ ಕರ್ಕಶ ಸ್ವರ ಹೊರಡಿಸಿ ಬೆಚ್ಚಿ ಬೀಳಿಸುವ ನವಿಲಿನವರೆಗೆ ..
ನಿಜ ಹೇಳಬೇಕೆಂದರೆ ಹಕ್ಕಿ ಸಾಮ್ರಾಜ್ಯವೇ ಒಂದು ಬೆಡಗು. ಅವುಗಳ ಬಿಂಕ ಬಿಗುಮಾನ, ಒನಪು ವಯ್ಯಾರ, ಬಣ್ಣಗಳ ಮೇಳ  ಬೇರೆ ಯಾವ ವರ್ಗದಲ್ಲೂ ಕಾಣ ಸಿಗದು. ಅವುಗಳಿಗೆಲ್ಲಾ ಮುಕುಟ ಇಟ್ಟಂತೆ ತಲೆಯ ಮೇಲೆ ಸುಂದರ ಕಿರೀಟ ಹೊತ್ತ ಹಕ್ಕಿ ನವಿಲು. ಪಾಸಿನಿಡೆ ಕುಟುಂಬಕ್ಕೆ ಸೇರಿದ್ದಿದು. 
ಜಗತ್ತಿನ ಸೌಂದರ್ಯವನ್ನೆಲ್ಲ ಎರಕ ಹೊಯ್ದು ತಿದ್ದಿ ತೀಡಿ, ರಂಗು ಕೊಟ್ಟು, ಒಂದೆಡೆ ನಿಲ್ಲಿಸಿದರೆ ಅದು ನವಿಲಲ್ಲದೆ ಬೇರೇನೂ ಆಗಿರಲು ಸಾಧ್ಯವಿಲ್ಲ. ಅಂತಹ  ಅದ್ಭುತ ಸೊಬಗು ಅದರದ್ದು. 
ಗಂಡು ನವಿಲುಗಳು ತಮ್ಮ ಸೌಂದರ್ಯಕ್ಕೆ ಹೆಸರಾದರೆ ಇದರ ಮುಂದೆ  ಹೆಣ್ಣು ನವಿಲು ಅಷ್ಟೇನೂ ಆಕರ್ಷಣೀಯ ಎನಿಸುವುದಿಲ್ಲ. ಆದರೂ ತಲೆಯ ಮೇಲೆ ಹೊತ್ತ ಜುಟ್ಟನ್ನು ಕುಲುಕಿಸುತ್ತಾ ಗಂಭೀರ ನಡಿಗೆಯಲ್ಲಿ ಅವುಗಳೆಲ್ಲಾ ಅಂಗಳಕ್ಕೆ ಇಳಿದಾಗ ನಮ್ಮ ನಾ ಬೊಗಳುವುದನ್ನು ಕೂಡಾ ಮರೆತು ಅವುಗಳ ಕಡೆಗೆ ಅಚ್ಚರಿಯ ನೋಟ ಬೀರುತ್ತಾ ಕುಳಿತುಕೊಳ್ಳುವುದು  ನಮ್ಮಲ್ಲಿನ ಸಾಮಾನ್ಯ ನೋಟ.
ತನ್ನ  ಜೊತೆಗಾತಿಯನ್ನು ಆಕರ್ಷಿಸಲು  ಕುಣಿಯುವ ಗಂಡು ನವಿಲನ್ನೊಮ್ಮೆ ನೋಡಬೇಕು. ಕಣ್ಣುಗಳು ಪಾವನಗೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಅದೊಂದು ಅದ್ಭುತವಾದ ನೃತ್ಯ ವೈಭವ. ಹೊತ್ತು ನಡೆಯಲೇ ಭಾರವೆನಿಸುವ ತನ್ನ ಗರಿಗಳನ್ನು ನಿಧಾನಕ್ಕೆ ಅರಳಿಸುತ್ತದೆ.  ಕಾಲುಗಳನ್ನು ಎತ್ತಿ ಎತ್ತಿ ಇಡುತ್ತಾ ಪೂರ್ಣ ಪ್ರಮಾಣದಲ್ಲಿ ಗರಿಗಳನ್ನು ಬಿಡಿಸಿ ಸುತ್ತುತ್ತದೆ.  ಉರುಟುರುಟಾಗಿ ಸುಳಿದು ಕುಣಿಯುತ್ತದೆ.  ಈ ಮೋಹಕ ದೃಶ್ಯದ ವರ್ಣನೆಯನ್ನು ಪದಗಳಲ್ಲಿ ಬಂಧಿಸಿಡಲು ಸಾಧ್ಯವೇ ಇಲ್ಲ. ಅಪುರೂಪವಾದ ಈ ಸೊಬಗನ್ನು  ಅದೃಷ್ಟ ಇದ್ದವರು ನೋಡಿಯೇ  ಸವಿಯಬೇಕಷ್ಟೇ..
ಹಾಗೆಂದು ಇವುಗಳು ಗದ್ದೆಗಿಳಿದರೆ ಮುದ್ದು ಮಾಡುತ್ತಾ ಯಾರೂ ಇವುಗಳನ್ನು ನೋಡಿಕೊಂಡು ಕೂರುವುದಿಲ್ಲ. ದೊಣ್ಣೆ ಕೈಯಲ್ಲಿ ಹಿಡಿದು ಹ್ಹಾ ಹ್ಹೋ.. ಹೋಗು.. ಅಂತ ಬೊಬ್ಬೆ ಹಾಕಿ ಓಡಿಸುತ್ತಾರೆ. ಯಾಕೆಂದರೆ ಇವುಗಳ ಉಪಟಳ ಇವುಗಳಿಂದಾಗುವ ಬೆಳೆ ಹಾನಿ ಸಾಮಾನ್ಯದ್ದಲ್ಲ. 
 ನಮ್ಮ ಹಳೇ ತಲೆಯ ಕೆಲಸದವನ ಪ್ರಕಾರ ಇವುಗಳನ್ನು ಕೊಂದರೆ ಕೇಸ್ ಆಗುತ್ತದೆ ಎಂಬ ಭಯದ ಜೊತೆಗೆ ಇವುಗಳ ಮಾಂಸ ಭಕ್ಷಣೆಗೆ ಅಡ್ಡಿ ಮಾಡುವ  ಇನ್ನೊಂದು ವಿಚಾರವೂ ಜೊತೆಗಿದೆ. ನವಿಲುಗಳ  ಅತ್ಯಂತ ಪ್ರೀತಿಯ ಆಹಾರ ಹಾವು. ಇಡೀ ಇಡೀ ಹಾವುಗಳನ್ನು ಗುಳುಂ ಮಾಡುವ ಇವುಗಳ ಹೊಟ್ಟೆಯಲ್ಲಿ ಕೆಲವೊಮ್ಮೆ ಇಡಿಯಾದ ಹಾವುಗಳು ಹಾಗೆ ಹಾಗೆಯೇ ಸಿಗುತ್ತವಂತೆ. ಹಾಗಾಗಿ ಇವುಗಳನ್ನು ತಿನ್ನುವುದಕ್ಕೆ ಹಿಂದೇಟು ಹಾಕುತ್ತಾರೆ. ಹಾಗಾದ ಕಾರಣ ನವಿಲಿನ ಸಂತತಿ ಉಳಿದುಕೊಂಡಿದೆ. 
ಆದರೂ ನವಿಲಿನ  ಗರಿಗಳ ಹಲವು ಕರ ಕುಶಲ ವಸ್ತುಗಳು ಮಾರುಕಟ್ಟೆಯಲ್ಲಿ ದೊರಕುತ್ತದೆ. ಇವುಗಳ ಹಿಂದೆ ನವಿಲುಗಳ ಮಾರಣ ಹೋಮದ ಕರಾಳ ಛಾಯೆದೆ. ದಯವಿಟ್ಟು ಪ್ರಾಣಿ ಪಕ್ಷಿಗಳ ಗರಿ ತುಪ್ಪಳ ಚರ್ಮ ಬಳಸಿ ತಯಾರಿಸುವ ವಸ್ತುಗಳನ್ನು ಜನ ಕೊಂಡುಕೊಳ್ಳುವುದನ್ನು ಬಿಟ್ಟರೆ ಮಾತ್ರ ಅವುಗಳು ಬದುಕಿಕೊಂಡಾವು. ಈ ದಿಕ್ಕಿನತ್ತ ಜನರೇ ಮನಸ್ಸು ಮಾಡಿ ಅಂತಹ ವಸ್ತುಗಳನ್ನು ಬಹಿಷ್ಕರಿಸಬೇಕಿದೆ. 
ಇಷ್ಟೆಲ್ಲಾ ಓದಿದ ಮೇಲೆ ನಿಮಗೆ  ಇಷ್ಟು ಚೆಂದದ ನವಿಲು ಸಾಕಿದರೇನು ಎಂಬ ಆಸೆ ಹುಟ್ಟಿದೆಯೇ.. ಆದರೆ ಇದಕ್ಕೆ ಮೊದಲು ಆಗಬೇಕಾದ ಕಾರ್ಯ ನವಿಲು ಹಿಡಿಯುವುದಲ್ಲವೇ.. ಅದಕ್ಕೊಂದು ಸುಲಭ ಉಪಾಯ ನಾನು ಹೇಳಿಕೊಡುತ್ತೇನೆ. ಇದು ನನ್ನ ಪತಿರಾಯರು ನನಗೆ ಹೇಳಿದ ಗುಟ್ಟು. ಆದರೂ ಆತ್ಮೀಯರಲ್ಲಿ ಹಂಚಿಕೊಳ್ಳಲೇ ತಾನೇ ಗುಟ್ಟುಗಳು ಇರುವುದು. 
ಮೊದಲಿಗೆ ಬಿಸಿಲು ಏರುವ ಮುನ್ನ ನವಿಲು ಇರುವ ಜಾಗಕ್ಕೆ ಹೋಗಿ ನಿಮಗ್ಯಾವ ನವಿಲನ್ನು ಹಿಡಿಯಬೇಕೆಂದಿದೆಯೋ ನೋಡಿ. ಈಗ ಅದರ ತಲೆಗೆ ಒಂದು ದಪ್ಪದ ಬೆಣ್ಣೆ ಮುದ್ದೆಯನ್ನಿಡಿ. ಬಿಸಿಲು ಏರಿದಂತೆಲ್ಲಾ ಬೆಣ್ಣೆ ಕರಗಿ ನವಿಲಿನ ಕಣ್ಣಿಗೆ ಇಳಿದು ಮಯ ಮಯವಾಗಿ ಅದಕ್ಕೆ ಏನೂ ಕಾಣದಂತಾಗುತ್ತದೆ. ಆಗ ಅದನ್ನು ಪಕ್ಕನೆ ಹಿಡಿದು ನಿಮ್ಮ ಮನೆಗೆ ತಂದು ಸಾಕಿಕೊಳ್ಳಿ. ಹೇಗಿತ್ತು ಈ ಉಪಾಯ.. 
ಕೊನೆಯ ಕಿಡಿ..
ಕಾಡಿನ ಪ್ರಾಣಿ ಪಕ್ಷಿಗಳು ಊರೊಳಗೆ ಬರಲು ಕಾರಣ ಕಾಡಿನ ನಾಶ. ಅದು ನಮ್ಮ ಗಮನದಲ್ಲಿದ್ದರೆ  ಅವೂ ಉಳಿದಾವು, ನಾವೂ ಉಳಿದೇವು.. ನೀವೇನಂತೀರಾ.. 

Friday, August 22, 2014

ಕಥೆಯಾದ ಹೊತ್ತು ..











ಅಜ್ಜ, 
ಹೊಸದಾಗಿ ಕಟ್ಟಿದ ಮನೆಯ ಜಗಲಿಯಲ್ಲಿ ಕುಳಿತು ಅಲ್ಲೇ ಪಕ್ಕದಲ್ಲಿ ಉಳಿದಿದ್ದ ಹಳೆಯ ಮನೆಯ ಪಳೆಯುಳಿಕೆಗಳನ್ನು ನೋಡುತ್ತಾ ನೆನಪುಗಳನ್ನು ಹೆಕ್ಕಿ ಹೆಕ್ಕಿ ಇಡುತ್ತಿದ್ದ. 

ಮಗ, 
ಹೊಸದಾಗಿ ಕಟ್ಟಿದ ಮನೆಯ ಜಗಲಿಯಲ್ಲಿ ಕುಳಿತು ಇದನ್ನು ಕಟ್ಟಬೇಕಾದರೆ ತಾನು ಅನುಭವಿಸಿದ ಕಷ್ಟ ನಷ್ಟಗಳ ಲೆಕ್ಕಾಚಾರ ಮಾಡುತ್ತಾ ತನ್ನ ಸಾಧನೆಯ ಬಗ್ಗೆ ಹೆಮ್ಮೆ ಪಡುತ್ತಿದ್ದ. 

ಮೊಮ್ಮಗ, 
ಹೊಸದಾಗಿ ಕಟ್ಟಿದ ಮನೆಯ ಜಗಲಿಯಲ್ಲಿ ಕುಳಿತು ತಾನು ಬಿಡಿಸಿದ ಮನೆಯ ಚಿತ್ರ ಸರಿಯಾಗಲಿಲ್ಲವೆಂದು ಹಾಳೆಗಳನ್ನು ಹರಿದು ಹರಿದು ಬಿಸುಡುತ್ತಿದ್ದ. 

ಪಾರಿವಾಳಗಳು, 
ಹೊಸದಾಗಿ ಕಟ್ಟಿದ ಮನೆಯ ಜಗಲಿಯಲ್ಲಿ ಕುಳಿತು ತಮ್ಮ ಗೂಡಿಗೆ ಜಾಗವೆಲ್ಲಿದೆ ಎಂದು ಹುಡುಕುತ್ತಿದ್ದವು. 

Thursday, July 10, 2014

ಕರ್ಣನ ಗೆಲುವು



ಕರ್ಣನ ರಥ ಯುದ್ಧಭೂಮಿಯ ನೆಲದಲ್ಲಿ ಹೂತು ಹೋಗಿದೆ. ಅರ್ಜುನನ ಕಡೆಗೆ ತಿರುಗಿ ಹೇಳುತ್ತಾನೆ. ಅರ್ಜುನಾ 'ಕಲಹಕಾನುವರೀಗಲಲಸದು ಮತವು ಬಿಲುಹೀನ ಶರಹೀನ ಸಲೆ ವಾಹನಗಳ ಬಲಹೀನರಲ್ಲಿ ಸಲೆ ಬಲ್ಲಿದವ ನೀನು ನಿಲುವೊಂದು ಕ್ಷಣಕೆ ಸಿಲುಕಿರ್ದ ರಥವೆತ್ತುತಲೆ ಬರ್ಪೆ ರಣಕೆ' 

ಯುದ್ದದಲ್ಲೂ ನೀತಿಗಳಿರುತ್ತವೆ. ಬೆನ್ನು ತೋರಿಸಿ ಓಡುವವನ ಮೇಲೆ ಯಾರೂ ಯುದ್ದ ಮಾಡುವುದಿಲ್ಲ. ಹಾಗೇ ಆಯುಧವಿಲ್ಲದ ಬಲಹೀನನಾದವನ  ಜೊತೆ ಕಲಹ ಸಲ್ಲದು. ನಿನಗೆ ತಿಳಿಯದಿರುವುದು ಏನಿದೆ ಒಂದು ಕ್ಷಣ ನಿಲ್ಲು ರಥವನ್ನು ಎತ್ತಿ ಮತ್ತೆ ನಿನ್ನೊಡನೆ ಹೋರಾಟಕ್ಕೆ ಬರುತ್ತೇನೆ'. 

ಅರ್ಜುನನಿಗೂ ಕರ್ಣನ ಮಾತುಗಳು ತಪ್ಪೆನಿಸುವುದಿಲ್ಲ. ನಿಯಮಗಳು ಇರುವುದೇ ಹಾಗೇ ತಾನೇ.

ಒಪ್ಪಿದ.
ರಥವನ್ನೆತ್ತುವ ಪ್ರಯತ್ನದಲ್ಲಿರುತ್ತಾನೆ ಕರ್ಣ.
ಆಗಲೇ ಕೃಷ್ಣ ಅರ್ಜುನನಿಗೆ ಕರ್ಣನನ್ನು ಕೊಲ್ಲಲು ಆದೇಶಿಸುತ್ತಾನೆ. ವೈರಿಗಳಿಗೆ ಆಪತ್ತು ಬಂದಾಗಲೇ ಕೊಲ್ಲುವುದು ರಾಜಧರ್ಮ.ಕಾಯುವುದೇನನ್ನು ..ಹಿಡಿ ಬಿಲ್ಲು ತೊಡು ಬಾಣ.. 

ಕರ್ಣನ ಬೆನ್ನು ಮಾತ್ರ ಕಾಣುತ್ತಿದೆ ಅರ್ಜುನನಿಗೆ.. ಇದ್ದಕ್ಕಿದ್ದಂತೆ ಬಿಲ್ಲು ಬಾಣಗಳನ್ನು ಕೆಳಗಿಟ್ಟು ಯಾವುದೋ ಭಾವನೆಗಳ ಆವೇಗಕ್ಕೆ ಸಿಲುಕಿದ್ದಾನೆ ಅರ್ಜುನ.ಅಲ್ಲಿಯವರೆಗೆ ವೈರಿಯಾಗಿದ್ದ ಕರ್ಣ ಆ ಕ್ಷಣಕ್ಕೆ ಆಪ್ತನಾಗುತ್ತಾನೆ. 
ಅಂಗಲಾಚುತ್ತಾನೆ ಕೃಷ್ಣನಲ್ಲಿ .. 

ಮನಸಿಜ ಪಿತ ನೀನು ಮಾತಿಲಿ ಬಿಟ್ಟಾಡು ಕರ್ಣನಾರೈ
ಎನ್ನ ಮನದಲಿ ಹಲವು ಹಂಬಲಿಸುತಲಿರ್ಪುದು ಕರ್ಣನಾರೈ
ಧನುವೆತ್ತಲಾರೆ ಕೂರ್ಗಣೆ ತೊಡಲಾರೆನು ಕರ್ಣನಾರೈ
ಮೇಣೆನಗೀಸು ಪಗೆಗಾಣದಾತನ ಮೇಲಿನ್ನು ಕರ್ಣನಾರೈ
ಪೊಡವಿ ಪಾಲಕನಿಂದ ಹೆಚ್ಚು ತೋರುತಲಿದೆ ಕರ್ಣನಾರೈ
ಎನ್ನ ಒಡಹುಟ್ಟಿದವನೋ ಸಂಬಂಧಿಯೋ ತಿಳಿಯದು ಕರ್ಣನಾರೈ
ನಡೆಯದೆನ್ನಯ ಮಾರ್ಗಣಂಗಳಾತನ ಮೇಲೆ ಕರ್ಣನಾರೈ
ದೇವ ನುಡಿ ನುಡಿ ಮರೆಮಾಜಬೇಡ ಯಥಾರ್ಥವ ಕರ್ಣನಾರೈ

ಇಲ್ಲಿ ಕವಿ ಅರ್ಜುನನ ವಿಲಾಪವನ್ನು, ಅವನ ಮನದಾಳದ ನೋವನ್ನು  ಸರಳ ಶಬ್ಧಗಳಲ್ಲಿ  ಹಿಡಿದಿಡುತ್ತಾನೆ. ಕಣ್ಣರಿಯದಿದ್ದರೂ ಕರುಳರಿಯದೇ ಎಂಬ ಮಾತು ನೆನಪಾಗುವುದು ಈಗಲೇ..

ಈ ಪರಿಸ್ಥಿತಿಯಲ್ಲಿ ಕೊಲ್ಲಬಹುದೇ ಕರ್ಣನನ್ನು ಎಂಬುದು ಅರ್ಜುನನ  ಪ್ರಶ್ನೆಯಲ್ಲ.ಕೊಲ್ಲಬಾರದವನನ್ನು ಎಂಬುದೇ ಅವನ ಇಚ್ಛೆ. ಕೊಲ್ಲದಿರಲು ಕಾರಣಗಳನ್ನು ಹುಡುಕುತ್ತಾನೆ..
'ಕೃಷ್ಣಾ ನಾನೀಗ  ಕೊಲ್ಲಲಾರೆ ಕರ್ಣನನ್ನು.. ಅವನ ಜೊತೆ ಇದ್ದಕ್ಕಿದ್ದಂತೆ ಬಂಧವೊಂದು ಬೆಸೆದಿದೆ. ಆ ನಂಟಿನ ಅಂಟು ಬಿಗಿಯಾಗಿದೆ. ಬಿಡಿಸಿಕೊಳ್ಳಲಾಗದಷ್ಟು..ನಿನಗೆ ತಿಳಿಯದಿದ್ದುದು ಯಾವುದಿದೆ ಜಗದಲ್ಲಿ ಹೇಳಿಬಿಡು ನನಗೆ ಯಾರಿವನು ಈ ಕರ್ಣ..
ಬಿಲ್ಲನ್ನೆತ್ತಲಾರೆನಯ್ಯಾ.. ಬಾಣವನ್ನು ಗುರಿಡಲಾರೆ ಅವನೆಡೆಗೆ.. ಸಮರವೆಸಗಬೇಕಾದರೆ ಹಗೆ ಬೇಕು.. ನನಗೆ ಅವನ ಮೇಲೆ ಕಿಂಚಿತ್ತೂ ಆ ಭಾವನೆಲ್ಲ. ಅಷ್ಟೇ ಏಕೆ ನನ್ನಣ್ಣ ಧರ್ಮರಾಯನಿಂದಲೂ ಈತನೇ ನನಗೆ ಹೆಚ್ಚು ಪ್ರಿಯವಾಗಿ ತೋರುತ್ತಿದ್ದಾನೆ ಹೇಳಬಾರದೇ ಯಾರವನು?'

ಹೇಳಬಹುದಿತ್ತಲ್ಲ ಕೃಷ್ಣನಿಗೆ.. ಇವನು ನಿನ್ನ ಅಣ್ಣ ಎಂದು..ಕೃಷ್ಣನಲ್ಲದೇ ಬೇರೆ ಯಾರೇ ಆಗಿದ್ದರೂ ಅರ್ಜುನನಿಗೆ ನಿಜ ನುಡಿಯುವ ಅಪಾಯವಿತ್ತು.  ಯುದ್ಧವಲ್ಲಿಗೆ ನಿಲ್ಲುತ್ತಿತ್ತೇನೋ? 

ಆದರೆ ಕೃಷ್ಣ ಹಾಗೆ ಹೇಳುವುದಿಲ್ಲ.. ಕರ್ಣನ ಪಾಪಗಳ ಲೆಕ್ಕ ಹಾಕುತ್ತಾನೆ.. ರೊಚ್ಚಿಗೆಬ್ಬಿಸುತ್ತಾನೆ ಅರ್ಜುನನನ್ನು.. 

'ಏನು ಹುಚ್ಚು ಹಿಡಿದಿದೆ ನಿನಗೆ ಅರ್ಜುನಾ.. ಎಷ್ಟೆಷ್ಟು ಮೋಸವೆಸಗಿದ್ದಾನೆ ಇವನು ಲೆಕ್ಕಹಾಕು.. ಆಗೆಂದಾದರು ಸಂಬಂಧಗಳ ಸುಳಿಯಲ್ಲಿ ಸಿಲುಕಿ ನಿಮ್ಮನ್ನು ಪಾರು ಮಾಡಿದ್ದಾನೆಯೇ?  ಇವನು ನಿನ್ನ ಬಂಧುವೆಂತಾದಾನು? ರಣರಂಗದಲ್ಲಿ ಮೋಸದಿಂದ ನಿನ್ನ ಕಂದನನ್ನು ಕೊಂದವನಲ್ಲವೇ ಇವನು.ಏನಾದರೂ ಸಂಬಂಧವೋ ಅನುಬಂಧವೋ ಇದ್ದೀತೆಂದು ಎತ್ತಿದ ಕತ್ತಿ ಕೆಳಗಿಳುಹಿದ್ದಾನೆಯೇ? ಯುದ್ಧಭೂಮಿಗೆ ಬಂದು ಬಂಧುತ್ವವನ್ನು ಹುಡುಕಬೇಡ.. ಕೊಂದು ಕಳೆ ..'  

ಮತ್ತರೆಕ್ಷಣದಲ್ಲಿ  ಅರ್ಜುನನ ಬಾಣ ಕರ್ಣನೆದೆಗೆ ತಾಕಿ ಕರ್ಣ ಕುಸಿಯುತ್ತಾನೆ.

ಪ್ರಶ್ನೆ ಮೂಡುವುದು ಈಗಲೇ.. 

ಕರ್ಣನಿಗೆ ಗೊತ್ತಿದೆ ಅರ್ಜುನ ಯಾರೆಂದು..
ತನಗೂ ಅವನಿಗೂ ಇರುವ ಬಂಧುತ್ವವೇನೆಂದು.. ಆದರೆ ಎಲ್ಲಿಯೂ ಆ ಬಂಧನದ ಪಾಶಕ್ಕೆ ಸಿಲುಕದೆ ಒಡೆಯನ ಉಪ್ಪಿನ ಋಣ ತೀರಿಸುವೆಂದು ಮಾಡಬಾರದ್ದನ್ನೆಲ್ಲಾ ಮಾಡುತ್ತಾನೆ.

ಕೃಷ್ಣನಿಗೂ ತಿಳಿದಿದೆ ಅವರಿಬ್ಬರ ನಡುವಿನ ಬಂಧವೇನೆಂದು.. 

ನ್ಯಾಯಾನ್ಯಾಯಗಳ ತಕ್ಕಡಿಯಲ್ಲಿ ತೂಗಿದಾಗ ಕರ್ಣನ ಪಾಪಗಳ ತೂಕ ಹೆಚ್ಚಾಗಿಯೇ  ಇತ್ತು.
ಹಾಗೊಂದು ವೇಳೆ ಸತ್ಯ ಹೇಳಿದ್ದರೆ.. ಕರ್ಣ ಬದುಕಬಹುದಿತ್ತು.. ಆದರೆ ಅದು ಅವನ ಸೋಲಾಗುತ್ತಿತ್ತು.
ದ್ರೌಪದಿಯ ಮುಖ ನೋಡುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದ ಕರ್ಣ, ಸುಭದ್ರೆಯ ಮಗನ ಹಂತಕ ಕರ್ಣ, ಪಾಂಡವರನ್ನು ಅವಮಾನಿಸುವ ಯಾವ ಕ್ಷಣವನ್ನೂ ಕಳೆದುಕೊಳ್ಳದೆ ಬಳಸಿದ್ದ ಕರ್ಣ.. ಸಾಯದೇ ಉಳಿದರೆ ಗೌರವವಿತ್ತೇ ಅವನಿಗೆ.. ಅನಿವಾರ್ಯವಾಗಿ ಪಾಪಪ್ರಜ್ಞೆಯಿಂದ  ಬದುಕಿನುದ್ದಕ್ಕೂ ನರಳಬೇಕಿತ್ತವನು..  ಅವನ ಗೆಲುವು ಇದ್ದುದ್ದು ಸಾವಿನಲ್ಲಿಯೇ.. 

 ಕೃಷ್ಣನ ಆಲೋಚನೆಯೂ ಅದೇ ಆಗಿತ್ತು. ಅವನಿಗೆ ಕರ್ಣನನ್ನು ಗೆಲ್ಲಿಸಬೇಕಿತ್ತು. ಜೊತೆಗೆ ಅರ್ಜುನನನ್ನೂ ..

ಒಂದು ಬಾಣ.. ಎರಡು ಗುರಿ.. 




Thursday, July 3, 2014

ಜ್ವರ ಬರುವ ಹಾಗಿದೇ..




ಘಟ್ಟ ಹತ್ತಿ ಇಳಿದಿದ್ದು ಬರೀ ನೆವ ಅಷ್ಟೇ.. ಅಲ್ಲಿ ಮಳೆಯೇ ಇಲ್ಲದೆ ಉರಿ ಬಿಸಿಲಿನಲ್ಲಿ ಅಡ್ಡಾಡಿ ಮನೆ ಸೇರಿದರೆ ಯಾಕೋ ಮೈಯೆಲ್ಲಾ ಬಿಸಿಯಾದಂತೇ, ಕಣ್ಣುಗಳು ಬೆಂಕಿಯುಗುಳುವಂತಾ ಅನುಭವ. 'ನಾಸಿಕವೂ ಸಂಪಿಗೆಯಂತೇ..' ಎಂದು ನನ್ನ ಮಾಮೂಲು ಕಿರುಚು ಕಂಠದಲ್ಲಿ ಹಾಡ ಹೊರಟರೆ ಅದು 'ದಾಸಿಕಬೂ ದಪ್ಪಿಗೆಯತ್ತೇ' ಎಂದು ಕೇಳಿಸಿತು. 

ಆಹಾ.. 'ಜ್ವರ ಬರುವ ಹಾಗಿದೆ.. ಹಾಸಿಗೆಯು ಹಾಕಿದೆ.. ಸುಮ್ಮನಲ್ಲಿ ಮಲಗು ಎಂದು ನನಗೆ ಹೇಳಬಾರದೇ' ರಾಗವಾಗಿ ಇವರಲ್ಲಿ ಕೇಳಿದೆ. ಹೀಗೆ ಕೇಳಿದರೆ ಸಂಗೀತ ಪ್ರಿಯರಾದ ಅವರ ತಲೆ ಅಲುಗೀತು ಎಂಬ ಆಸೆ ನನ್ನದು. "ನಂಗೆ ಒಂದ್ಲೋಟ ಬಿಸಿ ಚಹಾ ಮಾಡಿಕೊಟ್ಟು ಮತ್ತೆಷ್ಟು ಹೊತ್ತು ಬೇಕಾದ್ರು ನಿದ್ದೆ ಮಾಡು" ಎಂದು ಅಭಯ ಪ್ರದಾನ ಮಾಡಿದರು.

ಅಷ್ಟೇ ತಾನೇ.. 'ಬಸ್ ದೋ ಮಿನಿಟ್..  ಆದ್ರೆ ಆಮೇಲೆ ನಾನಾಗಿ ಏಳುವವರೆಗೆ ಏಳಿಸಬಾರದು..' ಅಂತ ಮೊದಲೇ ಆರ್ಡರ್ ಪಾಸ್ ಮಾಡಿ ನವಿಲಿನ ನಡಿಗೆಯಲ್ಲಿ ಅಡುಗೆ ಮನೆಗೆ ನಡೆದೆ.

ಆದರೆ ಅಷ್ಟೆಲ್ಲ ಸುಲಭದಲ್ಲಿ ಹಾಡು ಹಗಲೇ ನನಗೆ ನಿದ್ರಾ ಭಾಗ್ಯ ಒಲಿಯುವುದು ಯಾರಿಗಾದರೂ ಪಥ್ಯವಾದೀತೇ..?? ಮೊಬೈಲ್ ನಾನಿಲ್ಲಿದ್ದೇನೆ ಎಂದು ಬಡಿದುಕೊಳ್ಳತೊಡಗಿತು. 

ಎತ್ತಿ 'ಹಲೋ' ಎಂದರೆ ನನ್ನ ಬದಲಾದ ಸ್ವರದಿಂದ ವಿಚಲಿತಳಾದ ನನ್ನ ಗೆಳತಿ 'ನೀನು ನೀನೆಯೋ' ಎಂದು ಪರಮ ತತ್ವಜ್ಞಾನಿಗೂ ಅರ್ಥವಾಗದಂತಹ ಪ್ರಶ್ನೆಯೊಂದನ್ನು ನನ್ನ ಕಡೆಗೆ ಎಸೆದಳು. 

ನಾನೇಕೆ ಸುಮ್ಮನುಳಿಯಲಿ ಹೇಳಿ.. 'ನಾನು ನಾನೇ' ಎಂದೆ ಆಗಷ್ಟೇ ಮೋಕ್ಷ ಸಾಕ್ಷಾತ್ಕಾರವಾದ ಸ್ಟೈಲಿನಲ್ಲಿ. 

'ಏನಾಗಿದೆಯೇ ನಿನ್ನ ಸ್ವರಕ್ಕೆ.. ನನ್ನನ್ನು ಬಿಟ್ಟು ಆಗುಂಬೆ ಘಾಟಿ ಏರಿದೆಯಲ್ಲ..ಮೊದಲೇ ಗಿಣಿಗೆ ಹೇಳುವಂತೆ ಹೇಳಿದೆ. ನಂಗೀಗ ಆಫೀಸಿಗೆ ರಜೆ ಹಾಕುವಂತೆ ಇಲ್ಲ. ಸ್ವಲ್ಪ ದಿನ ಬಿಟ್ಟು ಒಟ್ಟಿಗೆ  ಹೋಗೋಣ. ನಾನೂ ಬರ್ತೀನಿ ಅಂತ .. ಕೇಳಿದೆಯಾ ನನ್ನ ಮಾತನ್ನು..  ನನ್ನ ಬೇಸರದ ನಿಟ್ಟುಸಿರಿನ ತಾಪ, ಶಾಪ ನಿನಗೆ ತಟ್ಟದೇ ಇದ್ದೀತೇ.. ಅನುಭವಿಸು ಈಗ' ಎಂದು ತನ್ನ ಹೊಟ್ಟೆ ಉರಿ ಕಾರಿದಳು. 

'ಇದೇನು ಮಹಾ ಬಿಡೇ..ಎಂತೆಂತಾ ಕಾಯಿಲೆಗಳಿಗೆ ಹೆದರಿದವಳಲ್ಲ ನಾನು .. ಈ ಪುಟುಗೋಸಿ ಜ್ವರಕ್ಕೆ ಹೆದರುವುದುಂಟೇ.. ಒಂಚೂರು ರೆಸ್ಟ್ ತೆಗೊಂಡ್ರೆ ಕಡಿಮೆಯಾಗುತ್ತೆ' ಎಂದು ಅವಳ ಹೊಟ್ಟೆ ಕಿಚ್ಚಿಗೆ ತಣ್ಣೀರೆರೆದೆ.

ಆದರೂ ಅವಳೆಲ್ಲಿ ಬಿಡುತ್ತಾಳೆ ..'ಮೈ ಕೈಯೆಲ್ಲಾ ನೋಯ್ತಾ ಇದೆಯೇನೇ..? ಕೈಕಾಲಿನ ಕೀಲುಗಳೆಲ್ಲ ಸರಾಗವಾಗಿ ಮಡಿಚಿ ಬಿಡಿಸಿ ಮಾಡಲಿಕ್ಕಾಗುತ್ತಾ..? ಉಸಿರಾಟ ಸರಿ ಇದೆ ಅಲ್ವಾ.. ?' ಕಣ್ಣಲ್ಲೇನು ನೀರು ಬರ್ತಿಲ್ಲಾ ತಾನೇ..? ಬಾಯಿ  ರುಚಿ ಸರಿ ಇದೆಯಾ, ಹೊಟ್ಟೆಗೆ ಆಹಾರ ಎಲ್ಲಾ ಸೇರುತ್ತೆ ತಾನೇ? ಎಂದೆಲ್ಲಾ ಡಾಕ್ಟರ್ ಮಾದರಿಯ ಎರಡನೇ ಸುತ್ತಿನ ಪ್ರಶ್ನಾವಳಿಗಳನ್ನು ನನ್ನ ಕಡೆಗೆ ಎಸೆದಳು. 
ಈಗ್ಯಾಕೋ ಕೊಂಚ ಗಾಭರಿಯಾದರೂ ತೋರಗೊಡದೆ, ನಿಧಾನಕ್ಕೆ ಎದ್ದು  ಕೈ ಕಾಲು ಮೇಲೆ ಕೆಳಗೆ ಮಾಡಿ , ಬಗ್ಗಿ ಎದ್ದು ಪರೀಕ್ಷಿಸಿಕೊಂಡು ಗಂಟು,  ಕೀಲುಗಳೆಲ್ಲಾ ಮೊದಲಿನಂತೆ ವರ್ಕ್ ಆಗ್ತಾ ಇದೆ ಎಂದು ದೃಢಪಡಿಸಿಕೊಂಡೆ. ಉಸಿರಾಟ ಸರಿಯಾಗಿ ನಡೆಯುತ್ತಾ ಇರುವುದರಿಂದ ತಾನೇ ನಾನು ಜೀವಂತವಾಗಿರೋದು..ಹಾಗಾಗಿ ಅದರ ಸಮಸ್ಯೆಯೇನೂ ಇಲ್ಲ. ಇನ್ನು ಈರುಳ್ಳಿ ಹೆಚ್ಚುವಾಗಲೂ ಕಣ್ಣಲ್ಲಿ ಹನಿ  ನೀರು ಬಾರದ ಗೂಬೆ ಕಣ್ಣಿನೋಳೆಂಬ ಖ್ಯಾತಿವೆತ್ತ ನನ್ನನ್ನು ದೂರದಲ್ಲಿ ನಿಂತು ಬರಬೇಕೋ ಬೇಡವೋ ಎಂದು ಕಾಡುತ್ತಿರುವ ಈ ಯಕಶ್ಚಿತ್ ಜ್ವರಕ್ಕೆ ಕಣ್ಣೀರಿಳಿಸುವ ಧೈರ್ಯ ಬಂದೀತೇ..ಕೊನೆಯದಾಗಿ ಅವಳು ಕೇಳಿದ ಆಹಾರದ ಸಂಗತಿ ಯಾಕೋ ಉತ್ತರಿಸಲು ಕೊಂಚ ಗಲಿಬಿಲಿ ಅನ್ನಿಸಿತು. ನಾಲ್ಕು ದೋಸೆ ಗುಳುಂ ಮಾಡಿ ಅದರ ಮೇಲೆ ಅರ್ಧ ಲೀಟರ್ ಜ್ಯೂಸ್ ಎಂಬ ದ್ರಾವಕವನ್ನೆರೆದುಕೊಂಡು ಸ್ವಲ್ಪ ಹೊತ್ತಾಗಿತ್ತಷ್ಟೇ, ಹಾಗಾಗಿ ಈಗ ಪರೀಕ್ಷೆ ಮಾಡಿ ಪುನಃ ಗಂಟಲಿನಲ್ಲಿ ಏನಾದರು ತುರುಕೋಣ ಎಂದರೆ ಸ್ಥಳವೇ ಇಲ್ಲ  !

ನನ್ನ ಉತ್ತರಕ್ಕಾಗಿ ಕಾದು ಕುಳಿತಿದ್ದ ಗೆಳತಿ.. ಯಾಕೇ .. ಏನಾಯ್ತು.. ಮಾತಾಡ್ತಾ ಇಲ್ಲ.. ಅಂದಳು.

'ಇಲ್ಲಾ ಕಣೇ, ಏನೂ ಇಲ್ಲ.. ಎಲ್ಲಾ ಸರಿಯಾಗೇ ಇದ್ದೀನಿ' ಅಂದೆ.

 ಅವಳು ಮತ್ತೆ ' ನಂಗ್ಯಾಕೋ ನಿಂಗೆ ಇಲಿ ಜ್ವರಾನೋ, ಮಂಗನ ಜ್ವರಾನೋ, ಕೋಳಿ ಜ್ವರಾನೋ ಬಂದಿರ್ಬೇಕು ಅಂತ ಡೌಟು ಕಣೇ.. ಯಾಕಂದ್ರೆ ನಿನ್ನನ್ನಿನ್ನೂ ಮನುಷ್ಯ ಜಾತಿ ಅಂತ ಯಾರೂ ಒಪ್ಕೊಳ್ಳೋಕೆ ಸಿದ್ಧ ಇಲ್ಲ ಅಲ್ವಾ ಅದಕ್ಕೆ ಹೇಳಿದೆ ಅಷ್ಟೇ.. ಯಾವ್ದಕ್ಕೂ ಡಾಕ್ಟ್ರ ಹತ್ರ ಹೋಗಿ ಒಂದು ಬ್ಲಡ್ ಚೆಕ್ ಅಪ್ ಮಾಡಿಸ್ಕೊಳ್ಳೇ ಅಂತ ಬಾಂಬೆಸೆದು ನಾನು ಬಯ್ಯಲು ಬಾಯ್ದೆರೆಯುವ  ಮೊದಲೇ  ಫೋನಿರಿಸಿದಳು.

ನನಗೂ ಜ್ವರಕ್ಕೂ ಅವಿನಾಭಾವ ನಂಟು. ಮೊದಲೆಲ್ಲ ಊರಲ್ಲಿ ಯಾರಿಗಾದರೂ ಜ್ವರ ಬಂದಿದೆ ಎಂಬ ಸುದ್ಧಿ ಗೊತ್ತಾದರೆ ಸಾಕು,ನನ್ನಮ್ಮ ನನಗೆ ಮಫ್ಲರು, ಶಾಲು, ಸ್ವೆಟರು ಹೊದೆಸಿ ಸನ್ಮಾನ ಮಾಡಲು ಪ್ರಾರಂಭಿಸುತ್ತಿದ್ದಳು. ನನಗೆ ಜ್ವರ ಬಂದರೆ ಬೇಗ ವಾಸಿ ಆಗೋದಿಲ್ಲ ಎಂಬುದು ಅದಕ್ಕೆ ಇನ್ನೊಂದು ಕಾರಣ. ಡಾಕ್ಟರರಾಗಿದ್ದ ಅಪ್ಪ ಕ್ಲಿನಿಕ್ಕಿನಿಂದ ಬಂದ ಕೂಡಲೇ ಅವರ ಕಿಟ್ ನಿಂದ ನಾಲ್ಕಾರು ಬಣ್ಣ ಬಣ್ಣದ ಮಾತ್ರೆಗಳನ್ನು ತೆಗೆದಿರಿಸುತ್ತಿದ್ದಳು.ತಣ್ಣೀರ ಪಟ್ಟಿ ಕಟ್ಟಲು ಬಟ್ಟೆ ರೆಡಿ ಮಾಡುತ್ತಿದ್ದಳು. ಅಮ್ಮ ಜ್ವರ ಮನೆಯೊಳಗೆ ಇಣುಕದ ಹಾಗೆ ಇಷ್ಟೆಲ್ಲಾ ತಯಾರಿ ನಡೆಸಿದ್ದರೂ ನನಗೆ ಹೇಗೋ ಜ್ವರ ಬಂದು ಬಿಡುತ್ತಿತ್ತು.ಆಗ ಅಮ್ಮ, ನಂಗೊತ್ತಿತ್ತು .. ಇವ್ಳಿಗೆ ಜ್ವರ ಬಂದೇ ಬರುತ್ತೆ ಅಂತ .. ನೋಡಿ ನಾನು ಮೊದ್ಲೇ ಎಲ್ಲಾ ರೆಡಿ ಮಾಡಿದ್ದಕ್ಕಾಯ್ತು" ಅಂತ ಹೇಳುತ್ತಾ  ತನ್ನ ಸಿದ್ಧತೆಗಳನ್ನೆಲ್ಲಾ ನನ್ನ ಮೇಲೆ ಪ್ರಯೋಗಿಸಲು ಪ್ರಾರಂಭಿಸುತ್ತಿದ್ದಳು. 

ಮೊದಲಿಗೆ  ಅಮ್ಮ ನನ್ನ ಕೈಗೆ ಬಣ್ಣ ಬಣ್ಣದ ಮಾತ್ರೆಗಳನ್ನು  ತಂದು ತುರುಕುತ್ತಿದ್ದಳು. ಆ ಮಾತ್ರೆಗಳ ಬಣ್ಣವೇನೋ ಸುಂದರವಾಗಿದ್ದರೂ ಅದರ ಕಹಿ  ಮತ್ತು ವಾಸನೆಯನ್ನು ತಡೆಯಲಾರದೇ ಅವಳ ಕಣ್ಣು ತಪ್ಪಿಸಿ ಮೆಲ್ಲನೆ ಮಂಚದ ಕೆಳಗೆ ಎಸೆದುಬಿಡುತ್ತಿದ್ದೆ. ಹೀಗೆ  ಹೊತ್ತು ಹೊತ್ತಿಗೆ ನನ್ನ ಕೈ ಸೇರುತ್ತಿದ್ದ ಮಾತ್ರೆಗಳೆಲ್ಲ ಬೆಚ್ಚಗೆ ಮಂಚದಡಿ ಮಲಗುತ್ತಿದ್ದ ಕಾರಣ ನನ್ನ ಜ್ವರವೂ ನನ್ನ ಜೊತೆಯೇ ಉಳಿದುಕೊಳ್ಳುತ್ತಿತ್ತು.ಮತ್ತೆ ಅಮ್ಮನ ತಣ್ಣೀರು ಪಟ್ಟಿ ಎಂಬ ಶಿಕ್ಷೆ. ಬೆಚ್ಚಗೆ ಹೊದ್ದರೂ ಚಳಿಯಾಗಿ ಗಡಗಡನೆ ನಡುಗುವ ನನ್ನ ತಲೆಗೆ ತಣ್ಣೀರಲ್ಲಿ ಅದ್ದಿದ ಬಟ್ಟೆ ಇಟ್ಟಾಗ ನರಕ ದರ್ಶನವಾಗುತ್ತಿತ್ತು. 
ಆದರೂ ಅದಕ್ಕೆಲ್ಲ ತಣಿಯದ ನನ್ನ ಜ್ವರಕ್ಕೆ  ಅಪ್ಪನೇ ಮದ್ದು ಮಾಡಬೇಕಿತ್ತು. ಅಪ್ಪನ ಟ್ರೀಟ್ ಮೆಂಟ್ ಅಂತೂ ಇನ್ನೂ ಹಿಂಸೆಯದ್ದು.  ನನ್ನ ನರಪೇತಲ ಮೈಯಲ್ಲಿ ಮಾಂಸ ಅನ್ನುವುದೇನಾದ್ರು ಇದೆಯಾ ಅಂತ ಹುಡುಕಿ 'ವ್ಹೋ' ಎಂದು ಅಳುತ್ತಿದ್ದ ನನ್ನನ್ನು ಸಮಾಧಾನಿಸುತ್ತಲೇ ಸೂಜಿ ಚುಚ್ಚುತ್ತಿದ್ದರು. 

ಒಮ್ಮೆ ಮಂಚದ ಕೆಳಗೆ ಇಟ್ಟಿದ್ದ ಹಳೆ ಪೆಟ್ಟಿಗೆಗಳ ಸ್ಥಳಾಂತರವೆಂಬ ಉತ್ಕತನಕ್ಕೆ, ಜಿರಳೆಗಳು ತಿಂದು ಅಳಿದುಳಿದಿದ್ದ ಮಾತ್ರೆಗಳ ಪಳೆಯುಳಿಕೆಗಳು ಸಿಕ್ಕಿದ್ದವು. ಹೀಗೆ ನನ್ನ 'ಲಾಂಗ್ ಲಿವ್' ಜ್ವರದ ಕಾರಣ ಜಗಜ್ಜಾಹೀರಾಗಿತ್ತು. ಅದರ ನಂತರ ನಾನು ಮಾತ್ರೆ ನುಂಗಿ ಆಗುವವರೆಗೇ ಪಕ್ಕದಲ್ಲೇ ನಿಂತಿರುತ್ತಿದ್ದ ಅಮ್ಮ, ನುಂಗಿ ಆಯಿತು ಎಂದರೂ ಬಿಡದೇ ಯಶೋದೆ ಕೃಷ್ಣನಿಗೆ ಹೇಳಿದಂತೆ ಬಾಯಿ  ತೆರೆದು ತೋರಿಸು ಎನ್ನುತ್ತಿದ್ದಳು. ಅಲ್ಲೆಲ್ಲೂ ಮಾತ್ರೆ ಉಳಿದುಕೊಂಡಿಲ್ಲ ಎಂದು ನಿಶ್ಚಯವಾದ ಮೇಲೆಯೇ ನಿರ್ಗಮಿಸುತ್ತಿದ್ದಳು.    

ಆದರೂ ನನಗೆ ಈ ಜ್ವರ ಅಂದರೆ ಯಾಕೋ 'ಪ್ಯಾರ್ಗೆ ಆಗ್ಬಿಟ್ಟೈತೆ'.

ಅದಕ್ಕೂ ಕಾರಣಗಳಿಲ್ಲದಿಲ್ಲ.  ಜ್ವರ ಎಲ್ಲರನ್ನೂ ಕಾಡುವ ರೋಗವಾದರೂ, ಅದರಿಂದ ಆಗುವ ಉಪಕಾರಗಳ ಬಗ್ಗೆ ನಿಮಗಿನ್ನೂ ಗೊತ್ತಿಲ್ಲ ಅಂತ ಕಾಣುತ್ತೆ ಹಾಗಾಗಿ ಜ್ವರವನ್ನೂ ಇಷ್ಟ ಪಡುವವರಿದ್ದಾರೆಯೇ ಎಂಬ ಸಂದೇಹ ನಿಮ್ಮೊಳಗಿರುವುದು..!!
ನಾನಾಗ ಆರನೆಯ ತರಗತಿಯಲ್ಲಿದ್ದೆ. ಗಣಿತ ಹೇಳಿಕೊಡಲು ಹೊಸದಾಗಿ ಒಬ್ಬರು ಟೀಚರ್ ಬಂದಿದ್ದರು. ಅವರು ಗಣಿತವನ್ನು  ಬೋರ್ಡಿನಲ್ಲಿ ಹೇಳಿಕೊಡುವುದಕ್ಕಿಂತ ಹೆಚ್ಚಾಗಿ, ವಿದ್ಯಾರ್ಥಿಗಳ ಬೆನ್ನಿನ ಮೇಲೆ ಕೋಲಿನಿಂದ ಬರೆ ಎಳೆದು ಹೇಳಿಕೊಡುತ್ತಿದ್ದರು. ಹಾಗಾಗಿ ಅವರ ಕ್ಲಾಸು ಎಂದರೆ ಎಲ್ಲರಿಗೂ ನಡುಕ. ಇನ್ನು ಗಣಿತ ಟೆಸ್ಟ್ ಅನ್ನುವುದು ಹೇಗಿರಬಹುದು ನೀವೇ ಊಹಿಸಿ. 'ನಾಡಿದ್ದು ಟೆಸ್ಟ್ ಇದೆ ಎಲ್ಲರೂ ಸರಿ ಕಲಿತು ಬನ್ನಿ' ಎಂದು ಬೆತ್ತ ಝಳಪಿಸುತ್ತಾ ನುಡಿದು ಕ್ಲಾಸಿನಿಂದ ಹೊರ ಹೋಗಿದ್ದರು ಆ ದಿನ.  ನನ್ನ ಅದೃಷ್ಟಕ್ಕೆ ಸರಿಯಾಗಿ ಟೆಸ್ಟ್ ಎಂದು ಹೇಳಿದ ದಿನ ನಾನು ಜ್ವರದಿಂದ ಮುಸುಕೆಳೆದು ಹಾಸಿಗೆಯಲ್ಲಿ ಕನಸು ಕಾಣುತ್ತಾ ಮಲಗಿದ್ದೆ. ಟೆಸ್ಟ್ ಮುಗಿದು ಆನ್ಸರ್ ಶೀಟ್ ಹಿಡಿದು ಕ್ಲಾಸಿಗೆ ಎರಡು ಬೆತ್ತದ ಸಮೇತವೇ ಬಂದಿದ್ದರು. ಆ ದಿನ ಇಡೀ ಕ್ಲಾಸಿನಲ್ಲಿ ಧೈರ್ಯವಾಗಿ ತಲೆ ಎತ್ತಿ ಕೂತವಳೆಂದರೆ ನಾನೊಬ್ಬಳೇ.. ಇದು ಜ್ವರದ ಮಹಿಮೆಯಲ್ಲದೇ ಇನ್ನೇನು ಹೇಳಿ. 

ಇನ್ನೊಮ್ಮೆ ನಮ್ಮನೆಗೆ 'ನಾರದನ ಹೆಣ್ರೂಪ' ಎಂದೇ ಪ್ರಸಿದ್ಧಿ ಹೊಂದಿದ್ದ ಕಾಶತ್ತೆ  ಬರ್ತೀನಿ ಅಂದಿದ್ದರು. ಅವರು ಯಾರದೇ ಮನೆಗೆ ನುಗ್ಗಿದರೂ ಸಾಕು ಮನೆಯೊಳಗೆ ಮಾತಿನ ಚಕಮಕಿ ಗ್ಯಾರಂಟಿ. 'ನಿನ್ನ ಬಗ್ಗೆ ಅವ್ಳು ಹೀಗೆ ಹೇಳಿದ್ಲು, ಕೇಳಿ ನಂಗೆ ಮನಸ್ಸು ತಡೀಲಿಲ್ಲ ಕಣೇ ಹೇಳೋಣಾ ಅಂತ ಇಲ್ಲಿಗೆ ಬಂದೆ ನೋಡಮ್ಮಾ..'  ಎಂದು  ಆಣೆ ಪ್ರಮಾಣಗಳ ಸಾಕ್ಷಿಗಳೊಂದಿಗೆ ನಂಬುವಂತೆ ಮಾತನಾಡುವ ಚಾಕಚಕ್ಯತೆ ಹೊಂದಿದವರು ಅವರು. ಅಂತವರು ಬಂದು ಹೋದರೆ ತ್ಸುನಾಮಿಗಿಂತ ಹೆಚ್ಚಿನ ಹಾನಿ ನಿಶ್ಚಿತ ಎಂದು ತಿಳಿದ ನಾನು 'ಅಯ್ಯೋ ಕಾಶತ್ತೇ.. ಇಲ್ಲಿ ಎಲ್ರಿಗೂ ಜೋರು ಜ್ವರ ಕಣ್ರೀ..ನೀವು ಬರ್ತೀನಿ ಅಂದಿದ್ದು ತುಂಬಾನೇ ಕುಶಿ  ಆಯ್ತು ನೋಡಿ. ಕಷ್ಟಕ್ಕಾಗಬೇಕಾದರೆ ನಮ್ಮವರೇ ಆಗ್ಬೇಕು ಅಲ್ವಾ.. ಬನ್ನಿ .. ಎಲ್ರೂ ಹಾಸಿಗೆ ಹಿಡಿದಿದ್ದೀವಿ..  ಅದೇನೋ ಚಿಕೂನ್ ಗುನ್ಯಾ ಅಂತೆ. ಬಂದು ನಮ್ಗೆಲ್ಲ ಒಂದಿಷ್ಟು ಗಂಜೀನಾದ್ರು ಬೇಯ್ಸಿ  ಹಾಕಿ' ಎಂದೆ.  ಕಾಶತ್ತೆ ಬಾರದೇ ಈಗೊಂದೆರಡು ವರ್ಷದ ಮೇಲಾಯಿತು. ಇದೂ ಜ್ವರದ ಹಿರಿಮೆಯೇ ತಾನೇ.. 

ಇದಿಷ್ಟೇ ಆಗಿದ್ದರೆ ಇದೇನು ಮಹಾ ಅನ್ನಬಹುದಿತ್ತು .. ಆದರೆ ನನ್ನ ಜ್ವರದ ಮಹಿಮೆ ಇಷ್ಟಕ್ಕೆ ನಿಲ್ಲುವುದಿಲ್ಲ. 

ಅದೇನಾಯ್ತೋ ಗೊತ್ತಿಲ್ಲ ದೇವರು ದಿಂಡರನ್ನೆಲ್ಲ ಲೆಕ್ಕಕ್ಕಿಂತ ಹೆಚ್ಚು ಪಕ್ಕಕ್ಕೆ ಸೇರಿಸಿಕೊಳ್ಳದ ನಮ್ಮಜ್ಜ ಅಜ್ಜಿಗೆ ಇದ್ದಕ್ಕಿದ್ದಂತೆ ಕಾಶಿ ಯಾತ್ರೆಯ ಹಂಬಲ ಸುರು ಆಯಿತು. ಯಾರ್ಯಾರನ್ನೋ ಕೇಳಿ ಅಲ್ಲಿಗೆ ಹೋಗುವ ಬಸ್ಸಿನ ಹೆಸರು ದಾರಿಗಳನ್ನೆಲ್ಲ ಗುರುತು ಹಾಕಿಕೊಂಡಿದ್ದರು. ಆಗೆಲ್ಲ ಈಗಿನಂತೆ ಕ್ಷಣಾರ್ಧದಲ್ಲಿ ಸುದ್ಧಿಗಳು ಒಂದೂರಿಂದ ಇನ್ನೊಂದೂರಿಗೆ ಹೋಗುತ್ತಿರಲಿಲ್ಲ. ನಮಗೆ ಆ ಸುದ್ಧಿಯ ವಿವರದ ಕಾಗದ ಬಂದು ತಲುಪುವ ಮೊದಲೇ ನಾವು ರಜೆಗೆ ಅಜ್ಜನ ಮನೆಗೆ ಹೋಗುವುದು ಎಂದು ಹೊರಟೇ ಬಿಟ್ಟಿದ್ದೆವು. ನಮ್ಮನ್ನು ಕಂಡು ಅಜ್ಜ ಅಜ್ಜಿಗೆ ಕುಶಿ  ಆಗಿ ಕಾಶಿ ಯಾತ್ರೆಗೆ ನಾವೂ ಅವರೊಡನೆ ಹೋಗುವುದೆಂದಾಯಿತು.

ನಾಳೆ ಹೊರಡುವ ದಿನ ಎಂದಾದರೆ ಅದರ ಮೊದಲಿನ ದಿನವೇ ನನ್ನ ಪ್ರೀತಿಯ ಜ್ವರ ನಾನು ಬರ್ತೀನಿ ಅಂತ ನನ್ನನ್ನು ಹಿಡಿದುಕೊಂಡಿತು. ಅದೂ ಸಾಮಾನ್ಯ ಜ್ವರ ಅಲ್ಲ. ಮೈಯೆಲ್ಲ ಕೆಂಡದಂತೆ ಸುಡುತ್ತಿತ್ತು. ಹೀಗಾಗಿ ನನ್ನನ್ನು ಬಿಟ್ಟು ಹೋಗುವಂತೆಯೂ ಇಲ್ಲ ಕರೆದುಕೊಂಡು ಹೋಗುವಂತೆಯೂ ಇಲ್ಲ ಎಂಬ ಸಂದಿಗ್ದ ಎದುರಾಯಿತು. ಅಜ್ಜಿ ಆಗ ' ಎಂತ ಯಾತ್ರೆಯೂ ಬೇಡ, ಕೂಸಿಂಗೆ ಮೊದಲು ಉಷಾರಾಗಲಿ, ಮತ್ತೆಲ್ಲ ಹೋಪಲ್ಲಿಗೆ ಹೋಪದು" ಎಂದು ತೀರ್ಪಿತ್ತು ಕಟ್ಟಿದ್ದ ಗಂಟು ಮೂಟೆ ಬಿಚ್ಚಿ ನನ್ನ ಸೇವೆಗೆ ನಿಂತರು. ಒಂದೆರಡು ದಿನದಲ್ಲಿ ಜ್ವರ ಕಡಿಮೆಯಾಯಿತಾದರೂ ಪೂರ್ತಿ ಹೋಗಿರಲಿಲ್ಲ. ಅಜ್ಜ ಡಾಕ್ಟರ್ ಹತ್ತಿರ ಮದ್ದಿಗೆ ಹೋಗಿದ್ದರು. ಬರುವಾಗ ತಂದ ಸುದ್ಧಿ ಹೆದರಿಕೆ ಹುಟ್ಟಿಸುವಂತಿತ್ತು. ಅದೇನೆಂದರೆ ಆ ದಿನ ಕಾಶಿ ಯಾತ್ರೆಗೆ ನಾವೆಲ್ಲ ಹೋಗಬೇಕಿದ್ದ ಬಸ್ಸು ಪಲ್ಟಿ ಹೊಡೆದು ಕೆಲವರು ಸತ್ತು ಹಲವರಿಗೆ ಗಂಭೀರ ಏಟಾಗಿತ್ತು.ಅಲ್ಲಿಯವರೆಗೆ ನನ್ನ ಜ್ವರಕ್ಕೆ ಬಯ್ಯುತ್ತಿದ್ದ ಎಲ್ಲರೂ ಜೀವ ಉಳಿಸಿದ  ಅದನ್ನು ಹೊಗಳಿದ್ದೇ ಹೊಗಳಿದ್ದು. 

ಇಂತಿರ್ಪ  ಜ್ವರ ಬಂದರೆ ಬೇಡ ಅನ್ನೋರು ಉಂಟೇ ನೀವೇ ಹೇಳಿ. ಅಯ್ಯೋ ಇದು ಜ್ವರ ಏರಿ ಹೇಳ್ತಾ ಇರೋ ಬಡಬಡಿಕೆ ಅಲ್ಲಾ.. ನನ್ನ ನಂಬಿ ಪ್ಲೀಸ್.. 

Monday, June 9, 2014

ಅವನು


ಬಸ್ಸಿನಲ್ಲಿ ಕಿಟಕಿಯ ಪಕ್ಕ ಕುಳಿತಿದ್ದ ಅವಳಿಗೆ ಹೊರಗಿನಿಂದ ಬೀಸುತ್ತಿದ್ದ ಚಳಿಗಾಳಿ ಮುಖಕ್ಕೆ ಬಡಿಯುತ್ತಿದ್ದರೂ ಹಣೆಯಲ್ಲಿ ಬೆವರ ಹನಿ. ಮೈಯಲ್ಲೇನೋ ನಡುಕ. ಎದೆ ಬಡಿತದ ಸದ್ದು ಅವಳಿಗೇ ಕೇಳಿಸುತ್ತಿತ್ತು.  ಹಿಂದಿನಿಂದ ಬರುತ್ತಿದ್ದ ಅವನ ಹೆಜ್ಜೆಗಳು ತನ್ನನ್ನು ಸಮೀಪಿಸುತ್ತಿವೆ ಎಂದು ಅವಳಿಗೆ ನೋಡದೆಯೂ ತಿಳಿಯುತ್ತಿತ್ತು.. ಪ್ರತಿ ದಿನ ನೋಡುವವನೇ.. 

ಆದರೂ ಇಂದು ಇಷ್ಟು ಜನರ ಎದುರಲ್ಲೇನಾದರೂ ಅವನು ಮಾತನಾಡಿದರೆ..

ಮತ್ತಷ್ಟು ಮುದುರಿದಳು. ಅವನ ಹೆಜ್ಜೆ ಇನ್ನಷ್ಟು ಹತ್ತಿರಕ್ಕೆ ಬಂತು.. 
 
ಬೇರೇನೂ ಮಾಡಲರಿಯದೇ ಅವಳು ಕೈಯಲ್ಲಿದ್ದ ಕರ್ಚೀಫನ್ನು ಕೆಳ ಹಾಕಿ ಅದನ್ನು ಹುಡುಕುವಂತೆ ನಟನೆ ಮಾಡುತ್ತಾ ಬಗ್ಗಿದಳು. ಸ್ವಲ್ಪ ಹೊತ್ತು ಅವನ ಹೆಜ್ಜೆಗಳು ಅಲ್ಲಿಯೇ ತಟಸ್ಥವಾಗಿ ನಿಂತಿದ್ದು ಅವಳಿಗೆ ಅರಿವಾಯಿತು. ಬಗ್ಗಿಸಿದ ತಲೆಯನ್ನು ಎತ್ತಲೇ ಇಲ್ಲ.

ಮೆಲ್ಲನೆ ಹೆಜ್ಜೆಗಳ ಸದ್ದು ಮುಂದಕ್ಕೆ ಚಲಿಸತೊಡಗಿತು. ಅಬ್ಬಾ ಎಂದು ನಿಟ್ಟುಸಿರು ಬಿಡುತ್ತಾ ತಲೆ ಎತ್ತಿ ಅವನ ಕಡೆಗೆ ನೋಡದೇ ಕುಳಿತುಬಿಟ್ಟಳು.

ಬಸ್ಸು ನಿಂತಿತು.

ಎಲ್ಲರೂ ಇಳಿಯುವ ಮೊದಲೇ ಅವನು ಬಾಗಿಲಿನ ಕೆಳಗಿಳಿದು ನಿಂತಿದ್ದ.

ಸ್ವಲ್ಪವೂ ಜಾರದಂತೆ ಪಿನ್ ಮಾಡಿದ್ದ ಚೂಡಿದಾರದ ಶಾಲನ್ನು ಸುಮ್ಮಸುಮ್ಮನೆ  ಎಳೆದೆಳೆದು ಸರಿ ಮಾಡಿಕೊಳ್ಳುತ್ತಾ ಅವನ ಪಕ್ಕದಿಂದ ದಾಟಲು ಪ್ರಯತ್ಸಿಸಿದಳು.

ಆದರೂ ಅವನ ಮೊಗದ ಭಾವವನ್ನು ಈಕ್ಷಿಸುವ ಕುತೂಹಲ ಹತ್ತಿಕ್ಕಲಾರದೇ ಕಣ್ಣೆತ್ತಿದ್ದಳಷ್ಟೇ..

'ನಾಳೆಯಿಂದ   ಬಸ್ ಪಾಸ್ ತಾರದೇ ಬಸ್ಸಿಗೆ ಹತ್ತಬೇಡಿ..' ಎಂದು ಅವಳಿಗೆ ಮಾತ್ರ ಕೇಳುವಂತೆ ಸಣ್ಣದಾಗಿ ಹೇಳಿ, 'ರೈಟ್' ಎಂದು ಕಿರುಚುತ್ತಾ ಬಸ್ಸೇರಿದ ಅವನ ಅಂಗಿಯ ಖಾಕಿ ಬಣ್ಣ ಅವಳ ಕಣ್ಣಿನಿಂದ  ಮೆಲ್ಲನೆ ಮರೆಯಾಯಿತು. 


Monday, May 5, 2014

ಹೀಗೊಂದು ಪ್ರೇಮಕಥೆ


ಬಾಗಿಲ ಬದಿಯಲ್ಲಿ 41+ 2 ಸೀಟುಗಳು ಎಂಬ ಅರೆಮಾಸಿದ ಪೈಂಟಿನ ಬರಹವನ್ನು ಹೊತ್ತ ಬಸ್ಸು ನನ್ನ ಬಳಿಗೆ ಬಂದು ನಿಂತಿತು. ಚುರುಕಿನಲ್ಲಿ ಮೆಟ್ಟಿಲೇರಿ ಡ್ರೈವರನ ಎಡಬದಿಯಲ್ಲಿದ್ದ ನನ್ನ ಮಾಮೂಲಿ ಸ್ಥಳವಾದ ಅಡ್ಡ ಸೀಟಿನ ಮೇಲೆ ಕುಳಿತೆ. ಎಂದಿನಂತೆ ನನ್ನ ದೃಷ್ಟಿ  ಹರಿದಿದ್ದು ಮಹಿಳೆಯರ ಸೀಟಿನ ನಿಶ್ಚಿತ ಜಾಗದೆಡೆಗೆ. ಅವಳು ನಸು ನಾಚಿಕೆಯಲ್ಲಿ ತಲೆ ಬಗ್ಗಿಸಿ ಮುಗುಳು ನಗೆ ಬೀರುತ್ತಿದ್ದಳು. 

ಓದುಗ ಮಹಾಶಯರು ಕಥೆಯ ತಲೆ ಬರಹವನ್ನು ಮೊದಲೇ ಓದಿದ್ದರೆ ಇದು ನನ್ನ ಕಥೆಯೇ ಎಂದು ತಪ್ಪು ತಿಳಿದುಕೊಳ್ಳುವ ಸಂಭವವುಂಟು. ಆದರೆ ನೀವೊಮ್ಮೆ ನನ್ನ ಪರಿಚಯ ಮಾಡಿಕೊಂಡಲ್ಲಿ ಹಾಗಾಗದು ಎನ್ನುವ ಸದಾಶಯ ನನ್ನದು. 

ನಾನು ಈ ಬಸ್ಸಿನ ಅಜ್ಜನ ಕಾಲದಿಂದಲೇ ಇದರ ಸಹಸವಾರ.   ನನ್ನ ಸರ್ವೀಸಿನ ಕಾಲದಲ್ಲಿ ಇದೇ ರೂಟಿನಲ್ಲಿ  ಬರುತ್ತಿದ್ದ ಮೊದಲಿನೆರಡು ಬಸ್ಸುಗಳು ನಮ್ಮ ಕರಾವಳಿಯ ಉಪ್ಪು ಗಾಳಿಯ ಹೊಡೆತಕ್ಕೆ ತುಕ್ಕು ಹಿಡಿದು, ಎತ್ತರ ತಗ್ಗಿನ ತಿರುವು ಮುರುವಿನ ಮಾರ್ಗದಲ್ಲಿ ಸುತ್ತಿ ಸುಳಿದು ಬಸವಳಿದು ಗೂರಲು ರೋಗ ಅಂಟಿ ಸತ್ತೇ ಹೋಗಿದ್ದವು.  ಅಂದರೆ ನನ್ನ ಜೀವಿತಾವಧಿಯಲ್ಲಿ ಈ ಮಾರ್ಗದಲ್ಲಿ ನಾನು ಹೋಗಲೇಬೇಕಾದ ಹೊತ್ತಿಗೆ ಬರುತ್ತಿದ್ದ ಬಸ್ಸುಗಳಲ್ಲಿ ಇದು ಮೂರನೆಯದು.
ನನ್ನ ಯೌವನ ಕಾಲದಲ್ಲಿ ಅಪ್ಪ ಗಳಿಸಿಟ್ಟ ಅಷ್ಟು ಆಸ್ತಿಯನ್ನೇ ಐಸ್ ಕ್ಯಾಂಡಿಯಂತೆ ಕರಗಿಸುತ್ತಾ ಕಾಲ ಕಳೆಯುವ ನನ್ನನ್ನು ನೋಡಿ ಸಹಿಸಲಾಗದೇ ಅಪ್ಪನೇ ಯಾರ್ಯಾರ ವಶೀಲಿ ಮಾಡಿ ನನಗೆ ಸರಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಕೊಡಿಸಿದ್ದರು.  ಅಲ್ಲಿಂದ ನನ್ನ ಜೀವನ ಇದೇ ಆರು ಚಕ್ರದ ಗಾಡಿಯನ್ನೇರುತ್ತಲೇ ಚಲಿಸಲಾರಂಭಿಸಿತು. ಹಾಗಾಗಿಯೇ ಏನೋ ಈ ಬಸ್ಸಿನಲ್ಲಿ ಬರುವ ಚರಾಚರಗಳೂ, ಪ್ರ್ಯಾಂ.. ಎನ್ನುವ ಹಾರನ್ನು, ಕ್ರೀಂ.. ಎಂದೊರಲುವ ಬ್ರೇಕು, ದಡ ಬಡ ಸದ್ದೆಸಗುವ ಬಸ್ಸಿನ ಶರೀರ.. ಹೀಗೆ ಸಕಲವೂ ನನ್ನನ್ನು ಕಂಡೊಡನೆ ಪರಿಚಯದ ನಗೆ ಬೀರಿದಂತಾಗುತ್ತಿತ್ತು.

ಮೊದಲೆಲ್ಲಾ ಶಿಕ್ಷಕ ವೃತ್ತಿಧರ್ಮದಂತೆ ಮುಖ ಗಂಟಿಕ್ಕಿಕೊಂಡೇ ಬಸ್ಸೇರುತ್ತಿದ್ದ ನನಗೆ ಬಸ್ಸಿನೊಳಗಿನ ಲೋಕದ ಪರಿಚಯವೇ ಕಡಿಮೆಯಿತ್ತು. ಆದರೀಗ ಘನ ಸರ್ಕಾರದವರು ನನ್ನ ಕೆಲಸದಿಂದ ನನಗೆ ಮುಕ್ತಿ ಕೊಡಿಸಿ ಮನೆಯಲ್ಲೇ ಕುಳಿತುಣ್ಣುವಂತೆ ಪೆನ್ಷನ್ ಕೊಡಲು ಶುರು ಮಾಡಿ ನನ್ನ ಸರ್ವೀಸಿನ ಅರ್ಧಕ್ಕಿಂತಲೂ ಹೆಚ್ಚು ಕಾಲ ಕಳೆದಿತ್ತು. ಮನೆಯಲ್ಲಿ ಕುಳಿತು ಮಾಡುವುದೇನು ಎಂಬುದಕ್ಕಿಂತಲೂ ಹೆಚ್ಚಾಗಿ, ಕುಳಿತರೆ ಏನಾದರೂ ಮಾಡಬೇಕಾಗಬಹುದು ಎನ್ನುವ ಭಯಕ್ಕೆ ನಾನು ನಿತ್ಯವೂ ಈ ಬಸ್ಸೇರುತ್ತಿದ್ದೆ. ಬಸ್ಸಿನ ಸಕಲ ಆಗುಹೋಗುಗಳನ್ನು ಗಮನವಿಟ್ಟು ನೋಡುತ್ತಿದ್ದೆ.  ಈಗ ನಿಮಗೆ ನನ್ನ ಪರಿಚಯ ಆದ ಕಾರಣ ಕಥೆಯ ನಾಯಕ ನಾನಲ್ಲ ಎಂಬುದನ್ನು ಗ್ರಹಿಸಿದ್ದೀರಿ ಎಂದುಕೊಂಡಿದ್ದೇನೆ. 

ನನ್ನ ಕಣ್ಣೋಟ ಮಹಿಳೆಯರಿಗಾಗಿ ಮೀಸಲಾದ ಸೀಟಿನಲ್ಲಿ ಕೇಂದ್ರೀಕೃತಗೊಂಡಿತ್ತು ಎಂದೆನಲ್ಲ.. ಅಲ್ಲಿಯೇ ಕಥಾ ನಾಯಕಿ ಕುಳಿತು ತಮ್ಮ ಕೈಯಲ್ಲಿದ್ದ ಮೊಬೈಲನ್ನು ನಸು ನಾಚಿಕೆಯಲ್ಲಿ ತಲೆ ಬಗ್ಗಿಸಿ ಮುಗುಳು ನಗೆ ಬೀರಿ ನೋಡುತ್ತಿದ್ದಳು. 

ಅವಳಿಂದ ಸರಿಯಾಗಿ ಎರಡು ಸೀಟು ಹಿಂದೆ ಟೈಟ್ ಜೀನ್ಸು, ಬ್ರೈಟು ಮುಖ ಹೊತ್ತ ಹುಡುಗನೊಬ್ಬ 'ಮೈಸೂರ್ ಸಿಲ್ಕ್ ಪ್ಯಾಲೆಸ್' ಎಂಬ ಹೆಸರು ಹೊತ್ತ ಕಡು ಹಳದಿಯ, ನುಣುಪಾದ ಪ್ಲಾಸ್ಟಿಕ್ ಲಕೋಟೆಯನ್ನು ತನ್ನ ತೊಡೆಯ ಮೇಲಿಟ್ಟು ಅದರ ಮೇಲೆ ಇಟ್ಟಿಗೆಯಷ್ಟಗಲದ ತನ್ನ ಮೊಬೈಲನ್ನು ಮಲಗಿಸಿ ಆಗೊಮ್ಮೆ ಈಗೊಮ್ಮೆ ಹುಡುಗಿಯ ಕಡೆ ಕಳ್ಳ ನೋಟ ಬೀರುತ್ತಾ ಕುಳಿತಿದ್ದ.ಅವರಿಬ್ಬರನ್ನು ಯಾವ ಮಾಯೆ ಜೊತೆಯಾಗಿ ಬಂಧಿಸಿತ್ತೋ ಏನೋ.. 
ನಾನು ಬಸ್ಸು ಹತ್ತಿ ಕುಳಿತು ಸರಿಯಾಗಿ ಇಪ್ಪತ್ತು ನಿಮಿಷ ಕಳೆದೊಡನೆ ಅವಳು ತನ್ನ ಮೊಬೈಲನ್ನು ಪರ್ಸಿನೊಳಗೆ ಸೇರಿಸಿಕೊಳ್ಳುತ್ತಾ ಚೂಡಿದಾರದ ಶಾಲನ್ನು  ಸರಿಪಡಿಸಿಕೊಳ್ಳುತ್ತಾ ತನ್ನಿಂದ ಎರಡು ಸೀಟು ಹಿಂದೆ ಕುಳಿತ ಹುಡುಗನ ಕಡೆಗೊಂದು ಕಣ್ಬಾಣ ಎಸೆದು ಘಾಸಿಗೊಳಿಸಿ ತನ್ನಂತೆ ಇಳಿಯ ಹೊರಟ ಉಳಿದ ಹುಡುಗಿಯರ ಸಾಲನ್ನು ಸೇರುತ್ತಿದ್ದಳು. ಅವರ ಜೊತೆಯಲ್ಲೇ ಸ್ವಲ್ಪ ದೂರದಲ್ಲಿ ಕಾಣುತ್ತಿದ್ದ 'ಕ್ಯಾsಷ್ಯೂ ಫ್ಯಾಕ್ಟರಿ' ಎಂಬ ಬೋರ್ಡು ಹಾಕಿದ ಕಟ್ಟಡದೆಡೆಗೆ ನಡೆಯುತ್ತಿದ್ದಳು.

ಅವಳ ಶಾಲಿನ ಕುಚ್ಚಿನ ತುದಿಯ ನೂಲೂ ಮರೆಯಾಗುವವರೆಗೆ ಅವಳನ್ನು ನೋಡುವ ಯುವಕ ಮತ್ತೆ ಅನಾಥನಂತೆ ಇತ್ತ ತಿರುಗಿ, ತನ್ನ ಮೊಬೈಲನ್ನು ಕುಳಿತಲ್ಲೇ ತನ್ನ ಪಾಂಟಿನ ಕಿಸೆಗೆ ಸೇರಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದ. ಮುಂದಿನ ಸ್ಟಾಪಿನಲ್ಲಿ ದೊಡ್ಡದಾಗಿ ಕಾಣುವ 'ಗಣೇಶ್ ಗ್ಯಾರೇಜ್' ಎಂಬಲ್ಲಿಗೆ ಅವನ ಬೆಳಗಿನ ಪಯಣದ ಕೊನೆ.

ಹಾಗೆಂದು ಅವರು ಬಸ್ಸಿನಲ್ಲಿ ಒಂದು ಸಲವೂ ಮಾತಾಡಿಕೊಂಡದ್ದು ಇಲ್ಲವೇ ಇಲ್ಲ ಎನ್ನುವ ಹಾಗಿಲ್ಲ ಎಂಬುದಕ್ಕೆ ಅವರ ಮೊದಲ ಭೇಟಿಯೇ ಸಾಕ್ಷಿ. ಅದೆಲ್ಲಿಯೋ, ಯಾವೂರಲ್ಲಿಯೋ ನಡೆದ ಕೋಮುಗಲಭೆ ಎಂಬ ಹಳಸಲು ಪದಕ್ಕೆ ಮರ್ಯಾದೆ ಒದಗಿಸುವ ಕೆಲಸಕ್ಕೆ, ಬೇರೇನೂ ಕೆಲಸವಿಲ್ಲದ ಕೆಲ  ನಮ್ಮೂರ ಯುವಕರೂ  ಉತ್ಸಾಹದಿಂದ ಧುಮುಕಿದ್ದರು.ಅಲ್ಲಿಯವರೆಗೆ ನಾನು ಗಮನಿಸದ  ಇದೇ ಈ ಕಥೆಯ ನಾಯಕಿ ಆಗಷ್ಟೇ ತಾನಿಳಿಯುವ ಜಾಗ ಬಂತೆಂದು ಎದ್ದು ನಿಂತಿದ್ದಳು. ಆಗಲೇ ಬಸ್ಸಿನ ಗಾಜಿಗೆ ಎಲ್ಲಿಂದಲೋ ಕಲ್ಲೊಂದು ಅಪ್ಪಳಿಸಿ ಗಾಜನ್ನು ಭೇದಿಸಿತ್ತು. ಹೆದರಿದ ಹರಿಣಿಯಂತಾದ ಆಕೆ ಆ ಆಘಾತಕ್ಕೋ, ಬಸ್ಸಿನ ಡ್ರೈವರ್ ಅದೇ ಕಾಲಕ್ಕೆ ಅದುಮಿದ ಬ್ರೇಕಿಗೋ ವಾಲಾಡಿ ಕುಳಿತಿದ್ದ ಯುವಕನ ಮಡಿಲಿಗೆ ಬಿದ್ದಿದ್ದಳು. 
ಇದರಿಂದ ಯುವಕನ ಮೈಗೆ ಮಿಂಚು ಬಡಿದು, ಇದ್ದಕ್ಕಿದ್ದಂತೆ ಕ್ಷಾತ್ರ ತೇಜನ್ನು ಉಕ್ಕೇರಿ ' ಯಾವನವನು ... ಮಗ, ಬಸ್ಸಿಗೆ ಕಲ್ಲೆಸದವನು, ಧೈರ್ಯವಿದ್ದರೆ ಬಾ ಮುಂದೆ' ಎಂದು ಹುಡುಗಿಯ ತೋಳನ್ನು ಬಿಗಿಯಾಗಿಯೇ ಹಿಡಿದು ಯಕ್ಷಗಾನದ ಆರ್ಭಟೆ ತೆಗೆದೇ ಬಿಟ್ಟ. ಆ ದಿನ ಮುಂದಿನ ಸ್ಟಾಪಿನಲ್ಲಿ ಇಳಿಯಬೇಕಾದ ಆತ ಅಲ್ಲೇ ಹುಡುಗಿಯೊಂದಿಗೆ ಇಳಿದು ಅವಳು ಅವಳ ಫ್ಯಾಕ್ಟರಿ ಗೇಟ್ ದಾಟಿದ ಮೇಲೆಯೇ ಬಂದಿದ್ದು. ಬಸ್ಸಿನವರು ಕೂಡಾ ಆತನ ಸಾಹಸಕ್ಕೆ ಸರ್ಟಿಫಿಕೇಟ್ ಕೊಡುವವರಂತೆ ಅವನು ಬರುವವರೆಗೆ ನಿಲ್ಲಿಸಿಯೇ ಇದ್ದರು. 

ಮತ್ತಿನದೆಲ್ಲಾ ನೀವು ಸಿನಿಮಾದಲ್ಲಿ ನೋಡಿದ ಹಾಗೆ. ಒಮ್ಮೊಮ್ಮೆ ಅವಳು ತನ್ನ ಸ್ಟಾಪ್ ಬರುವಾಗಲೂ ಏಳದೇ, ಆ ದಿನ ಇವನೂ ತನ್ನ ಗ್ಯಾರೇಜ್ ಕಡೆ ಮೊಗ ತಿರುಗಿಸದೇ ಅದರ ನಂತರದ ಪಿಕ್ಚರ್ ಥಿಯೇಟರ್ ಸ್ಟಾಪಿನಲ್ಲಿ ಇಳಿಯುತ್ತಿದ್ದರು. ನನಗೂ ಬೇರೇನೂ ಕೆಲಸವಿಲ್ಲದೇ ನಾನೂ ಅವರ ಹಿಂದಿನಿಂದಲೇ ಇಳಿದು ಥಿಯೇಟರಿನೊಳಗೆ ನುಗ್ಗುತ್ತಿದ್ದೆ. ಒಳಗೆ ನಡೆದೊಡನೇ ಅವರ  ಕೈ ಕೈ ಸೇರಿಕೊಳ್ಳುತ್ತಿತ್ತು.  ಕಣ್ಣಿಗೆ ಕಣ್ಣೂ ಕೂಡುತ್ತಿತ್ತೋ ಏನೋ ಆ ಕತ್ತಲಿನಲ್ಲಿ ನನಗದು ಕಾಣುತ್ತಿರಲಿಲ್ಲ. ಮತ್ತೆ ಕೆಲವೊಮ್ಮೆ ಕೊನೆಯ ಸ್ಟಾಪ್ ಆದ ಬೀಚಿನ ಮಾರ್ಗದಲ್ಲಿ ಸಾಗುತ್ತಿದ್ದರು. ಬಿಸಿಯಾದ ಮರಳ ಮೇಲೆ ಹಾಯಾಗಿ ಕುಳಿತು ಸಮುದ್ರದ ಅಲೆಗಳನ್ನು ಲೆಕ್ಕ ಹಾಕುವವರಂತೆ ಗಂಟೆಗಟ್ಟಲೆ ಜೊತೆಯಾಗಿ ಕುಳಿತು ಬಿಡುತ್ತಿದ್ದರು. ಆಗಂತೂ ನಾನು ನನ್ನ ಬೋಳು ಮಂಡೆಗೆ ಬಿಸಿಯ ಝಳ ತಡೆಯಲಸಾಧ್ಯವಾಗಿ ಈ ಊರಿಗೆ ಬೀಚ್ ಯಾಕೆ ಬೇಕಿತ್ತು ಎಂದು ಶಪಿಸಿದ್ದಿತ್ತು.

ಇದಲ್ಲದೆ ನಮ್ಮೂರ ಪಾರ್ಕಿನ ಲಂಟಾನ ಬಲ್ಲೆಯ ಮೂಲೆಯಲ್ಲಿ ಕಾಲು ಚಾಚಿ ಕೂರುತ್ತಿದ್ದ ಅವರನ್ನು ನಾನು ಕಂಡಿದ್ದೇನೆ. ಕೆಲವೊಮ್ಮೆ ಅಲ್ಲೇ ಇರುವ ಕಲ್ಲಿನ ಮೇಲೋ, ಮರದ ಬೊಡ್ಡೆಯ ಮೇಲೋ ತಮ್ಮ ಹೆಸರುಗಳನ್ನು ಕೆತ್ತಿ ಅಮರ ಶಿಲ್ಪಿಯ ಫೋಸ್ ಕೊಡುತ್ತಿದ್ದ ಹುಡುಗನನ್ನು ಹತ್ತಿರಕ್ಕೆ ಎಳೆದು ಕೂರಿಸುತ್ತಿದ್ದ ಅವಳು ಕಾಣಿಸುತ್ತಿದ್ದಳು. ಹೀಗೆ ಅವರ ಪ್ರೇಮ ದಿನದಿಂದ ದಿನಕ್ಕೆ ನಿರ್ಮಲವಾಗುತ್ತಾ ಸಾಗಿದಂತೆ ನನಗೆ ನೋಡುವ ಕೆಲಸ ಹೆಚ್ಚಾಗುತ್ತಾ ಹೋಯಿತು.  
ಇನ್ನು ಮುಂದಿನದನ್ನು ಕೇಳಲು ನೀವು ಆತುರರಾಗಿದ್ದೀರಿ ಎಂದು ನನಗೆ ತಿಳಿದಿದೆ ಆದರೇನು ಮಾಡಲಿ ಹೊತ್ತಲ್ಲದ ಹೊತ್ತಿನಲ್ಲಿ ಹರೆಯ ಬಂದವರಂತೆ ಅವರ ಬೆನ್ನ ಹಿಂದೆ ಅಲೆದುದಕ್ಕೋ ಏನೋ ಇದ್ದಕ್ಕಿದ್ದಂತೆ ಕಾಲು ಗಂಟು ನೋವು ಪ್ರಾರಂಭವಾಯಿತು. ಅದು ನೋವು ಎಂದರೆ ಅಂತಿಂತದಲ್ಲ.. ಕಾಲೆತ್ತಿ ಇಡುವುದೇ ನರಕಯಾತನೆಯಾಯಿತು. ಇದರಿಂದಾಗಿ  ನನ್ನ ಬಸ್ಸು ಪ್ರಯಾಣ  ನಿಂತೇ ಹೋಯಿತು. 

ಸುಮಾರು ಎರಡು ಮೂರು ವರ್ಷಗಳೇ ಉರುಳಿತ್ತು ನಾನು ಮನೆಯಿಂದ ಅಲುಗಾಡದೇ.. 

ಆದರೀಗ ಕಾಲು ನೋವಿಗೆ ಕೊನೆಯ ಪರಿಹಾರವಾಗಿ ಆಪರೇಷನ್ ಸೂಕ್ತ ಎಂದು ಹೇಳಿದ್ದರಿಂದ ದೊಡ್ಡಾಸ್ಪತ್ರೆಗೆ ಸೇರಿ ರೂಮ್ ನಂ. 302 ರ ಖಾಯಂವಾಸಿಯಾಗಿಯೇ ಎರಡು ತಿಂಗಳು ಕಳೆದಿತ್ತು. ಈಗ ಡಾಕ್ಟರು ಪ್ರತಿದಿನ ಕಾರಿಡಾರಿನಲ್ಲೇ ನಿಧಾನಕ್ಕೆ ನಡೆದಾಡಬೇಕೆಂದು ಸೂಚಿಸಿದ ಕಾರಣ ನಾನು  ಮಲಗಿ ಬೇಸರಾದಾಗ ಅದನ್ನೇ ಮಾಡುತ್ತಿರುತ್ತೇನೆ. 
ಆ ದಿನವೂ ಅತ್ತಿತ್ತ ಠಳಾಯಿಸುತ್ತಾ ಇರಬೇಕಾದರೆ ಅವಳನ್ನು ಕಂಡದ್ದು. ತುಂಬಿದ ಬಸುರಿಯನ್ನು ಸೀದಾ ನನ್ನೆದುರಿದ್ದ ಲೇಬರ್ ರೂಮಿಗೆ ಕರೆದೊದ್ದರು. ನನಗೂ ಈ ಆಸ್ಪತ್ರೆಯಲ್ಲಿ ಈ ಲೇಬರ್ ರೂಮಿನ ಎದುರು ನಡೆದಾದುವುದೆಂದರೆ ಅತಿ ಪ್ರಿಯ. ಅಲ್ಲಿನ ಕಾತರತೆ, ಹೊಸ ಜೀವದ ಸ್ವಾಗತಕ್ಕೆ ಸಂಭ್ರಮದ ಸಿದ್ದತೆ, ಕೆಲವೊಮ್ಮೆ ನಿರಾಸೆ. ಇದೆಲ್ಲವನ್ನೂ ನನ್ನ ಅಳತೆಯಲ್ಲಿ ಅಳೆಯುವುದು ನನಗೆ ಪ್ರಿಯವಾಗಿತ್ತು. ಮತ್ತೂ ಒಂದು ಗುಟ್ಟಿನ ವಿಷಯವೆಂದರೆ ಈ ಆಸ್ಪತ್ರೆಯ ಕ್ಯಾಂಟೀನಿನ ಒಂದೇ ರುಚಿಯ ನೀರು ಬಣ್ಣದ ಸಾರು, ಮೆಣಸಿನ ಬಣ್ಣದ ಸಾಂಬಾರು ಎಂಬ ಮತ್ತೊಂದು ನೀರು ಇದನ್ನೇ ತಿಂದು ತಿಂದು ಬಾಯಿ  ರುಚಿ ಸತ್ತಿರುವಾಗ  ಈ ವಾರ್ಡಿನ ಎದುರು  ಹೆಚ್ಚಾಗಿ  ಹೊಸ ಜೀವ ಹುಟ್ಟಿದ ಸಂತಸಕ್ಕಾಗಿ ಜನರು ಹಂಚುತ್ತಿದ್ದ ಲಾಡು, ಮೈಸೂರ್ ಪಾಕ್, ಪೇಡೆಗಳೇ ನನ್ನ ಜಿಹ್ವೆಯನ್ನು ಜೀವಂತವಿಡುತ್ತಿದ್ದುದು. 

ಆ ದಿನ ನನ್ನ ಕಣ್ಣುಗಳಿಗೆ ಇನ್ನೂ ಒಂದು  ಅಚ್ಚರಿ ಕಾದಿತ್ತು. ಅದೇ ಬಸ್ಸಿನ ಯುವಕ ಲೇಬರ್ ವಾರ್ಡಿನ ಹೊರಗೆ ಮುಖ ಕಿವುಚಿಕೊಂಡು  ಅತ್ತಿತ್ತ ಸುಳಿದಾಡುತ್ತಿದ್ದ. ಸ್ವಲ್ಪ ಹೊತ್ತಿನಲ್ಲಿ ಗೋಡೆಯ ಮೇಲೆ ಉರಿದ ಹಸಿರು ಲೈಟಿನ ಕೆಳಗಿನ ಬಾಗಿಲಿಗೆ ಎರಗಿ ಒಳಗಿನ ಪಲಿತಾಂಶಕ್ಕಾಗಿ ಕಾದು ನಿಂದ. ನರ್ಸೊಬ್ಬಳು ಇಣುಕಿ ಇವನ ಮುಖ ನೋಡಿ ನಗುತ್ತಾ 'ಹೆಣ್ಣು ಮಗು' ಎಂದು ಹೇಳಿ ಬಾಗಿಲು ಮುಚ್ಚಿಕೊಂಡಳು. ನಿಂತಲ್ಲೇ ಕುಪ್ಪಳಿಸಿದ. ಅವನು ಮೊದಲೇ ಕೈಯಲ್ಲಿ ಹಿಡಿದಿದ್ದ ದೊಡ್ಡ ಡಬ್ಬದಿಂದ ಸೋನ್ ಪಾಪ್ಡಿ ಹಂಚತೊಡಗಿದ.ನನ್ನ ಕೈಗೂ ಒಂದು ತುಂಡು ಬಿದ್ದಿತು. ಅದರ ನವಿರಾದ ಎಳೆಗಳನ್ನು ಆಸ್ವಾದಿಸುತ್ತಾ  ಈ ಸೋನ್ ಪಪ್ಡಿಯನ್ನು ಯಾರು ಕಂಡು ಹಿಡಿದರಪ್ಪಾ ಎಂದು ಅಚ್ಚರಿ ಪಡುತ್ತಾ  ಆಲೋಚಿಸುತ್ತಿರುವಾಗಲೇ ಆ ಯುವಕ ದೂರಕ್ಕೆ ನಡೆದು ನನ್ನ ಕಣ್ಣಿಂದ ಮರೆಯಾದ. 

ಮತ್ತೊಮ್ಮೆ ಲೇಬರ್ ವಾರ್ಡ್ ಬಾಗಿಲು ತೆರೆಯಿತು. ಹೊರಗೆ ನಿಂತಿದ್ದವರು ಎದ್ದು ಬಾಗಿಲ ಬಳಿ ನಿಂತರು.  ಆ ಹುಡುಗಿಯನ್ನು ಸ್ಟ್ರೆಚರಿನಲ್ಲಿ ಮಲಗಿಸಿ ಹೊರಗೆ ಕರೆತರುತ್ತಿದ್ದರು. ಅವಳ ಜೊತೆ ಇದ್ದವರಾರೋ ನನ್ನ ಕೈಗೆ ಮೋತೀ ಚೂರ್ ಲಡ್ಡೊಂದನ್ನು ತುರುಕಿ 'ಗಂಡು ಮಗು' ಎಂದರು. 

ಅವಳನ್ನು ರೂಮ್ ನಂ. 337 ಕ್ಕೆ ಕರೆದೊಯ್ದರೆ ಅವನು ರೂಂ. ನಂ. 372ರಲ್ಲಿ ಕಾಯುತ್ತಾ ನಿಂತಿದ್ದ. 

-- 

Sunday, April 20, 2014

ಆಪರೇಷನ್ ಸ್ಪೈಡರ್



ಮನೆಯೊಳಗೆ ಕುಳಿತು ಮಾಡಲೇನೂ ಕೆಲಸವಿಲ್ಲದ್ದರೆ ನಾನು ಜೇಡನ ಬಲೆಯನ್ನು ಹುಡುಕಿಕೊಂಡು ಹೊಸ ಆಟ ಆಡಲು ಹೊರಡುತ್ತೇನೆ.ಇದು ನಾನು ಮತ್ತು ಜೇಡ ಮಾತ್ರ ಆಡುವ ಆಟ. ಈ ಆಟ ಕೂಡಾ ಕುತೂಹಲದ್ದೇ .. ಸುಮ್ಮನೆ ನೆಲದಲ್ಲಿ ಬಿದ್ದಿದ್ದ ತರಗೆಲೆಯನ್ನು ಜೇಡನ ಬಲೆಗೆ ಎಸೆದು ಸ್ವಲ್ಪ ಅಲುಗಾಡಿಸುವುದು. ಕೂಡಲೇ ಅಲ್ಲಿಗೆ ಜೇಡ ಬಂದು ಬಲೆಯೊಳಗೆ ಸಿಕ್ಕಿದ ಎಲೆಯನ್ನು ಪ್ರಾಣಿಯೆಂದು ತಿಳಿದು ಹಿಡಿದು ಅಮುಕಿ ಸಾಯಿಸಲು ಹೊರಡುತ್ತದೆ. 


 ಅದು ತನ್ನ ಆಹಾರವಲ್ಲ ಎಂದು ತಿಳಿದಾಗ ಅದು ಮಾಡುವ ಕೆಲಸ ಇದೆಯಲ್ಲ ಅದು ನಿಜಕ್ಕೂ ಅಚ್ಚರಿ ತರುವಂತಹದ್ದು. ಮೆಲ್ಲನೆ ಎಲೆಯ ಸುತ್ತಲೂ ಸುತ್ತಿ ತನ್ನ ಬಲೆಯ ಎಳೆ ಕಡಿಯದಂತೆ ಅದನ್ನು ನಾಜೂಕಾಗಿ ಬೇರ್ಪಡಿಸುತ್ತಾ ಹೋಗುತ್ತದೆ. ಎಲ್ಲಾ ಬಂಧಗಳನ್ನು ಕಳಚಿಸಿ ನೆಲಕ್ಕೆ ಬೀಳಿಸುತ್ತದೆ. ಮತ್ತೆ ತನ್ನೆಲ್ಲಾ ಗಡಿ ರೇಖೆಗಳಿಗೆ ಒಂದು ವಿಸಿಟ್ ಕೊಟ್ಟು ಎಲ್ಲೂ ಏನೂ ಕಸಗಿಸ ಇಲ್ಲ ಅಂತ ಚೆನ್ನಾಗಿ ನೋಡಿಕೊಂಡು ಯಾವುದೋ ಒಂದು ನೂಲೇಣಿ ಹಿಡಿದು ಮೇಲಕ್ಕೇರಿ ಅಡಗಿ ಕುಳಿತುಕೊಳ್ಳುತ್ತದೆ. ಹೀಗೆ ಆಡಲು ನನಗೂ ಮಿಸ್ಟರ್ ಕ್ಲೀನಪ್ಪ ಜೇಡನಿಗೂ ಬೇಸರ ಎಂಬುದೇ ಇಲ್ಲ. 

ಆದರೆ ಇವತ್ತು ನಾನು ಅದರ ಬಲೆಯ ಹತ್ತಿರ ಹೋಗುವಾಗಲೇ ಒಂದು ಅನಾಹುತ ನಡೆದೇ ಹೋಗಿತ್ತು. 'ಪಾತರಗಿತ್ತಿ ಪಕ್ಕ ನೋಡಿದ್ಯೇನೆ ಅಕ್ಕಾ..' ಅಂತ ನನ್ನ ಬಗ್ಗೆಯೇ ಹಾಡು ಬರೆದಿದ್ದು ಅಂತ ಆ ಚಿಟ್ಟೆ ಜಂಬದಲ್ಲೆ ತಲೆಯೆತ್ತಿ ಆಗಸದತ್ತಲೇ ಮೊಗ ಮಾಡಿ ಹಾರುತ್ತಿತ್ತೋ ಏನೋ..ಅರೆಕ್ಷಣದ ಚಂಚಲತೆ ಸಾಕಿತ್ತು ಬಲಿಯಾಗಲು ..  ಪಕ್ಕನೆ ಬರಿಗಣ್ಣಿಗೆ ಕಾಣದ ಸೂಕ್ಷ್ಮವಾದ ಬಲೆಯೊಳಗೆ ಸಿಕ್ಕಿಯೇ ಬಿಟ್ಟಿತು. ಅಂಟಂಟು .. ಇಬ್ಬೀ.. ಕೊಳಕು.. ಎಂದೆಲ್ಲಾ ಯೋಚಿಸುತ್ತಾ ಬಿಡಿಸಿಕೊಳ್ಳಲು ಅತ್ತಿತ್ತ ಹೊಯ್ದಾಡಿತು. ಇಷ್ಟೇ ಸೂಚನೆ ಸಾಕು ಆ ಬೇಟೆಗಾರನಿಗೆ ತನ್ನ ಬಲೆಯೊಳಗೆ ಮಿಕವೊಂದು ಸಿಕ್ಕಿಬಿದ್ದಿದೆ.. ಇನ್ನೇನಿದ್ದರೂ ಭೂರಿ ಭೋಜನದ ಸಂಭ್ರಮ ಎಂದು ತಿಳಿದುಕೊಳ್ಳಲು.. 

ಮತ್ತಿನ ಕ್ಷಣದಲ್ಲೇ  ಬಲವಾದ ಎಂಟು ಕಾಲು, ವಿಕಾರ ಮೊಗ ಹೊತ್ತ ಆ ರಕ್ಕಸ ಬಂದೇ ಬಿಟ್ಟ. ತಪ್ಪಿಸಿಕೊಳ್ಳಲು ಒಂದಿಷ್ಟೂ ಸಮಯವಿಲ್ಲ. ಎಲ್ಲಾ ಎಷ್ಟು ಪಕ್ಕಾ ಲೆಕ್ಕಾಚಾರ ಎಂದರೆ ಅವೆಲ್ಲಾ ಕ್ಷಣಗಳಲ್ಲೇ ನಡೆದುಬಿಡುವಂತಹವುಗಳು.


ಬಂದದ್ದೇ ತನ್ನ ಬಲವಾದ ಕಾಲುಗಳಲ್ಲಿ ಚಿಟ್ಟೆಯನ್ನು ಹಿಡಿದಿಟ್ಟು ಅದರ ಅಲುಗಾಟ ನಿಲ್ಲುವವರೆಗೆ ಅದನ್ನು ಕಚ್ಚಿ ಹಿಡಿಯಿತು. ಎಲ್ಲಾ ಮುಗಿಯಿತು ಎಂದು ನಿಶ್ಚಯವಾದ ಕೂಡಲೇ ಆದನ್ನಲ್ಲೇ ಬಿಟ್ಟು ಮತ್ತೊಂದು ಸಲ ಅತ್ತಿತ್ತ ಅವಲೋಕನ ಮಾಡಿತು. ಮತ್ತೆ ಚಿಟ್ಟೆಯ ಕಳೇಬರದ ಕಡೆ ಸುಳಿದಾಡಿತು.ಇನ್ನೇನಿಲ್ಲಾ ಆಹಾರ ಸಿಕ್ಕಿದಲ್ಲಿಗೆ ಕಥೆ ಮುಗಿಯಿತು ಅಂದುಕೊಳ್ಳಬೇಡಿ. ಅದಕ್ಕೆ ಮಾಡಲಿಕ್ಕೆ ಇನ್ನೂ ಎಷ್ಟೊಂದು ಕೆಲಸವಿತ್ತು ಗೊತ್ತಾ? 



 ಯಾಕೆಂದರೆ ಕೂಡಲೇ ಅದನ್ನು ತಿಂದು ತೇಗಲು ಹಸಿವಿರಲಿಲ್ಲವೋ ಏನೋ..ಹಾಗೆಂದು ಅದನ್ನು ಅಲ್ಲಿಯೇ ಬಿಟ್ಟು ಹೋದರೆ ಸುರಕ್ಷಿತವಾಗಿರುತ್ತದೆ ಎಂಬ ಧೈರ್ಯ ಎಲ್ಲಿಯದು. ಹಾಗಿದ್ದರೆ ಅದನ್ನು ಕಟ್ಟಿಡಬೇಕು. ಇಲ್ಲವೇ ಮುಚ್ಚಿಡಬೇಕು.ಅದಕ್ಕೆ  ನಮಗೆಲ್ಲ ಸಿದ್ಧವಾದ ಬ್ಯಾಗುಗಳು ಸಿಗುತ್ತವೆ. ಆದರೆ ಜೇಡ   ಮಾರ್ಕೆಟ್ಟಿಗೆ ಹೋಗಿ  ಚಿಟ್ಟೆ ಹಾಕಲಿಕ್ಕೆ ಒಂದು ಚೀಲ ಕೊಡಿ ನೋಡುವಾ ಅಂತ ಬ್ಯಾಗ್ ತರಲಿಕ್ಕಾಗುತ್ತಾ... ಇಲ್ಲವಲ್ಲ. ಅದಕ್ಕೂ ಜೇಡನ ಬಳಿ ಉಪಾಯವಿದೆ ನೋಡಿ.
ಅಗಲಕ್ಕೆ ಹರಡಿದಂತೆ ಸಿಕ್ಕಿ ಬಿದ್ದಿದ್ದ ಚಿಟ್ಟೆಯ ರೆಕ್ಕೆಗಳನ್ನು ಮೆಲ್ಲನೆ ಬಿಡಿಸಿಕೊಂಡಿತು. ಈಗ ಅದರ ದೇಹದ ಭಾಗ ಮಾತ್ರ ಬಲೆಗೆ ಅಂಟಿಕೊಂಡಿತ್ತು. ಕೆಲವೊಮ್ಮೆ ಹೀಗೆ ಮಾಡುವಾಗ ತೂಕ ಹೆಚ್ಚಾಗಿದ್ದ ದೇಹವಾದರೆ ಪಕ್ಕನೆ ಬಿದ್ದು ಬಿಡುತ್ತದೆ. ಆಗ ಜೇಡ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ನಿರಾಸೆಯಲ್ಲಿ ಮತ್ತೆ ಆಹಾರಕ್ಕಾಗಿ ಕಾಯಬೇಕಾಗುತ್ತದೆ. ಆದರೆ ಇದು ಹಾಗಾಗಲಿಲ್ಲ. ರೆಕ್ಕೆಗಳ ಸುತ್ತ ಹೋಗಿ ಬಂದು ತನ್ನ ಅಂಟಿನಿಂದ ಅದನ್ನು ಹತ್ತಿರ ತಂದಿತು. ಎಷ್ಟು ಹತ್ತಿರ ಎಂದರೆ ಚಿಟ್ಟೆಯ ದೇಹ ಕಾಣದ ಹಾಗೆ ರೆಕ್ಕೆಗಳು ಅದನ್ನು ಮುಚ್ಚಿ ಹಿಡಿಯುವಷ್ಟು. ನಂತರ ಅದರ ಸುತ್ತ ವೇಗವಾಗಿ ತಿರುಗುತ್ತಾ ಅದನ್ನು ತನ್ನ ಬಲೆಯ ಎಳೆಗಳಲ್ಲಿ ಬಿಗಿಯಾಗಿಸುತ್ತಾ ಹೋಯಿತು. ಈಗ ಅದೊಂದು ಶವ ಪೆಟ್ಟಿಗೆಯಂತೆ ಕಾಣುತ್ತಿತ್ತು. 

ಅದನ್ನು ತನ್ನ ಬಲೆಯ ಗೂಡಿಗೆ ಚೆನ್ನಾಗಿ ಅಂಟುವಂತೆ ಮಾಡಿತೀಗ. ಇಷ್ಟೆಲ್ಲಾ ಕೆಲಸ ಮುಗಿದ ಮೇಲೆ ಮತ್ತೊಮ್ಮೆ ತನ್ನ ಇಡೀ ಬಲೆಯ ನೇಯ್ಗೆಯನ್ನು ಪರಿಶೀಲಿಸಿತು. ಚಿಟ್ಟೆಯ ಒದ್ದಾಟದಿಂದ ಸ್ವಲ್ಪ ಹರಿದು ಹೋಗಿದ್ದ ಬಲೆಯನ್ನೆಲ್ಲಾ ಹೊಸ ಎಳೆಗಳನ್ನು  ಹಾಕುತ್ತಾ ಮೊದಲಿನಂತೆ  ಜೋಡಿಸಿತು. ಈಗ ನನ್ನ ಕಡೆಗೆ ನೋಟ ಬೀರುತ್ತಾ ಹೇಗೆ ನನ್ನ ಕೆಲಸ ಎಂದು ಕೇಳಿದಂತೆ ಬಾಸವಾಯಿತು. ನಾನು ಅದಕ್ಕೆ ತಂಬ್ಸ್ ಅಪ್ ಎಂದು ತೋರಿಸಿದೆ. 

ಚಿಟ್ಟೆಯ ಸಾವಿಗೆ ಮನಸ್ಸಿಗೆ ಒಂದು ಕ್ಷಣ ಬೇಸರವಾದರೂ ಜೇಡನ ಆಹಾರವಲ್ಲವೇ ಅದು ಎಂದೆನಿಸಿತು. ಆಹಾರ ಪದ್ದತಿ ಬೇರೆ ಬೇರೆ ಇರಬಹುದು.  ಹಸಿವು ಎಂಬುದು ಎಲ್ಲರಿಗೂ ಒಂದೇ ಸಮನಾದುದು ತಾನೇ? ಅದು ಅದರ ಬೇಟೆಯಾಡುವ ಕ್ರಮ. ಚಿಟ್ಟೆಯಲ್ಲದಿದ್ದರೆ  ಇನ್ನೇನೋ.. ಪ್ರಕೃತಿ ಅವುಗಳಿಗೆ ಅವುಗಳದ್ದೇ ನಿಯಮಗಳನ್ನು ಇರಿಸಿದ್ದಾಳೆ. ಮನುಷ್ಯನಂತೆ ಪ್ರಾಣಿಗಳು ಎಂದೂ ಅವುಗಳನ್ನು ಅತಿಕ್ರಮಿಸಲಾರವು. ಅಷ್ಟಲ್ಲದೇ ಹೇಳುತ್ತಾರೆಯೇ..?  ಕೊಂದ ಪಾಪ ತಿಂದು ಪರಿಹಾರ..!! ಹೊತ್ತಿನ ಪರಿವೆಯೇ ಇಲ್ಲದೆ ಅದರ ಬೇಟೆಯ ಕ್ರಮವನ್ನು ನೋಡುತ್ತಾ ನಿಂತುಬಿಟ್ಟಿದ್ದೆ. ನನ್ನ ಹೊಟ್ಟೆಯೂ ಹಸಿವಾಗಿದೆ ಎಂದು ಸೂಚಿಸುತ್ತಿತ್ತು. ಮೆಲ್ಲನೆದ್ದು ಮನೆಗೆ ಹೊರಟೆ.

Tuesday, March 25, 2014

ದಾಖಲು

ಮೊಣಕೈಯಲ್ಲಿಳಿಯುವ ಬಣ್ಣದ 
ನೀರನ್ನು ನೆಕ್ಕುತ್ತಾ 
ಹಿಡಿದ ಕ್ಯಾಂಡಿಯ ಕರಗಿಸುವ ಪೋರ
ಸರಬರ ನೆರಿಗೆ ಸದ್ದಿನೊಂದಿಗೆ
 ಬಿಸಿಲ ಕೋಲಿಗೆ
ಕೈ ಅಡ್ಡ ಹಿಡಿದೋಡುವ ಯುವತಿ
ಸಿಕ್ಕ ಸಿಕ್ಕಲ್ಲೆಲ್ಲಾ ಮೂಸುತ್ತಾ
ತನ್ನ ಗಡಿ ಅಳೆಯುವ ನಾಯಿ
ಅಂಗಡಿಯ ಅಗ್ಗದ ಸರ 
ಕೊಳ್ಳಲಾಗದ ಅಸಹಾಯಕತೆಗೆ
ರಚ್ಚೆ ಹಿಡಿದ ಮಗಳ
ಬೆನ್ನಿಗೆ ಬಡಿಯುವ ತಾಯಿ
ನಾವು ಜಗತ್ತನ್ನು ಹತ್ತಿರವಾಗಿಸುತ್ತಿದ್ದೇವೆ
ಎಂಬ ಘೋಷ ವಾಕ್ಯದ ಫಲಕ
ಕೈ ಕೈ ಹಿಡಿದು 
ನಡೆವ ಜೋಡಿಯ ಕನಸು 
ಉಡುಪಿನ ಕನ್ನಡಿಯಲ್ಲಿ ಮೂಡಿದ 
ನರೆ ಬಿಂಬವ ಕಂಡ ಮುದುಕ
ಉದುರಿಸುವ ಎಲೆ ಹೊತ್ತ 
ಮರದ ಹಕ್ಕಿಯ ಕಂಬನಿ
ಎಲ್ಲವೂ ದಾಖಲಾಗುತ್ತಿತ್ತು
ಮುಚ್ಚಿದ್ದ ಕನ್ನಡಿಯ ಕಾರೊಂದು
ಅರೆಕ್ಷಣ ನಿಂತಿದ್ದಾಗ 
ಅವಳು ಕಣ್ತೆರೆದಿದ್ದರೆ ... 
-- 

Friday, March 21, 2014

ಹಸಿವು


ಅಧಿಕಾರದ ಹಸಿವು ಹೊತ್ತವರು
ಬಿದ್ದವರ ಬೆನ್ನ ಮೇಲೆ
ಅಂಬಾರಿ ಏರಿಸಿ ಕುಳಿತರು
ನೋಡಿದವರು ಜಯವೆಂದರು

ಕಾಮದ ಹಸಿವು ಹೊತ್ತವರು 
ಕಕ್ಕುಲಾತಿಯ ಮರೆತು 
ಮಗಳು ಬಿಕ್ಕಿದರೂ ಬಿಡಲಿಲ್ಲ
ಬೆತ್ತಲಾಗಿದ್ದವಳ ತಪ್ಪೆಂದರು 

ಹೊಟ್ಟೆಯ ಹಸಿವು ಹೊತ್ತವರು 
ಕಣ್ಣಲ್ಲೇ ರಕ್ತ ಹರಿಸಿದರೂ
ಎಂದೂ ಮುಗಿಯದ ಹಾಡಿದೆಂದು 
ಜನ ಕಿವಿಗಳನು ಮುಚ್ಚಿದರು 

Monday, February 24, 2014

ಮಂಡೋದರಿ.




ಹೆಣ್ಣಿನ ಬಾಳೆಷ್ಟು ವಿಚಿತ್ರ. ಬದುಕು ಮುಗಿಯುವವರೆಗೆ ಹೋರಾಟ.ಗೆದ್ದರೆ ಕಳೆದುಕೊಳ್ಳುವ ಭಯ. ಹಾಗಾಗಿಯೇ ಏನೋ...  ಸೋಲದಿದ್ದರೂ ಎಲ್ಲೂ ಗೆಲ್ಲುವಂತಿಲ್ಲ.ದಶಕಂಠ ಎಂಬ ಹೆಸರು ಕೇಳದವರುಂಟೇ ಈ ಜಗದಲ್ಲಿ.. ಅವನ ಜಾಣ್ಮೆ,  ಬಾಹುಗಳ ಅದ್ಬುತ ಶಕ್ತಿ, ಅಪೂರ್ವ ದೈವಭಕ್ತಿ, ಎಲ್ಲವೂ ಅವನನ್ನು ಹಾಗೆ ಕರೆಯುವಂತೆ ಮಾಡಿತ್ತು. ಅಷ್ಟೇಕೆ ಮೂರುಲೋಕಗಳನ್ನು ಕೇವಲ ತನ್ನ ನಾಮ ಮಾತ್ರದಿಂದಲೇ ನಡುಗಿಸಬಲ್ಲಂತಹ ಸಾಮರ್ಥ್ಯಿಕೆ ಹೊಂದಿದ್ದವ ನನ್ನವ. ನಾನೇನು ಕಡಿಮೆ ಇದ್ದೆನೇ? ನನ್ನ ಸೌಂದರ್ಯದ ವರ್ಣನೆ ಎಲ್ಲರ ನಾಲಿಗೆಯಲ್ಲಿ ಸಿ"ತಿಂಡಿಯಂತೆ ಜಗಿದಾಡಲ್ಪಡುತ್ತಿತ್ತು. ಹೆತ್ತವರ ಹೆಮ್ಮೆಯೇ ಆಗಿದ್ದ ಮುತ್ತಿನ ಚೆಂಡಿನಂತಹ ಮೂರು ಲೋಕೋತ್ತರ ಶೂರ ಕುವರರನ್ನು ಹೊತ್ತು ಹೆತ್ತ ಗರ್ಭ ನನ್ನದು.ಅಪಾರ ಸಂಪತ್ತು ಹೊಂದಿದ ಲಂಕಾ ಪಟ್ಟಣದ ಮಹಾರಾಣಿ. ಮಂಡೋದರಿ ಎಂದರೆ  ರಾವಣನಿಗೆ ತಕ್ಕ ಮಡದಿ ಎಂದು ಹರಸಿ ಹಾರೈಸುತ್ತಿದ್ದ ರಕ್ಕಸ ಕುಲದವರು. ಓಹ್.. ಬದುಕಿನಲ್ಲಿ ಇದಕ್ಕಿಂತ ಮಿಗಿಲೇನಾದರೂ ಇದೆಯೇ..  ನಾನೂ ಅದೇ ಭ್ರಮೆಯಲ್ಲಿ ಮುಳುಗೇಳುತ್ತಿದ್ದೆ. 

ಒಂದು ಹಂತದಲ್ಲಿ ಎಲ್ಲವನ್ನೂ ಹೊಂದಿದ ತೃಪ್ತ ಭಾವವನ್ನೇ ಮೆಲುಕು ಹಾಕುತ್ತಾ ತಟಸ್ಥಳಾದಾಗಲೇ ಆತ ಹೊಸ ಅನುಭವಕ್ಕಾಗಿ ಬಲೆ ಬೀಸತೊಡಗಿದ್ದ.. ಹಾಗೆಂದು ರಾವಣನ ಒಳ್ಳೆಯ ಗುಣಗಳ ಬಗ್ಗೆಯೂ, ಹೆಣ್ಣು ಕಂಡಾಗ ಕಣ್ಣು ಹಾಕುವ ಕಾಮುಕ ಗುಣಗಳ ಬಗ್ಗೆಯೂ ತಿಳಿಯದವಳಲ್ಲ.ತಿಳಿದೂ ಸುಮ್ಮನಿದ್ದೆ.ಯಾಕೆಂದರೆ ಹೆಣ್ಣು ಒಲಿದೋ, ಬೆದರಿಕೆಗೆ ಮಣಿದೋ ತಾನೇ ತಾನಾಗಿ ವಶಳಾಗದ ಹೊರತು ಇವನು ಬಲತ್ಕಾರವಾಗಿ  ಹೆಣ್ಣನ್ನು ಕೆಡಿಸಲಾರ. ಇದು ನನಗೆ  ಗೊತ್ತಿದ್ದ ಸತ್ಯವೇ ಆಗಿತ್ತು. ವೇದಾವತಿಯನ್ನು ಕೆಣಕಿ ಅವಳನ್ನು ಕೆಡಿಸಲು ಹೋದಾಗ ಅವಳು ವಶಳಾಗದೇ ಅಗ್ನಿಯಲ್ಲಿ ಬೆಂದು ದಗ್ಧಳಾಗುವ ಮೊದಲು 'ಹೆಣ್ಣನ್ನು ಅವಳ ಇಚ್ಚೆಗೆ "
ವಿರುದ್ಧವಾಗಿ  ಮುಟ್ಟಿದರೆ ನೀನು ಸತ್ತು ಹೋಗುತ್ತೀಯ' ಎಂದು ಶಪಿಸಿದ್ದಳಂತೆ. ಮರಣ ಭಯ ಎಂಬುದು ಕತ್ತಿಯ ಮೊನೆಗೆದುರಾಗಿ ನಿಂದಂತೆ.. ಸ್ವಲ್ಪ ಎಚ್ಚರ ತಪ್ಪಿದರೂ ಇರಿಯುವ ಹೆದರಿಕೆ.. ಅವನಿಗೆ ಸಿಕ್ಕ ಶಾಪ ನನ್ನ ಪಾಲಿನ ವರವಾಗಿತ್ತು. ಹಾಗಾಗಿಯೇ ಅವನು ತಪ್ಪು ಹಾದಿ ತುಳಿಯಲಾರ ಎಂದು ಹೆಚ್ಚೇ ನಂಬಿಬಿಟ್ಟಿದ್ದೆನೇನೋ.. 

ಅಂದಿನದ್ದು ಗಾಳಿಯಲೆಯ  ಸಣ್ಣ ಅಲುಗಾಟವೆಂದುಕೊಂಡಿದ್ದೆ. ಆದರೆ ಮರದ ಬೇರಿಗಾಗಲೇ ಗೆದ್ದಲು ಹಿಡಿದಿದ್ದು ನನ್ನರಿವಿಗೆ ಬರಲೇ ಇಲ್ಲ..

ತುಂಬಿದ ಸಭಾಭವನಕ್ಕೆ ನೆತ್ತರು ಸುರಿವ ಮೋರೆಯಲ್ಲಿ ಬಂದು ನಿಂದಿದ್ದಳು ಶೂರ್ಪನಖಿ..  ಅವಳದ್ದೇನಿತ್ತು ತಪ್ಪು.. ರಾಮನಿಗೆ ಮನಸೋತದ್ದೇ..? ಆತ ಒಪ್ಪದಾಗ ಲಕ್ಷ್ಮಣನ ಬಳಿ ಸಾಗಿದ್ದೇ..? ತುಂಬು ಹರೆಯದಲ್ಲಿ ಪತಿಯನ್ನು ಕಳೆದುಕೊಂಡವಳವಳು.. ಕಳೆದುಕೊಂಡದ್ದೇನು.. ರಾವಣನೇ ಕೊಂದದ್ದು. ಅಪರೂಪದ ಪರಾಕ್ರಮಿಯಾಗಿದ್ದ ವಿದ್ಯುಜ್ಜಿಹ್ವನ   ಪರಾಕ್ರಮವೇ ಆತನಿಗೆ ಮುಳ್ಳಾಯಿತು. ಎಂದಾದರೊಂದು ದಿನ ಅವನಿಂದ ತನ್ನ ಸ್ಥಾನಕ್ಕೆ, ಹಿರಿಮೆಗೆ ಚ್ಯುತಿ ಬಂದೀತೆಂದು  ಯುದ್ಧದಲ್ಲಿ ಶತ್ರುಸೇನೆಗೆ ಸಹಾಯ ಮಾಡಿದನೆಂಬ ಆರೋಪದಿಂದ ರಾವಣನೇ ಕೊಂದ ಅವನನ್ನು.. ರಾಜಕೀಯದ ಪಗಡೆಯಲ್ಲಿ ಶೂರ್ಪನಖಿ ಎಲ್ಲವನ್ನೂ ಕಳೆದುಕೊಂಡು ಹೊರಬಿದ್ದಿದ್ದಳು. ಅವಳದ್ದು ರಕ್ಕಸ ನೆತ್ತರೇ ತಾನೇ.. ಅವಳ ಕೋಪ ಬುಗಿಲೇಳದಂತೆ ಖರ, ದೂಷಣ, ತ್ರಿಶಿರಸ್ಸು ಸಹಿತ ಹದಿನಾಲ್ಕು ಸಾವಿರ ಸೇನೆಯೊಡನೆ ಅವಳನ್ನು ದಂಡಕಾರಣ್ಯದಲ್ಲಿರುವಂತೆ ರಾವಣನೇ ಕಳುಹಿದ್ದ.ಅಲ್ಲಿ ಅವಳದ್ದೇ ಆಡಳಿತ. ಎಲ್ಲ ಸರಿ ಆಯಿತು ಎಂದುಕೊಂಡು ಪುಟ ಮಗುಚಿದರೆ ಹೊಸ ಹಾಳೆಯ ಕಥೆ ಬೇರೆಯೇ ಆಗಿತ್ತು.

ಅವ  ರಾಮನಂತೆ. ಅವನ ತಮ್ಮ ಮತ್ತು ಮಡದಿಯೊಂದಿಗೆ ವನವಾಸದಲ್ಲಿದ್ದ ಅರಸು ಕುಲದವರವನು.ಕಾಡಿನ ಪರ್ಣಕುಟಿಯಲ್ಲಿದ್ದ ಅವರು ಶೂರ್ಪನಖಿಯ ಕಣ್ಣಿಗೆ ಬಿದ್ದಿದ್ದು ಈ ಎಲ್ಲಾ ಘಟನೆಗಳಿಗೆ ಮೂಲವಾಯ್ತು. ಮೋಹಪರವಶೆಯಾದ ಶೂರ್ಪನಖಿ ಏಕಪತ್ನೀವೃತತ್ಸನಾದ  ರಾಮನನ್ನು ಪಡೆಯುವ ಆತುರದಲ್ಲಿ  ಸೀತೆಯನ್ನು ನುಂಗಹೊರಟಿದ್ದು ತಪ್ಪಿರಬಹುದೇನೋ.. ಆದರೆ ಅದಕ್ಕಾಗಿ ಸಿಕ್ಕ ಶಿಕ್ಷೆಯಾದರೂ ಎಂತಹದ್ದು... ಹೆಣ್ಣು ತನ್ನ ರೂಪವನ್ನು ಕೊನೆಗಾಲದವರೆಗೂ ಜತನದಿಂದಲೇ ಕಾಪಾಡುವ ಆಸೆ ಹೊತ್ತವಳು. ಒಂದಿಷ್ಟು ಕೂದಲು ಕೆದರಿದರೂ, ಕಣ್ಣ ಕಾಡಿಗೆ ಚದುರಿದರೂ ಅದನ್ನು ಸರಿ ಪಡಿಸಿಕೊಳ್ಳದೇ ಯಾರೆದುರೂ ಸುಳಿದಾಡಳು.. ಅಂತಹ ಹೆಣ್ಣಿನ ಕಿವಿ  ಮೂಗುಗಳನ್ನು ಕತ್ತರಿಸಿ ವಿರೂಪಗೊಳಿಸುವುದೇ.. ಅವಳಾದರೂ ಏನು ಮಾಡಿಯಾಳು..ಪಾಪದ ಹೆಣ್ಣು.. ಒಂದರೆಕ್ಷಣವಷ್ಟೇ ಆ ಮರುಕದ  ಭಾವ ನನ್ನೊಳಗಿದ್ದುದು.. ಅದೂ ಅವಳ ಮಾತು ಕೇಳುವವರೆಗೆ..ಅವಳ ರೂಪಿಗೆ ಬಂದ ವಿಕಾರತೆ ಈಗ ಬಂದದ್ದಿರಬಹುದು.. ಆದರೆ ಒಳಗಿನ ವಿಕಾರತೆ ಮೊದಲಿಂದಲೂ ಇದ್ದಿತ್ತಲ್ಲವೇ.. ಇಲ್ಲದಿದ್ದರೆ ಪರ ಪತ್ನಿಯನ್ನು ಅಣ್ಣನೆದುರು ಬಣ್ಣಿಸಿ ಹೇಳಿಯಾಳೇ..

ನನ್ನೊಳಗಿನ ದಂದ್ವ ಸರಿ ತಪ್ಪುಗಳ ವಿವೇಚನೆಯ ಬದಲು ನನಗೆ ಅನುಕೂಲವಾಗುವುದನ್ನೇ ಸರಿ ಎಂದು ಒಪ್ಪಿಕೊಳ್ಳುವತ್ತ ಮನ ಮಾಡಿತೇನೋ.. ಶೂರ್ಪನಖಿಯೇನೂ ದೂರದವಳಾಗಿರಲಿಲ್ಲ. ಅವಳ ವೇದನೆಗೆ ಪರಿಹಾರ ಬೇಕಿತ್ತು..

ಲೋಕದ ಕಣ್ಣಿಗೆ ಮಣ್ಣೆರೆಚುವುದಕ್ಕೆ ರಾವಣನಿಗೆ ಇನ್ನೊಂದು ಅವಕಾಶ ಸಿಕ್ಕಿತು. ಸೀತೆಯ ಸ್ವಯಂವರಕ್ಕೆ ಹೋಗಿ ಶಿವಧನಸ್ಸನ್ನು ಎತ್ತಲಾರದೇ ಬರಿಗೈಯಲ್ಲಿ ಮರಳಿದ ಸೋಲಿನ ನೋವಿಗೆ ಔಷದವಾಗಿ ಗೆದ್ದು ತರಲಾಗದಿದ್ದ ಸೀತೆಯನ್ನು ಕದ್ದು ತರ ಹೊರಟ.ರಕ್ಕಸರೋ ಮಾಯಾವಿಗಳು.. ಬಹು ಬಗೆಯ ರೂಪಧಾರಣೆ ಮಾಡುವುದು ನಮಗೆ ಕರಗತವಾಗಿತ್ತು. ನಾಡಿನಿಂದ ಬಂದ ಸೀತೆ ನಮ್ಮ ಜಾಡನ್ನರಿಯದೇ ಹೋದಳು. ಹೊನ್ನ ಹರಿಣಕ್ಕೆ ಮನಸೋತಳು. ಮಾರೀಚ ರಾಮ ಲಕ್ಷ್ಮಣರನ್ನು ಅವಳಿಂದ ಬಹುದೂರ ಕೊಂಡೊಯ್ದ. ಸನ್ಯಾಸಿಯ ರೂಪಿನಿಂದ ಸೀತೆಯೆದುರು ನಿಂದು ಭಿಕ್ಷೆ ಬೇಡಿದ. ಲಕ್ಷ್ಮಣ ರೇಖೆಯನ್ನು ದಾಟಿ ಬಂದ ಸೀತೆ ರಾವಣನ ವಶವಾದಳು.  ಎತ್ತಿ ಹೆಗಲಿಗೇರಿಸಿಕೊಳ್ಳುತ್ತಿದ್ದ ರಾವಣ.. ಆದರೆ ಪರ ಹೆಣ್ಣನ್ನು ಮುಟ್ಟಬಾರದೆಂಬ ಶಾಪ ಅವನ ಕೈಯನ್ನು ಕಟ್ಟಿ ಹಾಕಿತೇನೋ.. ಅವಳು ನಿಂತಷ್ಟು ನೆಲದ ಸಮೇತ ಅವಳನ್ನು ಪುಷ್ಪಕ ವಿಮಾನಕ್ಕೇರಿಸಿ ನಡೆದ. ಮೋಸದಿಂದ ಜಟಾಯುವನ್ನು ಕೊಂದ. ಸೀತೆಯನ್ನು ತಂದು ಅಶೋಕವನದಲ್ಲಿಟ್ಟ. ಇದೆಲ್ಲ ಸಖಿಯರ ಮೂಲಕ ನನಗೆ ಗೊತ್ತಾಗುವ ಹೊತ್ತಿಗೆ ಸೀತೆಯ ಬಗ್ಗೆ ಇಡೀ ಲಂಕೆ ಮಾತಾಡಿಕೊಳ್ಳುತ್ತಿತ್ತು.  ಅದ್ಯಾರು ಅದಕ್ಕೆ ಅಶೋಕವನವೆಂದು ಹೆಸರಿಟ್ಟರೋ ತಿಳಿಯದು. ಸೀತೆ ಅಲ್ಲಿಗೆ ಬಂದ ಮೇಲೆ ಶೋಕವನ್ನಲ್ಲದೆ ಬೇರೇನನ್ನು ಕಾಣಲಿಲ್ಲ.

ಪ್ರತಿ ದಿನ ನನ್ನ ಪತಿ ಅವಳಲ್ಲಿ ಪ್ರಣಯಾರ್ಥಿಯಾಗಿ ಹೋಗುತ್ತಿದ್ದ.ಧರಿಸುತ್ತಿದ್ದ ಹೊಸ ಹೊಸ ಅರಿವೆಗಳೇನು.. ಮೈ ಕೈಗಳಿಗೆ ಪೂಸುತ್ತಿದ್ದ ಚಂದನಗಂಧಾದಿ ಪರಿಮಳಗಳೇನು.. ದೇಹವನ್ನಲಂಕರಿಸುತ್ತಿದ್ದ ಒಡವೆಗಳ ಬಗೆಯದೇನು.. ಹೋಗುವಾಗ ಹೆಮ್ಮೆಂದ ಎತ್ತಿ ನಡೆಯುತ್ತಿದ್ದ ತಲೆ, ಬರುವಾಗ ಸೋತ  ಕಾಲ್ಗಳನ್ನೇ ನೋಡಿಕೊಂಡು ಬರುತ್ತಿತ್ತು. ನನ್ನ ಪಕ್ಕದಲ್ಲಿ ಮಲಗಿದವನ ಕನವರಿಕೆಯಲ್ಲೆಲ್ಲ ಅವಳದೇ ಹೆಸರು. ನನ್ನೊಳಗೆ ಅಸೂಯೆಯ ಕಿಚ್ಚು ಹೊತ್ತಿ ಉರಿಯುತ್ತಿತ್ತು.  ಅದರೊಂದಿಗೆ ಕೆಟ್ಟ ಕುತೂಹಲವೂ. ನನ್ನವನಂತಹ ಧೀರಾದಿಧೀರನಿಗೆ ಸೋಲದ ಆ ಹೆಣ್ಣು ಹೇಗಿರಬಹುದು.. ನೋಡುವ ಅವಕಾಶವೂ ಬಂದಿತ್ತು. 
ಅವನೊಲುಮೆಗಾಗಿ ಪರಿತಪಿಸುತ್ತಿದ್ದ ನನ್ನ ಆರ್ತನಾದ ಅವನವರೆಗೆ ತಲುಪುತ್ತಲೇ ಇರಲಿಲ್ಲ. ಆದರೆ ಅವಳನ್ನು ಹೊಂದುವ ಆಸೆ ಶುಕ್ಲಪಕ್ಷದ ಚಂದ್ರನಂತೆ ದಿನೇ ದಿನೇ ಏರುತ್ತಲೇ ಹೋಗುತ್ತಿತ್ತು. ಅವನನ್ನು ತೃಣಸಮಾನವೆಂದು ಪರಿಗಣಿಸಿ ಕಡೆಗಣ್ಣ ನೋಟವನ್ನು ಅವನೆಡೆಗೆ ಬೀರದ ಅವಳ ಮೇಲೆ ಅವನಿಗಿನ್ನೂ ಹುಚ್ಚು ವ್ಯಾಮೋಹ.. ಆ ದಿನ ಅದೇಕೋ ಅವನ ಸಹನೆ ಸತ್ತು ಹೋಗಿತ್ತು. ಪ್ರತಿದಿನದಂತೆ ಅವಳ ಬಳಿ ಹೋಗಿದ್ದ ಅವನಿಗೆ ಅವಳ ಹಠ ಕೋಪವನ್ನೆ ತಂದಿತ್ತು. ಖಡ್ಗವನ್ನೆತ್ತಿದ್ದ ಅವಳನ್ನು ತುಂಡರಿಸಲು..  ಹಾಂ..ಅಬಲೆಯಾದವಳನ್ನು ಕೊಂದು ಹಂತಕನಾಗುವುದೇ.. ಛೇ.. ಕೂಡದು..  ಸ್ತ್ರೀ ಹತ್ಯಾ ಪಾಪ ನನ್ನವನ ಹೆಗಲೇರುವುದು ನನಗೆ  ವಿಹಿತವೆನ್ನಿಸಲಿಲ್ಲ. ಎತ್ತಿದ ಕೈಯನ್ನು ನನ್ನ ಕೈಯಿಂದ ತಡೆದೆ. ಉರಿಕೋಪದಲ್ಲಿ  'ಒಂದು ತಿಂಗಳ ಕಾಲಾವಕಾಶದಲ್ಲಿ ನನ್ನವಳಾಗಬೇಕವಳು' ಎಂದು ಅಪ್ಪಣೆ ಮಾಡಿ ಕಾಲನ್ನಪ್ಪಳಿಸುತ್ತಾ ಹೊರ ಹೋದನವ. ಆಗಲೇ ಸೀತೆಯನ್ನು ಕಂಡದ್ದು ನನ್ನ ಕಣ್ಣುಗಳು.. ನನ್ನನ್ನೇ ಕನ್ನಡಿಯಲ್ಲಿ ನೋಡಿಕೊಂಡತ್ತಿತ್ತು. ಯಾವ ತಾಯಿ  ಹಡೆದ ಶಿಶುವೋ ಏನೋ.. ಸ್ತ್ರೀಯಾಗಿ ಹುಟ್ಟಿದ್ದಕ್ಕೆ ಎಷ್ಟೆಲ್ಲ ಕಷ್ಟ ಅವಳಿಗೆ..  ಏನಿದೆ ನನಗೂ ಅವಳಿಗೂ ವ್ಯತ್ಯಾಸ.. ನಾನು ಪರಪತ್ನಿಯ ಹಿಂದೆ ಹೋಗಿ ನನ್ನಿಂದ ದೂರಾಗುತ್ತಿರುವ ರಾವಣನ ಬಗ್ಗೆ ಚಿಂತೆ ಹೊಂದಿದ್ದರೆ, ಅವಳು ಕಣ್ಣಿಗೆ ಕಾಣಲಾರದಷ್ಟು ದೂರವಿರುವ ರಾಮನ ಧ್ಯಾನದಲ್ಲಿ ಮುಳುಗಿದ್ದಳು.

ಅವಳು ಮರಳಿ ರಾಮನನ್ನು  ಸೇರುವುದರಿಂದ ಮಾತ್ರ ನಾನು ನನ್ನವನನ್ನು ಮತ್ತೆ ಪಡೆಯಬಹುದಿತ್ತು.ಆದರೆ ಕುಟಿಲ ಮನಸ್ಸು ಹೊಂದಿದ ರಾವಣನನ್ನು ಬುದ್ಧಿ ಮಾತುಗಳಿಂದ ತಡೆಯಬಲ್ಲೆನೇ.. ವಿವೇಕ, ವಿವೇಚನೆ, ಅಧಿಕಾರ ಎಲ್ಲವೂ ಈ ಮೋಹಭಾವನೆಗಿಂತ ಚಿಕ್ಕದೇನೋ.. ಅವಳಾಗಿ ಒಲಿದು ಬಂದಿದ್ದರೆ ನಾನಾದರು ಏನು ಮಾಡುವವಳಿದ್ದೆ. ಕಿರಿಯವಳು ಎಂದು ಆಧರಿಸಿ ಒಪ್ಪಿಕೊಳ್ಳಲೇಬೇಕಿತ್ತು. ರಾಜನಿಗೆ ಅರಸಿಯರ ಸಂಖ್ಯೆ ಏರಿದಷ್ಟು ಅವನ ಹೆಮ್ಮೆಯ ಕಿರೀಟಕ್ಕೆ ಕುಂದಣಗಳ ಹೊಳಪು ಹೆಚ್ಚಾಗುತ್ತಿತ್ತು. ಗಂಡ ತೃಪ್ತಿಯ ಕೇಕೆ ಹಾಕಿ ನಕ್ಕಷ್ಟು ನನ್ನ ಮನಸ್ಸು ನಗುತ್ತಿತ್ತು. ನಾನು ಮಹಾರಾಣಿಯಾಗಿದ್ದರೂ ಅವನಿಗೆ ವಿದೇಯ ಪತ್ನಿಯಾಗಿದ್ದೆ. 

ಎಲ್ಲ ಅಂದುಕೊಂಡಂತೆ ಆಗುವುದಿದ್ದರೆ ಪ್ರಪಂಚ ಹೀಗಿರುತ್ತಿರಲಿಲ್ಲ.. ಭೋರ್ಗರೆವ ಕಡಲೇ ನಮ್ಮ ಅಭೇದ್ಯ ಕೋಟೆ. ಅತ್ತ ಕಡೆಂದ ಹಾರಿ ಬರಲು ರಾಮನಿಗೇನಾದರು ರೆಕ್ಕೆಗಳಿವೆಯೇ.. ತಿಂಗಳ ಕಾಲಾವಧಿಯನ್ನು ಕ್ಷಣಕ್ಷಣಕ್ಕೂ ಲೆಕ್ಕ ಹಾಕುತ್ತಿದ್ದ ರಾವಣ ಕನಸ ಲೋಕದಲ್ಲಿ ಕಳೆದುಹೋಗುತ್ತಿದ್ದ.. 

ಆಗಲೇ ಮೊದಲ ಬಾರಿಗೆ ರಕ್ಕಸನಲ್ಲದ ಒಬ್ಬ ಮಾಯಾವಿ  ಲಂಕೆಯೊಳಕ್ಕಿಳಿದಿದ್ದು. ಅದೆಂತ ಧೈರ್ಯ, ಎಂತಹ ಸಾಹಸ. ಸೀತೆಯನ್ನು 'ಹೆಗಲೇರು ಹೊತ್ತೊಯ್ದು ನಿನ್ನ ಪ್ರಭುವಿನ ಹತ್ತಿರ ಬಿಡುತ್ತೇನೆ' ಎಂದಿದ್ದನಂತೆ.. ಆದರೆ ಆಕೆಯ ಆತ್ಮವಿಶ್ವಾಸ, ದೃಢ ನಂಬಿಕೆಗೆ ತಲೆದೂಗಲೇಬೇಕು.. 'ರಾಮನೇ ಬಂದು ನನ್ನನ್ನಿಲ್ಲಿಂದ ಕರೆದೊಯ್ಯಲಿ' ಎಂದಳಂತೆ.... ನಾನಿದ್ದಾಗಲೇ ಬೇರೆಯವರೊಡನೆ ಸರಸಕ್ಕೆ ಹಾರುವ ರಾವಣನೆಲ್ಲಿ.. ಸೀತೆಗಾಗಿ ಸಮುದ್ರ ದಾಟಿ ಬರಬಹುದಾದ ರಾಮನೆಲ್ಲಿ..ರಾಮನ ಶಕ್ತಿಯ ಕಿರು ಪ್ರದರ್ಶನವನ್ನು ಏರ್ಪಡಿಸಿಯೇ ಹೋದನವ,,  ತನ್ನ ಬಾಲಕ್ಕೆ ಹಚ್ಚಿದ ಬೆಂಕಿಂದಲೇ ಲಂಕೆಗೆಲ್ಲ ಕಿಚ್ಚಿಟ್ಟು ಹಾರಿದ.. ಸುಂದರ ಲಂಕೆ ಕರಗಿ ಕಪ್ಪಾಯಿತು.ಹರೆಯ ಬಂದಂತಿದ್ದ ರಾವಣನ ಆಸೆ ಆಗಲೇ ಮುಪ್ಪಾಯಿತು..   ಇದು ಮುಂದಿನ ಕೇಡಿನ ದಿನಗಳ ಸುಳಿವೇನೋ.. ಎದೆ ಗೂಡಲ್ಲಿ ಆತಂಕ ಮಡುಗಟ್ಟಿತ್ತು. ಮಡಿಲಲ್ಲಿ ಸೀತೆಯೆಂಬ ಸುಡು ಬೆಂಕಿಯ ಬಿಸಿ.. 

ರಾಮ ಬಂದ ... ಲಕ್ಷ್ಮಣ ಬಂದ... ಕಪಿವೀರರೆಲ್ಲಾ ಬಂದರು.. ಯುದ್ಧ ಪ್ರಾರಂಭವಾಯಿತು. ಅಲ್ಲಿಯವರೆಗೆ ರಕ್ಕಸ ಕುಲದವರಾದ ನಮ್ಮನ್ನು ಹುಡುಕಿ ಬಂದು ಯುದ್ಧ ಮಾಡಿದವರಿರಲಿಲ್ಲ. ನಾವೇ ಮೋಜಿಗೋ, ನಮ್ಮ ಶಕ್ತಿ ಪ್ರದರ್ಶನಕ್ಕೋ ಇನ್ನೊಬ್ಬರ ಮೇಲೇರಿ ಹೋಗಿ ಸದೆ ಬಡಿಯುತ್ತಿದ್ದೆವು. ಮೊದಲ ಸಲ ನಮ್ಮ ನೆಲದಲ್ಲಿ ನಮ್ಮವರದ್ದೇ ರಕ್ತದ ಧಾರೆ.. ರಾವಣನ ಅರಮನೆಯ ಕಂಬಗಳಂತಿದ್ದ ವೀರರೆಲ್ಲ ಒಬ್ಬೊಬ್ಬರಾಗಿ ಸೋತರು.. ಸತ್ತರು..ಹೆಚ್ಚೇಕೆ ನಾನು ನನ್ನ ಕರುಳಕುಡಿಗಳನ್ನೇ ರಾವಣನ ಕಾಮದಾಸೆಯ ಯಜ್ಞಕ್ಕೆ ಅರ್ಘ್ಯವಿತ್ತೆ. ಲಂಕೆ ಸ್ಮಶಾನವಾಯಿತು.

ವಿಭೀಷಣ ರಾವಣನ ತಮ್ಮನಾದರೂ ವಿವೇಕಶಾಲಿ. ಅಣ್ಣನಿಗೆ ಹೇಳುವಷ್ಟು ಹೇಳಿ ನೋಡಿದ. ಧರ್ಮದ ಮಾರ್ಗ ಹಿಡಿಯುತ್ತೇನೆಂದು ರಾಮನಿಗೆ ಶರಣಾಗಿ ಅವನ ಪಕ್ಷದಲ್ಲಿ ನಿಂತು ನಮ್ಮ ಮೇಲೆರಗಿದ. ನಾನು ಪತಿಯ ಜಯವನ್ನಲ್ಲದೇ ಬೇರೇನನ್ನು ಬೇಡಬಾರದು.. ರಾಮ ಸರಿರಬಹುದು.. ಆದರೆ ನಾನು ತಪ್ಪಬಾರದು.. ನನ್ನ ಪತೀವೃತ ಧರ್ಮ ತಪ್ಪಬಾರದು..ಯಾಕೆಂದರೆ ನಾನೀಗ ಯುದ್ಧದಲ್ಲಿ ಹೋರಾಡುವ ಯೋಧನೊಬ್ಬನ ಮಡದಿ ಮಾತ್ರ.. ಅವನ ಗೆಲುವೇ ನನ್ನ ಗೆಲುವು.. ಅವನಿಗೂ ಈಗ ಯುದ್ಧ ಅನಿವಾರ್ಯವಾಗಿತ್ತು.. "
ಹಿಮ್ಮೆಟ್ಟುವುದು, ಕ್ಷಮೆ ಬೇಡುವುದು ಎರಡರ ಸಮಯವೂ ಮಿಂಚಿ ಹೋಗಿತ್ತು.. ಹೆತ್ತೊಡಲೇ ಬರಿದಾಗಿ ಹೋದ ಮೇಲೆ ಬದುಕಿ ಮಾಡುವುದಾದರೂ ಏನಿತ್ತು. ಪೊಳ್ಳು ಪ್ರತಿಷ್ಟೆಯ ಗಾಳಿಪಟವೇರಿ ಸಾಗುತ್ತಿದ್ದಾಗಲೇ ಹಿಡಿದಿದ್ದ ದಾರ ಕಡಿದಿತ್ತು. ತಪ್ಪಿನ ಬಗೆಗೆ ಅರಿವಾದರೂ ಪಶ್ಚಾತಾಪದ ಗಡು ಮೀರಿತ್ತು.  ಆ ಹೆಣ್ಣಿನ ಕಣ್ಣೀರಿನ ಒಂದೊಂದು ಹನಿಗಳಿಗೂ ಲೆಕ್ಕ ಇಟ್ಟಂತೆ ರಾಮ ಬಾಣಗಳು ಘಾಸಿ ಮಾಡಿದವು. ಅವಳು ಅವನ ಪಾಲಿನ ಮೃತ್ಯುದೇವತೆಯಾದಳು, ರಾವಣನ ಆಸೆ ಕೊನೆಗೂ ನೆರವೇರಿತೇನೋ.. ಅವನನ್ನು ಮೃತ್ಯು ದೇವತೆ ಆಲಂಗಿಸಿದಾಗ..

ನನ್ನವನ ಶವ ಚಿಂದಿಯಾಗಿ ನೆಲದ ಮೇಲೆ ಬಿದ್ದಿದ್ದರೆ ಸೀತೆಯ ಕಣ್ಣಲ್ಲಿ ಹೊಳಪಿನ ರಾಮ ಕುಣಿಯುತ್ತಿದ್ದ. ನನ್ನೆಲ್ಲ ಆಸೆಗಳು ಕಮರಿ ಕಪ್ಪಾಗಿದ್ದರೆ ಅವಳ ಬಾಳಲ್ಲಿ ಹೊನ್ನ ಬೆಳಕು ರಂಗವಲ್ಲಿ ಇಡುತ್ತಿತ್ತು. ಕಣ್ಣೀರು ಕಡಲಲೆಯಂತೆ ಮತ್ತೆ ಮತ್ತೆ ... ಆ ನೋವು ಆ ದುಃಖ  ನನ್ನವ ಸತ್ತ ಎಂಬುದಕ್ಕಿಂತ  ಅವನನ್ನು ಕಣ್ಣೆತ್ತಿಯೂ ನೋಡದ ಅವಳಿಗಾಗಿ ಸತ್ತ ಎನ್ನುವುದಕ್ಕಾಗಿತ್ತು. ಪ್ರೀತಿಸುವ ಪತ್ನಿ ಪುತ್ರರು, ಸುವರ್ಣನಗರಿಯಾಗಿದ್ದ ಲಂಕೆ, ಎಲ್ಲವನ್ನು ಎಲ್ಲರನ್ನೂ ಕೇವಲ ಅವಳನ್ನು ಪಡೆಯುವ ಮೋಹದ ಬೆಂಕಿಗೆ ಒಡ್ಡಿ ಪತಂಗವಾಗಿ ಉರಿದು ಬಿದ್ದಿದ್ದ. ನನ್ನವನು ಹಲವು ಸದ್ಗುಣಗಳ ಅರಸ..ಆದರೆ  ಇನ್ನು ಯಾರೂ ರಾವಣನನ್ನು ಉತ್ತಮ ರಾಜನಾಗಿ ನೆನಪಿಸಿಕೊಳ್ಳುವುದಿಲ್ಲ ಪ್ರೀತಿಯ ಗಂಡನಿಗೆ ಅವನ ಹೆಸರನ್ನು ಉಧಾಹರಿಸುವುದಿಲ್ಲ.. ಯೋಗ್ಯ ತಂದೆಯಾಗಿ .. ಅಣ್ಣನಾಗಿ..ಬಂಧುವಾಗಿ..  ಉಹುಂ.. ಇಲ್ಲ ಇಲ್ಲ.. ರಾವಣ ಎಂದೊಡನೇ ಅವನ ಹೇಸಿಗೆಯ ಮುಖ ಮಾತ್ರ ನೆನಪಿಗೆ ಬರುತ್ತದೆ. ಉಳಿದ ಮುಖಗಳು ಇದ್ದೂ ಇಲ್ಲದಂತೆ..ನಾನು ಕೊನೆಯವರೆಗೆ ಅವನೊಂದಿಗೆ ಇದ್ದೆ.. ಅವನು ತಪ್ಪುಗಳನ್ನೆಣಿಸುತ್ತಲಲ್ಲ.. ಅವನು ಸರಿಯಾಗಬಹುದಾಗಿದ್ದ ದಾರಿಗೆ ತೋರಿಸಬೇಕಾಗಿದ್ದ ಬೆಳಕನ್ನರಸುತ್ತಾ..ಆದರೆ  ಬೆಳಕಾಗಬಹುದಾಗಿದ್ದ ಕಿರಣ ಕತ್ತಲೆಯಲ್ಲಡಗಿ ಮಾಯವಾಯಿತು.. ನನ್ನನ್ನು ಅಂಧಕಾರಕ್ಕೆ ನೂಕಿ.. 








Friday, February 21, 2014

ಕಲೆಯ ಬಲೆ



ಎಲ್ಲರೂ ಕಲೆಯ ಬಗ್ಗೆ ಮಾತನಾಡುತ್ತಾ ಕುಳಿತಿದ್ದರೆ ಏನನ್ನೂ ಅರಿಯದ ನಾನು ಪೆಚ್ಚು ಮುಖ ಹಾಕಿಕೊಂಡೇ ಕೇಳಿಸಿಕೊಳ್ಳುತ್ತಿದ್ದೆ. ಹಿರಿಯರೊಬ್ಬರು ' ಅಲ್ಲಮ್ಮಾ ಮನೆಯೊಳಗೇ ಕುಳಿತರೆ ಕಲೆಯ ಬಗ್ಗೆ ಏನು ತಿಳಿಯುತ್ತೆ ನಿಂಗೆ? ಸ್ವಲ್ಪ ಹೊರಗಿನ ಲೋಕ ನೋಡು..ಅದಕ್ಕೇನೂ ಹೆಚ್ಚು ದೂರ ಹೋಗಬೇಕಿಲ್ಲ. ನಮ್ಮೂರಿನ ದೇವಸ್ಥಾನಗಳೇ ಸಾಕು ಮೊದಲ  ಪರಿಚಯಕ್ಕೆ' ಎಂದರು. ಹಿರಿಯರ ಮಾತಿಗೆ ಎದುರಾಡುವುದುಂಟೇ ಎಂದು ಇವರೆದುರು ಒದರಾಡಿ ಒಂದು ದಿನ ಪುರುಸೊತ್ತು  ಮಾಡಿಕೊಂಡೆ. ಹೊರಟಿತು ನನ್ನ ಸವಾರಿ ಊರ ಹೊರಗಿನ ದೇವಸ್ಥಾನ ನೋಡಲು 

ಹಳೆಯ ಕಾಲದ ಪುಟ್ಟ ದೇಗುಲ 'ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೇ, ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು' ಎಂದು ಹಾಕಿದ್ದ ಫಲಕ ಕಣ್ಮನ ಸೆಳೆತು. ಒಳಗೆ ಕಾಲಿಟ್ಟಂತೆ ಕಂಡ ಲೋಕವೋ ವರ್ಣನಾತೀತ. ಆದರೂ ನೀವಿಲ್ಲಿ ಕೇಳಲು ಕಾತರರಾಗಿರುವುದರಿಂದ ನನಗೆ ತಿಳಿದ ಮಟ್ಟಿಗೆ ವರ್ಣಿಸುವುದು ಅನಿವಾರ್ಯ. ಎತ್ತ ನೋಡಿದರತ್ತ ಕಲೆಯೋ ಕಲೆ. ಮೊದಲು ಕಣ್ಣಿಗೆ ಬಿದ್ದಿದ್ದು ಗುಡಿಯಿಂದ ಹೊರಗಿದ್ದ ಮಂಡಿಯೂರಿ ಮಲಗಿದ್ದ ನಂದಿ.ನಂದಿಯ ಹೊಟ್ಟೆ ಬೆನ್ನು ಎಲ್ಲಾ ಕಡೆ ಭಕ್ತರು ಹಣೆಗೆ ಹಚ್ಚಿದ ನಂತರ ಕೈಯಲ್ಲುಳಿದ ಕುಂಕುಮ , ಗಂಧಗಳ ಕಲೆ. ಸ್ವಲ್ಪ ಮುಂದೆ ಹಚ್ಚಿಟ್ಟ ದೀಪದ ಎಣ್ಣೆ ನೆಲದಲ್ಲೆಲ್ಲಾ ಹರಡಿ ಆದ ಕಪ್ಪಗಿನ ಕಲೆ. ಅತ್ತಿತ್ತ ಇರುವ ಗೋಡೆಗಳ ಮೇಲೆಲ್ಲ ಭಕ್ತಿ ಹೆಚ್ಚಾದ ಜನರ ಉಗುರಿನಿಂದರಳಿದ ಗೋಡೆ ಕಲೆ. ಹಳೆಯ ಕಾಲದ ಕಲ್ಲಿನ ಕುಸುರಿಗಳ ಸಂದು ಗೊಂದುಗಳಲ್ಲೆಲ್ಲಾ ಜೇಡನ ಬಲೆ.. ಆಹಾ ಧನ್ಯಳಾದೆ ಎಂದುಕೊಂಡು ಈ ಅಚ್ಚರಿಯನ್ನು ಅಡಗಿಸಿಕೊಳ್ಳುತ್ತಾ ಇನ್ನೊಂದು ಬಾಗಿಲಿನಿಂದ ಹೊರಗೆ ಬಂದರೆ ಹಾದಿಯ ಎರಡೂ ಬದಿಗಳಲ್ಲಿ ತಾಂಬೂಲದ ಪಿಚಕಾರಿ ಕಲೆ. ಲಂಡನ್ನಿನ ಮಾಡರ್ನ್ ಆರ್ಟ್ ಗ್ಯಾಲರಿಗೂ ಸಡ್ಡು ಹೊಡೆಯುವಂತಿದ್ದ ಇದನ್ನೆಲ್ಲಾ ಕಣ್ಣುಗಳಲ್ಲಿ ತುಂಬಿಕೊಂಡೆ. ಧ್ಯಾನಸ್ಥ ಮನಸ್ಸಿನಿಂದ ಹೊರಬಂದೆ.

ಹಾಗೆಂದು ನನಗೆ ಕಲೆಯ ಬಗ್ಗೆ ಏನೂ ತಿಳಿದಿಲ್ಲ ಎಂದು ನೀವಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ ಎಂದು ಹೇಳಬಯಸುತ್ತೇನೆ. ಏಕೆಂದರೆ ನಾನು ಹುಟ್ಟು ಕಲಾವಿದೆ ಎಂದು ಬಹು ಜನರಿಗೆ ತಿಳಿದಿಲ್ಲ. ಚಿಕ್ಕವಳಿರುವಾಗ ಅಲ್ಲಿಲ್ಲಿ ಬಿದ್ದೆದ್ದು ಹಾಕಿಕೊಂಡ ಅಂಗಿಗೆ ಕಲೆ ಮಾಡಿಕೊಳ್ಳುತ್ತಿದ್ದೆ. ಸ್ವಲ್ಪ ದೊಡ್ಡವಳಾದ ಮೇಲೆ ನನ್ನ ಕಾರ್ಯಕ್ಷೇತ್ರ ಮನೆಯ ಹೊರಗೆಯೂ ಹಬ್ಬಿ ತೋಟದೊಳಗೆಲ್ಲಾ ಸುತ್ತಿ ಸುಳಿದು ತೊಳೆದರೂ ಹೋಗದ ಬಾಳೆಕಾ
ಯಿಯ ಕಲೆ ಗೇರುಹಣ್ಣಿನ ಕಲೆಗಳನ್ನು ಅಂಗಿಗಳಿಗೆ ಚಿತ್ತಾರವಾಗಿಸುತ್ತಿದ್ದೆ. ಒಮ್ಮೆಯಂತೂ ಗೇರುಬೀಜ ತಿನ್ನುವ ಆಸೆಗೆ ಬಿದ್ದು ಹಸಿ ಬೀಜವನ್ನು ಹಾಗೇ ಬಾಗೆ ಹಾಕಿ ಜಗಿದಿದ್ದೆ. ಅದರ 'ಸೊನೆ' ಬಾಯಿಯ ಸುತ್ತೆಲ್ಲಾ ಹುಣ್ಣುಗಳನ್ನುಂಟು ಮಾಡಿ ಕೆಲ ಕಾಲ ಮುಖದಲ್ಲೂ ನನ್ನ ಕಲಾ ರಸಿಕತೆಯನ್ನು ಪ್ರದರ್ಶಿಸುತ್ತಿತ್ತು. 
ಕೆಲವೊಮ್ಮೆ ನನ್ನಿಂದಲ್ಲದೇ ಪರರೂ ನನ್ನನ್ನು ಕಲಾಮಾಧ್ಯಮವಾಗಿ ಬಳಸಿಕೊಂಡು ಕಾಫಿಯೋ ಚಹಾವೋ ತುಂಬಿದ ಕಪ್ಪನ್ನು ನಾನು ಗಟ್ಟಿಯಾಗಿ  ಹಿಡಿದುಕೊಳ್ಳುವ ಮುನ್ನವೇ ಅವರು ಕೈ ಬಿಟ್ಟು ನನ್ನ ಬಟ್ಟೆಯ ಮೇಲೆ ಭೂಪಟಗಳಂತಿರುವ ಶಾಶ್ವತ ರಚನೆಗಳು ಮೂಡುತ್ತಿದ್ದವು. ಹಾಕಿದ ಹೊಸ ಬಟ್ಟೆಯ ಗತಿ ಹೀಗಾದ ದಿನ ಅಮ್ಮನ ಕೈಯ ಬೆರಳುಗಳು ಬೆನ್ನಿನಲ್ಲಿ ಮೂಡಿ ಅಲ್ಲೊಂದು ಹೊಸ ಕಲಾಪ್ರಕಾರವನ್ನು ತೋರ್ಪಡಿಸುತ್ತಿತ್ತು.  ಈ ಹಳೆಯ ಕಥೆಗಳೆಲ್ಲಾ ನಾನು ಕಲೆಯ ಬಗ್ಗೆ ಅಜ್ಞಾನಿಯೇನಲ್ಲ ಎಂದುದನ್ನು ಹೇಳಲಷ್ಟೇ ತಿಳಿಸಿದ್ದು. 

ಇತ್ತೀಚೆಗೊಮ್ಮೆ ನನ್ನ ಕಲಾ ಮನಸ್ಸನ್ನು ಅರಿತ ಸಹೃದಯರೊಬ್ಬರು ' ಕಲೆಯ ಬಗ್ಗೆ' ನಮ್ಮ ಯುವ ಮಂಡಲದಲ್ಲಿ ಕಾರ್ಯಕ್ರಮವಿದೆ. ಬರಲೇಬೇಕು.. ನೀವು ಮಾತ್ರವಲ್ಲ ನಿಮ್ಮ ಬಂಧು ಮಿತ್ರರನ್ನೂ ಕರೆತರಬೇಕು ಎಂದು ಒತ್ತಾಯಿಸಿದ್ದರು. ಮೊದಲೊಮ್ಮೆ ಟಿ ವಿ ಯಲ್ಲಿ ಯಾವ ಕಲೆಗಳನ್ನು ತೆಗೆಯಲು ಯಾವ ವಸ್ತುಗಳನ್ನು ಬಳಸಬೇಕೆಂದು ವಿವರಿಸುವ ಕಾರ್ಯಕ್ರಮವೊಂದು ಬಂದಿತ್ತು. ಆದರೆ ಆ ಹೊತ್ತಿಗೆ ಸರಿಯಾಗಿ ವಿದ್ಯುತ್ ಪೂರೈಕೆ ನಿಂತು ಹೋಗಿ ' ..... ತಿಳಿಸಿಕೊಟ್ಟ ಇವರಿಗೆ ವಂದನೆಗಳು' ಎನ್ನುವಾಗ ವಿದ್ಯುತ್ ಪೂರೈಕೆ ಮರಳಿತ್ತು. ಈ ಸಲ ಭಾಷಣವಾದ್ದರಿಂದ ಅವರು ಹೇಳುವಾಗ ಬರೆದುಕೊಂಡರಾಯಿತು ಎಂದು ನನ್ನ ಗೆಳತಿಯರ ಒಡಗೂಡಿ ಕೈಯಲ್ಲಿ ಪೆನ್ ಪೇಪರು ಹಿಡಿದು ಹೊರಟಿದ್ದೆ.
ಅವರು ಮಾತು ಪ್ರಾರಂಭಿಸುತ್ತಾ ' ಕಲೆ ಅಂದರೆ ಇರದಿರುವುದನ್ನು ಕಾಣುವುದು' ಎಂದರು. ಅಲ್ಲಾ ಸ್ವಾಮೀ ಇರದಿರುವುದನ್ನೇ ಕಲೆ ಎಂದರೆ ಇರುವುದನ್ನು ಏನೆನ್ನಬೇಕು ಎಂಬುದೆ ನನಗೂ ನನ್ನ ಜೊತೆಗಾತಿಯರಿಗೂ ಅರಿವಾಗಲಿಲ್ಲ. ಇರಲಿ ಕಲೆಯನ್ನು ಹೋಗಲಾಡಿಸುವ ಬಗ್ಗೆ ಮುಂದೆ ಹೇಳಬಹುದೆಂದು ಕಿವಿ ಕಣ್ಣು ಬಾ ತೆರೆದು ಕುಳಿತೆವು. ನಮ್ಮ ಆಸಕ್ತಿ ನೋಡಿ ಅವರಿಗೂ ಸಂತಸವಾಯ್ತು. ಇನ್ನಷ್ಟು ಉತ್ಸಾಹದಿಂದ ಇರದಿರುವುದರ ಊಹೆ ಹೇಗೆ ಕಲೆಯಾಗುತ್ತದೆ ಎಂಬುದನ್ನು ವಿವರಿಸತೊಡಗಿದರು. ಕಣ್ಣೆದುರು ಕಾಣುವ ನಮ್ಮ ಕಲೆಯೂ , ಕಣ್ಣಿಗೆ ಕಾಣದ ಇವರ ಕಲೆಯೂ ಬೇರೆ ಬೇರೆ ಎಂದು ನನ್ನರಿವಿಗೆ ಬಂದಾಗ ಭಾಷಣ ಮುಗಿದು ಊಟದ ಹೊತ್ತಾಗಿತ್ತು. ಔತಣದಲ್ಲಿ ಪಾಲ್ಗೊಂಡು ಸೀರೆಗೆ ಅಂಟಿದ ಸಾರಿನ ಅರಿಶಿನದ ಬಣ್ಣವನ್ನು ತೆಗೆಯುವುದು ಹೇಗೆಂದು ಚಿಂತಾಕ್ರಾಂತಳಾಗಿ ಮನೆಗೆ ಮರಳಿದೆ. 

ನನ್ನರಿವಿಗೆ ಸುಲಭಕ್ಕೆ ನಿಲುಕದ ಈ ಕಲೆಯ ಬಗ್ಗೆ ಹಲವರು ಲೀಲಾಜಾಲವಾಗಿ ವಿವರಿಸುತ್ತಾರೆ. ಒಬ್ಬರು ಮಾತನಾಡುವುದು ಒಂದು ಕಲೆ ಎಂದರೆ, ಇನ್ನೊಬ್ಬರು ಚಿತ್ರ, ಸಂಗೀತ ಇವುಗಳು ಕಲೆ ಎನ್ನುತ್ತಾರೆ. ಇದೆಲ್ಲ ಹುಟ್ಟಿನಿಂದಲೇ ಬರುವ ಪ್ರತಿಭೆಗಳಾದರೂ ಕೆಲವನ್ನು ಕಷ್ಟಪಟ್ಟು ಕಲಿಯಲೂ ಬಹುದೇನೋ. ಆದರೆ ಇನ್ನು ಕೆಲವರು ದಿನ ನಿತ್ಯದ ನಮ್ಮ ನಡೆ ನಡವಳಿಕೆಗಳನ್ನು ಕೆಲಸ ಮಾಡುವ ವಿಧಾನವನ್ನು ಕಲೆಯೆಂದು ಬಣ್ಣಿಸುವುದುಂಟು. ' ನನ್ನಜ್ಜ  ವೀಳ್ಯ ಹಾಕಲು ಸುಣ್ಣ ತೀಡುವುದಿದೆಯಲ್ಲ ಅದೂ ಒಂದು ಕಲೆ ಎಂದು ಅಜ್ಜನ ಪುಳ್ಳಿ ಹೇಳಿದರೆ, ನನ್ನಮ್ಮ ತರಕಾರಿ ಕತ್ತರಿಸುವುದು ಒಂದು ಕಲೆ ಎಂದು ಅಮ್ಮನ ಮಗಳು ನುಡಿಯುತ್ತಾಳೆ. ಅಷ್ಟೇಕೆ ದಿನ ನಿತ್ಯ ಮೂರು ಹೊತ್ತು ಹೊಟ್ಟೆಗೆ ಆಹಾರ ಸೇವಿಸುತ್ತೇವಲ್ಲ ಆ ಸೇವನಾ ಕ್ರಮವೂ ಒಂದು ಕಲೆಯಂತೆ. ಹಾಗಿದ್ದ ಮೇಲೆ ಬಡಿಸುವುದು ಕೂಡಾ ಕಲಾ ಪ್ರಕಾರದೊಳಗೆ ಬಾರದಿದ್ದೀತೇ?
 
ಹಳ್ಳಿಯ ಕಾರ್ಯಕ್ರಮಗಳಲ್ಲಿ ಬಾಳೆಲೆಯ ಮೇಲೆ ಊಟ ಸರ್ವೇಸಾಮಾನ್ಯ.ಬಾಳೆ ಎಲೆಯ ಮೇಲೆ ತುಂಬಾ ಜಾಗವಿದೆ ಎಂದು ಹೇಗೆಂದರೆ ಹಾಗೇ ಎಲ್ಲೆಂದರೆ ಅಲ್ಲಿ ಬಡಿಸಿ ಹೋಗುವುದು ಸಾಧ್ಯವಿಲ್ಲ. ಉಪ್ಪು ಉಪ್ಪಿನಕಾಯಿಗಳು ಎಲೆಯ ತುದಿಯನ್ನು ಅಲಂಕರಿಸಿದರೆ ಅದರಿಂದೀಚೆಗೆ ಎಲೆಯ ಎದುರು ಬದಿಯಲ್ಲಿ  ಚಟ್ನಿ ಪಲ್ಯ ಗೊಜ್ಜು ಕೋಸಂಬರಿಗಳು ಬೀಳಬೇಕು. ಎಲೆಯ ಇನ್ನೊಂದು ಕೆಳಗಿನ ಮೂಲೆಯಲ್ಲಿ ಪಾಯಸವೇ ಇರಬೇಕು. ಅವೆಲ್ಲದರ ನಡುವೆ ಅನ್ನ ಅಧ್ಯಕ್ಷ ಪದವಿ ಪಡೆದು ನಡುವಿನಲ್ಲಿ ಕುಳಿತಿರುತ್ತದೆ. ನಂತರ ಸಾಲಾಗಿ ಸಾರು ಸಾಂಬಾರು ಪಳಧ್ಯಗಳ ಮೆರವಣಿಗೆ ನಡು ನಡುವೆ ಹೋಳಿಗೆ ತುಪ್ಪ ಕಾಹಾಲುಗಳ ನೈವೇಧ್ಯದ ಜೊತೆ ಜೊತೆಗೆ ಸಾಗಬೇಕು. ಕೊನೆಯಲ್ಲಿ ಮಜ್ಜಿಗೆ ಬಂದರೆ ಊಟ ಮುಗಿದೇಳುವ ಹೊತ್ತು.  ಹೀಗೆ ಕ್ರಮದಿಂದ ಬಡಿಸುವುದರ ಅರಿವಿಲ್ಲದವರಿಗೆ ಬಡಿಸುವುದು ಎಂದರೆ ಮೈ ನಡುಕ ಬರುವುದು ಸುಳ್ಳಲ್ಲ. 
 
ಪೇಟೆಯಲ್ಲಿದ್ದ ನಮ್ಮ ಚಿಕ್ಕಪ್ಪನಿಗೆ ತಾನು ಒಂದಾನೊಂದು ಕಾಲದಲ್ಲಿ ಉದ್ದುದ್ದದ ಊಟದ ಸಾಲುಗಳಿಗೆ ಬಡಿಸಿ ಕ್ಷಣಾರ್ಧದಲ್ಲಿ ಊಟ ಮುಗಿಸಿ ಏಳುವಂತೆ ಮಾಡುತ್ತಿದ್ದ ಗತಕಾಲದ ವೈಭವವನ್ನು ಆಗಾಗ ನಮ್ಮ ಮುಂದಿಡುತ್ತಾ ನಾವೆಲ್ಲ ಇನ್ನೂ ಅವರ ಮಟ್ಟಕ್ಕೇರಿಲ್ಲ ಎಂದು ನೆನಪಿಸುವುದು ಬಲು ಇಷ್ಟದ ಕೆಲಸ. ಆದರೆ ನಾವಂತೂ ಅವರು ಒಂದು ಸಮಾರಂಭದಲ್ಲೂ ಬಡಿಸಿದ್ದನ್ನು ನೋಡಿದವರಾಗಿರಲಿಲ್ಲ. ಊಟದ ಹೊತ್ತಾದ ಕೂಡಲೇ ಎಲೆ "ಡಿದು ಮೊದಲನೇ ಪಂಕ್ತಿಗೆ ಊಟ ಮುಗಿಸಿ ಏಳುತ್ತಿದ್ದರು. 
ಆದರೆ ಮನೆಯಲ್ಲೇ ನಡೆಯುವ ಸಮಾರಂಭಗಳಿದ್ದಾಗ ಕೆಲವೊಮ್ಮೆ ಗ್ರಹಗತಿಗಳು ಕೆಟ್ಟದಾಗುವುದೂ ಉಂಟು.  ಮೊದಲನೇ ಪಂಕ್ತಿಗೆ ಊಟ ಮುಗಿಸಿ ಎದ್ದಿದ್ದ ಚಿಕ್ಕಪ್ಪ ಎರಡನೇ ಪಂಕ್ತಿಗೆ ಊಟಕ್ಕೆ ಕುಳಿತ ನಮ್ಮನ್ನು ಕಡೆಗಣ್ಣ ನೋಟದಿಂದ ನೋಡುತ್ತಾ ದೂರದಲ್ಲಿ ನಿಂತಿದ್ದರು. ನಮ್ಮ ಕಪಿ ಸೈನ್ಯಕ್ಕೆ ಅವರನ್ನು ಗೋಳುಗುಟ್ಟಿಸುವುದೆಂದರೆ ಇಷ್ಟ. ನಮಗೆ ಬಡಿಸಿ ಎಂದು ನಾವು ಕೇಳಿದ "ನಯದ ಮಾತುಗಳಿಗೆ ಸೊಪ್ಪು ಹಾಕದ ಅವರನ್ನು ಮಣಿಸಲು 'ನಮಗೆ ಚಿಕ್ಕಪ್ಪ ಬಡಿಸಿದರೇ ಊಟ ಮಾಡುವುದು ಇಲ್ಲದಿದ್ದರೆ ಸಾಮೂಹಿಕವಾಗಿ ಊಟಕ್ಕೆ ಬಹಿಷ್ಕಾರ ಹಾಕುತ್ತೇವೆ' ಎಂದು ಗದ್ದಲ ಎಬ್ಬಿಸಿದೆವು.ಊಟಕ್ಕೆ ಮೊದಲೇ ನಾಲ್ಕು ಹೋಳಿಗೆ , ಅತ್ತಿತ್ತ ನಡೆಯುವಾಗಲೆಲ್ಲಾ ವಡೆ ಕಜ್ಜಾಯಗಳನ್ನು ಬಾಯಾಡಿಸುತ್ತಲೇ ಇದ್ದ ನಮಗೆ ಹಸಿವಾಗಿದ್ದುದು ಅಷ್ಟರಲ್ಲೇ ಇತ್ತು. ಆದರೆ ನಮ್ಮ ಈ ರೌಧ್ರ ಬೇಡಿಕೆಗೆ ಮಣಿದ ಚಿಕ್ಕಪ್ಪ ಬೇರೆ ದಾರಿಯಿಲ್ಲದೇ ಬಡಿಸಲು ಬಂದರು. ಅತ್ತಿತ್ತ ನೋಡಿ ಬಡಿಸಲು ಸುಲಭವೂ ಹಗುರವೂ ಆಗಿದ್ದ ಬಾಣಲೆಯಲ್ಲಿ ಇಟ್ಟಿದ್ದ ಹಪ್ಪಳವನ್ನೆತ್ತಿಕೊಂಡು ಬಂದರು. ಬಡಿಸುತ್ತಾ ನಮ್ಮ ಸಾಲಿನ ತುದಿಯವರೆಗೆ ತಲುಪಿದಾಗ ಅವರ ಮೊಗದಲ್ಲಿ ನಾನೂ ಬಡಿಸಿದೆ ಎಂಬ ಹೆಮ್ಮೆಯ ನಗುವಿತ್ತು. ಬಾಣಲೆಯನ್ನು ಪಕ್ಕಕ್ಕಿಟ್ಟವರೇ  ಮೀಸೆಯ ಮೇಲೆ ಕೈಯಾಡಿಸಿ ತಿರುವಿದರು. ಬಾಣಲೆಯ ಅಂಚಿನಲ್ಲಿದ್ದ ಮಸಿ ಮುಖಕ್ಕೆ ಮೆತ್ತಿಕೊಂಡಿತು. ನಾವು ನಗುವ ಅವಕಾಶವನ್ನು ಬಿಡಲುಂಟೇ? ನಮ್ಮ ಹಾಸ್ಯಕ್ಕೆ ಇನ್ನಷ್ಟು ತಬ್ಬಿಬ್ಬಾದ ಅವರು ಉಟ್ಟಿದ್ದ ಶುಭ್ರ ಬಿಳಿಯ ವೇಸ್ಟಿಯಲ್ಲಿ  ಮುಖ ಒರೆಸಿಕೊಂಡರು. ಅದಕ್ಕಷ್ಟು ಮಸಿ ಅಂಟಿತು. ಆಹಾ ..  ಆಗ ತಿಳಿಯಿತು ನೋಡಿ ನನಗೆ ಬಡಿಸುವ ಕಲೆಯ ಬಗ್ಗೆ. 
ಪ್ರಪಂಚದಲ್ಲಿ ಸಾವಿರ ಸಾವಿರ  ಕಲೆಗಳಿರಬಹುದು ಬಿಡಿ. ಆದರೆ ನನಗೆ ತಿಳಿದ ಕಲೆಗಳು ಕೇವಲ ಎರಡೇ ಎರಡು. ಒಂದು ತೊಳೆದರೆ ಹೋಗುವಂತಹುದು ಮತ್ತಿನ್ನೊಂದು ತೊಳೆಯುವುದು ಬಿಡಿ ಹರಿದರೂ ಹೋಗದಂತದ್ದು. ನನ್ನ ಈ ಅಸಾಮಾನ್ಯ ಕಲಾಮಯ ತಲೆಯೊಳಗೆ ಇನ್ನಷ್ಟು ಕಲೆಗಳ ವಿವರಗಳನ್ನಿಳಿಸಿ ಗೋಜಲಾಗಿಸುವುದು ನನಗಿಷ್ಟವಿಲ್ಲದ ಕಾರಣ  ಕಲೆಯ ಬಗ್ಗೆ ಕೊರೆಯುವುದನ್ನು ಬಿಟ್ಟು ಕೈಗೆ ಅಂಟಿದ ಶಾಯಿಯ ಕಲೆಯನ್ನು ತೊಳೆದುಕೊಳ್ಳುವತ್ತ ಗಮನ ಹರಿಸುತ್ತೇನೆ. 

( ಮಾರ್ಚ್ 2014 ರ ಉತ್ಥಾನ ಮಾಸಪತ್ರಿಕೆಯಲ್ಲಿ  ಪ್ರಕಟಿತ )